ಇತ್ತೀಚಿಗಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರು (Indian Prime Minister Narendra Modi) ಬೆಂಗಳೂರಿಗ ಶಾಲಾ ವಿದ್ಯಾರ್ಥಿಯೊಬ್ಬನಿಗೆ (Bengaluru School Student) ಪತ್ರ ಬರೆದಿದ್ದರು! (letter) ಅದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ (Heeraben Modi) ತೀರಿಕೊಂಡಿದ್ದಾಗ, ಇದೇ ಬೆಂಗಳೂರಿನ ಬಾಲಕ ಮೋದಿಯವರಿಗೆ ಪತ್ರ ಬರೆದು, ಸಾಂತ್ವನ ಹೇಳಿದ್ದ. ಇದೇ ಕಾರಣಕ್ಕೆ ಪ್ರತಿಯಾಗಿ ಪತ್ರ ಬರೆದಿದ್ದ ನರೇಂದ್ರ ಮೋದಿಯವರು ಆತನಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಂದಹಾಗೆ ಪ್ರಧಾನಿಗೆ ಪತ್ರ ಬರೆಯುತ್ತಿರುವುದು, ಪ್ರಧಾನಿಯವರೇ ಪತ್ರ ಬರೆದು ಉತ್ತರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕರು ಪ್ರಧಾನಿಗೆ ಪತ್ರ ಬರೆದು ತಮ್ಮ ದುಃಖ ದುಮ್ಮಾನ ತೋಡಿಕೊಂಡಿದ್ದಾರೆ. ನರೇಂದ್ರ ಮೋದಿಯವರೂ ಕೂಡ ಅನೇಕ ಪತ್ರ, ಇಮೇಲ್‌ಗಳಿಗೆ (Email) ಸ್ಪಂದಿಸಿದ್ದಾರೆ. ಹಾಗಾದ್ರೆ ಪ್ರಧಾನಿಗೆ ಯಾರು ಪತ್ರ ಬರೆಯಬಹುದು? ಯಾವ ವಿಚಾರಕ್ಕೆ ಪತ್ರ ಬರೆಯಬಹುದು? ಪಿಎಂಗೆ ಪತ್ರ ಬರೆಯುವ ವಿಧಾನ ಏನು? ಈ ಬಗ್ಗೆ ಇಲ್ಲಿದೆ ಮಾಹಿತಿ…
ಪತ್ರ, ಇಮೇಲ್ ಮೂಲಕ ಪ್ರಧಾನಿ ಸಂಪರ್ಕ
ಇಮೇಲ್, ಪತ್ರ, ಫೋನ್ ಮತ್ತು ಸಾಮಾಜಿಕ ಮಾಧ್ಯಮದ ಮೂಲಕವೂ ಸೇರಿದಂತೆ ಸಾರ್ವಜನಿಕರಿಗೆ ತಮ್ಮನ್ನು ಸಂಪರ್ಕಿಸಲು ವಿವಿಧ ಮಾರ್ಗಗಳನ್ನು ಪ್ರಧಾನಿ ಒದಗಿಸಿದ್ದಾರೆ. ನರೇಂದ್ರ ಮೋದಿ ಅವರು ತಮ್ಮದೇ ಆದ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಸಹ ಹೊಂದಿದ್ದಾರೆ. ಇದನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಪ್ರತಿಕ್ರಿಯೆ ಮತ್ತು ಆಲೋಚನೆ, ಸಲಹೆ ಸೂಚನೆಗಳನ್ನು ಒದಗಿಸಲು ಬಳಸಬಹುದು.
ಪ್ರಧಾನ ಮಂತ್ರಿಗೆ ಪತ್ರ ಕಳಿಸಿ
ನವದೆಹಲಿಯಲ್ಲಿರುವ ಪ್ರಧಾನಿ ಕಾರ್ಯಾಲಯಕ್ಕೆ ನಾವು ಪತ್ರ ಕೂಡ ಬರೆಯಬಹುದು. Prime Minister, south black, New Delhi -110011 ಈ ವಿಳಾಸಕ್ಕೆ ನೀವು ಪತ್ರ ಕಳಿಸಬಹುದು. Mr. Prime Minister ಅಥವಾ "ಗೌರವಾನ್ವಿತ ನರೇಂದ್ರ ಮೋದಿ" ಅಂತ ಗೌರವ ಪೂರ್ವಕವಾಗಿ ಬರೆಯೋದನ್ನು ಮರೆಯದಿರಿ. ನೀವು ಪತ್ರವನ್ನು ಎಲ್ಲಿಂದ ಕಳುಹಿಸುತ್ತೀರಿ ಎಂಬುದರ ಆಧಾರದ ಮೇಲೆ ಅದು ಬದಲಾಗುತ್ತದೆ. ಪತ್ರದ ವಿಳಾಸ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಇರಲಿ. ಯಾಕೆಂದ್ರೆ ಉಳಿದ ಪ್ರಾದೇಶಿಕ ಭಾಷೆಯಲ್ಲಿ ಪತ್ರ ಬರೆದರೆ ಅಲ್ಲಿನ ಅಂಚೆ ಸಿಬ್ಬಂದಿಗೆ ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದು ಪ್ರಧಾನಿಯವರನ್ನು ತಲುಪದೇ ಇರಬಹುದು.
ಇದನ್ನೂ ಓದಿ: Lookout Notice: ಲುಕ್ ಔಟ್ ನೋಟಿಸ್ ಎಂದರೇನು? ಯಾವಾಗ, ಯಾರ ವಿರುದ್ಧ ಇದನ್ನು ಹೊರಡಿಸಲಾಗುತ್ತದೆ?
ಎಲ್ಲಾ ಪತ್ರಕ್ಕೂ ಉತ್ತರಿಸುತ್ತಾರಾ ಪ್ರಧಾನಿ?
ಪ್ರಧಾನಮಂತ್ರಿಯವರು ಬಹಳಷ್ಟು ಮೇಲ್‌ಗಳು ಮತ್ತು ಪತ್ರಗಳನ್ನು ಪಡೆಯುವುದರಿಂದ, ನೀವು ಪ್ರತಿ ಪತ್ರ ಅಥವಾ ಕಾರ್ಡ್‌ಗೆ ಪ್ರತಿಕ್ರಿಯೆಯನ್ನು ಪಡೆಯುವ ಸಾಧ್ಯತೆಯಿಲ್ಲ. ಆದಾಗ್ಯೂ, ನಿಮ್ಮ ಪತ್ರದಲ್ಲಿ ನೀವು ವಿನಂತಿಯನ್ನು ಮಾಡಿದ್ದರೆ ಪ್ರಧಾನ ಮಂತ್ರಿಯ ಸಿಬ್ಬಂದಿಯ ಸದಸ್ಯರು ಉತ್ತರಿಸಬಹುದು.
ಪ್ರಧಾನಿಗೆ ಇಮೇಲ್ ಕಳಿಸಬಹುದು
ಭಾರತದ ಪ್ರಧಾನ ಮಂತ್ರಿಗೆ ನೇರವಾಗಿ ಇಮೇಲ್ ಕಳುಹಿಸುವ ವ್ಯವಸ್ಥೆಯೂ ಇದೆ. ಪ್ರಧಾನ ಮಂತ್ರಿಗೆ ಇಮೇಲ್ ಕಳುಹಿಸಲು https://www.pmindia.gov.in/ ಗೆ ಭೇಟಿ ನೀಡಿ . ನೀವು ಪುಟವನ್ನು ಕೆಳಗೆ ಸ್ಕ್ರಾಲ್ ಮಾಡುವಾಗ "ಪ್ರಧಾನ ಮಂತ್ರಿಯೊಂದಿಗೆ ಸಂವಹನ" ಶೀರ್ಷಿಕೆಯ ಅಡಿಯಲ್ಲಿ "ಪ್ರಧಾನ ಮಂತ್ರಿಗೆ ಬರೆಯಿರಿ" ಎನ್ನುವ ಲಿಂಕ್ ಕ್ಲಿಕ್ ಮಾಡಿ. ಆನ್‌ಲೈನ್ ಫಾರ್ಮ್ ಅನ್ನು ಪೂರ್ಣಗೊಳಿಸಿ, ಅದು ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಭದ್ರತಾ ಅಕ್ಷರಗಳನ್ನು ಒಳಗೊಂಡಿರಬೇಕು.
ವಿಷಯವನ್ನು ಸ್ಪಷ್ಟವಾಗಿ ಬರೆಯಿರಿ
ನೀವು ಸಾರ್ವಜನಿಕ ಕುಂದುಕೊರತೆಗಳು, ಸಲಹೆಗಳು, ಪ್ರತಿಕ್ರಿಯೆ, ಹಣಕಾಸು ವಂಚನೆ, ಇತರೇ ವಂಚನೆ, ಶುಭಾಶಯಗಳು, ಸಂತಾಪ, PM ಜೊತೆಗಿನ ಭೇಟಿ ಇತ್ಯಾದಿ ಕಾರಣಗಳನ್ನು ಇಮೇಲ್ ಅಥವಾ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.
ಎಲ್ಲಾ ಪತ್ರವನ್ನೂ ಸ್ವೀಕರಿಸುತ್ತಾರಾ?
ಪ್ರಧಾನಮಂತ್ರಿಯವರು ಬಹಳಷ್ಟು ಪತ್ರ, ಇಮೇಲ್ ಸ್ವೀಕರಿಸುವುದರಿಂದ, ಈ ವಿಧಾನವನ್ನು ಬಳಸಿಕೊಂಡು ನೀವು ನೇರವಾಗಿ ಅವರಿಂದ ಉತ್ತರವನ್ನು ಕೇಳದಿರಬಹುದು. ಆದಾಗ್ಯೂ, ನಿಮ್ಮ ಸಂದೇಶವು ಕೆಲವು ರೀತಿಯ ವಿನಂತಿಯನ್ನು ಒಳಗೊಂಡಿದ್ದರೆ, ಅಲ್ಲಿನ ಸಿಬ್ಬಂದಿ ಪ್ರತಿಕ್ರಿಯಿಸಬಹುದು.
ಪ್ರಧಾನಿ ಕಚೇರಿಗೆ ಕರೆ ಅಥವಾ ಫ್ಯಾಕ್ಸ್ ಮಾಡುವ ಸೌಲಭ್ಯ
ಇದಲ್ಲದೇ ಪ್ರಧಾನಿ ಕಚೇರಿಗೆ ನೀವು ನೇರವಾಗಿ ಫೋನ್ ಕಾಲ್ ಅಥವಾ ಕರೆ ಕೂಡ ಮಾಡಬಹುದು. 011-230114547 ಗೆ ಪ್ರಧಾನ ಮಂತ್ರಿ ಕಚೇರಿಗೆ ಕರೆ ಮಾಡಿ. ನೀವು 011-23019545 ಅಥವಾ 011-23016857 ಗೆ ಫ್ಯಾಕ್ಸ್ ಅನ್ನು ಸಹ ಕಳುಹಿಸಬಹುದು. ಪಟ್ಟಿ ಮಾಡಲಾದ ಫೋನ್ ಸಂಖ್ಯೆಗಳಲ್ಲಿನ "011" ಹೊಸ ದೆಹಲಿಯ ಪ್ರದೇಶ ಕೋಡ್ ಆಗಿದೆ; ಉಳಿದ 9-ಅಂಕಿಗಳು ಸ್ಥಳೀಯ ಫೋನ್ ಸಂಖ್ಯೆ. ಒಮ್ಮೆ ಸಂಪರ್ಕಗೊಂಡ ನಂತರ, ನೀವು ಪ್ರಧಾನಿ ಕಚೇರಿಯ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಾಗುತ್ತದೆ, ಅವರು ಸಂದೇಶವನ್ನು ತೆಗೆದುಕೊಳ್ಳಬಹುದು ಅಥವಾ ನಿಮ್ಮ ವಿನಂತಿಯೊಂದಿಗೆ ನಿಮಗೆ ಸಹಾಯ ಮಾಡಬಹುದು.
ಸೋಶಿಯಲ್ ಮೀಡಿಯಾ ಮೂಲಕವೂ ಪ್ರಧಾನಿ ಸಂಪರ್ಕ
ಇನ್ನು ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಬಹುತೇಕ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಪ್ರಧಾನಮಂತ್ರಿಗಳ ಖಾತೆಗಳಿವೆ. ಅಲ್ಲಿಯೂ ನೀವು ಅವರನ್ನು ಸಂಪರ್ಕಿಸಬಹುದು.
ಪ್ರಮುಖ ವಿಚಾರಗಳನ್ನು ಗಮನಿಸಿ
ಪ್ರಧಾನ ಮಂತ್ರಿ ಸ್ಥಾನ ಮಹತ್ವದ್ದಾಗಿದ್ದು ಪತ್ರ, ಇಮೇಲ್ ಇತ್ಯಾದಿಗಳ ಮೂಲಕ ಅವರನ್ನು ಸಂಪರ್ಕಿಸುವಾಗ ಅವರ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ಇನ್ನು ವೈಯಕ್ತಿಕ ಹಿತಾಸಕ್ತಿ, ವೈಯಕ್ತಿಕ ದ್ವೇಷ ಇತ್ಯಾದಿ ಕಾರಣಗಳಿಂದ ಪಿಎಂ ಕಚೇರಿ ಸಂಪರ್ಕಿಸಿ ಅವರ ಸಮಯ ವ್ಯರ್ಥ ಮಾಡದಿರಿ. ನಿಮ್ಮ ಎಲ್ಲಾ ಪತ್ರಕ್ಕೂ ಅವರಿಂದ ಉತ್ತರ ನಿರೀಕ್ಷಿಸುವುದು ತಪ್ಪು.
(ಮಾಹಿತಿ: ವಿವಿಧ ಮೂಲಗಳಿಂದ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ