Mythological Story: ಪ್ರತಿದಿನ ನಿಮ್ಮ ಮಕ್ಕಳಿಗೆ ಕಥೆ ಹೇಳ್ತಿರಾ? ಹಾಗಿದ್ರೆ ತಪ್ಪದೇ ಈ ಪೌರಾಣಿಕ ಕಥೆಗಳನ್ನು ಹೇಳಿ

ನಮ್ಮ ಪುರಾಣ ಮಹಾಕಾವ್ಯಗಳಲ್ಲಿ ಅಂತಹ ಸಾಕಷ್ಟು ನೀತಿ ಕಥೆಗಳಿವೆ. ಪುರಾಣದ ಕಥೆಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಯುದ್ಧದ ಬಗೆಗಿನ ವರ್ಣನೆಗಳಿವೆ. ಆ ಕಥೆಗಳನ್ನು ಹೇಳುವುದರಿಂದ ಮಕ್ಕಳಿಗೆ ಯಾವುದು ತಪ್ಪು, ಯಾವುದು ಸರಿ ಎಂಬುದನ್ನು ತಿಳಿದುಕೊಳ್ಳಲು, ಸದಾ ಒಳ್ಳೆಯ ಸಂಗತಿ ಮತ್ತು ಕೆಲಸಗಳಿಗೆ ಜಯ ಸಿಗುತ್ತದೆ ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಥೆಗಳು, ಅಜ್ಜ-ಅಜ್ಜಿ ಮತ್ತು ಮೊಮ್ಮಕ್ಕಳ (Grandchildren) ನಡುವೆ ಸೇತುವೆಯಂತೆ ಕೆಲಸ ಮಾಡುತ್ತವೆ. ವಿವಿಧ ರೀತಿಯ ನೀತಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳಿಗೆ (Children) ಜೀವನದ ಮೌಲ್ಯಗಳನ್ನು ತಿಳಿಸುವುದು ಮತ್ತು ಅವರನ್ನು ಕ್ರೀಯಾಶೀಲರನ್ನಾಗಿ ಮಾಡುವುದು ಅಜ್ಜ -ಅಜ್ಜಿಯ (Grandfather Grandmother) ಕರ್ತವ್ಯ ಕೂಡ. ನಮ್ಮ ಪುರಾಣ ಮಹಾಕಾವ್ಯಗಳಲ್ಲಿ ಅಂತಹ ಸಾಕಷ್ಟು ನೀತಿ ಕಥೆಗಳಿವೆ. ಪುರಾಣದ ಕಥೆಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಯುದ್ಧದ ಬಗೆಗಿನ ವರ್ಣನೆಗಳಿವೆ. ಆ ಕಥೆಗಳನ್ನು (Story) ಹೇಳುವುದರಿಂದ ಮಕ್ಕಳಿಗೆ ಯಾವುದು ತಪ್ಪು, ಯಾವುದು ಸರಿ ಎಂಬುದನ್ನು ತಿಳಿದುಕೊಳ್ಳಲು, ಸದಾ ಒಳ್ಳೆಯ ಸಂಗತಿ ಮತ್ತು ಕೆಲಸಗಳಿಗೆ ಜಯ ಸಿಗುತ್ತದೆ ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ರಾಮಾಯಣ ಮತ್ತು ಮಹಾಭಾರತದ ಕಥೆಗಳು ಮಕ್ಕಳಿಗೆ ತಮ್ಮ ಕಲ್ಪನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ನಮ್ಮ ಆಚರಣೆಗಳು ಮತ್ತು ಹಬ್ಬ ಹರಿದಿನಗಳ ಮಹತ್ವವನ್ನು ತಿಳಿದುಕೊಳ್ಳಲು, ಹೆತ್ತವರು, ಗುರು ಹಿರಿಯರು ಮತ್ತು ಕುಟುಂಬದ ಮೇಲೆ ಪ್ರೀತಿ, ವಿಶ್ವಾಸ ಹಾಗೂ ಗೌರವವನ್ನು ಬೆಳೆಸಿಕೊಳ್ಳಲು, ದೇವರ ಮೇಲಿನ ಭಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತವೆ. ನಮ್ಮ ದೇಶದ ಪುರಾಣ ಮಹಾಕಾವ್ಯಗಳ ಕಥೆ, ಉಪ ಕಥೆಗಳು ಇಂದಿಗೂ ಪ್ರಸ್ತುತವಾಗಿದೆ. ಅಷ್ಟೇ ಅಲ್ಲ, ಈ ಮಹಾಕಾವ್ಯಗಳು ಮತ್ತು ಪುರಾಣ ಪುಣ್ಯ ಕಥೆಗಳು ನಮ್ಮ ಭಾರತದ ದೇಶದ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿವೆ.

ನೀವು ನಿಮ್ಮ ಮೊಮ್ಮಕ್ಕಳಿಗೆ ಹೇಳಬಹುದಾದ ಕೆಲವು ಕಥೆಗಳ ಕುರಿತು ಇಲ್ಲಿದೆ ಮಾಹಿತಿ.

ಕೃಷ್ಣ ಮತ್ತು ಸುಧಾಮ - ಸ್ನೇಹದ ಮೌಲ್ಯ
ಕೃಷ್ಣ ಮತ್ತು ಸುಧಾಮನ ಸ್ನೇಹ ನಿಜವಾದ ಸ್ನೇಹದ ಮೌಲ್ಯವನ್ನು ತಿಳಿಸುತ್ತದೆ. ಕೃಷ್ಣನ ಸ್ನೇಹಿತ ಸುಧಾಮ ಕಡು ಬಡವನಾಗಿದ್ದ. ಒಮ್ಮೆ ಕೃಷ್ಣನ ಬಳಿ ಸಹಾಯ ಕೇಳಲೆಂದು ಹೋಗುವಾಗ, ಅವನಿಗೆ ಕೊಡಲೆಂದು ಅವಲಕ್ಕಿಯನ್ನು ಕಟ್ಟಿಕೊಂಡು ಹೋಗುತ್ತಾನೆ. ಆದರೆ ಕೃಷ್ಣನ ಅರಮನೆ ತಲುಪಿದ ಬಳಿಕ, ತಾನು ತಂದಿರುವ ಅವಲಕ್ಕಿಯನ್ನು ಕೃಷ್ಣನಿಗೆ ಕೊಡಲು ಸಂಕೋಚವಾಗುತ್ತದೆ. ಅದನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಕೃಷ್ಣ ಅದನ್ನು ಕಂಡು ಕೊಂಡು, ಸುಧಾಮನಿಂದ ಅವಲಕ್ಕಿಯನ್ನು ಪಡೆದು ಖುಷಿಯಿಂದ ತಿನ್ನುತ್ತಾನೆ. ಕೃಷ್ಣನನ್ನು ಭೇಟಿಯಿಂದ ಸಂತುಷ್ಟಗೊಂಡ ಸುಧಾಮ ಯಾವ ಸಹಾಯವನ್ನು ಕೇಳದೆಯೇ, ಮನೆಗೆ ಮರಳುತ್ತಾನೆ. ಆದರೆ ಕೃಷ್ಣ ಸುಧಾಮನ ಮನದ ಇಂಗಿತವನ್ನು ಅರ್ಥ ಮಾಡಿಕೊಂಡು, ಅವನು ಮನೆ ತಲುಪುವಷ್ಟರಲ್ಲಿ ಅವನ ಮನೆಯ ಬಡತನ ಮತ್ತು ಕಷ್ಟಗಳನ್ನೆಲ್ಲಾ ಕೃಷ್ಣ ಪರಿಹರಿಸಿರುತ್ತಾನೆ.

ಇದನ್ನೂ ಓದಿ: Lemon Remedies: ನಿಂಬೆ ಹಣ್ಣಿನಲ್ಲಿದೆ ಅನೇಕ ಸಮಸ್ಯೆಗಳಿಗೆ ಪರಿಹಾರ

ಗಣೇಶ – ತ್ವರಿತ ಆಲೋಚನೆ ಸಮಯವನ್ನು ಉಳಿಸುತ್ತದೆ
ಮುನಿ ವೇದ ವ್ಯಾಸರು ಮಹಾಭಾರತದ ಪಠ್ಯವನ್ನು ತಾನು ವಿವರಿಸುತ್ತೇನೆ, ನೀನು ಬರೆದುಕೊಡು ಎಂದು ಗಣೇಶನನ್ನು ಸಂಪರ್ಕಿಸುತ್ತಾರೆ. ಆದರೆ,ಯಾವುದೇ ವಿರಾಮ ತೆಗೆದುಕೊಳ್ಳದೆ ಒಂದೇ ವೇಗದಲ್ಲಿ ಬರೆದುಕೊಂಡು ಹೋಗಬೇಕು ಎಂದು ಶರತ್ತನ್ನು ಕೂಡ ಹಾಕುತ್ತಾರೆ. ಆದರೂ, ಗಣೇಶ ಬರೆಯುತ್ತಿರುವಾಗ ಬರೆಯುತ್ತಿದ್ದ ಗರಿಯು ಮುರಿದು ಹೋಗುತ್ತದೆ. ಎದ್ದೇಳಲು ಅವಕಾಶ ಇಲ್ಲದ ಕಾರಣ, ಗಣೇಶ ತನ್ನ ಒಂದು ದಂತವನ್ನು ಮುರಿದು, ಅದರ ತೀಕ್ಷ್ಣವಾದ ತುದಿಯ ಸಹಾಯದಿಂದ ಮಹಾಕಾವ್ಯದ ಉಳಿದ ಕಥೆಯನ್ನು ಬರೆದನು.

ಅಭಿಮನ್ಯು – ತನ್ನ ಕೊನೆ ಕ್ಷಣದ ವರೆಗೂ ಹೋರಾಡಿದ ಕಥೆ
ಕುರುಕ್ಷೇತ್ರ ಯುದ್ಧದ ವೀರಾವೇಶದಿಂದ ಹೋರಾಡಿದ ಯೋಧರಲ್ಲಿ ಅರ್ಜುನ ಮತ್ತು ಸುಭದ್ರೆಯ ಮಗ ಅಭಿಮನ್ಯು ಕೂಡ ಒಬ್ಬ. ಅವನು ತಾಯಿಯ ಗರ್ಭದಲ್ಲಿ ಇರುವಾಗಲೇ, ಯುದ್ಧದ ಚಕ್ರವ್ಯೂಹ ತಂತ್ರದ ಬಗ್ಗೆ ಕೇಳಿಸಿಕೊಂಡಿರುತ್ತಾನೆ. ಆದರೆ ಚಕ್ರವ್ಯೂಹದಿಂದ ಹೊರ ಬರುವ ವಿಧಾನವನ್ನು ಕೇಳಿಸಿಕೊಳ್ಳುವಷ್ಟರಲ್ಲಿ ನಿದ್ದೆಗೆ ಜಾರುತ್ತಾನೆ. ಯುದ್ಧದ ಸಂದರ್ಭದಲ್ಲಿ ಅಭಿಮನ್ಯು ಚಕ್ರವ್ಯೂಹದ ಒಳಗೆ ಸಿಲುಕಿ ಕೊನೆ ಕ್ಷಣದ ವರೆಗೂ, ತನ್ನ ಹೆತ್ತವರು ಮತ್ತು ಕುಟುಂಬದ ರಕ್ಷಣೆಗಾಗಿ ಹೋರಾಡುತ್ತಾನೆ, ಆದರೆ ಚಕ್ರವ್ಯೂಹದಿಂದ ಹೊರ ಬರುವ ತಂತ್ರ ತಿಳಿಯದೆ ಸಾವನ್ನಪ್ಪುತ್ತಾನೆ. ಅಭಿಮನ್ಯುವಿನ ತ್ಯಾಗದ ಕಥೆಯ ಮೂಲಕ ಮಕ್ಕಳಿಗೆ, ಕುಟುಂಬದ ರಕ್ಷಣೆಗಾಗಿ ಹೋರಾಟ ಮಾಡುವುದನ್ನು ಯಾವತ್ತೂ ನಿಲ್ಲಿಸಬಾರದು ಎಂಬ ನೀತಿಯನ್ನು ತಿಳಿಸಬಹುದು.

ಇದನ್ನೂ ಓದಿ: Thapas in Ayodhya: ಸುತ್ತ ನಿಗಿನಿಗಿ ಕೆಂಡವನ್ನಿಟ್ಟು ಮಧ್ಯೆ ಕೂರುವ ಸಾಧುಗಳು!

ಸದ್ಗುಣ ಹೃದಯದ ರಾಮ
ರಾಮಾಯಣ ಅತ್ಯಂತ ಜನಪ್ರಿಯ ಪೌರಾಣಿಕ ಕಥೆಗಳಲ್ಲಿ ಒಂದು. ತಂದೆ ಕೊಟ್ಟ ಮಾತನ್ನು ಉಳಿಸಲು, ರಾಮ ತನ್ನ ರಾಜ್ಯವನ್ನು ತೊರೆದು, ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನ ಜೊತೆ ವನವಾಸಕ್ಕೆ ಹೋಗಬೇಕಾಗುತ್ತದೆ. ವನವಾಸದ ಕೊನೆಯಲ್ಲಿ, ರಾವಣ ಸೀತೆಯನ್ನು ಅಪಹರಣ ಮಾಡುತ್ತಾನೆ. ಎಲ್ಲಾ ಅಡೆತಡೆಗಳ ನಡುವೆಯೂ ರಾಮ, ರಾವಣ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಮಡದಿ ಸೀತೆಯನ್ನು ರಕ್ಷಿಸುತ್ತಾನೆ. ರಾಮ ಯಾವುದೇ ತಪ್ಪು ಕೆಲಸವನ್ನು ಮಾಡಲು ಒಲ್ಲದ ದೇವತಾಪುರುಷ. ರಾಮಯಣದಲ್ಲಿ ಬರುವ ಹಲವಾರು ಉಪ ಕಥೆಗಳು, ಮೌಲ್ಯಗಳಿಗೆ ನಿಷ್ಠರಾಗಿರುವುದರ ಮಹತ್ವ ಮತ್ತು ಸಹೋದರತ್ವದ ಪ್ರಾಮುಖ್ಯತೆಯನ್ನು ಮಕ್ಕಳಿಗೆ ತಿಳಿಸಲು ಈ ಕಥೆ ಸಹಾಯಕವಾಗಿದೆ. ಅಷ್ಟೇ ಅಲ್ಲ , ಹನುಮಂತ ಹಾಗೂ ಲಕ್ಷ್ಮಣನ ಪಾತ್ರಗಳು ಕೂಡ, ಸ್ನೇಹ ಮತ್ತು ಸಹೋದರತ್ವದ ವಿಷಯದಲ್ಲಿ ಮಕ್ಕಳಿಗೆ ಮಾದರಿಯಾಗುತ್ತವೆ.

ದುರ್ಗಾ - ಸ್ತ್ರೀಯ ಶಕ್ತಿ
ರಾಕ್ಷಸ ರಾಜ ಮಹಿಷಾಸುರ ಸ್ವರ್ಗದ ಮೇಲೆ ಆಕ್ರಮಣ ಮಾಡಿ, ಇಂದ್ರನನ್ನು ಸೋಲಿಸಿ ಆತನ ಸಿಂಹಾಸನವನ್ನು ಕಸಿದುಕೊಳ್ಳುತ್ತಾನೆ. ಆಗ ಎಲ್ಲಾ ದೇವರುಗಳು ತಮ್ಮ ಪವಿತ್ರ ಶಕ್ತಿಯನ್ನು ಧಾರೆ ಎರೆದು ಮಹಾಮಾತೆ ದುರ್ಗಾ ದೇವಿಯನ್ನು ಸೃಷ್ಟಿಸುತ್ತಾರೆ. ಮಹಿಷಾಸುರ ಕಾಟದಿಂದ ಮುಕ್ತಿ ಪಡೆಯಲು ದುರ್ಗಾ ಮಾತೆಯೇ ಅವರೆಲ್ಲರ ಕೊನೆಯ ನಿರೀಕ್ಷೆಯಾಗಿರುತ್ತಾಳೆ. ಆಕೆ ಮಹಿಷಾಸುರ ಮತ್ತು ಆತನ ಇಡೀ ಸೈನ್ಯವನ್ನು ಸೋಲಿಸುತ್ತಾಳೆ. ದೇವತೆಗಳನ್ನು ಮತ್ತು ಜಗತ್ತನ್ನು ಅಸುರರ ಕಾಟದಿಂದ ರಕ್ಷಿಸುತ್ತಾಳೆ. ಈ ಕಥೆ ಸ್ತ್ರೀ ಮತ್ತು ಪುರುಷರ ಸಮಾನತೆಯ ಮಹತ್ವವನ್ನು ತಿಳಿಸುತ್ತದೆ. ಅದಷ್ಟೇ ಅಲ್ಲ, ಮಹಿಳೆಯರು ಅಬಲೆಯರು ಮತ್ತು ಅವರು ಸ್ವಂತ ಶಕ್ತಿಯಿಂದ ಜೀವನದಲ್ಲಿ ಹೋರಾಟ ಮಾಡಿ ಗೆಲ್ಲಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಯನ್ನು ದೂರ ಮಾಡುತ್ತದೆ.

ಅರ್ಜುನ - ಸಂಪೂರ್ಣ ಏಕಾಗ್ರತೆಯಿಂದ ವಿಜಯ
ಪಾಂಡವರು, ಗುರು ದ್ರೋಣಾಚಾರ್ಯರಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ, ಅವರು ಒಂದು ದಿನ, ಮರದ ಮೇಲೆ ಒಂದು ಹಕ್ಕಿಯ ಗೊಂಬೆಯನ್ನು ಇಟ್ಟು ಅದರ ಕಣ್ಣಿಗೆ ಗುರಿಯಿಟ್ಟು ಹೊಡೆಯಬೇಕೆಂಬ ಪರೀಕ್ಷೆಯನ್ನು ಇಡುತ್ತಾರೆ. ಗುರಿ ಇಡುವುದಕ್ಕೂ ಮೊದಲು, ನಿಮಗೆ ಅಲ್ಲಿ ಏನು ಕಾಣುತ್ತಿದೆ ಎಂದು ಪ್ರತಿಯೊಬ್ಬ ಶಿಷ್ಯರಲ್ಲಿ ಕೇಳುತ್ತಾರೆ ಅವರು. ಒಬ್ಬಬ್ಬೊರು ಒಂದೊಂದು ಉತ್ತರ ನೀಡುತ್ತಾರೆ. ಆದರೆ ಅರ್ಜುನ ಮಾತ್ರ ತನಗೆ ಹಕ್ಕಿಯ ಕಣ್ಣು ಬಿಟ್ಟರೆ ಬೇರೇನೂ ಕಾಣಿಸುತ್ತಿಲ್ಲ ಎಂದು ಧೈರ್ಯದಿಂದ ಉತ್ತರಿಸುತ್ತಾನೆ. ಆಗ ದ್ರೋಣಾಚಾರ್ಯರು ಆ ಹಕ್ಕಿಯ ಕಣ್ಣಿಗೆ ಗುರಿಯಿಟ್ಟು ಹೊಡೆಯಲು ಹೇಳುತ್ತಾರೆ. ಅರ್ಜುನ ಹಕ್ಕಿಯ ಕಣ್ಣಿಗೆ ಗುರಿಯಿಟ್ಟು ಹೊಡೆಯುವುದರಲ್ಲಿ ಸಫಲನಾಗುತ್ತಾನೆ.

ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು, ಅದಕ್ಕೆ ಬದ್ಧರಾಗಿದ್ದರೆ ಜೀವನದಲ್ಲಿ ಸಫಲರಾಗಬಹುದು ಎಂಬುದನ್ನು ಈ ಕಥೆಯ ನೀತಿ ತಿಳಿಸುತ್ತದೆ. ಮಕ್ಕಳ ಚಿತ್ತವನ್ನು ಬೇರೆಡೆ ಸೆಳೆಯುವ ನಾನಾ ಸಂಗತಿಗಳು ಇರುತ್ತವೆ, ಆದರೆ ಮನಸ್ಸನ್ನು ಗುರಿಯ ಕಡೆಗೆ ಮಾತ್ರ ಇಟ್ಟು ಮುನ್ನಡೆದರೆ, ಗುರಿಯನ್ನು ಸಾಧಿಸಲು ಮತ್ತು ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬುವುದನ್ನು ಇದರಿಂದ ತಿಳಿಯಬಹುದು.

ಹನುಮಾನ್ – ಮನಸ್ಸಿದ್ದರೆ ಮಾರ್ಗವಿದೆ
ರಾಮಯಣದಲ್ಲಿ ಯುದ್ಧಭೂಮಿಯಲ್ಲಿ ಲಕ್ಷ್ಮಣ ಗಾಯಗೊಂಡು ಮೂರ್ಛೆ ತಪ್ಪಿದಾಗ, ಅವನನ್ನು ಉಳಿಸಲು ಅಪರೂಪದ ಸಂಜೀವಿನಿ ಮೂಲಿಕೆಯ ಸಹಾಯದಿಂದ ಮಾತ್ರ ಉಳಿಸಲು ಸಾಧ್ಯ ಎಂದು ತಿಳಿದು ಬರುತ್ತದೆ. ಆಗ ಹನುಮಂತ ಸಂಜೀವಿನಿ ಮೂಲಿಕೆಯನ್ನು ತರುವ ಜವಾಬ್ಧಾರಿಯನ್ನು ತೆಗೆದುಕೊಳ್ಳುತ್ತಾನೆ. ಹಿಮಾಲಯಕ್ಕೆ ತಲುಪಿದಾಗ, ತಾನು ತರಬೇಕಾದ ಮೂಲಿಕೆ ಯಾವುದು ಎಂದು ಹನುಮಂತನಿಗೆ ತಿಳಿಯುವುದಿಲ್ಲ. ಆಗ ಹನುಮಂತ ತನ್ನ ಶಕ್ತಿಯನ್ನು ಉಪಯೋಗಿಸಿ ಸಂಜೀವಿನಿ ಮೂಲಿಕೆ ಇರುವ ಇಡೀ ಬೆಟ್ಟವನ್ನೇ ಯುದ್ಧ ಭೂಮಿಗೆ ಹೊತ್ತು ತರುತ್ತಾನೆ.

ಇದನ್ನೂ ಓದಿ: Sharpen Your child: ಮಕ್ಕಳನ್ನು ಮತ್ತಷ್ಟು ಚುರುಕುಗೊಳಿಸಲು ಈ ಟಿಪ್ಸ್ ಫಾಲೋ ಮಾಡಿ

ಸಂಜೀವಿನಿ ಮೂಲಿಕೆಯ ಮೂಲಕ ಲಕ್ಷ್ಮಣನ ಜೀವ ಉಳಿಸಿದ ಬಳಿಕ, ಬೆಟ್ಟವನ್ನು ಮರಳಿ ಅಲ್ಲೇ ಇಟ್ಟು ಬರುತ್ತಾನೆ. ಯಾವುದೇ ಕೆಲಸವನ್ನು ಮಾಡಬೇಕು ಎಂಬ ಮನಸ್ಸು ಇದ್ದರೆ, ಮನಸ್ಸಿನಲ್ಲಿ ದೃಢ ನಿರ್ಧಾರ ಇದ್ದರೆ, ಅದನ್ನು ಮಾಡಲು ಮಾರ್ಗ ಕೂಡ ಕಾಣ ಸಿಗುತ್ತದೆ ಎಂಬ ನೀತಿಯನ್ನು ಇದರಿಂದ ಮಕ್ಕಳು ತಿಳಿಯುತ್ತಾರೆ.

ನಮ್ಮ ಭಾರತೀಯ ಸಂಸ್ಕೃತಿ ಅತ್ಯಂತ ವೈವಿಧ್ಯಮಯವಾಗಿದೆ ಮತ್ತು ಇಲ್ಲಿನ ಆಸಕ್ತಿದಾಯಕ ಪೌರಾಣಿಕ ಕಥೆಗಳು, ಮಕ್ಕಳಿಗೆ ಈ ಸಂಕೀರ್ಣವಾದ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಮತ್ತು ನೈತಿಕತೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ. ನಿಮ್ಮ ಮೊಮ್ಮಕ್ಕಳಿಗೆ ಪೌರಾಣಿಕ ಕಥೆಗಳನ್ನು ತಪ್ಪದೇ ಹೇಳಿ ಮತ್ತು ಅವರಲ್ಲಿ ಕ್ರೀಯಾಶೀಲತೆ ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ಅರಿವನ್ನು ಮೂಡಿಸಿ.
Published by:Ashwini Prabhu
First published: