ಮಕ್ಕಳಿಗೆ ಬರುವ ಶೀತ, ಜ್ವರಕ್ಕೆ (cold and fever) ಔಷಧಿ ಹಾಕಲು ಪೋಷಕರು ಹಿಂದೆಮುಂದೆ ನೋಡುವಂತಹ ಘಟನೆಗಳು ಕಳೆದ ಒಂದಿಷ್ಟು ತಿಂಗಳನಿಂದ ಸಂಭವಿಸುತ್ತಿವೆ. ಕೆಮ್ಮು, ಶೀತ, ಜ್ವರ ಹೋಗಲಾಡಿಸುವ ಸಾಮಾನ್ಯ ಔಷಧಿಗಳು (Medicines) ಮಕ್ಕಳ ಪ್ರಾಣಕ್ಕೆ ಸಂಚಕಾರ ತಂದೊಡುತ್ತಿವೆ. ಈ ಬಗ್ಗೆ ಪೋಷಕರಲ್ಲದೇ ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಆತಂಕ ವ್ಯಕ್ತಪಡಿಸುತ್ತಿದೆ. ಈಗಿನ ಪೋಷಕರು ಸಹ ಸ್ವಲ್ಪ ಮಕ್ಕಳ ಮೈ ಬಿಸಿಯಾಗಿ, ಶೀತವಾದರೆ ಸಾಕು ನೇರ ಔಷಧಿ ಖರೀದಿಸಿ ಹಾಕಿಬಿಡುತ್ತಾರೆ. ಪದೇ ಪದೇ ಈ ಔಷಧಿಗಳನ್ನು ಹಾಕುವುದರಿಂದ ಮಕ್ಕಳಲ್ಲಿ ಸ್ವಾಭಾವಿಕವಾಗಿರುವ ರೋಗ ನಿರೋಧಕ ಶಕ್ತಿ (natural immunity of children) ಕಡಿಮೆಯಾಗುತ್ತದೆ ಎಂಬುವುದರ ಕಿಂಚಿತ್ತೂ ಅರಿವಿಲ್ಲದೇ ಮತ್ತು ಕೆಲ ಮುಂಜಾಗ್ರತೆಗಳ ಬಗ್ಗೆಯೂ ಗಮನ ನೀಡದೇ ಔಷಧಿಗಳನ್ನು ಬಳಸುತ್ತಾರೆ.
ಔಷಧಿಗಳ ಜಾಗತಿಕ ಮಾರುಕಟ್ಟೆ ಮೌಲ್ಯ 2.5 ಬಿಲಿಯನ್ ಡಾಲರ್
ಪೋಷಕರು ಈ ಔಷಧಿಗಳ ಮೇಲೆ ಎಷ್ಟರ ಮಟ್ಟಿಗೆ ಅವಲಂಬಿತವಾಗಿದ್ದಾರೆ ಎಂದರೆ 2022 ರಲ್ಲಿ ಮಕ್ಕಳ ಕೆಮ್ಮು, ಶೀತ ಮತ್ತು ಅಲರ್ಜಿ ಔಷಧಿಗಳ ಜಾಗತಿಕ ಮಾರುಕಟ್ಟೆಯು ಸುಮಾರು 2.5 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ.
ಕೆಮ್ಮಿನ ಸಿರಪ್ ಸೇವಿಸಿ ಗ್ಯಾಂಬಿಯಾದಲ್ಲಿ 66, ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವು
ಹೀಗೆ ಕೆಮ್ಮು, ಶೀತ, ಜ್ವರದ ಔಷಧಿ ಸೇವಿಸಿ ನೂರಾರು ಮಕ್ಕಳು ಮೃತಪಟ್ಟಿರುವ ಬೇರೆ ಬೇರೆ ಘಟನೆಗಳು ನಮ್ಮ ಮುಂದಿವೆ. ಅದರಲ್ಲಿ ಗ್ಯಾಂಬೀಯಾದ ಘಟನೆ, ಉಜ್ಬೇಕಿಸ್ತಾನ್ ಘಟನೆ ನಮ್ಮ ಮುಂದಿನ ತಾಜಾ ಉದಾಹರಣೆಗಳು. ಗ್ಯಾಂಬಿಯಾದಲ್ಲಿ ಭಾರತ ಮೂಲದ ಔಷಧಿ ಕಂಪನಿ ತಯಾರಿಸಿದ ಕೆಮ್ಮಿನ ಔಷಧಿ ಕುಡಿದು 66 ಮಕ್ಕಳು ಸಾವನ್ನಪ್ಪಿದ್ದರೆ, ಉಜ್ಬೇಕಿಸ್ತಾನ್‌ನಲ್ಲೂ ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಔಷಧಿಗಳನ್ನು ಸೇವಿಸಿ ದೇಶದಲ್ಲಿ 18 ಮಕ್ಕಳು ಸಾವನ್ನಪ್ಪಿದ್ದರು.
ಔಷಧಿಯಲ್ಲಿರುವ ಅಂಶಗಳೇನು?
ಈ ಔಷಧಿಗಳು ಪ್ಯಾರಸಿಟಮಾಲ್ (ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಸೆಟಾಮಿನೋಫೆನ್ ಎಂದು ಕರೆಯಲಾಗುತ್ತದೆ) ನಂತಹ ಸಕ್ರಿಯ ಪದಾರ್ಥಗಳನ್ನು ಸಂಯೋಜಿಸಿ ಜ್ವರವನ್ನು ಕಡಿಮೆ ಮಾಡಲು ಗ್ಲಿಸರಿನ್ ಅಥವಾ ಪ್ರೋಪಿಲೀನ್ ಗ್ಲೈಕೋಲ್‌ನಿಂದ ಸಿಹಿ ಮತ್ತು ನುಂಗಲು ಸಲಭವಾಗುವ ಸಿರಪ್ ಅನ್ನು ತಯಾರಿಸುತ್ತಾರೆ.
ಇದನ್ನೂ ಓದಿ: Explained: ವಿಮಾನ ಸೇವೆಗಳಿಗೆ ಮಾರಕವಾಗುತ್ತಾ ಎಕ್ಸ್ಪ್ರೆಸ್ ಹೆದ್ದಾರಿ ರಸ್ತೆಜಾಲ?
ಮಕ್ಕಳಿಗೆ ನೀಡುವ ಸಿರಪ್ ಹೇಗೆ ಮಾರಕವಾಗುತ್ತದೆ?
ಗ್ಯಾಂಬಿಯಾ ಪ್ರಕರಣದಲ್ಲಿ ಮಕ್ಕಳಿಗೆ ನೀಡಿದ ಸಿರಪ್‌ನಲ್ಲಿ ಜಾಗತಿಕ ಆರೋಗ್ಯ ಅಧಿಕಾರಿಗಳು ಎಥಿಲೀನ್ ಗ್ಲೈಕೋಲ್ (ಇಜಿ) ಮತ್ತು ಡೈಥಿಲೀನ್ ಗ್ಲೈಕೋಲ್ (ಡಿಇಜಿ) ಎಂಬ ಎರಡು ವಿಷಕಾರಿ ಅಂಶಗಳು ಇರುವುದನ್ನು ಪತ್ತೆ ಹಚ್ಚಿದ್ದರು.
ಎಥಿಲೀನ್ ಗ್ಲೈಕಾಲ್, ಡೈಥಿಲೀನ್ ಗ್ಲೈಕಾಲ್
ಈ ಎರಡೂ ಪ್ರೊಪೈಲೀನ್ ಗ್ಲೈಕಾಲ್ ತಯಾರಿಕೆಯ ಉಪಉತ್ಪನ್ನವಾಗಿದ್ದು, ಎಥಿಲೀನ್ ಗ್ಲೈಕೋಲ್, ಡೈಥಿಲೀನ್ ಗ್ಲೈಕೋಲ್ ಎರಡೂ ಭಾರಿ ಅಪಾಯಕಾರಿ ಅಂಶಗಳು. WHO ಪ್ರಕಾರ, ಡೈಥಿಲೀನ್ ಗ್ಲೈಕೋಲ್ (ethylene glycol -EG) ಮತ್ತು ಎಥಿಲೀನ್ ಗ್ಲೈಕೋಲ್ (diethylene glycol -DEG) ಮನುಷ್ಯರಿಗೆ ವಿಷಕಾರಿ ಮತ್ತು ಸೇವಿಸಿದರೆ ಮಾರಕವಾಗಬಹುದು ಎಂದು ಹೇಳಿದೆ. ಈ ಎರಡೂ ವಿಷಕಾರಿ ಪದಾರ್ಥಗಳನ್ನು ಸೇವಿಸಿದ್ದಲ್ಲಿ ವಾಂತಿ, ಅತಿಸಾರ, ಮೂತ್ರವಿಸರ್ಜನೆಗೆ ಅಡಚಣೆ, ತಲೆನೋವು, ಬದಲಾದ ಮಾನಸಿಕ ಸ್ಥಿತಿ ಮತ್ತು ಮೂತ್ರಪಿಂಡದ ಗಾಯ ಉಂಟಾಗಬಹುದು, ಇದು ಕೊನೆಗೆ ಸಾವಿನ ಮೂಲಕ ಮುಕ್ತಾಯವಾಗಬಹುದು ಎಂದು ತಿಳಿಸಿದೆ.
EG ಮತ್ತು DEG ಯ ಪ್ರಮಾಣ ಔಷಧಿಯಲ್ಲಿ 0.10% ಕ್ಕಿಂತ ಮೀರಬಾರದು
US Pharmacopeia (USP) ನಲ್ಲಿ ನಿರ್ದೇಶಕರಾಗಿರುವ ಡಾ ಚೈತನ್ಯ ಕುಮಾರ್ ಕೊಡೂರಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಔಷಧೀಯ ಬಳಕೆಗಾಗಿ ಪ್ರೊಪೈಲಿನ್ ಗ್ಲೈಕಾಲ್ ತಯಾರಿಸುವ ತಯಾರಕರು ಅದರಲ್ಲಿರುವ ವಿಷವನ್ನು ತೆಗೆದುಹಾಕಲು ಅದನ್ನು ಶುದ್ಧೀಕರಿಸಬೇಕು ಎಂದು ಕುಮಾರ್ ಕೊಡೂರಿ ಹೇಳಿದರು. ಅಂತರರಾಷ್ಟ್ರೀಯ ಮಾನದಂಡಗಳು ಔಷಧಿಗಳಲ್ಲಿ EG ಮತ್ತು DEG ಯ ಪ್ರಮಾಣ 0.10% ಕ್ಕಿಂತ ಹೆಚ್ಚಿರಬಾರದು ಎಂದು ಸೂಚಿಸುತ್ತದೆ. ಆದರೆ ಇದನ್ನು ಮೀರಿ ತಯಾರದಲ್ಲಿ ಔಷಧಿಗಳು ಮಾರಕವಾಗುತ್ತವೆ ಎಂದು ಅವರು ತಿಳಿಸಿದರು.
ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುವ DEG ಮತ್ತು EG
ಔಷಧಿಗಳಲ್ಲಿ ಕಂಡುಬರುವ ಪ್ರೊಪಿಲೀನ್ ಗ್ಲೈಕೋಲ್ ವಿಷಕಾರಿಯಲ್ಲದಿದ್ದರೂ, DEG ಮತ್ತು EG ಅತ್ಯಂತ ಹಾನಿಕಾರಕವಾಗಿದೆ.ಇದನ್ನು ಸೇವಿಸಿದ್ದಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತವೆ ಮತ್ತು ಅಂತಿಮವಾಗಿ ತ್ವರಿತ ಚಿಕಿತ್ಸೆ ಇಲ್ಲದೆ ಸಾವಿಗೆ ಕಾರಣವಾಗುತ್ತದೆ. ಹಾಗೆಯೇ ಡೋಸ್ ಎಷ್ಟು ಮಾರಕವಾಗಿದೆ ಎಂಬುದು ಅದನ್ನು ತೆಗೆದುಕೊಳ್ಳುವ ವ್ಯಕ್ತಿಯ ತೂಕವನ್ನು ಅವಲಂಬಿಸಿರುತ್ತದೆ ಎಂದು ಚೈತನ್ಯ ಕುಮಾರ್ ಕೊಡೂರಿ ತಿಳಿಸಿದರು.
ಔಷಧಿ ವ್ಯಾಪಾರಿಗಳಿಂದ ಗೋಲ್ಮಾಲ್?
ರಾಸಾಯನಿಕಗಳನ್ನು ಮಾರಾಟ ಮಾಡುವ ಎರಡು ವೆಬ್‌ಸೈಟ್‌ಗಳು ಮಾಹಿತಿ ನೀಡಿರುವ ಪ್ರಕಾರ ಇಜಿ ಮತ್ತು ಡಿಇಜಿ ಪ್ರೊಪಿಲೀನ್ ಗ್ಲೈಕೋಲ್‌ನಗಿಂತ ತುಂಬಾ ಕಡಿಮೆ ವೆಚ್ಚದ್ದಾಗಿದೆ. ಈ ಕಾರಣದಿಂದಲೂ ಇದರ ಬಳಕೆ ಹೆಚ್ಚಾಗಿದೆ ಎಂದು ಕೆಲವು ತಜ್ಞರು ಹೇಳುತ್ತಾರೆ. ವಿಷತ್ವದ ಕಾರಣ, ಇದನ್ನು (ಡೈಥಿಲೀನ್ ಗ್ಲೈಕೋಲ್) ಆಹಾರ ಅಥವಾ ಔಷಧಿಗಳಲ್ಲಿ ಅನುಮತಿಸಲಾಗುವುದಿಲ್ಲ. ಆದಾಗ್ಯೂ, ಅದರ ಕರಗುವಿಕೆಯಿಂದಾಗಿ, ಕೆಲವು ಔಷಧಿ ತಯಾರಕರು ಅನುಚಿತವಾಗಿ ಕೆಮ್ಮು ಸಿರಪ್‌ಗಳು ಮತ್ತು ಅಸೆಟಾಮಿನೋಫೆನ್‌ಗಳಂತಹ ಔಷಧೀಯ ಪದಾರ್ಥಗಳಲ್ಲಿ ಗ್ಲಿಸರಿನ್‌ನಂತಹ ವಿಷಕಾರಿಯಲ್ಲದ ಪದಾರ್ಥಗಳ ಜಾಗದಲ್ಲಿ ಇದನ್ನು ಬದಲಾಯಿಸುತ್ತಾರೆ ಎನ್ನಲಾಗಿದೆ.
ಪ್ರಾಣಕ್ಕೆ ಮಾರಕವಾಗಿದೆ DEG ವಿಷಕಾರಿ ಅಂಶ
ಡೈಥಿಲೀನ್ ಗ್ಲೈಕೋಲ್‌ಗೆ ಸಂಬಂಧಿಸಿದ ಸಾವುಗಳು ಇದೇ ಮೊದಲ ಬಾರಿಗೆ ನಡೆಯುತ್ತಿರುವ ಪ್ರಕರಣಗಳಲ್ಲ. ಇಂತಹ ಘಟನೆಗಳು ಈ ಹಿಂದೆ ಭಾರತ, ಯುನೈಟೆಡ್ ಸ್ಟೇಟ್ಸ್, ಬಾಂಗ್ಲಾದೇಶ, ಪನಾಮ ಮತ್ತು ನೈಜೀರಿಯಾದಲ್ಲಿ ವರದಿಯಾಗಿದೆ. ಪ್ಯಾರಸಿಟಮಾಲ್ ಸಿರಪ್‌ಗಳಲ್ಲಿ ಇರುವ DEG ವಿಷಕಾರಿ ಅಂಶದಿಂದಾಗಿ 1990 ರ ದಶಕದಲ್ಲಿ, ಹೈಟಿಯಲ್ಲಿ ಸುಮಾರು 90 ಮಕ್ಕಳು ಮತ್ತು ಬಾಂಗ್ಲಾದೇಶದಲ್ಲಿ 200 ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದಾರೆ. ತೀರಾ ಇತ್ತೀಚೆಗೆ, ಪನಾಮ, ಭಾರತ ಮತ್ತು ನೈಜೀರಿಯಾದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ. ಭಾರತದಲ್ಲಿ 1973 ರಲ್ಲಿ ಎಗ್ಮೋರ್‌ನ ಚೆನ್ನೈನ ಮಕ್ಕಳ ಆಸ್ಪತ್ರೆಯಲ್ಲಿ 14 ಮಕ್ಕಳು ಇದೇ ಕಾರಣದಿಂದಾಗಿ ಸಾವನ್ನಪ್ಪಿದ್ದರು. 1986 ರಲ್ಲಿ ಮುಂಬೈನಲ್ಲೂ ಇದೇ ಘಟನೆ ಸಂಭವಿಸಿದ್ದು, 14 ರೋಗಿಗಳು ಸಾವನ್ನಪ್ಪಿದ್ದರು.
ಈ ಎಲ್ಲಾ ಘಟನೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸುತ್ತಲೇ ಇರುವ ವಿಶ್ವ ಆರೋಗ್ಯ ಸಂಸ್ಥೆ ತಯಾರಕರು ತಮ್ಮ ಪದಾರ್ಥಗಳು ಮತ್ತು ಸಿದ್ಧಪಡಿಸಿದ ಉತ್ಪನ್ನಗಳ ಹೆಚ್ಚಿನ ಪರೀಕ್ಷೆಗಳನ್ನು ಮಾಡುವಂತೆ ಒತ್ತಾಯಿಸುವುದು ಸೇರಿದಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ರಚಿಸಲಾದ ಜಾಗತಿಕ ಮಾರ್ಗಸೂಚಿಗಳನ್ನು ಬಿಗಿಗೊಳಿಸಿದೆ. ಆದರೆ ಉತ್ಪಾದನೆ ಮತ್ತು ಬಳಕೆ ಎರಡರಲ್ಲೂ ಕಾನೂನುಗಳನ್ನು ರಚಿಸುವುದು ಮತ್ತು ಅವುಗಳನ್ನು ಜಾರಿಗೊಳಿಸುವುದು ಆಯಾಯ ದೇಶಗಳಿಗೆ ಸಂಬಂಧಿಸಿದೆ. ಹೀಗಾಗಿ ಅಲ್ಲಿನ ದೇಶಗಳು ಚಿಕ್ಕ ಮಕ್ಕಳಿಎ ನೀಡುವಂತಹ ಔಷಧಿಗಳ ಬಗ್ಗೆ ಮೈ ಎಲ್ಲಾ ಕಣ್ಣಾಗಿಸಿಕೊಳ್ಳುವಂತಹ ಕೆಲ ಬಿಗಿ ನಿಯಮಗಳನ್ನು ಜಾರಿಗೆ ತರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ