• Home
  • »
  • News
  • »
  • explained
  • »
  • Paresh Mesta Death Case: ಪರೇಶ್‌ ಮೇಸ್ತ ಅವರದ್ದು ಆಕಸ್ಮಿಕ ಸಾವಾ? ಅಷ್ಟಕ್ಕೂ ಗಲಭೆ ದಿನ ನಡೆದಿದ್ದೇನು?

Paresh Mesta Death Case: ಪರೇಶ್‌ ಮೇಸ್ತ ಅವರದ್ದು ಆಕಸ್ಮಿಕ ಸಾವಾ? ಅಷ್ಟಕ್ಕೂ ಗಲಭೆ ದಿನ ನಡೆದಿದ್ದೇನು?

ಮೃತ ಪರೇಶ್ ಮೇಸ್ತ

ಮೃತ ಪರೇಶ್ ಮೇಸ್ತ

ಪರೇಶ್ ಮೇಸ್ತನ ಸಾವಿನ ದಿನ ನಿಜಕ್ಕೂ ಏನಾಯ್ತು? ಅಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಗಲಾಟೆ ಆಗಿದ್ದೇಕೆ? ಕೋರ್ಟ್‌ಗೆ ಸಿಬಿಐ ಸಲ್ಲಿಸಿದ ರಿಪೋರ್ಟ್‌ನಲ್ಲಿ ಏನಿದೆ? ಪರೇಶ್ ಮೇಸ್ತ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದೇಕೆ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…

  • Share this:

ಸದ್ಯ ರಾಜ್ಯಾದ್ಯಂತ ಪರೇಶ್ ಮೇಸ್ತ (Paresh Mesta) ಎಂಬ ಯುವಕನ ಬಗ್ಗೆ, ಆತನ ಸಾವಿನ (Death) ಬಗ್ಗೆ ಚರ್ಚೆ ನಡೆಯುತ್ತಿದೆ. 2017ರ ಡಿಸೆಂಬರ್‌ನಲ್ಲಿ ಪರೇಶ್ ಮೇಸ್ತ ಎಂಬ ಮೀನುಗಾರರ ಸಮುದಾಯದ (fishers community) ಯುವಕ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavar) ತಾಲೂಕಿನ ಬಸ್ ನಿಲ್ದಾಣದ ಮುಂದಿನ ಶೆಟ್ಟಿ ಕೆರೆ ಎಂಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆತನನ್ನು ಅನ್ಯಕೋಮಿನ ಸಮುದಾಯದವರು ಕೊಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಅದೇ ಕಾರಣಕ್ಕೆ ನಡೆದ ಗಲಾಟೆ, ಬಳಿಕ ಕೋಮು ಸಂಘರ್ಷಕ್ಕೆ (Communal conflict) ತಿರುಗಿತ್ತು. ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕಿನಲ್ಲಿ ಭಾರೀ ಪ್ರತಿಭಟನೆ, ಗಲಾಟೆಗಳು ನಡೆದಿದ್ದವು. ಬರೋಬ್ಬರಿ 4 ವರ್ಷಗಳ ಕಾಲ ತನಿಖೆ ನಡೆದು, ಇದೀಗ ಸಿಬಿಐ ಅಧಿಕಾರಿಗಳು (CBI Officers) ಕೋರ್ಟ್‌ಗೆ ಬಿ ರಿಪೋರ್ಟ್ (B Report) ಸಲ್ಲಿಸಿದ್ದಾರೆ. ಈ ವರದಿ ಈಗ ಪರೇಶ್ ಮೇಸ್ತನ ಕುಟುಂಬಸ್ಥರ (Family) ಆಕ್ರೋಶಕ್ಕೆ ಕಾರಣವಾಗಿದೆ. ಹಾಗಿದ್ರೆ ಪರೇಶ್ ಮೇಸ್ತನ ಸಾವಿನ ದಿನ ನಿಜಕ್ಕೂ ಏನಾಯ್ತು? ಅಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಗಲಾಟೆ ಆಗಿದ್ದೇಕೆ? ಕೋರ್ಟ್‌ಗೆ ಸಿಬಿಐ ಸಲ್ಲಿಸಿದ ರಿಪೋರ್ಟ್‌ನಲ್ಲಿ ಏನಿದೆ? ಪರೇಶ್ ಮೇಸ್ತ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದೇಕೆ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…


 ಪರೇಶ್ ಮೇಸ್ತ ಯಾರು?


ಪರೇಶ್ ಮೇಸ್ತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಮಲಾಕರ ಮೇಸ್ತ ಎಂಬ ಮೀನುಗಾರರ ಕುಟುಂಬದ ಯುವಕ. 21 ವರ್ಷದ ಯುವಕ ಪರೇಶ್ ಮೇಸ್ತ ಏಕಾಏಕಿ ನಾಪತ್ತೆಯಾಗಿದ್ದ.


ಏಕಾಏಕಿ ನಾಪತ್ತೆಯಾಗಿದ್ದ ಯುವಕ


2017ರ ಡಿಸೆಂಬರ್ ವೇಳೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಹೊನ್ನಾವರದ ಗುಡ್ ಲಕ್ ವೃತ್ತದಲ್ಲಿ ಕೋಮ ಗಲಭೆ ನಡೆದಿತ್ತು. ಈ ವೇಳೆ ಪಟ್ಟಣದ ತುಳುಸಿ ನಗರದ ಪರೇಶ್ ಮೇಸ್ತಾ ಎನ್ನುವ ಮೀನುಗಾರ ಯುವಕ ನಾಪತ್ತೆಯಾಗಿದ್ದ. ಎರಡು ದಿನಗಳ ನಂತರ ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪರೇಶ್ ಮೇಸ್ತಾನ ಶವ ಪತ್ತೆಯಾಗಿತ್ತು.


ಶವವಾಗಿ ಪತ್ತೆಯಾಗಿದ್ದ ಪರೇಶ್


2017ರ ಡಿಸೆಂಬರ್ 6ಕ್ಕೆ ಪರೇಶ್ ಮೇಸ್ತಾ ಏಕಾಏಕಿ ಕಾಣೆಯಾಗಿದ್ದ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರಕನ್ನಡ ಜಿಲ್ಲೆಯ ಪ್ರವಾಸ ಮುಗಿಸಿ ತೆರಳಿದ ಬಳಿಕ, ಅಂದರೆ ಡಿ.8ರಂದು ಪರೇಶ್ ಮೇಸ್ತ ಶವವಾಗಿ ಪತ್ತೆಯಾಗಿದ್ದಯ ಆತನ ದೇಹ ಹೊನ್ನಾವರ ಪಟ್ಟಣದ ಬಸ್ ನಿಲ್ದಾಣದ ಮುಂದಿರುವ ಶೆಟ್ಟಿಕೆರೆಯಲ್ಲಿ ದೊರೆತಿತ್ತು.


ಇದನ್ನೂ ಓದಿ: Paresh Mesta Death Case: ಪರೇಶ್‌ ಮೇಸ್ತ ಸಾವು ಆಕಸ್ಮಿಕ! ಕೋರ್ಟ್‌ಗೆ ಸಲ್ಲಿಸಿದ ರಿಪೋರ್ಟ್‌ನಲ್ಲಿ ಸಿಬಿಐ ಉಲ್ಲೇಖ


ಬಿಜೆಪಿ, ಹಿಂದೂ ಸಂಘಟನೆಗಳಿಂದ ಆರೋಪ


ಪರೇಶ್ ಮೇಸ್ತನದ್ದು ಕೊಲೆ ಅಂತ ಕುಟುಂಬಸ್ಥರು, ಹಾಗೂ ಬಿಜೆಪಿ, ಹಿಂದೂ ಸಂಘಟನೆಗಳು ಆರೋಪಿಸಿದ್ದವು. ಪರೇಶ್ ಮೇಸ್ತನನ್ನು ಅನ್ಯ ಕೋಮಿನ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು. ಮೇಸ್ತಾನನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು, ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಈ ಘಟನೆ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು.


ಕರಾವಳಿಯಲ್ಲಿ ಕೋಮು ಸಂಘರ್ಷ


ಪರೇಶ್ ಮೇಸ್ತನನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಬಲವಾಗಿ ಕೇಳಿಬಂತು. ಅನ್ಯ ಕೋಮಿನವರು ಪರೇಶ್ ಮೇಸ್ತಾನನ್ನ ಹೊಡೆದು ಕೊಲೆ ಮಾಡಿ ಕೆರೆಗೆ ಶವವನ್ನು ಎಸೆದಿದ್ದಾರೆಂದು ಆರೋಪಿಸಲಾಗಿತ್ತು. ಕಾಂಗ್ರೆಸ್ ಸರ್ಕಾರವೇ ಈ ಕೊಲೆಗೆ ನೇರ ಕಾರಣ ಎಂದು ಬಿಜೆಪಿಗರು ರಸ್ತೆಗೆ ಇಳಿದು ಹೋರಾಟ ನಡೆಸಿದ್ದರು. ಪರೇಶ್ ಮೇಸ್ತ ಸಾವಿನೊಂದಿಗೆ ಕರಾವಳಿ ಭಾಗದಲ್ಲಿ ಕೋಮು ದಳ್ಳುರಿ ಹೊತ್ತು ಉರಿದಿತ್ತು.


ಪೊಲೀಸರ ಮೇಲೆ ಹಲ್ಲೆ, ವಾಹನಕ್ಕೆ ಬೆಂಕಿ


ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಹಿಂದೂಪರ ಸಂಘಟನೆಗಳು ಡಿಸೆಂಬರ್‌ 11ರಂದು ಬಂದ್‌ಗೆ ಕರೆ ನೀಡಿದವು. ಕುಮಟಾದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿತ್ತು. ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಮೇಲೆ ಕಲ್ಲು ತೂರಲಾಯಿತು. ಘಟನೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡರು, ವಾಹನಗಳು ಜಖಂಗೊಂಡಿದ್ದವು.


ಐವರ ಮೇಲೆ ಕೇಸ್ ದಾಖಲು


ಹೋರಾಟ, ಪ್ರತಿಭಟನೆ, ಗಲಭೆ ಜೋರಾಗುತ್ತಿದ್ದಂತೆ ಡಿಸೆಂಬರ್12ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಮೇಲೆ ಪ್ರಕರಣ ದಾಖಲಾಗಿತ್ತು. ಗುಡ್ ಲಕ್ ಹೋಟೆಲ್ ಮಾಲೀಕ ಆಜಾದ್ ಅಣ್ಣಿಗೇರಿ, ಆಸಿಫ್ ರಫೀಕ್, ಮೊಹಮ್ಮದ್ ಫೈಜಲ್, ಇಮ್ತಿಯಾಜ್ ಘನಿ, ಸಲೀಂ ಜಿಮ್ ಮಾಲೀಕರ ಮೇಲೆ ಪ್ರಕರಣ ದಾಖಲಾಗಿತ್ತು.


ಎನ್‌ಐಎ ತನಿಖೆಗೆ ಆಗ್ರಹಿಸಿದ್ದ ಬಿಜೆಪಿ


ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿತು. ರಾಜ್ಯಪಾಲರಿಗೂ ಈ ಕುರಿತು ದೂರು  ಕೂಡ ನೀಡಲಾಯಿತು. ಆದರೆ ಅಂದಿನ ಸರ್ಕಾರ ಸಿಬಿಐಗೆ ವಹಿಸಿತ್ತು. ಪರೇಶ್ ಮೇಸ್ತ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತದೆ’ ಎಂದು ಅಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಪ್ರತಿಪಕ್ಷಗಳ ಹೋರಾಟಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿಲ್ಲ. ಮೇಸ್ತ ಪೋಷಕರ ಒತ್ತಾಯದಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದರು.


ಸಿಬಿಐ ತನಿಖೆಗೆ ಆದೇಶಿಸಿದ್ದ ರಾಜ್ಯ ಸರ್ಕಾರ


ಪರೇಶ್ ಮೇಸ್ತ ಹತ್ಯೆ ಪ್ರಕರಣ ರಾಜ್ಯಾದ್ಯಂತ ತೀವ್ರ ಆಕ್ರೋಶ ಹಾಗೂ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕೆಂದು ಅಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ತೀವ್ರ ಒತ್ತಡಕ್ಕೆ ತಲೆಬಾಗಿದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.


ಬಿ ರಿಪೋರ್ಟ್ ಸಲ್ಲಿಸಿದ ಸಿಬಿಐ


ಪರೇಶ್ ಮೇಸ್ತ ಸಾವು ಆಕಸ್ಮಿಕ ಅಂತ ಸಿಬಿಐ ಹೇಳಿದೆ. ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿರುವ ಸಿಬಿಐ ಅಧಿಕಾರಿಗಳು, ಪರೇಶ್ ಮೇಸ್ತ ಹತ್ಯೆ ನಡೆದಿಲ್ಲ, ಬದಲಾಗಿ ಆತನದ್ದು ಆಕಸ್ಮಿಕವಾಗಿ ಸಂಭವಿಸಿದ ಸಾವು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಸದ್ಯ ಸಿಬಿಐ ಸಲ್ಲಿಸಿರುವ ವರದಿಯನ್ನು ಹೊನ್ನಾವರ ಕೋರ್ಟ್‌ ಪರಿಶೀಲಿಸಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ನವೆಂಬರ್ 16ಕ್ಕೆ ಕೋರ್ಟ್ ತೀರ್ಪು ನೀಡಲಿದೆ.


ಸಿಬಿಐ ರಿಪೋರ್ಟ್‌ನಲ್ಲಿ ಏನಿದೆ?


ಪರೇಶ್ ಮೇಸ್ತಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಆರೋಪಿಗಳು ಭಾಗಿಯಾಗಿದ್ದಾರೆ ಅಂತ ತೋರಿಸುವ ಯಾವುದೇ ದೋಷಾರೋಪಣೆಯ ಪುರಾವೆಗಳು ಗೋಚರಿಸಿಲ್ಲ. ಅನೇಕ ಸಂಸ್ಥೆಗಳಿಂದ ಸಂಗ್ರಹಿಸಲಾದ ವೈದ್ಯಕೀಯ ಹಾಗೂ ಕಾನೂನು ಪುರಾವೆಗಳು ಹಾಗೂ ಸಾಕ್ಷ್ಯಗಳ ಅಭಿಪ್ರಾಯವು ಪರೇಶ್ ಮೇಸ್ತಾ ಸಾವಿನ ಕಾರಣವನ್ನು ಸ್ಪಷ್ಟವಾಗಿಸಿದೆ. ನೀರಿನಲ್ಲಿ ಮುಳುಗುವಿಕೆ ಎಂದು ಸ್ಪಷ್ಟವಾಗಿಸಿದೆ. ಅದರಂತೆ, ಅಂತಿಮ ವರದಿಯನ್ನು ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ (ಜೂನಿಯರ್ ಡಿಎನ್) ಹಾಗೂ ಜೆಎಂಎಫ್‌ಸಿ ಹೊನ್ನಾವರಕ್ಕೆ ಸಲ್ಲಿಸಿದ್ದೇವೆ ಅಂತ ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ:  Siddaramaiah: ಪರೇಶ್‌ ಮೇಸ್ತ ಕೇಸ್‌ನಲ್ಲಿ ಬಿಜೆಪಿ ವಿರುದ್ಧ ಗುಡುಗು! ನ್ಯೂಸ್ 18 ಕನ್ನಡ ವರದಿ ಟ್ವೀಟ್ ಮಾಡಿದ ಸಿದ್ದರಾಮಯ್ಯ


ಸಿಬಿಐ ವರದಿಗೆ ಪರೇಶ್ ತಂದೆ ಅಸಮಾಧಾನ


ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್ ವಿರುದ್ಧ ಪರೇಶ್ ಮೇಸ್ತಾ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪಕ್ಷದವರು ನಮ್ಮನ್ನು ಚುನಾವಣೆಗೆ ಬಳಸಿಕೊಂಡರೇ ಹೊರತು ಯಾವ ಸರಕಾರವೂ ನಮಗೆ ಆರ್ಥಿಕವಾಗಿಯೂ ಸಹಾಯ ಮಾಡಿಲ್ಲ. ಪ್ರಕರಣ ಸಂಬಂಧಿಸಿ ಎನ್ಐಎ ತನಿಖೆಗೆ ಆಗ್ರಹಿಸಲು ಚಿಂತಿಸುತ್ತೇನೆ ಅಂತ  ಪರೇಶ್ ಮೇಸ್ತಾ ತಂದೆ ಕಮಲಾಕರ್ ಮೇಸ್ತಾ ತಿಳಿಸಿದ್ದಾರೆ.

Published by:Annappa Achari
First published: