ಇಸ್ಲಮಾಬಾದ್(ಮೇ.10): ಪಾಕಿಸ್ತಾನದ ರಾಜಕೀಯದಲ್ಲಿ (Pakistan Politics) ಕರಾಳ ಇತಿಹಾಸ ಮತ್ತೊಮ್ಮೆ ಮರುಕಳಿಸಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ (Islamabad High Court) ಆವರಣದಲ್ಲಿ ಬಂಧಿಸಲಾಗಿದೆ. ಇದಾದ ನಂತರ ಪಾಕಿಸ್ತಾನದ ಹಲವೆಡೆ ಗಲಭೆಗಳು ನಡೆದಿರುವುದಾಗಿ ವರದಿಯಾಗಿದೆ. ಆದರೆ ಇಲ್ಲಿ ಇಂತಹ ಬೆಳವಣಿಗೆಗಳು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಪಾಕಿಸ್ತಾನದ ಪ್ರಧಾನಿಗಳು ಮತ್ತು ಅಧ್ಯಕ್ಷರು ಇಂತಹ ಸನ್ನಿವೇಶವನ್ನು ಹಲವಾರು ಬಾರಿ ಎದುರಿಸಿದ್ದಾರೆ. ರಾಜಕೀಯ ಚದುರಂಗದಾಟ, ಅಧಿಕಾರ ಬದಲಾವಣೆ, ಸಾರ್ವಜನಿಕ ಸಭೆಗಳ ವೇಳೆ ನಾಯಕರ ಹತ್ಯೆಯಂತಹ ಘಟನೆಗಳ ದೊಡ್ಡ ಪಟ್ಟಿಯೇ ಇದೆ.
ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸುವುದು ಇಲ್ಲಿನ ರಾಜಕೀಯಕ್ಕೆ ಹೊಸದೇನಲ್ಲ, ಏಕೆಂದರೆ ಇಂತಹ ಘಟನೆಗಳು ಇಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಪಾಕಿಸ್ತಾನದ ಮೊದಲ ಪ್ರಧಾನಿ ಕೂಡಾ ಇಲ್ಲಿನ ಅರಾಜಕತೆಯ ಆರಂಭಿಕ ಇತಿಹಾಸದ ಭಾಗವಾಗಿದ್ದರು. ಲಿಯಾಖತ್ ಅಲಿ ಬೇಗ್ ಅವರು 16 ಅಕ್ಟೋಬರ್ 1951 ರಂದು ರಾವಲ್ಪಿಂಡಿಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಈ ಸಂದರ್ಭದಲ್ಲಿ, ಅವರನ್ನು ಗುಂಡು ಹಾರಿಸಿ ಹತ್ಯೆಗೈಯ್ಯಲಾಯಿತು. ಘಟನೆಯ ನಂತರ, ಅವರ ಹಂತಕನನ್ನು ಕೂಡಾ ಪೊಲೀಸರು ಹೊಡೆದುರುಳಿಸಿದರು. ನಂತರ ಈ ಹಂತಕನನ್ನು ಸಯೀದ್ ಅಕ್ಬರ್ ಎಂದು ಗುರುತಿಸಲಾಯಿತು. ಕೊಲೆಗೈದಾತ ಪಾಕಿಸ್ತಾನದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ.
ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು ಗಲ್ಲಿಗೇರಿಸಲಾಯಿತು
1973 ರಿಂದ 1977 ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದ ಜುಲ್ಫಿಕರ್ ಅಲಿ ಭುಟ್ಟೋಗೆ ಮರಣದಂಡನೆ ವಿಧಿಸಲಾಯಿತು. ಅಯೂಬ್ ಖಾನ್ ಆಳ್ವಿಕೆಯಲ್ಲಿ ಅವರು ವಿದೇಶಾಂಗ ಸಚಿವರಾಗಿದ್ದರು. ಭುಟ್ಟೋ ಪಾಕಿಸ್ತಾನದ ಪ್ರಧಾನಿಯಾಗಿದ್ದಾಗ ಅಲ್ಲಿನ ಪರಮಾಣು ಪ್ರೋಗ್ರಾಂ ಕೂಡಾ ಸಿದ್ಧಪಡಿಸಿದ್ದರು. ನಂತರ ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು 1979 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಗಲ್ಲಿಗೇರಿಸಲಾಯಿತು. ಆ ಸಮಯದಲ್ಲಿ ಪಾಕಿಸ್ತಾನದಲ್ಲಿ ಜನರಲ್ ಜಿಯಾ-ಉಲ್-ಹಕ್ ಅವರ ಮಿಲಿಟರಿ ಆಡಳಿತವಿತ್ತು.
ಬೆನಜೀರ್ ಭುಟ್ಟೊ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು
ಬೆನಜೀರ್ ಭುಟ್ಟೊ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಅವರು ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರ ಪುತ್ರಿಯಾಗಿದ್ದರು. ಡಿಸೆಂಬರ್ 27, 2007 ರಂದು ರಾವಲ್ಪಿಂಡಿಯಲ್ಲಿ ಬೆನಜೀರ್ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಉನ್ನತ ಮಟ್ಟದ ಭದ್ರತೆಯ ನಂತರವೂ ಬೆನಜೀರ್ ಅವರ ಮೇಲೆ ಈ ದಾಳಿ ನಡೆದಿತ್ತು. ಬೆನಜೀರ್ ಭುಟ್ಟೋ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಕೂಡಾ ನಡೆಸಿರಲಿಲ್ಲ. ಅಲ್ಲದೇ ಬೆನಜೀರ್ ಭುಟ್ಟೋ ಹಂತಕರನ್ನು ಬಂಧಿಸುವಲ್ಲೂ ಪೊಲೀಸರು ವಿಫಲರಾಗಿದ್ದರು.
ನವಾಜ್ ಷರೀಫ್ ದೇಶ ತೊರೆಯಬೇಕಾಯಿತು
ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಕೂಡ ಇಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿದ್ದರು. ಬಳಿಕ ಅವರೂ ದೇಶ ತೊರೆಯಬೇಕಾಯಿತು. ಜನರಲ್ ಪರ್ವೇಜ್ ಮುಷರಫ್ ಆಳ್ವಿಕೆಯಲ್ಲಿ, ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ನವಾಜ್ ಷರೀಫ್ ಅವರನ್ನು ಭ್ರಷ್ಟಾಚಾರದ ಅಪರಾಧಕ್ಕಾಗಿ ದೋಷಿ ಎಂದು ತೀರ್ಪು ನೀಡಿತು. ನಂತರ ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸಿದ್ದರಿಂದ ಅವರನ್ನು ಜೆದ್ದಾಗೆ ಗಡೀಪಾರು ಮಾಡಲಾಯಿತು. ಆಗಸ್ಟ್ 23, 2007 ರಂದು, ಸುಪ್ರೀಂ ಕೋರ್ಟ್ ಷರೀಫ್ ಅವರಿಗೆ ಪಾಕಿಸ್ತಾನಕ್ಕೆ ಮರಳಲು ಅನುಮತಿ ನೀಡಿತು, ಆದರೆ ಸೆಪ್ಟೆಂಬರ್ 10, 2007 ರಂದು ಷರೀಫ್ ಇಸ್ಲಾಮಾಬಾದ್ ತಲುಪಿದಾಗ, ಅವರನ್ನು ವಿಮಾನ ನಿಲ್ದಾಣದಿಂದಲೇ ವಾಪಾಸ್ ಕಳುಹಿಸಲಾಯಿತು.
ದಂಗೆ ನಡೆಸಿದ ಪರ್ವೇಜ್ ಮುಷರಫ್ ಅವರನ್ನೂ ಗಡಿಪಾರು ಮಾಡಲಾಯಿತು
ಆಗಿನ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಕೂಡ ಪಾಕಿಸ್ತಾನದ ರಾಜಕೀಯದಲ್ಲಿ ಜನಪ್ರಿಯರಾಗಿದ್ದರು. 1999 ರಲ್ಲಿ ನವಾಜ್ ಷರೀಫ್ ಸರ್ಕಾರವನ್ನು ಉರುಳಿಸುವ ಮೂಲಕ ಮುಷರಫ್ ಪಾಕಿಸ್ತಾನದ ಅಧ್ಯಕ್ಷರಾದರು. ಅವರು 20 ಜೂನ್ 2001 ರಿಂದ 18 ಆಗಸ್ಟ್ 2008 ರವರೆಗೆ ಈ ಹುದ್ದೆಯಲ್ಲಿದ್ದರು. ಮುಷರಫ್ ಅವರು ಹುದ್ದೆ ತೊರೆ ಬೆನ್ನಲ್ಲೇ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಅವರು ಪಾಕಿಸ್ತಾನವನ್ನು ತೊರೆಯಬೇಕಾಯಿತು.
ಅವಿಶ್ವಾಸ ವ್ಯಕ್ತಪಡಿಸಿದ ಇಮ್ರಾನ್ ಖಾನ್ ಕುರ್ಚಿಯಿಂದ ಕೆಳಗಿಳಿದರು
ಪ್ರಧಾನಿಯಾಗಿದ್ದಾಗ ಇಮ್ರಾನ್ ಖಾನ್ ಕೂಡಾ ಪಾಕಿಸ್ತಾನದಲ್ಲಿ ವಿಪಕ್ಷಗಳ ರಾಜಕೀಯದಾಟದಿಂದ ತಪ್ಪಿಸಿಕೊಳ್ಳುವಲ್ಲಿ ಅಸಮರ್ಥರಾದರು. ಏಪ್ರಿಲ್ 9 ರಂದು ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸುವ ಮೂಲಕ ಇಮ್ರಾನ್ ಖಾನ್ ಅವರನ್ನು ಪ್ರತಿಪಕ್ಷಗಳು ಅಧಿಕಾರದಿಂದ ಹೊರಹಾಕಿದರು. ಏಪ್ರಿಲ್ 9 ರ ರಾತ್ರಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಮತದಾನದಲ್ಲಿ ಇಮ್ರಾನ್ ಖಾನ್ ಸೋಲನ್ನು ಎದುರಿಸಬೇಕಾಯಿತು. 342 ಸದಸ್ಯ ಬಲದ ಸದನದಲ್ಲಿ, ವಿರೋಧ ಪಕ್ಷವು 174 ಸದಸ್ಯರ ಬೆಂಬಲವನ್ನು ಪಡೆದುಕೊಂಡಿತು, ಇದು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಲು ಅಗತ್ಯವಾದ 172 ಸಂಖ್ಯೆಗಿಂತ ಹೆಚ್ಚು ಇತ್ತು. ಇದರ ನಂತರ, ಇಮ್ರಾನ್ ಪ್ರಧಾನಿ ಶಹಬಾಜ್ ಮತ್ತು ಪಾಕಿಸ್ತಾನಿ ಸೇನೆಯ ವಿರುದ್ಧ ಮೋರ್ಚಾ ಆರಂಭಿಸಿದರು. ರೋಡ್ ಶೋ ವೇಳೆ ಅವರ ಮೇಲೆ ಮಾರಣಾಂತಿಕ ಹಲ್ಲೆಯೂ ನಡೆದಿತ್ತು, ಆದರೆ ಅವರು ಬದುಕುಳಿದರು. ಈಗ ಅವರನ್ನು ಬಂಧಿಸಲಾಗಿದೆ.
ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ಬಂಧನ
2019 ರಲ್ಲಿ ಪಂಜಾಬ್‌ನ ಝೀಲಂ ಜಿಲ್ಲೆಯ ಸೊಹಾವಾ ಪ್ರದೇಶದಲ್ಲಿ ಸೂಫಿಸಂಗಾಗಿ ಅಲ್-ಖಾದಿರ್ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸಂಬಂಧಿಸಿದಂತೆ ದಾಖಲಾದ ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್-ಖಾದಿರ್ ಟ್ರಸ್ಟ್ ಕೇಸ್ ಅಲ್-ಖಾದಿರ್ ವಿಶ್ವವಿದ್ಯಾಲಯದ ಸ್ಥಾಪನೆಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್, ಅವರ ಪತ್ನಿ ಬುಶ್ರಾ ಬೀಬಿ ಮತ್ತು ಅವರ ಪಕ್ಷದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಇತರ ನಾಯಕರ ವಿರುದ್ಧ ಆರೋಪಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ