Explained: 'The Kashmir Files' ಸಿನಿಮಾದಲ್ಲಿ ತೋರಿಸಿದ್ದು ಟ್ರೇಲರ್ ಅಷ್ಟೇ! ಕಾಶ್ಮೀರಿ ಪಂಡಿತರ ಬದುಕಿನ ಕರಾಳ ಕಥೆ ಇಲ್ಲಿದೆ ಓದಿ

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಎಷ್ಟು ಗಾಢವಾಗಿ ಕಾಡುತ್ತದೆ ಎಂದರೆ ಬೆಂಗಳೂರು ಮಹಾನಗರದ ಮಲ್ಟಿಫ್ಲೆಕ್ಸ್ ಒಂದರಲ್ಲಿ ಸಿನಿಮಾ ಮಧ್ಯೆ ಇಂಟರ್ವಲ್ ಬಂದಾಗಲೂ ಪ್ರೇಕ್ಷಕರ್ಯಾರು ಎದ್ದು ಹೊರಕ್ಕೆ ಹೋಗಿಲ್ಲವಂತೆ. ಸಿನಿಮಾ ನೋಡಿಯೇ ಇಷ್ಟು ಭಾವುಕರಾದರೆ ನೈಜವಾಗಿ ಕಾಶ್ಮೀರಿ ಪಂಡಿತರ ಮೇಲಿನ ಅನ್ಯಾಯ ತಿಳಿದರೆ ಇನ್ನೆಷ್ಟು ನೋವಾಗಬೇಡ? ಹಾಗಿದ್ರೆ ಈ ಸಿನಿಮಾ ಕಥೆಯೇನು? 1990ರಲ್ಲಿ ನಿಜಕ್ಕೂ ಕಾಶ್ಮೀರ ಕಣಿವೆಯಲ್ಲಿ ಏನಾಗಿತ್ತು? ಕಾಶ್ಮೀರಿ ಪಂಡಿತರುವಯಾರು? ಅವರ ಮೇಲೆ ದೌರ್ಜನ್ಯ ನಡೆದಿದ್ದೇಕೆ? ನೈಜ ಕಥೆ ಆಧರಿಸಿದ ಈ ಸಿನಿಮಾ ವಿವಾದವಾಗಿದ್ದೇಕೆ? ಈ ಎಲ್ಲವುಗಳ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ…

1990ರಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದ ಒಂದು ಕಾಶ್ಮೀರಿ ಪಂಡಿತ ಕುಟುಂಬ (ಕೃಪೆ: Internet)

1990ರಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದ ಒಂದು ಕಾಶ್ಮೀರಿ ಪಂಡಿತ ಕುಟುಂಬ (ಕೃಪೆ: Internet)

  • Share this:
ಸದ್ಯ ದೇಶದಾದ್ಯಂತ ಸದ್ದು (Sound) ಮತ್ತು ಸುದ್ದಿ (News) ಎರಡನ್ನೂ ಒಟ್ಟಿಗೆ ಮಾಡುತ್ತಿರುವ ಸಿನಿಮಾ (Cinema) ಅಂದರೆ ಅದು ‘ದಿ ಕಾಶ್ಮೀರ್ ಫೈಲ್ಸ್’. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಬಾಲಿವುಡ್ (Bollywood) ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಇದೆ. ಸಿನಿಮಾ ಪ್ರಾರಂಭದಿಂದ ಈಗಿವರೆಗೂ ವಿವಾದಗಳನ್ನೇ (Controversy) ಮಾಡುತ್ತಿದೆ. ಆದರೆ ಆ ವಿವಾದಗಳಿಂದಲೇ ಸಿನಿಮಾ ಮತ್ತಷ್ಟು ಜನಪ್ರಿಯತೆ ಪಡೆಯುತ್ತಿದೆ. ಬಾಲಿವುಡ್ ಪಂಡಿತರ ಲೆಕ್ಕಾಚಾರವನ್ನು ಈ ಸಿನಿಮಾ ತಲೆಕೆಳಗೆ ಮಾಡಿದೆ. ಕೇವಲ ಮೂರೇ ಮೂರು ದಿನದಲ್ಲಿ 31 ಕೋಟಿ ರೂಪಾಯಿ ಕಲೆಕ್ಷನ್ (Collection) ಮಾಡಿದೆ. ಇದರ ಜನಪ್ರಿಯತೆಯ ವೇಗ ನೋಡಿದ್ರೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವುದರಲ್ಲಿ ಡೌಟೇ ಇಲ್ಲ. ಹಾಗಿದ್ರೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಥೆಯೇನು? 1990ರಲ್ಲಿ ನಿಜಕ್ಕೂ ಕಾಶ್ಮೀರ ಕಣಿವೆಯಲ್ಲಿ ಏನಾಗಿತ್ತು? ಕಾಶ್ಮೀರಿ ಪಂಡಿತರು (Kashmir Pandit) ಯಾರು? ಅವರ ಮೇಲೆ ದೌರ್ಜನ್ಯ ನಡೆದಿದ್ದೇಕೆ? ನೈಜ ಕಥೆ ಆಧರಿಸಿದ ಈ ಸಿನಿಮಾ ವಿವಾದವಾಗಿದ್ದೇಕೆ? ಈ ಎಲ್ಲವುಗಳ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ…

 ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಕಥೆಯೇನು?

 ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ 1990ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಕುಟುಂಬಗಳ ಮೇಲಿನ ದೌರ್ಜನ್ಯದ ಕಥೆ ಹೊಂದಿದೆ. ಪುಷ್ಕರ್ ನಾಥ್ ಪಂಡಿತ್‌ ಎಂಬ ಕಾಶ್ಮೀರಿ ಪಂಡಿತರ

ಪಾತ್ರದ ಸುತ್ತ ಕಥೆ ಸುತ್ತುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವವಿದ್ಯಾನಿಲಯವೊಂದರಲ್ಲಿ ಕಲಿಯುತ್ತಿರುವ ಪುಷ್ಕರ್ ನಾಥ್ ಪಂಡಿತ್‌ ಮೊಮ್ಮಗ ಕೃಷ್ಣ ಪಂಡಿತ್‌ಗೆ ತನ್ನ ಕುಟುಂಬದ ಇತಿಹಾಸವನ್ನು ತಿಳಿಸುತ್ತ ಸಾಗುವ ಕಥೆ ಇದು.

ಕಾಶ್ಮೀರಿ ಪಂಡಿತರಿಗೆ 'ಮತಾಂತರವಾಗಿ, ಓಡಿ ಹೋಗಿ ಅಥವಾ ಸಾಯಿರಿ..' ಎಂದು ಭಯೋತ್ಪಾದಕರು ಬೆದರಿಕೆ ಹಾಕುತ್ತಾರೆ. ನಂತರ ನಡೆದ ಕಾಶ್ಮೀರಿ ಪಂಡಿತ ಕುಟುಂಬಗಳ ಹತ್ಯಾಕಾಂಡವನ್ನು ಸವಿಸ್ತಾರವಾಗಿ ತೋರಿಸಲಾಗಿದೆ.

ಚಿತ್ರ ಮಂದಿರದಿಂದ ಹೊರ ಬಂದಮೇಲೂ ಕಾಡುವ ಪಾತ್ರಗಳು

ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಒಂದೊಂದು ದೃಶ್ಯಗಳು ಹೃದಯಕ್ಕೆ ತಟ್ಟುತ್ತವೆ ಎಂದಿದ್ದಾರೆ. ನಾವು ಓದಿದ ಶಾಲೆ ಇತಿಹಾಸ ಪುಸ್ತಕದಲ್ಲಿ ಈ ಘಟನೆ ಬಗ್ಗೆ ಹೇಳಿಲ್ಲ ಅಂತ ಕೆಲ ಯುವಕರು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.

ಇಂಟರ್‌ವಲ್‌ನಲ್ಲೂ ಎದ್ದು ಹೊರಕ್ಕೆ ಹೋಗಿಲ್ಲವಂತೆ ಪ್ರೇಕ್ಷಕರು!

ಈ ಸಿನಿಮಾ ಎಷ್ಟು ಗಾಢವಾಗಿ ಕಾಡುತ್ತಿದೆ ಎಂದರೆ ಬೆಂಗಳೂರು ಮಹಾನಗರದ ಮಲ್ಟಿಫ್ಲೆಕ್ಸ್ ಒಂದರಲ್ಲಿ ಸಿನಿಮಾ ಮಧ್ಯೆ ಇಂಟರ್‌ವಲ್ ಬಂದಾಗಲೂ ಪ್ರೇಕ್ಷಕರ್ಯಾರು ಎದ್ದು ಹೊರಕ್ಕೆ ಹೋಗಿಲ್ಲವಂತೆ. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ನೋಡಿ ಎದೆ ಭಾರವಾಗಿಸಿಕೊಂಡು ರಿಫ್ರೆಶ್ ಆಗೋದಾದ್ರೂ ಹೇಗೆ ಅಂತ ಸೀಟಿನ ತುದಿಯಲ್ಲೇ ಕಾದು ಕೂತಿದ್ದರಂತೆ!

ಇದನ್ನೂ ಓದಿ: Modi: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಮೋದಿ ಮೆಚ್ಚುಗೆ! ಈ Movie ನೋಡ್ತಾರಾ ಪ್ರಧಾನಿ?

ವಿವಾದವಾಗಿದ್ದೇಕೆ ‘ದಿ ಕಾಶ್ಮೀರ್ ಫೈಲ್ಸ್’?

ಚಿತ್ರದಲ್ಲಿ ದೃಶ್ಯಗಳನ್ನು ಅತೀ ವಿಜೃಂಭಿಸಿ ತೋರಿಸಲಾಗಿದೆ ಎನ್ನುವುದು ಕೆಲವರ ಆರೋಪ. ಕಾಶ್ಮೀರಿ ಪಂಡಿತರಿಗೆ ಅದೆಷ್ಟೋ ಮುಸ್ಲಿಂ ಕುಟುಂಬಗಳು ಸಹಾಯ ಮಾಡಿದ್ದವು, ಆದರೆ ಅದನ್ನು ಸಿನಿಮಾದಲ್ಲಿ ತೋರಿಸಿಲ್ಲ. ಬದಲಾಗಿ ಕಾಶ್ಮೀರದ ಎಲ್ಲಾ ಮುಸ್ಲಿಮರು ದೌರ್ಜನ್ಯ ನಡೆಸಿದವರು ಎನ್ನುವಂತೆ ತೋರಿಸಿದ್ದಾರೆ ಎನ್ನುವ ಆರೋಪವೂ ಇದೆ.

ರವಿ ಖನ್ನಾ ಪತ್ನಿಯಿಂದ ಕೋರ್ಟ್‌ಗೆ ಮೊರೆ

'ದಿ ಕಾಶ್ಮೀರಿ ಫೈಲ್ಸ್' ಸಿನಿಮಾದ ವಿಶೇಷ ಪ್ರೀಮಿಯರ್ ಶೋ ನೋಡಿದ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಪತ್ನಿ ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ದೂರು ಆಲಿಸಿದ ಜಮ್ಮು ಕಾಶ್ಮೀರ ಜಿಲ್ಲಾ ನ್ಯಾಯಾಲಯವು, 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು.

ಸೀನ್‌ಗೆ ಕತ್ತರಿ ಹಾಕಲು ಸೂಚಿಸಿದ್ದ ಕೋರ್ಟ್

''ಸಿನಿಮಾದಲ್ಲಿ ತೋರಿಸಲಾಗಿರುವ ಕೆಲವು ದೃಶ್ಯಗಳು ಸತ್ಯವಲ್ಲ ಅಲ್ಲದೆ ಆ ದೃಶ್ಯಗಳು ನನ್ನ ದಿವಂಗತ ಪತಿ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಗೌರವಕ್ಕೆ ಧಕ್ಕೆ ತರುತ್ತಿವೆ'' ಎಂದು ರವಿ ಖನ್ನಾ ಪತ್ನಿ ನಿರ್ಮಲಾ ಖನ್ನಾ ದೂರು ನೀಡಿದ್ದರು. ವಿಚಾರಣೆ ನಡೆಸಿದ ಜಮ್ಮು ಜಿಲ್ಲಾ ನ್ಯಾಯಾಲಯವು, ರವಿ ಖನ್ನಾ ಕುರಿತು ಇರುವ ದೃಶ್ಯಗಳನ್ನು ಬದಲಾವಣೆ ಮಾಡಬೇಕು ಅಥವಾ ಪ್ರದರ್ಶಿಸಬಾರದು ಎಂದು ಚಿತ್ರತಂಡಕ್ಕೆ ಹೇಳಿತ್ತು.

1990ರಲ್ಲಿ ಕಣಿವೆ ರಾಜ್ಯದಲ್ಲಿ ನಡೆದಿದ್ದಾದರೂ ಏನು?

1980ರ ಕೊನೆಯ ಭಾಗ ಹಾಗೂ 1990ರ ದಶದದ ದಿನಗಳು ಕಾಶ್ಮೀರ ಕಣಿವೆಯಲ್ಲಿ ವಾಸವಿದ್ದ ಪಂಡಿತ ಸಮುದಾಯಕ್ಕೆ ಅತ್ಯಂತ ಕರಾಳ ದಿನಗಳು. ಜಮ್ಮು-ಕಾಶ್ಮೀರದ ಲಿಬರೇಷನ್‌ ಫ್ರಂಟ್‌ ಮತ್ತು ಇಸ್ಲಾಮಿಕ್‌ ಉಗ್ರವಾದದ ಅಟ್ಟಹಾಸದಿಂದ ಸುಮಾರು 3.5 ಲಕ್ಷ ಪಂಡಿತ ಸಮುದಾಯ ತಮ್ಮ ಮನೆ, ಉದ್ಯೋಗ, ಆಸ್ತಿ-ಪಾಸ್ತಿಗಳನ್ನೆಲ್ಲ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ರಾತ್ರೋರಾತ್ರಿ ಓಡಬೇಕಾದ ಪರಿಸ್ಥಿತಿ ಬಂದಿತ್ತು.

ಬಿಜೆಪಿ ನಾಯಕನ ಹತ್ಯೆ ಬಳಿಕ ನಿರಂತರ ದಾಳಿ

1989ರ ಸೆಪ್ಟೆಂಬರ್‌ ತಿಂಗಳಲ್ಲಿ ಸಶಸ್ತ್ರ ಸಜ್ಜಿತ ಗುಂಪೊಂದು ಬಿಜೆಪಿ ನಾಯಕ, ರಾಜಕೀಯ ಕಾರ‍್ಯಕರ್ತ ಟೀಕಾ ಲಾಲ್‌ ತಪ್ಲೋ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿತು. ಇಲ್ಲಿಂದ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಸುವುದು ಆರಂಭವಾಯಿತು.

ಮಸೀದಿಗಳ ಮೈಕ್‌ನಿಂದಲೇ ಹೊರಡುತ್ತಿತ್ತು ಫರ್ಮಾನು

ಆ ದಿನಗಳಲ್ಲಿ ಕಾಶ್ಮೀರದ ಹಲವು ಭಾಗಗಳಲ್ಲಿ ಪಂಡಿತ ಕುಟುಂಬಗಳಿಗೆ ಬೆದರಿಕೆ ಹಾಕಲಾಗಿತ್ತು. ಮುಸ್ಲಿಂ ಧರ್ಮ ಗುರುಗಳೇ ಮಸೀದಿಗಳ ಮೈಕಿನಿಂದ ಪಂಡಿತರೇ ಇಲ್ಲಿಂದ ಹೊರಡಿ ಎಂದು ಫಾರ್ಮಾನು ಹೊರಡಿಸುತ್ತಿದ್ದರು.

1997ರ ಮಾರ್ಚ್‌ ತಿಂಗಳಳ್ಲಿ 7 ಮಂದಿ ಕಾಶ್ಮೀರಿ ಪಂಡಿತರನ್ನು ಮನೆಯಿಂದ ಹೊರಗೆಳೆದುಕೊಂಡು ಬಂದ ಭಯೋತ್ಪಾದರು, ಜನರ ಎದುರೇ ಗುಂಡಿಕ್ಕಿ ಹತ್ಯೆಗೈದರು. 1998 ಜನವರಿಯಲ್ಲಿ ವಂಧಾಮಾ ಗ್ರಾಮದಲ್ಲಿ ಮಹಿಳೆಯರು ಮಕ್ಕಳು ಸೇರಿ 23 ಕಾಶ್ಮೀರ ಪಂಡಿತರನ್ನು ಹತ್ಯೆ ಮಾಡಲಾಯಿತು.

ಮಹಿಳೆಯರ ಮೇಲೆ ನಡೆದಿತ್ತು ಅತ್ಯಾಚಾರ

ಜನವರಿ 1990ರಂದು ಕಣಿವೆ ರಾಜ್ಯದ ಮಸೀದಿಗಳ ಮುಂದೆ ಬೃಹತ್‌ ಜನಸ್ತೋಮ ನೆರೆದು ಪಂಡಿತ್‌ ವಿರೋಧಿ ಮತ್ತು ಭಾರತ ವಿರೋಧಿ ಘೋಷಣೆ ಕೂಗಲು ಆರಂಭಿಸಿದರು. ಅಲ್ಲಿಂದ ಕಾಶ್ಮೀರಿ ಪಂಡಿತರ ಮಹಾ ವಲಸೆ ಆರಂಭವಾಯಿತು. ಮುಂದಿನ ಕೆಲ ತಿಂಗಳ ಕಾಲ ಮುಗ್ಧ ಕಾಶ್ಮೀರಿ ಪಂಡಿತರಿಗೆ ಚಿತ್ರ ಹಿಂಸೆ ನೀಡಿದರು, ಹಲವರನ್ನು ಕೊಂದರು, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದರು.

3.5 ಲಕ್ಷ ಕಾಶ್ಮೀರಿ ಪಂಡಿತರ ಪಲಾಯನ

ವರ್ಷದ ಅಂತ್ಯದ ವೇಳೆಗೆ ಸುಮಾರು 3.5 ಲಕ್ಷ ಪಂಡಿತರು ಕಾಶ್ಮೀರ ತೊರೆದು ಪಲಾಯನ ಮಾಡಿದರು. ಅವರ ಆಸ್ತಿ-ಪಾಸ್ತಿಯನ್ನು ಧ್ವಂಸಗೊಳಿಸಲಾಯಿತು. ಅಥವಾ ತುರ್ತಾಗಿ ಕಾಶ್ಮೀರಿ ಮುಸ್ಲಿಮರಿಗೆ ಮಾರಾಟ ಮಾಡಿ, ಜೀವ ಉಳಿಸಿಕೊಳ್ಳಬೇಕಾಯಿತು.

ಕಾಶ್ಮೀರಿ ಪಂಡಿತರ ಮೇಲೇಯೆ ದೌರ್ಜನ್ಯ ನಡೆದಿದ್ದು ಏಕೆ?

ಜಮ್ಮು ಕಾಶ್ಮೀರದ ಅಂದಿನ ಸಿಎಂ ಶೇಖ್‌ ಅಬ್ದುಲ್ಲಾ 1982ರಲ್ಲಿ ನಿಧನರಾದರು. ಪುತ್ರ ಫಾರೂಕ್‌ ಅಬ್ದುಲ್ಲಾ ನ್ಯಾಷನಲ್‌ ಕಾನ್ಪರೆನ್ಸ್‌ ಪಕ್ಷದ ನೇತೃತ್ವ ವಹಿಸಿದರು. ಆದರೆ ಎರಡೇ ವರ್ಷಗಳಲ್ಲಿ ಕೇಂದ್ರ ಸರ್ಕಾರ ಎನ್‌ಸಿಪಿ ವಜಾ ಮಾಡಿ ಭಿನ್ನಮತೀಯ ಗುಲಾಂ ಮೊಹಮ್ಮದ್‌ ಶಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಇದು ಭಾರೀ ಅಸಮಾಧಾನ ಮತ್ತು ರಾಜಕೀಯ ಅಸ್ಥಿರತೆಗೆ ಕಾರಣವಾಯಿತು.

ಉಗ್ರಗಾಮಿ ನಾಯಕನ ಸಾವಿನ ನಂತರ ಹಿಂಸಾಚಾರ

ಜಮ್ಮು ಮತ್ತು ಕಾಶ್ಮೀರ ಲಿಬರೇಷನ್‌ ಫ್ರಂಟ್‌ ತನ್ನ ಚಟುವಟಿಕೆಗಳನ್ನು ಹೆಚ್ಚಿಸಿತು. 1984ರಲ್ಲಿ ಉಗ್ರಗಾಮಿ ನಾಯಕ ಮಕ್ಬೂಲ್‌ ಭಟ್‌ನನ್ನು ಗಲ್ಲಿಗೇರಿಸಿದಾಗಿನಿಂದ ಹಿಂದೂಗಳನ್ನು ಗುರಿಯಾಗಿಸಿ ನಡೆಸುವ ದಾಳಿಗಳು ಹೆಚ್ಚಾದವು.

1986ರಲ್ಲಿ, ರಾಜೀವ್‌ ಗಾಂಧಿ ಸರ್ಕಾರವು ಬಾಬ್ರಿ ಮಸೀದಿ ಬೀಗಗಳನ್ನು ತೆರೆದ ನಂತರ ಹಿಂದೂಗಳು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಿಕೊಟ್ಟನಂತರ ಕಾಶ್ಮೀರದಲ್ಲಿ ಅದರ ಕರಿನೆರಳು ಕಾಣಿಸಿಕೊಂಡಿತು.

ಹಿಂದೂ ದೇಗಲಗಳ ಮೇಲೆ ನಿರಂತರ ದಾಳಿ

ಆಗಿನ ಕಾಂಗ್ರೆಸ್‌ ನಾಯಕ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರ ಕ್ಷೇತ್ರ ಅನಂತನಾಗ್‌ನಲ್ಲಿ, ಹಿಂದೂ ದೇವಾಲಯಗಳ ಮೇಲೆ ಸರಣಿ ದಾಳಿಗಳು ನಡೆದವು ಮತ್ತು ಕಾಶ್ಮೀರಿ ಪಂಡಿತರ ಅಂಗಡಿಗಳು ಮತ್ತು ಆಸ್ತಿಗಳ ಮೇಲೆ ಪ್ರತ್ಯೇಕತಾವಾದಿಗಳು ದಾಳಿ ಆರಂಭಿಸಿದರು. ಇದು ಪಂಡಿತರ ಮೇಲಿನ ದಾಳಿಗೆ ಮುನ್ನುಡಿಯಾಯಿತು.

 ಈಗಲೂ ಬಹುತೇಕರದ್ದು ನಿರ್ಗತಿಕ ಬದುಕು

 ಕಾಶ್ಮೀರದಿಂದ ಜೀವ ಉಳಿಸಿಕೊಳ್ಳಲು ಬೇರೆ ಕಡೆ ಓಡಿ ಬಂದ ಕಾಶ್ಮೀರಿ ಪಂಡಿತ ಕುಟುಂಬಗಳು ಈಗಲೂ ದಯನೀಯ ಬದುಕು ನಡೆಸುತ್ತಿದ್ದಾರೆ. ಕ್ಯಾಂಪ್ ಗಳಲ್ಲಿ, ಟೆಂಟ್ ಗಳಲ್ಲಿ ನಿರಾಶ್ರಿತರ ಬದುಕು ಬದುಕುತ್ತಿದ್ದಾರೆ.

ಮಹಲಿನಂತಿದ್ದ ಮನೆಗಳನ್ನು ತೊರೆದು ಟಾಯ್ಲೆಟ್ ಕೂಡ ಇಲ್ಲದ 10/12 ಸೈಜಿನ ರೂಮೊಂದರಲ್ಲಿ ಬದುಕು ಸವೆಸುತ್ತಿದ್ದಾರೆ. ಬಂಗಲೆಯಲ್ಲಿದ್ದವರು ದೆಹಲಿಯ ಫುಟ್ ಪಾತನ್ನು ಮನೆಯಾಗಿಸಿಕೊಂಡಿದ್ದಾರೆ. ಸುದೀರ್ಘ 32 ವರ್ಷಗಳು ಕಳೆದರೂ ಇಂದಿಗೂ ನ್ಯಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

 2014ರಲ್ಲಿ ಮತ್ತೆ ಕಾಶ್ಮೀರಕ್ಕೆ ಮರಳಿದ ಪಂಡಿತರು

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಶ್ಮೀರಿ ಪಂಡಿತರನ್ನು ವಾಪಸ್‌ ಕರೆಸಿಕೊಳ್ಳುವ ಹಲವು ಪ್ರಯತ್ನಗಳು ನಡೆದವು. ಸಾಮಾಜಿಕ ಜಾಲತಾಣಗಳಲ್ಲಿ ‘ಹಮ್‌ ವಾಪಸ್‌ ಜಾಯೇಂಗೇ’ ಟ್ರೆಂಡ್‌ ಸಹ ಆರಂಭವಾಗಿತ್ತು.

ಕಾಶ್ಮೀರಿ ಮುಸ್ಲಿಮರೂ ಪಂಡಿತರ ಆಗಮನವನ್ನು ಸ್ವಾಗತಿಸಿದ್ದರು. ಆದರೆ ಅವರಿಗೆ ಪುನರ್‌ವಸತಿ ಕಲ್ಪಿಸಿಕೊಡುವ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಈ ನಡುವೆ 2019 ಆ.5ರಂದು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್‌ 370ಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದು ಕಾಶ್ಮೀರಿ ಪಂಡಿತರಲ್ಲಿ ಸಂತಸ ತಂದಿತ್ತು.

 ಕಾಶ್ಮೀರಿ ಪಂಡಿತರಿಗಾಗಿ ಪುನರ್ವಸತಿ ಯೋಜನೆ

ಕಾಶ್ಮೀರಿ ಪಂಡಿತರನ್ನು ವಾಪಸ್‌ ಕರೆಸಿಕೊಂಡು, ಸರ್ಕಾರ ಅವರಿಗೆ ಉದ್ಯೋಗವನ್ನೂ ಒದಗಿಸಿತ್ತು. ಆರ್ಟಿಕಲ್‌ 370 ರದ್ದಾಗಿದ್ದರಿಂದ ಅವರಿಗೆ ಅಭದ್ರತೆಯ ಆತಂಕವೂ ದೂರವಾಗಿತ್ತು. ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ಕೇಂದ್ರ ಸರ್ಕಾರ 80,000 ಕೋಟಿ ರು. ಬಿಡುಗಡೆ ಮಾಡಿ ಪಂಡಿತರ ಪುನರ್ವಸತಿಗೂ ಅನುದಾನ ಮೀಸಲಿಟ್ಟಿತ್ತು.

ಇದನ್ನೂ ಓದಿ: The Kashmir Files: 3 ದಿನದಲ್ಲಿ ₹31 ಕೋಟಿ ಕಲೆಕ್ಷನ್​.. ಸಿನಿಮಾ ನೋಡಲು ಪೊಲೀಸರಿಗೆ ರಜೆ ಕೊಟ್ಟ ಸರ್ಕಾರ!

ಇನ್ನೂ ನಿಂತಿಲ್ಲ ಕಾಶ್ಮೀರಿ ಪಂಡಿತರ ವಲಸೆ

ಕಾಶ್ಮೀರಿ ಪಂಡಿತರಿಗೆಂದೇ 25,000 ಸರ್ಕಾರಿ ಉದ್ಯೋಗ ಮೀಸಲಿಡುವ ಯೋಜನೆ ರೂಪಿಸುವುದಾಗಿ ಸರ್ಕಾರ ತಿಳಿಸಿತ್ತು. ಆದರೆ 1990ರ ದಶಕದಲ್ಲಿ ಭುಗಿಲೆದ್ದ ಇಸ್ಲಾಮಿಕ್‌ ಉಗ್ರವಾದದಿಂದಾಗಿ ಲಕ್ಷಾಂತರ ಕಾಶ್ಮೀರಿ ಪಂಡಿತರು ಕಣಿವೆಯನ್ನು ತೊರೆದ ರೀತಿ ಈಗಲೂ ಆಗುತ್ತದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಹಾಗಾಗಿ ಮತ್ತೆ ಕಾಶ್ಮೀರಿ ಪಂಡಿತರ ವಲಸೆ ಆರಂಭವಾಗಿದೆ.
Published by:Annappa Achari
First published: