Explained: ಉಕ್ರೇನ್‌ನಲ್ಲಿ ಯುದ್ಧ, ಭಾರತದಲ್ಲಿ ಆತಂಕ! ದೂರದ ದೇಶದೊಂದಿಗೆ India ಸಂಬಂಧವೇನು?

ಅಲ್ಲೇಲ್ಲೋ ದೂರದ ಉಕ್ರೇನ್‌ನಲ್ಲಿ ಯುದ್ಧವಾದರೆ, ಇಲ್ಲಿ ಭಾರತದಲ್ಲಿ ತಣ್ಣಗೆ ಕುಳಿತಿರುವ ನಾವ್ಯಾಕೆ ಬೆವರಬೇಕು? ಖಂಡಿತ ಇದು ಆತಂಕಕಾರಿ ವಿಚಾರ ಕಣ್ರೀ... ಉಕ್ರೇನ್‌ ಹಾಗೂ ರಷ್ಯಾ ಎರಡೂ ಭಾರತದ ಶತ್ರುರಾಷ್ಟ್ರಗಳೇನೂ ಅಲ್ಲ. ಉಕ್ರೇನ್‌ ಜೊತೆ ಭಾರತ ಹಲವು ರೀತಿಯ ಸಂಬಂಧ ಹೊಂದಿದೆ. ಹಾಗಿದ್ರೆ ರಷ್ಯಾ-ಉಕ್ರೇನ್‌ ಯುದ್ಧದಿಂದ ಭಾರತದ ಮೇಲಾಗುವ ಪರಿಣಾಮಗಳೇನು? ಇಲ್ಲಿದೆ ಸಂಪೂರ್ಣ ವಿವರ...

ಯುದ್ಧದ ಕಾರ್ಮೋಡದ ನಡುವೆ ಉಕ್ರೇನ್ ಧ್ವಜ

ಯುದ್ಧದ ಕಾರ್ಮೋಡದ ನಡುವೆ ಉಕ್ರೇನ್ ಧ್ವಜ

 • Share this:
  ವಿಶ್ವದ ಪ್ರತಿಯೊಂದು ರಾಷ್ಟ್ರಗಳ (Country) ಮೂಲ ಉದ್ದೇಶ ತಮ್ಮ ನಾಗರಿಕರ (Citizen) ಹಿತ ಕಾಯುವುದಾಗಿರುತ್ತದೆ. ಆದರೆ, ಇದು ಸುಮ್ಮನೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿ ರಾಷ್ಟ್ರಗಳು ಆರ್ಥಿಕವಾಗಿ ಸದೃಢವಾಗಿರಬೇಕಾಗಿರುವುದು ಬಲು ಅವಶ್ಯಕ. ಹಾಗಾದಾಗ ಮಾತ್ರವೇ ಅಭಿವೃದ್ಧಿ(Developments) ಕಾರ್ಯಗಳು ಯಾವುದೇ ಅಡೆ-ತಡೆಗಳಿಲ್ಲದೆ, ವಿಳಂಬವಾಗದೆ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಆದರೆ, ಒಂದು ರಾಷ್ಟ್ರವು ಆರ್ಥಿಕವಾಗಿ ಸದೃಢವಾಗಿರಲು ಏನು ಮಾಡಬಹುದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಏಕೆಂದರೆ ರಾಷ್ಟ್ರ ತನ್ನ ಏಕಪಾತ್ರವೊಂದರಿಂದಲೇ ಆರ್ಥಿಕವಾಗಿ ಬೆಳೆಯಲಾರದು. ಹಾಗಾಗಿ, ಒಂದು ರಾಷ್ಟ್ರ ಜಾಗತಿಕ ಮಟ್ಟದಲ್ಲಿ ತನ್ನನ್ನು ತಾನು ಬೆಳೆಯುವಂತೆ ಮಾಡಬೇಕೆಂಬ ಗುರಿ ಹೊಂದಿದಾಗ ಅದು ಜಗತ್ತಿನ ಇತರೆ ರಾಷ್ಟ್ರಗಳೊಂದಿಗೆ ಉತ್ತಮವಾದ ಸಂಬಂಧಗಳನ್ನು (Relationship) ಹೊಂದುವುದು ಪ್ರಮುಖ ಪಾತ್ರವಹಿಸುತ್ತದೆ. ಈ ಸಂಬಂಧಗಳು ನಿರ್ದಿಷ್ಟ ಒಂದು ಕ್ಷೇತ್ರಕ್ಕಷ್ಟೆ ಅಂತೇನಿಲ್ಲ. ಅದು ಯಾವುದೇ ಆಗಿರಬಹುದು. ಉದಾಹರಣೆಗೆ ವ್ಯಾಪಾರ (Trade), ಶೈಕ್ಷಣಿಕ (Education), ರಕ್ಷಣಾ ವಲಯ (Defense)  ಇತ್ಯಾದಿ. ಈ ನಿಟ್ಟಿನಲ್ಲಿ ಭಾರತವು ಇತ್ತೀಚಿನ ಕೆಲವು ವರ್ಷಗಳಿಂದ ಜಗತ್ತಿನ ಬಹುತೇಕ ಎಲ್ಲ ಪ್ರಮುಖ ರಾಷ್ಟ್ರಗಳೊಂದಿಗೆ ವ್ಯಾಪಾರದ ಉತ್ತಮ ಸಂಬಂಧಗಳನ್ನು ಹೊಂದಿದೆ.

  ರಷ್ಯಾ-ಉಕ್ರೇನ್ ಯುದ್ಧ; ಹಲವು ದೇಶಗಳಿಗೆ ಆತಂಕ

  ಭಾರತ ಸಂಬಂಧ ಹೊಂದಿರುವ ಹಲವು ರಾಷ್ಟ್ರಗಳ ಪೈಕಿ ಉಕ್ರೇನ್ ಸಹ ಒಂದು. ಉಕ್ರೇನ್ ರಾಷ್ಟ್ರದೊಂದಿಗೆ ಭಾರತ ವ್ಯಾಪಾರ ಹಾಗೂ ಶೈಕ್ಷಣಿಕ ವಲಯಗಳ ಸಂಬಂಧವನ್ನು ಹೊಂದಿದೆ. ಆದರೆ, ಪ್ರಸ್ತುತ, ರಷ್ಯಾ-ಉಕ್ರೇನ್ ಬಿಕ್ಕಟ್ಟು ಜಗತ್ತನ್ನೇ ತಲ್ಲಣಗೊಳಿಸಿದ್ದು ಭಾರತ ಸೇರಿದಂತೆ ಎಲ್ಲ ಜಾಗತಿಕ ನಾಯಕರ ಕಣ್ಣು ಈಗ ಈ ದೇಶಗಳ ಮುಂದಿನ ನಡೆ ಏನೆಂಬುದರ ಬಗ್ಗೆ ಕೇಂದ್ರೀಕೃತವಾಗಿದೆ.

  ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಆತಂಕ

  ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಉಕ್ರೇನ್‌ನಲ್ಲಿ ಸುಮಾರು 18,000 ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಸದ್ಯ ಭಾರತವು ಅಲ್ಲಿನ ಬೆಳವಣಿಗೆಗಳನ್ನು ತೀವ್ರವಾಗಿ ಗಮನಿಸುತ್ತಿದೆ. ಭಾರತದ ಆಶಯ ಕೇವಲ ಭೌಗೋಳಿಕ, ರಾಜಕೀಯ ಸಮತೋಲನಕ್ಕೆ ಸೀಮಿತವಾಗಿಲ್ಲ ಬದಲಾಗಿ ತಲೆದೋರಬಹುದಾದ ಆರ್ಥಿಕ ಹಿತಾಸಕ್ತಿಗಳು ಮತ್ತು ಉಕ್ರೇನ್‌ನಲ್ಲಿರುವ ನಾಗರಿಕರ ಯೋಗಕ್ಷೇಮ ಕುರಿತು ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದಾಗಿದೆ.

  ಇದನ್ನೂ ಓದಿ: Explained: ರಷ್ಯಾ-ಉಕ್ರೇನ್ ಬಿಕ್ಕಟ್ಟು; ಭಾರತದಲ್ಲಿ ಪೆಟ್ರೋಲ್​ ಬೆಲೆ ಇನ್ನಷ್ಟು ಏರಿಕೆ ಸಾಧ್ಯತೆ

  ಸದ್ಯ 18 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು

  ಈಗಾಗಲೇ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೇಶದಲ್ಲಿ 18,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಓದುತ್ತಿದ್ದಾರೆ ಎಂದು ಹೇಳಿದ್ದು ಉಕ್ರೇನಿಯನ್ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅಂದರೆ ಇತ್ತೀಚಿನ 2020 ರ ಹೊತ್ತಿಗೆ, ಉಕ್ರೇನ್‌ನಲ್ಲಿ ಒಟ್ಟು 18,095 ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎನ್ನಲಾಗಿದೆ ಇದು ಅಲ್ಲಿರುವ ಒಟ್ಟಾರೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ 23.64% ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸುತ್ತಾರೆ.

  ತಾತ್ಕಾಲಿಕವಾಗಿ ದೇಶ ತೊರೆದ ವಿದ್ಯಾರ್ಥಿಗಳು

  ಕಳೆದ ಮಂಗಳವಾರದಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು "ಭಾರತೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರಕ್ರಿಯೆಯನ್ನು ಸುಗಮಗೊಳಿಸುವ ದೃಷ್ಟಿಯಿಂದ ಅದು ಉಕ್ರೇನಿನ ಶೈಕ್ಷಣಿಕ ಅಧಿಕಾರಿಗಳೊಂದಿಗೆ ನಿರಂತರವಾದ ಸಂಪರ್ಕದಲ್ಲಿದೆ" ಎಂದು ಹೇಳಿದೆ. ಅಲ್ಲದೆ, ಕಚೇರಿ ಮೂಲಗಳು ಭಾರತೀಯ ವಿದ್ಯಾರ್ಥಿಗಳು ದೇಶವನ್ನು ತಾತ್ಕಾಲಿಕವಾಗಿ ತೊರೆಯಬೇಕು ಮತ್ತು ಆ ಬಗ್ಗೆ ತಮ್ಮ ವಿಶ್ವವಿದ್ಯಾಲಯಗಳಿಂದ ಅಧಿಕೃತ ಸಂವಹನಕ್ಕಾಗಿ ಕಾಯಬಾರದೆಂದೂ ಸಹ ಸೂಚಿಸಿದೆ.

  ಭಯಪಡದಂತೆ ವಿದ್ಯಾರ್ಥಿಗಳಿಗೆ ಅಭಯ

  ಉಕ್ರೇನಿಯನ್ ಸ್ಟೇಟ್ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಎಜುಕೇಶನ್‌ನ ನಿರ್ದೇಶಕಿಯಾದ, ಒಲೆನಾ ಶಪೋವಾಲೋವಾ ಅವರು, ಆನ್‌ಲೈನ್ ಪೋರ್ಟಲ್, ದಿ ಪಿಐಇಗೆ ಉಕ್ರೇನ್‌ನಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಮತ್ತು ಭಯಪಡುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆಂದು ವರದಿಯಾಗಿದೆ. ಉಕ್ರೇನಿಯನ್ ವಿಶ್ವವಿದ್ಯಾಲಯಗಳು "ಎಂದಿನಂತೆ ಕಾರ್ಯನಿರ್ವಹಿಸುತ್ತವೆ" ಎಂದು ಅವರು ಈ ಬಗ್ಗೆ ಹೇಳಿದ್ದಾರೆ ಎನ್ನಲಾಗಿದೆ.

  ಪ್ರತ್ಯೇಕವಾಗಿ, ಭಾರತದಲ್ಲಿನ ಉಕ್ರೇನಿಯನ್ ರಾಯಭಾರಿ ಇಗೊರ್ ಪೋಲಿಖಾ ಅವರು ನ್ಯೂಸ್-ಹೌಸ್ ಇಂಡಿಯಾ ಟುಡೆಗೆ ಪ್ರತಿಕ್ರಿಯಿಸುತ್ತ ಹೀಗೆ ಹೇಳಿದ್ದಾರೆ, “ಸದ್ಯದ ಮಾತುಕತೆಗಳ ಆಧಾರದ ಮೇಲೆ, ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಬೃಹತ್ ಪ್ರಮಾಣದಲ್ಲಿ ಸ್ಥಳಾಂತರಿಸಲು ನನಗೆ ಯಾವುದೇ ತಕ್ಷಣದ ಸೂಕ್ತ ಕಾರಣ ಕಾಣಿಸುತ್ತಿಲ್ಲ. ಅವರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಬೇಕು ಆದರೆ ಭಯಪಡಬಾರದು." ಎಂದಿದ್ದಾರೆ.

  ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಏಕೆ ಇದ್ದಾರೆ?

  ದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ವಿಶೇಷವಾಗಿ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಬಯಸುತ್ತಾರೆ. ಆದರೆ, ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಬೋಧನಾ ಶುಲ್ಕಗಳು ಉಕ್ರೇನ್‌ನಲ್ಲಿರುವ ವೈದ್ಯಕೀಯ ಕಾಲೇಜುಗಳ ಭೋದನಾ ಶುಲ್ಕಗಳಿಗಿಂತ ಹೆಚ್ಚು ದುಬಾರಿಯಾಗಿದೆ.

  ಅಲ್ಲದೆ ಉಕ್ರೇನ್ ನಲ್ಲೆ ಪಡೆದ ವೈದ್ಯಕೀಯ ಪದವಿಯನ್ನು ವಿಶ್ವ ಆರೋಗ್ಯ ಮಂಡಳಿ ಮಾನ್ಯ ಮಾಡುವುದರ ಜೊತೆಗೆ ಭಾರತೀಯ ವೈದ್ಯಕೀಯ ಮಂಡಳಿ, ಪಾಕಿಸ್ತಾನ ವೈದ್ಯಕೀಯ ಮತ್ತು ದಂತ ಕೌನ್ಸಿಲ್, ಯುರೋಪಿಯನ್ ಕೌನ್ಸಿಲ್ ಆಫ್ ಮೆಡಿಸಿನ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಜನರಲ್ ಮೆಡಿಕಲ್ ಕೌನ್ಸಿಲ್‌ ಗಳಂತಹ ಸಂಸ್ಥೆಗಳು ಮಾನ್ಯ ಮಾಡುತ್ತವೆ. ಈ ಕಾರಣಗಳೀಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡಲು ಬಯಸುತ್ತಾರೆ.

  ಭಾರತ-ಉಕ್ರೇನ್ ನಡುವೆ ವ್ಯಾಪಾರ ಸಂಬಂಧ

  ಹಾಗೆ ನೋಡಿದರೆ ಭಾರತ ಉಕ್ರೇನ್ ಜೊತೆ ಅತಿ ದೊಡ್ಡ ವ್ಯಾಪಾರ ಸಂಬಂಧ ಹೊಂದಿದೆ ಎಂದೇನಿಲ್ಲ. ಆದಾಗ್ಯೂ ಈ ಎರಡೂ ದೇಶಗಳ ಮಧ್ಯೆ ಗಮನಾರ್ಹವಾದ ವ್ಯಾಪಾರ ಸಂಬಂಧವಿದೆ. ಯುಎನ್ ಕಾಮ್ಟ್ರೇಡ್ ಮಾಹಿತಿಯ ಪ್ರಕಾರ, ಭಾರತವು 2020 ರಲ್ಲಿ ಉಕ್ರೇನ್‌ಗೆ 15 ನೇ ಅತಿದೊಡ್ಡ ರಫ್ತು ಮತ್ತು 2 ನೇ ಅತಿದೊಡ್ಡ ಆಮದು ಮಾರುಕಟ್ಟೆಯಾಗಿದೆ. ಭಾರತಕ್ಕೆ ಸಂಬಂಧಿಸಿದಂತೆ, ಉಕ್ರೇನ್ 23 ನೇ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿ 30 ನೇ ಅತಿದೊಡ್ಡ ಆಮದು ಮಾರುಕಟ್ಟೆಯಾಗಿ ಗುರುತಿಸಲ್ಪಟ್ಟಿದೆ.

  ಮೆಡಿಸಿನ್‌ಗಳಿಗೆ ಅಪಾರ ಬೇಡಿಕೆ

  ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸೂಚಿಸಿದಂತೆ, ರಾನ್‌ಬಾಕ್ಸಿ, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಸನ್ ಗ್ರೂಪ್ ಮುಂತಾದ ಭಾರತೀಯ ಔಷಧೀಯ ಕಂಪನಿಗಳು ಉಕ್ರೇನ್‌ನಲ್ಲಿ ಪ್ರತಿನಿಧಿ ಕಚೇರಿಗಳನ್ನು ಹೊಂದಿವೆ. ಇವೆಲ್ಲವೂ ಒಟ್ಟಾಗಿ ಸೇರಿಕೊಂಡು ಉಕ್ರೇನ್ ದೇಶದಲ್ಲಿ ಇಂಡಿಯನ್ ಫಾರ್ಮಾಸ್ಯುಟಿಕಲ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​(IPMA) ಅನ್ನು ಸ್ಥಾಪಿಸಿದ್ದಾರೆ.

  ಭಾರತವು, ಔಷಧೀಯ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಉಕ್ರೇನ್‌ನೊಂದಿಗೆ ಅನುಕೂಲಕರ ವ್ಯಾಪಾರ ಸಮತೋಲನವನ್ನು ಕಾಯ್ದುಕೊಂಡಿದೆ. ಯು.ಎನ್ ಕಾಮ್ಟ್ರೇಡ್ ಡೇಟಾದ ಪ್ರಕಾರ ಈ ಹಿಂದಿನ ರಫ್ತುಗಳು 158.1 ಮಿಲಿಯನ್ ಡಾಲರ್ ಮೊತ್ತವಾದರೆ 2020 ರಲ್ಲಿ ಆಮದು ಪ್ರಮಾಣ 3.8 ಮಿಲಿಯನ್ ಡಾಲರ್ ಮೊತ್ತವಾಗಿತು.

  ಒಟ್ಟಾರೆಯಾಗಿ, ಭಾರತವು 2020 ರಲ್ಲಿ ಉಕ್ರೇನ್‌ನೊಂದಿಗೆ 1.7 ಡಾಲರ್ ಶತಕೋಟಿ ಮೌಲ್ಯದ ವ್ಯಾಪಾರ ಕೊರತೆಯನ್ನು ದಾಖಲಿಸಿದೆ. ಈ ಸಂಖ್ಯೆಯು ರಫ್ತುಗಳನ್ನು ಒಳಗೊಂಡಿದ್ದು 438.3 ಮಿಲಿಯನ್ ಡಾಲರ್ ಮತ್ತು 2.1 ಶತಕೋಟಿ ಡಾಲರ್ ಮೌಲ್ಯದ ಆಮದುಗಳನ್ನು ಸಹ ಹೊಂದಿದೆ.

  ಇದನ್ನೂ ಓದಿ: Explained: 'ಕೋಟಿ' ಬಂದಿದೆ ಅಂತ ಕಾಲ್ ಮಾಡುವವರು ನಿಮ್ಮ ನೆಂಟರಲ್ಲ! ಇವ್ರು Cyber 'ಗಂಟು' ಕಳ್ಳರು!

  ಹಲವು ರೀತಿಯ ವಸ್ತುಗಳ ಆಮದು-ರಫ್ತು

  ಔಷಧೀಯ ಉತ್ಪನ್ನಗಳನ್ನು ಹೊರತುಪಡಿಸಿದರೆ, 2020 ರಲ್ಲಿ ಉಕ್ರೇನ್‌ಗೆ ಭಾರತದಿಂದ ರಫ್ತು ಮಾಡಲಾದ ಪ್ರಮುಖ ವಸ್ತುಗಳೆಂದರೆ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು, ಪ್ಲಾಸ್ಟಿಕ್‌ಗಳು ಮತ್ತು ಅದಕ್ಕೆ ಸಂಬಂಧಿತ ವಸ್ತುಗಳು, ಎಣ್ಣೆ ಬೀಜಗಳು, ಒಲೆಗೈಕ್ ಹಣ್ಣುಗಳು, ಧಾನ್ಯ, ಹಣ್ಣುಗಳು, ಬೀಜಗಳು ಮತ್ತು ರಾಸಾಯನಿಕ ಉತ್ಪನ್ನಗಳು.

  ಇದೇ ನಿಟ್ಟಿನಲ್ಲಿ ಉಕ್ರೇನ್‌ನಿಂದ ಭಾರತದ ಪ್ರಮುಖ ಆಮದುಗಳೆಂದರೆ ಪ್ರಾಣಿಗಳು, ತರಕಾರಿ ಕೊಬ್ಬುಗಳು ಮತ್ತು ಎಣ್ಣೆ, ಕ್ಲಿವೇಜ್ ಉತ್ಪನ್ನಗಳು - 2020 ರಲ್ಲಿ ಇದರ ಒಟ್ಟು ಮೌಲ್ಯ 1.6 ಬಿಲಿಯನ್ ಡಾಲರ್ ಆಗಿತ್ತು ಹಾಗೂ ಅದರಲ್ಲಿ 232.8 ಮಿಲಿಯನ್ ಡಾಲರ್ ಗಳಷ್ಟು ಮೌಲ್ಯದ ರಸಗೊಬ್ಬರಗಳಿದ್ದವು.

  ಯುದ್ಧದಿಂದಾಗಿ ಈಗ ಮುಂದುವರೆದ ಆತಂಕ

  ಸದ್ಯ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿದೆ. ಯುದ್ಧದಿಂದಾಗಿ ಉಕ್ರೇ್ನ್ ಹಾಗೂ ಭಾರತ, ರಷ್ಯಾ ಹಾಗೂ ಭಾರತದ ವ್ಯಾಪಾರಕ್ಕೆ ತೊಂದರೆಯಾಗಲಿದೆ. ಈಗಾಗಲೇ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ. ಯುದ್ಧದ ಪರಿಸ್ಥಿತಿ ಏನಾಗಲಿದೆ ಎಂಬುದರ ಮೇಲೆ ಮುಂದಿನದ್ದು ನಿರ್ಧಾರವಾಗಲಿದೆ.
  Published by:Annappa Achari
  First published: