ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (NPCI) ಹೊಸ ಪ್ರಕಟಣೆ ಇದೀಗ ಹಲವಾರು ಉದ್ಯಮಿಗಳು (Employees), ಟ್ರೇಡರ್ಸ್, ಬಳಕೆದಾರರಲ್ಲಿ ಗೊಂದಲವನ್ನು ಸೃಷ್ಟಿಸಿದೆ. ತಮ್ಮ ನಿತ್ಯದ ವಹಿವಾಟುಗಳಿಗೆ ಯುಪಿಐ ಅಥವಾ ಮೊಬೈಲ್ ಪಾವತಿಗಳನ್ನೇ (Mobile Payments) ಅವಲಂಬಿಸಿರುವ ಹಲವಾರು ಜನರು ಈ ಪ್ರಕಟಣೆಯಿಂದ ಗೊಂದಲಕ್ಕೊಳಗಾಗಿದ್ದಾರೆ. ಇನ್ನು ಮುಂದೆ ಯುಪಿಐ ಪಾವತಿಗಳಿಗೆ (UPI Payments) ಶುಲ್ಕ ವಿಧಿಸಲಾಗುತ್ತದೆಯೇ ಇಲ್ಲವೇ ಎಂಬ ಸಂದೇಹ ಆರಂಭವಾಗಿದೆ. ಅಷ್ಟಕ್ಕೂ ಸಂಸ್ಥೆ ಮಾಡಿರುವ ಘೋಷಣೆ ಏನು? ಶುಲ್ಕ ವಿಧಿಸುವುದು ನಿಜವೇ ಎಂಬುದನ್ನು ತಿಳಿದುಕೊಳ್ಳೋಣ
ಇತ್ತೀಚೆಗೆ ಪರಿಚಯಿಸಲಾದ ಇಂಟರ್‌ಚೇಂಜ್ ಶುಲ್ಕಗಳ ಬಗ್ಗೆ ಮಾಹಿತಿ ನೀಡಿರುವ NPCI, ಯುಪಿಐ ಮೂಲಕ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಮಾಡುವ ವರ್ಗಾವಣೆಯು ಶುಲ್ಕರಹಿತವಾಗಿರಲಿದೆ ಎಂದು ತಿಳಿಸಿದೆ. ಅಂದರೆ ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ನೇರವಾಗಿ ಮಾಡಲಾದ ಸಾಮಾನ್ಯ UPI ವಹಿವಾಟುಗಳು ಉಚಿತವಾಗಿರುತ್ತವೆ.
ಯುಪಿಐ ಮೂಲಕ ಹಣ ಟ್ರಾನ್ಸ್‌ಫರ್ ಮಾಡಲು ಮೂರು ವಿಧಾನಗಳಿದ್ದು ಅದು ಹೀಗಿವೆ ಹಣ ಸ್ವೀಕರಿಸುವವರ ವರ್ಚುವಲ್ ಪಾವತಿ ವಿಳಾಸ (ವಿಪಿಎ) ನಮೂದಿಸುವುದು, ಖಾತೆ ಸಂಖ್ಯೆ ಹಾಗೂ ಐಪಿಎಸ್‌ಸಿ ಕೋಡ್ ಅಥವಾ ಕ್ಯುಆರ್ ಕೋಡ್ ನಮೂದಿಸುವುದು.
ಹಾಗಿದ್ದರೆ ಏಪ್ರಿಲ್ 1 ರಿಂದ ನಡೆಯುವ ಬದಲಾವಣೆಗಳೇನು?
1 ಏಪ್ರಿಲ್, 2023 ರಿಂದ, ಪ್ರಿಪೇಯ್ಡ್ ಪಾವತಿ ಸಾಧನಗಳನ್ನು (PPI ಗಳು) - ವ್ಯಾಲೆಟ್‌ಗಳು ಅಥವಾ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡುವ ವ್ಯಾಪಾರಿ (ಪಾವತಿಯನ್ನು ಸ್ವೀಕರಿಸುವ ವ್ಯಕ್ತಿ ಅಥವಾ ವ್ಯಾಪಾರ) UPI ವಹಿವಾಟುಗಳ ಮೇಲೆ 1.1% ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ ಎಂಬುದು ಪ್ರಕಟಣೆಯಾಗಿದೆ. ವಿನಿಮಯ ಶುಲ್ಕವು ಗ್ರಾಹಕ ಬ್ಯಾಂಕ್/ಪಾವತಿ ಸೇವೆ ಒದಗಿಸುವವರು ವ್ಯಾಪಾರಿಗೆ ವಿಧಿಸುವ ಶುಲ್ಕವಾಗಿದೆ.
ಇನ್ನಷ್ಟು ಸರಳವಾಗಿ ಹೇಳುವುದಾದರೆ ಗ್ರಾಹಕರು ಒಂದು ನಿರ್ದಿಷ್ಟ ಕಂಪೆನಿಯ ವ್ಯಾಲೆಟ್ ಹೊಂದಿದ್ದರೆ ಮತ್ತು ಇನ್ನೊಂದು ಕಂಪೆನಿಯ ವ್ಯಾಲೆಟ್ ಹೊಂದಿರುವ ವ್ಯಾಪಾರಿಗೆ ಪಾವತಿ ಮಾಡಿದರೆ ಆಗ ಶುಲ್ಕ ಅನ್ವಯವಾಗುತ್ತದೆ. ಆದಾಗ್ಯೂ, ಸಾಮಾನ್ಯ ಗ್ರಾಹಕರ ವಹಿವಾಟುಗಳಿಗೆ ಅಥವಾ ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆ ಆಧಾರಿತ UPI ಪಾವತಿಗಳಿಗೆ ಯಾವುದೇ ಶುಲ್ಕಗಳಿಲ್ಲ.
ವಿಧಿಸುವ ಶುಲ್ಕಗಳೇನು?
ವಿವಿಧ ವರ್ಗದ ವ್ಯಾಪಾರಿಗಳಿಗೆ ವಿನಿಮಯ ಶುಲ್ಕವು ಬದಲಾಗುತ್ತದೆ. ಇದು 0.5% ರಿಂದ 1.1% ದವರೆಗೆ ಪ್ರಾರಂಭವಾಗುತ್ತದೆ ಮತ್ತು ನಿರ್ದಿಷ್ಟ ವರ್ಗಗಳಲ್ಲಿ ಮಿತಿಯೂ ಸಹ ಅನ್ವಯಿಸುತ್ತದೆ.
ಟೆಲಿಕಾಂ, ಶಿಕ್ಷಣ ಮತ್ತು ಉಪಯುಕ್ತತೆಗಳು/ಪೋಸ್ಟ್ ಆಫೀಸ್‌ಗಳಿಗೆ, ಇಂಟರ್‌ಚೇಂಜ್ ಶುಲ್ಕವು 0.7% ಆಗಿದ್ದರೆ ಸೂಪರ್‌ಮಾರ್ಕೆಟ್‌ಗಳಿಗೆ ಶುಲ್ಕವು ವಹಿವಾಟಿನ ಮೌಲ್ಯ 0.9%ವಾಗಿದೆ. ವಿಮೆ, ಸರ್ಕಾರ, ಮ್ಯೂಚುವಲ್ ಫಂಡ್‌ಗಳು ಮತ್ತು ರೈಲ್ವೇಗಳಿಗೆ 1% ಶುಲ್ಕ ವಿಧಿಸಲಿದ್ದು, ಇಂಧನಕ್ಕೆ 0.5% ಮತ್ತು ಕೃಷಿಗೆ 0.7% ಶುಲ್ಕ ವಿಧಿಸಲಾಗುತ್ತದೆ.
ಇಂಟರ್‌ಚೇಂಜ್ ಶುಲ್ಕಗಳು ಪಿಪಿಐ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತವೆ ಮತ್ತು ಗ್ರಾಹಕರಿಗೆ ಯಾವುದೇ ಶುಲ್ಕ ಅನ್ವಯವಾಗುವುದಿಲ್ಲ ಎಂದು NPCI ಹೇಳಿಕೆಯಲ್ಲಿ ತಿಳಿಸಿದೆ. ಎರಡು ವ್ಯಾಲೆಟ್‌ಗಳ ನಡುವಿನ ಇಂಟರ್‌ಚೇಂಜ್ ವೆಚ್ಚವನ್ನು ಸರಿದೂಗಿಸಲು ಈ ಕ್ರಮ ಪರಿಚಯಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
PPI ವ್ಯಾಲೆಟ್‌ಗಳನ್ನು ಇಂಟರ್‌ಆಪರೇಬಲ್ UPI ಪರಿಸರ ವ್ಯವಸ್ಥೆಯಲ್ಲಿ ಒಳಪಡಲು NPCI ಅವಕಾಶನ್ನೊದಗಿಸಿದೆ ಆದರೆ PPI ಬಳಸುವಾಗ ₹2,000 ಕ್ಕಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ 1.1 ಶೇಕಡಾ ಶುಲ್ಕವನ್ನು ವಿಧಿಸಿದೆ.
ಯಾವೆಲ್ಲಾ ವಹಿವಾಟುಗಳು ವಿನಿಮಯ ಶುಲ್ಕಕ್ಕೆ ಒಳಪಡುವುದಿಲ್ಲ?
ಬ್ಯಾಂಕ್ ಖಾತೆ ಮತ್ತು PPI ವ್ಯಾಲೆಟ್ ನಡುವಿನ ಸಮಾನ ವಹಿವಾಟುಗಳಿಗೆ ಹಾಗೂ ಮರ್ಚೆಂಟ್ ವಹಿವಾಟುಗಳಿಗೆ ವಿನಿಮಯ ಶುಲ್ಕ ಅನ್ವಯವಾಗುವುದಿಲ್ಲ ಎಂದು NPCI ತಿಳಿಸಿದೆ. ಮೂಲಭೂತವಾಗಿ, ಈ ಶುಲ್ಕವು ವ್ಯಾಪಾರಿ QR ಕೋಡ್‌ಗಳ ಮೂಲಕ ಮಾಡಿದ ಡಿಜಿಟಲ್ ವ್ಯಾಲೆಟ್ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ.
ಸ್ನೇಹಿತರು, ಕುಟುಂಬ ಅಥವಾ ವ್ಯಾಪಾರಿಯ ಬ್ಯಾಂಕ್ ಖಾತೆಗೆ ಪೇಟಿಎಂ, ಫೋನ್‌ಪೇ, ಗೂಗಲ್ ಪೇಯಂತಹ ಯುಪಿಐ ಬಳಸಿ ಮಾಡಿದ ಎಲ್ಲಾ ಪಾವತಿಗಳು ಈ ವಿನಿಮಯ ಶುಲ್ಕಕ್ಕೆ ಒಳಪಡುವುದಿಲ್ಲ ಎಂದಾಗಿದೆ.
ಹಾಗಿದ್ದರೆ ಈ ಶುಲ್ಕಗಳನ್ನು ಯಾರು ಪಾವತಿಸಬೇಕಾಗುತ್ತದೆ?
ಯುಪಿಐ ಪಾವತಿಗಳ ಮೇಲೆ 1.1% ಶುಲ್ಕವನ್ನು ಪಾವತಿಸಲಾಗುವುದಿಲ್ಲ ಆದರೆ ಡಿಜಿಟಲ್ ವ್ಯಾಲೆಟ್‌ಗಳಿಂದ ಯುಪಿಐ ಐಡಿಗಳಿಗೆ ಮಾಡಿದ ರೂ 2,000 ಹಾಗೂ ಅದಕ್ಕಿಂತ ಹೆಚ್ಚಿನ ಪಾವತಿಗಳಿಗೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ
ಗ್ರಾಹಕರು ಯಾವುದೇ ಅಂಗಡಿ ಅಥವಾ ಆನ್‌ಲೈನ್‌ನಲ್ಲಿ (ಪೇಟಿಎಂ ಅಥವಾ ಗೂಗಲ್ ಪೇ) ಯುಪಿಐ ಮೂಲಕ ಪಿಪಿಐ ಪಾವತಿ ಮಾಡಲು ಪ್ರಯತ್ನಿಸಿದರೆ ಹಾಗೂ ಕ್ಯುಆರ್ ಕೋಡ್ ಫೋನ್‌ಪೇ ಆಗಿದ್ದರೆ ಫೋನ್ ಪೇಯು ವ್ಯಾಪಾರಿಯಿಂದ ಅನ್ವಯವಾಗುವ ವಿನಿಮಯ ಶುಲ್ಕವನ್ನು ಸ್ವೀಕರಿಸುತ್ತದೆ. ಶುಲ್ಕವನ್ನು ವ್ಯಾಪಾರಿ ಕಡೆಯಿಂದ ವಿಧಿಸಲಾಗುತ್ತದೆ. ಆದ್ದರಿಂದ, ವ್ಯಾಪಾರಿಗಳು ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸಲು ಆಯ್ಕೆ ಮಾಡಬಹುದು ಅಥವಾ ಆಯ್ಕೆ ಮಾಡದಿರಬಹುದು.
ಪಿಪಿಐ ಎಂದರೇನು?
ಪ್ರಿಪೇಯ್ಡ್ ಪಾವತಿ ಸಾಧನಗಳಲ್ಲಿ ಮೊಬೈಲ್/ಪಾವತಿ ವಾಲೆಟ್‌ಗಳು (ಪೇಟಿಎಂ ವಾಲೆಟ್, ಅಮೆಜಾನ್ ಪೇ ವಾಲೆಟ್, ಫೋನ್‌ಪೇ ವಾಲೆಟ್), ಸ್ಮಾರ್ಟ್ ಕಾರ್ಡ್‌ಗಳು, ಸ್ಟ್ರೈಪ್ ಕಾರ್ಡ್‌ಗಳು, ಪೇಪರ್ ವೋಚರ್‌ಗಳು ಇತ್ಯಾದಿ. ಪಿಪಿಐ ಗಳನ್ನು ಬಳಸಿಕೊಂಡು ಯಾವುದೇ ವ್ಯಕ್ತಿ ನಗದು ಅಥವಾ ಕಾರ್ಡ್ ವಿನಿಮಯ ಇಲ್ಲದೆಯೇ ಹಣ ಕಳುಹಿಸಬಹುದು ಹಾಗೂ ಸ್ವೀಕರಿಸಬಹುದು.
ಕ್ಯಾಶ್‌ಫ್ರೀ ಪಾವತಿಗಳ ಸ್ಥಾಪಕ ಹಾಗೂ ಸಿಇಒ ಆಕಾಶ್ ಸಿನ್ಹಾ ತಿಳಿಸುವಂತೆ ಸಂಸ್ಥೆಯ ಹೊಸ ಮಾರ್ಗಸೂಚಿಗಳು ವ್ಯಾಲೆಟ್‌ಗಳ ಬಳಕೆಯನ್ನು ಗ್ರಾಹಕರಿಗೆ ಅನುಕೂಲಕರವಾಗಿಸುತ್ತದೆ ಅಂತೆಯೆ ಹೆಚ್ಚಿನ ಕಾರ್ಡ್‌ಗಳನ್ನು ತಮ್ಮೊಂದಿಗೆ ಕೊಂಡೊಯ್ಯವ ಕಷ್ಟವನ್ನು ನಿವಾರಿಸುತ್ತದೆ. ಇದರಿಂದ ಕಾರ್ಡ್ ಬಹಿರಂಗಪಡಿಸುವಿಕೆಯಿಂದ ಉಂಟಾಗುವ ಕಳ್ಳತನ ಹಾಗೂ ವಂಚನೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ.
ಪ್ರಸ್ತುತ ಯುಪಿಐ ವಹಿವಾಟುಗಳ ಶುಲ್ಕಗಳು
ಪ್ರಸ್ತುತ, ಯುಪಿಐ ಮೂಲಕ ಮಾಡಿದ ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಯುಪಿಐ ವಹಿವಾಟುಗಳಿಗೆ ಸರ್ಕಾರವು ಇಲ್ಲಿಯವರೆಗೆ ಶೂನ್ಯ ಶುಲ್ಕದ ಚೌಕಟ್ಟನ್ನು ಕಡ್ಡಾಯಗೊಳಿಸಿತ್ತು. ಅಂದರೆ ಬಳಕೆದಾರರು ಹಾಗೂ ವ್ಯಾಪಾರಿಗಳಿಗೆ ಯುಪಿಐ ವಹಿವಾಟುಗಳಲ್ಲಿ ಯಾವುದೇ ಶುಲ್ಕವಿರಲಿಲ್ಲ
ಇನ್ನಷ್ಟು ವಿವರಗಳು ಹೀಗಿವೆ
2,000 ಕ್ಕಿಂತ ಹೆಚ್ಚಿನ ವಹಿವಾಟುಗಳ ವೈಯಕ್ತಿಕ ಷೇರುಗಳು ಕಳೆದ ತಿಂಗಳ ಒಟ್ಟು ವಹಿವಾಟಿನ ಶೇಕಡಾ 5 ರಷ್ಟಿದೆ. ಇತ್ತೀಚಿನ ದಿನಗಳಲ್ಲಿ ಯುಪಿಐ ಡಿಜಿಟಲ್ ಪಾವತಿಯು ಉಚಿತ, ವೇಗದ ಹಾಗೂ ಸುರಕ್ಷಿತ ಅನುಭವವನ್ನು ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಒದಗಿಸುವ ಮೂಲಕ ಆದ್ಯತೆಯ ವಿಧಾನವಾಗಿ ಬಳಕೆಯಲ್ಲಿದೆ.
ಸಾಮಾನ್ಯವಾಗಿ ಯುಪಿಐ ವಹಿವಾಟುಗಳ ಮೂಲಕ ಪಾವತಿ ನಡೆಸಲು ಯಾವುದೇ ಯುಪಿಐ ಸಕ್ರಿಯಗೊಳಿಸಿದ ಅಪ್ಲಿಕೇಶನ್‌ನಲ್ಲಿ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕಾಗುತ್ತದೆ ಇದು ಒಟ್ಟು UPI ವಹಿವಾಟುಗಳಲ್ಲಿ 99.9% ಕೊಡುಗೆ ನೀಡುತ್ತದೆ. ಯುಪಿಐ ವಹಿವಾಟಿನ ಪ್ರಮಾಣವು 2017ರ ಜನವರಿಯಲ್ಲಿ 0.45 ಕೋಟಿಯಿಂದ ಈ ವರ್ಷದ ಜನವರಿಯಲ್ಲಿ 804 ಕೋಟಿಯಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಯುಪಿಐ ವಹಿವಾಟಿನ ಮೌಲ್ಯ ಕೇವಲ ₹1,700 ಕೋಟಿಯಿಂದ ₹12.98 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ