Praveen Nettar Murder: ಹಂತಕರಿಗೆ ಟಾರ್ಗೆಟ್ ಆಗಿದ್ದೇಕೆ ಪ್ರವೀಣ್ ನೆಟ್ಟಾರ್? ಬಿಜೆಪಿ ಕಾರ್ಯಕರ್ತನ ಹತ್ಯೆ ಹೇಗಾಯ್ತು?

ಪ್ರವೀಣ್ ಕೊನೆಯುಸಿರೆಳೆಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ, ಹಿಂದೂ ಸಂಘಟನೆಗಳ ಆಕ್ರೋಶ ಭುಗಿಲೆದ್ದಿದೆ. ಹಾಗಿದ್ರೆ ಈ ಪ್ರವೀಣ್ ನೆಟ್ಟಾರ್ ಯಾರು? ದುಷ್ಕರ್ಮಿಗಳ ಟಾರ್ಗೆಟ್ ಆಗಿದ್ದೇಕೆ ಇವರು? ಹತ್ಯೆ ಹಿಂದಿದೆಯಾ ಕೆಲವು ಸಂಘಟನೆಗಳ ಕೈವಾಡ? ಈ ಬಗ್ಗೆ ಸಿಎಂ ಹಾಗೂ ಸರ್ಕಾರದ ಸಚಿವರು ಹೇಳುವುದೇನು? ಇಲ್ಲಿದೆ ಓದಿ ಎಲ್ಲ ಮಾಹಿತಿ…

ಹತ್ಯೆಯಾದ ಪ್ರವೀಣ್ ನೆಟ್ಟಾರ್

ಹತ್ಯೆಯಾದ ಪ್ರವೀಣ್ ನೆಟ್ಟಾರ್

  • Share this:
ರಾಜ್ಯದ ಕರಾವಳಿ (Coastal) ಮತ್ತೊಮ್ಮೆ ಉದ್ವಿಗ್ನಗೊಂಡಿದೆ. ಅದರಲ್ಲೂ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ಕೊತ ಕೊತನೆ ಕುದಿಯುತ್ತಿದೆ. ಮೊನ್ನೆ ರಾತ್ರಿ ದುಷ್ಕರ್ಮಿಗಳು ಬಿಜೆಪಿ ಯುವ ಮುಖಂಡ (BJP Youth Leader) ಪ್ರವೀಣ್ ನೆಟ್ಟಾರು (Prvaeen Nettar) ಎಂಬುವರನ್ನು ಬರ್ಬರವಾಗಿ ಹತ್ಯೆ (Murder) ಮಾಡಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಆಕ್ರೋಶ ಭುಗಿಲೆದ್ದಿದೆ.  ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರೂ ಆಗಿದ್ದ 36 ವರ್ಷದ ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ (Chicken Shop) ನಡೆಸುತ್ತಿದ್ದರು. ಮೊನ್ನೆ ಬೆಳ್ಳಾರೆ ಪೇಟೆಯಲ್ಲಿ ತಮ್ಮ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಪ್ರವೀಣ್ ಮೃತಪಟ್ಟಿದ್ದಾರೆ. ಪ್ರವೀಣ್ ಕೊನೆಯುಸಿರೆಳೆಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ, ಹಿಂದೂ ಸಂಘಟನೆಗಳ ಆಕ್ರೋಶ ಭುಗಿಲೆದ್ದಿದೆ. ಹಾಗಿದ್ರೆ ಈ ಪ್ರವೀಣ್ ನೆಟ್ಟಾರ್ ಯಾರು? ದುಷ್ಕರ್ಮಿಗಳ ಟಾರ್ಗೆಟ್ ಆಗಿದ್ದೇಕೆ ಇವರು? ಹತ್ಯೆ ಹಿಂದಿದೆಯಾ ಕೆಲವು ಸಂಘಟನೆಗಳ ಕೈವಾಡ? ಈ ಬಗ್ಗೆ ಸಿಎಂ ಹಾಗೂ ಸರ್ಕಾರದ ಸಚಿವರು ಹೇಳುವುದೇನು? ಇಲ್ಲಿದೆ ಓದಿ ಎಲ್ಲ ಮಾಹಿತಿ…

ಪ್ರವೀಣ್ ನೆಟ್ಟಾರ್ ಯಾರು?

ಪ್ರವೀಣ್ ನೆಟ್ಟಾರ್ 36 ವರ್ಷದವರು. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ. ಜೊತೆಗೆ ಹಿಂದೂ ಸಂಘಟನೆಗಳ ಜೊತೆಯೂ ಗುರುತಿಸಿಕೊಂಡವರು. ಅಲ್ಲದೇ ಜಿಲ್ಲಾ ಯುವ ಮೋರ್ಚಾದಲ್ಲಿ ಸಕ್ರಿಯನಾಗಿ, ಬಿಜೆಪಿ ಬಲಪಡಿಸಲು ಶ್ರಮಿಸುತ್ತಿದ್ದರು ಎನ್ನಲಾಗಿದೆ. ಸುಳ್ಯ ತಾಲೂಕಿನಲ್ಲಿ ಯುವ ಮೋರ್ಚಾ ಸಂಘಟನೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರವೀಣ್ ಸಕ್ರಿಯನಾಗಿದ್ದರು ಅಂತ ಹೇಳಲಾಗುತ್ತಿದೆ. ಜೊತೆಗೆ ಹಿಂದೂ ಸಂಘಟನೆಯಲ್ಲಿ ಚತುರನಾಗಿ ಕರ್ತವ್ಯ ನಿರ್ವಹಿಸ್ತಿದ್ದ, ಜೊತೆಗೆ ಎಲ್ಲ ಕೆಲಸಗಳನ್ನ ಸರಳವಾಗಿ, ಸುಗಮವಾಗಿ ನಿಭಾಯಿಸುತ್ತಿದ್ದರು ಎನ್ನಲಾಗಿದೆ.

ಕೋಳಿ ಅಂಗಡಿ ನಡೆಸುತ್ತಿದ್ದ ಪ್ರವೀಣ್

ಪ್ರವೀಣ್ ನೆಟ್ಟಾರ್ ಅವರು ಸುಳ್ಯ ತಾಲೂಕಿನ ಬೆಳ್ಳಾರೆ ಎಂಬಲ್ಲಿ ಸ್ವತಂ ಕೋಳಿ ಮಾಂಸದ ಅಂಗಡಿ ನಡೆಸುತ್ತಿದ್ದರು ಎನ್ನಲಾಗಿದೆ. ಜೀವನೋಪಾಯಕ್ಕಾಗಿ ಅಂಗಡಿ ನಡೆಸುತ್ತಿದ್ದು, ಅಲ್ಲೇ ನಿಷ್ಠೆಯಿಂದ ಕೆಲಸ ಮಾಡಿ, ಜೀವನ ಕಟ್ಟಿಕೊಂಡಿದ್ದರು. ಮೂರು ವರ್ಷದ ಹಿಂದಷ್ಟೇ ಪ್ರವೀಣ್ ವಿವಾಹವಾಗಿತ್ತು.

ಇದನ್ನೂ ಓದಿ: Eidgah Maidan: ಈದ್ಗಾ ಮೈದಾನ ಎಂದರೇನು ಗೊತ್ತಾ? ಚಾಮರಾಜಪೇಟೆಯಲ್ಲಿ ವಿವಾದ ಉಂಟಾಗಿದ್ದೇಕೆ?

ಅಂಗಡಿಯಿಂದ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ದಾಳಿ

ಮೊನ್ನೆ ಎಂದಿನಂತೆ ತಮ್ಮ ಕೋಳಿ ಅಂಗಡಿಯಲ್ಲಿ ಪ್ರವೀಣ್ ಕೆಲಸ ಮಾಡುತ್ತಿದ್ದರು. ಸಂಜೆ 7ರಿಂದ 7.30ರ ಸುಮಾರಿಗೆ ತಮ್ಮ ದೈನಂದಿನ ಕೆಲಸ ಮುಗಿಸಿ, ಮನೆಗೆ ಹೋಗಬೇಕು ಅಂತ ಅಂಗಡಿ ಬಾಗಿಲು ಹಾಕುತ್ತಿದ್ದರು. ಬಳಿಕ ತಮ್ಮ ಮನೆಗೆ ತೆರಳಲು ಸ್ಕೂಟರ್ ಮೇಲೆ ಕುಳಿತಿದ್ದರು. ಈ ವೇಳೆ ಅವರ ಜೊತೆಗಿದ್ದ ವ್ಯಕ್ತಿ ರೇನ್‌ಕೋಟ್ ತರಬೇಕು ಅಂತ ಮತ್ತೆ ಅಂಗಡಿ ಒಳಗೆ ಹೋಗಿದ್ದರಂತೆ. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ಮೇಲೆ ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಪ್ರವೀಣ್‌ ಮೇಲೆ ಹಲ್ಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್

ಪ್ರವೀಣ್ ಗಂಭೀರ ಗಾಯಗೊಂಡು, ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಈ ವೇಳೆ ಮೂವರೂ ಎಸ್ಕೇಪ್ ಆಗಿದ್ದಾರೆ. ಅಂಗಡಿ ಒಳಗೆ ಹೋದ ವ್ಯಕ್ತಿ ಹೊರಗಡೆ ಪ್ರವೀಣ್ ಕೂಗುವುದನ್ನು ಕೇಳಿ ಹೊರಗೆ ಬಂದು ನೋಡುವಷ್ಟರಲ್ಲಿ ಪ್ರವೀಣ್ ಸ್ಕೂಟರ್ ನಿಂದ 50 ಮೀಟರ್ ದೂರದಲ್ಲಿ ಬಿದ್ದು, ಒದ್ದಾಡುತ್ತಿದ್ದಂತೆ. ಆಗ ಅಲ್ಲಿಂದ ಮೂವರು ಅಪರಿಚಿತರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬೈಕ್‌ನಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದಾರೆ ಎಂದು ಪ್ರವೀಣ್ ಜೊತೆಯಲ್ಲಿದ್ದ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಪ್ರವೀಣ್ ಕೊನೆಯುಸಿರು

ಇದನ್ನು ಗಮನಿಸಿದ ಅಕ್ಕಪಕ್ಕದವರು ಕೂಡಲೇ ಪ್ರವೀಣ್ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಮಾರಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆಗೆ ಒಳಗಾಗಿದ್ದ ಪ್ರವೀಣ್ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಇದು ಪ್ರತಿಕಾರದ ಹತ್ಯೆಯೇ?

ಪ್ರವೀಣ್ ಹತ್ಯೆ ಪ್ರತಿಕಾರದ ಹತ್ಯೆ ಅಂತ ಪ್ರವೀಣ್ ಆಪ್ತರು, ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಇದೇ ಜುಲೈ 19ರಂದು ಕಾಸರಗೋಡು ಮೂಲದ ಮಸೂದ್ ಎಂಬ ಯುವಕನ ಹತ್ಯೆಯಾಗಿತ್ತು. ಇದೇ ಬೆಳ್ಳಾರೆ ಗ್ರಾಮದಲ್ಲಿ ಮಸೂದ್ ಮೇಲೆ 7ಕ್ಕೂ ಹೆಚ್ಚು ಜನ ಯುವಕರು ಹಲ್ಲೆ ಮಾಡಿದ್ದರು.

ಕೈ ತಾಗಿದ ಕಾರಣಕ್ಕೆ ಕೊಂದಿದ್ದ ದುಷ್ಕರ್ಮಿಗಳು!

ಹೌದು, ಮಸೂದ್ ಹತ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದಿತ್ತು ಎನ್ನಲಾಗಿದೆ. ಕೈ ತಾಗಿತು ಎಂಬ ಕಾರಣಕ್ಕೆ ಮಸೂದ್ ಮೇಲೆ ಹಲ್ಲೆ ನಡೆದಿತ್ತು. ದುಷ್ಕರ್ಮಿಗಳು ಹನೀಫ್ ಎಂಬವನ ಮೂಲಕ ಮಸೂದ್ ನನ್ನ ರಾಜಿ ಮಾತುಕತೆ ಕರೆದಿದ್ದಾರೆ. ಈ ವೇಳೆ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎನ್ನುವವರು ಹಲ್ಲೆ ಮಾಡಿದ್ದರು. ಬಾಟಲಿಯಿಂದ ಆತನ ಮೇಲೆ ಹಲ್ಲೆ ಮಾಡಲಾಗಿತ್ತು. ಬಾಟಲಿಯಿಂದ ತಲೆಗೆ ಏಟು ಬಿದ್ದಿದ್ದರಿಂದ ಗಂಭೀರ ಗಾಯಗೊಂಡ ಮಸೂದ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಈ ಕೇಸ್‌ನಲ್ಲಿ ಆರೋಪಿಗಳ ಬಂಧನವೂ ಆಗಿತ್ತು. ಇದೇ ಘಟನೆಗೆ ಪ್ರತಿಕಾರವಾಗಿ ಪ್ರವೀಣ್ ಹತ್ಯೆ ನಡೆದಿರಬಹುದು ಎನ್ನುವುದು ಪ್ರವೀಣ್ ಆಪ್ತರ ಶಂಕೆ.

ಕೇರಳ ಮೂಲದವರಿಂದ ಕೃತ್ಯ ಶಂಕೆ

ಮಸೂದ್ ಹತ್ಯೆ ಸಂದರ್ಭದಲ್ಲಿ ಬೆಳ್ಳಾರೆಯಲ್ಲೇ ಹತ್ಯೆಗೆ ಪ್ರತಿಕಾರ ತೆಗೆದುಕೊಳ್ಳುತ್ತೇವೆ ಅಂತ ಅಲ್ಲಿನ ಕೆಲ ಯುವಕರು ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಇದರ ಹಿಂದೆ ಕೇರಳ ಮೂಲದ ದುಷ್ಕರ್ಮಿಗಳ ಸಂಚು ಇರಬಹುದು ಅಂತ ಶಂಕಿಸಲಾಗಿದೆ.

ಒಂದೇ ತಿಂಗಳಲ್ಲಿ ಮೂರು ಹತ್ಯೆ

ಮಸೂದ್ ಹತ್ಯೆ ನಡೆದು ಕೇವಲ ಒಂದು ವಾರವೂ ಕಳೆದಿರಲಿಲ್ಲ. ಆದಾಗಲೇ ಗ್ರಾಮದಲ್ಲಿ ಮತ್ತೊಂದು ಹತ್ಯೆ ನಡೆದು ಹೋಗಿದೆ. ಇದಕ್ಕೂ ಮುನ್ನ ಜೂನ್ 4ರಂದು ಹಿಂದೂ ಸಂಘಟನೆ ಕಾರ್ಯಕರ್ತನ ಕೊಲೆ ಪ್ರಕರಣದ ಆರೋಪಿ ಚರಣ್ ರಾಜ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಅದಾದ ಬಳಿಕ ಜುಲೈ 19ರಂದು ಮಸೂದ್ ಹತ್ಯೆ ಆಗಿದೆ. ಇದೀಗ ಪ್ರವೀಣ್ ಹತ್ಯೆಯೂ ನಡೆದು ಹೋಗಿದೆ. ಹೀಗಾಗಿ ಬೆಳ್ಳಾರೆ ಗ್ರಾಮಸ್ಖರು ಬೆಚ್ಚಿ ಬಿದ್ದಿದ್ದಾರೆ. ಪ್ರವೀಣ್ ಹತ್ಯೆಯೊಂದಿಗೆ ಇಡೀ ದಕ್ಷಿಣ ಕನ್ನಡ ಉದ್ವಿಗ್ನಗೊಂಡಿತ್ತು.

ಕನ್ಹಯ್ಯ ಲಾಲ್‌ ಹತ್ಯೆ ವಿಚಾರವಾಗಿ ಪೋಸ್ಟ್ ಹಾಕಿದ್ದ ಪ್ರವೀಣ್

ಕೆಲದಿನಗಳ ಹಿಂದೆ ರಾಜಸ್ಥಾನದ ಉದಯ್‌ಪುರದಲ್ಲಿ ಕನ್ಹಯ್ಯ ಲಾಲ್ ಎಂಬ ಟೇಲರ್ ಹತ್ಯೆ ನಡೆದಿತ್ತು. ಪ್ರವಾದಿ ಮಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಯ ಮಾತನಾಡಿದ್ದಾರೆ ಅಂತ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಜಗತ್ತಿನಾದ್ಯಂತ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ನೂಪುರ್ ಶರ್ಮಾ ಬೆಂಬಲಿಸಿ ಕನ್ಹಯ್ಯ ಲಾಲ್ ಪೋಸ್ಟ್ ಹಾಕಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರ ಅಂಗಡಿಗೆ ಬಂದಿದ್ದ ಇಬ್ಬರು ಹಂತಕರು ಅವರ ಶಿರಚ್ಛೇದ ಮಾಡಿದ್ದರು. ಈ ವೇಳೆ ಫೇಸ್‌ಬುಕ್ ಪೋಸ್ಟ್‌ ಹಾಕಿದ್ದ ಪ್ರವೀಣ್, ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿದ್ದರು. ಜೊತೆಗೆ ಕನ್ಹಯ್ಯ ಲಾಲ್ ಅವರನ್ನು ಸಮರ್ಥಿಸಿಕೊಂಡು,  ಜಿಹಾದಿಗಳನ್ನು ಟೀಕಿಸಿದ್ದಾರೆ. ಕನ್ಹಯ್ಯಾ ಲಾಲ್ ಅವರು ಹೊಲಿಗೆ ಯಂತ್ರದ ಪಕ್ಕದಲ್ಲಿ ಕೈಗಳನ್ನು ಮಡಚಿ ಕುಳಿತಿರುವ ಗ್ರಾಫಿಕ್ ಅನ್ನು ಹಂಚಿಕೊಂಡಿದ್ದರು ಅಂತ ರಿಪಬ್ಲಿಕ್ ಟಿವಿ ಹೇಳಿದೆ.

ಇದನ್ನೂ ಓದಿ: Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?

ಬಿಜೆಪಿ ವಿರುದ್ಧವೇ ಬಿಜೆಪಿ ಕಾರ್ಯಕರ್ತರ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನಿಟ್ಟಾರು ಬರ್ಬರ ಹತ್ಯೆಯು ಬಿಜೆಪಿ ಕಾರ್ಯಕರ್ತರಲ್ಲಿ ವ್ಯಾಪಕ ಆಕ್ರೋಶ ಹುಟ್ಟುಹಾಕಿದೆ. ‘ನಮ್ಮದೇ ಸರ್ಕಾರ ಇದ್ದರೂ ನಮ್ಮ ಕಾರ್ಯಕರ್ತರಿಗಿಲ್ಲವೇ ಭದ್ರತೆ’ ಎಂದು ಕಿಡಿಕಾರಿದ್ದಾರೆ. ಬಿಜೆಪಿಯ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹತ್ಯೆ ಆರೋಪಿಗಳ ಬಂಧನ

ಹತ್ಯೆ ಪ್ರಕರಣದಲ್ಲಿ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಕೇರಳಕ್ಕೂ ಪೊಲೀಸರು ತೆರಳಿದ್ದು, ಅಲ್ಲಿಯೂ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಅಂತ ಅವರು ಹೇಳಿದ್ದಾರೆ.
Published by:Annappa Achari
First published: