• Home
 • »
 • News
 • »
 • explained
 • »
 • Explainer: ಗುಜರಾತ್​ನ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಕಮಾಲ್, ಹೇಗೆ? ಇಲ್ಲಿದೆ ವಿವರ

Explainer: ಗುಜರಾತ್​ನ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಕಮಾಲ್, ಹೇಗೆ? ಇಲ್ಲಿದೆ ವಿವರ

ಗುಜರಾತ್‌ನಲ್ಲಿ ಮೋದಿ ಪ್ರಚಾರ

ಗುಜರಾತ್‌ನಲ್ಲಿ ಮೋದಿ ಪ್ರಚಾರ

ಮುಸ್ಲಿಂ ಪ್ರಾಬಲ್ಯವಿರುವ ಹಲವು ಕ್ಷೇತ್ರಗಳಲ್ಲಿ ಬಹು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು ಅವರಲ್ಲಿ ಹಲವರು ಸ್ವತಂತ್ರರಾಗಿ ಸ್ಪರ್ಧಿಸಿದ್ದಾರೆ. 36 ವಿವಿಧ ಮುಸ್ಲಿಂ ಅಭ್ಯರ್ಥಿಗಳನ್ನು ಹೊಂದಿದ್ದ ಲಿಂಬಯತ್‌ನಲ್ಲಿ ಬಿಜೆಪಿಯ ಸಂಗೀತಾಬೆನ್ ರಾಜೇಂದ್ರ ಪಾಟೀಲ್ 52% ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ವಿಜಯಶಾಲಿಯಾದರು.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Ahmadabad (Ahmedabad) [Ahmedabad], India
 • Share this:

  Gujarat Elections: ಮುಸ್ಲಿಂ ಜನಸಂಖ್ಯೆಯನ್ನೊಳಗೊಂಡಿರುವ (Muslim Population) 19 ಅಸೆಂಬ್ಲಿ ಸ್ಥಾನಗಳಲ್ಲಿ 17 ಸ್ಥಾನಗಳಲ್ಲಿ ಗೆಲುವಿನ ಪತಾಕೆ ಹಾರಿಸಿರುವ ಬಿಜೆಪಿ ಗುಜರಾತ್‌ನಲ್ಲಿ (Gujarat) ಭರ್ಜರಿ ವಿಜಯ ಸಾಧಿಸುವ ಮೂಲಕ ಇನ್ನಷ್ಟು ಪ್ರಭಾವಶಾಲಿ ಪಕ್ಷವಾಗಿ ಹೊರಹೊಮ್ಮಿದೆ. AIMIM (ಅಖಿಲ ಭಾರತ ಮಜ್ಲಿಸ್‑ಇ‑ಇತ್ತೆಹಾದುಲ್ ಮುಸ್ಲಿಮೀನ್) ಆಟವಾಡಬಹುದು ಎಂದು ಹಲವರು ಭಾವಿಸಿದ್ದರೆ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. 19 ರಲ್ಲಿ 17 ಸ್ಥಾನ ಬಿಜೆಪಿ (BJP) ತೆಕ್ಕೆಗೆ ಬಂದಿದ್ದರೆ ಇನ್ನೆರಡು ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.


  ಬಿಜೆಪಿಯ ಗೆಲುವು ಪಕ್ಷದ ಸಾಮರ್ಥ್ಯದ ಪ್ರತೀಕವಾಗಿದೆ


  ಜಮಾಲ್‌ಪುರ-ಖಾಡಿಯಾ ಕ್ಷೇತ್ರದಿಂದ ಗುಜರಾತ್ ವಿಧಾನಸಭೆಗೆ ಆಯ್ಕೆಯಾಗಿರುವ ಏಕೈಕ ಮುಸ್ಲಿಂ ಅಭ್ಯರ್ಥಿ ಕಾಂಗ್ರೆಸ್‌ನ ಇಮ್ರಾನ್ ಖೆಡಾವಾಲಾ. ಇವರು ಜಮಾಲ್‌ಪುರ-ಖಾಡಿಯಾದ ಹಾಲಿ ಶಾಸಕರೂ ಹೌದು. ಸುದ್ದಿಪತ್ರಿಕೆಯ ವರದಿಯನ್ವಯ ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಆರು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರೆ, ಆಮ್ ಆದ್ಮಿ ಪಾರ್ಟಿ ಮೂವರನ್ನು ಕಣಕ್ಕಿಳಿಸಿತ್ತು.


  ಹೆಚ್ಚು ಸಂಖ್ಯೆಯ ಮುಸ್ಲಿಂ ಅಭ್ಯರ್ಥಿಗಳನ್ನು ಅಂದರೆ 11 ಜನರನ್ನು AIMIM ಹೊಂದಿತ್ತು. ಇದರ ನಡುವೆ ಸರಿಸುಮಾರು 1988 ರಿಂದ ಚುನಾವಣೆಗೆ ಬಿಜೆಪಿ ತನ್ನ ಪಕ್ಷದಿಂದ ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.


  ಬಿಜೆಪಿಗೆ ಸಂದ ಗೆಲುವು ಪಕ್ಷದ ಸಾಮರ್ಥ್ಯವನ್ನು ಬಿಂಬಿಸಿದೆ ಎಂದು ಹಿರಿಯ ರಾಜಕಾರಣಿಯೊಬ್ಬರು ನುಡಿದಿದ್ದಾರೆ. ಪಕ್ಷದ ನೀತಿ ಹಾಗೂ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಧರ್ಮದ ಹೆಸರಿನಲ್ಲಿ ತಾರತಮ್ಯ ನಡೆಸುವುದಿಲ್ಲ ಎಂದು ತಿಳಿಸಿರುವ ಅವರು ಮುಸ್ಲಿಂ ಕುಟುಂಬವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಥವಾ ಮುದ್ರಾ ಯೋಜನೆಗೆ ಅರ್ಹವಾಗಿದ್ದರೆ ಧರ್ಮದ ಆಧಾರದ ಮೇಲೆ ಅವರು ಈ ಯೋಜನೆಗಳಿಗೆ ಅರ್ಹರಲ್ಲ ಎಂದು ಹೇಳುತ್ತಾರೆಯೇ? ಹಾಗಾಗಿ ಇಲ್ಲಿ ಹೆಚ್ಚು ಮುಖ್ಯವಾದುದು ಯಾವುದು? ಸಾಂಕೇತಿಕ ನಿರೂಪಣೆಯೇ ಅಥವಾ ಸೇವೆಗಳೇ ಎಂದು ಅವರು ಪ್ರಶ್ನಿಸಿದ್ದಾರೆ.


  ಸ್ವತಂತ್ರ ಅಭ್ಯರ್ಥಿಗಳೇ ಹೆಚ್ಚಾಗಿ ಕಣಕ್ಕಿಳಿದಿದ್ದಾರೆ


  ಕ್ವಿಂಟ್ ತಿಳಿಸಿರುವಂತೆ ಮುಸ್ಲಿಂ ಪ್ರಾಬಲ್ಯವಿರುವ ಹಲವು ಕ್ಷೇತ್ರಗಳಲ್ಲಿ ಬಹು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು ಅವರಲ್ಲಿ ಹಲವರು ಸ್ವತಂತ್ರರಾಗಿ ಸ್ಪರ್ಧಿಸಿದ್ದಾರೆ. 36 ವಿವಿಧ ಮುಸ್ಲಿಂ ಅಭ್ಯರ್ಥಿಗಳನ್ನು ಹೊಂದಿದ್ದ ಲಿಂಬಯತ್‌ನಲ್ಲಿ ಬಿಜೆಪಿಯ ಸಂಗೀತಾಬೆನ್ ರಾಜೇಂದ್ರ ಪಾಟೀಲ್ 52% ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ವಿಜಯಶಾಲಿಯಾದರು.


  ಇನ್ನು ಸುದ್ದಿಮಾಧ್ಯಮ ಎನ್‌ಡಿಟಿವಿ ತಿಳಿಸಿರುವಂತೆ ಕಾಂಗ್ರೆಸ್ 10 ವರ್ಷಗಳಿಂದ ತನ್ನ ಕಪಿಮುಷ್ಟಿಯಲ್ಲಿರಿಸಿಕೊಂಡಿದ್ದ ಮುಸ್ಲಿಂ ಪ್ರಾಬಲ್ಯವಿರುವ ದರಿಯಾಪುರದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಔಟ್‌ಲುಕ್ ಪ್ರಕಾರ, ಸೂರತ್ ಪೂರ್ವ, ಬಾಪುಂಗರ್ ಮತ್ತು ಭುಜ್‌ನಲ್ಲಿಯೂ ಬಿಜೆಪಿ ಗೆದ್ದಿದೆ.


  ಸೂರತ್ ಪೂರ್ವದಲ್ಲಿ ಮುಸ್ಲಿಮರು 26.4 % ರಷ್ಟಿದ್ದು, ಬಿಜೆಪಿಯ ಹಾಲಿ ಶಾಸಕ ಅರವಿಂದ್ ಶಾಂತಿಲಾಲ್ ರಾಣಾ ಮೇಲುಗೈ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ವಾಸಿಂ ಇಕ್ಬಾಲ್‌ಭಾಯ್ ಕೊಖ್ಕರ್ ಅವರನ್ನು ಕಣಕ್ಕಿಳಿಸಿದ AIMIM ಬಹಳ ಕಡಿಮೆ ಪ್ರಭಾವ ಬೀರಿದೆ. ಬಾಪುಂಗರ್‌ನಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್‌ಸಿಂಹ ರಾಜೇಂದ್ರಸಿನ್ಹ ಕುಶ್ವಾಹಾ ಈಗಾಗಲೇ 51%ದಷ್ಟು ಮತಗಳನ್ನು ಗಳಿಸಿದ್ದಾರೆ. 15% ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಭುಜ್‌ನಲ್ಲಿ ಬಿಜೆಪಿಯ ಕೆಹಸುಭಾಯಿ ಶಿವದಾಸ್ ಪಟೇಲ್ ಭಾರೀ ಅಂತರದಿಂದ ವಿಜಯ ಕಹಳೆ ಮೊಳಗಿಸಿದ್ದಾರೆ ಎಂದು ಔಟ್‌ಲುಕ್ ತಿಳಿಸಿದೆ.


  ಬಿಜೆಪಿ ಅಭ್ಯರ್ಥಿ ಚಂದ್ರಸಿನ್ಹ ರೌಲ್ಜಿ ಗೋಧ್ರಾದಿಂದ ಗೆದ್ದಿದ್ದಾರೆ. ಬಿಲ್ಕಿಸ್ ಬಾನೋ ಅತ್ಯಚಾರಿಗಳನ್ನು ಚಂದ್ರಸಿನ್ಹ ಸಂಸ್ಕಾರಿ ಬ್ರಾಹ್ಮಣರು ಎಂದು ಬಣ್ಣಿಸಿದ್ದರು ಎಂಬುದು ಇಲ್ಲಿ ಗಮನಾರ್ಹವಾದುದು.


  ಬಿಲ್ಕಿಸ್ ಬಾನೊ ಪ್ರಕರಣ; ರಾಹುಲ್ ಗಾಂಧಿ ಟ್ವೀಟ್


  2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಗರ್ಭಿಣಿ ಬಿಲ್ಕಿಸ್ ಬಾನೊ ಮೇಲೆ ನಡೆಸಿದ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎಲ್ಲಾ 11 ಜನರನ್ನು ಗುಜರಾತ್‌ನ ಬಿಜೆಪಿ ಸರ್ಕಾರವು ತನ್ನ ಉಪಶಮನ ನೀತಿಯ (ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ ಅಧಿಕಾರ ರಾಜ್ಯದ ಗವರ್ನರ್ ಉಸ್ತುವಾರಿಯಲ್ಲಿ ಈ ಅಧಿಕಾರ ಚಲಾಯಿಸಬಹುದು) ಅಡಿಯಲ್ಲಿ ಬಿಡುಗಡೆ ಮಾಡಿದೆ. 15 ವರ್ಷಗಳ ಬಳಿಕ ಗುಜರಾತ್‌ನ ಗೋಧ್ರಾ ಉಪ ಕಾರಾಗೃಹದಿಂದ ಹೊರಬಂದ ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳನ್ನು ಸಿಹಿತಿಂಡಿ ಮತ್ತು ಹಾರಗಳ ಮೂಲಕ ಸ್ವಾಗತಿಸಲಾಯಿತು.


  ಆಗಸ್ಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳ ಬಿಡುಗಡೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು ಮತ್ತು ಇಡೀ ದೇಶವು ಅವರ ಮಾತು ಮತ್ತು ಕಾರ್ಯಗಳ ನಡುವಿನ ವ್ಯತ್ಯಾಸವನ್ನು ಗಮನಿಸುತ್ತಿದೆ ಎಂದು ಟೀಕಾಪ್ರಹಾರ ಮಾಡಿದ್ದರು.


  ಇಂತಹ ನಿರ್ಧಾರಗಳ ಮೂಲಕ ದೇಶದ ಮಹಿಳೆಯರಿಗೆ ನಿಮ್ಮ ಸರಕಾರ ಯಾವ ರೀತಿಯ ಸಂದೇಶವನ್ನು ನೀಡುತ್ತಿದೆ ಎಂದು ಪ್ರಶ್ನಿಸಿದ್ದರು. ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರಗೈದು ಆಕೆಯ ಮೂರು ವರ್ಷದ ಮಗಳನ್ನು ಹತ್ಯಗೈದ ದುರುಳರನ್ನು ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.


  ನಾರಿ ಶಕ್ತಿಯ ಬಗ್ಗೆ ಉನ್ನತವಾಗಿ ಮಾತನಾಡುವವರು ದೇಶದ ಮಹಿಳೆಯರಿಗೆ ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದಾರೆ ಹಾಗೂ ಯಾವ ರೀತಿಯ ಭದ್ರತೆಯನ್ನೊದಗಿಸುತ್ತಿದ್ದಾರೆ ಎಂದು ರಾಹುಲ್ ಪ್ರಶ್ನಿಸಿದ್ದರು. ಪ್ರಧಾನಿ ಮೋದಿ ಜೀ, ಸಂಪೂರ್ಣ ದೇಶ ನೀವು ಆಡುವ ಮಾತು ಹಾಗೂ ಮಾಡುತ್ತಿರುವ ಕೃತ್ಯವನ್ನು ಗಮನಿಸುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.


  ಅಮಿತ್ ಷಾ ವಿವಾದಾತ್ಮಕ ಹೇಳಿಕೆ; ಓವೈಸಿ ಟೀಕಾ ಪ್ರಹಾರ


  ಬಿಲ್ಕಿಸ್ ಬಾನೋ ಪ್ರಕರಣದಲ್ಲಿ 11 ಅಪರಾಧಿಗಳ ಬಿಡುಗಡೆ ಹಾಗೂ ಗೋಧ್ರಾದಿಂದ ಆರು ಬಾರಿ ಶಾಸಕರಾಗಿದ್ದವರನ್ನು ಕುರಿತು ಕಾಂಗ್ರೆಸ್ ಟೀಕೆಗಳನ್ನು ಮಾಡಿದ್ದರೂ ಫಲ ನೀಡಲಿಲ್ಲ. ಅಮಿತ್ ಷಾ ನವೆಂಬರ್‌ನಲ್ಲಿ 2002 ರ ಗುಜರಾತ್ ಗಲಭೆಕೋರರಿಗೆ ಪಾಠ ಕಲಿಸುವ ಮೂಲಕ ರಾಜ್ಯದಲ್ಲಿ ಶಾಂತಿಯನ್ನು ಖಚಿತಪಡಿಸಿದರು ಎಂಬ ವಿವಾದಾತ್ಮಕ ಹೇಳಿಕೆ ನೀಡಿದರು.


  ಈ ಹೇಳಿಕೆ ನೀಡಿದ ಮರುದಿನ AIMIM ಯ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶಾ, ಅಮಿತ್ ಷಾ ಹೇಳಿಕೆಯನ್ನು ಖಂಡಿಸಿದ್ದು ಅಧಿಕಾರ ಬಲ ಎಂದಿಗೂ ಶಾಶ್ವತವಾಗಿ ಒಬ್ಬರೊಂದಿಗೆ ಮಾತ್ರವೇ ಉಳಿಯುವುದಿಲ್ಲ ಹಾಗೂ ಅವರ ಹೇಳಿರುವ ಪಾಠಗಳು ಅಪರಾಧಿಗಳನ್ನು ಮುಕ್ತವಾಗಿ ಓಡಾಡಿಕೊಂಡಿರಲು ನೀಡಿರುವ ಅವಕಾಶವಾಗಿದೆ ಎಂದು ಜರಿದಿದ್ದರು.


  ಅಧಿಕಾರ ಶಾಶ್ವತವಲ್ಲ


  ಅಧಿಕಾರ ಬಲ ಎಂಬುದು ಯಾರ ಬಳಿಯೂ ಶಾಶ್ವತವಾಗಿ ಉಳಿಯುವುದಿಲ್ಲ ಮುಂದೊಂದು ದಿನ ಇದೇ ಅಧಿಕಾರವನ್ನು ಎಲ್ಲರಿಂದಲೂ ಕಿತ್ತುಕೊಳ್ಳಲಾಗುವುದು ಎಂದು ತಿಳಿಸಿದ ಓವೈಸಿ, ಅಮಿತ್ ಷಾ ಅಧಿಕಾರದ ಅಮಲಿನಲ್ಲಿ ತಕ್ಕ ಪಾಠ ಕಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ.


  ಅವರು ಯಾವ ಪಾಠವನ್ನು ಕಲಿಸಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಕೇಂದ್ರ ಗೃಹಸಚಿವರನ್ನು ತರಾಟೆಗೆ ತೆಗೆದುಕೊಂಡರು ಹಾಗೂ ತಮ್ಮ ಹೇಳಿಕೆಗಳಿಂದ ಸಂಪೂರ್ಣ ದೇಶದಲ್ಲಿ ಕುಖ್ಯಾತಿ ಗಳಿಸಿದ್ದೀರಿ ಎಂದು ಟೀಕಿಸಿದ್ದರು. ದೆಹಲಿಯಲ್ಲಿ ನಡೆದಿರುವ ಕೋಮುಗಲಭೆಗಳಿಗೆ ಯಾವ ಪಾಠ ಕಲಿಸಿರುವಿರಿ ಎಂದು ಓವೈಸಿ ಅಮಿತ್ ಷಾ ಅವರಿಗೆ ಪ್ರಶ್ನೆ ಹಾಕಿದ್ದಾರೆ.


  ಮುಸ್ಲಿಂ ಮತಗಳಿಗೆ ಕತ್ತರಿ ಹಾಕುತ್ತಿರುವ ಬಿಜೆಪಿ


  ದಿ ಕ್ವಿಂಟ್ ಪ್ರಕಾರ, ಎಐಎಂಐಎಂ ಅಭ್ಯರ್ಥಿಗಳು ಯಾವುದೇ ಸ್ಥಾನಗಳಲ್ಲಿ ವ್ಯತ್ಯಾಸವನ್ನುಂಟು ಮಾಡಲು ಸಾಧ್ಯವಾಗಲಿಲ್ಲ ಹಾಗೂ ಗೆಲುವಿನ ಅಂತರಕ್ಕಿಂತ ಕಡಿಮೆ ಮತಗಳನ್ನು ಪಡೆದರು ಹೀಗಾಗಿ ಬಿಜೆಪಿಯು ಮುಸ್ಲಿಂ ಮತಗಳಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಲಾಗಿದೆ.


  ಭುಜ್‌ನಲ್ಲಿ ಪಕ್ಷ ಅತ್ಯುತ್ತಮ ಪ್ರದರ್ಶನ ನೀಡಿದರೂ ಬಿಜೆಪಿಯ ಗೆಲುವಿನ ಅಂತರಕ್ಕಿಂತ ಕಡಿಮೆ ಮತ ಗಳಿಸಿತ್ತು. ಹಿಂದೂಸ್ತಾನ್ ಟೈಮ್ಸ್ ತಿಳಿಸಿರುವಂತೆ, ಗುಜರಾತ್‌ನಲ್ಲಿ AIMIM ಪಕ್ಷವನ್ನು ಸಂದೇಹದಿಂದ ನೋಡಲಾಗುತ್ತಿದ್ದು, ಪಕ್ಷವನ್ನು ಬಿಜೆಪಿಯ ತಂಡ ಎಂದೇ ಉಲ್ಲೇಖಿಸಲಾಗುತ್ತದೆ. ಎಐಎಂಐಎಂ ಪಕ್ಷವು ಮುಸ್ಲಿಂ ಸಮುದಾಯದ ಮತಗಳನ್ನು ಪಡೆಯಲು ಸ್ಪರ್ಧಿಸುವುದಿಲ್ಲ, ಆದರೆ ಮುಸ್ಲಿಮೇತರರ ಮತಗಳನ್ನು ಒಟ್ಟುಗೂಡಿಸಲು ಸ್ಪರ್ಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ.


  1946 ರ ಚುನಾವಣೆಯನ್ನು (ಪ್ರಾಂತೀಯ ಚುನಾವಣೆ) ಹೊರತುಪಡಿಸಿ, ಮುಸ್ಲಿಂ ಲೀಗ್‌ಗೆ ಅಥವಾ ಕೆಲವೊಂದು ಸಂದರ್ಭಗಳಲ್ಲಿ ಮುಸ್ಲಿಂ ಪಕ್ಷಕ್ಕಾಗಿ ಅಸ್ಸಾಂ ಮತ್ತು ಕೇರಳದಲ್ಲಿ ಮುಸ್ಲಿಮರು ಮತ ಚಲಾಯಿಸಿದಾಗ ಸಮುದಾಯವು ಪ್ರಧಾನವಾಗಿ ಮುಸ್ಲಿಂ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ಹೈದರಾಬಾದ್‌ನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಫ್ರೋಜ್ ಆಲಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


  ಕಾಂಗ್ರೆಸ್ ಆರೋಪ ತಳ್ಳಿಹಾಕಿದ ಬಿಜೆಪಿ


  ಸಮುದಾಯದ ಮತಗಳನ್ನು ವಿಭಜಿಸಲು ಬಿಜೆಪಿಯು ಮುಸ್ಲಿಂ ಅಭ್ಯರ್ಥಿಗಳನ್ನು ಸ್ವತಂತ್ರ ಅಭ್ಯರ್ಥಿಗಳಾಗಿ ಬೆಂಬಲಿಸುತ್ತಿದೆ ಎಂದು ಚುನಾವಣೆಗೆ ಮುನ್ನ ಕಾಂಗ್ರೆಸ್ ಆರೋಪಿಸಿದೆ.


  ನಮ್ಮ ಮತಗಳನ್ನು ಕಬಳಿಸಲು ಬಿಜೆಪಿಯು ಮುಸ್ಲಿಂ ಸ್ವತಂತ್ರ ಅಭ್ಯರ್ಥಿಗಳನ್ನು ಪ್ರಾಯೋಜಿಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೋಪಾಲ್ ಪಾಟೀಲ್ ತಿಳಿಸಿದ್ದು, 2012ರಲ್ಲಿ ಸ್ಪರ್ಧೆ ಕಡಿಮೆ ಇದ್ದಾಗ ಕೆಲವೇ ಕೆಲವು ಅಲ್ಪಸಂಖ್ಯಾತ ಅಭ್ಯರ್ಥಿಗಳಿದ್ದರು.


  ಈ ಬಾರಿ ಎಎಪಿ ಪ್ರವೇಶದಿಂದ ಆತಂಕಗೊಂಡಿರುವ ಬಿಜೆಪಿ ಇಂತಹ ರಾಜಕೀಯ ಕುತಂತ್ರಗಳಿಗೆ ಕೈ ಹಾಕುತ್ತಿದೆ. ಎಲ್ಲಾ ಮುಸ್ಲಿಂ ಅಭ್ಯರ್ಥಿಗಳು ಮೇಥಿ ಖಾದಿ ಪ್ರದೇಶದವರು ಎಂದು ಆರೋಪಿಸಿದ್ದರು. ಮಾಜಿ ಶಾಸಕ ಮತ್ತು ಜಮಾಲ್‌ಪುರದ ಬಿಜೆಪಿ ಅಭ್ಯರ್ಥಿ ಭೂಷಣ್ ಅಶೋಕ್ ಭಟ್ ಕಾಂಗ್ರೆಸ್‌ನ ಇಂತಹ ಆರೋಪಗಳನ್ನು ತಳ್ಳಿಹಾಕಿದ್ದಾರೆ.

  Published by:Precilla Olivia Dias
  First published: