ಸರ್ಚ್ ಇಂಜಿನ್ ದೈತ್ಯ ಗೂಗಲ್ (Google) ಭಾರತದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿದ್ದು, ದೇಶಾದ್ಯಂತ ತನ್ನ ಕಚೇರಿಗಳಲ್ಲಿ ಸುಮಾರು 450 ಕಾರ್ಮಿಕರಿಗೆ ಪಿಂಕ್ ಸ್ಲಿಪ್‌ಗಳನ್ನು ಹಸ್ತಾಂತರಿಸಿದೆ ಎಂದು ವರದಿಯಾಗಿದೆ. ವಜಾಗೊಳಿಸುವಿಕೆಗೆ ಒಳಗಾಗಿರುವ ಉದ್ಯೋಗಿಗಳಿಗೆ (Employee) ಕಂಪನಿಯು ಇಮೇಲ್‌ಗಳನ್ನು ಕಳುಹಿಸಿದ್ದು ಲೇ-ಆಫ್ (Layoof) ಪ್ರಕ್ರಿಯೆಯು ಸಂಸ್ಥೆಯ ಮಾರಾಟ, ಮಾರ್ಕೆಟಿಂಗ್ ಹಾಗೂ ಪಾರ್ಟ್‌ನರ್‌ಶಿಪ್‌ನಂತಹ ವಿವಿಧ ವಿಭಾಗಗಳ ಉದ್ಯೋಗಿಗಳ ಮೇಲೆ ಪ್ರಭಾವ ಬೀರಿದೆ ಎಂಬುದು ವರದಿಯಾಗಿದೆ.
ಉದ್ಯೋಗಿ ವಜಾ: ಆರ್ಥಿಕ ಹೊರೆ ನಿಯಂತ್ರಣಕ್ಕೆ ಕಂಡುಕೊಂಡ ದಾರಿ
ಗೂಗಲ್‌ನ ಮೂಲ ಕಂಪನಿಯಾದ ಆಲ್ಫಾಬೆಟ್ ಇಂಕ್ ಕಳೆದ ತಿಂಗಳು 12.000 ಉದ್ಯೋಗಗಳನ್ನು ಅಥವಾ ತನ್ನ ಒಟ್ಟು ಉದ್ಯೋಗಿಗಳಲ್ಲಿ 6% ಕಡಿತವನ್ನು ಘೋಷಿಸಿದ ನಂತರ ಈ ಕ್ರಮ ಜಾರಿಯಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾದಾಗ ಅದಕ್ಕೆ ತಕ್ಕಂತೆ ಉದ್ಯೋಗಿಗಳನ್ನು ಸಂಸ್ಥೆ ನೇಮಿಸಿಕೊಂಡಿದ್ದು ಇದೀಗ ಆರ್ಥಿಕ ಹೊರೆಯನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಉದ್ಯೋಗಿಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.
ಸಾಂಕ್ರಾಮಿಕದ ನಂತರವೂ ಹೆಚ್ಚಿನ ಜನರು ಆನ್‌ಲೈನ್‌ನಲ್ಲಿಯೇ ಹೆಚ್ಚು ಇರಲಿದ್ದಾರೆ ಎಂಬ ಊಹೆಯಿಂದ ಅದೆಷ್ಟೋ ಟೆಕ್ ಸಂಸ್ಥೆಗಳು ಹೆಚ್ಚಿನ ನೇಮಕಾತಿಯನ್ನು ನಡೆಸಿತ್ತು. ಹಾಗಾಗಿ ಪ್ರಸ್ತುತ ಕಂಪನಿಗಳು ಹೆಚ್ಚಿನ ನೇಮಕಾತಿ ಪ್ರಮಾಣವನ್ನು ತಡೆದುಕೊಳ್ಳಲಾಗದೇ ಉದ್ಯೋಗಿಗಳನ್ನು ವರ್ಜಿಸುತ್ತಿದೆ ಹಾಗೂ ತಮ್ಮ ಯೋಜನೆ ತಲೆಕೆಳಗಾದ ನಿಟ್ಟಿನಲ್ಲಿ ಆರ್ಥಿಕ ಸಂಕಷ್ಟದ ನೆಪವೊಡ್ಡಿ ಕಂಪನಿಯ ಕಾರ್ಮಿಕರ ಸಂಖ್ಯೆಯನ್ನು ಇಳಿಮುಖಗೊಳಿಸುವತ್ತ ಮುಖಮಾಡಿದೆ.
ತಲೆಕೆಳಗಾದ ಟೆಕ್ ಕಂಪನಿಗಳ ಲೆಕ್ಕಾಚಾರ
ಸಾಂಕ್ರಾಮಿಕದ ನಂತರ ಎಷ್ಟೇ ಹೊಸತನ ಟ್ರೆಂಡ್‌ಗಳು ಬಂದಿದ್ದರೂ ಜನಜೀವನ ಸಾಮಾನ್ಯವಾಗುತ್ತಿದ್ದಂತೆ ಹಿಂದಿನ ಸ್ಥಿತಿಗೆ ಪ್ರತಿಯೊಬ್ಬರು ಮರಳುತ್ತಿದ್ದಾರೆ ಹಾಗೂ ನ್ಯೂ ನಾರ್ಮಲ್ ಸಿದ್ಧಾಂತದೊಂದಿಗೆ ಜೀವಿಸುತ್ತಿರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಇದರ ನಡುವೆಯೇ ಮೈಕ್ರೊಬ್ಲಾಗಿಂಗ್ ತಾಣ ಟ್ವಿಟರ್ ಕೂಡ ಎಲೋನ್ ಮಸ್ಕ್ ಆಡಳಿತದಲ್ಲಿ 90% ದಷ್ಟು ಲೇ-ಆಫ್‌ಗೆ ಕರೆನೀಡಿದ್ದು ಭಾರತದಲ್ಲಿದ್ದ ಮೂರು ಕಚೇರಿಗಳಲ್ಲಿ ಎರಡು ಕಚೇರಿಗಳಿಗೆ ಬೀಗ ಜಡಿದಿದೆ.
ಸತ್ಯದ ಮನವರಿಕೆ ಮಾಡಿಕೊಂಡ ಟೆಕ್ ಕಂಪನಿಗಳು
ಟೆಕ್ ತಾಣಗಳ ಉದ್ಯೋಗಿ ವಜಾಗೊಳಿಸುವಿಕೆಯತ್ತ ಗಮನ ಹರಿಸುವುದಾದರೆ ಆಲ್ಫಾಬೆಟ್ ತನ್ನ ಜಾಗತಿಕ ಉದ್ಯೋಗಿಗಳ ಶೇಕಡಾ 6 ರಷ್ಟು 12,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳ ಶೇಕಡಾ 5 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದು ಇದು ಸುಮಾರು 10,000 ಉದ್ಯೋಗಿಗಳ ಮೇಲೆ ಪ್ರಭಾವ ಬೀರಲಿದೆ. ಅದಕ್ಕೂ ಮೊದಲು, ಅಮೆಜಾನ್ ಸುಮಾರು 18,000 ಉದ್ಯೋಗಿಗಳನ್ನು ತೆಗೆದುಹಾಕುವುದಾಗಿ ಹೇಳಿದ್ದು ಇದು ಮೂಲತಃ ಅಂದಾಜಿಸುವುದಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಸೇಲ್ಸ್‌ಫೋರ್ಸ್ ತನ್ನ ಶೇಕಡಾ 10 ರಷ್ಟು ಉದ್ಯೋಗಿಗಳನ್ನು, ಸರಿಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಮತ್ತು ಪುನರ್ರಚನಾ ಯೋಜನೆಯ ಭಾಗವಾಗಿ ಕೆಲವು ಕಚೇರಿಗಳನ್ನು ಮುಚ್ಚುವುದಾಗಿ ಘೋಷಿಸಿತು.
ಹಾಗಿದ್ದರೆ ಟೆಕ್ ಕಂಪನಿಗಳು ಮೇಲಿಂದ ಮೇಲೆ ಉದ್ಯೋಗಿಗಳನ್ನು ವಜಾಗೊಳಿಸುವ ಕ್ರಮಕ್ಕೆ ಮುಂದಾಗಲೂ ಕಾರಣವೇನು ಎಂಬುದನ್ನು ಅರಿತುಕೊಳ್ಳಲು ಸಾಂಕ್ರಾಮಿಕದ ಸಮಯಕ್ಕೆ ಪ್ರಯಾಣಿಸಬೇಕಾಗುತ್ತದೆ. ಸಾಂಕ್ರಾಮಿಕ ರೋಗದಂತಹ ಪರಿಸ್ಥಿತಿಗಳಲ್ಲಿ ಅಮೆಜಾನ್‌ನಂತಹ ಹಲವಾರು ಇ-ಕಾಮರ್ಸ್ ತಾಣಗಳನ್ನು ಹೆಚ್ಚಿನ ಜನರು ಅವಲಂಬಿಸಿದ್ದರು. ಆನ್‌ಲೈನ್ ಮೀಟಿಂಗ್, ಜೂಮ್ ಮೀಟಿಂಗ್, ಆನ್‌ಲೈನ್ ಶಾಪಿಂಗ್ ಹೀಗೆ ಟೆಕ್ ಸಂಸ್ಥೆಗಳು ಹಿಂದೆಂದೂ ಕಂಡಿರದ ದಾಖಲೆಯ ಆದಾಯವನ್ನು ಕಂಡವು.
ಸಾಂಕ್ರಾಮಿಕದ ಸಮಯದಲ್ಲಿ ಮಿತಿಮೀರಿದ್ದ ಬೇಡಿಕೆ
ಈ ಸಂದರ್ಭದಲ್ಲಿ ನುರಿತ ವೃತ್ತಿಪರರ ಅಗತ್ಯತೆ ಸಂಸ್ಥೆಗಳಿಗೆ ಅನಿವಾರ್ಯವಾಯಿತು ಅದಕ್ಕನುಗುಣವಾಗಿ ಸಿಬ್ಬಂದಿಗಳ ನೇಮಕಾತಿ ಕೂಡ ನಡೆಯಿತು. ಟೆಕ್ ದೈತ್ಯರು ಹಾಗೂ ಹಲವಾರು ಸ್ಟಾರ್ಟಪ್ ಸಂಸ್ಥೆಗಳು ಪ್ರತಿಭಾವಂತರನ್ನು ಆಕರ್ಷಿಸಲು ತೀವ್ರ ಸ್ಪರ್ಧೆಯನ್ನು ಹುಟ್ಟುಹಾಕಿದವು. ಉದ್ಯೋಗಿಗಳನ್ನು ಆಕರ್ಷಿಸಲೆಂದೇ ಅದೆಷ್ಟೋ ಕೊಡುಗೆಗಳನ್ನು ನೀಡಿದವು. ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ ಉದ್ಯೋಗಿಗಳಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಿದವು.
ನಂತರ, ಸ್ಟಾರ್ಟಪ್‌ಗಳಿಗೆ ಹೇರಳವಾದ ಬಂಡವಾಳದ ಲಭ್ಯತೆ ಕಂಡುಬಂದಿತು, ತಮ್ಮ ಸಂಸ್ಥೆಗಳು ನುರಿತ ಪ್ರತಿಭೆಗಳಿಗಾಗಿ ದೊಡ್ಡ ಜಾಗತಿಕ ಟೆಕ್ ಕಂಪನಿಗಳನ್ನು ಮೀರಿಸಬಹುದೆಂದು ಖಚಿತಪಡಿಸಿಕೊಳ್ಳಲು ಹಣವನ್ನು ಬಳಸಿದರು. 2022 ರಲ್ಲಿ ಸಾಂಕ್ರಾಮಿಕ ರೋಗ ನಿಧಾನಕ್ಕೆ ಕಡಿಮೆಯಾಗತೊಡಗಿತು. ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿತು ಮತ್ತು ಪ್ರಪಂಚದಾದ್ಯಂತದ ಕೇಂದ್ರ ಬ್ಯಾಂಕುಗಳು ಸನ್ನಿಹಿತ ಆರ್ಥಿಕ ಹಿಂಜರಿತದ ಬಗ್ಗೆ ಎಚ್ಚರಿಕೆಯನ್ನು ನೀಡಲಾರಂಭಿಸಿದವು.
ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು
ಜನರು ಆನ್‌ಲೈನ್‌ನಲ್ಲೇ ಹೆಚ್ಚು ಕಾಲಕಳೆಯಲಿದ್ದಾರೆ ಎಂಬ ಕಂಪನಿಗಳ ಲೆಕ್ಕಾಚಾರ ತಲೆಕೆಳಗಾಯಿತು. ಯೋಚಿಸಿದ್ದೇ ಬೇರೆ ನಡೆದದ್ದೇ ಬೇರೆ ಎಂಬಂತಹ ಪರಿಸ್ಥಿತಿ ನಿರ್ಮಾಣವಾಯಿತು. ಹಾಕಿದ ಬಂಡವಾಳ ನಷ್ಟವಾಯಿತೇ ಹೊರತು ಯಾವುದೇ ಲಾಭ ಹುಟ್ಟಲಿಲ್ಲ.
ಗೂಗಲ್ 12,000 ಉದ್ಯೋಗಿಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತುಹಾಕುವ ನಿರ್ಧಾರ ಕೈಗೊಂಡಾಗ ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ತಮ್ಮ ಬ್ಲಾಗ್‌ನಲ್ಲಿ ನಡೆದ ತಪ್ಪಿನ ವಿಷದೀಕರಣವನ್ನು ನೀಡಿದ್ದಾರೆ. ಕಳೆದೆರಡು ವರ್ಷಗಳಲ್ಲಿ ನಾಟಕೀಯ ಬೆಳವಣಿಗೆಗೆ ಕಾರಣವಾದ ಅಂಶಗಳು ಈಗಿಲ್ಲ. ಆಗ ಪರಿಸ್ಥಿತಿ ಬೇರೆ ಇತ್ತು ಹಾಗಾಗಿ ಹೆಚ್ಚಿನ ಉದ್ಯೋಗಿಗಳ ಅಗತ್ಯವಿತ್ತು ಆದರೀಗ ಆ ಪರಿಸ್ಥಿತಿಗಿಂತ ಭಿನ್ನವಾದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಉದ್ಯೋಗಿಗಳನ್ನು ವಜಾಗೊಳಿಸುವುದೇ ಮುಂದಿರುವ ದಾರಿ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಕೆಲವೇ ತಿಂಗಳುಗಳ ಮೊದಲು, ಆಲ್ಫಾಬೆಟ್ ತನ್ನ ಮೂರನೇ ಹಣಕಾಸು ತ್ರೈಮಾಸಿಕದಲ್ಲಿ ನಿರೀಕ್ಷಿತಕ್ಕಿಂತ ಕಡಿಮೆ ಸಂಖ್ಯೆಯನ್ನು ಪೋಸ್ಟ್ ಮಾಡಿತು, ಅಲ್ಲಿ ಅದು ಆದಾಯ ಮತ್ತು ಲಾಭದ ನಿರೀಕ್ಷೆಗಳೆರಡರಲ್ಲೂ ನಷ್ಟವನ್ನೇ ದಾಖಲಿಸಿತ್ತು.
ಭಾರತದ ಸ್ಟಾರ್ಟಪ್‌ಗಳಲ್ಲಿ ಹೆಚ್ಚುತ್ತಲೇ ಇರುವ ನಷ್ಟ
ಭಾರತದ ಸ್ಟಾರ್ಟಪ್‌ಗಳಿಗೆ, 2023 - 2022 ರಲ್ಲಿ ಪ್ರಾರಂಭವಾದ ಒಂದು ವರ್ಷದ ಅವಧಿಯ ಫಂಡಿಂಗ್ ವಿಸ್ತರಣೆಯಾಗಿದೆ. ದೇಶದ ಎಜ್ಯುಟೆಕ್ ಹಾಗೂ ಇ-ಕಾಮರ್ಸ್‌ನಂತಹ ವಲಯಗಳಲ್ಲಿನ 20,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ 2022 ರಲ್ಲಿ ಪಿಂಕ್ ಸ್ಲಿಪ್‌ಗಳನ್ನು ನೀಡಲಾಯಿತು. ವರ್ಷದ ಹಿಂದೆ ಮಾರುಕಟ್ಟೆಯಲ್ಲಿ ದೊಡ್ಡ ಮೊತ್ತದ ಬಂಡವಾಳವನ್ನು ಹಿಂತೆಗೆದುಕೊಂಡಿತು.
ಅದಾಗಲೇ 2023 ರಲ್ಲಿ ಸ್ವಿಗ್ಗಿಯಂತಹ ಸ್ಟಾರ್ಟಪ್‌ಗಳು $10 ಶತಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಸಂಸ್ಥೆಯಾಗಿ ಮಾರ್ಪಟ್ಟಿದ್ದರೂ ಇತ್ತೀಚೆಗೆ 380 ಉದ್ಯೋಗಿಗಳನ್ನು ವಜಾಗೊಳಿಸಿದೆ ಹಾಗೂ Google ಬೆಂಬಲಿತ ಶೇರ್‌ಚಾಟ್ ತನ್ನ ಉದ್ಯೋಗಿಗಳಲ್ಲಿ 20 ಪ್ರತಿಶತ ಅಥವಾ ಸುಮಾರು 400 ಜನರನ್ನು ವಜಾಗೊಳಿಸಿದೆ. ಓಲಾ ಈಗಾಗಲೇ 2,000 ಕ್ಕೂ ಹೆಚ್ಚು ಕಾರ್ಮಿಕರನ್ನು ವಜಾಗೊಳಿಸಿದ್ದು ಇದಕ್ಕೆ ಹೊಸ ಸಂಖ್ಯೆಯಂತೆ 200 ಉದ್ಯೋಗಿಗಳನ್ನು ಪುನಃ ವಜಾಗೊಳಿಸಿದೆ.
ನಾವು ನಮ್ಮ ಕಾರ್ಯಕ್ಷಮತೆಯ ಚಕ್ರವನ್ನು ಅಕ್ಟೋಬರ್‌ನಲ್ಲಿ ಮುಕ್ತಾಯಗೊಳಿಸಿದ್ದೇವೆ ಮತ್ತು ಎಲ್ಲಾ ಹಂತಗಳಲ್ಲಿ ರೇಟಿಂಗ್‌ಗಳು ಮತ್ತು ಪ್ರಚಾರಗಳನ್ನು ಘೋಷಿಸಿದ್ದೇವೆ. ಕಾರ್ಯಕ್ಷಮತೆಯ ಆಧಾರದ ಮೇಲೆ ಲಾಭ ನಷ್ಟವನ್ನು ಅಳೆಯುತ್ತೇವೆ ಎಂದು ಸ್ವಿಗ್ಗಿ ವಕ್ತಾರರು ತಿಳಿಸಿದ್ದಾರೆ. ಆರ್ಥಿಕ ವರ್ಷ 23 ರಲ್ಲಿ ಸ್ವಿಗ್ಗಿಯು ಜೊಮಾಟೊಗಿಂತ ಆರು ಪಟ್ಟು ಹೆಚ್ಚು ನಷ್ಟವನ್ನು ದಾಖಲಿಸಿದೆ ಎಂದು ವರದಿ ನೀಡಿದ ಬೆನ್ನಲ್ಲೇ ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ.
ಶೇರ್‌ಚಾಟ್ ಹಾಗೂ ಮೋಜ್ ಕಿರುವಿಡಿಯೋ ಆ್ಯಪ್‌ಗಳು ಕೂಡ ಎದುರಿಸಲಾರದ ನಷ್ಟವನ್ನು ಅನುಭವಿಸಿರುವುದಾಗಿ ತಿಳಿಸಿದ್ದು, ಎಂಟು ವರ್ಷಗಳಿಂದ ಬೆಳವಣಿಗೆ ಕಂಡಿದ್ದ ಆ್ಯಪ್‌ಗಳು ಬಂಡವಾಳದ ವೆಚ್ಚ ಮತ್ತು ಲಭ್ಯತೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳಿಂದ ಜರ್ಝರಿತಗೊಂಡಿವೆ ಎಂದು ಹೇಳಿಕೆ ನೀಡಿದೆ. ಸಂಸ್ಥೆಯ ಸಹ-ಸಂಸ್ಥಾಪಕರಾದ ಭಾನು ಪ್ರತಾಪ್ ಸಿಂಗ್ ಮತ್ತು ಫರೀದ್ ಅಹ್ಸನ್ ಕೂಡ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಅನಗತ್ಯ ಹುದ್ದೆಗಳಿಗೆ ತಿಲಾಂಜಲಿ
ಕೆಲವೊಂದು ಹುದ್ದೆಗಳು ಅನಗತ್ಯ ಎಂದು ಕಂಡುಬಂದಿದ್ದರಿಂದ ವಜಾಗೊಳಿಸುವಿಕೆ ಮಾಡಬೇಕಾಯಿತು ಎಂದು ಓಲಾ ವಕ್ತಾರರು ತಿಳಿಸಿದ್ದಾರೆ. ದಕ್ಷತೆಯನ್ನು ಸುಧಾರಿಸಲು ನಿತಮಿತವಾಗಿ ಪುನರ್ ರಚನೆ ಕ್ರಮಗಳನ್ನು ನಡೆಸಬೇಕಾಗಿದೆ ಆದರೆ ಸಂಸ್ಥೆಯಲ್ಲಿ ಅನಗತ್ಯ ಹುದ್ದೆಗಳಿದ್ದು ಅದನ್ನು ನಿವಾರಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ನಮ್ಮ ಪ್ರಮುಖ ಆದ್ಯತೆಯ ಕ್ಷೇತ್ರಗಳಲ್ಲಿ ಹಿರಿಯ ಪ್ರತಿಭೆಗಳು ಸೇರಿದಂತೆ ಎಂಜಿನಿಯರಿಂಗ್ ಮತ್ತು ವಿನ್ಯಾಸದಲ್ಲಿ ಹೊಸ ನೇಮಕಾತಿಗಳನ್ನು ನಾವು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಹೂಡಿಕೆದಾರರು ಯೋಚಿಸುತ್ತಿದ್ದು ಉದ್ಯಮದಲ್ಲಿ ಕೆಲವೊಂದು ಪ್ರಕರಣಗಳು ಬೆಳಕಿಗೆ ಬಂದ ನಂತರ ಯೋಚಿಸುವಂತಾಗಿದೆ ಎಂಬುದು ವರದಿಯಾಗಿದೆ.
ಹೈ-ಫ್ಲೈಯಿಂಗ್ ಕಾರ್ ಸರ್ವಿಸಿಂಗ್ ಸ್ಟಾರ್ಟ್ಅಪ್ GoMechanic ನ ಸಂಸ್ಥಾಪಕ ಅಮಿತ್ ಭಾಸಿನ್ ಸಿಕ್ವೊಯಾ-ಬೆಂಬಲಿತ ಕಾರು ರಿಪೇರಿ ಸ್ಟಾರ್ಟ್‌ಅಪ್‌ನಲ್ಲಿ ಹಣಕಾಸಿನ ವರದಿ ದೋಷಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ನಗದು ಕೊರತೆಯಿರುವ ಕಂಪನಿಯು ಸರಿಸುಮಾರು 70 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತದೆ ಮತ್ತು ಅದರ ಖಾತೆಗಳನ್ನು ಮೂರನೇ ಒಂದು ಭಾಗದಷ್ಟು ಆಡಿಟ್ ಮಾಡಲಿದೆ ಎಂದು ತಿಳಿಸಿದ್ದಾರೆ. ಬಂಡವಾಳವನ್ನು ನಿರ್ವಹಿಸುವ ಉತ್ಸಾಹ ನಮ್ಮಲ್ಲಿ ಬತ್ತಿಹೋಗಿದ್ದು, ವೆಚ್ಚ ಹಾಗೂ ಹಣಕಾಸು ವರದಿಗೆ ಸಂಬಂಧಿಸಿದಂತೆ ಹೆಚ್ಚಿನ ತಪ್ಪುಗಳನ್ನು ನಡೆಸಿದ್ದೇವೆ ಹಾಗೂ ಇದಕ್ಕಾಗಿ ವಿಷಾದಿಸುತ್ತೇವೆ ಎಂದು ಭಾಸಿನ್ ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ