ಆರೋಗ್ಯ ಹಕ್ಕು (Health Rights) ಮಸೂದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಖಾಸಗಿ ವೈದ್ಯರುಗಳೊಂದಿಗೆ ಕೈಜೋಡಿಸಿರುವ ಸರ್ಕಾರಿ ವೈದ್ಯರು ಮತ್ತು ವೈದ್ಯಕೀಯ ಕಾಲೇಜುಗಳ (College) ಅಧ್ಯಾಪಕರು ಒಂದು ದಿನದ ಮುಷ್ಕರ ನಡೆಸಿದ್ದಾರೆ ಅಂತೆಯೇ ಈ ಪರಿಣಾಮವಾಗಿ ರಾಜಸ್ಥಾನದಲ್ಲಿ (Rajasthan) ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಿರುವ ವೈದ್ಯರುಗಳು ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಸರಕಾರ ಈ ಕುರಿತು ಕ್ರಮ ಕೈಗೊಳ್ಳದೇ ಇದ್ದರೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂಬ ಎಚ್ಚರಿಕೆ ರವಾನಿಸಿದ್ದಾರೆ.
ಮುಷ್ಕರದಿಂದ ವಿನಾಯಿತಿ ಪಡೆದ ತುರ್ತು ಸೇವೆಗಳು
ಮುಷ್ಕರದಿಂದ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಇನ್ನು ಪ್ರತಿಭಟನೆ ಬೆಂಬಲಿಸಿ ವೈದ್ಯರು ವೃತ್ತಿಯನ್ನು ಬಹಿಷ್ಕರಿಸಿದ್ದಾರೆ ಇದರಿಂದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೂರಾರು ರೋಗಿಗಳು ಬವಣೆ ಪಡುವಂತಾಯಿತು.
ಒಂದು ವಾರಕ್ಕೂ ಹೆಚ್ಚುಕಾಲ ಪ್ರತಿಭಟನೆ ನಡೆಸುತ್ತಿರುವ ವೈದ್ಯರು
ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಿದ ವೈದ್ಯಕೀಯ ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ವೈದ್ಯರು ಒಂದು ವಾರಕ್ಕೂ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿದ್ದಾರೆ. ಮಸೂದೆಯನ್ನು ಹಿಂಪಡೆದ ನಂತರವೇ ಈ ಕುರಿತು ಚರ್ಚೆಗಳನ್ನು ನಡೆಸಲಾಗುವುದು ಎಂದು ವೈದ್ಯರು ಪಟ್ಟುಬಿಡದೆ ಆಗ್ರಹಿಸಿದ್ದಾರೆ. ಇದರ ನಡುವೆ ಸರಕಾರ ಮಸೂದೆ ಹಿಂಪಡೆಯುವ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಹಾಗೂ ಪಟ್ಟು ಬಿಡುವ ಲಕ್ಷಣ ಕೂಡ ಕಂಡುಬರುತ್ತಿಲ್ಲ.
'ಆರೋಗ್ಯದ ಹಕ್ಕು' ಮಸೂದೆಯನ್ನು ಹಿಂಪಡೆಯಲು ವೈದ್ಯರು ಏಕೆ ಒತ್ತಾಯಿಸುತ್ತಿದ್ದಾರೆ?
ಈ ಮಸೂದೆ ಜಾರಿಗೆ ಬಂದರೆ ಖಾಸಗಿ ಆಸ್ಪತ್ರೆಗಳ ಕಾರ್ಯನಿರ್ವಹಣೆಯಲ್ಲಿ ಅಧಿಕಾರಶಾಹಿ ಹಸ್ತಕ್ಷೇಪ ಹೆಚ್ಚಾಗುತ್ತದೆ ಎಂಬುದು ಪ್ರತಿಭಟನೆಯಲ್ಲಿ ತೊಡಗಿರುವ ವೈದ್ಯರ ಕಳವಳವಾಗಿದೆ. ಆದರೆ ರಾಜ್ಯವು ಈ ಮಸೂದೆಯ ಅನ್ವಯ ಪ್ರತಿಯೊಬ್ಬ ನಿವಾಸಿ ಕೂಡ ಸಾರ್ವಜನಿಕ ಆರೋಗ್ಯ ಸಂಸ್ಥೆ, ಆರೋಗ್ಯ ರಕ್ಷಣಾ ಸ್ಥಾಪನೆ ಮತ್ತು ಗೊತ್ತುಪಡಿಸಿದ ಆರೋಗ್ಯ ಕೇಂದ್ರಗಳಲ್ಲಿ ಪೂರ್ವ ಪಾವತಿ ಇಲ್ಲದೆ ತುರ್ತು ಚಿಕಿತ್ಸೆ ಹಾಗೂ ವೈದ್ಯಕೀಯ ಆರೈಕೆಯನ್ನು ಪಡೆಯಬಹುದು ಎಂದು ತಿಳಿಸಿದೆ ಹೀಗಾಗಿ ರಾಜ್ಯ ಮಸೂದೆಯನ್ನು ಹಿಂದಕ್ಕೆ ಪಡೆಯುವ ಮಾತಿಲ್ಲ ಎಂದು ತಿಳಿಸಿದೆ.
ವೈದ್ಯರಿಗೆ ಸರ್ಕಾರ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ
ಸರ್ಕಾರಿ ವೈದ್ಯರು ಕರೆ ನೀಡಿರುವ ಪ್ರತಿಭಟನೆಯ ನಡುವೆಯೇ ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, ಕೆಲಸ ಬಹಿಷ್ಕರಿಸುವ ವೈದ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದೆ.
ಸೇವೆಗಳಿಗೆ ತೊಂದರೆಯಾಗದಂತೆ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರಿಗೆ ನಿರ್ದೇಶನಗಳನ್ನು ನೀಡಿದೆ ಮತ್ತು ವೈದ್ಯರು, ವೈದ್ಯಕೀಯ ಶಿಕ್ಷಕರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ವೃತ್ತಿಗೆ ಹಾಜರಾಗುವಂತೆ ಸೂಚಿಸಿದೆ.
ಪ್ರಧಾನ ಆರೋಗ್ಯ ಕಾರ್ಯದರ್ಶಿಗೆ ರಾಜಸ್ಥಾನ ಮಾನವ ಹಕ್ಕುಗಳ ಸಂಸ್ಥೆಯಿಂದ ನೋಟಿಸ್
ರಾಜ್ಯದಲ್ಲಿ ಮುಷ್ಕರ ನಿರತ ವೈದ್ಯರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದರ ಕುರಿತು ಉತ್ತರ ನೀಡುವಂತೆ ರಾಜಸ್ಥಾನ ರಾಜ್ಯ ಮಾನವ ಹಕ್ಕುಗಳ ಆಯೋಗವು ಪ್ರಧಾನ ಕಾರ್ಯದರ್ಶಿಗೆ ನೋಟೀಸ್ ಜಾರಿ ಮಾಡಿದೆ.
ಕರ್ತವ್ಯಕ್ಕೆ ಹಾಜರಾಗುವಂತೆ ವೈದ್ಯರಿಗೆ ಅಧ್ಯಕ್ಷರ ಮನವಿ
ವೈದ್ಯರು ಪ್ರಮಾಣ ವಚನದ ಉಲ್ಲಂಘನೆ ಮಾಡಿದ್ದು ನೈತಿಕ ಕರ್ತವ್ಯವನ್ನು ಉಲ್ಲಂಘಿಸಿದ್ದಾರೆ ಹಾಗೂ ಇದು ಮಾನವ ಹಕ್ಕುಗಳ ದುರುಪಯೋಗವಾಗಿದೆ ಇದರ ಕುರಿತು ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೋಟೀಸ್ ತಿಳಿಸಿದೆ. ರಾಜಸ್ಥಾನ ವೈದ್ಯಕೀಯ ಕಾಯಿದೆ 1952 ಮತ್ತು ರಾಜಸ್ಥಾನ ವೈದ್ಯಕೀಯ ನಿಯಮಗಳು 1957 ರ ಅಡಿಯಲ್ಲಿ ನೋಟಿಸ್‌ಗಳನ್ನು ನೀಡಲಾಗಿದೆ.
ರೋಗಿಗಳ ಹಾಗೂ ಮಾನವ ಕುಲದ ಹಿತದೃಷ್ಟಿಯಿಂದ ವೈದ್ಯರು ತಮ್ಮ ಪ್ರತಿಭಟನೆ ನಿಲ್ಲಿಸಿ ಕೆಲಸಕ್ಕೆ ಹಾಜರಾಗಬೇಕು ಹಾಗೂ ಪ್ರಾಣಾಪಾಯದಲ್ಲಿರುವ ರೋಗಿಗಳ ಜೀವ ಉಳಿಸಬೇಕು ಎಂದು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಜಿ.ಕೆ.ವ್ಯಾಸ್ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ