ಟರ್ಕಿ(ಫೆ.7): ಭೀಕರ ಭೂಕಂಪದಿಂದಾಗಿ(Earthquake) ಸಿರಿಯಾ(Syria) ಹಾಗೂ ಟರ್ಕಿ(Turkey) ನಲುಗಿ ಹೋಗಿವೆ. ಟರ್ಕಿಯಲ್ಲಿ ಸೋಮವಾರ ಸಂಭವಿಸಿದ ಭಾರೀ ಪ್ರಮಾಣದ ಭೂಕಂಪದಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಕಟ್ಟಡಗಳು(Buildings) ಧರೆಗುರುಳಿವೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಅನೇಕ ಜನರ ಉಸಿರು ನಿಂತುಹೋಗಿದ್ದು ಜೀವಂತ ಸಮಾಧಿಯಾಗಿದ್ದಾರೆ. ನಗರದ(City) ತುಂಬೆಲ್ಲಾ ನೋವಿನ ಸ್ವರಗಳೇ ಕೇಳುತ್ತಿವೆ.
ಆಗ್ನೇಯ ಟರ್ಕಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೂಪಂಕನದ ತೀವ್ರತೆ 7.8ರಷ್ಟಿದ್ದದ್ದು, 2ನೇ ಭೂಕಂಪವು ಮತ್ತೆ ಮಧ್ಯಾಹ್ನ ಸಂಭವಿಸಿದೆ. ಆಗ ತೀವ್ರತೆ 7.6 ರಷ್ಟು ದಾಖಲಾಗಿದೆ. ಸಂಜೆ ವೇಳೆಗೆ ಮತ್ತೊಂದು ಭೂಕಂಪನ ಉಂಟಾಗಿದ್ದು ಆಗ ಭೂಕಂಪನದ ತೀವ್ರತೆ 6.0 ರಷ್ಟಿತ್ತು ಎಂದು ತಿಳಿದುಬಂದಿದೆ. ಇದೇ ವೇಳೆ ಸಿರಿಯಾದಲ್ಲೂ ಭೂಕಂಪನ ಸಂಭವಿಸಿದ್ದು ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಟರ್ಕಿ ಮತ್ತು ಸಿರಿಯಾಗಳಲ್ಲಿ ಆದಂತಹ ಭೂಕಂಪದಿಂದ ವಿನಾಶವೇ ಉಂಟಾಗಿದೆ. ಎಲ್ಲೆಂದರಲ್ಲಿ ನೆಲಸಮವಾದ ಕಟ್ಟಡಗಳಲ್ಲಿ ಸಾವು ನೋವು ಕಾಣುತ್ತಿದೆ.
ಟರ್ಕಿಯಲ್ಲಿ ಹೆಚ್ಚು ಭೂಕಂಪ ಉಂಟಾಗುವುದರ ಹಿಂದಿನ ವೈಜ್ಞಾನಿಕ ಕಾರಣ
ಸಾಮಾನ್ಯವಾಗಿ ಟರ್ಕಿ, ಸಿರಿಯಾದಂತಹ ದೇಶಗಳಲ್ಲಿ ಉಂಟಾಗುವ ಭೂಕಂಪನಗಳ ಬಗ್ಗೆ ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಅಂದಹಾಗೆ ಟರ್ಕಿ ಹಲವಾರು ಭೂದೋಷ ಇರುವಂತಹ ರೇಖೆಗಳ (Fault lines) ಮೇಲೆ ಕುಳಿತಿದೆ. ಇದು ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ರಾಷ್ಟ್ರಗಳಲ್ಲಿ ಒಂದಾಗಿದೆ.
ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುವ ಭೂಕಂಪಗಳಿಗೆ ವೈಜ್ಞಾನಿಕ ಕಾರಣಗಳನ್ನು ನೋಡೋದಾದ್ರೆ, ಭೂಮಿಯ ಅಡಿಯಲ್ಲಿ ಹಲವಾರು ಪದರಗಳಿರುತ್ತವೆ. ಇವುಗಳನ್ನು ಟೆಕ್ಟಾನಿಕ್ ಪ್ಲೇಟುಗಳೆನ್ನುತ್ತಾರೆ.
ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ ಭೂಕಂಪಕ್ಕೆ ಸತ್ತವರ ಸಂಖ್ಯೆ 1300ಕ್ಕೆ ಏರಿಕೆ, ಭಾರತ ಸೇರಿ 45 ರಾಷ್ಟ್ರಗಳಿಂದ ಸಹಾಯಹಸ್ತ
ಹೀಗೆ ಇರುವಂಥ ಟೆಕ್ಟಾನಿಕ್ ಪ್ಲೇಟ್‌ಗಳ ಚಲನೆಯಿಂದಾಗಿ ಭೂಕಂಪಗಳು ಸಂಭವಿಸುತ್ತವೆ. ಟರ್ಕಿಯ ಹೆಚ್ಚಿನ ಭಾಗವು ಅನಾಟೋಲಿಯನ್ ಟೆಕ್ಟಾನಿಕ್ ಫಲಕದಲ್ಲಿದೆ. ಇದು ಯುರೇಷಿಯನ್ ಮತ್ತು ಆಫ್ರಿಕನ್ ಎಂಬ ಎರಡು ಪ್ರಮುಖ ಪ್ಲೇಟ್‌ಗಳ ಹಾಗೂ ಅರೇಬಿಯನ್ ಪ್ಲೇಟ್‌ಗಳ ನಡುವೆ ಇದೆ.
ಟರ್ಕಿಯ ಭೂಮಿಯ ಕೆಳಗಿರುವ ಅನಾಟೋಲಿಯನ್ ಟೆಕ್ಟಾನಿಕ್ ಪ್ಲೇಟ್ ಪ್ರದಕ್ಷಿಣಾಕಾರಕ್ಕೆ ವಿರುದ್ಧವಾಗಿ ಚಲಿಸುತ್ತಿದೆ. ಅದೇ ಸಮಯದಲ್ಲಿ ಅರೇಬಿಯನ್ ಪ್ಲೇಟ್ ಅನಾಟೋಲಿಯನ್ ಪ್ಲೇಟ್ಅನ್ನು ತಳ್ಳುತ್ತದೆ.
ಈಗ, ಅರೇಬಿಯನ್ ಪ್ಲೇಟ್ ತಿರುಗುವ ಅನಾಟೋಲಿಯನ್ ಪ್ಲೇಟ್ ಅನ್ನು ತಳ್ಳಿದಾಗ, ಅದು ಯುರೇಷಿಯನ್ ಫಲಕದೊಂದಿಗೆ ಡಿಕ್ಕಿ ಹೊಡೆಯುತ್ತದೆ. ಈ ಫಲಕಗಳ ಘರ್ಷಣೆಯು ಭೂಕಂಪಗಳನ್ನು ಉಂಟುಮಾಡುತ್ತದೆ. ಇಂಥ ನಾಲ್ಕು ಟೆಕ್ಟಾನಿಕ್ ಫಲಕಗಳು ಸೇರುವಲ್ಲಿ ಟರ್ಕಿ ನೆಲೆಗೊಂಡಿದೆ. ಆದ್ದರಿಂದಲೇ ಇಲ್ಲಿ ಅತಿ ಹೆಚ್ಚು ಭೂಕಂಪಗಳು ಸಂಭವಿಸುತ್ತವೆ. ಹಾಗಾಗಿ ಟರ್ಕಿ ಭೂಕಂಪನ ಸಕ್ರಿಯ ದೇಶಗಳಲ್ಲಿ ಒಂದಾಗಿದೆ.
ಪ್ರತಿ ಬಾರಿ ಭೂಕಂಪ ಸಂಭವಿಸಿದಾಗಲೂ ಬಹಳಷ್ಟು ಜನರು ಜೀವ ಕಳೆದುಕೊಳ್ಳುವುದರ ಜೊತೆಗೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗುತ್ತದೆ.
ಭೂಕಂಪಗಳ ತೀವ್ರತೆ ಅಳೆಯುವುದು ಹೇಗೆ ?
ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕ ಬಳಸಿ ಅಳೆಯಲಾಗುತ್ತದೆ. ಇದು ಭೂಕಂಪಗಳನ್ನು 1 ರಿಂದ 10 ರ ಪ್ರಮಾಣದಲ್ಲಿ ಅಳೆಯುತ್ತದೆ. 3 ರ ತೀವ್ರತೆಯ ಭೂಕಂಪವು ಅಷ್ಟಾಗಿ ಅನುಭವಕ್ಕೆ ಬರುವುದಿಲ್ಲ. ಆದರೆ 4ರ ತೀವ್ರತೆಯಲ್ಲಿ ಕಿಟಕಿಗಳು ಕಂಪಿಸಬಹುದು.
ಇನ್ನು 6 ರ ತೀವ್ರತೆಯ ಭೂಕಂಪವನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಇದಕ್ಕೂ ಹೆಚ್ಚಿನ ಪ್ರಮಾಣದ ಭೂಕಂಪಗಳು ಭಾರೀ ಪ್ರಮಾಣದ ಹಾನಿ ಮತ್ತು ವ್ಯಾಪಕ ವಿನಾಶವನ್ನು ಉಂಟುಮಾಡುತ್ತವೆ. ವಾಲ್ಡಿವಿಯಾ ಭೂಕಂಪದ ತೀವ್ರತೆ 9.5 ರಷ್ಟಿತ್ತು!
ಮೇ 22, 1960 ರಂದು ಸಂಭವಿಸಿದ ವಾಲ್ಡಿವಿಯಾ ಭೂಕಂಪನವು ದಾಖಲೆಯ ಅತಿದೊಡ್ಡ ಭೂಕಂಪವಾಗಿದ್ದು ಇದು 9.5 ರ ತೀವ್ರತೆಯನ್ನು ಹೊಂದಿತ್ತು.
ವಾಲ್ಡಿವಿಯಾ ನಗರಕ್ಕೆ ಸಮಾನಾಂತರವಾಗಿ ಚಿಲಿಯ ಕರಾವಳಿಯಿಂದ ಸುಮಾರು 160 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿತ್ತು. ಈ ಕಂಪನವು ಸುಮಾರು 10 ನಿಮಿಷಗಳ ಕಾಲ ನಡೆದಿದ್ದು ಇದು ಬೃಹತ್ ಸುನಾಮಿಯನ್ನು ಪ್ರಚೋದಿಸಿತು ಎನ್ನಲಾಗಿದೆ.
ಟರ್ಕಿಯಲ್ಲಿ ಭೂಕಂಪಗಳ ಇತಿಹಾಸ
7.8 ತೀವ್ರತೆಯ ಭೂಕಂಪನ
ಟರ್ಕಿಯಲ್ಲಿ ಸೋಮವಾರ ಸಂಭವಿಸಿದ ಭೂಮಿಯ ಕಂಪನ 7.8 ರಷ್ಟಿತ್ತು. ಹೀಗೆಯೇ 1939 ರಲ್ಲಿ ಟರ್ಕಿಯಲ್ಲಿ 7.8 ರ ಪ್ರಮಾಣದಲ್ಲಿ ಉಂಟಾದ ಕಂಪನದಿಂದಾಗಿ 32,700 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.
7.6 ತೀವ್ರತೆ
*ಆಗಸ್ಟ್ 17, 1999 ರಂದು, ಟರ್ಕಿಯ ಇಜ್ಮಿತ್ನಲ್ಲಿ ಭೂಕಂಪ ಸಂಭವಿಸಿತ್ತು. ಅದರಲ್ಲಿ 17,000 ಕ್ಕೂ ಹೆಚ್ಚು ಜನರು ಸಾವಿಗೀಡಾದರು.
*ಜುಲೈ 23, 1784 ರಂದು ಎರ್ಜಿಂಕನ್‌ನಲ್ಲಿ ಸಂಭವಿಸಿದ ಕಂಪನದ ಪ್ರಮಾಣ 7.6 ತೀವ್ರತೆ ಹೊಂದಿತ್ತು. ಇದರಿಂದಾಗಿ ಸುಮಾರು 5,000 ರಿಂದ 10,000 ಜನರು ಸಾವಿಗೀಡಾದರು ಎಂದು ಅಂದಾಜಿಸಲಾಗಿದೆ.
7.5 ತೀವ್ರತೆಯ ಭೂಕಂಪ
ಟರ್ಕಿಯಲ್ಲಿ ಇಲ್ಲಿಯವರೆಗೆ 7.5 ತೀವ್ರತೆ ಹೊಂದಿರುವ ಆರು ಭೂಕಂಪಗಳು ಸಂಭವಿಸಿವೆ.
*ಡಿಸೆಂಬರ್ 13, 115 CE- 2.5 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.
*ಫೆಬ್ರವರಿ 23, 1653 – ಈ ಭೂಕಂಪವು 2500 ಜನರನ್ನು ಬಲಿ ತೆಗೆದುಕೊಂಡಿತು.
*ಮೇ 7, 1930 - 2500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
*ನವೆಂಬರ್ 26, 1943 – ಸುಮಾರು 5,000 ಜನರು ಬಲಿಯಾದರು.
*ಫೆಬ್ರವರಿ 1, 1944 - ಭೂಕಂಪದಲ್ಲಿ 4,000 ಜನರು ಮೃತಪಟ್ಟಿದ್ದಾರೆ.
*ನವೆಂಬರ್ 24, 1976 – ಈ ವೇಳೆ 4,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.
7.4 ತೀವ್ರತೆ
ಈ ತೀವ್ರತೆಯ ಭೂಕಂಪನ ಟರ್ಕಿಯಲ್ಲಿ ಒಮ್ಮೆ ಮಾತ್ರ ಸಂಭವಿಸಿದೆ. ಜುಲೈ 2, 1840 ರಂದು ಉಂಟಾದ ಭೂಕಂಪವು 10 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗದುಕೊಂಡಿತ್ತು.
ಇದನ್ನೂ ಓದಿ: Turkey: ಪ್ರಬಲ ಭೂಕಂಪಕ್ಕೆ ನಡುಗಿದ ಟರ್ಕಿ, 300 ಕ್ಕೂ ಅಧಿಕ ಮಂದಿ ಬಲಿ!
7.3 ತೀವ್ರತೆಯ ಭೂಕಂಪ
*3 ಏಪ್ರಿಲ್ 1881 ರಂದು ಸಂಭವಿಸಿದ ಭೂಕಂಪದಿಂದಾಗಿ 7866 ಜನರು ಸಾವನ್ನಪ್ಪಿದ್ದರು.
*ಅಕ್ಟೋಬರ್ 10, 1883 ರಲ್ಲಿ ಉಂಟಾದ ಭೂಕಂಪದಿಂದ 120 ಜನರು ಸಾವಿಗೀಡಾದರು.
*ಆಗಸ್ಟ್ 9, 1953 ರಲ್ಲಿ ಸಂಭವಿಸಿದ ಭೂಕಂಪದಿಂದ 216 ಜನರು ಮೃತಪಟ್ಟಿದ್ದರು.
7.2 ಪ್ರಮಾಣದ ತೀವ್ರತೆ
*ಸೆಪ್ಟೆಂಬರ್ 10, 1509ರ ಭೂಕಂಪದಿಂದ 10,000 ಜನರು ಮೃತಪಟ್ಟಿದ್ದರು.
*ಏಪ್ರಿಲ್ 3, 1872ರಲ್ಲಿ ಭೂಕಂಪನಕ್ಕೆ 1800 ಜನರು ಸಾವಿಗೀಡಾದರು.
*ಮಾರ್ಚ್ 18, 1953ರಲ್ಲಿ ಸುಮಾರು 265 ಜನರು ಮೃತಪಟ್ಟರು.
*ನವೆಂಬರ್ 12, 1999ರಲ್ಲಿ 894 ಜನರು ಕೊನೆಯುಸಿರೆಳೆದರು.
*ಮಾರ್ಚ್ 28, 1970ರಲ್ಲಿ ಭೂಕಂಪದಿಂದ 1086 ಜನರು ಪ್ರಾಣ ಕಳೆದುಕೊಂಡರು.
*ಅಕ್ಟೋಬರ್ 23, 2011ರಂದು 604 ಜನರು ಸಾವಿಗೀಡಾದರು.
7.1ರ ತೀವ್ರತೆ
*ಮೇ 22, 1766 - 4,000 ಜನರು ಸಾವಿಗೀಡಾದರು.
*ಸೆಪ್ಟೆಂಬರ್ 20, 1899ರಂದು ಭೂಕಂಪನದಿಂದ 1470 ಜನರು ಮೃತಪಟ್ಟರು.
*ಏಪ್ರಿಲ್ 25, 1957ರಂದು 67 ಜನರು ಪ್ರಾಣ ಕಳೆದುಕೊಂಡರು.
*ಮೇ 26, 1957ರಲ್ಲಿ ಸಂಭವಿಸಿದ ಭೂಕಂಪದಲ್ಲಿ 52 ಜನರು ಮೃತಪಟ್ಟಿದ್ದರು.
7.0 ಪ್ರಮಾಣದ ತೀವ್ರತೆ
*ಜುಲೈ 13, 1688ರಲ್ಲಿ 10,000 ಜನರು ಭೂಕಂಪದಿಂದ ಪ್ರಾಣ ಕಳೆದುಕೊಂಡರು.
*ಜುಲೈ 10, 1894ರಲ್ಲಿ 1300 ಜನರು ಸಾವಿಗೀಡಾದರು.
*ಅಕ್ಟೋಬರ್ 6, 1964ರಲ್ಲಿ 23 ಜನರು ಸಾವನ್ನಪ್ಪಿದ್ದರು.
*ಡಿಸೆಂಬರ್ 29, 1942ರಲ್ಲಿ 3,000 ಜನರು ಮೃತಪಟ್ಟರು.
*ಅಕ್ಟೋಬರ್ 30, 2020ರಂದು ಭೂಕಂಪದಿಂದ 117 ಜನರು ಸಾವನ್ನಪ್ಪಿದರು.
ಸೋಮವಾರ ಅಂದರೆ ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪ ಕ್ರಮವಾಗಿ 7.8, 7.6, ಮತ್ತು 6.0. ತೀವ್ರತೆ ಹೊಂದಿದ್ದು ಭಾರೀ ಪ್ರಮಾಣದ ಸಾವು ನೋವು ಹಾಗೂ ನಷ್ಟಗಳಾಗಿವೆ. ಟರ್ಕಿ ಮತ್ತು ಸಿರಿಯಾದಲ್ಲಿ 2 ಸಾವಿರ ದಾಟಿರುವ ಸಾವಿನ ಸಂಖ್ಯೆ ತೀವ್ರವಾಗಿ ಏರುವ ನಿರೀಕ್ಷೆಯಿದೆ.
ಇನ್ನು, ಟರ್ಕಿಯ ಅಧ್ಯಕ್ಷ ಎರ್ದೋಗನ್ ಅವರು ಭೂಕಂಪವನ್ನು, ದೇಶವು ಶತಮಾನದಲ್ಲಿ ಕಂಡ "ಅತಿದೊಡ್ಡ ವಿಪತ್ತು" ಎಂದು ಕರೆದಿದ್ದಾರೆ. ಸಾವಿರಾರು ಜನರು ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಇನ್ನು ಸಾಗರೋಪಾದಿಯಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿವೆ.
ಭೀಕರ ಭೂಕಂಪ ಕಂಡು ಇಡೀ ಜಗತ್ತು ಶಾಕ್‌ಗೆ ಒಳಗಾಗಿದ್ದು, ಜಾಗತಿಕವಾಗಿ ಸಾಕಷ್ಟು ದೇಶಗಳು ಟರ್ಕಿ ಸಹಾಯಕ್ಕೆ ನಿಲ್ಲುವುದಾಗಿ ಹೇಳಿವೆ.
ಭೀಕರ ಭೂಕಂಪನದಿಂದಾದ ವಿನಾಶಕ್ಕೆ ಭಾರತ ಕೂಡ ಸಂತಾಪ ಸೂಚಿಸಿದ್ದು ಅಗತ್ಯ ನೆರವು ನೀಡುವುದಾಗಿ ಹೇಳಿದೆ. ಇದಕ್ಕಾಗಿ 100 ಸಿಬ್ಬಂದಿ, ವಿಶೇಷ ತರಬೇತಿ ಪಡೆದ ಶ್ವಾನದಳ, ಅಗತ್ಯ ಉಪಕರಣಗಳನ್ನೊಳಗೊಂಡ ಎರಡು ಎನ್‌ಡಿಆರ್‌ಎಫ್ ತಂಡಗಳು ಟರ್ಕಿಗೆ ತೆರಳಿವೆ ಎಂದು ಹೇಳಲಾಗಿದೆ.
ಇದರ ಜೊತೆಗೆ ತರಬೇತಿ ಪಡೆದ ವೈದ್ಯರು ಹಾಗೂ ಅರೆವೈದ್ಯರ ತಂಡವನ್ನು ಅಗತ್ಯ ಔಷಧಿಗಳೊಂದಿಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದೂ ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ