Explained: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಟಾರ್ಗೆಟ್ ಆಗಿದ್ದೇಕೆ? ನಿನ್ನೆ ರಾತ್ರಿ ನಡೆದಿದ್ದು ಏನು?

ನಿನ್ನೆ ಕಾರೊಂದು ಹರ್ಷ ಅವರನ್ನು ಹಿಂಬಾಲಿಸಿ ಬಂದಿತ್ತಾ? ಈ ಹಿಂದೆ ಅನ್ಯ ಕೋಮಿನ ಯುವಕರು ಬೆದರಿಕೆ ಹಾಕಿದ್ದರಾ? ಅಟ್ಟಾಡಿಸಿ ಕೊಂದಿದ್ದೇಕೆ ಆ ಹಂತಕರು? ಅಷ್ಟಕ್ಕೂ ಹರ್ಷ ಹತ್ಯೆ ನಡೆದ ದಿನ ಏನಾಗಿತ್ತು? ಹತ್ಯೆ ನಂತರದ ಬೆಳವಣಿಗೆಯೇನು? ಇಲ್ಲಿದೆ ಓದಿ ಸಂಪೂರ್ಣ ವಿವರ...

ಕೊಲೆಯಾದ ಹರ್ಷ

ಕೊಲೆಯಾದ ಹರ್ಷ

  • Share this:
ಶಿವಮೊಗ್ಗ: ಬೇಸಿಗೆಯಲ್ಲೂ (Summer) ತಣ್ಣಗೆ ಇದ್ದ ಮಲೆನಾಡು (Malenadu) ಬೆಚ್ಚಿಬಿದ್ದಿದೆ. ಸುದ್ದಿ ಕೇಳಿದವರ ಮೈಯಲ್ಲಿ ಸಣ್ಣಗೆ ಬೆವರು ಹರಿಯತೊಡಗಿದೆ. ಶಾಂತವಾಗಿದ್ದ ಶಿವಮೊಗ್ಗದಲ್ಲಿ (Shivamogga) ಮತ್ತೆ ಅಶಾಂತಿಯ ಕೂಗು ಎದ್ದಿದೆ. ಅದಕ್ಕೆಲ್ಲ ಕಾರಣ ನಿನ್ನೆ ರಾತ್ರಿ ನಡೆದ ಹಿಂದೂ ಪರ ಸಂಘಟನೆ ಕಾರ್ಯಕರ್ತನ (Hindu Activist) ಬರ್ಬರ ಹತ್ಯೆ. ಬಜರಂಗದಳದಲ್ಲಿ (Bajrang Dal) ಸಕ್ರಿಯನಾಗಿದ್ದ ಕಾರ್ಯಕರ್ತ ಹರ್ಷ (Harsha) ಎಂಬುವರನ್ನು ನಿನ್ನೆ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಿಜಾಬ್ ವಿವಾದದ (Hijab Controversy) ಗಲಾಟೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದ್ದು, ಪರಿಸ್ಥಿತಿ ಹದಗೆಟ್ಟಿದೆ. ಸದ್ಯ ಶಿವಮೊಗ್ಗದಲ್ಲಿ 144 ಸೆಕ್ಷನ್ (Section) ಜಾರಿ ಮಾಡಲಾಗಿದ್ದು, ಪೊಲೀಸರು (Police) ಎಲ್ಲೆಲ್ಲೂ ಹದ್ದಿನ ಕಣ್ಣಿರಿಸಿದ್ದಾರೆ. ಹಾಗಾದ್ರೆ ಹಿಂದೂಪರ ಸಂಘಟನೆ ಕಾರ್ಯಕರ್ತ ದುಷ್ಕರ್ಮಿಗಳ ಟಾರ್ಗೆಟ್ (Target) ಆಗಿದ್ದೇಕೆ? ನಿನ್ನೆ ರಾತ್ರಿ ಅಸಲಿಗೆ ನಡೆದಿದ್ದೇನು? ಕೊಲೆ ನಂತರ ಏನೆಲ್ಲಾ ಬೆಳವಣಿಗೆಯಾಯಿತು? ಈ ಎಲ್ಲಾ ಮಾಹಿತಿಗಳು ಇಲ್ಲಿವೆ ಓದಿ…

ನಿನ್ನೆ ರಾತ್ರಿ ಹಿಂದೂಪರ ಸಂಘಟನೆ ಕಾರ್ಯಕರ್ತನ ಹತ್ಯೆ

ನಿನ್ನೆ ರಾತ್ರಿ ಶಿವಮೊಗ್ಗದ ಭಾರತಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಬಜರಂಗದಳದ ಕಾರ್ಯಕರ್ತ ಹರ್ಷ ಎಂಬ ಯುವಕನನ್ನು ಕಳೆದ ರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿದೆ. ಮೃತ ಹರ್ಷ ಕಳೆದ ರಾತ್ರಿ 9 ಗಂಟೆಯ ಸುಮಾರಿಗೆ ಕಾಮತ್ ಪೆಟ್ರೋಲ್ ಬಂಕ್ ಬಳಿ ಬಂದಿದ್ದ. ಈ ವೇಳೆ  ಹರ್ಷನನ್ನು ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಇರಿದು ಪರಾರಿಯಾಗಿದ್ದರು.

ಆಸ್ಪತ್ರೆಗೆ ದಾಖಲಿಸಿದರೂ ಉಳಿಯಲಿಲ್ಲ ಪ್ರಾಣ

ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಗಾಯಗೊಂಡು ಹರ್ಷ ನರಳುತ್ತಾ ಬಿದ್ದಿರುವ ವಿಚಾರ ಸ್ನೇಹಿತರು ಹಾಗೂ ಮನೆಯವರಿಗೆ ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಅವರೆಲ್ಲ, ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಅದನ್ನು ವೈದ್ಯರು ದೃಢಪಡಿಸಿದ್ದಾರೆ.

ಹರ್ಷನನ್ನ ಹಿಂಬಾಲಿಸಿ ಬಂದಿದ್ದರಾ ಹಂತಕರು?

ಸ್ಥಳೀಯರು ಹೇಳುವಂತೆ ಹರ್ಷ ಹತ್ಯೆಯಾಗೋ ಸ್ವಲ್ಪ ಸಮಯದ ಹಿಂದೆ ಅವರ ಏರಿಯಾ ಸೀಗೆಹಟ್ಟಿಯಲ್ಲಿ ಕಾರೊಂದು ಬಂದಿತ್ತಂತೆ. ಬಳಿಕ ರಾತ್ರಿ ವೇಳೆಗೆಲ್ಲ ಹರ್ಷನನ್ನು ಅಟ್ಟಾಡಿಸಿ, ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ದುಷ್ಕರ್ಮಿಗಳು ಫಾಲೋ ಮಾಡುತ್ತಾ ಇದ್ದರು ಅಂತ ಸ್ಥಳೀಯರು ಹೇಳುತ್ತಾರೆ.

ಇದನ್ನೂ ಓದಿ: Explained: ಗಂಗೂಬಾಯಿ ಕಾಠಿಯಾವಾಡಿ ಯಾರು? ಬನ್ಸಾಲಿ ಸಿನಿಮಾದ ಸುತ್ತ ವಿವಾದವೇಕೆ? ಇಲ್ಲಿದೆ ಡಿಟೇಲ್ಸ್

ಸಂಜೆವರೆಗೂ ಆಪ್ತರ ಜೊತೆಯಲ್ಲೇ ಇದ್ದ ಹರ್ಷ

ಹರ್ಷ ತಮ್ಮ ಮನೆಯ ಬಳಿ ಸಂಬಂಧಿಕರ ಜೊತೆಯೇ ರಾತ್ರಿವರೆಗೂ ಇದ್ದ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಆತನ ಸಂಬಂಧಿ ಸೀತಾ ಲಕ್ಷ್ಮೀ ಎಂಬುವರು ಸಂಜೆವರೆಗೂ ಹರ್ಷ ನಮ್ಮ ಜೊತೆಯಲ್ಲಾ ಮಾತಾಡುತ್ತಾ ಇದ್ದ. ಆದ್ರೆ ರಾತ್ರಿ ಅವನನ್ನು ಕೊಂದು ಬಿಟ್ಟಿದ್ದಾರೆ ಅಂತ ಕಂಬನಿ ಮಿಡಿದಿದ್ದಾರೆ. ಸಣ್ಣಪುಟ್ಟ ಗಾಯವಾಗಿರಬಹುದು ಅಂದುಕೊಂಡಿದ್ದೆ. ಆದರೆ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹಂತಕರನ್ನು ಶೀಘ್ರವೇ ಬಂಧಿಸಿ, ಶಿಕ್ಷೆ ಕೊಡಬೇಕು ಅಂತ ಸೀತಾಲಕ್ಷ್ಮೀ ಆಗ್ರಹಿಸಿದ್ದಾರೆ.

ಹಿಂದೂ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಹರ್ಷ

ಮೃತ ಹರ್ಷ ಬಜರಂಗದಳದ ಸದಸ್ಯನಾಗಿದ್ದು, ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಹೋರಾಟಗಳು, ಪ್ರತಿಭಟನೆ ಇತ್ಯಾದಿಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಈತನ ವಿರುದ್ಧವೂ ಕೆಲವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಈಚೆಗೆ ಬೇರೆ ಕೋಮಿನ ಯುವಕದಿಂದ ಬೆದರಿಕೆಯೂ ಬಂದಿತ್ತು ಅಂತ ಪತ್ರಿಕೆಗಳು ವರದಿ ಮಾಡಿವೆ.

ಬಾಡಿಗೆ ಹಂತಕರ ಕೈವಾಡ ಇದೆಯಾ?

ಹರ್ಷನ ಬರ್ಬರ ಹತ್ಯೆ ಹಿಂದೆ ಬಾಡಿಗೆ ಹಂತಕರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಕೇರಳ ಹಾಗೂ ಕರಾವಳಿ ಪ್ರದೇಶದಲ್ಲಿ ರಾಜಕೀಯ ಹತ್ಯೆ ಮಾದರಿಯಲ್ಲೇ ಇಲ್ಲಿ ಕೂಡ ಇದೇ ಮಾದರಿ ಅನುಸರಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಶಿವಮೊಗ್ಗದಲ್ಲಿ ಉದ್ವಿಗ್ನಗೊಂಡಿದ್ದ ಪರಿಸ್ಥಿತಿ

ಹರ್ಷ ಕೊಲೆಯಾಗಿದ್ದ ಸುದ್ದಿ ತಿಳಿಯುತ್ತಿದ್ದಂತೆ ಆಪ್ತರು, ಕುಟುಂಬಸ್ಥರು, ಸಂಬಂಧಿಕರು, ಬಜರಂಗದಳ ಕಾರ್ಯಕರ್ತರೆಲ್ಲ ಮೆಗ್ಗಾನ್ ಆಸ್ಪತ್ರೆ ಬಳಿ ರಾತ್ರಿಯೇ ಜಮಾಯಿಸಿದರು. ಬೆಳಗ್ಗೆ ಗಲಾಟೆ ಜಾಸ್ತಿಯಾಗುತ್ತಿದ್ದಂತೆ ಶಿವಮೊಗ್ಗದಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಯಿತು. ಹೀಗಾಗಿ ಪೊಲೀಸರು ಕಾರ್ಯಾಚರಣೆಗೆ ಇಳಿದರು.

ಹಲವೆಡೆ ಕಿಡಿಗೇಡಿಗಳಿಂದ ದಾಂಧಲೆ

ಶಿವಮೊಗ್ಗ ನಗರದಲ್ಲಿ ಇಂದು ಮತ್ತೆ ಹಿಂಸಾಚಾರ ಭುಗಿಲೆದ್ದು, ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಕಲ್ಲು ತೂರಾಟದಿಂದ ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿದೆ.ಕಳೆದ ರಾತ್ರಿ ಹತ್ಯೆಯಾದ ಹರ್ಷನ ಶವಪರೀಕ್ಷೆ ನಡೆಸಿ ಅಂತ್ಯಕ್ರಿಯೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯುವ ವೇಳೆ ಕ್ಲಾಕ್ ಪೇಟೆ, ಆಜಾದ್‌ನಗರ ಸೇರಿದಂತೆ, ಸುತ್ತಮುತ್ತಲ ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿದೆ.

ಕಲ್ಲು ತೂರಾಟದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಉದ್ರಿಕ್ತ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಮಚ್ಚು, ಲಾಂಗ್ ಹಿಡಿದು ಪುಂಡಾಟ ನಡೆಸಿದವರನ್ನು ಪೊಲೀಸರು ಲಾಠಿಬೀಸಿ ಚದುರಿಸಿದ್ದಾರೆ ಎನ್ನಲಾಗಿದೆ.

24 ಗಂಟೆಯೊಳಗೆ ಬಲೆಗೆ ಬಿದ್ದ ಕೆಲ ಆರೋಪಿಗಳು

ಇದೇ ಪ್ರಕರಣ ಸಂಬಂಧ ಬೆಂಗಳೂರು ಮತ್ತು ಬೀರೂರಿನಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಜೆಜೆ ನಗರದಲ್ಲಿ 3 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅಂತೆಯೇ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಬಳಿಯ ಬಳ್ಳಾರಿ ಕ್ಯಾಂಪ್‌ನಲ್ಲಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ಶಿವಮೊಗ್ಗ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

ಕರಾವಳಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ

ಕೋಮು ವಿಚಾರವಾಗಿ ಬೇಗನೆ ಗಲಾಟೆಯ ಕಿಡಿ ಹೊತ್ತುಕೊಳ್ಳುವ ಕರಾವಳಿ ಭಾಗದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಮಂಗಳೂರಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಆಯಕಟ್ಟಿನ ಜಾಗದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ.

ಘಟನೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ

ಘಟನೆ ಬಗ್ಗೆ ರಾಜಕೀಯ ನಾಯಕರು ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡಲು ಶುರು ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನಿಂದ ಆದ ಕೃತ್ಯ ಅಂತ ಸಚಿವರು, ಬಿಜೆಪಿ ನಾಯಕರು ಹೇಳಿದ್ದಾರೆ. ಮತ್ತೊಂದೆಡೆ ಇದು ಬಿಜೆಪಿ ಆಡಳಿತದ ವೈಫಲ್ಯ ಅಂತ ಕಾಂಗ್ರೆಸ್ ನಾಯಕರು ಕುಟುಕಿದ್ದಾರೆ.

ಅಪರಾಧಿ ಯಾರೇ ಆಗಿದ್ದರು ಅವರನ್ನು ಬಂಧಿಸಿ, ಶಿಕ್ಷೆ ಕೊಡಿಸುತ್ತೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇನ್ನು ಘಟನೆಯನ್ನು ಖಂಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸೂಕ್ತ ತನಿಖೆಗೆ ಆಗ್ರಿಹಿಸಿದ್ದಾರೆ.

ಇದನ್ನೂ ಓದಿ: Explained: ಏನಿದು NSE ಹಗರಣ? ಯಾರಿವರು ಚಿತ್ರಾ ರಾಮಕೃಷ್ಣ? ಅವರ ಹಿಂದಿದ್ದ ನಿಗೂಢ ಬಾಬಾ ಯಾರು?

ಘಟನೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

ಇನ್ನು ಹರ್ಷ ಹತ್ಯೆ ಖಂಡಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಯುತ್ತಿದೆ. ಹಿಂದೂ ಪರ ಸಂಘಟನೆಗಳು, ಬಜರಂದಳ, ಶ್ರೀರಾಮ ಸೇನೆ ಕಾರ್ಯಕರ್ತರು ಶಿವಮೊಗ್ಗ, ಕಲಬುರಗಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ.

ಮುಂದೇನಾಗಬಹುದು?

ಸದ್ಯ ಆರೋಪಿಗಳನ್ನು ಬಂಧಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ತನಿಖೆ ವೇಳೆ ಹರ್ಷ ಹತ್ಯೆಗೆ ನಿಜ ಕಾರಣ ಏನು? ಈ ಹತ್ಯೆ ಹಿಂದೆ ಯಾರಿದ್ದಾರೆ ಅನ್ನೋದು ಬೆಳಕಿಗೆ ಬರಲಿದೆ. ಸದ್ಯ ಶಿವಮೊಗ್ಗದಲ್ಲಿ ಪೊಲೀಸ್ ಕಣ್ಗಾವಲು ಹಾಕಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
Published by:Annappa Achari
First published: