Explainer: ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ನುಸಂತಾರಾಕ್ಕೆ ಏಕೆ ಬದಲಿಸುತ್ತಿದೆ ಗೊತ್ತೇ? ಈ ಸ್ಟೋರಿ ಓದಿ

ಜಕಾರ್ತದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಜನಸಂಖ್ಯೆಯ ಕಾರಣದಿಂದಾಗಿ ರಾಜಧಾನಿಯನ್ನು ಜಕಾರ್ತದಿಂದ ನುಸಂತಾರಾಗೆ ಬದಲಾಯಿಸಲಾಗುತ್ತಿದೆ ಎಂದು ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಹೇಳಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇಂಡೋನೇಷ್ಯಾ (Indonesia) ದ ರಾಜಧಾನಿಯನ್ನು ಜಕಾರ್ತ (Jakarta) ದಿಂದ ಪೂರ್ವ ಕಾಲಿಮಂಟನ್‌ (East Kalimantan) ಗೆ ಸ್ಥಳಾಂತರಿಸಲಾಗುತ್ತಿದೆ ಮತ್ತು ಇದನ್ನು ನುಸಂತಾರಾ (Nusantara) ಎಂದು ಕರೆಯಲಾಗುತ್ತದೆ.. ಇದಕ್ಕೆ ಕಾರಣವೇನು ಗೊತ್ತಾ..? ಮತ್ತು ಪೂರ್ವ ಕಾಲಿಮಂಟನ್ ಅನ್ನು ಏಕೆ ಆಯ್ಕೆ ಮಾಡಲಾಗಿದೆ ಗೊತ್ತಾ..? ಅಲ್ಲದೆ, ಇತರೆ ದೇಶಗಳು ಸಹ ತನ್ನ ರಾಜಧಾನಿಯನ್ನು ಬದಲಾಯಿಸಿವೇ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮಸೂದೆ ಅಂಗೀಕಾರ
ಇಂಡೋನೇಷ್ಯಾ ತನ್ನ ರಾಜಧಾನಿ ಜಕಾರ್ತಾವನ್ನು ಸುಮಾರು 2,300 ಕಿ.ಮೀ ದೂರದಲ್ಲಿರುವ ಬೋರ್ನಿಯೋ ದ್ವೀಪದ ಪೂರ್ವದಲ್ಲಿರುವ ಪೂರ್ವ ಕಾಲಿಮಂಟನ್‌ನೊಂದಿಗೆ ಬದಲಿಸುವ ಮಸೂದೆಯನ್ನು ಅಂಗೀಕರಿಸಿತು. ದೇಶದ ಹೊಸ ರಾಜಧಾನಿಯನ್ನು ನುಸಂತರಾ ಎಂದು ಕರೆಯಲಾಗುವುದು ಎಂದು ತಿಳಿದುಬಂದಿದೆ. ಈ ಸಂಬಂಧತನ್ನ ಸಂಸತ್ತು ಮಂಗಳವಾರ ಮಸೂದೆಯನ್ನು ಅಂಗೀಕರಿಸಿದೆ ಎಂದುಇಂಡೋನೇಷ್ಯಾ ಈಗಾಗಲೇ ಘೋಷಿಸಿದೆ. ಜಕಾರ್ತದಿಂದ ರಾಷ್ಟ್ರೀಯ ರಾಜಧಾನಿಯನ್ನು 'ನುಸಂತಾರಾ' ಎಂದು ಹೆಸರಿಸಲಾಗುವ ಕಾಡಿನ-ಹೊದಿಕೆ ಹೊಂದಿರುವ ಬೋರ್ನಿಯೋ ದ್ವೀಪಕ್ಕೆ ವರ್ಗಾಯಿಸಲು ಅನುಮೋದನೆ ನೀಡಿದೆ.

ಜಕಾರ್ತಾ ಎದುರಿಸುತ್ತಿರುವ ಬೃಹತ್ ಪರಿಸರ ಸವಾಲುಗಳನ್ನು ನಿವಾರಿಸಲು ಮತ್ತು ಸಂಪತ್ತನ್ನು ಮರುಹಂಚಿಕೆ ಮಾಡುವ ಪ್ರಯತ್ನದಲ್ಲಿ 2019ರಲ್ಲಿ ಇಂಡೋನೇಷ್ಯಾದ ರಾಜಧಾನಿಯನ್ನು ಸ್ಥಳಾಂತರಿಸುವ ಯೋಜನೆಯನ್ನು ಅಲ್ಲಿನ ಅಧ್ಯಕ್ಷ ಜೋಕೊ ವಿಡೋಡೊ (Joko Widodo) ಮೊದಲು ಘೋಷಿಸಿದ್ದರು. ಆದರೆ, ನಂತರ ಕೊವಿಡ್ - 19 ಸಾಂಕ್ರಾಮಿಕ ರೋಗದಿಂದಾಗಿ ಈ ಕ್ರಮವು ವಿಳಂಬವಾಗಿದೆ, ಆದರೆ ಈಗ ಘೋಷಣೆಯಾಗಿರುವುದರಿಂದ 2024ರಲ್ಲಿ ಇದು ಜಾರಿಗೆ ಬರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: Punishment: ಇಬ್ರೂ ಸೇರಿ ತಪ್ಪು ಮಾಡಿದ್ರು, ಆದ್ರೆ ಶಿಕ್ಷೆ ಮಾತ್ರ ಮಹಿಳೆಗೇ ಹೆಚ್ಚು... ಇದ್ಯಾವ ನ್ಯಾಯ?

ನೂತನ ರಾಜಧಾನಿಯ ವಿಶೇಷತೆಗಳು
ಜಾವಾನೀಸ್‌ ಭಾಷೆಯಲ್ಲಿ ಹೊಸ ರಾಜಧಾನಿ ‘ನುಸಂತಾರ’ ಎಂದರೆ ದ್ವೀಪಸಮೂಹ ಎಂದರ್ಥ", ಕಾಡುಗಳು ಮತ್ತು ಒರಾಂಗುಟಾನ್ ಜನಸಂಖ್ಯೆಗೆ ಹೆಸರುವಾಸಿಯಾದ ಪೂರ್ವ ಕಾಲಿಮಂಟನ್ ಪ್ರದೇಶದಲ್ಲಿ ಈ ನೂತನ ರಾಜಧಾನಿಯ ನಿರ್ಮಾಣವಾಗಲಿದೆ. ಖನಿಜ-ಸಮೃದ್ಧಿ ಹೊಂದಿರುವ ಪೂರ್ವ ಕಾಲಿಮಂಟನ್ ಕೇವಲ 3.7 ಮಿಲಿಯನ್ ಜನರಿಗೆ ನೆಲೆಯಾಗಿದೆ. ಈ ಯೋಜನೆಗಾಗಿ 256,142 ಹೆಕ್ಟೇರ್ ಭೂಮಿಯನ್ನು ಮೀಸಲಿಡಲಾಗಿದೆ. ಇದು 2024 ರ "ಮೊದಲಾರ್ಧದಲ್ಲಿ ಜಾರಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೂತನ ರಾಜಧಾನಿಯ ಆರಂಭಿಕ ಯೋಜನೆಗಳು ಪರಿಸರ ಸ್ನೇಹಿ "ಸ್ಮಾರ್ಟ್" ನಗರವನ್ನು ರಚಿಸುವ ಗುರಿಯನ್ನು ಹೊಂದಿರುವ ಯುಟೋಪಿಯನ್ ವಿನ್ಯಾಸವನ್ನು ಚಿತ್ರಿಸುತ್ತದೆ ಎನ್ನಲಾಗಿದೆ. ಆದರೆ ಈ ಪೈಕಿ ಕೆಲವು ವಿವರಗಳನ್ನು ಮಾತ್ರ ದೃಢೀಕರಿಸಲಾಗಿದೆ. 2020ರಲ್ಲಿ ಹೊಸ ರಾಜಧಾನಿ ನಿರ್ಮಾಣವನ್ನು ಪ್ರಾರಂಭಿಸಬೇಕೆಂದು ಪ್ಲ್ಯಾನ್‌ ಮಾಡಿತ್ತಾದರೂ, COVID-19 ಸಾಂಕ್ರಾಮಿಕ ಇಂಡೋನೇಷ್ಯಾದ ಈ ಯೊಜನೆಗಳನ್ನು ತಲೆಕೆಳಗು ಮಾಡಿದೆ.

ಈ ನೂತನ ರಾಜಧಾನಿ ನುಸಂತಾರಾದಲ್ಲಿ ಜನರು ಯಾವುದೇ ಗಮ್ಯಸ್ಥಾನದಿಂದ ಹತ್ತಿರದಲ್ಲಿರುತ್ತಾರೆ. ಹಾಗೂ, ಅಲ್ಲಿ ಶೂನ್ಯ ಹೊರಸೂಸುವಿಕೆ ಹೊಂದಿದೆ ಎಂದು ಸೋಮವಾರ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಹೇಳಿದರು. ಹಾಗೂ "ಇದು (ರಾಜಧಾನಿ) ಕೇವಲ ಸರ್ಕಾರಿ ಕಚೇರಿಗಳನ್ನು ಹೊಂದಿರುವುದಿಲ್ಲ, ಆದರೆ ನಾವು ಹೊಸ ಸ್ಮಾರ್ಟ್ ಮಹಾನಗರವನ್ನು ನಿರ್ಮಿಸಲು ಬಯಸುತ್ತೇವೆ. ಅದು ಜಾಗತಿಕ ಪ್ರತಿಭೆಗಳಿಗೆ ಆಯಸ್ಕಾಂತ ಮತ್ತು ನಾವೀನ್ಯತೆಯ ಕೇಂದ್ರವಾಗಿದೆ" ಎಂದು ಅವರು ಸ್ಥಳೀಯ ವಿಶ್ವವಿದ್ಯಾಲಯವೊಂದರಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು.

ನುಸಂತಾರಾ ಹೆಸರು ಆಯ್ಕೆಯಾಗಿದ್ದು ಹೀಗೆ, ನಿರ್ಮಾಣ ವೆಚ್ಚ ಎಷ್ಟು ಗೊತ್ತಾ?
ಇನ್ನು, 80 ಹೆಸರುಗಳ ಪಟ್ಟಿಯಿಂದ ನುಸಂತಾರಾ ಅನ್ನು ಆಯ್ಕೆ ಮಾಡಲಾಗಿದೆ. ಏಕೆಂದರೆ ಇದು ಇಂಡೋನೇಷಿಯನ್ನರಿಂದ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ ಮತ್ತು ನೆನಪಿಟ್ಟುಕೊಳ್ಳಲು ಸುಲಭವಾಗಿದೆ ಎಂದು ಆ ದೇಶದ ಅಭಿವೃದ್ಧಿ ಸಚಿವ ಸುಹಾರ್ಸೊ ಮೊನೊರ್ಫಾ ಸೋಮವಾರ ಹೇಳಿದ್ದಾರೆ.

ಮಂಗಳವಾರದ ಶಾಸನದ ಪ್ರಕಾರ, ಅಧ್ಯಕ್ಷರಿಂದ ನೇರವಾಗಿ ಐದು ವರ್ಷಗಳ ಅವಧಿಗೆ ನಾಯಕತ್ವವನ್ನು ನೇಮಕ ಮಾಡುವುದರೊಂದಿಗೆ ಹೊಸ ನಗರವನ್ನು ರಾಜ್ಯ ರಾಜಧಾನಿ ಪ್ರಾಧಿಕಾರ ಎಂದು ಕರೆಯಲಾಗುವ ಸಂಸ್ಥೆಯಿಂದ ಆಡಳಿತ ನಡೆಸಲಾಗುವುದು ಎಂದು ತಿಳಿದುಬಂದಿದೆ.ಬಜೆಟ್ ವಿವರಗಳನ್ನು ಅಧ್ಯಕ್ಷೀಯ ಆದೇಶದಲ್ಲಿ ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೂ ಹಿಂದಿನ ವರದಿಗಳು ಯೋಜನೆಯ ವೆಚ್ಚವನ್ನು 33 ಶತಕೋಟಿ ಡಾಲರ್‌ನಷ್ಟಾಗಬಹುದು ಎಂದು ಅಂದಾಜಿಸಿದೆ.

ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಿಂದ ಏಕೆ ಸ್ಥಳಾಂತರವಾಗುತ್ತಿದೆ..?
ಜಕಾರ್ತದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಜನಸಂಖ್ಯೆಯ ಕಾರಣದಿಂದಾಗಿ ರಾಜಧಾನಿಯನ್ನು ಜಕಾರ್ತದಿಂದ ನುಸಂತಾರಾಗೆ ಬದಲಾಯಿಸಲಾಗುತ್ತಿದೆ ಎಂದು ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಹೇಳಿದ್ದಾರೆ. 10 ಮಿಲಿಯನ್ ಜನರಿರುವ ನಗರ ಜಕಾರ್ತವು ಕುಖ್ಯಾತವಾಗಿ ವಾಹನ ದಟ್ಟಣೆಯಿಂದ ಕೂಡಿದೆ. ಇಲ್ಲಿ ಟ್ರಾಫಿಕ್‌ ಜಾಮ್‌ ಆಗುವುದು ಸರ್ವೇಸಾಮಾನ್ಯ. ಹಾಗೂ, ಪ್ರಮುಖವಾಗಿ ಈ ನಗರದಲ್ಲಿ ಆಗಾಗ್ಗೆ ಪ್ರವಾಹ ಉಂಟಾಗುತ್ತಿರುತ್ತದೆ ಮತ್ತು ಅಂತರ್ಜಲದ ಅತಿಯಾದ ಹೊರತೆಗೆಯುವಿಕೆಯಿಂದಾಗಿ ವಿಶ್ವದ ಅತ್ಯಂತ ವೇಗವಾಗಿ ಮುಳುಗುವ ನಗರಗಳಲ್ಲಿ ಇದು ಒಂದಾಗಿದೆ ಎಂದು ವರದಿಗಳು ಹೇಳಿವೆ.

ಉತ್ತರ ಜಕಾರ್ತಾದ ಭಾಗಗಳು ವರ್ಷಕ್ಕೆ ಅಂದಾಜು 25 ಸೆಂಟಿಮೀಟರ್‌ಗಳಷ್ಟು ಕುಸಿಯುತ್ತಿವೆ ಎನ್ನಲಾಗಿದೆ. ಅಲ್ಲದೆ, ಈ ಕುಸಿತದ ಕಾರಣದಿಂದಾಗಿ ಸಮುದಾಯಗಳಿಗೆ ಬಫರ್‌ನಂತೆ ವಿನ್ಯಾಸಗೊಳಿಸಲಾಗಿರುವ ಸಮುದ್ರದ ಗೋಡೆಯೂ ಸಹ ಕುಸಿಯುತ್ತಿದೆ ಎಂದು ತಿಳಿದುಬಂದಿದೆ.ಜಕಾರ್ತಾ ಮುಳುಗುತ್ತಿದೆ ಮತ್ತು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ 2050ರ ವೇಳೆಗೆ ನಗರದ ಅನೇಕ ಭಾಗಗಳು ಮುಳುಗುತ್ತವೆ ಎಂದು ತಜ್ಞರು ಹೇಳಿದ್ದಾರೆ.ಈ ಹಿನ್ನೆಲೆ ಪೂರ್ವ ಕಾಲಿಮಂಟನ್‌ನಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸುವ ಮೂಲಕ ಜಕಾರ್ತಾದ ದೀರ್ಘಕಾಲದ ದಟ್ಟಣೆ, ಪ್ರವಾಹ ಮತ್ತು ವಾಯು ಮಾಲಿನ್ಯ ಸೇರಿದಂತೆ ಅದರ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಎಂದು ಅಲ್ಲಿನ ಸರ್ಕಾರವು ಆಶಿಸುತ್ತಿದೆ.

ಇನ್ನು, ನೂತನ ರಾಜಧಾನಿಯ ಸ್ಥಳವು ಬಹಳ ಕಾರ್ಯತಂತ್ರವಾಗಿದೆ - ಇದು ಇಂಡೋನೇಷ್ಯಾದ ಮಧ್ಯಭಾಗ ಮತ್ತು ನಗರ ಪ್ರದೇಶಗಳಿಗೆ ಹತ್ತಿರದಲ್ಲಿದೆ ಎಂದು ವಿಡೋಡೋ ಬಿಬಿಸಿ ವರದಿಯ ದೂರದರ್ಶನ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಹಾಘೂ, ಹೊಸ ಸ್ಥಳವು ನೈಸರ್ಗಿಕ ವಿಕೋಪಗಳ "ಕನಿಷ್ಠ" ಅಪಾಯದಲ್ಲಿದೆ ಎಂದು ವಿಡೋಡೊ ಹೇಳಿದ್ದಾರೆ.1949ರಲ್ಲಿ ಇಂಡೋನೇಷ್ಯಾ ದೇಶವು ಸ್ವತಂತ್ರವಾದಾಗಿನಿಂದ ಜಕಾರ್ತಾ ಅಲ್ಲಿನ ರಾಜಧಾನಿಯಾಗಿದೆ.

ನೂತನ ರಾಜಧಾನಿಗೆ ವಿರೋಧ..!
ಆದರೂ, ಈ ಕ್ರಮವು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿಲ್ಲ; ರಾಜಧಾನಿಯ ಸ್ಥಳಾಂತರದ ಕ್ರಮದಿಂದ ನುಸಂತಾರಾದಲ್ಲಿ ಹಾಗೂ ಪ್ರಮುಖವಾಗಿ ಅರಣ್ಯ ಪ್ರದೇಶಕ್ಕೆ ಹೆಸರುವಾಸಿಯಾಗಿರುವ ಬೋರ್ನಿಯೋ ದ್ವೀಪ ಪ್ರದೇಶದಲ್ಲಿ ಪರಿಸರ ವ್ಯವಸ್ಥೆಗಳನ್ನು ಹಾನಿಗೊಳಿಸಬಹುದು ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ
ಹಾಗೂ, ಅಲ್ಲಿ ಈಗಾಗಲೇ ಗಣಿಗಾರಿಕೆ ನಡೆಯುತ್ತಿದ್ದು ಮತ್ತು ತಾಳೆ ಎಣ್ಣೆ ತೋಟಗಳು ಈಗಾಗಲೇ ಬೋರ್ನಿಯೊದ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ನೆಲೆಯಾಗಿರುವ ಮಳೆಕಾಡುಗಳಿಗೆ ಬೆದರಿಕೆ ಹಾಕುತ್ತಿವೆ ಎಂದೂ ತಜ್ಞರು ವಾದಿಸಿದ್ದಾರೆ.

ವಿಮರ್ಶಕರ ಪ್ರಕಾರ, ಸೀಮಿತ ಸಾರ್ವಜನಿಕ ಸಮಾಲೋಚನೆ ಮತ್ತು ಪರಿಸರ ಪರಿಗಣನೆಯೊಂದಿಗೆ ಅವಸರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ.ಹೊಸ ನಗರದ ನಿರ್ಮಾಣವು ತಾಳೆ ಎಣ್ಣೆ ತೋಟಗಳ ವಿಸ್ತರಣೆಗೆ ಕಾರಣವಾಗುತ್ತದೆ ಮತ್ತು ವೈವಿಧ್ಯಮಯ ವನ್ಯಜೀವಿಗಳು ಮತ್ತು ಸೊಂಪಾದ ಮಳೆಕಾಡುಗಳಿಂದ ಸಮೃದ್ಧವಾಗಿರುವ ಪ್ರದೇಶದಲ್ಲಿ ಮರಗಳ ನಾಶ ಹೆಚ್ಚಾಗುತ್ತದೆ ಎಂದು ವಿಮರ್ಶಕರು ಹೇಳಿದ್ದಾರೆ ಎಂದು ಬಿಬಿಸಿ ವರದಿ ತಿಳಿಸಿದೆ. ಬೋರ್ನಿಯೋದ ಸ್ಥಳೀಯ ಜನರನ್ನು ಪ್ರತಿನಿಧಿಸುವ ಗುಂಪುಗಳು ಈ ಕ್ರಮದಿಂದ ಅವರ ಪರಿಸರ ಮತ್ತು ಸಂಸ್ಕೃತಿಗೆ ಅಪಾಯವನ್ನುಂಟುಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tsunami Awareness: ಸುನಾಮಿ ಬಗ್ಗೆ ಎಲ್ಲರೂ ತಿಳಿದಿರಲೇಬೇಕಾದ ಮಹತ್ವದ ಅಂಶಗಳಿವು, ನಿಮಗೆ ಗೊತ್ತಾ?

ರಾಜಧಾನಿಯ ಹೊಸ ಹೆಸರನ್ನು ಆಯ್ಕೆ
'ನುಸಂತಾರಾ' ಎಂಬ ಹೆಸರು ಗೊಂದಲಮಯವಾಗಿರಬಹುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ವಾದಿಸಿದ್ದಾರೆ. ಏಕೆಂದರೆ ಇದು ಇಡೀ ದ್ವೀಪಸಮೂಹ ರಾಷ್ಟ್ರವನ್ನು ಉಲ್ಲೇಖಿಸಲು ಇಂಡೋನೇಷ್ಯಾದಲ್ಲಿ ಬಳಸಲಾದ ಹಳೆಯ ಜಾವಾನೀಸ್ ಪದವಾಗಿದೆ ಎಂದೂ ಬಿಬಿಸಿ ವರದಿ ತಿಳಿಸಿದೆ.ಬಿಬಿಸಿ ವರದಿಯ ಪ್ರಕಾರ, ಇಂಡೋನೇಷ್ಯಾದ ಭೌಗೋಳಿಕತೆಯನ್ನು ಪ್ರತಿಬಿಂಬಿಸುವ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಡೋಡೋ ರಾಜಧಾನಿಯ ಹೊಸ ಹೆಸರನ್ನು ಆಯ್ಕೆ ಮಾಡಿದ್ದಾರೆ ಎಂದು ಸುಹಾರ್ಸೊ ಹೇಳಿದರು.ಒರಾಂಗುಟನ್‌ಗಳು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿ ವಾಸಿಸುವ ಭೂಮಿಯ ಮೇಲಿನ ಕೆಲವು ಸ್ಥಳಗಳಲ್ಲಿ ಕಾಲಿಮಂಟನ್ ಒಂದಾಗಿದೆ, ಈ ಕಾರಣದಿಂದಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಬಗ್ಗೆ ಪರಿಸರ ಗುಂಪುಗಳ ಆತಂಕವಿದೆ.

ಇಂಡೋನೇಷ್ಯಾ ಮೊದಲನೆಯ ರಾಷ್ಟ್ರವೇನಲ್ಲ..!
ಅಧಿಕ ಜನಸಂಖ್ಯೆಯ ಜನರಿರುವ ನಗರದಿಂದ ರಾಜಧಾನಿಯನ್ನು ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿರುವ ಇಂಡೋನೇಷ್ಯಾವು ಮೊದಲ ದೇಶವೇನಲ್ಲ. ಏಕೆಂದರೆ, 2003ರಲ್ಲಿ ಮಲೇಷ್ಯಾ ತನ್ನ ಸರ್ಕಾರವನ್ನು ಕೌಲಾಲಂಪುರ್‌ನಿಂದ ಪುತ್ರಜಯಕ್ಕೆ ಸ್ಥಳಾಂತರಿಸಿದರೆ, ಮ್ಯಾನ್ಮಾರ್ ತನ್ನ ರಾಜಧಾನಿಯನ್ನು ರಂಗೂನ್‌ನಿಂದ ನೇಪಿಡಾವ್‌ಗೆ 2006ರಲ್ಲಿ ಸ್ಥಳಾಂತರಿಸಿತು.

ಇನ್ನು, 1960ರಲ್ಲಿ, ಬ್ರೆಜಿಲ್ ತನ್ನ ರಾಜಧಾನಿಯನ್ನು ರಿಯೋ ಡಿ ಜನೇರಿಯೋದಿಂದ ಬ್ರೆಸಿಲಿಯಾಕ್ಕೆ ಬದಲಾಯಿಸಿತು. ಬ್ರೆಸಿಲಿಯಾ ಬ್ರೆಜಿಲ್‌ನ ಹೆಚ್ಚು ಕೇಂದ್ರೀಕೃತ ನಗರವಾಗಿದೆ.ನೈಜೀರಿಯಾ ಕೂಡ 1991ರಲ್ಲಿ ದೇಶದ ರಾಜಧಾನಿಯನ್ನು ಲಾಗೋಸ್‌ನಿಂದ ಅಬುಜಾಗೆ ಬದಲಾಯಿಸಿತು. ಕಜಕಿಸ್ತಾನ್ ಸಹ ತನ್ನ ರಾಜಧಾನಿ ನಗರವನ್ನು ಅಲ್ಮಾಟಿಯಿಂದ 1997ರಲ್ಲಿ ನೂರ್-ಸುಲ್ತಾನ್‌ಗೆ ಸ್ಥಳಾಂತರಿಸಿತ್ತು. ಅಲ್ಮಾಟಿ ನಗರ ಈಗಲೂ ಸಹ ಕಜಕಿಸ್ತಾನದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ.
Published by:vanithasanjevani vanithasanjevani
First published: