Explained: ಪ್ರಧಾನಿ ಮೋದಿ ಮನ್ ಕಿ ಬಾತ್​ನಲ್ಲಿ ಪ್ರಸ್ತಾಪಿಸಿದ ಅಂಜೂರದ ವಿಶೇಷತೆಯೇನು?

ಹಿಮಾಲಯದ ಹಣ್ಣಿನಿಂದ ತಯಾರಿಸಿದ ಜಾಮ್ ಮತ್ತು ಚಟ್ನಿಗಳನ್ನು ಉತ್ಪಾದಿಸುವ ಮೂಲಕ ಉದ್ಯೋಗ ಸೃಷ್ಟಿಸುತ್ತಿರುವ ಉತ್ತರಾಖಂಡದ ಆಡಳಿತವನ್ನು ಪ್ರಧಾನಿ ಮೋದಿ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಮನಸಾರೆ ಹೊಗಳಿದ್ದಾರೆ.

ಹಿಮಾಲಯದ ಅಂಜೂರ ಹಣ್ಣು

ಹಿಮಾಲಯದ ಅಂಜೂರ ಹಣ್ಣು

  • Share this:
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಸ್ಟ್ 28 ರಂದು ತಮ್ಮ 'ಮನ್ ಕಿ ಬಾತ್' (Mann Ki Baat) ರೇಡಿಯೋ ಕಾರ್ಯಕ್ರಮದಲ್ಲಿ ಪಿಥೋರಗಢದಲ್ಲಿ ಕಂಡುಬರುವ ‘ಬೀಡು’ ಹಣ್ಣಿನ (Fig Fruit) ಬಗ್ಗೆ ಪ್ರಸ್ತಾಪಿಸಿದರು. ಅವರು ಹಿಮಾಲಯದ ಹಣ್ಣಿನಿಂದ ತಯಾರಿಸಿದ ಜಾಮ್ ಮತ್ತು ಚಟ್ನಿಗಳನ್ನು ಉತ್ಪಾದಿಸುವ ಮೂಲಕ ಉದ್ಯೋಗ ಸೃಷ್ಟಿಸುತ್ತಿರುವ ಉತ್ತರಾಖಂಡದ ಆಡಳಿತವನ್ನು ಮನಸಾರೆ ಹೊಗಳಿದರು. ಹಾಗಿದ್ರೆ ಈ ಬೀಡು ಹಣ್ಣು ಯಾವುದು? ಇದಕ್ಕೆ ಸಾಮನ್ಯ ಅರ್ಥದಲ್ಲಿ ಏನ್‌ ಅಂತಾರೆ? ಇದರ ಹಿನ್ನೆಲೆ ಏನು? ಈ ಹಣ್ಣಿನ ಕುರಿತು ಪ್ರಧಾನಿ ಮೋದಿ ಏನ್‌ ಹೇಳಿದ್ದಾರೆ? ಈ ಹಣ್ಣಿನ ಆರೋಗ್ಯ ಪ್ರಯೋಜನಗಳೇನು (Health Benefits)? ಎಂಬೆಲ್ಲ ಸಂಪೂರ್ಣ ಮಾಹಿತಿಯನ್ನು ನಾವಿಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಈ ಬೀಡು ಹಣ್ಣು ಅಂದ್ರೆ ಯಾವ ಹಣ್ಣು?
ಈಗ ನಿಮಗೆ ಒಂದು ಸಂಶಯ ಬಂದಿರಬೇಕಲ್ವಾ. ಈ ಬೀಡು ಹಣ್ಣು ಹೇಗಿರುತ್ತೆ. ಇದ್ಕೆ ಸಾಮಾನ್ಯ ಭಾಷೆಯಲ್ಲಿ ಏನು ಅಂತ ಕರೆಯುತ್ತಾರೆ? ಎಂಬ ಪ್ರಶ್ನೆ ಕಾಡುತ್ತಿರುತ್ತೆ ಅಲ್ವಾ. ಮೊದಲ ಬಾರಿಗೆ ಬೀಡು ಹಣ್ಣು ಎಂದು ಕೇಳುವವರಿಗೆ, ಈ ಹೆಸರು ಸ್ವಲ್ಪ ಆಶ್ಚರ್ಯ ಆದರೂ ಸಹ ಇದರ ಸಾಮಾನ್ಯ ಹೆಸರು ʼಹಿಮಾಲಯದ ಅಂಜೂರʼ ಎಂದು ಕರೆಯಲಾಗುತ್ತದೆ.

ಹಿಮಾಲಯದ ಅಂಜೂರ ಹಣ್ಣಿನ ಹಿನ್ನೆಲೆ?
ಹಿಮಾಲಯ ಪ್ರದೇಶದಲ್ಲಿ ಒಂದಾಗಿರುವ ಉತ್ತರಾಖಂಡದಲ್ಲಿ ಈ ಬೀಡು ಹಣ್ಣನ್ನು ಹಿಮಾಲಯದ ಅಂಜೂರ ಎಂದು ಕರೆಯುತ್ತಾರೆ. ಈ ಅಂಜೂರ ಹಣ್ಣಿಗೆ, ಏಕೆ ಬೀಡು ಹಣ್ಣು ಎಂಬ ಹೆಸರು ಬಂದಿದೆ ಎಂಬುದರ ಬಗ್ಗೆ ಹುಡುಕಿದಾಗ ಗೊತ್ತಾಗುವ ವಿಷಯವೆಂದರೆ, ಹಿಮಾಲಯದ ಜನಪ್ರಿಯ ಜಾನಪದ ಗೀತೆಯಾಗಿರುವ ಕುಮವೋನಿ ಗೀತೆಯಲ್ಲಿ 'ಬೀಡು' ಎಂಬ ಪದವನ್ನು ಬಳಸಲಾಗಿದೆ. ಬೀಡು ಎಂದ್ರೆ ವರ್ಷವಿಡಿ ಬಿಡುವ ಅಂಜೂರ ಹಣ್ಣು ಎಂಬ ಅರ್ಥ ಬರುತ್ತದೆ. ಅದಕ್ಕೆ ಬೀಡು ಹಣ್ಣು ಎಂದು ಹಿಮಾಲಯದಲ್ಲಿ ಕರೆಯುತ್ತಾರೆ.

ಈ ಹಿಮಾಲಯದ ಅಂಜೂರ ಹಣ್ಣಿನ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದೇನು?
“ಉತ್ತರಾಖಂಡದಲ್ಲಿ ಅನೇಕ ರೀತಿಯ ಔಷಧ ಸಸ್ಯಗಳು ಮತ್ತು ಇತರ ಹಣ್ಣಿನ ಮರಗಳು ಕಂಡುಬರುತ್ತವೆ. ಇವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಅವುಗಳಲ್ಲಿ ಒಂದು ಹಣ್ಣು ಬೀಡು ಹಣ್ಣು. ಇದನ್ನು ಹಿಮಾಲಯನ್ ಫಿಗ್ ಅಥವಾ ಹಿಮಾಲಯದ ಅಂಜೂರ ಎಂದೂ ಕರೆಯುತ್ತಾರೆ. ಈ ಹಣ್ಣಿನಲ್ಲಿ ಖನಿಜಾಂಶಗಳು ಮತ್ತು ವಿಟಮಿನ್‌ಗಳು ಸಮೃದ್ಧವಾಗಿ ಕಂಡುಬರುತ್ತವೆ.

ಇದನ್ನೂ ಓದಿ:Skin Care: ಮೊಡವೆ, ಚರ್ಮದ ಸಮಸ್ಯೆ ಹೆಚ್ಚಿಸುತ್ತೆ ಹುಳಿ ಪದಾರ್ಥ ಸೇವನೆ!

ಈ ಹಣ್ಣನ್ನು ಜನರು ಹಾಗೆಯೇ ಸೇವಿಸುತ್ತಾರೆ. ಆದರೆ ಈ ಹಣ್ಣನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಈ ಹಣ್ಣಿನ ಈ ಗುಣಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಈಗ ಉತ್ತರಾಖಂಡದಲ್ಲಿ ಬೀಡು ಜ್ಯೂಸ್, ಜಾಮ್, ಚಟ್ನಿ, ಉಪ್ಪಿನಕಾಯಿ ಮತ್ತು ಒಣ ಹಣ್ಣುಗಳನ್ನು ತಯಾರಿಸಿ ಮಾರುಕಟ್ಟೆಗೆ ತರಲಾಗುತ್ತಿದೆ. ಇದರಿಂದ ಈ ಬೀಡು ಹಣ್ಣಿನಿಂದ ಆರೋಗ್ಯ ಮಾತ್ರ ಅಲ್ಲದೇ, ಉದ್ಯೋಗ ಸೃಷ್ಟಿ ಕೂಡ ಆಗುತ್ತಿದೆ” ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ತಿಳಿಸಿದ್ದಾರೆ.

ಮೋದಿ ಸೆಪ್ಟಂಬರ್‌ ತಿಂಗಳನ್ನು ಯಾವುದಕ್ಕೆ ಸಮರ್ಪಿಸಿದ್ದಾರೆ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟಂಬರ್‌ ತಿಂಗಳ ಕುರಿತಂತೆ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ “ಈ ತಿಂಗಳು ಅನೇಕ ಹಬ್ಬಗಳ ಮಹಾಪೂರವೇ ನಡೆಯುತ್ತದೆ. ಆ ಹಬ್ಭಗಳನ್ನು ಬಿಟ್ಟು ಈ ತಿಂಗಳನ್ನು ಪೌಷ್ಠಿಕಾಂಶಕ್ಕೆ ಸಂಬಂಧಿಸಿದ ಮಹಾ ಅಭಿಯಾನಕ್ಕೆ ಸಮರ್ಪಿಸಲಾಗಿದೆ. ಈ ಹೋರಾಟದಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮತ್ತು ಇದರ ಕುರಿತು ಭಾರತಾದ್ಯಂತ ಸಾಮಾಜಿಕ ಜಾಗೃತಿಯನ್ನು ಹರಡಲು ಜನರು ಪ್ರಯತ್ನಿಸಬೇಕು" ಎಂದು ಮೋದಿ ಒತ್ತಾಯಿಸಿದರು. "ನಾವು ಸೆಪ್ಟೆಂಬರ್ 1 ರಿಂದ 30 ರ ಅವಧಿಯನ್ನು ‘ಪೋಷಣ್ ಮಾಹ್’ ಅಥವಾ ʼಪೌಷ್ಟಿಕಾಂಶದ ತಿಂಗಳುʼ ಎಂದು ಆಚರಣೆ ಮಾಡಲಿದ್ದೇವೆ. ಅದಕ್ಕಾಗಿ ನೀವು ಪೌಷ್ಠಿಕಾಂಶಗಳ ಆಹಾರ ಸೇವಿಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ ”ಎಂದು ಪ್ರಧಾನಿ ಹೇಳಿದರು.

ಹಾಗಿದ್ರೆ ಈ ಹಿಮಾಲಯದ ಅಂಜೂರದ ಹಣ್ಣಿನ ಆರೋಗ್ಯ ಪ್ರಯೋಜನಗಳೇನು?
ಉತ್ತರಾಖಂಡದ ಹಿಮಾಲಯದ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಹಣ್ಣು ಮೆದುಳಿನ ಅಸ್ವಸ್ಥತೆಗಳು, ಶ್ವಾಸಕೋಶದ ಕಾಯಿಲೆಗಳು, ಮೂತ್ರದ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮತ್ತು ರಕ್ತವನ್ನು ಶುದ್ಧೀಕರಿಸುವಂತಹ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

  • ಉತ್ತಮ ಪೋಷಕಾಂಶಗಳಿವೆ: ಅಂಜೂರ ಹಣ್ಣು ಅತ್ಯುತ್ತಮ ಪೋಷಕಾಂಶಗಳಿಂದ ಕೂಡಿದೆ. ಇದರ ಬಳಕೆಯು ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಹಾಗೆಯೇ ಇತರ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ರಕ್ತದಲ್ಲಿ ಸಕ್ಕರೆ ಹೆಚ್ಚಾದಾಗ ಅಂಜೂರ ಇನ್ಸುಲಿನ್ ಆಗಿ ಕಾರ್ಯನಿರ್ವಹಿಸುತ್ತದೆ.

  • ದೇಹದ ತ್ವಚೆಗೆ ಒಳ್ಳೆಯದು: ಆಯುರ್ವೇದದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಅಂಜೂರದಲ್ಲಿ ಪೊಟ್ಯಾಸಿಯಮ್, ಖನಿಜ ಮತ್ತು ಜೀವಸತ್ವಗಳು ತುಂಬಿವೆ. ಇದು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲ, ನಿಮ್ಮ ಚರ್ಮಕ್ಕೂ ತುಂಬಾ ಪ್ರಯೋಜನಕಾರಿ. ಕೆಂಪು ಅಂಜೂರದ ಹಾಲನ್ನು ಸೇವಿಸುವುದರಿಂದ ಮಧುಮೇಹಕ್ಕೆ ಪರಿಹಾರ ಸಿಗುತ್ತದೆ.

  • ಮೂಳೆಗಳನ್ನು ಬಲಪಡಿಸುತ್ತದೆ: ಅಂಜೂರ ಅನೇಕ ರೀತಿಯಲ್ಲಿ ದೇಹಕ್ಕೆ ಪ್ರಯೋಜನಕಾರಿ. ಇದರಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅಂಶ ಇರುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಹಾಗೆಯೇ ಸ್ನಾಯು ದೌರ್ಬಲ್ಯವನ್ನು ದೂರ ಮಾಡುತ್ತದೆ.

  • ಮೊಡವೆಗೆ ಮನೆಮದ್ದು: ಮೊಡವೆ ಸಮಸ್ಯೆಗಳಿಂದ ಬಳಲುತ್ತಿರುವವರು ಅಂಜೂರದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ, ಒಣಗಿದ ಅಂಜೂರವನ್ನು ಪುಡಿ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಇದನ್ನು 15 ರಿಂದ 20 ನಿಮಿಷಗಳ ಕಾಲ ಮುಖದ ಮೇಲೆ ಬಿಡಿ, ನಂತರ ನೀರಿನಿಂದ ತೊಳೆಯಿರಿ.

  • ಮೂತ್ರ ವಿಜರ್ಸನೆ ಸಮಸ್ಯೆ: ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಇದು ಪ್ರಯೋಜನಕಾರಿಯಾಗಿದೆ. ಈ ಕಾರಣದಿಂದಾಗಿ ಇದು ದೇಹದ ವಿಷವನ್ನು ಹೊರಹಾಕುತ್ತದೆ.

  • ಮಲಬದ್ಧತೆ ಸಮಸ್ಯೆ: ನಿಯಮಿತವಾಗಿ ಜೇನುತುಪ್ಪದೊಂದಿಗೆ ಎರಡು ಮೂರು ಅಂಜೂರದ ಹಣ್ಣುಗಳನ್ನು ಸೇವಿಸಿ. ಇದು ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಯನ್ನು ತೊಡೆದುಹಾಕುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಸಹ ಬಲವಾಗಿರುತ್ತದೆ.


ಇದನ್ನೂ ಓದಿ:  Kumkum Bhindi: ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ ಸೂಪರ್ ಫುಡ್ ಈ ಕುಂಕುಮ್ ಭಿಂಡಿ!

ಈ ಹಣ್ಣಿನ ಕುರಿತು ಪಿಥೋರಗಢ್‌ ಡಿಎಂ ಆಶಿಶ್‌ ಚೌಹಾಣ್‌ ಅವರೇನು ಹೇಳ್ತಾರೆ?
ಇದರ ಕುರಿತು “ಬೀಡು ಹಣ್ಣು ಅಂಜೂರದ ಒಂದು ಬಗೆಯ ಹಣ್ಣಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಉತ್ತರಾಖಂಡದ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಹೇಳುವ ವಿಶೇಷ ಹಣ್ಣಾಗಿದೆ. ನಾವು ಈ ಹಣ್ಣಿನ ವಿವಿಧ ಉತ್ಪನ್ನಗಳನ್ನು ವಾಣಿಜ್ಯ ಮಟ್ಟದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಇದು ಸ್ಥಳೀಯ ಜನರಿಗೆ ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಇದು ಭಾರತದ ಜನರಿಗೆ ರಾಜ್ಯದ ನೈಸರ್ಗಿಕ ಸಮೃದ್ಧಿ, ಸಂಸ್ಕೃತಿ ಮತ್ತು ಸಂಪ್ರದಾಯದ ವಿವಿಧ ಉತ್ಪನ್ನಗಳ ರುಚಿ ನೋಡಲು ಸಹಾಯ ಮಾಡುತ್ತದೆ” ಎಂದು ಪಿಥೋರಗಢ್ ಡಿಎಂ ಆಶಿಶ್ ಚೌಹಾಣ್ ಅವರು ಸುದ್ದಿ ವೆಬ್‌ಸೈಟ್ ಆಗಿರುವ ʼದಿ ನ್ಯೂ ಇಂಡಿಯನ್‌ʼ ಗೆ ತಿಳಿಸಿದ್ದಾರೆ.

ಈ ಹಣ್ಣಿನ ಬಗ್ಗೆ ಒಂದಿಷ್ಟು ವಿಶೇಷತೆಗಳು:
ಈ ಹಣ್ಣಿನ ಮರವು ಪೂರ್ಣವಾಗಿ ಬೆಳೆದು ಹಣ್ಣನ್ನು ಬಿಡುವಾಗ ಇದು ಒಂದು ಸೀಸನ್‌ಗೆ ಸುಮಾರು 25 ಕೆ.ಜಿ ಯಷ್ಟು ಅಂಜೂರದ ಹಣ್ಣುಗಳನ್ನು ಉತ್ಪಾದನೆ ಮಾಡುತ್ತದೆ. ಸಾಮಾನ್ಯವಾಗಿ ಕಪ್ಪು ಮತ್ತು ನೇರಳೆ ಬಣ್ಣದಲ್ಲಿ ಮಾಗಿದ ಅಂಜೂರದ ಹಣ್ಣುಗಳನ್ನು ನಾವು ನೋಡಬಹುದು. ಅಂತಹ ಹಣ್ಣುಗಳನ್ನೆ ಸೇವಿಸಲಾಗುತ್ತದೆ. ಇದನ್ನು ಚಟ್ನಿ, ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಈ ಹಣ್ಣು ನೈಸರ್ಗಿಕ ನೋವು ನಿವಾರಕ ಹಣ್ಣೆ? ಸಂಶೋಧನೆಗಳು ಏನ್‌ ಹೇಳ್ತಿವೆ?
ಈ ಹಣ್ಣಿನ ಮೇಲೆ ಅನೇಕ ಸಂಶೋಧನೆಗಳು ನಡೆದಿವೆ. ಅದರಲ್ಲಿ ಪ್ರಮುಖವಾಗಿ ಪ್ರಯೋಗಾಲಯದ ಇಲಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಆಸ್ಪಿರಿನ್ ಮತ್ತು ಡಿಕ್ಲೋಫೆನಾಕ್‌ನಂತಹ ಸಂಶ್ಲೇಷಿತ ನೋವು ನಿವಾರಕಗಳಿಗೆ ಸುರಕ್ಷಿತ ಮಾರ್ಗವೆಂದರೆ ಪರ್ಯಾಯವಾಗಿ ಕಾಡು ಹಿಮಾಲಯದ ಅಂಜೂರವನ್ನು ಬಳಸಬಹುದು ಎಂದು ಈ ಸಂಶೋಧನಾ ಅಧ್ಯಯನಗಳಿಂದ ತಿಳಿದು ಬಂದಿದೆ.

ವೈಜ್ಞಾನಿಕವಾಗಿ 'ಫಿಕಸ್ ಪಾಲ್ಮಾಟಾ' ಎಂದು ಕರೆಯಲ್ಪಡುವ ಕಾಡು ಹಿಮಾಲಯದ ಅಂಜೂರವು ಎರಡು ಪ್ರಮುಖ ಘಟಕಾಂಶಗಳಾದ ಪ್ಸೊರಾಲೆನ್ ಮತ್ತು ರುಟಿನ್ ಅನ್ನು ಒಳಗೊಂಡಿದೆ ಎಂದು ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಅಂತರರಾಷ್ಟ್ರೀಯ ಸಂಶೋಧಕರ ತಂಡ ಹೇಳಿದೆ. ಕಾಡು ಹಿಮಾಲಯದ ಅಂಜೂರವು ಸಾಮಾನ್ಯವಾಗಿ ವಿವಿಧ ಪ್ರಮಾಣದಲ್ಲಿ ಮತ್ತು ನಿರ್ದಿಷ್ಟವಾಗಿ ಪ್ರತಿ ಕಿಲೋ ಗ್ರಾಂಗೆ 400 ಮಿಲಿಗ್ರಾಂಗಳಷ್ಟು ನೋವು ನಿವಾರಕ ಅಂಶಗಳನ್ನು ಹೊಂದಿದೆ ಎಂದು ಅವರ ಅಧ್ಯಯನವು ತಿರ್ಮಾನ ಪಟ್ಟಿದೆ.

ಇದನ್ನೂ ಓದಿ:  Matta Rice: ಶುಗರ್ ಸಮಸ್ಯೆ ಇರೋರಿಗೆ ಬೆಸ್ಟ್​ ಫುಡ್​ ಇದು, ಕೆಂಪು ಮಟ್ಟಾ ರೈಸ್ ಬಗ್ಗೆ ಕೇಳಿದ್ದೀರೇನು?

"ಆಸ್ಪಿರಿನ್ ಮತ್ತು ಡಿಕ್ಲೋಫೆನಾಕ್‌ನಂತಹ ಸಂಶ್ಲೇಷಿತ ನೋವು ನಿವಾರಕಗಳಿಗೆ ಕಾಡು ಹಿಮಾಲಯದ ಅಂಜೂರ ಎಂದು ಕರೆಯುವ ಬೀಡು ಹಣ್ಣು ಅತ್ಯುತ್ತಮ ಮತ್ತು ಸುರಕ್ಷಿತ ನೈಸರ್ಗಿಕ ನೋವು ನಿವಾರಕ ಸಸ್ಯವಾಗಿದೆ. ಇದು ಪರ್ಯಾಯ ನೋವು ನಿವಾರಕ ಆಗಿದೆ” ಎಂದು ಸಂಶೋಧನಾ ಅಧ್ಯಯನದ ನೇತೃತ್ವ ವಹಿಸಿದ್ದ ಎಲ್‌ಪಿಯು ನ ಸಹಾಯಕ ಪ್ರಾಧ್ಯಾಪಕ ದೇವೇಶ್ ತಿವಾರಿ ಪಿಟಿಐಗೆ ತಿಳಿಸಿದರು.

ಕೊನೆಯ ಮಾತು: ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಅಂಜೂರದ ಹಣ್ಣುಗಳನ್ನು ಸೇವಿಸಬಹುದು ಹಾಗಾಗಿ ಅಂಜೂರದ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಹಣ್ಣುಗಳು ಮಾನವನ ದೇಹದಲ್ಲಿ ರಕ್ತದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ಈ ಹಣ್ಣನ್ನು ಹೆಚ್ಚು ಸೇವಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ. ಹಾಗೆಯೇ ಈ ಹಣ್ಣಿನ ಉತ್ಪನ್ನಗಳನ್ನು ಕೊಂಡುಕೊಂಡು ಸೇವಿಸಿ, ಇದರಿಂದ ಉತ್ತರಾಖಂಡದ ಜನರಿಗೆ ಇದರ ಲಾಭ ಕೂಡ ಸಿಗುತ್ತದೆ.
Published by:Ashwini Prabhu
First published: