Explained: 'ಕೋಟಿ' ಬಂದಿದೆ ಅಂತ ಕಾಲ್ ಮಾಡುವವರು ನಿಮ್ಮ ನೆಂಟರಲ್ಲ! ಇವ್ರು Cyber 'ಗಂಟು' ಕಳ್ಳರು!

"ಕಂಗ್ರಾಜುಲೇಶನ್ಸ್ ಬ್ರದರ್, ಅಬ್ಬಬ್ಬ ಲಾಟ್ರಿ" ಅಂತ ಅದ್ಯಾರೋ ಕಾಲ್ ಮಾಡ್ತಾರೆ, "ನೀವು ಕೋಟಿ ಗೆದ್ದಿದ್ದೀರಿ" ಅಂತ ಇಮೇಲ್ ಬರುತ್ತೆ.. "ಗಿಫ್ಟ್‌ ಬಂದಿದೆ, ನಾವೇ ತಲುಪಿಸುತ್ತೇವೆ" ಅಂತಾರೆ. ಒಂದ್ ನಿಮಿಷ ಇರಿ... ಇವ್ರೆಲ್ಲ ನಿಮ್ಮ ನೆೆಂಟರಾ? ಸುಮ್ಮನೆ ಕೋಟಿ ಕೊಡೋದಕ್ಕೆ ಅವ್ರೇನು ಕುಬೇರನ ಅಣ್ಣ-ತಮ್ಮಂದಿರಾ? ಹಾಗಿದ್ರೆ ಯಾರವರು? ಕೋಟಿ ಕೊಡ್ತೀವಿ ಅಂತ ಕಾಲ್ ಮಾಡೋದು ಯಾಕೆ? ಇಲ್ಲಿದೆ ನೋಡಿ ಒಂದು ಇಂಟ್ರೆಸ್ಟಿಂಗ್ ಮಾಹಿತಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಂಗ್ರಾಜುಲೇಶನ್ಸ್… (Congratulations) ನಿಮ್ಗೆ 8 ಕೋಟಿ (Crore) ಹಣ ಬಂದಿದೆ! ಅಭಿನಂದನೆಗಳು ನಿಮಗೆ ಕೌನ್ ಬನೇಗಾ ಕರೋಡ್‌ ಪತಿಯಿಂದ (kaun banega crorepati) ಹಣ ಬಂದಿದೆ.. ನಿಮ್ಗೆ ಗಿಫ್ಟ್ ಹ್ಯಾಂಪರ್‌ (Gift Hamper)  ಬಂದಿದೆ…  ಹೀಗಂತ ನಿಮಗೆ ಎಷ್ಟೋ ಸಲ ಫೋನ್ ಕಾಲ್ಸ್ (Phone Calls), ಮೆಸೇಜ್ (Messages), ಇಮೇಲ್ (Email) ಬಂದಿರುತ್ತವೆ. ಅದೆಷ್ಟೋ ಜನ ಬ್ಯಾಂಕ್‌ನಿಂದ (Bank) ಕಾಲ್ ಮಾಡ್ತಾ ಇದ್ದೀವಿ ಅಂತ ನಿಮ್ಮ ಖಾತೆಯ ಡಿಟೇಲ್ಸ್‌ ಗಳನ್ನೆಲ್ಲಾ ಪಡೆದುಕೊಳ್ತಾರೆ. ಅಂದಹಾಗೆ ಇಂತಹ ಅನಾಮಧೇಯ ವ್ಯಕ್ತಿಗಳ ಫೋನ್ ಕಾಲ್ಸ್, ಮೆಸೇಜ್‌, ಇಮೇಲ್‌ಗೆಲ್ಲ ನೀವು ಉತ್ತರ ಕೊಡ್ತೀರಾ? ಕೋಟಿ ಕೋಟಿ ಹಣಕ್ಕಾಗಿ, ಬಿಗ್‌ ಗಿಫ್ಟ್‌ಗಾಗಿ ಅವರು ಹೇಳಿದಂತೆ ನೀವು ಮಾಡ್ತಾ ಇದ್ದೀರಾ? ಹಾಗಿದ್ರೆ ಒಂದ್ ನಿಮಿಷ ತಡೀರಿ… ಸ್ವಲ್ಪ ಪುರುಸೊತ್ತು ಮಾಡ್ಕೊಂಡು ಈ ಆರ್ಟಿಕಲ್‌ ಓದಿ. ಹೀಗೆ ಕೋಟಿ ಕೋಟಿ ರೂಪಾಯಿ ಹಣ, ಬಿಗ್ ಗಿಫ್ಟ್ ಅಂತೆಲ್ಲ ಕಾಲ್ ಮಾಡುವವರು ಯಾರೋ ನಿಮ್ಮ ಸಂಬಂಧಿಕರಲ್ಲ. ಕೋಟಿ ಕೋಟಿ ಹಣವನ್ನು ನಿಮ್ಗೆ ಕೊಡೋದಕ್ಕೆ ಅವರ್ಯಾರೂ ಕುಬೇರರ ಅಣ್ಣ ತಮ್ಮಂದಿರಲ್ಲ. ಬದಲಾಗಿ ಅವರು  ದೂರದಲ್ಲೆಲ್ಲೋ ಕುಳಿತು, ಅಂತರ್ಜಾಲದ ಮೂಲಕ ನಿಮ್ಮ ಮೇಲೆ ಕಣ್ಣಿಟ್ಟಿರುವ ಸೈಬರ್ (Cyber) ವಂಚಕರು! ಹುಷಾರ್, ಈ ಲೇಖನ ಓದಿ, ಸೈಬರ್‌ ಕ್ರೈಮ್‌ನಿಂದ ನಿಮ್ಮನ್ನು ನೀವು ಬಚಾವು ಮಾಡಿಕೊಳ್ಳಿ…

ಕರ್ನಾಟಕ, ಮಹಾರಾಷ್ಟ್ರದಲ್ಲಿ ಹೆಚ್ಚು ಸೈಬರ್ ಕ್ರೈಮ್

2021ರಲ್ಲಿ ಸುಮಾರು 3.5 ಲಕ್ಷಕ್ಕೂ ಅದಿಕ ಸೈಬರ್ ಕ್ರೈಮ್ ಕೇಸ್‌ಗಳು ನಡೆದಿವೆ ಎನ್ನಲಾಗಿದೆ. ಈ ಸಂಬಂಧ 5771 ಎಫ್‌ಐಆರ್‌ ದಾಖಲಾಗಿವೆಯಂತೆ. ಅದರಲ್ಲೂ ಇಂತಹ ದೂರುಗಳು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಗಣನೀಯ ಪ್ರಮಾಣದಲ್ಲಿ ದಾಖಲಾಗಿವೆ  ಎನ್ನಲಾಗಿದೆ.

ಸೈಬರ್ ಕ್ರೈಮ್ ಎಂದರೇನು?

ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಹೇಳಬೇಕು ಅಂದರೆ ಸೈಬರ್ ಕ್ರೈಮ್ ಅಂದರೆ ಅಂತರ್ಜಾಲದ ಮೂಲಕ ನಡೆಯುವ ಕಾನೂನು ಬಾಹಿರ ಕೃತ್ಯ. ಸೈಬರ್ ಅಪರಾಧಗಳು ಸಾಂಪ್ರದಾಯಿಕ ಸ್ವರೂಪದ ಕಳ್ಳತನ, ವಂಚನೆ, ಖೋಟಾ, ಮಾನಹಾನಿ ಮತ್ತು ಕಿಡಿಗೇಡಿತನದಂತಹ ಕ್ರಿಮಿನಲ್ ಚಟುವಟಿಕೆಗಳನ್ನು ಒಳಗೊಂಡಿರಬಹುದುಇವೆಲ್ಲವೂ ಭಾರತೀಯ ದಂಡ ಸಂಹಿತೆಗೆ ಒಳಪಟ್ಟಿರುತ್ತವೆ.

ಹ್ಯಾಕಿಂಗ್, ವೈರಸ್ ಅಥವಾ ವರ್ಮ್ ದಾಳಿ, ಡಾಸ್ ದಾಳಿ ಇತ್ಯಾದಿ, ಸೈಬರ್ ಭಯೋತ್ಪಾದನೆ, ಐಪಿಆರ್ ಉಲ್ಲಂಘನೆ, ಕ್ರೆಡಿಟ್ ಕಾರ್ಡ್ ವಂಚನೆಗಳು, ಇಎಫ್‌ಟಿ ವಂಚನೆಗಳು, ಅಶ್ಲೀಲತೆ ಇತ್ಯಾದಿ ಎಲ್ಲವೂ ಸೈಬರ್ ಅಪರಾಧದ ಬೇರೆ ಬೇರೆ ಸ್ವರೂಪವೇ ಆಗಿದೆ.

ಸ್ಕ್ಯಾಮ್  ಎಂದರೇನು?

ಸ್ಕ್ಯಾಮ್ ವಾಣಿಜ್ಯ ಉದ್ದೇಶಗಳಿಗಾಗಿ ಸ್ಕ್ಯಾಮ್ ಅಥವಾ ಅಪೇಕ್ಷಿಸದ ಬೃಹತ್ ಇ-ಮೇಲ್ ಕಳುಹಿಸುವುದು ಕಾನೂನುಬಾಹಿರವಾಗಿದೆ. ಇ-ಮೇಲ್‌ಗೆ ಅನ್ವಯಿಸಿದಂತೆ ನಿರ್ದಿಷ್ಟ ರೂಪದಲ್ಲಿ ಸ್ಕ್ಮಾಮ್ ಮೂಲಕ ಖದೀಮರು ನಿಮ್ಮ ಖಾತೆಗೆ ಕನ್ನ ಹಾಕಬಹುದು.

ಆನ್‌ಲೈನ್ ವಂಚನೆ

ಕಂಪ್ಯೂಟರ್ ಇನ್ಪುಟ್ ಅನ್ನು ಅನಧಿಕೃತ ರೀತಿಯಲ್ಲಿ ಬದಲಾಯಿಸುವುದು. ಇದಕ್ಕೆ ಕಡಿಮೆ ತಾಂತ್ರಿಕ ಪರಿಣತಿಯ ಅಗತ್ಯವಿರುತ್ತದೆ ಮತ್ತು ಉದ್ಯೋಗಿಗಳು ಡೇಟಾವನ್ನು ಪ್ರವೇಶಿಸುವ ಮೊದಲು ಅಥವಾ ಸುಳ್ಳು ಡೇಟಾವನ್ನು ನಮೂದಿಸುವ ಮೂಲಕ ಅಥವಾ ಅನಧಿಕೃತ ಸೂಚನೆಗಳನ್ನು ನಮೂದಿಸುವ ಮೂಲಕ ಅಥವಾ ಅನಧಿಕೃತ ಪ್ರಕ್ರಿಯೆಗಳನ್ನು ಬಳಸುವ ಮೂಲಕ ಇದನ್ನು ಮಾಡುತ್ತಾರೆ.

 ಇದನ್ನೂ ಓದಿ: Explained: ಗಂಗೂಬಾಯಿ ಕಾಠಿಯಾವಾಡಿ ಯಾರು? ಬನ್ಸಾಲಿ ಸಿನಿಮಾದ ಸುತ್ತ ವಿವಾದವೇಕೆ? ಇಲ್ಲಿದೆ ಡಿಟೇಲ್ಸ್

 ಸಿಮ್ ಸ್ವಾಪ್ ಮೂಲಕವೂ ವಂಚನೆ

ಸಿಮ್ ಸ್ವಾಪ್ ಅಡಿಯಲ್ಲಿ, ಮೋಸಗಾರರು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ವಿರುದ್ಧ ಮೊಬೈಲ್ ಸೇವಾ ಪೂರೈಕೆದಾರರ ಮೂಲಕ ಹೊಸ ಸಿಮ್ ಕಾರ್ಡ್  ಪಡೆಯುತ್ತಾರೆ. .ಈ ಹೊಸ ಸಿಮ್ ಕಾರ್ಡ್ ಸಹಾಯದಿಂದ ಅವರು ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಹಣಕಾಸಿನ ವಹಿವಾಟು ನಡೆಸಲು ಅಗತ್ಯವಾದ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಗಳನ್ನು ಪಡೆದು, ನಿಮ್ಮನ್ನೇ ವಂಚಿಸುತ್ತಾರೆ.

ವಿಶಿಂಗ್ ಎನ್ನುವುದೂ ವಂಚನೆ ಜಾಲ

ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗ್ರಾಹಕ ಐಡಿ, ನೆಟ್ ಬ್ಯಾಂಕಿಂಗ್ ಪಾಸ್ವರ್ಡ್, ಎಟಿಎಂ ಪಿನ್, ಒಟಿಪಿ, ಕಾರ್ಡ್ ಮುಕ್ತಾಯ ದಿನಾಂಕ, ಸಿವಿವಿ ಇತ್ಯಾದಿಗಳನ್ನು ಫೋನ್ ಕರೆಯ ಮೂಲಕ ಪಡೆಯುವುದನ್ನು ವಿಶಿಂಗ್‌ ಎಂದು ಕರೆಯುತ್ತಾರೆ.

ಡೌನ್‌ಲೋಡ್ ಆಮಿಷದ ಮೂಲಕ ಕನ್ನ

ಸ್ಮಿಶಿಂಗ್ ಎನ್ನುವುದು ಒಂದು ರೀತಿಯ ಮೋಸವಾಗಿದ್ದು, ಮೊಬೈಲ್ ಫೋನ್ ಪಠ್ಯ ಸಂದೇಶಗಳನ್ನು  ಮೋಸದ ಫೋನ್ ಸಂಖ್ಯೆಗೆ ಬದಲಾಯಿಸಲಾಗುತ್ತದೆ.

ಮರಳಿ  ಕರೆ ಮಾಡಲು, ಮೋಸದ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಅಥವಾ ಫೋನ್ ಅಥವಾ ವೆಬ್ ಮೂಲಕ ದುರುದ್ದೇಶಪೂರಿತ ವಿಷಯವನ್ನು ಡೌನ್‌ಲೋಡ್ ಮಾಡಲು ಆಮೀಷ ಪಡಿಸುತ್ತಾರೆ. ಈ ಮೂಲಕ ನಿಮ್ಮನ್ನು ವಂಚಿಸುತ್ತಾರೆ.

ಡೇಟಾ ಸೋರಿಕೆ ಹೇಗೆ ಆಗುತ್ತದೆ ಗೊತ್ತೇ?

ಡೇಟಾ ಸೋರಿಕೆಯಾಗಲು ಹಲವು ಮಾರ್ಗಗಳಿವೆ. ಒಬ್ಬ ಉದ್ಯೋಗಿ ತನ್ನ ಸ್ನೇಹಿತರು ಮತ್ತು ಇತರರಿಗೆ ದತ್ತಾಂಶವನ್ನು ಸೋರಿಕೆ ಮಾಡುವುದು ಅತ್ಯಂತ ಹಳೆ ಕಥೆ. ಆದ್ರೆ  ಕಂಪನಿಯ ಡೇಟಾಬೇಸ್ ಅನ್ನು ಹ್ಯಾಕ್ ಮಾಡುವುದು ಮತ್ತು ಅದನ್ನು ಡಾರ್ಕ್‌ವೆಬ್‌ನಲ್ಲಿ ಪೋಸ್ಟ್ ಮಾಡುವುದು ಅಥವಾ ಡೇಟಾವನ್ನು ಬೇರೆಯವರಿಗೆ ಮಾರಲಾಗುತ್ತದೆ. ಹೆಚ್ಚಿನ ಕಂಪನಿಗಳು ತಮ್ಮ ಡೇಟಾವನ್ನು ನಿರ್ವಹಿಸಲು ಮೂರನೇ ವ್ಯಕ್ತಿಗಳನ್ನು ಹೊಂದಿವೆ, ಅದು ದುರುಪಯೋಗವಾಗಬಹುದು.

ಅಪ್ಲಿಕೇಶನ್ ಮೂಲಕವೂ ಖಾತೆಗೆ ಕೈ ಹಾಕ್ತಾರೆ ಖದೀಮರು

ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಉತ್ಪನ್ನವನ್ನು ಬುಕ್ ಮಾಡಿದರೆ, ಉತ್ಪನ್ನದ ವಿತರಣೆಯಲ್ಲಿ ಯಾವುದೇ ಬದಲಾವಣೆಗಳಿದ್ದರೆ ಗ್ರಾಹಕರನ್ನು ಎಚ್ಚರಿಸಲು ಕಂಪನಿಯು ಅಧಿಸೂಚನೆ ಅಥವಾ ಇಮೇಲ್ ಅನ್ನು ಕಳುಹಿಸುತ್ತದೆ. ಆದರೆ ಅದನ್ನೇ ಗುರಿಯಾಗಿಸಿ ಖದೀಮರೂ ಸಹ ನಿಮ್ಮನ್ನು ವಂಚಿಸಬಹುದು.

ಮೊಬೈಲ್, ಅಂತರ್ಜಾಲ ಬಳಸುವವರೇ ಟಾರ್ಗೆಟ್

ಹೌದು, ಇದು ಅಂತರ್ಜಾಲದ ಮೂಲಕ ನಡೆಯೋ ಅಪರಾಧವಾಗಿದ್ದು, ಇದರಲ್ಲಿ ಅಂತರ್ಜಾಲ ಬಳಸುವವರು, ಮೊಬೈಲ್‌ ಬಳಸುವವರೇ ಇವರ ಟಾರ್ಗೆಟ್ ಆಗಿರುತ್ತಾರೆ. ಪದೇಪದೇ ಅಸುರಕ್ಷಿತ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು,  ಅಸುರಕ್ಷಿತ ವೆಬ್ಸೈಟ್ ಗಳನ್ನು ನೋಡುವ ಪರಿಣಾಮವಾಗಿ, ಸೈಬರ್ ಅಪಾಯವು ಹೆಚ್ಚಿದೆ. ಇದರಿಂದಾಗಿ ವೈಯಕ್ತಿಕ ಮಾಹಿತಿ ಮತ್ತು ಉದ್ಯಮದ  ಡೇಟಾದ ಮೇಲೆ ಸೈಬರ್ ದಾಳಿ ಆಗುವ ಸಾಧ್ಯತೆಗಳು ಹೆಚ್ಚಾಗಿದೆ.

ಮಕ್ಕಳನ್ನೂ ಬಿಡುವುದಿಲ್ಲ ಈ ಸೈಬರ್ ವಂಚಕರು

ಸೈಬರ್ ವಂಚಕರು ಮಕ್ಕಳು, ದೊಡ್ಡವರು, ಬಡವರು, ಶ್ರೀಮಂತರು ಎಂಬುದನ್ನು  ಲೆಕ್ಕಿಸದೆ ಸೈಬರ್ ದಾಳಿ ಮಾಡಿ,  ಕಂಪ್ಯೂಟರ್ ಹಾಗೂ ತಂತ್ರಜ್ಞಾನ ಉಪಯೋಗಿಸುವವರನ್ನು  ಬಲಿಪಶುಗಳನ್ನಾಗಿ ಮಾಡುತ್ತಾರೆ. ಸಂಸ್ಥೆಯಲ್ಲಿ ಕೆಲಸ ಮಾಡುವ  ನೌಕರರ ಕಂಪ್ಯೂಟರ್ ಡೇಟಾದ  ಮೇಲೆ ಅಥವಾ  ಇಮೇಲ್ ಗೆ ದಾಳಿ ಮಾಡುತ್ತಾರೆ ಅಲ್ಲದೆ ಮನೆಯಲ್ಲಿ ಆಟವಾಡುವ ಮಗುವಿನ ಕಂಪ್ಯೂಟರ್ ಡೇಟಾದ  ಮೇಲೆಯೂ ಆಕ್ರಮಣ ಮಾಡುತ್ತಾರೆ.

ನಿಮ್ಮನ್ನು ನೀವು ಕಾಪಾಡಿಕೊಳ್ಳುವುದು ಹೇಗೆ?

ಫ್ರೀ ಆಗಿ ಸಿಗುತ್ತೆ ಅಂತ ಕಂಡ ಕಂಡ ಅಪ್ಲಿಕೇಶನ್‌ಗಳನ್ನೆಲ್ಲ ಡೌನ್‌ಲೋಡ್ ಮಾಡಬಾರದು. ಇಂಟರ್‌ನೆಟ್‌ನಲ್ಲಿ ಸರ್ಚ್‌ ಮಾಡುವಾಗ ಸಿಕ್ಕ ಸಿಕ್ಕ ಲಿಂಕ್‌ಗಳನ್ನೆಲ್ಲ ಓಪನ್ ಮಾಡದೇ, ಆದಷ್ಟು ಅವುಗಳಿಂದ ದೂರ ಇರಬೇಕು.

ಅಶ್ಲೀಲ ಸೈಟ್‌ ನೋಡುವಾಗ ಹುಷಾರ್

ಅದರಲ್ಲೂ ಅಶ್ಲೀಲ ಸೈಟ್‌ಗಳನ್ನು ನೋಡುವವರನ್ನೇ ಟಾರ್ಗೆಟ್ ಮಾಡುವ ವಂಚಕರು, ಅತಿ ರಂಚನೆಯ ಹೆಸರಲ್ಲಿ ಕಳ್ಳ ಲಿಂಕ್ ಕಳಿಸಿ, ನಿಮ್ಮನ್ನು ಯಾಮಾರಿಸಬಹುದು ಹುಷಾರ್.

ಅನಾಮಧೇಯ ವ್ಯಕ್ತಿಗಳಿಗೆ ಸ್ಪಂದಿಸಬೇಡಿ

ಲಾಟರಿ ಬಂದಿದೆ, ಗಿಫ್ಟ್ ಬಂದಿದೆ ಅಂತ ಇಮೇಲ್ ಮಾಡುತ್ತಾರೆ. ಮೆಸೇಜ್ ಕಳಿಸುತ್ತಾರೆ.  ಅಂಥದ್ದಕ್ಕೆಲ್ಲ ನೀವು ಯಾವತ್ತೂ ಸ್ಪಂದಿಸಬಾರದು. ನಿಮ್ಮ ಒಟಿಪಿ ಕೊಡಿ, ಬ್ಯಾಂಕ್ ಅಕೌಂಟ್‌ ಡಿಟೇಲ್ಸ್ ಕೊಡಿ ಅಂತ ಬ್ಯಾಂಕ್ ಸಿಬ್ಬಂದಿ  ಹೆಸರಲ್ಲಿ ಕಾಲ್ ಮಾಡುತ್ತಾರೆ. ಹೀಗೆ ನಿಮಗೆ ಕಾಲ್ ಬಂದ ತಕ್ಷಣ ಅಧಿಕೃತ ಬ್ಯಾಂಕ್‌ಗೆ ಕಾಲ್ ಮಾಡಿ ವಿಚಾರಿಸುವುದು ಒಳಿತು.

ನಿಮ್ಮ ಮೊಬೈಲ್, ಕಂಪ್ಯೂಟರ್‌ನಲ್ಲಿ ಇರಲಿ ಈ ವ್ಯವಸ್ಥೆ

ಕೆಲವು ಖದೀಮರು ವೈರಸ್‌ಗಳನ್ನು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ಗೆ ಬಿಟ್ಟು, ನಿಮ್ಮ ಡಾಟಾ ಕದಿಯಬಹುದು. ಹೀಗಾಗಿ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಆ್ಯಂಟಿ ವೈರಸ್ ಹಾಗೂ  ಕಂಪ್ಯೂಟರ್ ಸೇಫ್ಟಿ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಆ್ಯಂಟಿ ವೈರಸ್ ಹೆಸರಲ್ಲಿ ನಕಲಿ ಆ್ಯಪ್‌ಗಳೂ ಸಹ ಇದ್ದು, ಅವುಗಳ ಬಗ್ಗೆಯೂ ಎಚ್ಚರಿಕೆಯಿಂದ ಇರುವುದು ಒಳಿತು.

ಇದನ್ನೂ ಓದಿ: Explained: ಏನಿದು NSE ಹಗರಣ? ಯಾರಿವರು ಚಿತ್ರಾ ರಾಮಕೃಷ್ಣ? ಅವರ ಹಿಂದಿದ್ದ ನಿಗೂಢ ಬಾಬಾ ಯಾರು?

ಸೈಬರ್‌ ಕ್ರೈಮ್‌ಗೆ ದೂರು ಕೊಡಿ

ಭಾರತ ಸರಕಾರವು,ಸೈಬರ್ ಅಪರಾಧಗಳ ದೂರುಗಳನ್ನು ಆನ್‌ಲೈನ್‌ನಲ್ಲಿ  ವರದಿ ಮಾಡಲು ಸಂತ್ರಸ್ತರಿಗೆ / ದೂರುದಾರರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ  ನ್ಯಾಷನಲ್ ಸೈಬರ್ ಕ್ರೈಂ ಪೋರ್ಟಲ್ ಸೇವೆಯನ್ನು ಪ್ರಾರಂಭಿಸಿದೆ.

ಸೈಬರ್‌ ಕ್ರೈಂ ಬಗ್ಗೆ ಆನ್‌ಲೈನ್ ನಲ್ಲಿ ದೂರನ್ನು ದಾಖಲಿಸಲು  ಸೈಬರ್ ಕ್ರೈಂ ರಿಪೋರ್ಟ್ ಮಾಡುವ ಪೋರ್ಟಲ್‌ www.cybercrime.gov.in/ ಗೆ ಭೇಟಿ ನೀಡಿ. ಈ ಪೋರ್ಟಲ್ ನಲ್ಲಿ  ಮಹಿಳೆಯರ ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧಗಳ ದೂರುಗಳ ಬಗ್ಗೆ  ವಿಶೇಷ ಗಮನ ನೀಡಲಾಗುತ್ತದೆ.

ಈ ಪೋರ್ಟಲ್‌ನಲ್ಲಿ ವರದಿಯಾದ ದೂರುಗಳನ್ನು ದೂರುಗಳಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಕಾನೂನು ಪ್ರಕಾರ ನಿಯೋಜನೆ ಗಳಿಸಿದ  ಸೈಬರ್ ಕ್ರೈಮ್ ಇನ್ವೆಸ್ಟಿಗೇಟಿವ್  ಸಂಸ್ಥೆಗಳು ಅಥವಾ ಪೊಲೀಸರು  ಸೂಕ್ತ ಕ್ರಮ ಕೈಗೊಳ್ಳುತ್ತಾರೆ.

ದೂರು ನೀಡುವ ಮುನ್ನ ನೆನಪಿಡಿ

ಒಂದು ವೇಳೆ ದೂರುದಾರರು  ಸುಳ್ಳು ಮಾಹಿತಿಯನ್ನು ವರದಿ ಮಾಡಿದ್ದಲ್ಲಿ, ದೂರುದಾರರ ಮೇಲೆ ಕಾನೂನು ಪ್ರಕಾರ  ಕ್ರಮಕ್ಕೆ ಕಾರಣವಾಗಬಹುದು ಅಲ್ಲದೆ ದಂಡ ಹಾಗೂ ಶಿಕ್ಷೆಯು ಆಗಬಹುದು ಎಂಬುದು ನಿಮ್ಮ ಗಮನದಲ್ಲಿ ಇರಲಿ.
Published by:Annappa Achari
First published: