ಭಾರತವೇ (India) ಎದುರು ನೋಡುತ್ತಿರುವ ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯ ರಾಮ ಮಂದಿರದ (Ayodhya Ram Mandir) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ವಿಗ್ರಹ ಕೆತ್ತನೆಗೆ ಕಲ್ಲು ಸೇರಿ ಹಲವು ಪ್ರಮುಖ ವಸ್ತುಗಳು ಮಂದಿರಕ್ಕೆ ಬಂದು ತಲುಪುತ್ತಿವೆ. ಈ ಹಿಂದೆ ನೇಪಾಳದಿಂದ (Nepal) ವಿಗ್ರಹ ಕೆತ್ತನೆಗೆ ಕಲ್ಲುಗಳು ಆಗಮಿಸುತ್ತವೆ ಎಂದು ಹೇಳಲಾಗಿತ್ತು, ಪ್ರಸ್ತುತ ರಾಮಮಂದಿರಕ್ಕೆ ಆ ಸಾಲಿಗ್ರಾಮ ಕಲ್ಲುಗಳು (Shaligram Stone) ಬಂದು ಅಯೋಧ್ಯೆಯನ್ನು ತಲುಪಿವೆ.
ಅಯೊಧ್ಯೆಗೆ ಬಂದ ಎರಡು ಸಾಲಿಗ್ರಾಮ ಕಲ್ಲು
ಅಯೋಧ್ಯೆಯ ರಾಮ ಮಂದಿರದ ಗರ್ಭ ಗುಡಿಯಲ್ಲಿ ಪ್ರತಿಷ್ಠಾಪನೆಯಾಗುವ ಶ್ರೀ ರಾಮ ಮತ್ತು ಸೀತಾ ಮಾತೆಯ ಮೂರ್ತಿಗಳನ್ನು ಕೆತ್ತಲು ಈ ಕಲ್ಲುಗಳನ್ನು ಬಳಸುತ್ತಿದ್ದು, ನೇಪಾಳದಿಂದ ಈ ವಿಶೇಷ ಸಾಲಿಗ್ರಾಮ ಕಲ್ಲನ್ನು ತರಿಸಿಕೊಳ್ಳಲಾಗಿದೆ.
ಗುರುವಾರ, ಉತ್ತರ ಪ್ರದೇಶದ ಗೋರಖನಾಥ ದೇವಾಲಯದಿಂದ ಎರಡು ದೊಡ್ಡ ಸಾಲಿಗ್ರಾಮ ಕಲ್ಲುಗಳು ಅಯೋಧ್ಯೆಗೆ ಬಂದಿಳಿದಿದ್ದು, ಇವನ್ನು ಅಯೋಧ್ಯೆಯಲ್ಲಿ ರಾಮ ಸೇವಕ ಪುರಂನಲ್ಲಿ (ದೇವಾಲಯದ ಕಟ್ಟಡ ಸಾಮಗ್ರಿಗಳ ಸಂಗ್ರಹಣಾ ಪ್ರದೇಶ) ಇರಿಸಲಾಗಿದೆ.
ಕಾಳಿ ಗಂಡಕಿ ನದಿಯಲ್ಲಿ ಮಾತ್ರ ವಿಶೇಷವಾಗಿ ಸಿಗುವ ಸಾಲಿಗ್ರಾಮ ಶಿಲೆ
ನೇಪಾಳದಲ್ಲಿ ಸೀತಾ ಮಾತೆ ಜನಿಸಿದ ನಗರವಾದ ಜನಕ್‌ಪುರದ ಕಾಳಿ ಗಂಡಕಿ ನದಿಯಲ್ಲಿ ಮಾತ್ರ ವಿಶೇಷವಾಗಿ ಸಿಗುವ ಈ ಶಿಲೆಯನ್ನು ವಿಗ್ರಹ ಕೆತ್ತನೆಗೆ ಬಳಸಲಾಗುತ್ತದೆ. ಹೌದು, ಸಾಲಿಗ್ರಾಮಗಳು ಕಾಳಿ ಗಂಡಕಿ ನದಿಯ ದಡದಲ್ಲಿ ಮಾತ್ರ ಕಂಡುಬರುವಂತಹ ವಿಶೇಷ ಕಲ್ಲುಗಳಾಗಿವೆ. ನೇಪಾಳದಲ್ಲಿರುವ ಕಾಳಿ ಗಂಡಕಿ ನದಿಯನ್ನು, ನಾರಾಯಣಿ ಎಂದೂ ಕರೆಯುತ್ತಾರೆ.
ಯಾಕೆಂದರೆ, ವಿಶ್ವದಲ್ಲಿ ಭಗವಾನ್ ವಿಷ್ಣುವಿನ ರೂಪ ಎಂದೇ ಪರಿಗಣನೆ ಮಾಡಲಾಗಿರುವ ಸಾಲಿಗ್ರಾಮದ ಶಿಲೆಗಳು ಕಂಡುಬರುವ ಏಕೈಕ ಮೂಲ, ಕಾಳಿ ಗಂಡಕಿ ನದಿಯ ತಟ. ಕೆಲ ದಿನಗಳ ಹಿಂದೆ ನೇಪಾಳದಲ್ಲಿ ಪುರೋಹಿತರು, ಸ್ಥಳೀಯ ಮುಖಂಡರು ಮತ್ತು ಬೇನಿ ಪುರಸಭೆಯ ನಿವಾಸಿಗಳು ನೇಪಾಳದ ಮಯಾಗಡಿ ಜಿಲ್ಲೆಯ ಕಾಳಿ ಗಂಡಕಿ ನದಿಯ ದಡದಲ್ಲಿ ಹಿಮಾಲಯದ ಕಲ್ಲುಗಳಿಗೆ ಪೂಜೆ ನೆರವೇರಿಸಿ ಅವುಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಹಾಗಾದರೆ ಸಾಲಿಗ್ರಾಮಗಳು ಯಾವುವು? ಯಾಕೆ ಇವು ವಿಶೇಷವಾಗಿವೆ? ಹಿಂದೂ ಪುರಾಣ ಏನು ಹೇಳುತ್ತದೆ ಎಂಬುದನ್ನು ನಾವಿಲ್ಲಿ ನೋಡೋಣ.
ವಿಷ್ಣುವಿನ ಅವತಾರ ಈ ಸಾಲಿಗ್ರಾಮ ಶಿಲೆ
ಸಾಲಿಗ್ರಾಮವನ್ನು ಸಾಲಿಗ್ರಾಮ ಶಿಲೆ ಎಂದೂ ಕರೆಯುತ್ತಾರೆ, ಇದು ನೇಪಾಳದ ಗಂಡಕಿ ನದಿಯ ಉಪನದಿಯಾದ ಕಾಳಿ ಗಂಡಕಿಯಿಂದ ಗಣಿಗಾರಿಕೆ ಮಾಡಲಾದ ಒಂದು ನಿರ್ದಿಷ್ಟ ರೀತಿಯ ಕಲ್ಲು ಮತ್ತು ಇದನ್ನು ಹಿಂದೂಗಳು ವಿಷ್ಣುವಿನ ಅವತಾರ ಎಂದು ಪೂಜಿಸುತ್ತಾರೆ.
ಭೂಮಿಯ ಮೇಲೆ ಕೋಟ್ಯಾಂತರ ವರ್ಷಗಳ ಹಿಂದಿನಿಂದಲೇ ಸಾಲಿಗ್ರಾಮ ಕಲ್ಲುಗಳೂ ಇದೆ. ವಿಶಿಷ್ಟವಾಗಿ, ಇವುಗಳು 400 ರಿಂದ 66 ಮಿಲಿಯನ್ ವರ್ಷಗಳ ಹಿಂದೆ ಇದ್ದ ಡೆವೊನಿಯನ್-ಕ್ರಿಟೇಶಿಯಸ್ ಅವಧಿಯ ಅಮೋನೈಟ್ ಶೆಲ್ ಪಳೆಯುಳಿಕೆಗಳಾಗಿವೆ.
ಇದನ್ನೂ ಓದಿ: Photos: ಮುಂದಿನ ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ! ಎಲ್ಲಿವರೆಗೆ ಬಂತು ರಾಮಮೂರ್ತಿಯ ಕೆತ್ತನೆ ಕಾರ್ಯ?
“ಕಾಳಿ ಗಂಡಕಿ ನದಿಯಲ್ಲಿ ಕಂಡುಬರುವ ಕಲ್ಲುಗಳು ಪ್ರಪಂಚದಲ್ಲಿ ಪ್ರಸಿದ್ಧವಾಗಿವೆ ಮತ್ತು ಬಹಳ ಅಮೂಲ್ಯವಾಗಿವೆ. ಈ ಕಲ್ಲುಗಳು ಭಗವಾನ್ ವಿಷ್ಣುವಿನ ಸಂಕೇತವೆಂದು ನಂಬಲಾಗಿದೆ.
ಶ್ರೀರಾಮನು ಕೂಡ ಭಗವಾನ್ ವಿಷ್ಣುವಿನ ಅವತಾರವಾಗಿದ್ದಾರೆ, ಆದ್ದರಿಂದ ಕಾಳಿ ಗಂಡಕಿ ನದಿಯ ಕಲ್ಲನ್ನು, ರಾಮ ಜನ್ಮ ಭೂಮಿ ದೇವಾಲಯಕ್ಕಾಗಿ ಅಯೋಧ್ಯೆಯಲ್ಲಿ ರಾಮನ ಮೂರ್ತಿಯನ್ನು ಕೆತ್ತಲು ಬಳಸುವುದು ತುಂಬಾ ಒಳ್ಳೆಯದು.
ಇದನ್ನು ಟ್ರಸ್ಟ್‌ನ (ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ) ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ವಿನಂತಿಸಿದ್ದಾರೆ ಮತ್ತು ನಾನು ಇದರಲ್ಲಿ ತುಂಬಾ ಸಕ್ರಿಯ ಮತ್ತು ಆಸಕ್ತಿ ಹೊಂದಿದ್ದೇನೆ" ಎಂದು ನೇಪಾಳಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಉಪಪ್ರಧಾನಿ ಬಿಮಲೇಂದ್ರ ನಿಧಿ ಎಎನ್‌ಐಗೆ ತಿಳಿಸಿದ್ದಾರೆ.
ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸುವುದು ಸಾಮಾನ್ಯ. ಜತೆಗೆ ಪ್ರಪಂಚಾದ್ಯಂತ ಶಿವ ದೇಗುಲಗಳೂ ಇವೆ. ಆದರೆ ಶಿಲಾರೂಪದ ವಿಷ್ಣುವೇ ಸಾಲಿಗ್ರಾಮ. ಒಂದು ಸಾಲಿಗ್ರಾಮ ಶಿಲೆಯನ್ನು ಪೂಜಿಸಿದರೆ ನೂರು ಶಿವಲಿಂಗವನ್ನು ನೋಡುವುದು ಮತ್ತು ಪೂಜಿಸಿದಕ್ಕೆ ಸಮಾನ ಎನ್ನಲಾಗಿದೆ ಕೂಡ.
ಆದಿ ಶಂಕರರು ಏನು ಹೇಳಿದ್ದಾರೆ?
ಆದಿ ಶಂಕರರ ಬರಹಗಳು ತೈತ್ತಿರೀಯ ಉಪನಿಷತ್ತಿನ 1.6.1 ಮತ್ತು ಬ್ರಹ್ಮ ಸೂತ್ರಗಳ 1.3.14 ಶ್ಲೋಕಗಳಲ್ಲಿ ವಿಷ್ಣುವಿನ ಆರಾಧನೆಯಲ್ಲಿ ಸಾಲಿಗ್ರಾಮ ಶಿಲಾವನ್ನು ಬಳಸುವುದು ಪ್ರಸಿದ್ಧ ಹಿಂದೂ ಆಚರಣೆಯಾಗಿದೆ ಎಂದು ಅವರು ಸೂಚಿಸಿದ್ದಾರೆ.
ಹಲವು ಪ್ರಸಿದ್ಧ ದೇವಾಲಯಗಳ ಮೂರ್ತಿ ಕೆತ್ತನೆಯಲ್ಲಿ ಸಾಲಿಗ್ರಾಮ ಬಳಕೆ
ಉಡುಪಿಯ ಕೃಷ್ಣ ಮಠದಲ್ಲಿರುವ ಕೃಷ್ಣನ ಪ್ರತಿಮೆ ಮತ್ತು ವೃಂದಾವನದ ರಾಧಾ ರಾಮನ್ ದೇವಾಲಯವನ್ನು ಸಾಲಿಗ್ರಾಮ ಶಿಲಾಗಳಿಂದ ನಿರ್ಮಿಸಲಾಗಿದೆ ಎನ್ನಲಾಗಿದೆ.
ಹಾಗೆಯೇ ತಿರುವನಂತಪುರಂನ ಪದ್ಮನಾಭಸ್ವಾಮಿ ದೇವಾಲಯ ಮತ್ತು ಗರ್ವಾಲ್ ಪ್ರದೇಶದ ಬದರಿನಾಥ ದೇವಾಲಯದಲ್ಲಿರುವ ವಿಷ್ಣುವಿನ ಪ್ರತಿಮೆಯನ್ನು ಸಹ ಇದೇ ಕಲ್ಲಿನಲ್ಲಿ ಕೆತ್ತನೆಮಾಡಲಾಗಿದೆ.
ಸಾಲಿಗ್ರಾಮ ಶಿಲೆಗಳ ಬಗ್ಗೆ ಹಿಂದೂ ಪುರಾಣ ಏನು ಹೇಳುತ್ತದೆ?
ದೇವಿ ಭಾಗವತ ಪುರಾಣ, ಬ್ರಹ್ಮವೈವರ್ತ ಪುರಾಣ ಮತ್ತು ಶಿವ ಪುರಾಣಗಳು ಸಾಲಿಗ್ರಾಮ ಕಲ್ಲುಗಳು ಹೇಗೆ ಉದ್ಭವಾದವು ಎಂಬುದನ್ನು ವಿವರಿಸುತ್ತವೆ. ಒಂದು ಪುರಾಣದಲ್ಲಿ ವೃಷಧ್ವಜ ಎಂಬ ರಾಜನು ಶಿವನನ್ನು ಹೊರತುಪಡಿಸಿ ಯಾವುದೇ ದೇವರನ್ನು ಪೂಜಿಸಲು ನಿರಾಕರಿಸಿದ ಕಾರಣ, ಸೂರ್ಯ ಅವನನ್ನು ಬಡತನದಲ್ಲಿ ಬದುಕುವಂತೆ ಶಾಪವಿಟ್ಟನು.
ಇದಾದ ನಂತರ ಅವರ ವಂಶಸ್ಥರಾದ ಧರ್ಮಧ್ವಜ ಮತ್ತು ಕುಸಧ್ವಜ ತಮ್ಮ ಕಳೆದುಹೋದ ಸಮೃದ್ಧಿಯನ್ನು ಪುನಃ ಸ್ಥಾಪಿಸಲು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿ ಕೃಪೆ ಪಡೆಯಲು ತಪಸ್ಸನ್ನು ಕೈಗೊಂಡರು. ಅವರ ತಪಸ್ಸಿನಿಂದ ಸಂತುಷ್ಟಳಾದ ಲಕ್ಷ್ಮಿ ದೇವಿ ಅವರಿಗೆ ಸಮೃದ್ಧಿಯನ್ನು ಮತ್ತು ಅವರ ಹೆಣ್ಣುಮಕ್ಕಳಲ್ಲಿ ಒಬ್ಬಳಾಗಿ ಹುಟ್ಟುವುದಾಗಿ ವರ ನೀಡಿದಳು.
ಇದರ ಫಲವಾಗಿ ಲಕ್ಷ್ಮಿಯು ಕುಶಧ್ವಜನ ಮಗುವಾದ ವೇದಾವತಿ ಮತ್ತು ಧರ್ಮಧ್ವಜದ ಮಗುವಾದ ತುಳಸಿಯ ರೂಪವನ್ನು ಪಡೆದಳು. ತುಳಸಿಯು ವಿಷ್ಣುವನ್ನು ಮದುವೆಯಾಗುವ ಪ್ರಯತ್ನದಲ್ಲಿ ತಪಸ್ಸು ಮಾಡಲು ಬದರಿಕಾಶ್ರಮಕ್ಕೆ ಪ್ರಯಾಣ ಬೆಳೆಸಿದಳು. ಆದರೆ ಬ್ರಹ್ಮನು ಆಕೆಗೆ ಈ ಜನ್ಮದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ ಮತ್ತು ಬದಲಿಗೆ ಅವಳು ದಾನವ ಶಂಖಚೂಡನನ್ನು ಮದುವೆಯಾಗಬೇಕೆಂದು ತಿಳಿಸಿದನು.
ಶಂಖಚೂಡನು ಸುಧಾಮ, ಕೃಷ್ಣನ ಸೇವಕ, ಅವನ ಹಿಂದಿನ ಜನ್ಮದಲ್ಲಿ ಗೋಲೋಕದಲ್ಲಿ ನೆಲೆಸಿದ್ದ ವಿಷ್ಣುವಿನ ಅಭಿವ್ಯಕ್ತಿ. ರಾಧೆಯು ಅವನ ದೇಹದಿಂದ ರೂಪುಗೊಂಡಿದ್ದರಿಂದ ದಾನವನಾಗಿ ಹುಟ್ಟುವಂತೆ ಶಾಪ ಕೊಟ್ಟಳು.
ಬ್ರಹ್ಮನ ಸೂಚನೆಯ ಮೇರೆಗೆ ಅವರು ಗಂಧರ್ವರ ವೈವಾಹಿಕ ಪದ್ಧತಿಗಳ ಪ್ರಕಾರ ತುಳಸಿಯನ್ನು ವಿವಾಹವಾದರು. ವಿವಾಹದ ನಂತರ, ಶಂಖಚೂಡನು ದಾನವರನ್ನು ಅವರ ಶತ್ರುಗಳಾದ ದೇವತೆಗಳ ವಿರುದ್ಧ ನಡೆದ ಯುದ್ಧದಲ್ಲಿ ಸಹಾಯ ಮಾಡಿದನು ಮತ್ತು ಶಂಖಚೂಡನ ನೀತಿಯಿಂದ ದೇವತೆಗಳು ಸ್ವರ್ಗದಿಂದ ನಿರ್ಗಮಿಸುವಂತಾಯಿತು.
ಇದರಿಂದಾಗಿ ದಿಕ್ಕು ಕಾಣದ ದೇವತೆಗಳು ವಿಷ್ಣುವಿನ ಮೊರೆ ಹೋದರು. ವಿಷ್ಣು ಅವರಿಗೆ ಶಿವ, ಶಂಖಚೂಡನನ್ನು ಕೊಲ್ಲುತ್ತಾನೆ ಎಂದು ತಿಳಿಸಿದನು. ಶಿವ, ಅವನ ಅನುಯಾಯಿಗಳು ಮತ್ತು ದೇವತೆಗಳು ದೇವತೆಗಳ ಕೋರಿಕೆಯ ಮೇರೆಗೆ ಶಂಖಚೂಡನ ನೇತೃತ್ವದಲ್ಲಿ ದಾನವರೊಂದಿಗೆ ಯುದ್ಧದಲ್ಲಿ ತೊಡಗಿಕೊಂಡನು.
ಆದರೆ ಶಂಖಚೂಡನು ಬ್ರಹ್ಮನಿಂದ ರಕ್ಷಾಕವಚವನ್ನು ಧರಿಸಿದಾಗ ಯಾರೇ ಏನು ಮಾಡಿದರೂ ಅಪಾಯ ಬರದಂತೆ ವರ ಪಡೆದಿದ್ದನು. ಹೀಗಾಗಿ ಇವನ ತಂಡವನ್ನು ಶಿವನ ತಂಡಕ್ಕೆ ಸೋಲಿಸಲಾಗುವುದಿಲ್ಲ.
ಹೀಗಾಗಿ, ವಯಸ್ಸಾದ ಬ್ರಾಹ್ಮಣನ ಅವತಾರದಲ್ಲಿ ವಿಷ್ಣು ಭಿಕ್ಷೆಯನ್ನು ಬೇಡುವಾಗ ಶಂಖಚೂಡನ ಹತ್ತಿರ ತನ್ನ ರಕ್ಷಾಕವಚಕ್ಕಾಗಿ ವಿನಂತಿಸಿದನು. ಆಗ ಶಂಖಚೂಡನು ರಕ್ಷಾಕವಚವನ್ನು ಉಡುಗೊರೆಯಾಗಿ ನೀಡಿದನು.
ಈ ಸಂದರ್ಭವನ್ನು ಬಳಸಿಕೊಂಡ ಶಿವ ತ್ರಿಶೂಲದಿಂದ ಅವನನ್ನು ಸಂಹಾರ ಮಾಡಿದನು. ಇದರಿಂದ ತುಳಸಿಯ ಪರಿಶುದ್ಧತೆಯು ಛಿದ್ರವಾಯಿತು ಮತ್ತು ಸುಧಾಮ ಶಾಪದಿಂದ ಮುಕ್ತಗೊಂಡನು.
ಶಂಖಚೂಡನ ಸಾವಿನ ಸಮಯದಲ್ಲಿ ತನ್ನೊಂದಿಗೆ ಇದ್ದವನು ಶಂಖಚೂಡನಲ್ಲ ಎಂದು ತುಳಸಿ ಅನುಮಾನಿಸತೊಡಗಿದಳು. ತನ್ನನ್ನು ವಂಚಿಸಿದವನು ವಿಷ್ಣುವೇ ಎಂದು ತಿಳಿದಾಗ, ಕೋಪದಿಂದ ವಿಷ್ಣುವಿಗೆ ಕಲ್ಲಾಗುವಂತೆ ಶಪಿಸಿದಳು. ಆದರೆ ಈ ಸಮಯದಲ್ಲಿ ವಿಷ್ಣು ತನ್ನ ಹೆಂಡತಿಯನ್ನಾಗಿ ಸ್ವೀಕರಿಸುವುದಾಗಿ ತುಳಸಿಯನ್ನು ಸಮಾಧಾನ ಮಾಡಿದನು.
ಪರಿಣಾಮವಾಗಿ, ಲಕ್ಷ್ಮಿಯು ತುಳಸಿಯ ದೇಹವನ್ನು ತೊರೆದು ಮತ್ತು ಹೊಸ ರೂಪವನ್ನು ಪಡೆದಳು (ಇದು ತುಳಸಿ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು).
ತುಳಸಿಯ ಪರಿತ್ಯಕ್ತ ದೇಹದಿಂದ ಗಂಡಕಿ ನದಿ ಹುಟ್ಟಿಕೊಂಡಿತು. ತುಳಸಿಯ ಶಾಪದ ಪರಿಣಾಮವಾಗಿ, ವಿಷ್ಣುವು ಸಾಲಿಗ್ರಾಮ ಪರ್ವತದ ಆಕಾರವನ್ನು ಪಡೆದುಕೊಂಡನು, ಇದು ಗಂಡಕಿ ನದಿಯ ಬಳಿಯಿರುವ ಒಂದು ದೊಡ್ಡ ಕಲ್ಲಿನ ಪರ್ವತವಾಗಿದೆ.
ಇದನ್ನೂ ಓದಿ: Ram Mandir Ayodhya: 1800 ಕೋಟಿಯಲ್ಲಿಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ; ಹೇಗಿರಲಿದೆ ಭವ್ಯ ದೇಗುಲ?
ಭಾಗವತ ಪುರಾಣದಲ್ಲಿ ಸಾಲಿಗ್ರಾಮ ಕಲ್ಲು
ದೇವಿ ಭಾಗವತ ಪುರಾಣದ ಪ್ರಕಾರ; ಜಲಂಧರನನ್ನು ಕೊಲ್ಲಲು ವಿಷ್ಣುವು ಆತನ ಸತಿ ಬೃಂದಾಳ ಪಾತಿವ್ರತ್ಯ ಭಂಗ ಮಾಡಬೇಕಾಗುತ್ತದೆ. ಇದರಿಂದ ಕೋಪಗೊಂಡ ಆಕೆ ವಿಷ್ಣುವಿಗೆ ನಾಲ್ಕು ಅವತಾರವನ್ನು ಎತ್ತು ಎಂದು ಶಾಪ ಕೊಡುತ್ತಾಳೆ.
ಶಾಪ ಮುಕ್ತಿಗಾಗಿ ವಿಷ್ಣುವು ಕಲ್ಲು (ಸಾಲಿ ಗ್ರಾಮ), ಹುಲ್ಲು (ದರ್ಬೆ), ಮರ (ಅಶ್ವತ್ಥ) ಮತ್ತು ಗಿಡವಾಗಿ (ತುಳಸಿ) ಅವತಾರ ಎತ್ತಿದ. ಇತಿಹಾಸದ ಪ್ರಕಾರ ಗಂಡಕಿ ಎಂಬ ಭಕ್ತೆ ಹಲವು ವರ್ಷ ತಪಸ್ಸು ಮಾಡಿ ವರವನ್ನು ಪಡೆದ ಫಲವಾಗಿ ವಿಷ್ಣುವು ಆಕೆಯ ಗರ್ಭವನ್ನು ಪ್ರವೇಶಿಸುತ್ತಾನೆ. ಹೀಗಾಗಿ ಸಾಲಿಗ್ರಾಮವನ್ನು ವಿಷ್ಣುವಿನ ಅವತಾರ ಎಂದೇ ಹೇಳಲಾಗುತ್ತದೆ.
ʼವಜ್ರ ಕೀಟ' ಎಂಬ ಹುಳುವಿನ ಆಶ್ರಯ ತಾಣ ಈ ಸಾಲಿಗ್ರಾಮ
ಹಿಂದುಗಳ ಸಂಪ್ರದಾಯದಂತೆ ಈ ಕಲ್ಲು 'ವಜ್ರ ಕೀಟ' ಎಂಬ ಹುಳುವಿಗೆ ಆಶ್ರಯ ತಾಣ. ವಜ್ರದ ಹಲ್ಲು ಹೊಂದಿರುವ ಈ ಕೀಟ, ಕಲ್ಲಿಗೆ ಒಂದು ಸಣ್ಣ ರಂಧ್ರ ಕೊರೆದು ಒಳ ಸೇರುತ್ತದೆ.
ಒಳಕ್ಕೆ ತನ್ನ ಹಲ್ಲುಗಳಿಂದ ಕೊರೆಯುವುದರಿಂದ ಚಕ್ರದ ರೀತಿಯ ಕೆತ್ತನೆ ಮೂಡುತ್ತದೆ. ಈ ಕೀಟ ಸ್ರವಿಸುವ ದ್ರವದಿಂದ ಚಿನ್ನ ಉತ್ಪತ್ತಿಯಾಗುತ್ತದೆ. ಇದುವೇ ಅಸಲಿ ಸಾಲಿಗ್ರಾಮ ಎಂದು ಹೇಳಲಾಗುತ್ತದೆ. ಹಾಗೆಯೇ ಗಂಡಕಿ ನದಿಯ ಆಳವಾದ ಗರ್ಭದಲ್ಲಿ ಅಡಗಿರುವ ಸಾಲಿಗ್ರಾಮವೇ ಅಸಲಿ ಎಂಬ ನಂಬುಗೆಯೂ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ