ಇಂದು ವ್ಯಾಲೆಂಟೈನ್ಸ್ ಡೇ (Valentine's Day). ಪ್ರೀತಿಸಿದವರ ಜೊತೆಗೆ ಪ್ರೀತಿಯನ್ನು ಹಬ್ಬದಂತೆ ಆಚರಿಸಿಕೊಳ್ಳುವ ದಿನ. ವ್ಯಾಲೆಂಟೈನ್ಸ್ ವೀಕ್ ಕೊನೆಗೊಳ್ಳುತ್ತಿದ್ದಂತೆ, ಜಗತ್ತಿನಾದ್ಯಂತ ಪ್ರೇಮಿಗಳು (Lovers) ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸ್ತಾರೆ. ಪ್ರೇಮಿಗಳ ದಿನವು ಪ್ರೇಮಿಗಳ ವಾರದ ಕೊನೆಯ ದಿನವಾಗಿದೆ. ಚೆಂದದ ಗಿಫ್ಟ್ (Gift) ಕೊಡುವುದರ ಮೂಲಕ, ಟ್ರಿಪ್ ಹೋಗೋದ್ರ ಮೂಲಕ, ಔಟಿಂಗ್, ಡಿನ್ನರ್ ಹೀಗೆ ಒಬೊಬ್ಬರೂ ಒಂದೊಂದು ವಿಧಾನದ ಮೂಲಕ ತಮ್ಮ ಪ್ರೀತಿಪಾತ್ರರ ಜೊತೆಗೆ ಸಮಯ ಕಳೆಯುತ್ತಾರೆ.
ಅನೇಕ ಜೋಡಿಗಳು ವ್ಯಾಲೆಂಟೈನ್ಸ್ ವೀಕ್ ಅನ್ನು ಆಚರಿಸುತ್ತಾರೆ. ವ್ಯಾಲೆಂಟೈನ್ ಡೇ ಅನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ ನಿಜ. ಆದ್ರೆ ಅವರಲ್ಲಿ ಅನೇಕರಿಗೆ ಪ್ರೇಮಿಗಳ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ಗೊತ್ತೇ ಇರುವುದಿಲ್ಲ. ಹಾಗಿದ್ರೆ ಈ ದಿನವನ್ನು ಯಾಕೆ ಆಚರಿಸಲಾಗುತ್ತದೆ? ಇದರ ಇತಿಹಾಸವೇನು? ಮಹತ್ವವೇನು ಅನ್ನೋದನ್ನು ನೋಡೋಣ.
ಫೆಬ್ರವರಿ 14 ರಂದೇ ಏಕೆ ಪ್ರೇಮಿಗಳ ದಿನ ಆಚರಿಸಲಾಗುತ್ತದೆ?
ವ್ಯಾಲೆಂಟೈನ್ಸ್ ಡೇ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ಒಂದು ಮೂಲದ ಪ್ರಕಾರ ವ್ಯಾಲೆಂಟೈನ್ಸ್ ಡೇ ಅನ್ನು 14 ನೇ ಶತಮಾನದವರೆಗೆ ಪ್ರಣಯದ ದಿನವಾಗಿ ಆಚರಿಸಿದ ಬಗ್ಗೆ ದಾಖಲೆಗಳಿಲ್ಲ. 8 ನೇ ಶತಮಾನದ ಗೆಲಾಸಿಯನ್ ಸ್ಯಾಕ್ರಮೆಂಟರಿಯಲ್ಲಿ ಫೆಬ್ರವರಿ 14 ರಂದು ಸೇಂಟ್ ವ್ಯಾಲೆಂಟೈನ್ ಹಬ್ಬದ ಆಚರಣೆ ದಾಖಲಾಗಿದೆ.
ಇದನ್ನೂ ಓದಿ: ಮಗಳಿಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಟ್ಟ ತಂದೆ! ಸಖತ್ ಆಗಿದೆ ನೋಡಿ ಅಪ್ಪ-ಮಗಳ ಕ್ಯೂಟ್ ವಿಡಿಯೋ
14 ನೇ ಮತ್ತು 15 ನೇ ಶತಮಾನಗಳಲ್ಲಿ ವಸಂತಕಾಲದ ಆರಂಭದಲ್ಲಿ "ಲವ್ ಬರ್ಡ್ಸ್ " ಪ್ರೀತಿಯ ಕಲ್ಪನೆಗಳು ಹೆಚ್ಚು ಪ್ರಚಲಿತವಾದವು. ತದನಂತರದಲ್ಲಿ ಈ ದಿನವು ಪ್ರೀತಿಯೊಂದಿಗೆ ಸಂಬಂಧ ಹೊಂದಿತು ಎನ್ನಲಾಗಿದೆ.
ಹೆಚ್ಚುವರಿಯಾಗಿ, ಇನ್ನು, ಸುಮಾರು 270 CE ಯಲ್ಲಿ ಹುತಾತ್ಮರಾದ ಪಾದ್ರಿ ಚಕ್ರವರ್ತಿ ಕ್ಲಾಡಿಯಸ್ II ನಿಂದಾಗಿ ಈ ಹೆಸರು ಬಂದಿದೆ ಎಂದೂ ಹೇಳಲಾಗುತ್ತದೆ.
ಪ್ರೇಮಿಗಳ ದಿನದ ಇತಿಹಾಸ
ಪ್ರೇಮಿಗಳ ದಿನದ ಹುಟ್ಟಿನ ಹಿಂದೆ ಹಲವು ಕಥೆಗಳಿವೆ. ಹೆಚ್ಚು ಜನಪ್ರಿಯವಾದ ದಂತಕಥೆಯ ಪ್ರಕಾರ, ಫೆಬ್ರವರಿ ಮಧ್ಯದಲ್ಲಿ ನಡೆದ ರೋಮನ್ ಹಬ್ಬವಾದ ಲುಪರ್ಕಾಲಿಯಾದಲ್ಲಿ ವ್ಯಾಲೆಂಟೈನ್ಸ್ ಡೇ ತನ್ನ ಮೂಲವನ್ನು ಹೊಂದಿದೆ ಎನ್ನಲಾಗುತ್ತದೆ.
ವಸಂತಕಾಲದ ಆರಂಭದಲ್ಲಿ ಇದನ್ನು ಆಚರಿಸಲಾಗುತ್ತಿತ್ತು. ಈ ಹಬ್ಬದಲ್ಲಿ ಲಾಟರಿ ಮೂಲಕ ಮಹಿಳೆಯರನ್ನು ಪುರುಷರೊಂದಿಗೆ ಜೋಡಿಸಲಾಗುತ್ತಿತ್ತು.
ಪೋಪ್ ಗೆಲಾಸಿಯಸ್ I ಈ ಹಬ್ಬವನ್ನು ಸೇಂಟ್ ವ್ಯಾಲೆಂಟೈನ್ಸ್ ಡೇಗೆ ಬದಲಾಯಿಸಿದರು ಎಂದು ಹೇಳಲಾಗುತ್ತದೆ. ಸುಮಾರು 14 ನೇ ಶತಮಾನದ ಅವಧಿಯಲ್ಲಿ ಇದನ್ನು ಪ್ರೇಮಿಗಳ ದಿನವಾಗಿ ಆಚರಿಸಲಾಯಿತು.
ಮತ್ತೊಂದು ಮೂಲದ ಪ್ರಕಾರ, ರೋಮನ್ ಚಕ್ರವರ್ತಿ ಕ್ಲಾಡಿಯಸ್ II ರಾಜ್ಯಭಾರದಲ್ಲಿ ಸೈನಿಕರಿಗೆ ಮದುವೆಯಾಗದಂತೆ ಕಟ್ಟಪ್ಪಣೆ ವಿಧಿಸಲಾಗಿತ್ತು.
ಸರ್ವಾಧಿಕಾರಿಯಾಗಿದ್ದ ಕ್ಲಾಡಿಯಸ್ ಗೆ ಗೊತ್ತಾಗದಂತೆ ಸೈನಿಕರಿಗೆ ವ್ಯಾಲೆಂಟೈನ್ ಮದುವೆ ಮಾಡಿಸಿದ್ದ. ಇದನ್ನು ತಿಳಿದ ಚಕ್ರವರ್ತಿ ಕ್ಲಾಡಿಯಸ್ ಸೇಂಟ್ ವ್ಯಾಲೆಂಟೈನ್ ನಿಗೆ ಶಿಕ್ಷೆ ವಿಧಿಸಿದ. ಫೆಬ್ರವರಿ 14 ರಂದು ವ್ಯಾಲೆಂಟೈನ್‌ನನ್ನು ಗಲ್ಲಿಗೇರಿಸಿಲಾಯ್ತು ಎಂದು ಹೇಳಲಾಗುತ್ತದೆ.
ವ್ಯಾಲೆಂಟೈನ್ಸ್ ಡೇ ಮಹತ್ವ
ಈ ಮಧ್ಯೆ, ವ್ಯಾಲೆಂಟೈನ್ಸ್ ಡೇ ಜನಪ್ರಿಯವಾಗಿ ಪ್ರೀತಿಯ ದೇವತೆ ಕ್ಯುಪಿಡ್ ಅನ್ನು ಆರಾಧಿಸುವುದಾಗಿದೆ. ರೋಮನ್ ಪುರಾಣದ ಪ್ರಕಾರ, ಕ್ಯುಪಿಡ್ ಶುಕ್ರನ ಮಗ. ಇದು ಪ್ರೀತಿ ಮತ್ತು ಸೌಂದರ್ಯದ ದೇವತೆ ಕ್ಯುಪಿಟ್, ಬಿಲ್ಲು ಮತ್ತು ಬಾಣವು ಹೃದಯವನ್ನು ಚುಚ್ಚುವುದನ್ನು ಚಿತ್ರಿಸುತ್ತದೆ. ಆದ್ದರಿಂದ, ಈ ಹಬ್ಬವು ಪ್ರೀತಿಯ ಭಾವನೆಯನ್ನು ಆಚರಿಸುವುದಾಗಿದೆ.
ಇಂದಿನ ಕಾಲದಲ್ಲಿ ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಹದಿಹರೆಯದವರಿಂದ ಹಿಡಿದು ವಯಸ್ಸಾಗಿರುವವರ ತನಕ ಬಹುತೇಕ ಎಲ್ಲರೂ ವ್ಯಾಲೆಂಟೈನ್ಸ್ ಡೇ ಆಚರಿಸುತ್ತಾರೆ. ಬಗೆ ಬಗೆಯ ರೀತಿಯಲ್ಲಿ ಸೆಲೆಬ್ರೇಟ್ ಮಾಡುತ್ತಾರೆ. ಈ ಮೂಲಕ ತನ್ನ ಪ್ರೀತಿಯನ್ನು, ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಉಡುಗೊರೆಗಳನ್ನು ಕೊಟ್ಟು ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ