ಯುರೋಪಿಯನ್ ಯೂನಿಯನ್ ಡೇಟಾ ಸಂರಕ್ಷಣೆ ಕಾನೂನು ಅನ್ವಯ ಅಮೆಜಾನ್ಗೆ 900 ಮಿಲಿಯನ್ ಡಾಲರ್ (ರೂ 66,941,370,000.00) ದಂಡ ವಿಧಿಸಿದೆ. 2018ರಲ್ಲಿ ಸಾಮಾನ್ಯ ಡೇಟಾ ಸಂರಕ್ಷಣೆ ನಿಯಂತ್ರಣಾ ಕಾಯ್ದೆಯನ್ನು ಯುರೋಪಿಯನ್ ಯೂನಿಯನ್ ಜಾರಿಗೆ ತಂದನಂತರ ಟೆಕ್ ದೈತ್ಯ ಕಂಪೆನಿಗಳು ಡಾಟಾ ನಿಯಂತ್ರಣ ಪರಿಶೀಲನೆಗೆ ಒಳಪಟ್ಟಿದ್ದು, ಬಳಕೆದಾರರ ಡೇಟಾ ಅಂದರೆ ಬಳಕೆದಾರರ ಮಾಹಿತಿ ದುರುಪಯೋಗಪಡಿಸುವಿಕೆಗೆ ಇದು ನಿಯಂತ್ರಣ ಹೇರಲಿದೆ.
ಅಮೆಜಾನ್ ದಂಡ ವಿಧಿಸಿರುವುದಕ್ಕೆ ಸವಾಲೊಡ್ಡುವುದಾಗಿ ತಿಳಿಸಿದ್ದರೂ, ಯುರೋಪಿಯನ್ ಕಾನೂನು ಹಾಗೂ ಅಮೆಜಾನ್ನಂತಹ ಟೆಕ್ ದೈತ್ಯ ಕಾನೂನಿನ ಎದುರು ಮುಗ್ಗರಿಸಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳಲೇಬೇಕು.
ಅಮೆಜಾನ್ಗೆ ದಂಡ ವಿಧಿಸಿದ್ದು ಹೇಗೆ? ಯಾವ ಕಾರಣಕ್ಕಾಗಿ?
ಲಕ್ಸಂಬರ್ಗ್ನ ನ್ಯಾಷನಲ್ ಕಮಿಷನ್ ಫಾರ್ ಡಾಟಾ ಪ್ರೊಟೆಕ್ಷನ್ (CNPD) ಅಮೆಜಾನ್ಗೆ ದಂಡ ವಿಧಿಸಿದೆ. ಫ್ರೆಂಚ್ ಗೌಪ್ಯತಾ ಗುಂಪು La Quadrature du Net 2018 ರಲ್ಲಿ ಅಮೆಜಾನ್ ತನ್ನ ಜಾಹೀರಾತನ್ನು, ಗ್ರಾಹಕರು ಸ್ವೀಕರಿಸುವ ಮಾಹಿತಿಯನ್ನು ಪ್ರದರ್ಶಿಸಲು ಗ್ರಾಹಕರ ಡೇಟಾವನ್ನು ಕುಶಲತೆಯಿಂದ ನಿರ್ವಹಿಸುತ್ತಿದೆ, ಯಾರಿಗೂ ಗೊತ್ತಾಗದಂತೆ ಈ ಕೆಲಸ ಮಾಡುತ್ತಿದೆ ಎಂದು ಸಂಸ್ಥೆ ದೂರಿತ್ತು. ಅಮೆಜಾನ್ ವಿರುದ್ಧ 10,000 ಜನರು ದೂರು ನೀಡಿದ್ದು ಇದನ್ನು ಸಾಮೂಹಿಕ ದೂರು ಎಂಬುದಾಗಿ ಪರಿಗಣಿಸಲಾಗಿತ್ತು. ಅದೇ ರೀತಿ ಅಮೆಜಾನ್ ವಿಧಿಸಿರುವ ಜಾಹೀರಾತು ಗುರಿ ವ್ಯವಸ್ಥೆಯು ಕಾನೂನನ್ನು ಉಲ್ಲಂಘಿಸಿದೆ ಎಂಬುದಾಗಿ ತೀರ್ಪು ವಿವರಿಸಿದೆ. ಅಮೆಜಾನ್ ನಿಯಮ ಉಲ್ಲಂಘಿಸಿರುವುದಕ್ಕೆ ಯುರೋಪಿಯನ್ ಯೂನಿಯನ್ ವಿಧಿಸಿರುವ ದಂಡ ಇದು ಎಂದು ಹೇಳಲಾಗಿದೆ.
GDPR ಏನು ಹೇಳುತ್ತದೆ?
ಅನೇಕ ವೆಬ್ಸೈಟ್ಗಳು ವಿಶೇಷವಾಗಿ ಯುರೋಪ್ನ ಅಧೀನಕ್ಕೆ ಒಳಪಡದಿರುವ ವೆಬ್ಸೈಟ್ಗಳು ಅವುಗಳು ಪುಟಕ್ಕೆ ಭೇಟಿ ನೀಡಿದಾಗ ಅವುಗಳ ಕುಕೀಗಳ ಬಳಕೆಗೆ ಬಳಕೆದಾರರ ಒಪ್ಪಿಗೆ ಪಡೆದುಕೊಳ್ಳಿ ಎಂದು ಪದೇ, ಪದೇ ಒತ್ತಾಯಿಸುತ್ತವೆ. 2018ರಲ್ಲಿ ಜಾರಿಗೆ ಬಂದ GDPR ಕಾನೂನು ಇದನ್ನೇ ಹೇಳುತ್ತದೆ. ಯಾವುದೇ ಬಳಕೆದಾರರ ಡೇಟಾ ಅಥವಾ ಮಾಹಿತಿ ಪಡೆಯುವ ಮೊದಲು ಅವರ ಒಪ್ಪಿಗೆಯನ್ನು ಕಂಪೆನಿಗಳು ಪಡೆದುಕೊಳ್ಳಬೇಕು ಎಂದಾಗಿದೆ. ಹೆಚ್ಚಿನ ದಂಡಗಳನ್ನು ವಿಧಿಸುವ ಮೂಲಕ ತನ್ನ ಬಿಗಿ ಹಿಡಿತವನ್ನು ಎಲ್ಲಾ ಕಂಪೆನಿಗಳಿಗೆ ಎಚ್ಚರಿಕೆ ನೀಡಿದೆ.
ಫ್ರೆಂಚ್ ಹಕ್ಕುಗಳ ಗುಂಪು ತಿಳಿಸಿರುವಂತೆ, ಅಮೆಜಾನ್ಗೂ ಮುನ್ನ ಇನ್ನೊಂದು ಪ್ರಖ್ಯಾತ ಹಾಗೂ ಹೆಸರಾಂತ ಟೆಕ್ ದೈತ್ಯ ಗೂಗಲ್ ಮೇಲೆ 2019ರಲ್ಲಿ ದಂಡ ವಿಧಿಸಲಾಯಿತು. ಗೂಗಲ್ ತನ್ನ ಆ್ಯಂಡ್ರಾಯ್ಡ್ ಸಿಸ್ಟಂನಲ್ಲಿ ಜಾಹೀರಾತು ಆಯ್ಕೆಯು ಸಾಮಾನ್ಯ ಡೇಟಾ ಸಂರಕ್ಷಣಾ ನಿಯಮಗಳನ್ನು ಅನುಸರಿಸುವುದಿಲ್ಲ ಎಂಬ ಕಾರಣಕ್ಕೆ 57 ಮಿಲಿಯನ್ ಡಾಲರ್ ದಂಡವನ್ನು ವಿಧಿಸಲಾಗಿತ್ತು.
ಜಿಡಿಪಿಆರ್ ನಿಬಂಧನೆಗಳನ್ನು ಹೊರಹಾಕಲು ಯುರೋಪಿಯನ್ ಒಕ್ಕೂಟದ ಸದಸ್ಯರ ನಡುವೆ ಮೂರು ವರ್ಷಗಳ ಮಾತುಕತೆಗಳು ನಡೆದವು ಮತ್ತು ಇವುಗಳನ್ನು ಈಗ ಅವರ ರಾಷ್ಟ್ರೀಯ ಕಾನೂನುಗಳ ಭಾಗವಾಗಿ ಸೇರಿಸಲಾಗಿದೆ ಎಂದು ವರದಿಗಳು ಹೇಳುತ್ತವೆ, ಇದರರ್ಥ ನಿಯಮಗಳ ಉಲ್ಲಂಘನೆಗಾಗಿ ಕಂಪನಿಗಳು ನ್ಯಾಯವ್ಯಾಪ್ತಿಯಲ್ಲಿ ಕ್ರಮಗಳನ್ನು ಎದುರಿಸಬಹುದು. ಯುರೋಪಿಯನ್ ಒಕ್ಕೂಟದ ಜಿಡಿಪಿಆರ್ ಅನ್ನು ವಿಶ್ವದಲ್ಲಿಯೇ ಇದು ಕಠಿಣ ಗೌಪ್ಯತೆ ಹಾಗೂ ಭದ್ರತಾ ಕಾನೂನು ಎಂದು ಉಲ್ಲೇಖಿಸಿದೆ.
ಈ ಕುರಿತು ಅಮೆಜಾನ್ ಅಭಿಪ್ರಾಯವೇನು?
ಫ್ರಾನ್ಸ್ನಲ್ಲಿ ದಂಡ ವಿಧಿಸಿದ ನಂತರ ಗೂಗಲ್ ಈ ನಿರ್ಧಾರವನ್ನು ಮೇಲ್ಮನವಿ ಸಲ್ಲಿಸಿತು, ಆದರೆ ದೇಶದ ಅತ್ಯುನ್ನತ ಆಡಳಿತ ಪ್ರಾಧಿಕಾರವು ಕಳೆದ ವರ್ಷ ಜೂನ್ನಲ್ಲಿ ಈ ಮೇಲ್ಮನವಿಯನ್ನು ತಿರಸ್ಕರಿಸಿತು. ಗೂಗಲ್ ಬಳಕೆದಾರರೊಂದಿಗೆ ಹಂಚಿಕೊಂಡ ಮಾಹಿತಿಯು "ಸ್ಪಷ್ಟತೆಯಿಂದ ಕೂಡಿಲ್ಲ ಹಾಗೂ GDPR ಕಾನೂನಿನ ಅವಕಾಶ ಇನ್ನಷ್ಟು ಅಗತ್ಯವಿದೆ ಎಂದು ತಿಳಿಸಿತು.
ಅಮೆಜಾನ್ ಮೇಲೆ ದಂಡ ವಿಧಿಸಿರುವ ಕುರಿತು ಟೆಕ್ ದೈತ್ಯ, ಈ ವಿಚಾರದಲ್ಲಿ ಅರ್ಹತೆಯನ್ನು ಗಮನಿಸದೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ. "ಯಾವುದೇ ಡೇಟಾ ಉಲ್ಲಂಘನೆಯಾಗಿಲ್ಲ, ಮತ್ತು ಯಾವುದೇ ಮೂರನೇ ವ್ಯಕ್ತಿಗೆ ಯಾವುದೇ ಗ್ರಾಹಕರ ಡೇಟಾವನ್ನು ಬಹಿರಂಗಪಡಿಸಲಾಗಿಲ್ಲ" ಎಂದು ಅಮೆಜಾನ್ ಹೇಳಿದೆ. ನಾವು ಹೇಗೆ ಗ್ರಾಹಕರಿಗೆ ಸಂಬಂಧಿತ ಜಾಹೀರಾತನ್ನು ತೋರಿಸುತ್ತೇವೆ ಎಂಬುದಕ್ಕೆ ಸಂಬಂಧಿಸಿದ ನಿರ್ಧಾರವು ಯುರೋಪಿಯನ್ ಗೌಪ್ಯತೆ ಕಾನೂನಿನ ವ್ಯಕ್ತಿನಿಷ್ಠ ಮತ್ತು ಪರೀಕ್ಷಿಸದ ವ್ಯಾಖ್ಯಾನಗಳ ಮೇಲೆ ಅವಲಂಬಿತವಾಗಿದೆ ಹಾಗೂ ಪ್ರಸ್ತಾವಿತ ದಂಡವು ಅನ್ಯಾಯದಿಂದ ಕೂಡಿದೆ ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ