ಕೊರೊನಾ ಸಾಂಕ್ರಾಮಿಕದಿಂದ ಕಳೆದ 15 ತಿಂಗಳುಗಳಲ್ಲಿ ಮನೆಯ ಖರ್ಚು ಹೆಚ್ಚಾಗಿದೆ. ವಿಶೇಷವಾಗಿ ಮಧ್ಯಮ ವರ್ಗ ಹಾಗೂ ಕಡಿಮೆ ಆದಾಯದ ವಿಭಾಗಗಳ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಲವರಿಗೆ ಹಣದ ಬಿಕ್ಕಟ್ಟು ಎದುರಾಗಿದ್ದು, ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳು ಜನರನ್ನು ಸಾಲ ಮಾಡುವಂತೆ ಮಾಡುತ್ತಿದೆ. ಅದರಲ್ಲೂ ಹಲವರು ಚಿನ್ನವನ್ನು ಅಡ ಇಟ್ಟು ಅಥವಾ ಮಾರಾಟ ಮಾಡಿ ಹಣ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಮೇ 2021ಕ್ಕೆ ಕೊನೆಗೊಂಡ 12 ತಿಂಗಳ ಅವಧಿಯಲ್ಲಿ, ನಿಗದಿತ ವಾಣಿಜ್ಯ ಬ್ಯಾಂಕುಗಳ ಚಿನ್ನದ ಸಾಲ ವಿಭಾಗವು ಎಲ್ಲಾ ಕ್ಷೇತ್ರಗಳಲ್ಲೂ ಅತಿ ಹೆಚ್ಚು ಸಾಲದ ಬೆಳವಣಿಗೆಯನ್ನು 33.8% ಎಂದು ದಾಖಲಿಸಿದೆ. ಅನೇಕ ಜನರು ತಮ್ಮ ತಕ್ಷಣದ ಅಗತ್ಯಗಳನ್ನು ಪೂರೈಸಲು ತಮ್ಮ ಚಿನ್ನವನ್ನು ಅಡ ಇಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಚಿನ್ನದ ಸಾಲ ತೆಗೆದುಕೊಳ್ಳುವುದನ್ನು ನೀವು ಯಾವಾಗ ಪರಿಗಣಿಸಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ..
ಚಿನ್ನದ ಸಾಲದಲ್ಲಿ ಎಷ್ಟು ಹೆಚ್ಚಾಗಿದೆ ಗೊತ್ತಾ?
ಕಳೆದ 12 ತಿಂಗಳುಗಳಲ್ಲಿ, ಬ್ಯಾಂಕುಗಳೊಂದಿಗೆ ಬಾಕಿ ಉಳಿದಿರುವ ಚಿನ್ನದ ಸಾಲವು 2020 ರ ಮೇ ತಿಂಗಳಲ್ಲಿ 46,415 ಕೋಟಿ ರೂ.ಗಳಿಂದ 62,101 ಕೋಟಿ ರೂ.ಗೆ ಏರಿದೆ. ಮಾರ್ಚ್ 2020 ರಿಂದ ಕೋವಿಡ್ ಸಾಂಕ್ರಾಮಿಕ ದೇಶದಲ್ಲಿ ಆರಂಭವಾದಾಗ, 86.4% ಅಥವಾ 33,308 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ ಎಂದು ಆರ್ಬಿಐ ಡೇಟಾ ತೋರಿಸುತ್ತದೆ. ಇದು ನಿಗದಿತ ವಾಣಿಜ್ಯ ಬ್ಯಾಂಕುಗಳು ಮಾಡುವ ವ್ಯವಹಾರ ಮಾತ್ರ.
ಚಿನ್ನದ ಸಾಲದಲ್ಲಿ ಯಾಕಿಷ್ಟು ಜಿಗಿತ?
ಗ್ರಾಮೀಣ ಪ್ರದೇಶಗಳು, ಕಡಿಮೆ ಆದಾಯದ ಗುಂಪು ಮತ್ತು ಸೂಕ್ಷ್ಮ ಘಟಕಗಳ ಜನರಲ್ಲಿ ಆರ್ಥಿಕ ಒತ್ತಡದ ಸೂಚನೆಯಾಗಿರಬಹುದು ಎಂದು ಈ ಉದ್ಯಮದಲ್ಲಿರುವವರು ಹೇಳುತ್ತಾರೆ. ಕಳೆದ ವರ್ಷ ಕೇಂದ್ರ ವಿಧಿಸಿದ ಲಾಕ್ಡೌನ್ಗಳು ಮತ್ತು ಈ ವರ್ಷ ರಾಜ್ಯ ಸರ್ಕಾರಗಳು ಸಣ್ಣ ವ್ಯಾಪಾರ ಘಟಕಗಳನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿವೆ. ಅಲ್ಲದೆ, ಬೇಡಿಕೆಯ ಕುಸಿತವು ಕೈಗಾರಿಕೆಗಳಾದ್ಯಂತ ಅನೇಕ ಘಟಕಗಳಿಗೆ ಹಣದ ಹರಿವಿನ ಮೇಲೆ ಪರಿಣಾಮ ಬೀರಿದೆ ಮತ್ತು ಅವರ ಉದ್ಯೋಗಿಗಳಿಗೆ ವೇತನ ಪಾವತಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ.
ಹಣಕಾಸಿನ ಅಗತ್ಯಗಳನ್ನು ಪೂರೈಸಲು ಚಿನ್ನವನ್ನು ಮೇಲಾಧಾರವಾಗಿ ಅಡ ಇಡುವುದು ಭಾರತೀಯ ಚಿನ್ನದ ಮಾರುಕಟ್ಟೆಯ ನಿರಂತರ ಲಕ್ಷಣವಾಗಿದೆ. ಆರೋಗ್ಯ, ಶಿಕ್ಷಣ ಮತ್ತು ವಿವಾಹದ ವೆಚ್ಚಗಳನ್ನು ಪೂರೈಸಲು ಕುಟುಂಬಗಳು ಚಿನ್ನದ ಸಾಲವನ್ನು ಬಳಸುತ್ತಾರೆ, ಆದರೆ ಸಣ್ಣ ಉದ್ಯಮಗಳು ತಮ್ಮ ಕೆಲಸದ ಬಂಡವಾಳದ ಅಗತ್ಯಗಳಿಗಾಗಿ ಅವುಗಳನ್ನು ಬಳಸುತ್ತವೆ.
ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮಕ್ಕೆ ಪ್ರತಿಕ್ರಿಯೆಯಾಗಿ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳ ಮೂಲಕ ಚಿನ್ನದ ಸಾಲದ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಬಾಕಿ ಇರುವ ಸಂಘಟಿತ ಚಿನ್ನದ ಸಾಲವು 2020 ರ ಹಣಕಾಸು ವರ್ಷದಲ್ಲಿ 344,800 ಕೋಟಿ ರೂ. ನಷ್ಟಿತ್ತು. ಇದು 2021 ರ ಹಣಕಾಸು ವರ್ಷದಲ್ಲಿ 405,100 ಕೋಟಿ ರೂ. ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವಿಶ್ವ ಗೋಲ್ಡ್ ಕೌನ್ಸಿಲ್ ಹೇಳಿದೆ.
ಮಣಪ್ಪುರಂ ಫೈನಾನ್ಸ್ನಲ್ಲೂ ಚಿನ್ನದ ಸಾಲ ವಿತರಣೆಯಲ್ಲಿ ಭಾರಿ ಏರಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಕುಸಿತವಾಗಿದ್ದರೂ, ಪ್ರಸಕ್ತ ತ್ರೈಮಾಸಿಕದಲ್ಲಿ ಚಿನ್ನದ ಸಾಲದ ಡಿಮ್ಯಾಂಡ್ ಹೆಚ್ಚಾಗಿದೆ. ಕೊರೊನಾ ಎರಡನೇ ಅಲೆ ಇದಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ.
ನೀವು ಚಿನ್ನದ ಸಾಲ ಮಾಡಬೇಕೆ..?
ಚಿನ್ನದ ಸಾಲ ವ್ಯವಹಾರದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಗ್ರಾಹಕರಿಗೆ ಉತ್ತೇಜನ ನೀಡುತ್ತದೆ. ಎನ್ಬಿಎಫ್ಸಿ ಸುಮಾರು 10% ನಷ್ಟು ಬಡ್ಡಿ ದರ ವಿಧಿಸುತ್ತಿದ್ದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ. 7.5 ದರಕ್ಕೆ ಗೋಲ್ಡ್ ಲೋನ್ ನೀಡುತ್ತಿದೆ. ಆದರೆ, ಕಡಿಮೆ ಬಡ್ಡಿ ದರ ಇರುವ ಮಾತ್ರಕ್ಕೆ ವ್ಯಕ್ತಿಗಳು ಅಥವಾ ಸಣ್ಣ ವ್ಯಾಪಾರ ಮಾಲೀಕರು ಚಿನ್ನದ ಸಾಲ ಮಾಡಲು ಕಾರಣವಾಗಬಾರದು. ಈ ಸಮಯದಲ್ಲಿ ಸಾಲ ತೆಗೆದುಕೊಳ್ಳುವುದು ನೀವು ಯಾರು ಮತ್ತು ನೀವು ಏನನ್ನು ಎರವಲು ಪಡೆಯುತ್ತಿದ್ದೀರಿ ಎಂಬುದರ ಆಧಾರದ ಮೇಲೆ ಒಳ್ಳೆಯದು ಮತ್ತು ಕೆಟ್ಟ ಆಲೋಚನೆ ಆಗಿರಬಹುದು ಎಂದು ತಜ್ಞರು ಹೇಳುತ್ತಾರೆ.
ನೀವು ಚಿನ್ನವನ್ನು ಮಾರಾಟ ಮಾಡಬೇಕೆ?
ನಿಮ್ಮ ಆದಾಯದ ಹರಿವಿನ ಮೇಲೆ ಪರಿಣಾಮ ಬೀರಿದರೆ ಮತ್ತು ಸಾಲವು ಒಂದು ಸಮಸ್ಯೆಯಾಗಿ ಪರಿಣಮಿಸಿದರೆ, ನಿಮ್ಮ ಚಿನ್ನವನ್ನು ಮಾರಾಟ ಮಾಡುವುದನ್ನು ನೀವು ಪರಿಗಣಿಸಬಹುದು. ಕಳೆದ 15 ವರ್ಷಗಳಲ್ಲಿ ಚಿನ್ನದ ಬೆಲೆಗಳು ಗಮನಾರ್ಹವಾಗಿ ಏರಿಕೆಯಾಗಿವೆ. ಈ ಹಿನ್ನೆಲೆ ಸಾಲವನ್ನು ಮರುಪಾವತಿಸಲು ಚಿನ್ನ ಮಾರಾಟ ಮಾಡಬಹುದು. ಈ ವಿಚಾರದಲ್ಲಿ ಭಾವನಾತ್ಮಕತೆ ಬೇಡ. ನಿಮ್ಮ ಬಳಿ ಹಣ ಇದ್ದಾಗ ಮತ್ತೆ ಚಿನ್ನವನ್ನು ತೆಗೆದುಕೊಳ್ಳಬಹುದು ಎಂದೂ ತಜ್ಞರು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ