• Home
  • »
  • News
  • »
  • explained
  • »
  • Rishab Shetty: ಪ್ರಶಾಂತ್ ಶೆಟ್ಟಿ ಎಂಬ ಹುಡುಗ ರಿಷಬ್ ಶೆಟ್ಟಿ ಆಗಿದ್ದು ಹೇಗೆ? ಕುಂದಾಪುರದಿಂದ ಕಾಂತಾರದವರೆಗಿನ ಪ್ರಯಾಣ ಇಲ್ಲಿದೆ

Rishab Shetty: ಪ್ರಶಾಂತ್ ಶೆಟ್ಟಿ ಎಂಬ ಹುಡುಗ ರಿಷಬ್ ಶೆಟ್ಟಿ ಆಗಿದ್ದು ಹೇಗೆ? ಕುಂದಾಪುರದಿಂದ ಕಾಂತಾರದವರೆಗಿನ ಪ್ರಯಾಣ ಇಲ್ಲಿದೆ

ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ

'ಕಾಂತಾರ'ವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು 'ಶಿವ'ನಾಗಿ ಅಭಿನಯಿಸಿದ 'ರಿಷಬ್ ಶೆಟ್ಟಿ' ಎಂಬ ಕಲಾವಿದನಿಗೆ ತಲೆ ಬಾಗುತ್ತಿದ್ದಾರೆ. ಕಾಂತಾರದ ಸಕ್ಸಸ್ ಮೂಲಕ 'ರಿಷಬ್' ಎಂಬ ಹೊಸ ಹೆಸರು ಭಾರತೀಯ ಚಿತ್ರರಂಗದಲ್ಲಿ ಮಿನುಗುತ್ತಿದೆ! ರಿಷಬ್ ಯಾರು? ಅವರ ಹಿನ್ನೆಲೆ ಏನು? ಅವರು ಚಿತ್ರರಂಗದಲ್ಲಿ ಸವೆಸಿದ ಹಾದಿ ಹೇಗಿತ್ತು? ಕುಂದಾಪುರದಿಂದ ಕಾಂತಾರದವರೆಗೆ ಅವರ ಜರ್ನಿ ಹೇಗಿತ್ತು ಎಂಬ ಬಗ್ಗೆ ಚರ್ಚೆ ಶುರುವಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

‘ರಿಷಬ್ ಶೆಟ್ಟಿ’… ಸದ್ಯ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ಭಾರತದಲ್ಲಿ, ಅದರಲ್ಲೂ ಚಿತ್ರರಂಗದಲ್ಲಿ (Film Industry) ಗಟ್ಟಿಯಾಗಿ ಕೇಳಿ ಬರುತ್ತಿರುವ ಹೆಸರು. ರಿಷಬ್ ಶೆಟ್ಟಿ (Rishabh Shetty) ನಿರ್ದೇಶಕ, ನಿರ್ಮಾಪಕ, ಸಿನಿಮಾ ತೆರೆ ಹಿಂದಿನ ತಂತ್ರಜ್ಞನಷ್ಟೇ ಅಲ್ಲ ಅವರೊಳಗೊಬ್ಬ ‘ಹೀರೋ’ (Hero) ಇದ್ದಾನೆ ಎನ್ನುವುದು ಕನ್ನಡ ಸಿನಿ ರಸಿಕರಿಗೆ ಎಂದೋ ಗೊತ್ತಾಗಿತ್ತು. ಆದರೆ ಅವರೊಳಗೊಬ್ಬ ಅದ್ಭುತ ಕಲಾವಿದನಿದ್ದಾನೆ, ಆತ ಅಮೋಘವಾಗಿ ಅಭಿನಯಿಸಬಲ್ಲ ಎಂಬುದು ಇತ್ತೀಚಿಗಷ್ಟೇ ತೆರೆ ಕಂಡ ಅವರದ್ದೇ ನಟನೆ, ನಿರ್ದೇಶನದ ‘ಕಾಂತಾರ’ (Kantara) ಸಿನಿಮಾದಿಂದ ಪ್ರೂವ್ ಆಗಿದೆ. ಹೌದು, ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸುತ್ತಿದೆ. ಬಹು ಬಜೆಟ್‌ನ, ಜನಪ್ರಿಯ ಹೀರೋಗಳ ಸಿನಿಮಾಗಿಂತ ಜಾಸ್ತಿಯೇ ಸೌಂಡು ಮಾಡ್ತಿದೆ. ‘ಕಾಂತಾರ’ವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ‘ಶಿವ’ನಾಗಿ (Shiva) ಅಭಿನಯಿಸಿದ ರಿಷಬ್ ಶೆಟ್ಟಿ ಎಂಬ ಕಲಾವಿದನಿಗೆ ತಲೆ ಬಾಗುತ್ತಿದ್ದಾರೆ. ಕಾಂತಾರದ ಸಕ್ಸಸ್ ಮೂಲಕ ‘ರಿಷಬ್’ ಎಂಬ ಹೊಸ ಹೆಸರು ಭಾರತೀಯ ಚಿತ್ರರಂಗದಲ್ಲಿ ಮಿನುಗುತ್ತಿದೆ. ರಿಷಬ್ ಯಾರು? ಅವರ ಹಿನ್ನೆಲೆ ಏನು? ಅವರು ಚಿತ್ರರಂಗದಲ್ಲಿ ಸವೆಸಿದ ಹಾದಿ ಹೇಗಿತ್ತು? ಕುಂದಾಪುರದಿಂದ (Kundapur) ಕಾಂತಾರದವರೆಗೆ ಅವರ ಜರ್ನಿ ಹೇಗಿತ್ತು ಎಂಬ ಬಗ್ಗೆ ಚರ್ಚೆ ಶುರುವಾಗಿದೆ.


ಪ್ರಶಾಂತ್ ಎಂಬ ಕುಂದಾಪುರದ ಶೆಟ್ರ ಹುಡುಗ…


ಪ್ರಶಾಂತ್ ಶೆಟ್ಟಿ ಎಂದರೆ ನಿಮಗೆ ಖಂಡಿತಾ ಗೊತ್ತಾಗಲಿಕ್ಕಿಲ್ಲ. ಅದೇ ರಿಷಬ್ ಶೆಟ್ಟಿ ಎಂದರೆ ಥಟ್ಟನೆ ತಿಳಿಯುತ್ತದೆ. ಹೌದು, ರಿಷಬ್ ಶೆಟ್ಟಿ ಮೂಲ ಹೆಸರು ಪ್ರಶಾಂತ್ ಶೆಟ್ಟಿ. 1983ರಲ್ಲಿ ಜುಲೈ 7, ಬೆಳಗ್ಗೆ 7 ಗಂಟೆಗೆ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿದ ಪ್ರಶಾಂತ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಹಾಗೂ ರತ್ನಾವತಿ ಶೆಟ್ಟಿ ಎಂಬ ಮಧ್ಯಮ ವರ್ಗದ ದಂಪತಿಯ ಮಕ್ಕಳಲ್ಲಿ ಕೊನೆಯವರು.


5ನೇ ಕ್ಲಾಸ್‌ನಲ್ಲಿ ಫೇಲ್ ಆದರೂ ತಿಳಿಯದ ಮುಗ್ಧತೆ!


ಪ್ರಶಾಂತ್ 5ನೇ ತರಗತಿಯಲ್ಲಿ ಫೇಲ್ ಆಗಿದ್ದರಂತೆ. ಆದರೂ ಅದರ ಬಗ್ಗೆ ತಿಳಿಯದೇ ನಾನು ಪಾಸ್ ಆಗಿದ್ದೀನಿ ಅಂತ ಸ್ನೇಹಿತರಿಗೆ, ಮನೆಯವರಿಗೆ ಎಲ್ಲ ಚಾಕ್ಲೇಟ್ ಕೊಟ್ಟು ಸಂತಸ ಪಟ್ಟಿದ್ದರಂತೆ. ಬೇಸಿಗೆ ರಜೆ ಕಳೆದು, ಮುಂದಿನ ವರ್ಷದ ಅಡ್ಮಿಶನ್‌ ವೇಳೆ ಪುನಃ 5ನೇ ಕ್ಲಾಸ್‌ಗೆ ಅಡ್ಮಿಷನ್ ಮಾಡಿಸ್ಕೊಂಡಾಗಲೇ ಅವರಿಗೆ ತಾವು ಫೇಲ್ ಆಗಿರೋದು ಗೊತ್ತಾಯ್ತಂತೆ!


ಇದನ್ನೂ ಓದಿ: Kantara Movie-Dhanush: ಕಾಂತಾರ ಸಿನಿಮಾ ನೋಡಿ ಪ್ರತಿಕ್ರಿಯಿಸಿದ ನಟ ಧನುಷ್! ರಿಷಬ್ ಬಗ್ಗೆ ಏನಂದ್ರು?


ಗ್ರಾಮೀಣ ಭಾಗದಲ್ಲಿ ಬೆಳೆದ ಅಪ್ಪಟ ಪ್ರತಿಭೆ


ಪ್ರಶಾಂತ್ ಶೆಟ್ಟಿ ಬಾಲ್ಯ ಹಳ್ಳಿ ಮಕ್ಕಳಂತೆ ಸಾಮಾನ್ಯದ್ದಾಗಿದ್ದರೂ, ತುಂಟಾಟ, ಬಡತನ, ಕಂಬಳ, ಕೋಲ ಇತ್ಯಾದಿಗಳಿಂದ ವರ್ಣರಂಜಿತವಾಗಿತ್ತಂತೆ. ವರ್ಷಕ್ಕೊಮ್ಮೆ ಅಥವಾ ಹಳೆ ಅಂಗಿ, ಚೆಡ್ಡಿ ಹರಿದು ಹೋದರೆ ಮಾತ್ರ ಮತ್ತೊಂದು ಕೊಡಿಸುವ ಲೆಕ್ಕಾಚಾರದ ಜೀವನದಲ್ಲಿ ಬೆಳೆದ ಪ್ರಶಾಂತ್, ಅಡಿಕೆ ಸೋಗೆಯ ಆಟ ಆಡಿ ತಮ್ಮ ಚೆಡ್ಡಿಯ ಎರಡೂ ಕಡೆ ಕನ್ನಡದಂತ ತೂತು ಬಿದ್ದಿತ್ತು ಅಂತ ನೆನಪಿಸಿಕೊಳ್ಳುತ್ತಾರೆ.


ಬಾಲ್ಯದಲ್ಲಿ ರಿಷಬ್ ಮನಸ್ಸು ಕದ್ದಿದ್ದ ಬಾಲೆ ಯಾರು ಗೊತ್ತಾ?


ಪ್ರಶಾಂತ್ ಶೆಟ್ಟಿ ಆಗಿನ್ನೂ ನಾಲ್ಕೋ, ಐದೋ ಕ್ಲಾಸ್ ಇದ್ದಾಗ ಶಾಲೆಯ ಹುಡುಗಿ ಮೇಲೆ ಕ್ರಶ್ ಆಗಿತ್ತಂತೆ. ತಮ್ಮ ತಾಯಿ ಹೆಸರು ರತ್ನಾವತಿ, ಆ ಹುಡುಗಿ ಹೆಸರೂ ರತ್ನಾವತಿ ಅಂತ ಆಕೆ ಮೇಲೆ ಬಾಲ್ಯದಲ್ಲೇ ಪ್ರೀತಿ ಮೂಡಿತ್ತಂತೆ. ಬಾಲ್ಯದಲ್ಲಿ ಹುಟ್ಟಿದ ಪ್ರೀತಿ, ಅಲ್ಲೇ ಮುಗಿದಿದ್ದನ್ನು ರಿಷಬ್ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.


ಡಾ. ರಾಜ್‌ಕುಮಾರ್, ಉಪ್ಪಿ ಸಿನಿಮಾಗಳಿಂದ ಸ್ಫೂರ್ತಿ


ಪ್ರಶಾಂತ್‌ ಶೆಟ್ಟಿಗೆ ಬಾಲ್ಯದಿಂದಲೂ ಡಾ. ರಾಜ್‌ಕುಮಾರ್ ಎಂದರೆ ಪ್ರೀತಿ, ಅಭಿಮಾನವಂತೆ. ಅವರ ಸಿನಿಮಾಗಳನ್ನು ನೋಡುತ್ತಲೇ ಬೆಳೆದವರಂತೆ. ಇನ್ನು ಕುಂದಾಪುರ ಮೂಲದವರೇ ಆಗಿರುವ ರಿಯಲ್ ಸ್ಟಾರ್ ಉಪೇಂದ್ರ ಅಂದ್ರೆ ಅಚ್ಚುಮೆಚ್ಚಂತೆ. ನಮ್ಮ ಊರಿನ ಜನ ಬೆಂಗಳೂರಿಗೆ ಹೋಗಿ ಸಾಧನೆ ಮಾಡಿದ್ದಾರೆ, ಅವರಂತೆ ನಾವೂ ಸಿನಿಮಾದಲ್ಲಿ ಏನಾದರೂ ಸಾಧಿಸಬೇಕು ಎನ್ನುವುದು ಪ್ರಶಾಂತ್ ಬಾಲ್ಯದ ಕನಸು.


ಸಿನಿಮಾ ಹುಚ್ಟು ಹಿಡಿಸಿಕೊಂಡು ಬೆಂಗಳೂರಿಗೆ ಬಂದ ಪ್ರಶಾಂತ್


ಇನ್ನು ಕಾಲೇಜ್ ದಿನಗಳಲ್ಲಿ ರಿಷಬ್ ತಮ್ಮ ಅಕ್ಕನೊಂದಿಗೆ ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆ. ವಿಲ್ಸನ್ ಗಾರ್ಡನ್ ಬಳಿ ಮನೆ ಮಾಡಿಕೊಂಡಿದ್ದರೆ, ಅವರ ಅಕ್ಕ ಕೆಆರ್‌ಪುರಂ ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಬೆಳಗ್ಗೆ ಅಕ್ಕನನ್ನು ಬೈಕ್‌ನಲ್ಲಿ ಆಫೀಸ್‌ಗೆ ಬಿಟ್ಟು, ಅಲ್ಲಿಂದ ಹೇಸರಘಟ್ಟದಲ್ಲಿರುವ ಸಿನಿಮಾ ಇನ್ಸ್‌ಸ್ಟಿಟ್ಯೂಟ್‌ಗೆ ಹೋಗಿ, ಅಲ್ಲಿ ಸಿನಿಮಾ ಕ್ಲಾಸ್ ಮುಗಿಸಿ, ಸಂಜೆ ಅಕ್ಕನನ್ನು ಮರಳಿ ಆಫೀಸ್‌ನಿಂದ ಕರೆತರುತ್ತಿದ್ದರಂತೆ. ಮನೆ ಮನೆಗೆ ವಾಟರ್ ಬಾಟಲಿ ಸಪ್ಲೈ ಮಾಡುತ್ತಿದ್ದ ಇವರು, ಮಧ್ಯ ರಾತ್ರಿವರೆಗೂ ವಾಟರ್ ಸಪ್ಲೈ ಕೆಲಸ ಮಾಡಬೇಕಿತ್ತಂತೆ!


ಅಸಿಸ್ಟಂಟ್ ಆಗಿ ಹಲವರೊಂದಿಗೆ ಕೆಲಸ


ಪ್ರಶಾಂತ್ ಶೆಟ್ಟಿ ಹೀರೆೋ ಆಗಬೇಕು ಎಂಬ ಕನಸು ಹೊತ್ತಿ ಬಂದವರು ಹಲವು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಸೈನೈಡ್, ಗಂಡ ಹೆಂಡತಿ ಸೇರಿದಂತೆ ಕೆಲಸ ಸಿನಿಮಾಗಳಲ್ಲಿ ಕ್ಲಾಪ್ ಬಾಯ್ ಆಗಿ, ಇತರೇ ಸಹಾಯಕ ಕೆಲಸಗಾರನಾಗಿ ದುಡಿದ್ದಿದ್ದಾರೆ. ಆಗೆಲ್ಲ ಸಿಕ್ಕಿದ್ದು ಊಟ, ಪುಡಿಗಾಸು ಮತ್ತು ಹಿರಿಯ ನಿರ್ದೇಶಕರಿಂದ ಬರೀ ಬೈಯ್ಗುಳವಂತೆ!


ಹೆಸರು ಬದಲಾವಣೆಗೆ ತಂದೆಯ ಸಲಹೆ


ಈ ನಡುವೆ ನಾಟಕ, ಶಾರ್ಟ್ ಮೂವಿ, ಸಿನಿಮಾಗಳಲ್ಲೆಲ್ಲ ಪ್ರಶಾಂತ್ ಶೆಟ್ಟಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಆದರೆ ಯಾವುದೂ ಕೈ ಹಿಡಿಯಲಿಲ್ಲ. ಹೀರೋ ಆಗಬೇಕು ಅಂತ ಬಂದವರು, ಅವಕಾಶಕ್ಕಾಗಿ ಅಲೆದಿದ್ದಾರೆ. ಒಂದೆರಡು ಸಿನಿಮಾಗೆ ಹೀರೋ ಅಂತ ಗೊತ್ತಾದರೂ ಮುಹೂರ್ತಕ್ಕೂ ಮುನ್ನವೇ ಪ್ರಾಜೈಕ್ಟ್ ಡ್ರಾಪ್ ಆಗುತ್ತಿತ್ತಂತೆ. ಇದರಿಂದ ನೊಂದ ಪ್ರಶಾಂತ್ ತಮ್ಮ ಅಪ್ಪನ ಸಲಹೆ ಕೇಳುತ್ತಾರೆ.


ಪ್ರಶಾಂತ್ ಶೆಟ್ಟಿಯಿಂದ ರಿಷಬ್ ಶೆಟ್ಟಿಯಾದ ಕಥೆ


ಪ್ರಶಾಂತ್ ಶೆಟ್ಟಿ ತಂದೆ ಭಾಸ್ಕರ್ ಶೆಟ್ಟಿ ಜ್ಯೋತಿಷ್ಯದಲ್ಲಿ ಸಾಕಷ್ಟು ಹೆಸರು ಮಾಡಿದ್ದರಂತೆ. ಹೀಗಾಗಿ ಸಿನಿಮಾದಲ್ಲಿ ಬೆಳೆಯಬೇಕು ಅಂತ ಹೆಸರು ಬದಲಾವಣೆ ಮಾಡಿಕೊಳ್ಳುತ್ತೇನೆ ಅಂತ ಪ್ರಶಾಂತ್ ಹೇಳಿದ್ದಾರೆ. ಈ ವೇಳೆ ರಾಜ್‌ಕುಮಾರ್, ರಜಿನಿಕಾಂತ್ ಅವರಂತೆ ಆರ್ ಅಕ್ಷರದಿಂದ ಹೆಸರು ಇಟ್ಟುಕೊಳ್ಳುವಂತೆ ತಂದೆ ಸೂಚಿಸಿದ್ದಾರೆ. ಆಗ ಹೊಳೆದಿದ್ದೆ ರಿಷಬ್ ಹೆಸರು. ಹಿಂದೆ ಮುಂದೆ ಯೋಚಿಸದ ಪ್ರಶಾಂತ್ ಶೆಟ್ಟಿ ತಮ್ಮ ಹೆಸರನ್ನು ‘ರಿಷಬ್ ಶೆಟ್ಟಿ’ ಅಂತ ಬದಲಾಯಿಸಿಕೊಳ್ಳುತ್ತಾರೆ.


ರಿಷಬ್ ಶೆಟ್ಟಿಗೆ ರಕ್ಷಿತ್ ಶೆಟ್ಟಿ ಪರಿಚಯ


ತಮ್ಮ ಹೆಸರನ್ನು ಪ್ರಶಾಂತ್ ಶೆಟ್ಟಿಯಿಂದ ರಿಷಬ್ ಶೆಟ್ಟಿ ಅಂತ ಬದಲಾಯಿಸಿಕೊಂಡು ನಿರ್ದೇಶಕ ಅರವಿಂದ್ ಕೌಶಿಕ್‌ ಅವರನ್ನು ಮೀಟ್ ಆಗ್ತಾರೆ. ಆ ವೇಳೆ ಪರಿಚಯ ಆದವರೇ ನಟ, ನಿರ್ದೇಶಕ, ಇಂದಿನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಮೊದಲು ಅವರೊಬ್ಬ ಶ್ರೀಮಂತರ ಮನೆ ಹುಡುಗ, ಆ್ಯಟಿಟ್ಯೂಡ್ ಇದೆ ಅಂತ ದೂರ ಇದ್ದ ರಿಷಬ್, ಬಳಿಕ ರಕ್ಷಿತ್ ಸಿನಿಮಾ ಹಸಿವು, ಸಿನಿಮಾ ಬಗೆಗಿವ ಅವರ ಜ್ಞಾನ, ಹಂಬಲ ನೋಡಿ ಫ್ರೆಂಡ್ ಆದರಂತೆ.


ಕಿರಿಕ್ ಪಾರ್ಟಿ ಮೂಲಕ ಗುರುತಿಸಿಕೊಂಡ ರಿಷಬ್


ರಿಷಬ್ ಶೆಟ್ಟಿ ಕೆಲವೊಂದು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ರೂ ಯಾವುದೂ ಗುರುತು ಸಿಗುವಂತದ್ದಾಗಿರಲಿಲ್ಲ. ಇದರ ನಡುವೆಯೇ 2014ರಲ್ಲಿ ರಕ್ಷಿತ್ ಶೆಟ್ಟಿ ನಟನೆ, ನಿರ್ದೇಶನದ ಉಳಿದವರು ಕಂಡಂತೆ ಸಿನಿಮಾದಲ್ಲಿ ಎಂಬ ಮುಖ್ಯ ಪಾತ್ರ ಮಾಡ್ತಾರೆ. ಅಲ್ಲಿಂದ ರಿಷಬ್‌ ಕನ್ನಡ ಸಿನಿಮಾ ರಂಗದಲ್ಲಿ ಗುರುತಿಸಲ್ಪಡುತ್ತಾರೆ.


ಕಿರಿಕ್ ಪಾರ್ಟಿ ಮೂಲಕ ಭರವಸೆ ಮೂಡಿಸಿದ ರಿಷಬ್


2016ರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಕಾಂಬಿನೇಷನ್‌ನಲ್ಲಿ ರಿಕ್ಕಿ ಎಂಬ ಸಿನಿಮಾಕ್ಕೆ ರಿಷಬ್ ಶೆಟ್ಟಿಯವರೇ ಆ್ಯಕ್ಷನ್ ಕಟ್ ಹೇಳ್ತಾರೆ. ಆದರೆ ವಿಮರ್ಷಕರಿಂದ ಉತ್ತಮ ಪ್ರಶಂಸೆ ಗಳಿಸಿದರೂ ರಿಕ್ಕಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲೇ ಇಲ್ಲ. ಅದಾದ ಬಳಿಕ ರಿಷಬ್-ರಕ್ಷಿತ್ ಕಾಂಬಿನೇಷನ್‌ನಲ್ಲಿ ಬಂದಿದ್ದೇ ಕಿರಿಕ್ ಪಾರ್ಟಿ. ರಕ್ಷಿತ್ ಒಳಗಿನ ಪ್ರತಿಭೆಯನ್ನು ಓರೆಗೆ ಹಚ್ಚಿದ ಈ ಸಿನಿಮಾದಲ್ಲಿ ಇಂದಿನ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾನ್ವಿಯಾಗಿ ಪದಾರ್ಪಣೆ ಮಾಡಿದ್ದರು. ಚಿತ್ರ ಬಾಕ್ಸ್‌ ಆಫೀಸ್‌ ಧೂಳಿ ಪಟ ಮಾಡಿದ್ದು, ರಿಷಬ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದರು.


ಹೀರೋ, ನಿರ್ದೇಶಕರಾದ ರಿಷಬ್ ಶೆಟ್ಟಿ


ಇದಾದ ಮೇಲೆ ರಿಷಬ್ ತಿರುಗಿ ನೋಡಿದ್ದೇ ಇಲ್ಲ. ಮಕ್ಕಳನ್ನು ಇಟ್ಟುಕೊಂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಬ ಸಿನಿಮಾ ಮಾಡಿ, ನ್ಯಾಷನಲ್ ಅವಾರ್ಡ್ ಪಡೆದರು. ಬೆಲ್ ಬಾಟಂ ಎಂಬ ಸಿನಿಮಾದಲ್ಲಿ ನಟಿಸಿ, ನಾಯಕನಾಗೂ ಗಟ್ಟಿಯಾಗಿ ನೆಲೆಯೂರಿದರು.


ಇದನ್ನೂ ಓದಿ: Kantara-Sapthami Gowda: ಕಾಂತಾರ ಸಿನಿಮಾಗೋಸ್ಕರ ಒಂದಲ್ಲ, ಎರಡೂ ಸೈಡ್ ಮೂಗು ಚುಚ್ಚಿಸ್ಕೊಂಡ್ರು ಸಪ್ತಮಿ


ಕಾಂತಾರದ ಮೂಲಕ ಚಿತ್ರರಂಗದಲ್ಲಿ ಸಂಚಲನ


ಇದೀಗ ಕಾಂತಾರಾ ಸಿನಿಮಾ ಮೂಲಕ ರಿಷಬ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುತ್ತಿರುವ ಕಾಂತಾರದಲ್ಲಿ ಪ್ರಶಸ್ತಿಗೆ ಅರ್ಹರು ಎಂಬಷ್ಟು ಚೆನ್ನಾಗಿ ರಿಷಬ್ ಅಭಿನಯಿಸಿದ್ದಾರೆ. ಪ್ರಶಾಂತ್ ಶೆಟ್ಟಿ ಎಂಬ ಕುಂದಾಪುರದ ಕೆರಾಡಿಯ ಹುಡುಗ ಕಾಂತಾರದ ಮೂಲಕ ದಾಖಲೆಗಳನ್ನು ಧೂಳಿಪಟ ಮಾಡುತ್ತಿದ್ದಾರೆ. ಇದು ಆರಂಭವಷ್ಟೇ, ಇನ್ನೂ ರಿಷಬ್ ಮಾಡುವುದು ಬೇಕಾದಷ್ಟಿದೆ ಎನ್ನುವುದು ಅವರನ್ನು ಬಲ್ಲವರ ಮಾತು.

Published by:Annappa Achari
First published: