• Home
 • »
 • News
 • »
 • explained
 • »
 • Explained: ಜಿ20 ಶೃಂಗಸಭೆ ಆರಂಭ: ಈ ವಾರದ ನಿರ್ಣಾಯಕ ಸಮಿಟ್​ ಕುರಿತಾದ ಮಹತ್ವದ ವಿಚಾರಗಳು

Explained: ಜಿ20 ಶೃಂಗಸಭೆ ಆರಂಭ: ಈ ವಾರದ ನಿರ್ಣಾಯಕ ಸಮಿಟ್​ ಕುರಿತಾದ ಮಹತ್ವದ ವಿಚಾರಗಳು

G20 ಶೃಂಗಸಭೆಯಲ್ಲಿ ಭಾಗಿಯಾಗಲು ಹೋದ ಪಿಎಂ ಮೋದಿ

G20 ಶೃಂಗಸಭೆಯಲ್ಲಿ ಭಾಗಿಯಾಗಲು ಹೋದ ಪಿಎಂ ಮೋದಿ

ಜಿ20 ರಾಷ್ಟ್ರಗಳ ಶೃಂಗಸಭೆ ಇಂದಿನಿಂದ ಆರಂಭಗೊಂಡಿದ್ದು, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಇಂಡೋನೇಷ್ಯಾದ ಬಾಲಿಗೆ ತಲುಪಿದ್ದಾರೆ.

 • Trending Desk
 • Last Updated :
 • New Delhi, India
 • Share this:

  ಎರಡು ದಿನಗಳ ಕಾಲ ನಡೆಯಲಿರುವ ಮಹತ್ವದ ಜಿ20 ರಾಷ್ಟ್ರಗಳ ಶೃಂಗಸಭೆ (G20 Summit) ಇಂದಿನಿಂದ ಆರಂಭಗೊಂಡಿದ್ದು, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಸೇರಿ ಹಲವು ಗಣ್ಯರು ಇಂಡೋನೇಷ್ಯಾದ ಬಾಲಿಗೆ ತಲುಪಿದ್ದಾರೆ. ಕೋವಿಡ್‌ ಸಾಂಕ್ರಾಮಿಕ ರೋಗ ಕಾಲಿಟ್ಟ ನಂತರದಲ್ಲಿ ಮೊದಲ ಬಾರಿಗೆ ಹೀಗೆ ಎಲ್ಲಾ ನಾಯಕರು ಸೇರುವ ಅತಿದೊಡ್ಡ ಸಭೆಯಾಗಿದೆ. ಈ ಬಾರಿ ಇಂಡೋನೇಷ್ಯಾ ಆತಿಥೇಯ ವಹಿಸಿದೆ. ನ.15 ಮತ್ತು 16 ರಂದು ಎರಡು ದಿನಗಳ ಕಾಲ ನಡೆಯಲಿರುವ ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಜಾಗತಿಕ ಅಭಿವೃದ್ಧಿ, ಆಹಾರ ಮತ್ತು ಇಂಧನ ಭದ್ರತೆ ಬಗ್ಗೆ ಚರ್ಚಿಸಲಿದ್ದಾರೆ.


  ಭಾರತಕ್ಕೆ ಅಧ್ಯಕ್ಷೀಯ ಅಧಿಕಾರ ಹಸ್ತಾಂತರ


  ಈ ಬಾರಿಯ ಶೃಂಗ ಸಭೆಯೊಂದಿಗೆ ಇಂಡೋನೇಷ್ಯಾದ ಜಿ20 ಅಧ್ಯಕ್ಷೀಯ ಅವಧಿ ಮುಕ್ತಾಯವಾಗಲಿದ್ದು, ನ.16ರಂದು ಮುಂದಿನ ಒಂದು ವರ್ಷದ ಜಿ20 ಅಧ್ಯಕ್ಷೀಯ ಹುದ್ದೆ ಭಾರತಕ್ಕೆ ಹಸ್ತಾಂತರವಾಗಲಿದೆ. ಮುಂದಿನ ಅವಧಿಗೆ ಜಿ - 20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಭಾರತಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಸಾಂಕೇತಿಕವಾಗಿ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಲಿದ್ದಾರೆ. ಡಿಸೆಂಬರ್ 1 ರಿಂದ ಅಧಿಕೃತವಾಗಿ ಅಧ್ಯಕ್ಷಿಯ ಕಾರ್ಯಭಾರ ಹೊರಲಿರುವ ಭಾರತ, ಮುಂದಿನ ಒಂದು ವರ್ಷ ಜಿ - 20 ಶೃಂಗಸಭೆಯ ಆತಿಥ್ಯ ವಹಿಸಿಕೊಳ್ಳಲಿದೆ.


  ವ್ಲಾಡಿಮಿರ್ ಪುಟಿನ್ ಅನುಪಸ್ಥಿತಿ


  ರಷ್ಯಾ ಉಕ್ರೇನ್‌ ಯುದ್ಧದ ನಡುವೆ ಜಿ 20 ಶೃಂಗಸಭೆಗಾಗಿ ವಿಶ್ವದ ಪ್ರಬಲ ಆರ್ಥಿಕತೆಯ ದೇಶಗಳ ನಾಯಕರು ಸಭೆ ಸೇರುತ್ತಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಭೆಯಿಂದ ಹಿಂದೆ ಸರಿದಿದ್ದು, ಅವರ ಬದಲಿಗೆ ರಷ್ಯಾವನ್ನು ಪ್ರತಿನಿಧಿಸಲು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹಾಜರಿರಲಿದ್ದಾರೆ.


  ಏನಿದು ಜಿ20 ಶೃಂಗಸಭೆ?


  ವಿಶ್ವದ 20 ಆರ್ಥಿಕ ಬಲಾಢ್ಯ ರಾಷ್ಟ್ರಗಳು ಸೇರಿ ರಚಿಸಿರುವ ಗ್ರೂಪ್ ಆಫ್ ಟ್ವೆಂಟಿ ವೇದಿಕೆಯಲ್ಲಿ 19 ರಾಷ್ಟ್ರಗಳು ಹಾಗೂ ಯುರೋಪಿಯನ್ ಒಕ್ಕೂಟವು ಸದಸ್ಯತ್ವ ಹೊಂದಿವೆ. ಈ ರಾಷ್ಟ್ರಗಳು ಜಗತ್ತಿನ ಒಟ್ಟು ಉತ್ಪನ್ನದಲ್ಲಿ ಶೇ.85ರಷ್ಟು ಪಾಲು ಹೊಂದಿವೆ. ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆ ಇಲ್ಲಿದ್ದು, ಜಾಗತಿಕ ವ್ಯಾಪಾರದ ಶೇ.75ರಷ್ಟು ಈ ದೇಶಗಳಲ್ಲೇ ನಡೆಯುತ್ತದೆ.
  ಈ ಹಿನ್ನೆಲೆಯಲ್ಲಿ ಜಿ20 ಶೃಂಗಸಭೆಗೆ ಸಾಕಷ್ಟು ಮಹತ್ವವಿದ್ದು, ಆರ್ಥಿಕತೆಗೆ ಸಂಬಂಧಿಸಿದ ಮಹತ್ವದ ಚರ್ಚೆಗಳು ಇಲ್ಲಿ ಜಾಗತಿಕ ನಾಯಕರು ನಡೆಸುತ್ತಾರೆ. ಇದು ಅಂತರರಾಷ್ಟ್ರೀಯ ಆರ್ಥಿಕ ಸ್ಥಿರತೆ, ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತದೆ.


  ಸದಸ್ಯತ್ವ ಹೊಂದಿರುವ ರಾಷ್ಟ್ರಗಳು


  2022ರ ಹೊತ್ತಿಗೆ, ಈ ಗುಂಪಿನಲ್ಲಿ 20 ಸದಸ್ಯರಿದ್ದಾರೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ದಕ್ಷಿಣ ಕೊರಿಯಾ, ಜಪಾನ್, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ಜಿ20 ಗುಂಪಿನ ಸದಸ್ಯತ್ವ ಹೊಂದಿವೆ.


  ಏನೆಲ್ಲಾ ಚರ್ಚೆಗಳು ನಡೆಯಬಹುದು?


  ವಿಶ್ವ ನಾಯಕರ ಪ್ರಮುಖ ಭಾಷಣಗಳ ಜೊತೆಗೆ, ಉಕ್ರೇನ್ ಆಕ್ರಮಣ ಮತ್ತು ನಂತರದ ಜಾಗತಿಕ ಆರ್ಥಿಕ ಕುಸಿತ, ಹವಾಮಾನ ಬಿಕ್ಕಟ್ಟು, ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ ಮತ್ತು ಚೀನಾದಲ್ಲಿ ಹೆಚ್ಚುತ್ತಿರುವ ಜಾಗತಿಕ ಉದ್ವಿಗ್ನತೆಗಳ ಹಿನ್ನೆಲೆಯ ವಿರುದ್ಧ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ ಎನ್ನಲಾಗುತ್ತಿದೆ.


  ಪ್ರಮುಖ ವಿಷಯಗಳು ಏನಿರಬಹುದು?


  ಈ ಮೇಲೆ ಹೇಳಿದಂತೆ ಕೊರೋನಾ ಪ್ರಾರಂಭವಾದಾಗಿನಿಂದ ನಾಯಕರೆಲ್ಲಾ ಒಟ್ಟಿಗೆ ಸೇರುತ್ತಿರುವ ಸಭೆ ಇದಾಗಿದೆ. ಇನ್ನೂ ವಿಶೇಷವೆಂದರೆ ಯುಎಸ್‌ ಅಧ್ಯಕ್ಷ ಜೋ ಬೈಡೆನ್ ಮತ್ತು ಚೀನಾಕ್ಕೆ ಮರು ನೇಮಕವಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಾಯಕರಾಗಿ ಸಭೆಯಲ್ಲಿ ಮೊದಲಿಗೆ ಮುಖಾಮುಖಿಯಾಗಲಿದ್ದಾರೆ.


  ಇದನ್ನೂ ಓದಿ: Gujarat Elections: ಗುಜರಾತ್ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ, ಮಾಜಿ ಆರೋಗ್ಯ ಸಚಿವ ರಾಜೀನಾಮೆ


  ಜೋ ಬೈಡನ್ ವಿಶ್ವ ವೇದಿಕೆಯಲ್ಲಿ ಅಮೆರಿಕದ ನಾಯಕತ್ವವನ್ನು ಮರುಸ್ಥಾಪಿಸಲು ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ತಡೆಯುವ ಪ್ರಯತ್ನದ ಹಿಂದೆ ಪಾಶ್ಚಿಮಾತ್ಯ ಮಿತ್ರರನ್ನು ಮತ್ತೆ ಒಟ್ಟುಗೂಡಿಸುವ ಬಗ್ಗೆ ಮಾತನಾಡಬಹುದು.


  ಅಮೆರಿಕಾ ಮತ್ತು ಚೀನಾದ ಮೇಲೆ ಎಲ್ಲರ ಚಿತ್ತ


  ಎಲ್ಲದ್ದಕ್ಕಿಂತ ಹೆಚ್ಚಾಗಿ ಅಮೆರಿಕಾ ಮತ್ತು ಚೀನಾದ ಮಾತುಕತೆಗಳ ಮೇಲೆ ಎಲ್ಲರ ಚಿತ್ತವಿದೆ ಎನ್ನಬಹುದು. ಚೀನಾ ಜೊತೆ ಅಮೆರಿಕ ಜಟಾಪಟಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ರಾಷ್ಟ್ರಗಳ ಮೇಲೆ ಎಲ್ಲರ ಗಮನವಿದೆ. ಯುಎಸ್ ಮಧ್ಯಂತರ ಚುನಾವಣೆಯ ಫಲಿತಾಂಶಗಳ ನಂತರ ಈಗ ಗಣನೀಯವಾಗಿ ರಾಜಕೀಯದಲ್ಲಿ ಹೆಚ್ಚು ಪ್ರಬಲವಾಗಿರುವ ಬೈಡನ್ ಯಾವ ರೀತಿ ನಡೆದುಕೊಳ್ಳುತ್ತಾರೆ ನೋಡಬೇಕಿದೆ. ಇನ್ನೂ ತೈವಾನ್‌ನ ಆಕ್ರಮಣ ಮತ್ತು ದಕ್ಷಿಣ ಚೀನಾ ಸಮುದ್ರದ ಸಂಚಾರವನ್ನೂ ನಿರ್ಬಂಧಿಸುವ ಪ್ರಯತ್ನಗಳ ವಿರುದ್ಧ ಅವರು ಎಚ್ಚರಿಕೆ ನೀಡುವ ನಿರೀಕ್ಷೆಯಿದೆ.


  ಸಭೆಯಲ್ಲಿ ಯಾರೆಲ್ಲಾ ಉಪಸ್ಥಿತರಿರಲಿದ್ದಾರೆ?


  ಶೃಂಗಸಭೆಯಲ್ಲಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಇಂಡೋನೇಷ್ಯಾದ ಆಹ್ವಾನದ ಮೇರೆಗೆ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ. ಯುರೋಪಿಯನ್‌ ಯೂನಿಯನ್‌ ನಾಯಕರು ಶೃಂಗಸಭೆಯಲ್ಲಿ ಚೀನಾದ ಕ್ಸಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.


  ನೂತನ ಪ್ರಧಾನಿ ರಿಷಿ ಸುನಕ್‌ ಭಾಗಿ


  ಬ್ರಿಟಿಷ್ ಪಿಎಂ ರಿಷಿ ಸುನಕ್ ಕೂಡ ಭಾಗಿಯಾಗುತ್ತಾರೆ. ತಮ್ಮ ಮೊದಲ ದೊಡ್ಡ ರಾಜತಾಂತ್ರಿಕ ಪರೀಕ್ಷೆಯನ್ನು ಎದುರಿಸಲು ನೂತನ ಪ್ರಧಾನಿ ಸಿದ್ಧರಾಗಿದ್ದಾರೆ. ರಿಷಿ ಸುನಕ್‌ ಸಭೆಯಲ್ಲಿ ಉಕ್ರೇನ್‌ನ ರಷ್ಯಾದ ಆಕ್ರಮಣದ ಮೇಲೆ ಕೇಂದ್ರೀಕರಿಸುತ್ತಾರೆ ಮತ್ತು ಕೈವ್‌ಗೆ ಬೆಂಬಲವನ್ನು ಸೂಚಿಸಬಹುದು.


  ಬೈಡನ್ ಮತ್ತು ಮ್ಯಾಕ್ರಾನ್ ಅವರೊಂದಿಗೆ ಬ್ರಿಟನ್‌ನ ನಾಯಕರಾದ ರಿಷಿ ಸುನಕ್ ಅವರ ದ್ವಿಪಕ್ಷೀಯ ಮಾತುಕತೆಗಳನ್ನು ಯೋಜಿಸಲಾಗಿದೆ. ಜೋಕೊ ವಿಡೋಡೊ ಅವರು ಸಭೆಯಲ್ಲಿ ಜಿ 20 ಅಧ್ಯಕ್ಷರಾಗಿ ಬಹುತೇಕ ಎಲ್ಲಾ ಭೇಟಿ ನೀಡುವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.


  ಇತರೆ ನಾಯಕರು


  ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಭಾರತೀಯ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೋಲ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ದಕ್ಷಿಣದ ಇತರ ವಿಶ್ವ ನಾಯಕರು ಭಾಗವಹಿಸಿದ್ದಾರೆ.
  ಆಫ್ರಿಕನ್ ಅಧ್ಯಕ್ಷ ಸಿರಿಲ್ ರಾಮಾಫೋಸಾ, ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಅರ್ಜೆಂಟೀನಾ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್, ಮೆಕ್ಸಿಕನ್ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾಡ್ ಮತ್ತು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೊನಿ, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ರಾಜ್ಯವನ್ನು ಪ್ರತಿನಿಧಿಸಲಿದ್ದು, ಇವರು ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರನ್ನು ಪ್ರತಿನಿಧಿಸಲಿದ್ದಾರೆ. ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಬ್ರಿಟನ್ ಪ್ರಧಾನಿ ಏಕಪಕ್ಷೀಯ ಸಭೆ ನಡೆಸಲಿದ್ದಾರೆ.


  ಬ್ರೆಜಿಲ್ ದೇಶವನ್ನು ಪ್ರತಿನಿಧಿಸುತ್ತಾರಾ ಹೊಸ ಅಧ್ಯಕ್ಷ?


  ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲೊಸನಾರೊ ಅನುಪಸ್ಥಿತಿಯಲ್ಲಿದ್ದು, ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ಚುನಾವಣಾ ಗೆಲುವಿನ ಹೊರತಾಗಿಯೂ ಬ್ರೆಜಿಲ್ ಅನ್ನು ವಿದೇಶಾಂಗ ಸಚಿವ ಕಾರ್ಲೋಸ್ ಫ್ರಾಂಕಾ ಪ್ರತಿನಿಧಿಸುತ್ತಾರೆ. EU ಅನ್ನು ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಚಾರ್ಲ್ಸ್ ಮೈಕೆಲ್ ಪ್ರತಿನಿಧಿಸುತ್ತಾರೆ.


  ಪ್ರಧಾನಿ ಮೋದಿ ಭಾಗಿ


  ಜಿ20 ಶೃಂಗಸಭೆಯ ಸಲುವಾಗಿ ಇಂಡೋನೇಷ್ಯಾಕ್ಕೆ ತೆರಳಿದ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಮಾಡಲಾಯಿತು. ಮೋದಿ ಕೂಡ ಇತರೆ ನಾಯಕರನ್ನು ಭೇಟಿಯಾಗಲಿದ್ದಾರೆ. ಇಂಡೋನೇಷ್ಯಾಗೆ ತೆರಳುವುದಕ್ಕೂ ಮುನ್ನ ಹೇಳಿಕೆ ನೀಡಿದ್ದ ಮೋದಿಯವರು, ಜಾಗತಿಕ ಅಭಿವೃದ್ಧಿ ಕುರಿತ ವಿಷಯಗಳಲ್ಲಿ ಭಾರತದ ಬದ್ಧತೆಯನ್ನು ವಿಶ್ವ ನಾಯಕರಿಗೆ ಮನವರಿಕೆ ಮಾಡಿಕೊಡಲಿದ್ದೇನೆ ಎಂದಿದ್ದರು.


  ಒಟ್ಟಾರೆ ಎರಡು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ನಾಯಕರ ನಡೆ ಏನು ಎಂದು ಕಾದು ನೋಡಬೇಕಿದೆ.

  Published by:Precilla Olivia Dias
  First published: