ಒಂದು ವರ್ಷದೊಳಗೆ ದೇಶದಲ್ಲಿ ಫ್ಲೆಕ್ಸ್-ಇಂಧನ ಚಾಲಿತ ವಾಹನಗಳನ್ನು ಜಾರಿಗೆ ತರುವ ಉದ್ದೇಶವಿದ್ದು, ಇದರಿಂದ ತೈಲ ದರದಲ್ಲಿ 40% ಇಳಿಕೆಯಾಗಲಿದೆ.
ಫ್ಲೆಕ್ಸ್ ಇಂಧನವೆಂದರೆ ಎಥೆನಾಲ್ ಹಾಗೂ ಪೆಟ್ರೋಲ್ ಮಿಶ್ರಣವನ್ನು ಬಳಸಿ ವಾಹನಗಳಿಗೆ ಪೂರೈಕೆ ಮಾಡುವುದಾಗಿದೆ. ಇದು ವಾತಾವರಣಕ್ಕೂ ಪ್ರಯೋಜನಕಾರಿಯಾಗಿದ್ದು ತೈಲದ ಹೆಚ್ಚಿನ ಬೆಲೆಗಳಿಗೆ ಕಡಿವಾಣ ಹಾಕಲಿದೆ. ವಿಶ್ವದಲ್ಲಿ ಕೆಲವೊಂದು ರಾಷ್ಟ್ರಗಳು ಫ್ಲೆಕ್ಸ್ ಪ್ಯೂಯಲ್ ಅನ್ನು ಬಳಸುತ್ತಿದ್ದು, ಮುಂದಿನ ವರ್ಷ ನಮ್ಮ ದೇಶದಲ್ಲಿ ಫ್ಲೆಕ್ಸ್ ಫ್ಯೂಯಲ್ ಚಾಲಿತ ವಾಹನಗಳು ಲಭ್ಯವಿರಲಿದೆ ಎಂದು ಭಾರತದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಭಾರತೀಯ ಆಟೋಮೊಬೈಲ್ ತಯಾರಕರ ಸೊಸೈಟಿ ಹಾಗೂ ಆಟೋಮೊಬೈಲ್ ಕಂಪನಿಗಳ ಸಿಇಒ ಗಳಿಗೆ ಫ್ಲೆಕ್ಸ್ ಇಂಧನ ಎಂಜಿನ್ ನಿರ್ಮಿಸುವಂತೆ ನಿತಿನ್ ಗಡ್ಕರಿ ಸೂಚಿಸಿದ್ದಾರೆ. ಮಾರ್ಚ್‌ನಲ್ಲಿ ಸರಕಾರವು ಎಥೆನಾಲ್ ಬಳಕೆಗೆ ಅನುಮತಿ ನೀಡಿದೆ. ಜೊತೆಗೆ ಗಡ್ಕರಿಯವರು ಎಲ್ಲಾ ಕಾರು ತಯಾರಕರಿಗೆ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳ ಅಳವಡಿಕೆಗೆ ಸೂಚನೆಯನ್ನು ನೀಡಿದ್ದು ಇದೊಂದು ಮಹತ್ವದ ನಿರ್ಧಾರವಾಗಿ ಮಾರ್ಪಡಲಿದೆ. ಪ್ರಸ್ತುತ ಕಾರುಗಳು ಎರಡು ಏರ್‌ಬ್ಯಾಗ್‌ಗಳನ್ನು ಹೊಂದಿವೆ. ನಿತಿನ್ ಗಡ್ಕರಿಯವರು ನಿರ್ದೇಶಿಸಿರುವಂತೆ ಎಲ್ಲಾ ಬೆಲೆಯ ಕಾರುಗಳೂ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಏಕೆಂದರೆ ಹೆಚ್ಚುತ್ತಿರುವ ರಸ್ತೆಅಪಘಾತಗಳಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕಾಪಾಡಲು ಇದು ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಫ್ಲಕ್ಸ್ ಇಂಧನ ವಾಹನಗಳು ಯಾವುವು? ಇವುಗಳು ಪ್ರಸ್ತುತ ಬಳಕೆಯಲ್ಲಿರುವ ವಾಹನಗಳಿಗಿಂತ ಎಷ್ಟು ಭಿನ್ನವಾಗಿವೆ? ಅನುಕೂಲಗಳು ಹಾಗೂ ಅನಾನುಕೂಲಗಳು ಏನು ಎಂಬುದನ್ನು ಅರಿತುಕೊಳ್ಳೋಣ.
ಫ್ಲೆಕ್ಸ್-ಇಂಧನ ಇಂಜಿನ್ ಎಂದರೇನು?
ಪ್ರಸ್ತುತ ನಾವು ವಾಹನಗಳಲ್ಲಿ ಬಳಸುವ ಪೆಟ್ರೋಲ್‌ಗಳಲ್ಲಿ ಎಥೆನಾಲ್ ಪರಿಮಾಣ ಗರಿಷ್ಠ 8.5% ದವರೆಗೆ ಇದೆ. ಎಥೆನಾಲ್ ಒಂದು ಜೈವಿಕ ಇಂಧನವಾಗಿದೆ. ಫ್ಲೆಕ್ಸ್-ಇಂಧನದಲ್ಲಿ ಪೆಟ್ರೋಲ್ ಹಾಗೂ ಎಥೆನಾಲ್ ಎರಡನ್ನೂ ವಿಭಿನ್ನ ಪ್ರಮಾಣದಲ್ಲಿ ಬಳಸಬಹುದಾಗಿದೆ. ಉದಾ: 50% ಪೆಟ್ರೋಲ್ ಬಳಸಿದರೆ 50% ಎಥನಾಲ್ ಹೀಗೆ.
ಪೆಟ್ರೋಲ್ ಪಂಪ್‌ನಲ್ಲಿ ಏನು ಬದಲಾವಣೆಯಾಗುತ್ತದೆ?
ಪೆಟ್ರೋಲ್ ಪಂಪ್‌ನಲ್ಲಿ ಇನ್ನೂ ಒಂದು ಯಂತ್ರವನ್ನು ಅಳವಡಿಸಲಾಗುತ್ತದೆ. ಇದರಿಂದ ಎಥೆನಾಲ್ ಆಧಾರಿತ ಇಂಧನವನ್ನು ವಾಹನ ಸವಾರರು ಪಡೆಯಬಹುದಾಗಿದೆ.
ಎಥೆನಾಲ್ ಎಂದರೇನು?
ಎಥೆನಾಲ್ ಆಲ್ಕೋಹಾಲ್ ಆಧಾರಿತ ಇಂಧನವಾಗಿದೆ. ಇದನ್ನು ವಿವಿಧ ಪ್ರಮಾಣದಲ್ಲಿ ಪೆಟ್ರೋಲ್‌ನೊಂದಿಗೆ ಬೆರೆಸಿ ವಾಹನಗಳಲ್ಲಿ ಇಂಧನವಾಗಿ ಬಳಸಲಾಗುತ್ತದೆ. ಎಥೆನಾಲ್‌ನ ದೊಡ್ಡ ಪ್ರಯೋಜನವೆಂದರೆ ಅದು ಜೈವಿಕ ಇಂಧನವಾಗಿದೆ. ಕಬ್ಬು, ಮೆಕ್ಕೆಜೋಳ ಹಾಗೂ ಸಕ್ಕರೆಯನ್ನು ಬಳಸಿ ಈ ಇಂಧನವನ್ನು ತಯಾರಿಸಲಾಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್‌ಗೆ ಹೋಲಿಸಿದಾಗ ಇದು ಅಗ್ಗವಾಗಿದೆ.
ಈಗಿರುವ ವಾಹನಗಳಿಗಿಂತ ಹೇಗೆ ಭಿನ್ನವಾಗಿದೆ?
ಪ್ರಸ್ತುತ ವಾಹನಗಳು ಒಂದೇ ವಿಧದ ಇಂಧನ ಬಳಸಿದರೆ ಮಾತ್ರ ಓಡಿಸಬಹುದು. ನಿಮ್ಮ ಗಾಡಿ ಎಲ್‌ಪಿಜಿ ಹಾಗೂ ಪೆಟ್ರೋಲ್ ಎರಡರಲ್ಲೂ ಚಲಿಸಿದರೆ ಎರಡಕ್ಕೂ ಬೇರೆ ಬೇರೆ ಇಂಧನ ಟ್ಯಾಂಕ್ ಇರುತ್ತವೆ. ನೀವು ಒಂದೇ ರೀತಿಯ ಇಂಧನ ಟ್ಯಾಂಕ್‌ನಲ್ಲಿ ವಿವಿಧ ರೀತಿಯ ಇಂಧನವನ್ನು (ಪೆಟ್ರೋಲ್-ಎಥೆನಾಲ್) ಹಾಕಬಹುದು.
ಪ್ರಯೋಜನವೇನು?
ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಕಾರ, ಈ ಇಂಧನದ ಬೆಲೆ ಪ್ರತಿ ಲೀಟರ್‌ಗೆ 60-62 ರೂ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100 ರೂ. ಅಂದರೆ ತೈಲ ಬೆಲೆಗಳು 40%ವರೆಗೆ ಇಳಿಯಬಹುದು.
ಭಾರತದ ಗ್ರಾಮೀಣ ಆರ್ಥಿಕತೆಯು ಉತ್ತೇಜನ ಪಡೆಯುತ್ತದೆ. ಎಥೆನಾಲ್ ತಯಾರಿಸಲು ಕಬ್ಬು, ಮೆಕ್ಕೆಜೋಳ, ಹತ್ತಿ ಕಾಂಡಗಳು, ಗೋಧಿ ಹುಲ್ಲು ಮತ್ತು ಬಿದಿರುಗಳನ್ನು ಬಳಸಲಾಗುತ್ತದೆ. ಎಥೆನಾಲ್ ಬಳಕೆ ಹೆಚ್ಚಾದರೆ, ಅದು ನೇರವಾಗಿ ರೈತರಿಗೆ ಲಾಭವಾಗುತ್ತದೆ.
ಪ್ರಸ್ತುತ, ಭಾರತವು ತನ್ನ ಕಚ್ಚಾ ತೈಲದ ಅವಶ್ಯಕತೆಯ 80% ಕ್ಕಿಂತ ಹೆಚ್ಚಿನದನ್ನು ಆಮದು ಮಾಡಿಕೊಳ್ಳುತ್ತದೆ. ಹೆಚ್ಚುತ್ತಿರುವ ಎಥೆನಾಲ್ ಬಳಕೆ ಭಾರತದ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಆಮದುಗಳನ್ನು ಸಹ ಕಡಿಮೆ ಮಾಡುತ್ತದೆ. ದೇಶದ ಹಣವು ದೇಶದಲ್ಲಿಯೇ ಉಳಿಯುತ್ತದೆ.
ಅನಾನುಕೂಲಗಳೇನು?
ವಾಹನದ ಇಂಧನ ವ್ಯವಸ್ಥೆ ಮತ್ತು ಎಂಜಿನ್‌ನಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇದು ವಾಹನಗಳ ಬೆಲೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ನಾಲ್ಕು ಚಕ್ರದ ವಾಹನದ ಬೆಲೆಯು 17 ರಿಂದ 30 ಸಾವಿರ ರೂಪಾಯಿಗಳಷ್ಟು ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅದೇ ಸಮಯದಲ್ಲಿ, ದ್ವಿಚಕ್ರ ವಾಹನಗಳ ಬೆಲೆ 5 ರಿಂದ 12 ಸಾವಿರ ರೂ ಹೆಚ್ಚಳವಾಗಬಹುದು.
ಪೆಟ್ರೋಲ್ ಮತ್ತು ಡೀಸೆಲ್ ಗಿಂತ ಎಥೆನಾಲ್ ಕಡಿಮೆ ಇಂಧನ ದಕ್ಷತೆಯನ್ನು ಹೊಂದಿದೆ. ನಿಮ್ಮ ವಾಹನದಲ್ಲಿ ನೀವು 70% ಎಥೆನಾಲ್ ಬಳಸಿದರೆ, ವಾಹನದ ಮೈಲೇಜ್ ಕಡಿಮೆಯಾಗುತ್ತದೆ. ಇದು ಚಾಲನಾ ವೆಚ್ಚವನ್ನು ಹೆಚ್ಚಿಸಬಹುದು.
ಯಾವ ಯಾವ ದೇಶದಲ್ಲಿ ಫ್ಲೆಕ್ಸ್ ಇಂಧನದ ಬಳಕೆ ಇದೆ?
ಬ್ರೆಜಿಲ್‌ನಲ್ಲಿ ಫ್ಲೆಕ್ಸ್-ಇಂಧನ ಎಂಜಿನ್ ವಾಹನಗಳನ್ನು ಹೆಚ್ಚು ಬಳಸಲಾಗುತ್ತಿದೆ. ಬ್ರೆಜಿಲ್ ಈಗಾಗಲೇ ಹಲವು ವರ್ಷಗಳಿಂದ ಫ್ಲೆಕ್ಸ್ ಇಂಧನ ಎಂಜಿನ್ ಹೊಂದಿರುವ ವಾಹನಗಳನ್ನು ಪ್ರಚಾರ ಮಾಡುತ್ತಿದೆ. ಪರಿಣಾಮವಾಗಿ, ಅಲ್ಲಿನ 70% ಕ್ಕಿಂತ ಹೆಚ್ಚು ಕಾರುಗಳಲ್ಲಿ ಫ್ಲೆಕ್ಸ್-ಇಂಧನವನ್ನು ಬಳಸಲಾಗುತ್ತಿದೆ.
ಇದರ ಹೊರತಾಗಿ, ಫ್ಲೆಕ್ಸ್-ಇಂಧನ ಉತ್ಪಾದನೆಯಲ್ಲಿ ಕೆನಡಾ, ಅಮೆರಿಕ ಮತ್ತು ಚೀನಾ ಕೂಡ ಅಗ್ರಸ್ಥಾನದಲ್ಲಿವೆ. ಇಲ್ಲಿ ಈ ಇಂಧನವನ್ನು ವಾಹನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ.
ಫ್ಲೆಕ್ಸಿ ಇಂಧನ ಎಂಜಿನ್ ವಾಹನಗಳು ಭಾರತದಲ್ಲಿ ಲಭ್ಯವಿದೆಯೇ?
ಭಾರತದಲ್ಲಿ ಲಭ್ಯವಿಲ್ಲ, ಕಂಪನಿಗಳು ಪ್ರಯೋಗಗಳಿಗಾಗಿ ಮಾತ್ರ ಫ್ಲೆಕ್ಸ್-ಇಂಧನ ಎಂಜಿನ್ ಹೊಂದಿರುವ ವಾಹನಗಳನ್ನು ಪರಿಚಯಿಸಿದ್ದವು, ಆದರೆ ಅಂತಹ ವಾಹನಗಳು ಪ್ರಸ್ತುತ ಸಾರ್ವಜನಿಕರಿಗೆ ಲಭ್ಯವಿಲ್ಲ. 2019 ರಲ್ಲಿ, ಟಿವಿಎಸ್ ಅಪಾಚೆಯು ಫ್ಲೆಕ್ಸ್-ಇಂಧನ ಆಧಾರಿತ ಮಾದರಿಯನ್ನು ಪರಿಚಯಿಸಿತು, ಆದರೆ ಇದು ಎಂದಿಗೂ ಶೋರೂಂಗಳಲ್ಲಿ ಲಭ್ಯವಾಗಲಿಲ್ಲ.
ಸರ್ಕಾರವು ಫ್ಲೆಕ್ಸ್-ಇಂಧನ ವಾಹನಗಳನ್ನು ಏಕೆ ಪ್ರಚಾರ ಮಾಡುತ್ತಿದೆ?
ವಾಸ್ತವವಾಗಿ, ದೇಶದಲ್ಲಿ ಮೆಕ್ಕೆಜೋಳ, ಸಕ್ಕರೆ ಮತ್ತು ಗೋಧಿಯ ಉತ್ಪಾದನೆಯು ಅಧಿಕವಾಗಿದೆ. ಈ ಹೆಚ್ಚುವರಿ ಉತ್ಪಾದನೆಯನ್ನು ಗೋದಾಮುಗಳಲ್ಲಿ ಸಂಗ್ರಹಿಸಲು ಕೂಡ ಸ್ಥಳವಿಲ್ಲ. ಈ ಕಾರಣಕ್ಕಾಗಿ, ಎಥೆನಾಲ್ ತಯಾರಿಸಲು ಈ ಹೆಚ್ಚುವರಿ ಉತ್ಪಾದನೆಯನ್ನು ಬಳಸಲು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ, ದೇಶದ ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುತ್ತಾರೆ, ಕಚ್ಚಾ ಆಮದು ಕೂಡ ಕಡಿಮೆಯಾಗುತ್ತದೆ ಮತ್ತು ಇದು ಪರಿಸರಕ್ಕೆ ಪ್ರಯೋಜನಕಾರಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ