Explained: ಏನಿದು ದೆಹಲಿಯಲ್ಲಿ ಉಚಿತ ಬಸ್ ಪಾಸ್ ಯೋಜನೆ? ಇದರಿಂದ ಸರ್ಕಾರಕ್ಕೆ ಎಷ್ಟು ಹೊರೆಯಾಗುತ್ತದೆ?

ಈ ಹಿಂದೆ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿದ್ದ ದೆಹಲಿ ಸರ್ಕಾರ, ಈಗ ಕಾರ್ಮಿಕರಿಗೂ ಉಚಿತ ಬಸ್ ಪಾಸ್ ನೀಡಿದೆ. ಹಾಗಾದರೆ ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ, ರಾಜ್ಯ ಸರ್ಕಾರಕ್ಕೆ ಎಷ್ಟು ವೆಚ್ಚವಾಗಬಹುದು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

ದೆಹಲಿ ಸರ್ಕಾರದ ಉಚಿತ ಬಸ್ ಪಾಸ್ ಯೋಜನೆ

ದೆಹಲಿ ಸರ್ಕಾರದ ಉಚಿತ ಬಸ್ ಪಾಸ್ ಯೋಜನೆ

  • Share this:
    ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಎಎಪಿ ಸರ್ಕಾರವು (AAP Government) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ (Delhi) ಎಲ್ಲಾ ಕಟ್ಟಡ ನಿರ್ಮಾಣ ಉದ್ಯೋಗಿಗಳಿಗೆ ಕಾರ್ಮಿಕರ ದಿನದ (Labor Day) ಉಡುಗೊರೆಯಾಗಿ 'ಉಚಿತ ಬಸ್ ಪಾಸ್' (Free Bus Pass) ಯೋಜನೆ ಪ್ರಾರಂಭಿಸಿದೆ. ಪ್ರಸ್ತಾವಿತ ಕಾರ್ಯಕ್ರಮವು ಕಟ್ಟಡ ನಿರ್ಮಾಣ ಉದ್ಯೋಗಿಗಳಿಗೆ ನಗರದೊಳಗೆ ಕೆಲಸ-ಸಂಬಂಧಿತ ಪ್ರಯಾಣಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಸರ್ಕಾರಿ ಬಸ್ಸುಗಳಲ್ಲಿ (Government Buss) ಮಹಿಳೆಯರಿಗೆ, ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ (Free Journey) ಅನುವು ಮಾಡಿ ಯೋಜನೆ ರೂಪಿಸಿದ್ದ ದೆಹಲಿ ಸರ್ಕಾರ ನೋಂದಾಯಿತ ಕಟ್ಟಡ ಕಾರ್ಮಿಕರಿಗೂ ಈ ಸೌಲಭ್ಯದ ಲಾಭವನ್ನು ವಿಸ್ತರಿಸಿದೆ. ದೆಹಲಿ ಸರ್ಕಾರ ಬುಧವಾರದಿಂದ ಈ ಯೋಜನೆಯನ್ನು ಆರಂಭಿಸಿದ್ದು, ಕಾರ್ಮಿಕರು ಡಿಟಿಸಿ ಮತ್ತು ಕ್ಲಸ್ಟರ್ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಪಡೆಯಲಿದ್ದಾರೆ.

    ಕಾರ್ಮಿಕರಿಗೆ ಉಚಿತ ಬಸ್ ಪಾಸ್

    ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಾರ್ಮಿಕರಿಗೆ "ಕಾರ್ಮಿಕ ದಿನದ ಕೊಡುಗೆ" ಎಂದು 'ಉಚಿತ ಬಸ್ ಪಾಸ್' ಯೋಜನೆಯನ್ನು ಘೋಷಿಸಿದರು. ಇದೇ ವೇಳೆ ಯೋಜನೆಯ ಫಲಾನುಭವಿಗಳಿಗೆ ಉಚಿತ ಬಸ್ ಪಾಸ್ ವಿತರಿಸಿದರು. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

    ದೆಹಲಿಯಲ್ಲಿ 11 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರು

    ದೆಹಲಿಯು 1.1 ಲಕ್ಷಕ್ಕೂ ಹೆಚ್ಚು ನಿರ್ಮಾಣ ಕಾರ್ಮಿಕರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ, ಅವರಲ್ಲಿ ಬಹಳಷ್ಟು ಜನರು ದೆಹಲಿ ಸರ್ಕಾರದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ದೆಹಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

    ಇದನ್ನೂ ಓದಿ: Explained: ಈ ಮಹಿಳೆ ತಿಂಗಳಿಗೆ 18 ಲಕ್ಷ ಲೀಟರ್ ನೀರು ಉಳಿಸುತ್ತಾರಂತೆ! ಏನು ಮಾಡುತ್ತಾರೆ ಇವರು? ನಾವು ನೀವು ಮಾಡಬೇಕಾಗಿರೋದೇನು?

    ಸಂಬಂಧಿತ ವೆಚ್ಚಗಳು ಮತ್ತು ಪ್ರಯಾಣದ ಸಮಯವನ್ನು ಗಮನಿಸಿದರೆ, ಅನೇಕ ಕಾರ್ಮಿಕರು ತಮ್ಮ ಮನೆಗಳಿಗೆ ಸಮೀಪವಿರುವ ಕೆಲಸವನ್ನು ಹುಡುಕಲು ಅಥವಾ ತಮ್ಮ ಕುಟುಂಬಗಳೊಂದಿಗೆ ಕೆಲವೊಮ್ಮೆ ನಿರ್ಮಾಣ ಸ್ಥಳಗಳಲ್ಲಿ ತಾತ್ಕಾಲಿಕ ವಸತಿಗಳಲ್ಲಿ ವಾಸಿಸಲು ನಿರ್ಬಂಧವನ್ನು ಹೊಂದಿರುತ್ತಾರೆ. ಹೀಗಾಗಿ ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ, ರಾಜ್ಯ ಸರ್ಕಾರಕ್ಕೆ ಎಷ್ಟು ವೆಚ್ಚವಾಗಬಹುದು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

    ಉಚಿತ ಬಸ್ ಪಾಸ್ ಯೋಜನೆ ಯಾರಿಗಾಗಿ?

    ವೆಲ್ಡರ್‌ಗಳು, ಮೇಸ್ತ್ರಿಗಳು, ಕಾರ್ಮಿಕರು, ಹಮಾಲಿಗಳು, ಪೇಂಟರ್‌ಗಳು, ಫಿಟ್ಟರ್‌ಗಳು, ಕಮ್ಮಾರರು, ಗಾರ್ಡ್‌ಗಳು, ಕಾಂಕ್ರೀಟ್ ಮಿಕ್ಸರ್‌ಗಳು, ಕ್ರೇನ್ ಮತ್ತು ಪಂಪ್ ಆಪರೇಟರ್‌ಗಳು, ಪಾಲಿಶಿಂಗ್ ಮತ್ತು ಟೈಲಿಂಗ್ ಕೆಲಸದಲ್ಲಿ ತೊಡಗಿರುವವರು ಸೇರಿದಂತೆ ಪ್ರತಿಯೊಬ್ಬ ಕಟ್ಟಡ ಕಾರ್ಮಿಕರಿಗೆ ಮಾನ್ಯವಾದ ಪಾಸ್ ಅನ್ನು ಈ ಯೋಜನೆ ಮೂಲಕ ಒದಗಿಸಲಾಗುವುದು.

    ಮೂರು ತಿಂಗಳವರೆಗೆ ಮಾನ್ಯತೆ

    ಪಾಸ್ ಮೂರು ತಿಂಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ನಂತರ ಇನ್ನೂ ಮೂರು ತಿಂಗಳವರೆಗೆ ನವೀಕರಿಸಬಹುದಾಗಿದೆ. ಸಿಸೋಡಿಯಾ ಕಾರ್ಮಿಕರ ದಿನದಂದು ಸುಮಾರು 100 ಕಾರ್ಮಿಕರಿಗೆ ಪಾಸ್ ವಿತರಿಸಿದ್ದಾರೆ.

    ನೋಂದಾಯಿತ ಕಾರ್ಮಿಕರಿಗೆ ಮಾತ್ರ ಸೌಲಭ್ಯ

    ದೆಹಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕರು DTCಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು ಅಥವಾ ನಗರದಾದ್ಯಂತ ಮಂಡಳಿಯು ಸ್ಥಾಪಿಸಿರುವ 34 ನೋಂದಣಿ ಬೂತ್‌ಗಳಲ್ಲಿ ಒಂದಕ್ಕೆ ಹೋಗಬೇಕು. ಅಲ್ಲಿ ಅವರು ಇ-ಪಾಸ್ ಅಥವಾ ಪೇಪರ್ ಪಾಸ್‌ಗಾಗಿ ಅರ್ಜಿ ಸಲ್ಲಿಸಬಹುದು, ಪಾಸ್‌ನ ಪ್ರಕಾರವನ್ನು ಅವಲಂಬಿಸಿ ಅದನ್ನು ಸ್ವೀಕರಿಸುವವರಿಗೆ 3-4 ದಿನಗಳಲ್ಲಿ ಅಥವಾ ಒಂದು ವಾರದೊಳಗೆ ಪಾಸನ್ನು ತಲುಪಿಸಲಾಗುತ್ತದೆ.

    ನಿರ್ಮಾಣ ಮಂಡಳಿಯ ಅಧಿಕಾರಿಗಳ ಪ್ರಕಾರ, ನೋಂದಾಯಿತ ಕಾರ್ಮಿಕರಲ್ಲಿ ಕೇವಲ 5-10 ಪ್ರತಿಶತದಷ್ಟು ಜನರು ಕೆಲಸ ಮಾಡಲು ಸ್ಥಳಗಳಿಗೆ ಹೋಗಲು ಬಸ್‌ಗಳನ್ನು ಬಳಸುತ್ತಾರೆ ಮತ್ತು ಮೆಟ್ರೋದಲ್ಲಿ 2-5 ಪ್ರತಿಶತಕ್ಕಿಂತ ಕಡಿಮೆ ಜನ ಪ್ರಯಾಣಿಸುತ್ತಾರೆ ಎಂದು ಹೇಳಿದ್ದಾರೆ.

    ಹತ್ತಿರದಲ್ಲೇ ಕೆಲಸ ಹುಡುಕುವ ಕಾರ್ಮಿಕರು

    “ಕಟ್ಟಡ ಕಾರ್ಮಿಕರು ದಿನಕ್ಕೆ 300 ರಿಂದ 600 ರೂ. ಸಂಪಾದನೆ ಮಾಡುತ್ತಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆಯವರು ಕೆಲಸಕ್ಕೆ ಸೈಕಲ್ ತುಳಿದುಕೊಂಡು ಬರುತ್ತಾರೆ ಅಥವಾ ಪ್ರಯಾಣ ವೆಚ್ಚ ಉಳಿಸುವ ಸಲುವಾಗಿ ವಾಸಿಸುವ ಸ್ಥಳದ ಹತ್ತಿರ ಕೆಲಸ ಹುಡುಕುತ್ತಾರೆ. ಅನೇಕ ಕಾರ್ಮಿಕರು ದೆಹಲಿಗೆ ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಿಂದ ವಲಸೆ ಬಂದಿದ್ದಾರೆ. ತಮ್ಮ ಅಲ್ಪ ಗಳಿಕೆಯನ್ನು ಪ್ರಯಾಣಕ್ಕೆ ಖರ್ಚು ಮಾಡುವುದನ್ನು ತಪ್ಪಿಸಲು ಅವರು ಹೆಚ್ಚಾಗಿ ನಿರ್ಮಾಣ ಸ್ಥಳಗಳ ಬಳಿ ಟೆಂಟ್‌ಗಳಲ್ಲಿ ವಾಸಿಸುತ್ತಾರೆ, ”ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    "ಉಚಿತ ಪಾಸ್ ಯೋಜನೆಯೊಂದಿಗೆ, ಹೆಚ್ಚಿನ ಕಾರ್ಮಿಕರು ಬಸ್‌ಗಳನ್ನು ಬಳಸುತ್ತಾರೆ ಎಂದು ನಾವು ಭಾವಿಸುತ್ತೇವೆ, ಇದು ನಗರದಾದ್ಯಂತ ಅವರ ಉದ್ಯೋಗಾವಕಾಶಗಳನ್ನು ವಿಸ್ತರಿಸುತ್ತದೆ" ಎಂದು ಅಧಿಕಾರಿ ಹೇಳಿದರು.

    ಯೋಜನೆಗೆ ಹಣವನ್ನು ಹೇಗೆ ನೀಡಲಾಗುತ್ತದೆ?

    ಅಸ್ತಿತ್ವದಲ್ಲಿರುವ ತ್ರೈಮಾಸಿಕ ಇ-ಪಾಸ್‌ನ ವೆಚ್ಚವು ನಾನ್-ಎಸಿ ಬಸ್‌ಗಳಿಗೆ ರೂ 2,280 ಮತ್ತು ಎಸಿ ಬಸ್‌ಗಳಿಗೆ ರೂ 2,850 ಎಂದು ಹಿರಿಯ ಡಿಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗ್ರಾಹಕರು ಕಾಗದದ ಪಾಸ್ ಅನ್ನು ತನ್ನ ಮನೆಗೆ ಡೆಲಿವರಿ ಮಾಡಲು ಕೇಳಿದರೆ, ರೂ 33 ವಿತರಣಾ ಶುಲ್ಕವನ್ನು ವಿಧಿಸಲಾಗುತ್ತದೆ ಎಂದಿದ್ದಾರೆ.

    ಉಚಿತ ಯೋಜನೆಯಿಂದ ಸರ್ಕಾರಕ್ಕೆ ಹೊರೆ

    ದೆಹಲಿಯಲ್ಲಿ 10 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ ಎಂದು ಸರ್ಕಾರದ ವರದಿಗಳು ಹೇಳುತ್ತವೆ. ಆದ್ದರಿಂದ, ಸೈದ್ಧಾಂತಿಕವಾಗಿ, ಈ ಎಲ್ಲಾ ಕಾರ್ಮಿಕರು ಯೋಜನೆಗೆ ಅರ್ಜಿ ಸಲ್ಲಿಸಿದರೆ, ಮೂರು ತಿಂಗಳವರೆಗೆ ಸರ್ಕಾರದ ಸಬ್ಸಿಡಿ ಬಿಲ್ 228-285 ಕೋಟಿ ರೂಪಾಯಿಗಳಾಗಿರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು. "ಇಡೀ ವರ್ಷಕ್ಕೆ, ಇದು ನಾಲ್ಕು ಪಟ್ಟು ಹೆಚ್ಚು ಮೊತ್ತವಾಗಿರುತ್ತದೆ." ಎಂದು ಸಹ ಅವರು ಹೇಳಿದ್ದಾರೆ.

    ಸರ್ಕಾರದಿಂದ ಹಣ ಹೊಂದಿಕೆ

    ಈ ಯೋಜನೆಯು ಸಂಪೂರ್ಣವಾಗಿ ದೆಹಲಿ ಸರ್ಕಾರದಿಂದ ಹಣವನ್ನು ಪಡೆಯುತ್ತದೆ ಮತ್ತು DTCಗೆ ಯಾವುದೇ ರೀತಿಯ ಹಣವನ್ನು ಭರಿಸುವಂತೆ ಸರ್ಕಾರ ಕೇಳುವುದಿಲ್ಲ, ಹೀಗಾಗಿ ಡಿಟಿಸಿಗೆ ಹಣದ ಯಾವುದೇ ಪರಿಣಾಮಗಳು ಬೀರುವುದಿಲ್ಲ.

    ಡಿಟಿಸಿಗೆ ಸರ್ಕಾರದಿಂದ ಅನುದಾನ

    “ಡಿಟಿಸಿ ಯಾವುದೇ ನಷ್ಟವನ್ನು ಎದುರಿಸುವುದಿಲ್ಲ. ಇದು ಮೊದಲ ಪ್ರಯಾಣ ಸಬ್ಸಿಡಿ ಯೋಜನೆ ಅಲ್ಲ. ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಇತರರಂತಹ ಗುಂಪುಗಳಿಗೆ ಈಗಾಗಲೇ ಹಲವಾರು ಸಬ್ಸಿಡಿಗಳು ಮತ್ತು ರಿಯಾಯಿತಿಗಳನ್ನು ಒದಗಿಸಲಾಗಿದೆ. ಡಿಟಿಸಿ ಸರ್ಕಾರದಿಂದ ಆದಾಯ ಪಡೆಯುತ್ತದೆ' ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.

    ಯಾವ ಇತರ ಗುಂಪುಗಳು ಈ ಸಬ್ಸಿಡಿಗಳನ್ನು ಪಡೆಯುತ್ತವೆ?

    2019 ರಲ್ಲಿ, ದೆಹಲಿ ಸರ್ಕಾರವು ಎಲ್ಲಾ ಮಹಿಳೆಯರಿಗೆ ಉಚಿತ ಪಾಸ್ಗಳನ್ನು ಘೋಷಿಸಿತು. ಮಾರ್ಚ್ 2022ರಲ್ಲಿ, ಡಿಟಿಸಿಯ ಮಹಿಳಾ ಸವಾರರ ಸಂಖ್ಯೆ 1.7 ಕೋಟಿಯಲ್ಲಿ ದಾಖಲಾಗಿದೆ ಮತ್ತು ಆ ತಿಂಗಳ ಗುಲಾಬಿ ಟಿಕೆಟ್‌ಗಳ ಮಾರಾಟದ ವಿರುದ್ಧ ನಿಗಮವು 17 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ.

    ವಾರಕ್ಕೆ 24 ಲಕ್ಷ ಮಂದಿ ಪ್ರಯಾಣ

    ಕೋವಿಡ್ -19 ಸಾಂಕ್ರಾಮಿಕ ರೋಗ, ಲಾಕ್‌ಡೌನ್‌ಗಳು ಮತ್ತು ಬಸ್‌ಗಳಲ್ಲಿನ ಪ್ರಯಾಣಿಕರ ಸಂಖ್ಯೆಯ ಮೇಲಿನ ನಿರ್ಬಂಧಗಳಿಂದ ಗುಲಾಬಿ ಟಿಕೆಟ್‌ಗಳ ಮಾರಾಟಕ್ಕೆ ಹೊಡೆತ ಬಿದ್ದಿದೆ ಮತ್ತು ಮಹಿಳಾ ಸವಾರರ ಸಂಖ್ಯೆಯು ಮಾರ್ಚ್‌ನಿಂದ ಸುಧಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, ವಾರದ ದಿನಗಳಲ್ಲಿ ಸುಮಾರು 24 ಲಕ್ಷ ಜನರು ಡಿಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ ಮತ್ತು ಶನಿವಾರ ಮತ್ತು ಭಾನುವಾರದಂದು 22.5-23 ಲಕ್ಷ ಜನರು ಪ್ರಯಾಣಿಸುತ್ತಾರೆ ಎಂದು ಇಲಾಖೆ ಹೇಳಿದೆ.

    ಇದನ್ನೂ ಓದಿ: Explained: ಸ್ವರ್ಣ'ಲಂಕೆ'ಯಲ್ಲಿ ನಿಲ್ಲದ ಸಂಕಷ್ಟ; ತುತ್ತು ಊಟಕ್ಕೂ ಪರದಾಟ-ಹಣಕ್ಕಾಗಿ ಹಾಹಾಕಾರ! ಮುಂದೇನು ಗತಿ?

    ವಿದ್ಯಾರ್ಥಿಗಳು, ಪತ್ರಕರ್ತರು, ಹಿರಿಯ ನಾಗರಿಕರು (60 ವರ್ಷಕ್ಕಿಂತ ಮೇಲ್ಪಟ್ಟವರು), ಅಂಧ ವ್ಯಕ್ತಿಗಳು ಮತ್ತು ವಿಧವೆಯರು ಮಾಸಿಕ ಬಸ್ ಪಾಸ್‌ಗಳಲ್ಲಿ ಶೇಕಡಾ 80 ರಿಂದ 85 ರಷ್ಟು ರಿಯಾಯಿತಿಯನ್ನು ಪಡೆಯುವ ಗುಂಪುಗಳಲ್ಲಿ ಸೇರಿದ್ದಾರೆ. ಉದಾಹರಣೆಗೆ, ಮಾಸಿಕ ವಿದ್ಯಾರ್ಥಿ ಎಲ್ಲಾ ಮಾರ್ಗದ ಬಸ್ ಪಾಸ್‌ಗೆ 150 ರೂ., ಸಾಮಾನ್ಯ AC ಬಸ್ ಪಾಸ್‌ಗೆ ತಿಂಗಳಿಗೆ 1,000 ರೂ. ಮತ್ತು ನಾನ್-ಎಸಿ ಪಾಸ್‌ಗೆ 850 ರೂ. ಆಗುತ್ತದೆ.
    Published by:Annappa Achari
    First published: