Explained: ತಾಂಬೂಲ ಪ್ರಶ್ನೆ ಎಂದರೇನು? ಇದರ ಆಚರಣೆ, ಮಹತ್ವಗಳ ಬಗ್ಗೆ ಇಲ್ಲಿದೆ ಮಾಹಿತಿ

ಮಂಗಳೂರು ಸಮೀಪದ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ತಾಂಬೂಲ ಪ್ರಶ್ನೆ ಕೇಳಲಾಗಿದೆ. ಕೇರಳದ ಪ್ರಸಿದ್ಧ ಜ್ಯೋತಿಷಿಗಳಾದ ಜಿ. ಪಿ. ಗೋಪಾಲ ಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ನಡೆದಿತ್ತು. ಹಾಗಾದರೆ ಏನಿದು ಮಳಲಿ ಮಸೀದಿ ವಿವಾದ? ಈ ತಾಂಬೂಲ ಪ್ರಶ್ನೆ ಎಂದರೇನು? ಇದರ ಆಚರಣೆ, ಮಹತ್ವಗಳೇನು ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

ತಾಂಬೂಲ ಪ್ರಶ್ನೆ

ತಾಂಬೂಲ ಪ್ರಶ್ನೆ

  • Share this:
ತಾಂಬೂಲ ಪ್ರಶ್ನೆ.. (Tambula Prashne) ಸದ್ಯ ಜನರೆಲ್ಲರೂ ಇದರ ಬಗ್ಗೆಯೇ ಮಾತನಾಡುತ್ತಿದ್ದಾರೆ. ಇದಕ್ಕೆ ಕಾರಣ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರು (Mangaluru) ಬಳಿಯ ಮಳಲಿ (Malali) ಎಂಬಲ್ಲಿನ ಜುಮ್ಮಾ ಮಸೀದಿ (Jumma Masjid) ವಿವಾದ. ಈ ವಿವಾದಕ್ಕೆ (Controversy) ಸಂಬಂಧಿಸಿದಂತೆ ಕೇರಳದ (Kerala) ಪ್ರಸಿದ್ಧ ಜ್ಯೋತಿಷಿಗಳಾದ (Astrologer) ಜಿ. ಪಿ. ಗೋಪಾಲ ಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ನಡೆದಿತ್ತು. ಕಟ್ಟುನಿಟ್ಟಾದ ಧಾರ್ಮಿಕ ವಿಧಿ ವಿಧಾನಗಳಂತೆ ನಡೆದ ಈ ತಾಂಬೂಲ ಪ್ರಶ್ನೆಯಲ್ಲಿ ಮಸೀದಿ ಜಾಗದಲ್ಲಿ ದೈವದ ಕುರುಹುಗಳು ಇವೆ ಅಂತ ಹೇಳಲಾಗ್ತಿದೆ. ಹಿಂದೂ ಸಂಘಟನೆಗಳ ನೆರವಿನಿಂದ ಗುರುಪುರ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ನಡೆದಿದ್ದು, ಈ ಜಾಗದಲ್ಲಿ ಹಿಂದೆ ಮಠ, ಆರಾಧನೆ ಇದ್ದಿರುವ ಬಗ್ಗೆ ಕಂಡು ಬರುತ್ತಿದೆ. ಪೂರ್ವ ಕಾಲದಲ್ಲಿ ಮಠದ ರೀತಿಯ ಪ್ರದೇಶ ಇದಾಗಿತ್ತು ಎಂದು ಚಿಂತನೆಯಲ್ಲಿ ಖುದ್ದು ಪಣಿಕ್ಕರ್ ಅವರೇ ತಿಳಿಸಿದ್ದಾರೆ. ಹಾಗಾದರೆ ಏನಿದು ಮಳಲಿ ಜುಮ್ಮಾ ಮಸೀದಿ ವಿವಾದ? ಈ ತಾಂಬೂಲ ಪ್ರಶ್ನೆ ಎಂದರೇನು? ಇದರ ಆಚರಣೆ, ಮಹತ್ವಗಳೇನು ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

ತಾಂಬೂಲ ಪ್ರಶ್ನೆ ಎಂದರೇನು?

ತಾಂಬೂಲ ಪ್ರಶ್ನೆ ಎನ್ನುವುದು ಜ್ಯೋತಿರ್ವಿಜ್ಞಾನಗಳಲ್ಲಿ ಒಂದಾಗಿದೆ. ಕೇರಳ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ತಾಂಬೂಲ ಪ್ರಶ್ನೆಗೆ ತುಂಬಾ ಮಹತ್ವವಿದೆ. ಇದರ ಜೊತೆಗೆ ಅಷ್ಟಮಂಗಳ, ಆರೂಢ ಪ್ರಶ್ನೆಗಳನ್ನು ಕೇಳುವ ಪದ್ಧತಿಯನ್ನೂ ಆಚರಿಸಲಾಗುತ್ತದೆ. ತಾಂಬೂಲ ಅಂದರೆ ಮುಖ್ಯವಾಗಿ ವೀಳ್ಯದೆಲೆ ಉಪಯೋಗಿಸಿ ಈ ಶಾಸ್ತ್ರ ಆಚರಿಸಲಾಗುತ್ತದೆ. ತಾಂಬೂಲದ ಸಂಖ್ಯೆ, ಸ್ವರೂಪದ ಆಧಾರದಲ್ಲಿ ಪ್ರಶ್ನೆ ಫಲ ಹೇಳುವ ವ್ಯವಸ್ಥೆಯನ್ನು ತಾಂಬೂಲ ಪ್ರಶ್ನೆ ಎಂದು ಹೇಳಲಾಗುತ್ತದೆ. ಪ್ರಶ್ನೆಕರ್ತ ಕೊಡುವ ತಾಂಬೂಲದ ಸಹಾಯದಿಂದ ಶುಭಾ ಶುಭಫಲಗಳನ್ನು ಹೇಳಲಾಗುತ್ತದೆ ಅಂತ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಿವರಿಸಲಾಗಿದೆ.

ತಾಂಬೂಲ ಪ್ರಶ್ನೆಯಲ್ಲಿ ಶುಭಾಶುಭ ಫಲಗಳ ಬಗ್ಗೆ ಮಾಹಿತಿ

ಇದರಲ್ಲಿ ಜನ್ಮ ಪತ್ರಿಕೆಯಂಥ ಯಾವುದೇ ಪ್ರಯೋಗವಿಲ್ಲದೆಯೇ, ಪ್ರಶ್ನೆ ಮಾಡಿದ ಸಮಯ, ಪ್ರಶ್ನೆಕರ್ತನ ಸ್ವರೂಪ, ಅಂಗಚೇಷ್ಟೆ ಇತ್ಯಾದಿಗಳ ಆಧಾರದ ಮೇಲೆ ಸಮಸ್ತ ಪ್ರಶ್ನೆಗಳ ಯಥಾರ್ಥ ಫಲ ಹೇಳಲಾಗುತ್ತದೆ. ಪ್ರಶ್ನೆಶಾಸ್ತ್ರದಲ್ಲಿ ಚಕ್ರಗಳು, ಕವಡೆಗಳು, ತಾಂಬೂಲ ಇತ್ಯಾದಿಗಳನ್ನು ಉಪಯೋಗಿಸುವ ವಿಧಾನಗಳೂ ಪ್ರಚಲಿತದಲ್ಲಿರುತ್ತವೆ. ಅವುಗಳ ಸಂಖ್ಯೆ, ಸ್ವರೂಪ ಇತ್ಯಾದಿಗಳ ಆಧಾರದಿಂದ ಪ್ರಶ್ನೆಫಲ ಹೇಳಲಾಗುತ್ತದೆ.

ಇದನ್ನೂ ಓದಿ: Tambula Prashne: ಮಳಲಿಯಲ್ಲಿ ಇದ್ದಿದ್ದು ಮಂದಿರವೋ, ಮಸೀದಿಯೋ? ತಾಂಬೂಲ ಪ್ರಶ್ನೆಯಲ್ಲಿ ರಹಸ್ಯ ಬಯಲು!

ಪ್ರಶ್ನೆ ಕರ್ತ ಕೊಡುವ ತಾಂಬೂಲದ ಎಣಿಕೆ

ಪ್ರಶ್ನೆಕರ್ತನು ಕೊಡುವ ತಾಂಬೂಲದ ಸಹಾಯದಿಂದ ತನ್ವಾದಿ ದ್ವಾದಶ ಭಾವಗಳ ಸಮಸ್ತ ಶುಭಾ ಶುಭಫಲಗಳನ್ನು ಹೇಳಲಾಗುತ್ತದೆ. ಪೂರ್ವಾಹ್ನ ಮತ್ತು ಅಪರಾಹ್ನದ ಸಮಯದಲ್ಲಿ ಪ್ರಶ್ನೆಕರ್ತನಿಂದ ಕೊಡಲ್ಪಡುವ ವೀಳ್ಯದೆಲೆಗಳನ್ನು ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಎಣಿಸುವುದರ ಮೂಲಕ ಲಗ್ನಾದಿ ಹನ್ನೆರಡು ಭಾವಗಳ ಕಲ್ಪನೆ ಮಾಡಲಾಗುತ್ತದೆ.

ವೀಳ್ಯದೆಲೆ ಹೇಗಿದೆ ಎನ್ನುವುದರ ಮೇಲೂ ನಿರ್ಧಾರ

ಎಣಿಕೆ ಮಾಡುವಾಗ ಮೊದಲನೆಯ ಎಲೆ ಲಗ್ನ, ಎರಡನೆಯದು ಧನಭಾವ, ಮೂರನೆಯದು ಸಹಜ ಭಾವ ಹೀಗೆ ಹನ್ನೆರಡನೆಯ ಎಲೆಯ ವ್ಯಯ ಭಾವವಾಗುತ್ತದೆ. ಯಾವ ಭಾವದ ಸೂಚಕವಾದ ಎಲೆಯು ಬಾಡಿರುವುದೋ, ಹರಿದಿರುವುದೋ, ಛಿದ್ರವಾಗಿರುವುದೋ ಆ ಭಾವದ ಫಲಗಳು ಅನಿಷ್ಟವಾಗಿರುತ್ತವೆ. ಯಾವ ಭಾವ ಸಂಬಂಧಿ ಎಲೆಯು ವಿಶಾಲವಾಗಿದ್ದು, ನಿರ್ಮಲವಾಗಿದ್ದು ನಳನಳಿಸುವ ಕಾಂತಿಯುತವಾಗಿರುವುದೋ ಆ ಭಾವದ ಫಲವು ಶುಭ ಮತ್ತು ವೃದ್ಧಿಯಾಗುತ್ತದೆ ಎಂದು ತಿಳಿಯಬೇಕು.

ಇದರಲ್ಲೂ ಉಂಟು ಲೆಕ್ಕಾಚಾರ

ಪ್ರಶ್ನೆಕರ್ತನಿಂದ ಕೊಡಲ್ಪಟ್ಟ ವೀಳ್ಯದೆಲೆಗಳ ಸಂಖ್ಯೆಯನ್ನು ಎರಡುಪಟ್ಟು ಮಾಡಿ ಐದರಿಂದ ಭಾಗಾಕಾರ ಮಾಡಿ, ಗುಣನ ಫಲದಲ್ಲಿ 1 ಕೂಡಿಸಿ ಪುನಃ 7 ರಿಂದ ಭಾಗಾಕಾರ ಮಾಡಬೇಕು. ಇಲ್ಲಿ ಶೇಷವು 1 ಉಳಿದರೆ ಸೂರ್ಯ, ಎರಡು ಉಳಿದರೆ ಚಂದ್ರ, ಮೂರು ಉಳಿದರೆ ಶನಿ ಗ್ರಹವು ಉದಯವಾಗಿದೆ ಎಂದು ತಿಳಿಯಬೇಕು. ಈ ಪ್ರಕಾರ ಯಾವ ಗ್ರಹವು ಉದಯವಾಗಿರುವುದೋ ಅದು ಯಾವ ರಾಶಿಯಲ್ಲಿರುವುದೋ ಆ ರಾಶಿಯನ್ನು ಪ್ರಶ್ನೆ ಲಗ್ನವೆಂದು ತಿಳಿಯಬೇಕು.

ಯಾವುದಕ್ಕೆ ಯಾವ ಫಲ?

ಸೂರ್ಯನು ಉದಯವಾದರೆ ದುಃಖದಾಯಕ, ಚಂದ್ರ ಉದಯವಾದರೆ ಸುಖದಾಯಕ, ಮಂಗಲ ಉದಯವಾದರೆ ಕಲಹಕಾರಕ. ಬುಧ-ಗುರು ಉದಯವಾದರೆ ಧನದಾಯಕ, ಶುಕ್ರ ಉದಯವಾದರೆ ಇಷ್ಟಾರ್ಥ ಸಿದ್ಧಿದಾಯಕ ಮತ್ತು ಶನಿ ಉದಯವಾದರೆ ಪ್ರಶ್ನೆಕರ್ತೃವಾಗಿ ಮೃತ್ಯುದಾಯಕವಾಗಿರುತ್ತದೆ.

ತಾಂಬೂಲ ಪ್ರಶ್ನೆ ಮಹತ್ವವೇನು?

ತಾಂಬೂಲ ಪ್ರಶ್ನವು ಜ್ಯೋತಿಷ್ಯದಲ್ಲಿ ಬಹುಮುಖಿ ವಿಶ್ಲೇಷಣೆ ಪ್ರಕ್ರಿಯೆಯಾಗಿದೆ. ಇದು ಕೇರಳದಲ್ಲಿ ವ್ಯಾಪಕವಾಗಿ ಅನುಸರಿಸಲಾಗುತ್ತಿದೆ. ಉತ್ತಮ ತಿಳುವಳಿಕೆಗಾಗಿ, ಇದನ್ನು ಕುಟುಂಬದ CT ಸ್ಕ್ಯಾನ್‌ಗೆ ಹೋಲಿಸಬಹುದು. ಮನೆತನದಲ್ಲಿನ ಸಮಸ್ಯೆಗಳ ಮೂಲ ಕಾರಣವನ್ನು ಕಂಡುಹಿಡಿಯಲು ಕುಟುಂಬದಲ್ಲಿನ (ವಿಶಾಲ ಆಯಾಮ) 'ದೋಷ'ಗಳನ್ನು ನಿರ್ಣಯಿಸುವಲ್ಲಿನ ಸಂಕೀರ್ಣತೆಯಿಂದಾಗಿ ತಾಂಬೂಲ ಪ್ರಶ್ನೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿತು.

ತಾಂಬೂಲ ಪ್ರಶ್ನೆಯಲ್ಲಿ ಏನನ್ನು ಬಳಸಲಾಗುತ್ತದೆ?

ತಾಂಬೂಲ ಪ್ರಶ್ನೆಯಲ್ಲಿ ಮುಖ್ಯವಾಗಿ ದೀಪ, ಎಣ್ಣೆ ಮತ್ತು ಬತ್ತಿ, ತಾಂಬೂಲ ಅಥವಾ ವೀಳ್ಯದೆಲೆ, ಅಡಿಕೆಗಳನ್ನು ಬಳಸಲಾಗುತ್ತದೆ. ಇನ್ನು ಆರು ಲಗ್ನಗಳು ಅಥವಾ ಆರು ಅಂಕಗಳ ಉಲ್ಲೇಖಗಳು ಇರುತ್ತವೆ, ಅಂದರೆ ಆರೂಢಂ  ಅಂದರೆ  ಸಮುದ್ರ ಚಿಪ್ಪುಗಳನ್ನು ಬಳಸಿ ಜ್ಯೋತಿಷಿ ತೆಗೆದ ಕಾವಡಿ, ಉದಯಂ ಅಂದರೆ  ಪ್ರಶ್ನೆ ಸಮಯ, ಲಗ್ನಾಂಶ ಅಂದರೆ ಪ್ರಶ್ನೆ ಸಮಯದ ನವಾಂಶ, ಛತ್ರಂ ಅಂದರೆ ಸೂರ್ಯನ ಸ್ಥಾನ, ಆರೂಢ, ಉದಯ ಲಗ್ನದಿಂದ ಬಂದಿದೆ. ಇನ್ನು ಸ್ಪೃಷ್ಟಾಂಗ ಅಂದರೆ  ವಿಚಾರಿಸುವವರು ಸ್ಪರ್ಶಿಸುವ ದೇಹದ ಭಾಗವನ್ನು ಆಧರಿಸಿ ಹೇಳುವುದು, ಚಂದ್ರನ್ ಅಂದರೆ ಚಂದ್ರನ ಸ್ಥಾನ, ತಾಂಬೂಲ ಗ್ರಹ ಮತ್ತು ರಾಶಿ, ಇತರ ನಿಮಿತ್ತಗಳು ಹಾಗೂ ಕುಟುಂಬ ಸದಸ್ಯರ ಜಾತಕ ಬಳಸಲಾಗುತ್ತದೆ.

ಏನಿದು ದರ್ಗಾ ವಿವಾದ?

ಏಪ್ರಿಲ್ 21ರಂದು ಮಳಲಿಯ ಮಸೀದಿ ನವೀಕರಣಕ್ಕಾಗಿ ಕಟ್ಟಡ ತೆರವು ಮಾಡಲಾಗುತ್ತಿತ್ತು. ಆದ್ರೆ ಮದನಿ ದರ್ಗಾ ಕೆಡವಿದಾಗ ದೇವಾಲಯ ಶೈಲಿಯ ಕಟ್ಟಡ ಪತ್ತೆಯಾಗಿತ್ತು ಎನ್ನಲಾಗಿದೆ. ಗುರುಪುರ ಬಳಿ ದೇಗುಲ ಮಾದರಿ ಕಟ್ಟಡ ಕಾಣಿಸಿಕೊಂಡ ಬೆನ್ನಲ್ಲೇ ವಿವಾದ ಶುರುವಾಗಿತ್ತು. ಜೊತೆಗೆ ದೇಗುಲದ ಕಳಶ, ತೋಮರ ಮತ್ತು ಕಂಬಗಳಂತ ಮಾದರಿ ಕೂಡ ಪತ್ತೆಯಾಗಿತ್ತು. ಕೂಡಲೇ ಜಿಲ್ಲಾಡಳಿತ ಮಳಲಿ ದರ್ಗಾ ಕಾಮಗಾರಿಯನ್ನ ಸ್ಥಗಿತಗೊಳಿಸಿ ಆದೇಶ ನೀಡಿತ್ತು. ಇದಾದ ಬೆನ್ನಲ್ಲೇ ಸ್ಥಳಕ್ಕೆ ಹಿಂದೂ ಸಂಘಟನೆ ಭೇಟಿ ನೀಡಿ, ಪರಿಶೀಲನೆ ಮಾಡಿತ್ತು. ನಂತರದಲ್ಲಿ ಅಲ್ಲಿ, ದೇಗುಲ ಇತ್ತು ಎಂದು ವಾದ ಶುರುವಾಗಿತ್ತು.

ನಿನ್ನೆ ನಡೆದಿದ್ದ ತಾಂಬೂಲ ಪ್ರಶ್ನೆ

ದೈವ ಸಾನಿಧ್ಯ ದೃಢೀಕರಣಕ್ಕಾಗಿ ನಿನ್ನೆ ಬೆಳಗ್ಗೆ 8 ಗಂಟೆಯಿಂದ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಆರಂಭವಾಗಿತ್ತು. ಕೇರಳದ ಪ್ರಖ್ಯಾತ ಜ್ಯೋತಿಷಿ ಜಿ.ಪಿ. ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ನಡೆದ ಪ್ರಶ್ನಾಚಿಂತನೆ ಇದೀಗ ಮುಕ್ತಾಯವಾಗಿದೆ. ಈ ವೇಳೆ ಕೇರಳ ದೈವಜ್ಞರು ಸ್ಥಳದಲ್ಲಿ ಈ ಹಿಂದೆ ದೇವಾಲಯವಿತ್ತು, ವಿವಾದದಿಂದ ದೇವಾಲಯ ನಾಶಪಡಿಸಲಾಗಿದೆ, ದೇವಸ್ಥಾನ ಮರುಸ್ಥಾಪಿಸಬೇಕೆಂದು ಹೇಳಿದ್ದಾರೆ.

ಈ ಹಿಂದೆ ಇದೇ ಜಾಗದಲ್ಲಿ ಮಠ ಇತ್ತಂತೆ

ಸಾಮಾನ್ಯ ತಾಂಬೂಲ ಪ್ರಶ್ನೆಯಲ್ಲಿ ಪೂರ್ಣವಾದ ಚೈತನ್ಯವಿದೆ. ಆದರೆ ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರು ಇರುವುದು ನಿಜ ಅಂತ ಜ್ಯೋತಿಷಿ ಜಿ.ಪಿ. ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು. ಇದು ದೈವ ಸಾನ್ನಿಧ್ಯ ಇದ್ದಂತಹ ಸ್ಥಳ. ವಿವಾದದಿಂದಾಗಿ ದೇವಾಲಯ ನಾಶಪಡಿಸಿ, ಮಸೀದಿ ಕಟ್ಟಲಾಗಿದೆ. ಹೀಗಾಗಿ ಇಲ್ಲಿ ದೇವಾಲಯವನ್ನು ಮರುಸ್ಥಾಪಿಸಬೇಕಿದೆ ಎಂದು ತಿಳಿಸಿದ್ದಾರೆ.

ಅಷ್ಟಮಂಗಲ ಪ್ರಶ್ನೆ ನಡೆಸುವಂತೆ ಸಲಹೆ

ಆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿರ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ , ಈ ಮಸೀದಿ ಇರುವ ಸ್ಥಳದಲ್ಲಿ ಹಿಂದೆ ದೈವಸಾನಿಧ್ಯವಿತ್ತೇ, ಪೂರ್ವದಲ್ಲಿ ಯಾವ ರೀತಿ ಆರಾಧನೆ ನಡೆಯುತ್ತಿತ್ತು ಎಂಬ ನಿಟ್ಟಿನಲ್ಲಿ ನಾವು ಇಂದು ತಾಂಬೂಲ ಪ್ರಶ್ನೆ ಇರಿಸಿದ್ದೇವೆ‌. ಈ ನಿಟ್ಟಿನಲ್ಲಿ ಇಲ್ಲಿ ಶೈವ ಆರಾಧನೆ ಇತ್ತು ಎಂದು ಗೋಚರವಾಗಿದೆ. ಆದರೆ ಕೂಲಂಕಷ ಚರಿತ್ರೆಯನ್ನು ಅರಿಯಲು ತಾಂಬೂಲ ಪ್ರಶ್ನಾ ಚಿಂತನೆಯಿಂದಲೇ ಸಾಧ್ಯವಿಲ್ಲ. ಅದಕ್ಕಾಗಿ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಸಬೇಕಾಗಿದೆ ಅಂತ ಸಲಹೆ ನೀಡಿದ್ದಾರೆ.

ದೇಗುಲ ಅಭಿವೃದ್ಧಿ ಆದರೆ ಗ್ರಾಮ ಅಭಿವೃದ್ಧಿ

ಇನ್ನು ಇಲ್ಲಿ ಪೂರ್ವದಲ್ಲಿ ಗುರುಮಠದ ಅಧೀನದಲ್ಲಿ ಶೈವ ಆರಾಧನೆಯ ಸಾನಿಧ್ಯವಿತ್ತು ಎಂದು ತೋರಿ ಬಂದಿದೆ. ಅದೇ ತರಹದಲ್ಲಿ ಇಲ್ಲಿ ಆರಾಧನೆಗೊಂಡ ಉಪಾಧಿಯಾಗಿ ಕೆಲವೊಂದು ವಸ್ತುಗಳು ಕೆಲವು ಮಠಗಳಲ್ಲಿ, ದೇವಾಲಯಗಳಲ್ಲಿ ಆರಾಧನೆ ಗೊಳ್ಳತ್ತಿವೆ ಎಂದು ಗೋಚರವಾಗಿದೆ‌ ಅಂತ ಜ್ಯೋತಿಷಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಾನಿಧ್ಯದ ಜೀರ್ಣೋದ್ಧಾರ ಆಗಬೇಕು, ಇದು ಆದಲ್ಲಿ ಈ ಗ್ರಾಮವೂ ಅಭಿವೃದ್ಧಿ ಆಗಲಿದೆ. ಯಾರಿಗೂ ತೊಂದರೆ ಆಗದಂತೆ ಈ ಸಾನಿಧ್ಯ ಜೀರ್ಣೋದ್ಧಾರ ಆಗಬೇಕು. ಇದಕ್ಕಾಗಿ ಎಲ್ಲರ ಸಹಕಾರ, ಪ್ರಾರ್ಥನೆ ಅಗತ್ಯ ಅಂತ ದೈವಜ್ಞ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ.

ಇದನ್ನೂ ಓದಿ: Explained: ಅಯೋಧ್ಯೆಯಷ್ಟೇ ಮಹತ್ವದ್ದೇಕೆ ಜ್ಞಾನವಾಪಿ ಭೂಮಿ? ಅಷ್ಟಕ್ಕೂ ವಿವಾದಕ್ಕೆ ಒಳಗಾಗಿದ್ದೇಕೆ ಮಸೀದಿ?

ಮುಂದೆ ಏನಾಗಬಹುದು?

ಮಸೀದಿ ಜಾಗವನ್ನ ಹಿಂದೂಗಳಿಗೆ ಬಿಟ್ಟುಕೊಡಲು ವಿಶ್ವಹಿಂದೂ‌ ಪರಿಷತ್ ಆಗ್ರಹಿಸಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ  ಸಲ್ಲಿಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ‌ಮೂಲಕ ಜಾಗವನ್ನ ಹಿಂಪಡೆಯಲು ತೀರ್ಮಾನಿಸಿದೆ ಅಂತ ಹೇಳಲಾಗಿದತೆ  ಸದ್ಯ ಈ ಜಾಗವನ್ನ ವಿವಾದಿತ ಪ್ರದೇಶ ಎಂದು ಘೋಷಣೆ ಮಾಡಿರುವ ಜಿಲ್ಲಾಡಳಿತ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮಸೀದಿ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
Published by:Annappa Achari
First published: