2001 ರ ಬಳಿಕ ಇದೇ ಮೊದಲ ಬಾರಿಗೆ ಯುಎಸ್ ಮಿಲಿಟರಿ ಪಡೆಯು ತನ್ನ ಪ್ರಜೆಗಳು ಹಾಗೂ ಬೇರೆ ಕಡೆಗೆ ಸ್ಥಳಾಂತರ ಮಾಡಬಯಸುವ ಅಫ್ಘನ್ ನಿರಾಶ್ರಿತರನ್ನು ಏರ್‌ಲಿಫ್ಟ್ ಮಾಡಿದ್ದು ತಾಲಿಬಾನಿಗಳು ವಿಧಿಸಿರುವ ಅಂತಿಮ ದಿನಾಂಕದ ಮೊದಲು ಅಪ್ಘಾನಿಸ್ತಾನದಿಂದ ತೆರಳಲಿವೆ. ಮಾಹಿತಿಯ ಪ್ರಕಾರ ಎರಡು ವಾರಗಳಿಂದ ಸರಿಸುಮಾರು 114,000 ಜನರನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ಏರ್‌ಲಿಫ್ಟ್ ಮಾಡಲಾಗಿದೆ ಎಂದು ಯುಎಸ್ ಮೂಲಗಳು ತಿಳಿಸಿವೆ. ಆದರೆ ಯುಎಸ್ ಸೇನೆ ಅಪ್ಘನ್ ನೆಲದಿಂದ ಹಠತ್ತಾಗಿ ಕಾಲ್ಕಿತ್ತಿರುವುದು ವಿಶ್ವದೆಲ್ಲೆಡೆ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದ್ದು ಬೈಡನ್ ಹಾಗೂ ಆಡಳಿತ ವರ್ಗಕ್ಕೆ ಇದು ಹೆಚ್ಚು ಪ್ರಶ್ನೆಗಳಿಗೆ ಅವಕಾಶ ನೀಡಲಿದೆ.
ಪ್ರಸ್ತುತ ಅಪ್ಘನ್‌ನಲ್ಲಿರುವ ಅಮೆರಿಕಾ ಹಾಗೂ ಅಪ್ಘನ್ ಪ್ರಜೆಗಳ ಪರಿಸ್ಥಿತಿ ಏನು?
ಅಮೆರಿಕಾ ಆಗಸ್ಟ್ 14 ರಿಂದಲೇ ಅಪ್ಘನ್ ಪ್ರಜೆಗಳ ಹಾಗೂ ಅಪ್ಘನ್ ನೆಲದಿಂದ ಸ್ಥಳಾಂತರ ಹೊಂದಬೇಕೆಂದು ಬಯಸುವ ಜನರ ಏರ್‌ಲಿಫ್ಟ್‌ಗಳನ್ನು ನಡೆಸಿದ್ದು ಇದರಲ್ಲೂ ಕಡಿಮೆ ಸಂಖ್ಯೆಯ ಅಮೆರಿಕನ್ನರು ಅಫ್ಘಾನಿಸ್ತಾನದಲ್ಲಿ ಉಳಿಯಲು ಇಚ್ಛಿಸಿದ್ದಾರೆ.
ಬೈಡೆನ್ ಸರಕಾರವು ತನ್ನ ಸೇನೆಯನ್ನು ಸಂಪೂರ್ಣವಾಗಿ ಸ್ಥಳಾಂತರಿಸಿದ್ದರೂ ತಾಲಿಬಾನಿಗಳು ಅಪ್ಘನ್ ತೊರೆಯಬೇಕೆಂದು ನಿರ್ಧರಿಸುವವರಿಗೆ ಅನುಮತಿಯನ್ನು ನೀಡುತ್ತದೆ ಎಂದು ನಿರೀಕ್ಷಿಸಿದೆ. ಆದರೆ ಇಲ್ಲಿರುವ ಒಂದು ಕಳವಳಕಾರಿಯಾದ ಸಂಗತಿ ಎಂದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಯಾವುದೇ ವಿಮಾನಗಳ ಲಭ್ಯತೆ ಇಲ್ಲದಿದ್ದರೆ ಜನರು ಹೇಗೆ ಪ್ರಯಾಣ ಮಾಡಬಹುದು ಎಂಬ ಅಂಶವೂ ಇಲ್ಲಿ ಚಿಂತನೀಯವಾಗಿದೆ.
ಅಮೆರಿಕನ್ನರು ಮಾತ್ರವಲ್ಲದೆ ಪತ್ರಕರ್ತರು,ಮಹಿಳಾ ವಕೀಲರು ಹೀಗೆ ಅಪಾಯದಲ್ಲಿರುವ ಕೆಲವೊಂದು ವರ್ಗದ ಜನರು ಅಪ್ಘಾನಿಸ್ತಾನದಲ್ಲಿಯೇ ನೆಲೆಸಲು ತೀರ್ಮಾನಿಸಿದ್ದಾರೆ. ತಾಲಿಬಾನಿಗಳು ಅವರನ್ನು ಹೇಗೆ ನಡೆಸಿಕೊಳ್ಳಬಹುದೆಂಬ ಯಾವುದೇ ಮಾಹಿತಿ ಇಲ್ಲ ಆದರೆ ಅವರುಗಳಿಗೆ ಅಪಾಯ ಇದ್ದೇ ಇರುತ್ತದೆ ಎಂಬುದು ಸುದ್ದಿಮೂಲಗಳು ತಿಳಿಸಿದ ಮಾಹಿತಿಯಾಗಿದೆ.
ಯುಎಸ್ ಸೇನೆಯು ಅಪ್ಘಾನಿಸ್ತಾನವನ್ನು ತೊರೆದ ನಂತರ ಕಾಬೂಲ್ ವಿಮಾನ ನಿಲ್ದಾಣದ ಸ್ಥಿತಿ ಏನು?
ಕಳೆದ ಎರಡು ವಾರಗಳಿಂದ ಅಮೆರಿಕಾ ಸೇನೆಯು 6000 ಸೈನಿಕರೊಂದಿಗೆ ಕಾಬೂಲ್‌ನ ಹಮೀದ್ ಕರ್ಜೈ ವಿಮಾನ ನಿಲ್ದಾಣಕ್ಕೆ ಭದ್ರತೆಯೊನ್ನದಗಿಸುತ್ತಿತ್ತು. ಅದೇ ರೀತಿ ವಿಮಾನ ನಿಲ್ದಾಣದಲ್ಲಿದ್ದ ಸಾವಿರಾರು ಜನರ ರಕ್ಷಣೆಯನ್ನು ಮಾಡುತ್ತಿತ್ತು.
ಪ್ರಸ್ತುತ ತಿಳಿದುಬಂದಿರುವ ಮಾಹಿತಿಯ ಪ್ರಕಾರ ತಾಲಿಬಾನ್ ಅಧಿಕಾರಿಗಳು ಕತಾರ್ ಹಾಗೂ ಟರ್ಕಿ ಸರಕಾರದೊಂದಿಗೆ ಮಾತುಕತೆಗಳನ್ನು ನಡೆಸುತ್ತಿದ್ದು ವಿಮಾನ ಕಾರ್ಯಾಚರಣೆಗಳನ್ನು ಮುಂದುವರಿಸಲು ನೆರವು ಕೋರಿದೆ ಎಂಬುದು ತಿಳಿದುಬಂದಿದೆ. ಅಪ್ಘಾನಿಸ್ತಾನವನ್ನು ತೊರೆಯಬೇಕೆಂಬ ಇಚ್ಛೆ ಹೊಂದಿರುವವರಿಗೆ ಈ ವಿಮಾನ ನಿಲ್ದಾಣ ಏಕೈಕ ಮಾರ್ಗವಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಇನ್ನು ಟರ್ಕಿಯ ವಿದೇಶಾಂಗ ಸಚಿವರಾದ ಮೆವ್ಲಟ್ ಕ್ಯಾವೊಸೊಗ್ಲು ವಿಮಾನ ನಿಲ್ದಾಣದಲ್ಲಿ ಸಂಚಾರ ವ್ಯವಸ್ಥೆಯನ್ನು ಪುನರಾರಂಭಿಸುವ ಮೊದಲು ಕೆಲವೊಂದು ದುರಸ್ತಿ ಕೆಲಸಗಳನ್ನು ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ. ನ್ಯಾಟೋ ಕಾರ್ಯಾಚರಣೆಯ ಭಾಗವಾಗಿದ್ದ ಟರ್ಕಿ ಕಳೆದ ಆರು ವರ್ಷಗಳಿಂದ ವಿಮಾನ ನಿಲ್ದಾಣದ ಭದ್ರತೆಯ ಹೊಣೆಹೊತ್ತಿದೆ.
ಅಮೆರಿಕಾ-ತಾಲಿಬಾನ್ ಸಂಬಂಧ ಹೇಗಿದೆ?
ಅಮೆರಿಕಾ ಸರಕಾರವು ತಾಲಿಬಾನ್‌ನ ಚಟುವಟಿಕೆಗಳನ್ನು ಆಧರಿಸಿ ನಂತರ ಭವಿಷ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಜಾರಿಗೆ ತರಲಿದೆ ಎಂದು ತಿಳಿಸಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಅಪ್ಘಾನಿಸ್ತಾನದ ಹೊಣೆ ಹೊತ್ತಿದ್ದ ಬೈಡನ್ ಸರಕಾರಕ್ಕೆ ದೇಶದಲ್ಲಿ ಮಾನವೀಯತೆ ಮೌಲ್ಯಕ್ಕೆ ಧಕ್ಕೆ ಉಂಟಾಗದಂತೆ ಹಾಗೂ ಆರ್ಥಿಕ ತೊಂದರೆ ಸಂಭವಿಸದಂತೆ ನೋಡಿಕೊಳ್ಳಬೇಕಾಗುತ್ತದೆ.
ಅಮೆರಿಕಾ ಸರಕಾರವು ಪ್ರಸ್ತುತ ಅಪ್ಘಾನಿಸ್ತಾನದ ಸ್ಥಿತಿಗತಿಯನ್ನು ವಿಶ್ಲೇಷಣೆ ನಡೆಸಿದ್ದು ಇಲ್ಲಿರುವ 18 ಮಿಲಿಯನ್‌ಗಿಂತಲೂ ಹೆಚ್ಚಿನ ಜನರಿಗೆ ಸಹಾಯದ ಅಗತ್ಯವಿದ್ದು ಬರಗಾಲದ ಸತತ ಪರಿಣಾಮದಿಂದ ಅಪ್ಘಾನಿಸ್ತಾನದ ಐದರ ಒಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ.
ಬ್ರಿಟನ್ ಸೇರಿದಂತೆ ಕೆಲವೊಂದು ರಾಷ್ಟ್ರಗಳು ನಿರ್ಧಾರಕ್ಕೆ ಬಂದಿದ್ದು ತಾಲಿಬಾನ್ ಅನ್ನು ಅಪ್ಘಾನಿಸ್ತಾನದ ಸರಕಾರವೆಂದು ದ್ವಿಪಕ್ಷೀಯವಾಗಿ ಗುರುತಿಸಬಾರದು ಎಂದು ತಿಳಿಸಿದೆ.
ಇಸ್ಲಾಮಿಕ್ ಸ್ಟೇಟ್‌ನಿಂದ ಯಾವ ರೀತಿಯ ಬೆದರಿಕೆ ಇದೆ?
ಇಸ್ಲಾಮಿಕ್ ಸ್ಟೇಟ್‌ನ ಬೆದರಿಕೆಯಿಂದ ಅಮೆರಿಕಾ ಹಾಗೂ ತಾಲಿಬಾನಿಗಳು ಒಪ್ಪಂದಕ್ಕೆ ಬಂದಿರಬಹುದೆಂಬ ಮಾಹಿತಿ ಕೂಡ ಇದ್ದು ಇಸ್ಲಾಮಿಕ್ ಸ್ಟೇಟ್ ತಾಲಿಬಾನಿಗಳಿಗೂ ನಿರ್ಬಂಧ ಹೇರಿದೆ. ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಇಷ್ಟಪಡದೇ ಇರುವ ಇಸ್ಲಾಮಿಕ್ ಸ್ಟೇಟ್ ತನ್ನದೇ ಅಧಿಪತ್ಯವನ್ನು ಅಪ್ಘನ್ ನೆಲದಲ್ಲಿ ಸ್ಥಾಪಿಸಲು ಹೊರಟಿದೆ.
ಇಸ್ಲಾಮಿಕ್ ಸ್ಟೇಟ್ ದಾಳಿ ನಡೆಸಿದಲ್ಲಿ ಅಮೆರಿಕಾ ಹಾಗೂ ತಾಲಿಬಾನಿಗಳಿಗೆ ಸಂಕಷ್ಟ ಎದುರಾಗಲಿದೆ. ಇಸ್ಲಾಮಿಕ್ ಸ್ಟೇಟ್ ಖೋರಾಸನ್ (ISIS-K) ತನ್ನ ಪಕ್ಷಕ್ಕೆ ಐತಿಹಾಸಿಕ ಹೆಸರನ್ನಿಟ್ಟಿದೆ. ಈ ಪಕ್ಷವು ಕ್ರೌರ್ಯಕ್ಕೆ ಹೆಸರುವಾಸಿಯಾಗಿದ್ದು ಅಪ್ಘಾನಿಸ್ತಾನದಲ್ಲಿ ತನ್ನ ದಬ್ಬಾಳಿಯನ್ನು ನಡೆಸುವುದರ ಮೂಲಕ ಖ್ಯಾತಿಯನ್ನು ಸ್ಥಾಪಿಸಿತು. ಖೋರಾಸನ್ ತಾಲಿಬಾನಿಗಳಿಂದಲೂ ಹೆಚ್ಚು ಕ್ರೂರರು ಎಂಬ ಮಾತೂ ಇದೆ.
ಕಾಬೂಲ್‌ನಲ್ಲಿ ಆಗಸ್ಟ್ 26 ರಂದು ನಡೆದ ಆತ್ಮಾಹುತಿ ದಾಳಿಯ ಹಿಂದೆ ಈ ಗುಂಪಿನ ಕೈವಾಡವಿದೆ ಎಂಬುದು ತಿಳಿದುಬಂದಿದೆ. ಈ ದಾಳಿಯ ಪ್ರತೀಕಾರವನ್ನು ತೀರಿಸಲು ಹೊರಟಿರುವ ಅಮೆರಿಕಾ ಸರಕಾರವು ಎರಡು ಡ್ರೋನ್ ದಾಳಿಗಳನ್ನು ಗುಂಪಿನ ವಿರುದ್ಧ ನಡೆಸಿದೆ ಎಂಬ ಮಾಹಿತಿಯೂ ಇದೆ. ಗುಂಪು ನಡೆಸಿರುವ ಕೃತ್ಯಕ್ಕೆ ಪ್ರತೀಕಾರ ತೀರಿಸುವುದಕ್ಕಾಗಿ ಅಮೆರಿಕಾ ಡ್ರೋನ್ ದಾಳಿ ನಡೆಸಿದೆ. ISIS-K ತಾಲಿಬಾನ್‌ನ ಶತ್ರುವಾಗಿದೆ. ಅಪ್ಘಾನಿಸ್ತಾನದ ಆಗರ್ಭ ಸಂಪತ್ತಿನ ಮೇಲೆ ಕಣ್ಣಿಟ್ಟಿರುವ ISIS-K ತಾಲಿಬಾನಿಗಳನ್ನು ಅಲ್ಲಿಂದ ಹೊಡೆದೋಡಿಸಿ ತನ್ನ ಅಧಿಪತ್ಯವನ್ನು ನೆಲೆಗಾಣಿಸುವ ಕಾತರದಲ್ಲಿದೆ.
ಪ್ರಸ್ತುತ ಅಪ್ಘನ್ ನೆಲದಲ್ಲಿ ತಾಲಿಬಾನಿಗಳ ಆಡಳಿತ ನಡೆಯುತ್ತಿದೆ. ಮಹಿಳೆಯರ ಮೇಲೆ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು ತಾಲಿಬಾನಿಗಳಿಗೆ ಅಂಕುಶ ಹಾಕುವವರಿಲ್ಲದೆ ಅವರ ಅಧಿಕಾರ ಕ್ರೌರ್ಯ ನಡೆಯುತ್ತಿದೆ. ಇದೀಗ ISIS-K ಕೂಡ ಅಪ್ಘಾನಿಸ್ತಾನವನ್ನು ತನ್ನ ಅಧಿಪತ್ಯಕ್ಕೆ ಒಳಪಡಿಸಬೇಕೆಂಬ ಆಶಯ ಹೊಂದಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ISIS-K ಆತ್ಮಾಹುತಿ ದಾಳಿ ನಡೆಸಿದ್ದು ಈ ಮೂಲಕ ಅಪ್ಘಾನಿಸ್ತಾನದಲ್ಲಿ ತನ್ನ ಇರುವಿಕೆಯನ್ನು ಬಲಪಡಿಸುತ್ತಿದೆ.
ಅಮೆರಿಕಾ ಕೂಡ ಪ್ರಸ್ತುತ ಅಪ್ಘನ್ ನೆಲದಿಂದ ತೆರಳಿದ್ದರೂ ಕೂಡ ತಾಲಿಬಾನಿಗಳ ವಿರುದ್ಧ ಹಗೆ ತೀರಿಸಲು ಕಾಯುತ್ತಿದೆ. ಕಾಬೂಲ್ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕಾ ಸೇನಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆಂಬುದು ವರದಿಯಾಗಿದ್ದು ಅಮೆರಿಕಾ ಸೇನೆಯು ISIS-K ಮೇಲೆ ಪ್ರತೀಕಾರವಾಗಿ ಡ್ರೋನ್ ದಾಳಿಯನ್ನು ನಡೆಸಿದೆ.
ಒಟ್ಟಿನಲ್ಲಿ ತಾಲಿಬಾನಿಗಳಿಗೆ ಚೀನಾ ಹಾಗೂ ಪಾಕಿಸ್ತಾನ ದೇಶಗಳು ಬೆಂಬಲವನ್ನು ನೀಡುತ್ತಿವೆ ಎಂಬ ಮಾಹಿತಿ ಕೂಡ ಇದ್ದು ಆರ್ಥಿಕ ಬೆಂಬಲವನ್ನು ನೀಡಿವೆ. ಜಾಗತಿಕವಾಗಿ ದಾಳಿ ನಡೆಸುವ ಹುನ್ನಾರದಲ್ಲಿರುವ ಪಾಕಿಸ್ತಾನ ತನ್ನ ದಾಳವನ್ನು ಉರುಳಿಸಲು ತಾಲಿಬಾನ್ ಅನ್ನು ಬಳಸಿಕೊಳ್ಳಲಿದೆ. ತಾಲಿಬಾನ್‌ನ ಸಹಕಾರದೊಂದಿಗೆ ಕಾಶ್ಮೀರದ ಮೇಲೆ ಹಾಗೂ ಭಾರತದ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದೆ ಎಂಬ ಅಂಶವನ್ನು ಅಲ್ಲಗೆಳೆಯುವಂತಿಲ್ಲ.
ಕೊರೋನಾ ಸಾಂಕ್ರಾಮಿಕದ ನಂತರ ಚೀನಾದ ಸಂಸ್ಥೆಗಳಿಗೆ, ಉದ್ಯಮಗಳಿಗೆ ನಿರ್ಬಂಧ ಹೇರಿರುವ ಭಾರತದ ಮೇಲೆ ಚೀನಾ ಕತ್ತಿಮಸೆಯುತ್ತಿದೆ. ಬೇರೆಲ್ಲಾ ದೇಶಗಳು ಚೀನಾದ ಮೇಲೆ ಹಗೆ ಸಾಧಿಸುತ್ತಿದ್ದು ಭಾರತದ ಬೆಂಬಲಕ್ಕೆ ನಿಂತಿದೆ. ವೈರಾಣು ದಾಳಿಯನ್ನು ಸಂಪೂರ್ಣ ವಿಶ್ವದ ಮೇಲೆ ಚೀನಾ ನಡೆಸಿದೆ ಎಂದು ಇತರ ರಾಷ್ಟ್ರಗಳು ಚೀನಾವನ್ನು ಜರೆಯುತ್ತಿವೆ. ಒಟ್ಟಿನಲ್ಲಿ ಪಾಕ್ ಹಾಗೂ ಚೀನಾ ದೇಶಗಳು ಭಾರತ ಸೇರಿದಂತೆ ಪ್ರಪಂಚದ ಪ್ರಮುಖ ರಾಷ್ಟ್ರಗಳನ್ನು ಸೋಲಿಸುವ ನಿಟ್ಟಿನಲ್ಲಿ ತಾಲಿಬಾನಿಗಳ ಸಹಕಾರವನ್ನು ಕೋರುತ್ತಿದೆ. ಇದಕ್ಕಾಗಿಯೇ ಅಮೆರಿಕಾ ಸೇನೆ ಅಲ್ಲಿಂದ ತೊರೆಯುವಂತೆ ಮಾಡಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ