ಬಾಹುಬಲಿಯ (Bahubali) ಎರಡು ಭಾಗಗಳ ಚಿತ್ರಗಳಿಂದ ದೇಶದೆಲ್ಲೆಡೆ ಭಾರಿ ಜನಪ್ರಿಯ ಪಡೆದ ನಿರ್ದೇಶಕ ರಾಜಮೌಳಿ (Rajamouli) ಮತ್ತೊಂದು ಅದ್ಧೂರಿ ಹಿಟ್ ಚಿತ್ರವನ್ನು ನೀಡಿದ್ದಾರೆ. ಆರ್‌ಆರ್‌ಆರ್ (RRR) ಎಲ್ಲೆಡೆ ದಾಖಲೆ ಮಾಡುತ್ತಲೇ, ಬಾಕ್ಸ್ ಆಫೀಸ್‌ನಲ್ಲಿ (Box Office) ಧೂಳೆಬ್ಬಿಸುತ್ತಲೇ ಮುಂದೆ ಸಾಗುತ್ತಿದೆ. ಹಲವು ದಾಖಲೆಗಳನ್ನು (Records) ಬ್ರೇಕ್ (Break) ಮಾಡಿದೆ. ಅಲ್ಲೂರಿ ಸೀತಾರಾಮರಾಜು ಆಗಿ ರಾಮ್ ಚರಣ್ (Ram Charan) ಹಾಗೂ ಕೋಮರಂ ಭೀಮನಾಗಿ ಜ್ಯೂನಿಯರ್ ಎನ್‌ಟಿಆರ್ (Junior NTR) ಅಬ್ಬರಿಸಿದ್ದಾರೆ. RRR ಬಹುಶಃ ಕೆಲವೇ ಕೆಲವು ನಿರ್ದೇಶಕರು ಕನಸು ಕಾಣುವಂತ ಚಿತ್ರ. ಇದು ಬರೀ ಚಿತ್ರವಲ್ಲ, ಬದಲಾಗಿ ಸಿನಿಮೀಯ ಉತ್ಸವ. ಈ ಚಿತ್ರಕತೆ ತನ್ನ ವ್ಯಾಪ್ತಿಯಲ್ಲಿ ಮಹಾಕಾವ್ಯದಂತಿದ್ದು, ಮತ್ತು ಈ ಚಿತ್ರಕ್ಕೆ ನೀಡಿರುವ ಟ್ರೀಟ್‌ಮೆಂಟ್ ಸಹ ಹಾಗೇ ಇದೆ. ಇನ್ನು, ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಏನು ಕಡಿಮೆ ಅಂತೀರಾ..? ಹಾಗಿದ್ರೆ ಈ ಅದ್ಧೂರಿ ಚಿತ್ರದ ಭಾಗವಾಗಿರುವ ಚಿತ್ರದ ಮೂಲ ಯಾವುದು ಗೊತ್ತಾ…? ಬನ್ನಿ, ಈ ಲೇಖನದಲ್ಲಿ ಈ ಬಗ್ಗೆ ತಿಳಿದುಕೊಳ್ಳೋಣ.
600 ಕೋಟಿಗೂ ಹೆಚ್ಚು ಬಾಚಿಕೊಂಡ ಚಿತ್ರ
ಹೌದು, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಎಸ್.ಎಸ್.ರಾಜಮೌಳಿ ಅವರ ನಟನೆಯ ಆರ್‌ಆರ್‌ಆರ್ ಬಿಡುಗಡೆಯಾದ ಕೇವಲ ಒಂದು ವಾರದೊಳಗೆ 600 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಬಾಚಿಕೊಂಡಿದೆ.
ಸ್ವಾತಂತ್ರ್ಯ ಪೂರ್ವದ ಕಥೆ ಹೇಳಿದ್ದ ರಾಜಮೌಳಿ
ಈ ರಾಜಮೌಳಿ ಎಂಬ ಸಿನಿಮಾ ಮಾಂತ್ರಿಕನ ಬಗ್ಗೆ ನಿಮಗೆ ಗೊತ್ತೇ ಇದೆ. ಒಂದು ನೊಣವನ್ನಾದರೂ ಇಟ್ಟುಕೊಂಡು ಅದ್ಭುತ ಸಿನಿಮಾ ಮಾಡಬಹುದು ಅಂತ ಈಗಾಗಲೇ ಅವರು ನಿರೂಪಿಸಿದ್ದಾರೆ. ಬಾಹುಬಲಿ ಹಾಗೂ ಬಾಹುಬಲಿ 2ನಂತಹ ವೈಭವಯುತ ಸಿನಿಮಾದಲ್ಲಿ ಅದ್ಭುತ ಕಥೆ ಹೇಳಿದ್ದ ರಾಜಮೌಳಿ, ಈ ಬಾರಿ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆ ಹೇಳಿದ್ದರು.
ಸೀತಾರಾಮ ರಾಜು, ಕೋಮರಂ ಭೀಮನ ಕಥೆ
ಇಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜುವಾಗಿ ನಟಿಸಿದ್ದರೆ, ಜ್ಯೂ. ಎನ್‌ಟಿಆರ್ ಕೊಮರಮ್ ಭೀಮನಾಗಿ ಅಭಿನಯಿಸಿದ್ದಾರೆ. ಬ್ರಿಟೀಷ್ ಆಡಳಿತದಲ್ಲಿ ಪೊಲೀಸ್ ಆಗಿದ್ದ ಸೀತಾರಾಮ ರಾಜುಗೆ ದೊಡ್ಡ ಹುದ್ದೆಗೆ ಏರುವ ಆಸೆ. ಆತ್ತ ಕಾಡಿನಲ್ಲಿ ಬೆಳೆಯುವ ಕೊಮರಮ್ ಭೀಮನಿಗೆ ತನ್ನ ಕಾಡು, ತನ್ನ ಜನರೇ ಪ್ರಪಂಚ. ಹೀಗೆ ಭೀಮನ ಗುಂಪಿನ ಹುಡುಗಿಯೊಬ್ಬಳನ್ನು ಬ್ರಿಟಿಷರು ಕರೆದೊಯ್ಯುತ್ತಾರೆ. ಆಕೆಯನ್ನು ಹುಡುಕಿಕೊಂಡು ಭೀಮ್ ಕಾಡಿನಿಂದ ಆಚೆಗೆ ಬರುತ್ತಾನೆ. ಅಲ್ಲೂರಿ ಸೀತಾರಾಮ ರಾಜುಗೆ ಎದುರಾಗುತ್ತಾನೆ. ಅಲ್ಲಿಂದ ಮುಂದೆ ಕಥೆ ಮತ್ತೊಂದು ಹಂತ ತಲುಪುತ್ತದೆ.
ಇದನ್ನೂ ಓದಿ: ಇಷ್ಟವಿಲ್ಲದಿದ್ದರೂ 'RRR' ಸಿನಿಮಾ ಡೈರೆಕ್ಷನ್ ಮಾಡಿದ್ರಾ ರಾಜಮೌಳಿ! ಖ್ಯಾತ ನಿರ್ದೇಶಕನ ಬಗ್ಗೆ ಹೀಗೇಕೆ ಹೇಳಿದ್ರು ಈ ನಟ?
ಬಾಹುಬಲಿಯಲ್ಲಿ ರಾಜಮನೆತನದ ಕಥೆ ಹೇಳಿದ್ದ ರಾಜಮೌಳಿ, ಇಲ್ಲಿ ಸ್ವಾತಂತ್ರ್ಯ ಹೋರಾಟದ ಕಥೆ ಹೇಳಿದ್ದಾರೆ. ಸಿನಿಮಾ ನೋಡುತ್ತ ನೋಡುತ್ತ ಇದು ಸ್ವಾತಂತ್ರ್ಯ ಪೂರ್ವದಲ್ಲಿ, ದೇಶದ ಯಾವುದೋ ಭಾಗದಲ್ಲಿ ನಡೆದ ಕಥೆ ಅಂತ ಅನಿಸಿದರೆ ಅಚ್ಚರಿಯಿಲ್ಲ. ಇದು ಚಿತ್ರದ ಕಥೆಯಾಗಿತ್ತು.
ಚಿತ್ರದ ಮೂಲ ಯಾವುದು..?
1920 ರ ದಶಕದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಂ ಭೀಮ್ ಅವರ ಜೀವನದ ಕತೆಯನ್ನು ಕಾಲ್ಪನಿಕವಾಗಿ RRR ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ ಪದೇ ಪದೇ ಒತ್ತಿ ಹೇಳಿದ್ದಾರೆ. ಈ ಕ್ರಾಂತಿಕಾರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎಂದು ಸಹ ನಿರ್ದೇಶಕರು ವಿವಿಧ ಸಂದರ್ಶನಗಳಲ್ಲಿ ಹೇಳಿದ್ದಾರೆ ಮತ್ತು ಆ ಕೊರತೆಯನ್ನು ನೀಗಿಸಲು RRR ಪ್ರಯತ್ನಗಳನ್ನು ಮಾಡಿದೆ. ಈ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಚಿತ್ರದ ಮೂಲಕ ಗೌರವಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
RRR ಸ್ಫೂರ್ತಿ ಪಡೆದ ಸ್ವಾತಂತ್ರ್ಯ ಹೋರಾಟಗಾರರ ವಿವರ
ಒಂದೊಮ್ಮೆ ನೀವು RRR ಚಿತ್ರದ ಬಗ್ಗೆ ಆಸಕ್ತಿ ಹೊಂದಿದ್ದು, ಇನ್ನೂ ನೋಡಿಲ್ಲವಾದರೆ, ಮೊದಲು ಚಿತ್ರವನ್ನು ನೋಡಿ. ಇನ್ನು, ಈ ಬ್ಲಾಕ್‌ಬಸ್ಟರ್ ಹಿಟ್ ಚಿತ್ರವನ್ನು ನೋಡಿದ ನಂತರ, ನೀವು ಆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು ಅನಿಸಿದರೆ, ಇಲ್ಲಿದೆ ವಿವರ..
ಬ್ರಿಟಿೀಷರ ವಿರುದ್ಧ ದಂಗೆಯೆದ್ದಿದ್ದ ವೀರರು
1882 ರ ಮದ್ರಾಸ್ ಅರಣ್ಯ ಕಾಯಿದೆಯನ್ನು ಹೇರಿದ್ದಕ್ಕಾಗಿ ಬ್ರಿಟಿಷ್ ರಾಜ್ ವಿರುದ್ಧ ಭಾರತೀಯ ಕ್ರಾಂತಿಕಾರಿ ಅಲ್ಲೂರಿ ಸೀತಾರಾಮ್ ರಾಜು ಅವರು 1922 ರಲ್ಲಿ ರಾಂಪಾ ದಂಗೆಯನ್ನು ನಡೆಸಿದರು.
ಬುಡಕಟ್ಟು ಜನಾಂಗದವರ ಸ್ವಂತ ಮನೆಗಳಲ್ಲಿ ಮತ್ತು ಅವರ ಪವಿತ್ರ ಅರಣ್ಯಗಳಲ್ಲಿ ಮುಕ್ತ ಸಂಚಾರವನ್ನು ನಿರ್ಬಂಧಿಸಿದ್ದಕ್ಕಾಗಿ ಈ ರಾಕ್ಷಸಿ ಕಾಯ್ದೆಯ ವಿರುದ್ಧ ತೀವ್ರವಾಗಿ ಟೀಕೆ ಕೇಳಿಬಂದಿತು. ಇದು ಮೂಲಭೂತವಾಗಿ ಬುಡಕಟ್ಟು ಜನಾಂಗದವರನ್ನು ಅವರ ಸ್ವಂತ ಭೂಮಿಯಲ್ಲಿ ಕೈದಿಗಳನ್ನಾಗಿ ಮಾಡಿತು.
ಹಿಂಸಾತ್ಮಕ ರೂಪ ಪಡೆದಿದ್ದ ಪ್ರತಿಭಟನೆ
ಅಲ್ಲದೆ, ಈ ಸಮುದಾಯವು ತಮ್ಮ ಸಾಂಪ್ರದಾಯಿಕ ಪೋಡು ಕೃಷಿ ಪದ್ದತಿಯನ್ನು ಇನ್ನು ಮುಂದೆ ಅಭ್ಯಾಸ ಮಾಡಲು ಸಾಧ್ಯವಾಗದ ಕಾರಣ ಈ ಕಾಯ್ದೆಯು ದೊಡ್ಡ ಪರಿಣಾಮವನ್ನು ಬೀರಿತು. ಇದಕ್ಕೆ ವಿರೋಧವಾಗಿ ಅಲ್ಲೂರಿ ಸೀತಾರಾಮ್ ರಾಜು ಪ್ರತಿಭಟನೆ ಮಾಡಿದ್ದರು. ಆದರೆ, 1924 ರಲ್ಲಿ ರಾಜುವನ್ನು ಬ್ರಿಟಿಷರು ಸೆರೆಹಿಡಿದು, ಮರಕ್ಕೆ ಕಟ್ಟಿ, ಮತ್ತು ಗುಂಡಿನ ದಳದಿಂದ ಗುಂಡು ಹಾರಿಸಿದಾಗ ಈ ಸಶಸ್ತ್ರ ಹೋರಾಟವು ಹಿಂಸಾತ್ಮಕ ಅಂತ್ಯವನ್ನು ಕಂಡಿತು.
ಕಾಡಿನ ನಾಯಕನಾಗಿದ್ದ ಅಲ್ಲೂರಿ ಸೀತಾರಾಮು ರಾಜು
ಅಲ್ಲೂರಿ ಸೀತಾರಾಮ್ ರಾಜುವಿನ ಶೌರ್ಯವು ಅವರಿಗೆ ಮಾನ್ಯಂ ವೀರುಡು ಅಥವಾ 'ಕಾಡಿನ ನಾಯಕ' ಎಂಬ ಬಿರುದು ನೀಡಿತು. RRR ಚಿತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಈ ನಾಯಕನ ಪಾತ್ರದಲ್ಲಿ ಅದ್ಭುತವಾದ ನಟನೆ ಮಾಡಿದ್ದಾರೆ.
ಗೋಂಡ್ ಸಮುದಾಯಕ್ಕೆ ಹೋರಾಡಿದ್ದ ಕೋಮರಂ ಭೀಮ
ಇನ್ನೊಂದೆಡೆ, ಕೋಮರಂ ಭೀಮ್ 1901 ರಲ್ಲಿ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಜನಿಸಿದರು. ಗೋಂಡ್ ಬುಡಕಟ್ಟಿನ ಅವರು ಚಂದಾ ಮತ್ತು ಬಲ್ಲಾಳಪುರದ ದಟ್ಟವಾದ ಕಾಡುಗಳಲ್ಲಿ ಬೆಳೆದರು. ಜೈಲಿನಿಂದ ತಪ್ಪಿಸಿಕೊಂಡು ಚಹಾ ತೋಟಕ್ಕೆ ಹೋದಾಗ ಭೀಮ್‌ಗೆ ರಾಂಪಾ ದಂಗೆಯ ಪರಿಚಯವಾಯಿತು. ಈ ಎಲ್ಲಾ ಕಾರಣಕ್ಕಾಗಿ ಅವರು ಅಲ್ಲೂರಿ ಸೀತಾರಾಮ್ ರಾಜು ಅವರ ಪಡೆಗಳನ್ನು ಸೇರಿದರು ಮತ್ತು ಅವರ ಗೋಂಡ್ ಸಮುದಾಯಕ್ಕಾಗಿ ಹೋರಾಡಿದರು. ಈ ಚಿತ್ರದಲ್ಲಿ ರಾಮ್ ಚರಣ್ ಕೋಮರಂ ಭೀಮ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.
ವೀರರನ್ನು ಗೌರವಿಸಿದ ಸರ್ಕಾರ
ಆಂಧ್ರಪ್ರದೇಶ ಮತ್ತು ತೆಲಂಗಾಣದ ಅರಣ್ಯ ಮತ್ತು ಬುಡಕಟ್ಟು ಪ್ರದೇಶಗಳಾದ್ಯಂತ, ಇಂದಿಗೂ ಸಹ, ಈ ಕ್ರಾಂತಿಕಾರಿಗಳ ಗೌರವಾರ್ಥ ಜಾನಪದ ಹಾಡುಗಳನ್ನು ಹಾಡಲಾಗುತ್ತದೆ. ಬೇರೆ ಎಲ್ಲದಕ್ಕಿಂತ ತಮ್ಮ ಸಮುದಾಯದ ಹಿತಾಸಕ್ತಿ ಮತ್ತು ಕಾಡಿನ ಪಾವಿತ್ರ್ಯತೆಗೆ ಗೌರವ ನೀಡಿದ ಈ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಸರ್ಕಾರದ ಅನೇಕ ಪ್ರಮುಖ ಸಾರ್ವಜನಿಕ ಕಾರ್ಯಗಳ ಮೂಲಸೌಕರ್ಯ ಯೋಜನೆಗಳಿಗೆ ಹೆಸರಿಸಲಾಗಿದೆ.
ಇದನ್ನೂ ಓದಿ: Tollywood: ಕರ್ನಾಟಕದಲ್ಲಿ ಹೆಚ್ಚು ಗಳಿಕೆ ಮಾಡಿದ ಟಾಪ್ 5 ತೆಲುಗು ಸಿನಿಮಾಗಳಿವು..
ಈ ಕ್ರಾಂತಿಕಾರಿಗಳ ಐತಿಹಾಸಿಕವಾದ ನಿಖರವಾದ ಚಿತ್ರಣ ಎಂದು RRR ಎಂದಿಗೂ ಹೇಳಿಕೊಳ್ಳದಿದ್ದರೂ, ಈ ಚಿತ್ರ ಖಂಡಿತವಾಗಿಯೂ ಅವರ ಪರಂಪರೆಯನ್ನು ಗೌರವಿಸುವ ಉತ್ತಮ ಕೆಲಸವನ್ನು ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ