Bihar Political Crisis: ಬಿಜೆಪಿ ಜೊತೆ ಕುಸ್ತಿ, ಆರ್‌ಜೆಡಿ ಜೊತೆ ದೋಸ್ತಿ! ನಿತೀಶ್ ಕುಮಾರ್ ನಡೆ ಹಿಂದಿನ ಅಸಲಿ ಸತ್ಯವೇನು?

ನಿನ್ನೆ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ನಿತೀಶ್ ಕುಮಾರ್, ಇಂದು ಆರ್ಜೆಡಿ ಜೊತೆ ಸೇರಿ ಹೊಸ ಸರ್ಕಾರ ರಚಿಸುತ್ತಿದ್ದಾರೆ. ಹಾಗಿದ್ರೆ ಬಿಹಾರ ರಾಜಕೀಯ ಸಂಘರ್ಷಕ್ಕೆ ಕಾರಣವೇನು? ಬಿಜೆಪಿ-ಜೆಡಿಯು ಮೈತ್ರಿ ಮುರಿದು ಬೀಳಲು ಕಾರಣವೇನು? ನಿತೀಶ್ ಕುಮಾರ್ ಮುನಿಸಿಗೆ ಅಸಲಿ ಕಾರಣ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

ಜೆಡಿಯು ನಾಯಕ ನಿತೀಶ್ ಕುಮಾರ್

ಜೆಡಿಯು ನಾಯಕ ನಿತೀಶ್ ಕುಮಾರ್

  • Share this:
ಬಿಹಾರದಲ್ಲಿ (Bihar) ಮತ್ತೆ ರಾಜಕೀಯ ಹೈಡ್ರಾಮಾ (Political High Drama) ನಡೆಯುತ್ತಿದೆ. ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ (BJP-JDU alliance government) ಉರುಳಿದೆ. ಇಂದು ಮಹಾಘಟಬಂಧನ್‌ನ (Mahagathbandhan) ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ಜೆಡಿಯು, ಆರ್‌ಜೆಡಿ (RJD) ಜೊತೆ ಸಖ್ಯ ಬೆಳೆಸಿದೆ. ನಿನ್ನೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ರಾಜೀನಾಮೆ ನೀಡಿದ್ದಾರೆ. ವಿಚಿತ್ರ ಅಂದರೆ ಅದೇ ನಿತೀಶ್ ಕುಮಾರ್ ಇಂದು ಮತ್ತೊಮ್ಮೆ ಬಿಹಾರ ಸಿಎಂ (CM) ಆಗಿ ಪ್ರಮಾಣ ವಚನ (Oath) ಸ್ವೀಕರಿಸಲಿದ್ದಾರೆ. ಬದಲಾವಣೆ ಅಂದ್ರೆ ನಿನ್ನೆ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ನಿತೀಶ್ ಕುಮಾರ್, ಇಂದು ಆರ್‌ಜೆಡಿ ಜೊತೆ ಸೇರಿ ಹೊಸ ಸರ್ಕಾರ ರಚಿಸುತ್ತಿದ್ದಾರೆ. ಹಾಗಿದ್ರೆ ಬಿಹಾರ ರಾಜಕೀಯ ಸಂಘರ್ಷಕ್ಕೆ (Political conflict) ಕಾರಣವೇನು? ಬಿಜೆಪಿ-ಜೆಡಿಯು ಮೈತ್ರಿ ಮುರಿದು ಬೀಳಲು ಕಾರಣವೇನು? ನಿತೀಶ್ ಕುಮಾರ್ ಮುನಿಸಿಗೆ ಅಸಲಿ ಕಾರಣ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

ಬಿಜೆಪಿ ಮೇಲೆ ನಿತೀಶ್ ಕುಮಾರ್ ಮುನಿಸು

ಬಿಜೆಪಿ ವಿರುದ್ಧ ಜೆಡಿಯು ನಾಯಕ ಹಾಗೂ ಬಿಹಾರ ಮಾಜಿ ಸಿಎಂ ನಿತೀಶ್ ಕುಮಾರ್ ಸಿಡಿದೆದ್ದಿದ್ದಾರೆ. ಅಷ್ಟೇ ಅಲ್ಲ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿದ್ದಾರೆ. ಜೆಡಿಯು ಬಿಹಾರದಲ್ಲಿ ಮಾತ್ರವಲ್ಲದೇ ಕೇಂದ್ರದ ಎನ್‌ಡಿಎ ಮೈತ್ರಿಕೂಟದಲ್ಲೂ ಪಾಲುದಾರ ಪಕ್ಷ. ಇದೀಗ ಎರಡೂ ಕಡೆ ಬಿಜೆಪಿ, ಜೆಡಿಯು ಮೈತ್ರಿ ಮುರಿದು ಬಿದ್ದಿದೆ.

ನಿತೀಶ್ ಕುಮಾರ್ ಮುನಿಸಿಗೆ ಕಾರಣವೇನು?

ಮುಖ್ಯವಾಗಿ ನಿತೀಶ್ ಕುಮಾರ್ ಅವರು ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ. ಬಿಜೆಪಿ ನಾಯಕರ ಧೋರಣೆ ವಿರುದ್ಧ ಸಿಡಿದೆದ್ದಿದ್ದಾರೆ. ನಿತೀಶ್ ಕುಮಾರ್ ಮುಖ್ಯ ಆರೋಪ ಅಂದ್ರೆ ಬಿಹಾರ ಸರ್ಕಾರವನ್ನು ಬಿಜೆಪಿ ಕಂಟ್ರೋಲ್ ಮಾಡುತ್ತಿದೆ ಎಂಬುದು.

 ಅಮಿತಾ ಶಾ ಧೋರಣೆ ವಿರುದ್ಧ ಅಸಮಾಧಾನ

ಮುಖ್ಯವಾಗಿ ನಿತೀಶ್ ಕುಮಾರ್ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ಮುನಿಸಿಕೊಂಡಿದ್ದಾರೆ. ಅಮಿತ್‌ ಶಾ ಅವರು ದಿಲ್ಲಿಯಿಂದಲೇ ತಮ್ಮ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಬಿಹಾರ ಆಡಳಿತವನ್ನು ರಿಮೋಟ್‌ ಕಂಟ್ರೋಲ್‌ ಮಾಡಲು ಯತ್ನಿಸುತ್ತಿದ್ದಾರೆ ಎಂಬುದು ನಿತೀಶ್‌ ಕುಮಾರ್ ಅವರ ಇನ್ನೊಂದು ಅಸಮಾಧಾನ. ಇದೇ ಕಾರಣಕ್ಕೆ ನಿತೀಶ್‌ ಇತ್ತೀಚೆಗೆ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಕರೆದ ಅನೇಕ ಸಭೆಗಳಿಗೆ ಗೈರು ಹಾಜರಾಗಿದ್ದರು ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Quit India Movement: ಇಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದ ದಿನ! ಕ್ವಿಟ್ ಇಂಡಿಯಾ ಚಳವಳಿಗೆ 80 ವರ್ಷ

ಮಹಾರಾಷ್ಟ್ರದಂತೆ ಮಾಡಲು ಯತ್ನ ಎಂಬ ಆರೋಪ

ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಸರ್ಕಾರವನ್ನು ಹೇಗೆ ಬಿಜೆಪಿ ಒಡೆದು ಹೋಳು ಮಾಡಿತೋ ಅದೇ ರೀತಿ ಬಿಹಾರದಲ್ಲಿ ಜೆಡಿಯು ಪಕ್ಷದಲ್ಲಿ ಬಿರುಕು ಮೂಡಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬುದು ನಿತೀಶ್‌ ಕುಮಾರ್ ಆತಂಕ. ಅದಕ್ಕೆಂದೇ ಮೊನ್ನೆಯವರೆಗೂ ತಮ್ಮ ಪಕ್ಷದಲ್ಲೇ ಇದ್ದು ವಜಾಗೊಂಡ ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್‌ ಅವರನ್ನು ತಮ್ಮ ವಿರುದ್ಧ ಬಿಜೆಪಿ ಎತ್ತಿಕಟ್ಟಿದೆ ಎಂಬುದು ನಿತೀಶ್‌ ಆಕ್ರೋಶಕ್ಕೆ ಕಾರಣವಾಗಿದೆ ಅಂತ ಹೇಳಲಾಗ್ತಿದೆ.

ಸಂಪುಟ ಸಹೋದ್ಯೋಗಿಗಳ ವರ್ತನೆಗೆ ಆಕ್ಷೇಪ

ಬಿಜೆಪಿಯು ತನ್ನ ಕಡೆಯಿಂದ ಆಯ್ಕೆ ಮಾಡಿ ಕಳಿಸುತ್ತಿರುವ ಸಚಿವರ ವಿರುದ್ಧವೂ ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದಾರೆ. ಬಿಹಾರ ವಿಧಾನಸಭೆಯ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿರುದ್ಧವೂ ನಿತೀಶ್ ಕುಮಾರ್ ಕೆಂಡಾಮಂಡಲರಾಗಿದ್ದಾರೆ. ಆದ್ರೆ, ಅವರನ್ನು ಬದಲಿಸಲು ಬಿಜೆಪಿ ಒಪ್ಪುತ್ತಿಲ್ಲ. ಸರ್ಕಾರದ ವಿರುದ್ಧವೇ ಸ್ಪೀಕರ್ ಮಾತನಾಡುತ್ತಿದ್ದಾರೆ ಅನ್ನೋದು ನಿತೀಶ್ ಅಸಮಾಧಾನಕ್ಕೆ ಮುಖ್ಯ ಕಾರಣ.

ಅಗ್ನಿಪಥ್ ವಿರೋಧಿ ಪ್ರತಿಭಟನೆ ವೇಳೆ ಭಿನ್ನಮತ

ಮತ್ತೊಂದೆಡೆ ಅಗ್ನಿಪಥ ಪ್ರತಿಭಟನಾಕಾರರು ಬಿಹಾರದ ಬಿಜೆಪಿ ಮುಖ್ಯಸ್ಥನ ಮನೆ ಮೇಲೆ ದಾಳಿ ಮಾಡಿದ್ದರು. ಉಪ ಮುಖ್ಯಮಂತ್ರಿ ರೇಣು ದೇವಿಯವರ ಮನೆ ಸೇರಿದಂತೆ ಹಲವಾರು ಬಿಜೆಪಿ ಕಚೇರಿ ಮೇಲೆ ದಾಳಿ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ನಿತೀಶ್‌ ಕುಮಾರ್‌ ಸರ್ಕಾರದ ವಿರುದ್ದ ಮುಗಿ ಬಿದ್ದಿದ್ದರು. ಹಿಂಸಾತ್ಮಕ ಪ್ರತಿಭಟನೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ನಿತೀಶ್ ಕುಮಾರ್ ವಿಫಲರಾಗಿದ್ದಾರೆ ಅಂತ ಆರೋಪಿಸಿದ್ದರು. ಇದು ಮೈತ್ರಿ ನಾಯಕರ ನಡುವಿನ ಮುನಿಸಿಗೆ ಕಾರಣವಾಗಿತ್ತು.

ಅಂತರ ಕಾಯ್ದುಕೊಂಡಿದ್ದ ನಿತೀಶ್

ಇನ್ನು ಕೆಲ ದಿನಗಳ ಹಿಂದಿನಿಂದ ಬಿಜೆಪಿ ನಾಯಕರೊಂದಿಗೆ ನಿತೀಶ್ ಕುಮಾರ್ ಅಂತರ ಕಾಯ್ದುಕೊಂಡೇ ಬಂದಿದ್ದರು. ಕಳೆದ ತಿಂಗಳು ಕೇಂದ್ರ ಕಾನೂನು ಸಚಿವರು ಹಾಗೂ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಕರೆದಿದ್ದ ಎಲ್ಲಾ ರಾಜ್ಯಗಳ ಸಿಎಂಗಳ ಸಭೆಗೆ ನಿತೀಶ್ ಗೈರಾಗಿದ್ದರು. ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಸಮಾರಂಭಕ್ಕೆ ಪ್ರಧಾನಿ ಮೋದಿ ಅವರೇ ಆಹ್ವಾನಿಸಿದ್ದರೂ ಹೋಗಿರಲಿಲ್ಲ. ಹರ್ ಘರ್ ತಿರಂಗಾ ಅಭಿಯಾನದ ಕುರಿತು ಚರ್ಚಿಸಲು ಅಮಿತ್ ಶಾ ಸಭೆ ಕರೆದಿದ್ದ ವೇಳೆ ನಿತೀಶ್ ಬದಲಿಗೆ ಉಪ ಮುಖ್ಯಮಂತ್ರಿ ತಾರಕಿಶೋರ್ ಪ್ರಸಾದ್ ದಿಲ್ಲಿಗೆ ಹೋಗಿದ್ದರು. ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸಮಾರಂಭಕ್ಕೂ ನಿತೀಶ್ ಗೈರು ಹಾಜರಾಗಿದ್ದರು. ನೀತಿ ಆಯೋಗದ ಸಭೆಗೆ 23 ರಾಜ್ಯಗಳ ಸಿಎಂಗಳು ಹಾಜರಾಗಿದ್ದರೂ ನಿತೀಶ್ ಕುಮಾರ್ ಚಕ್ಕರ್ ಹಾಕಿದ್ದನ್ನು ಇಲ್ಲಿ ಗಮನಿಸಬಹುದು.

ರಾಷ್ಟ್ರಪತಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರಾ ನಿತೀಶ್ ಕುಮಾರ್?

ಈ ಮಾತುಗಳು ಮೊದಲಿನಿಂದಲೂ ಕೇಳಿ ಬಂದಿದ್ದವು. ನಿತೀಶ್ ಕುಮಾರ್ ಅವನ್ನು ರಾಷ್ಟ್ರಪತಿ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅದರ ಬಗ್ಗೆ ನಿತೀಶ್ ಕುಮಾರ್ ಆಸಕ್ತಿ ತೋರಿಸಿದ್ದಂತೆ ಕಂಡುಬಂದಿಲ್ಲ.

ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರಾ ನಿತೀಶ್ ಕುಮಾರ್?

ಮತ್ತೊಂದೆಡೆ ನಿತೀಶ್ ಕುಮಾರ್ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡೇ ಇದ್ದರೆ ಅದು ಅಸಾಧ್ಯ ಎನ್ನುವುದನ್ನು ನಿತೀಶ್ ಕುಮಾರ್ ಮನಗಂಡಿದ್ದಾರೆ. ಹೀಗಾಗಿ ಮಹಾ ಘಟನಬಂಧನ ಜೊತೆ ಸೇರಿ ಬಾಂಧವ್ಯ ಗಟ್ಟಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕೆ ಈ ಹೊಸ ಮೈತ್ರಿಯೇ ಮೊದಲ ಮೆಟ್ಟಿಲು ಎನ್ನಲಾಗಿದೆ.

ಇದನ್ನೂ ಓದಿ: Sunday: ಭಾನುವಾರವೇ ಸಾರ್ವತ್ರಿಕ ರಜೆ ಇರುವುದೇಕೆ? ಸಂಡೆ ಫನ್‌ ಡೇ ಏನಿದರ ವಿಶೇಷತೆ?

ಬಿಹಾರ ವಿಧಾನಸಭೆಯ ಬಲಾಬಲ

242 ಬಲದ ವಿಧಾನಸಭೆಯಲ್ಲಿ 79 ಶಾಸಕರನ್ನು ಹೊಂದಿರುವ ಆರ್‌ಜೆಡಿ ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿದೆ. ಬಿಜೆಪಿ 77 ಮತ್ತು ಜೆಡಿಯು 44 ನಂತರದ ಸ್ಥಾನದಲ್ಲಿದೆ. ವಿಧಾನಸಭೆಯಲ್ಲಿ ಬಹುಮತ ಪಡೆಯಲು ಅಗತ್ಯವಿರುವ ಮ್ಯಾಜಿಕ್ ಫಿಗರ್ 122. ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ 4 ಶಾಸಕರನ್ನು ಹೊಂದಿದೆ, ಕಾಂಗ್ರೆಸ್ 19 ಮತ್ತು ಸಿಪಿಐಎಂಎಲ್ ಹೊಂದಿದೆ. (ಎಲ್) 12 ಮತ್ತು ಸಿಪಿಐ ಮತ್ತು ಸಿಪಿಐ(ಎಂ) ತಲಾ ಎರಡು ಹೊಂದಿವೆ. ಅಲ್ಲದೆ, ಒಬ್ಬ ಶಾಸಕ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಶಾಸಕರು ಸೇರಿದ್ದಾರೆ.
Published by:Annappa Achari
First published: