• ಹೋಂ
  • »
  • ನ್ಯೂಸ್
  • »
  • Explained
  • »
  • Explained: 3 ದಶಕದ ಹಿಂದಿನ ಆ ಘಟನೆ ಟ್ರಂಪ್​ಗೆ ಮುಳುವಾಗಿದ್ದು ಹೇಗೆ? ಇಲ್ಲಿದೆ ಮಾಜಿ ಅಧ್ಯಕ್ಷನನ್ನು ಅಪರಾಧಿಯಾಗಿಸಿದ ಕೇಸ್​ ವಿವರ

Explained: 3 ದಶಕದ ಹಿಂದಿನ ಆ ಘಟನೆ ಟ್ರಂಪ್​ಗೆ ಮುಳುವಾಗಿದ್ದು ಹೇಗೆ? ಇಲ್ಲಿದೆ ಮಾಜಿ ಅಧ್ಯಕ್ಷನನ್ನು ಅಪರಾಧಿಯಾಗಿಸಿದ ಕೇಸ್​ ವಿವರ

ಡೊನಾಲ್ಡ್​ ಟ್ರಂಪ್​

ಡೊನಾಲ್ಡ್​ ಟ್ರಂಪ್​

1990ರ ಒಂದು ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಟ್ರಂಪ್‌ ಅವರನ್ನು ದೋಷಿ ಎಂದು ನ್ಯಾಯಲಯ ಆದೇಶ ಹೊರಡಿಸಿದೆ. ಲೇಖಕಿ ಇ. ಜೀನ್ ಕ್ಯಾರೊಲ್ ಅವರು ಟ್ರಂಪ್‌ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದಾಗಿ ಮೊಕದ್ದಮೆ ಹೂಡಿದ್ದಾರೆ.

  • Share this:

ಜಗತ್ತಿನ ದೊಡ್ಡಣ್ಣ ಎಂದು ಕರೆಯುವ ಅಮೆರಿಕಾ (America) ತನ್ನದೇ ಆದ ಗತ್ತು, ಸ್ಥಾನಮಾನ ಹೊಂದಿದೆ. ಈವರೆಗೆ ದೇಶದ ಅಧಿಕಾದ ಚುಕ್ಕಾಣಿ ಹಿಡಿದವರು ದೇಶವನ್ನು ಮತ್ತೊಂದು ಸ್ಥಾನಮಾನಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ (Donald Trump) ಅಧ್ಯಕ್ಷರಾಗಿದ್ದ ಕಾಲಘಟ್ಟದಲ್ಲಿ ಇದೆಲ್ಲವೂ ಉಲ್ಟಾ ಆಗಿತ್ತು. ಮನಸ್ಸೋ ಇಚ್ಛೆ ಹೇಳಿಕೆ, ವಿವಾದ (Dispute), ಆರೋಪ ಎಲ್ಲವೂ ಇವರ ವಿರುದ್ಧ ಕೇಳಿ ಬಂದಿದ್ದವು.


ಟ್ರಂಪ್‌ ವಿರುದ್ಧ ಕ್ರಿಮಿನಲ್ ಕೇಸ್ ಸರಮಾಲೆ


ಅದರಲ್ಲೂ ಟ್ರಂಪ್ ಅವರ ಲೈಂಗಿಕ ಸಂಬಂಧದ ವಿಚಾರಗಳು ಭಾರೀ ಸದ್ದು ಮಾಡಿದ್ದು, ಇದೀಗ ಅದೇ ಕಾರಣಕ್ಕೆ ಜೈಲು ಕಂಬಿ ಎಣಿಸುತ್ತಿದ್ದಾರೆ. ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರು ಕ್ರಿಮಿನಲ್ ಕೇಸ್ ಎದುರಿಸುವಂತಾಗಿದೆ. ಇವರನ್ನು ಈಗಾಗಲೇ ಕ್ರಿಮಿನಲ್ ಆರೋಪದ ಮೇಲೆ ಬಂಧಿಸಲಾಗಿದ್ದು, ವಿಚಾರಣೆಗಳು ಕೂಡ ನಡೆಯುತ್ತಿವೆ.


ಟ್ರಂಪ್‌ ಅವರನ್ನು ಕಾಮುಕ ಎಂದು ನಿರ್ಧರಿಸಿದ 1990ರ ಘಟನೆ


ಆದರೆ 1990ರ ಒಂದು ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಟ್ರಂಪ್‌ ಅವರನ್ನು ದೋಷಿ ಎಂದು ನ್ಯಾಯಲಯ ಆದೇಶ ಹೊರಡಿಸಿದೆ. ಲೇಖಕಿ ಇ. ಜೀನ್ ಕ್ಯಾರೊಲ್ ಅವರು ಟ್ರಂಪ್‌ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದಾಗಿ ಮೊಕದ್ದಮೆ ಹೂಡಿದ್ದರು. ಈ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿ, ಸಾಕ್ಷ್ಯಗಳನ್ನು ಪರಿಶೀಲಿಸಿ ನ್ಯಾಯಾಲಯ ಟ್ರಂಪ್‌ ಅವರನ್ನು ಅಪರಾಧಿ ಎಂದು ಘೋಷಿಸಿದ್ದು, ಕ್ಯಾರೊಲ್‌ ಅವರಿಗೆ $5 ಮಿಲಿಯನ್ ಪಾವತಿಸಬೇಕು ಎಂತಲೂ ಆದೇಶ ಹೊರಡಿಸಿದೆ.


ಹಾಗಾದರೆ ಏನದು 1990ರಲ್ಲಿ ನಡೆದ ಘಟನೆ,‌ ಟ್ರಂಪ್‌ನಿಂದ ಕ್ಯಾರೋಲ್ ಹೇಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದರು ಎಂದು ನೋಡೋಣ.


ಏನದು 1990ರ ಘಟನೆ? ಮಹಿಳಾ ಲೇಖಕಿ ಆರೋಪಿಸಿದ್ದೇನು?


1990ರ ದಶಕದ ಮಧ್ಯ ಭಾಗದಲ್ಲಿ ಮ್ಯಾನ್‌ಹಟನ್ ನಗರದ ಐಷಾರಾಮಿ ಬರ್ಗ್‌ಡಾರ್ಫ್ ಗುಡ್‌ಮ್ಯಾನ್ ಡಿಪಾರ್ಟ್‌ಮೆಂಟ್ ಸ್ಟೋರಿನ ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 79 ವರ್ಷದ ಕ್ಯಾರೊಲ್ ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಬಲವಂತವಾಗಿ ನನ್ನ ಕೈಗಳನ್ನು ಸುತ್ತಿ, ಬಳಸಿ ನನ್ನ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದರು ಎಂದು ಕ್ಯಾರೊಲ್‌ ಆರೋಪ ಮಾಡಿದ್ದರು. ಈ ಘಟನೆ ಬಗ್ಗೆ 2019ರಲ್ಲಿ ಟ್ರಂಪ್ ಅವರ ಅಧ್ಯಕ್ಷತೆಯಲ್ಲಿ ಅತ್ಯಾಚಾರದ ಆರೋಪವನ್ನು ಕ್ಯಾರೊಲ್ ಮೊದಲು ಸಾರ್ವಜನಿಕವಾಗಿ ಆರೋಪಿಸಿದರು.


ಇದನ್ನೂ ಓದಿ: ನಿಮ್ಮ ವಿಧಾನಸಭೆ ಯಾವುದು? ಕ್ಷೇತ್ರದ ಅಭ್ಯರ್ಥಿಗಳು ಯಾರು? ಡೋಂಡ್ ವರಿ, ಹೀಗೆ ಚೆಕ್ ಮಾಡಿ


ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ ಟ್ರಂಪ್‌ ತನ್ನನ್ನು “ಕಾನ್ ವುಮನ್” ಎಂದು ಕರೆದು ತನ್ನನ್ನು ದೂಷಿಸಿದ್ದಾರೆ ಎಂದು ಕ್ಯಾರೋಲ್ ಹೇಳಿದ್ದಾರೆ.


ಲೈಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ, ಪ್ರಕರಣ ಸಂಭವಿಸಿದ ದಶಕಗಳ ನಂತರ ಆರೋಪಿಗಳ ಮೇಲೆ ಮೊಕದ್ದಮೆ ಹೂಡಲು ಒಂದು ವರ್ಷದ ಅವಧಿಯನ್ನು ನೀಡುವ ಕಾನೂನು ನ್ಯೂಯಾರ್ಕ್ ನಗರದಲ್ಲಿ ಜಾರಿಗೆ ಬಂದ ನಂತರ ಕ್ಯಾರೊಲ್ ಕಳೆದ ವರ್ಷದ ಕೊನೆಯಲ್ಲಿ ಮೊಕದ್ದಮೆ ಹೂಡಿದರು.


ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಏಪ್ರಿಲ್ 25ರಿಂದ ನ್ಯೂಯಾರ್ಕ್ ನಗರದ ನ್ಯಾಯಾಲಯದಲ್ಲಿ ವಿಚಾರಣೆಗಳು ಪ್ರಾರಂಭವಾದವು, ಅಲ್ಲಿ ಮಾಜಿ 'ಎಲ್ಲೆ ನಿಯತಕಾಲಿಕ'ದ ಅಂಕಣಕಾರತಿ ಕ್ಯಾರೋಲ್ ವರ್ಷಗಳ ಹಿಂದೆ ಅಂಗಡಿಯಲ್ಲಿ ಟ್ರಂಪ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ‌ಎಂದು ಕೆಲವು ಅತ್ಯಮೂಲ್ಯ ಸಾಕ್ಷಿಗಳನ್ನು ಪ್ರಸ್ತುತ ಪಡಿಸಿದರು.


ದೌರ್ಜನ್ಯವನ್ನು ಪುಸ್ತಕದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟ ಜೀನ್ ಕ್ಯಾರೋಲ್


2019ರಲ್ಲಿ ಬಹಿರಂಗವಾಗಿ ಟ್ರಂಪ್‌ ವಿರುದ್ಧ ಆರೋಪ ಮಾಡಿದ ನಂತರ, ಕ್ಯಾರೋಲ್‌ ಒಂದು ಪುಸ್ತಕ ಸಹ ಬಿಡುಗಡೆ ಮಾಡಿದರು. 'What Do We Need Men For? ಎಂಬ ಪುಸ್ತಕದಲ್ಲಿ ಟ್ರಂಪ್‌ ಅವರ ಎಲ್ಲಾ ದೌರ್ಜನ್ಯಗಳನ್ನು ಉಲ್ಲೇಖಿಸಿ ಬರೆದರು. ಪುಸ್ತಕದಲ್ಲಿ ಬರ್ಗ್‌ಡಾರ್ಫ್-ಗುಡ್‌ಮ್ಯಾನ್‌ನಲ್ಲಿ ಶಾಪಿಂಗ್ ಸೆಂಟರ್‌ನಲ್ಲಿ ನಡೆದ ಬಗ್ಗೆ ಎಳೆಎಳೆಯಾಗಿ ಬರೆದರು.


ಅಪರಿಚಿತ ಮಹಿಳೆಗೆ ಉಡುಗೊರೆಯನ್ನು ಆಯ್ಕೆ ಮಾಡಲು ಸಹಾಯ ಮಾಡುವಂತೆ ಕೇಳುವ ಮೂಲಕ ಮಾತುಕತೆ ಆರಂಭಿಸಿದ ಅವರು ನಂತರ ಬೇರೆ ರೀತಿ ವರ್ತಿಸಲು ಆರಂಭಿಸಿದರು.


ಬಟ್ಟೆ ಬದಲಾಯಿಸುವ ಕೋಣೆಗೆ ತನ್ನನ್ನು ಕರೆದೊಯ್ದು ಟ್ರಂಪ್ ನನ್ನನ್ನು ಗೋಡೆಗೆ ತಳ್ಳಿ ಸುಮಾರು ಮೂರು ನಿಮಿಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಈ ಪುಸ್ತಕ ಬಿಡುಗಡೆಯಾದಾಗಲೂ ಸಹ ಸಾಕಷ್ಟು ಸಂಚಲನ ಉಂಟಾಗಿತ್ತು. ಆದರೆ ಈ ಪುಸ್ತಕದ ವಿರುದ್ಧವೂ ಟ್ರಂಪ್‌ ಚಕಾರ ಎತ್ತಿದ್ದರು.


ಡೊನಾಲ್ಡ್​ ಟ್ರಂಪ್​


ನ್ಯಾಯಾಲಯದಲ್ಲಿ ಭಯಾನಕ ಘಟನೆ ನೆನಪಿಸಿಕೊಂಡ ಕ್ಯಾರೋಲ್


ಏಪ್ರಿಲ್‌ನಲ್ಲಿ ನ್ಯಾಯಾಲಯದ ವಿಚಾರಣಟಯಲ್ಲಿ ಕ್ಯಾರೋಲ್‌ ಈ ಘಟನೆಯನ್ನು ಎಲ್ಲರ ಮುಂದೆ ಬಿಚ್ಚಿಟ್ಟರು. ಅಂದು ನಡೆದ ಘಟನೆಯ ಬಗ್ಗೆ ಹೇಳಿದ ಕ್ಯಾರೋಲ್‌ ಇನ್ನೂ ಆ ದಿನ ನನ್ನನ್ನು ಭಯಪಡುವಂತೆ ಮಾಡುತ್ತದೆ. ಅದೊಂದು ಭಯಾನಕ ಭಾವನೆ ಎಂದು ಹೇಳಿದರು.


ನ್ಯಾಯಾಲಯ ಕೂಡ ಏಕೆ ಸಹಾಯಕ್ಕಾಗಿ ನೀವು ಯಾರನ್ನೂ ಕೂಗಲಿಲ್ಲ ಎಂದು ಕೇಳಿದಾಗ ಕ್ಯಾರೋಲ್‌ ಅದಕ್ಕೆ ನಾನು "ನಾನು ಕಿರುಚಾಟಗಾರತಿಯಲ್ಲ, ನಾನು ಹೋರಾಟಗಾರತಿ" ಎಂದು ಪ್ರತಿಕ್ರಿಯಿಸಿದರು.


ಟ್ರಂಪ್‌ ತನ್ನ ತಪ್ಪನ್ನು ಮುಚ್ಚಿಟ್ಟು, ನನ್ನ ಖ್ಯಾತಿಯನ್ನು ಹಾಳು ಮಾಡಿದರು. ನಾನು ಕಳೆದುಕೊಂಡ ಎಲ್ಲವನ್ನು ನನ್ನ ಜೀವನವನ್ನು ಮರಳಿ ಪಡೆಯಲು ಪ್ರಯತ್ನಿಸಲು ನಾನು ನ್ಯಾಯಾಲಯದ ಮೆಟ್ಟಿಲೇರಿದ್ದೇನೆ.


ಪುಸ್ತಕದಲ್ಲಿ ನಾನು ಬರೆದು ಪ್ರಕಟಿಸಿದರೂ ಯಾರು ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ, ಹೀಗಾಗಿ ನಾನು ನ್ಯಾಯಾಲಯದ ಮೊರೆ ಬಂದಿದ್ದೇನೆ ಎಂದು ಹೇಳಿದ್ದರು.


ಕ್ಯಾರೋಲ್‌ ಆರೋಪದ ಬಗ್ಗೆ ಟ್ರಂಪ್ ಏನು ಹೇಳಿದ್ದರು?


2019 ರಲ್ಲಿ ಕ್ಯಾರೋಲ್ ಆರೋಪಗಳನ್ನು ಬಿಚ್ಚಿಟ್ಟಾಗ ಟ್ರಂಪ್ ಅವರು ಕ್ಯಾರೋಲ್ ತಮ್ಮ ಪುಸ್ತಕದ ಮಾರಾಟವನ್ನು ಹೆಚ್ಚಿಸಲು ಸುಳ್ಳು ಹೇಳುತ್ತಿದ್ದಾರೆ ಎಂದು ‌ಆರೋಪಿಸಿದ್ದರು. ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಯಾರು ಆಕೆ? ಅವಳನ್ನು ನಾನು ಎಂದಿಗೂ ಭೇಟಿಯಾಗಲಿಲ್ಲ. ಇನ್ನು ಅತ್ಯಾಚಾರವೆಲ್ಲ ಎಲ್ಲಿಂದ ಸಾಧ್ಯ" ಎಂದು ಆರೋಪವನ್ನು ತಳ್ಳಿ ಹಾಕಿದ್ದರು.


ಅವಳು ಹೊಸ ಪುಸ್ತಕವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಳೆ ಎಂದು ಆರೋಪಿಸಿದ್ದರು. 1987 ರಲ್ಲಿ ನಡೆದ NBC ಪಾರ್ಟಿಯಲ್ಲಿ ಕ್ಯಾರೋಲ್ ಮತ್ತು ಟ್ರಂಪ್ ಒಟ್ಟಿಗೆ ಇರುವ ಚಿತ್ರ ಕೂಡ ಬಹಿರಂಗವಾಗಿತ್ತು.


ಕ್ಯಾರೋಲ್‌ಗೆ ಐದು ಮಿಲಿಯನ್‌ ಪರಿಹಾರ


US ಜಿಲ್ಲಾ ನ್ಯಾಯಾಧೀಶ ಲೂಯಿಸ್ ಕಪ್ಲಾನ್ ಎಲ್ಲವನ್ನೂ ಪರಿಗಣಿಸಿ ಅಂತಿಮವಾಗಿ ಟ್ರಂಪ್ ಅತ್ಯಾಚಾರ ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಬಯಲು ಮಾಡಿದ್ದಾರೆ.


ಟ್ರಂಪ್ ಅವರ ನಿರಾಕರಣೆಯು ತನಗೆ "ಪ್ರತಿಷ್ಠೆ, ಭಾವನಾತ್ಮಕ ಮತ್ತು ವೃತ್ತಿಪರ ಹಾನಿಯನ್ನುಂಟುಮಾಡಿದೆ" ಎಂದು ಮತ್ತೊಂದು ಮೊಕದ್ದಮೆ ಹೂಡಿದ ಕ್ಯಾರೋಲ್‌ ಐದು ಮಿಲಿಯನ್‌ ಪರಿಹಾರ ಕೂಡ ಪಡೆದುಕೊಂಡಿದ್ದಾರೆ.


ಇನ್ನೂ 2016ರಲ್ಲಿ ಚುನಾವಣೆಯ ಮೊದಲು, ಅವರು ಅಮೆರಿಕದ ಖ್ಯಾತ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಜೊತೆಗೆ ಸಂಬಂಧವನ್ನು ಹೊಂದಿದ್ದರು. ಅದನ್ನು ಬಹಿರಂಗಪಡಿಸದಂತೆ ಆಕೆಗೆ ಹಣವನ್ನು ನೀಡಿದ್ದರು ಎನ್ನುವ ವಿಚಾರವಾಗಿ ಸದ್ಯ ಜೈಲಿನಲ್ಲಿದ್ದಾರೆ.


ತಮ್ಮ ಸಂಬಂಧದ ಬಗ್ಗೆ ವಿಚಾರ ಹಂಚಿಕೊಳ್ಳದೇ ಇರಲು ಟ್ರಂಪ್ ತನ್ನ ವಕೀಲರನ್ನು ಮಧ್ಯವರ್ತಿಯಾಗಿಟ್ಟುಕೊಂಡು ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಗೆ ದೊಡ್ಡ ಮೊತ್ತದ ಹಣ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 2006 ರಲ್ಲಿ ಟ್ರಂಪ್ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಸ್ವತಃ ಸ್ಟಾರ್ಮಿ ಡೇನಿಯಲ್ಸ್ ಇತ್ತೀಚೆಗೆ ಬಹಿರಂಗಪಡಿಸಿದ್ದರು.




ಟ್ರಂಪ್‌ ರಾಜಕೀಯ ಭವಿಷ್ಯದ ಕಥೆ ಏನು?


76 ವರ್ಷದ ರಿಪಬ್ಲಿಕನ್ ಪಕ್ಷದ ಟ್ರಂಪ್ ಮುಂದಿನ ವರ್ಷದ ಚುನಾವಣೆಯಲ್ಲಿ ಶ್ವೇತಭವನಕ್ಕೆ ಮರಳಲು ಬಯಸುತ್ತಿದ್ದಾರೆ. ಆದರೆ ಈ ಎಲ್ಲಾ ಪ್ರಕರಣಗಳು ಟ್ರಂಪ್ ಎದುರಿಸುತ್ತಿರುವ ಹಲವಾರು ಕಾನೂನು ಸವಾಲುಗಳಲ್ಲಿ ಒಂದಾಗುತ್ತಿದೆ.


ಹೀಗಾಗಿ ನ್ಯೂಯಾರ್ಕ್ ರಾಜ್ಯದ ಕಾನೂನು ಡೊನಾಲ್ಡ್ ಟ್ರಂಪ್ ಅವರ ಭವಿಷ್ಯವನ್ನು ಶಾಶ್ವತವಾಗಿ ಬದಲು ಮಾಡುವಂತೆ ಕಾಣಿಸುತ್ತಿದೆ. ಒಟ್ಟಾರೆ ಪ್ರಕರಣಗಳು ಮುಂದಿನ ವರ್ಷದ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುವ ಮಾಜಿ ಅಧ್ಯಕ್ಷರ ರಾಜಕೀಯ ಭವಿಷ್ಯವನ್ನು ಎತ್ತ ಕೊಂಡುಯ್ಯುತ್ತದೆ ಕಾದು ನೋಡಬೇಕಿದೆ.

top videos
    First published: