ರಸ್ತೆಗಳಲ್ಲಿ ಪಟಾಕಿ ಸಿಡಿಸದಂತೆ ನಟ ಆಮೀರ್ ಖಾನ್ ಜನರಿಗೆ ಸಲಹೆ ನೀಡುವ ಸಿಯೆಟ್ ಲಿಮಿಟೆಡ್ನ ಹೊಸ ಟಯರ್ ಜಾಹಿರಾತಿಗೆ (New Advertisement) ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (BJP MP Anantkumar Hegde) ವಿರೋಧ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 14ರಂದು ಅವರು, ಕಂಪೆನಿಯ ಎಂಡಿ ಮತ್ತು ಸಿಇಓ ಅನಂತ್ ವರ್ಧನ್ ಗೋಯೆಂಖಾ ಅವರಿಗೆ ಬರೆದಿರುವ ಪತ್ರದಲ್ಲಿ, “ಹಿಂದೂಗಳಲ್ಲಿ ಅಶಾಂತಿ” (Unrest and Disturbance) ಸೃಷ್ಟಿಸುವ ಜಾಹಿರಾತಿನ ಬಗ್ಗೆ ಗಮನ ಹರಿಸುವಂತೆ ಕೇಳಿಕೊಂಡಿದ್ದು, “ರಸ್ತೆಗಳಲ್ಲಿ ಪಟಾಕಿ ಸಿಡಿಸದಂತೆ ಆಮೀರ್ ಖಾನ್ (Aamir Khan) ಜನರಿಗೆ ಸಲಹೆ ನೀಡುವ ನಿಮ್ಮ ಕಂಪೆನಿಯ ಇತ್ತೀಚಿನ ಹೊಸ ಜಾಹಿರಾತು ಉತ್ತಮ ಸಂದೇಶವನ್ನು ನೀಡುತ್ತಿದೆ. ಸಾರ್ವಾಜನಿಕ ಸಮಸ್ಯೆಗಳ ಬಗ್ಗೆ ನಿಮ್ಮ ಕಾಳಜಿ ಶ್ಲಾಘನೀಯ. ಈ ನಿಟ್ಟಿನಲ್ಲಿ , ಜನರು ರಸ್ತೆಗಳಲ್ಲಿ ಎದುರಿಸುತ್ತಿರುವ ಇನ್ನೊಂದು ಸಮಸ್ಯೆಯ ಬಗ್ಗೆ ಗಮನ ಹರಿಸುವಂತೆ ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಅದು ಮುಸ್ಲಿಮರು ನಮಾಜ್ ಹೆಸರಿನಲ್ಲಿ ಶುಕ್ರವಾರ ಮತ್ತು ಇತರ ಪ್ರಮುಖ ಹಬ್ಬಗಳ ದಿನದಲ್ಲಿ ರಸ್ತೆಗಳನ್ನು ಬಂದ್ ಮಾಡುವುದು” ಎಂದು ಬರೆದಿದ್ದಾರೆ.
ಜಾಹೀರಾತು ಗಮನ ಸೆಳೆದಿರುವ ಶಬ್ಧ ಮಾಲಿನ್ಯದ ಸಮಸ್ಯೆ ಉಲ್ಲೇಖಿಸುತ್ತಾ, “ ನಮ್ಮ ದೇಶದ ಮಸೀದಿಗಳ ಮೇಲೆ ಜೋಡಿಸಿರುವ ಧ್ವನಿವರ್ಧಕಗಳಿಂದ, ಆಜಾನ್ಗೆ ಕರೆ ನೀಡುವಾಗ ದೊಡ್ಡ ಶಬ್ಧ ಹೊರ ಬರುತ್ತದೆ. ಆ ಶಬ್ಧವು ಅನುಮತಿಯ ಮಿತಿಯನ್ನು ಮೀರಿರುತ್ತದೆ. ಶುಕ್ರವಾರದಂದು ಅದನ್ನು ಹೆಚ್ಚು ಸಮಯದವರೆಗೆ ವಿಸ್ತರಿಸಲಾಗಿರುತ್ತದೆ. ಇದರಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಜನರು ಮತ್ತು ವಿಶ್ರಾಂತಿ ಪಡೆಯುತ್ತಿರುವವರು, ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಮತ್ತು ತರಗತಿಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರಿಗೆ ತೊಂದರೆ ಆಗುತ್ತದೆ. ವಾಸ್ತವದಲ್ಲಿ, ತೊಂದರೆಗೆ ಒಳಗಾಗುತ್ತಿರುವವರ ಪಟ್ಟಿ ದೊಡ್ಡದಿದೆ, ಆದರೆ ಇಲ್ಲಿ ಕೆಲವನ್ನು ಮಾತ್ರ ಉಲ್ಲೇಖಿಸಲಾಗಿದೆ” ಎಂದು ಅನಂತ್ಕುಮಾರ್ ಹೆಗಡೆ ಪತ್ರದಲ್ಲಿ ಹೇಳಿದ್ದಾರೆ.
“ನೀವು ಸಾಮಾನ್ಯ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತುಂಬಾ ಉತ್ಸುಕ ಮತ್ತು ಸೂಕ್ಷ್ಮ ಸಂವೇದನೆ ಹೊಂದಿರುವುದರಿಂದ ಮತ್ತು ನೀವು ಹಿಂದೂ ಸಮುದಾಯಕ್ಕೂ ಸೇರಿದವರಾಗಿರುವುದರಿಂದ, ಶತಮಾನಗಳಿಂದಲೂ ಹಿಂದೂಗಳ ಮೇಲೆ ಆಗಿರುವ ತಾರತಮ್ಯವನ್ನು ನೀವು ಅರ್ಥ ಮಾಡಿಕೊಳ್ಳಬಲ್ಲಿರಿ ಎಂದು ನಾನು ಭಾವಿಸುತ್ತೇನೆ” ಎಂದು ಸಂಸದರು ಉಲ್ಲೇಖಿಸಿದ್ದಾರೆ.
“ಹಿಂದೂ-ವಿರೋಧಿ ನಟರ ಗುಂಪು” ಯಾವಾಗಲೂ ಹಿಂದೂಗಳ ಭಾವನೆಗೆ ನೋವುಂಟು ಮಾಡುತ್ತದೆ. ಆದರೆ ಅವರು ತಮ್ಮ ಸಮುದಾಯದ ತಪ್ಪುಗಳನ್ನು ಬಹಿರಂಗಪಡಿಸಲು ಎಂದಿಗೂ ಪ್ರಯತ್ನಿಸುವುದಿಲ್ಲ ಎಂದು ಅನಂತ್ ಕುಮಾರ್ ಹೆಗಡೆ ತಮ್ಮ ಪತ್ರದಲ್ಲಿ ಬರೆದಿದ್ದಾರೆ. “ ಹಾಗಾಗಿ, ನಿಮ್ಮ ಕಂಪೆನಿಯ ಜಾಹಿರಾತು ಹಿಂದೂಗಳಲ್ಲಿ ಅಶಾಂತಿ ಸೃಷ್ಟಿಸಿರುವ ಈ ನಿರ್ದಿಷ್ಟ ಘಟನೆಯ ಬಗ್ಗೆ ನೀವು ಗಮನ ಹರಿಸಬೇಕು ಎಂದು ನಾನು ವಿನಂತಿಸಿಕೊಳ್ಳುತ್ತೇನೆ“ ಎಂದು ಹೆಗಡೆ ಹೇಳಿದ್ದಾರೆ. ಅಂದ್ಹಾಗೆ ಇಷ್ಟೆಲ್ಲಾ ವಿವಾದಗಳೆದ್ದಿರುವ ಆ ಜಾಹೀರಾತು ಇದೇ ನೋಡಿ...
ಜನಪ್ರಿಯ ಬಟ್ಟೆ ಬ್ರಾಂಡ್ ಫ್ಯಾಬ್ ಇಂಡಿಯಾದ ಇತ್ತೀಚಿನ ಸಂಗ್ರಹದ ಕುರಿತಾದ ವಿವಾದದ ನಂತರ, ಈ ಘಟನೆ ಕಂಡು ಬಂದಿದೆ. ಫ್ಯಾಬ್ ಇಂಡಿಯಾ, ದೀಪಾವಳಿ ಹಬ್ಬದ ವಸ್ತ್ರದ ಸಂಗ್ರಹವನ್ನು ‘ಜಶ್ನ್ – ಎ- ರಿವಾಜ್‘ ಎಂಬ ಹೆಸರಿನಲ್ಲಿ ಕರೆದು, ದೀಪಾವಳಿ ಹಬ್ಬಕ್ಕೆ ಉರ್ದು ಪದ ಜೋಡಿಸಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕೂಡಲೇ ಕಂಪೆನಿ ಆ ಜಾಹೀರಾತು ಮತ್ತು ಅದಕ್ಕೆ ಸಂಬಂಧಿಸಿದ ಟ್ವೀಟ್ಗಳನ್ನು ತೆಗೆದು ಹಾಕಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ