• Home
  • »
  • News
  • »
  • explained
  • »
  • Explained: ಖರ್ಗೆ ಪಾಲಿಗೆ 'ಮುಳ್ಳಿನ ಕಿರೀಟ' ಆಗುತ್ತಾ ಕಾಂಗ್ರೆಸ್​ ಅಧ್ಯಕ್ಷ ಪಟ್ಟ? ಈ 5 ವಿಚಾರಗಳೇ ದೊಡ್ಡ ಸವಾಲು!

Explained: ಖರ್ಗೆ ಪಾಲಿಗೆ 'ಮುಳ್ಳಿನ ಕಿರೀಟ' ಆಗುತ್ತಾ ಕಾಂಗ್ರೆಸ್​ ಅಧ್ಯಕ್ಷ ಪಟ್ಟ? ಈ 5 ವಿಚಾರಗಳೇ ದೊಡ್ಡ ಸವಾಲು!

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

Congress Presidential Election: ಕಾಂಗ್ರೆಸ್​ ತನ್ನ ಅತ್ಯಂತ ಕೆಟ್ಟ ದಿನಗಳನ್ನು ಎದುರಿಸುತ್ತಿದೆ. ಹೀಗಿರುವಾಗ ಖರ್ಗೆಯವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮುಳ್ಳಿನ ಕಿರೀಟ ಎಂದು ಹಲವು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ನವದೆಹಲಿ(ಅ.19): ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ (Congress President) ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬುಧವಾರ ಆಯ್ಕೆಯಾಗಿದ್ದಾರೆ. ಗಾಂಧಿ ಕುಟುಂಬದ ನಂಬಿಕಸ್ಥ ಎಂದು ಪರಿಗಣಿಸಲ್ಪಟ್ಟಿರುವ ಖರ್ಗೆ ಅವರು 24 ವರ್ಷಗಳಲ್ಲಿ ಗಾಂಧಿ ಕುಟುಂಬದ ಹೊರಗೆ ಆಯ್ಕೆಯಾದ ಮೊದಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಅವರು ತಿರುವನಂತಪುರಂ ಸಂಸದ ಶಶಿ ತರೂರ್ (Shashi Tharoor) ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಅಕ್ಟೋಬರ್ 26 ರಂದು ಔಪಚಾರಿಕವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ನಿರ್ಗಮನ ಕಾರ್ಯಾಧ್ಯಕ್ಷೆ ಸೋನಿಯಾ ಗಾಂಧಿ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.


ಭಾರತದ ರಾಜಕೀಯ ಇತಿಹಾಸದಲ್ಲಿ ಪಕ್ಷವು ತನ್ನ ಕೆಟ್ಟ ಹಂತದಲ್ಲಿರುವ ಸಮಯದಲ್ಲಿ ಅವರು ಕಾಂಗ್ರೆಸ್‌ನ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಹೀಗಿರುವಾಗ ಖರ್ಗೆಯವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮುಳ್ಳಿನ ಕಿರೀಟ ಎಂದು ಹಲವು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ಇದರ ಹಿಂದೆ ಹಲವು ಕಾರಣಗಳನ್ನೂ ಅವರು ಪಟ್ಟಿ ಮಾಡಿದ್ದಾರೆ, ಅದರಲ್ಲಿ ಉಲ್ಲೇಖವಾದ ಪ್ರಮುಖ ಐದು ಕಾರಣಗಳು.


ಇದನ್ನೂ ಓದಿ: Congress President Polls Result: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ನೂತನ ಅಧ್ಯಕ್ಷ, 7,897 ಮತಗಳೊಂದಿಗೆ ಗೆಲುವು!


* ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವುದು:


ಮಲ್ಲಿಕಾರ್ಜುನ ಖರ್ಗೆ ಅವರ ಮೊದಲ ಮತ್ತು ಪ್ರಮುಖ ಸವಾಲು ಎಂದರೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ವಿಶ್ವಾಸವನ್ನು ಮರುಸ್ಥಾಪಿಸುವ ಮೂಲಕ ಅವರನ್ನು ಒಗ್ಗೂಡಿಸುವುದು. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿ ಹಲವು ನಾಯಕರು ಕಾಂಗ್ರೆಸ್ ತೊರೆದಿದ್ದಾರೆ. ಈಗ ಖರ್ಗೆ ಇದನ್ನು ಬಗೆಹರಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.


* ಗುಂಪುಗಾರಿಕೆ ನಿವಾರಣೆ:


ಇತ್ತೀಚಿನ ದಿನಗಳಲ್ಲಿ ಪಕ್ಷದೊಳಗಿನ ಗುಂಪುಗಾರಿಕೆ ಹಲವೆಡೆ ತಾಂಡವವಾಡುತ್ತಿದೆ. ಇದಕ್ಕೆ ತಾಜಾ ಉದಾಹರಣೆ ರಾಜಸ್ಥಾನವಾಗಿದೆ. ಇಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ವೈಷಮ್ಯವು ಹಲವಾರು ದಿನಗಳವರೆಗೆ ಸುದ್ದಿ ಮಾಡಿತ್ತು. ಛತ್ತೀಸ್‌ಗಢದಲ್ಲೂ ಇದೇ ಪರಿಸ್ಥಿತಿ ಇದ್ದು, ಸಿಎಂ ಭೂಪೇಶ್ ಬಘೇಲ್ ಮತ್ತು ಆರೋಗ್ಯ ಸಚಿವ ಟಿಎಸ್ ಸಿಂಗ್‌ದೇವ್ ನಡುವಿನ ಜಟಾಪಟಿಯೂ ಕಾಲಕಾಲಕ್ಕೆ ಮುನ್ನೆಲೆಗೆ ಬರುತ್ತಿದೆ. ಹೀಗಿರುವಾಗ ಖರ್ಗೆಯವರು ಪಕ್ಷದಲ್ಲಿ ಯಾರನ್ನೂ ನೋಯಿಸದೆ ಈ ಗುಂಪುಗಾರಿಕೆಯನ್ನು ಹೇಗೆ ಹೋಗಲಾಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
* ಗಾಂಧಿ ಕುಟುಂಬದೊಂದಿಗೆ ರಾಜಿ ಮಾಡಿಕೊಳ್ಳುವುದು:


ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಗಾಂಧಿ ಕುಟುಂಬದ ಕೀಲಿಗೊಂಬೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಗಾಂಧಿ ಕುಟುಂಬದಿಂದ ಸಲಹೆ, ಸಹಕಾರ ಪಡೆಯಲು ನಾಚಿಕೆಪಡುವುದಿಲ್ಲ ಎಂದು ಖರ್ಗೆ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಅಧ್ಯಕ್ಷರಾದ ನಂತರ ಅವರ ಕೆಲಸದಲ್ಲಿ ಹೇಗೆ ಹಸ್ತಕ್ಷೇಪ ಮಾಡುತ್ತಾರೆ ಎಂಬುದನ್ನು ಈಗ ನೋಡಬೇಕು, ಏಕೆಂದರೆ ಇದು ಹೆಚ್ಚು ನಡೆದರೆ ಹೊಸ ಅಧ್ಯಕ್ಷರ ಆಯ್ಕೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ದೃಷ್ಟಿಯಲ್ಲಿ ಅಪ್ರಾಮಾಣಿಕ ಎಂದು ಭಾಸವಾಗಬಹುದು.


* ಮೋದಿ-ಶಾ ಪೈಪೋಟಿ:


2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಹೆಚ್ಚು ಸಮಯ ಉಳಿದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಖರ್ಗೆ ಮತ್ತು ಅವರ ಇಡೀ ತಂಡವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೋಡಿಗೆ ಸ್ಪರ್ಧೆ ನೀಡಲು ಪ್ರಬಲ ತಂತ್ರವನ್ನು ಮಾಡಬೇಕಾಗಿದೆ. ಕಾಂಗ್ರೆಸ್‌ನ ಹಿರಿಯ ಮತ್ತು ಯುವ ನಾಯಕರನ್ನು ಈ ಸ್ಪರ್ಧೆಗೆ ಹೇಗೆ ಸಿದ್ಧಗೊಳಿಸುತ್ತಾರೆ ಎನ್ನುವುದನ್ನೂ ಇಲ್ಲಿ ನೋಡಬೇಕು. ಅದೇ ಸಮಯದಲ್ಲಿ, ಈ ಹೋರಾಟದಲ್ಲಿ ಗಾಂಧಿ ಕುಟುಂಬದ ಪಾತ್ರವೇನು ಎಂಬುವುದರ ಮೇಲೆ ಎಲ್ಲರ ಕಣ್ಣು ಕೂಡಾ ಇರುತ್ತದೆ.


* ಯುಪಿಎ ಮೈತ್ರಿ ಬಲವರ್ಧನೆ:


ಭಾರತದ ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಏಕಾಂಗಿ ಆಡಳಿತವನ್ನು ಹೊಂದಿದ್ದ ಸಮಯವಿತ್ತು. ದೇಶದಲ್ಲಿ ಬಹುಪಕ್ಷೀಯ ಸಮ್ಮಿಶ್ರ ಸರ್ಕಾರ ರಚನೆಯಾದ ವರ್ಷಗಳ ನಂತರ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸುವ ಒಲವು ಹೊಂದಿತ್ತು. ಆದರೆ, ಕ್ರಮೇಣ ಅದರ ಬಲ ಕಡಿಮೆಯಾಗಿ, ಇಂದು ಲೋಕಸಭೆಯಲ್ಲಿ ಪ್ರಮುಖ ವಿರೋಧ ಪಕ್ಷದ ಸ್ಥಾನವನ್ನೂ ಪಡೆಯುವುದು ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ.


ಇದನ್ನೂ ಓದಿ: Mallikarjun Kharge: ಸ್ವಂತ ಕಾರಿಲ್ಲ, ಆಯುಧವಿಲ್ಲ: ಕಾಂಗ್ರೆಸ್​ ನೂತನ ಸಾರಥಿ ಖರ್ಗೆ ಹೆಸರಲ್ಲಿದೆ ಇಷ್ಟು ಆಸ್ತಿ


ಇಂತಹ ಪರಿಸ್ಥಿತಿಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅದರ ನಿರೀಕ್ಷೆಗಳನ್ನು ಸಾಧಿಸಲು ಮಿತ್ರಪಕ್ಷಗಳ ಬೆಂಬಲ ಬೇಕಾಗುತ್ತವೆ. ಇಂತಹ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಯುಪಿಎಯ ಮಿತ್ರಪಕ್ಷಗಳೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಮತ್ತು ಅದಕ್ಕೆ ಎಷ್ಟು ಮಿತ್ರರನ್ನು ಸೇರಿಸಬಹುದು ಎಂಬುದೇ ಸವಾಲಾಗಿದೆ. ಈ ಮೈತ್ರಿಕೂಟಗಳೊಂದಿಗೆ ಸೀಟುಗಳ ಚೌಕಾಶಿ ಕೂಡ ದೊಡ್ಡ ಸವಾಲಾಗಿದೆ.

Published by:Precilla Olivia Dias
First published: