• Home
  • »
  • News
  • »
  • explained
  • »
  • Explained: ಕೇರಳದಲ್ಲಿ ಕೋವಿಡ್ - 19 ಗಾಯದ ಮೇಲೆ ನಿಫಾ ಬರೆ..! ಎರಡೂ ಸೋಂಕುಗಳನ್ನು ಒಟ್ಟೊಟ್ಟಿಗೆ ನಿಭಾಯಿಸೋದು ಹೇಗೆ?

Explained: ಕೇರಳದಲ್ಲಿ ಕೋವಿಡ್ - 19 ಗಾಯದ ಮೇಲೆ ನಿಫಾ ಬರೆ..! ಎರಡೂ ಸೋಂಕುಗಳನ್ನು ಒಟ್ಟೊಟ್ಟಿಗೆ ನಿಭಾಯಿಸೋದು ಹೇಗೆ?

ಕೋವಿಡ್ - ನಿಫಾ ವೈರಸ್

ಕೋವಿಡ್ - ನಿಫಾ ವೈರಸ್

Nipah and Covid together: ನಿಫಾ ವೈರಸ್‌ ಕೋವಿಡ್​ಗಿಂತ ಹೆಚ್ಚು ನಿಧಾನವಾಗಿ ಹರಡುತ್ತದೆ. ಆದರೂ, ಈ ವೈರಸ್‌ ಸೋಂಕಿತ ವ್ಯಕ್ತಿಯನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುವುದೇ ದೊಡ್ಡ ಆತಂಕ. ಮೊದಲ ಬಾರಿ ಸಿಲಿಗುರಿಯಲ್ಲಿ ಸೋಂಕು ಪತ್ತೆಯಾದಾಗ 66 ಜನ ದೃಢಪಟ್ಟ ಸೋಂಕಿತರ ಪೈಕಿ 45 ಜನರು ಮೃತಪಟ್ಟಿದ್ದರು.

ಮುಂದೆ ಓದಿ ...
  • Share this:

Covid 19 and Nipah: ಭಾರತದ ರಾಜ್ಯಗಳ ಪೈಕಿ, ಕೇರಳದಲ್ಲಿ ಸದ್ಯ ದೇಶದಲ್ಲೇ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ಕಂಡುಬರುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಕಂಡುಬರುತ್ತಿದ್ದರೂ, ದಕ್ಷಿಣ ಭಾರತದ ಈ ರಾಜ್ಯದಲ್ಲೇ ಪ್ರತಿನಿತ್ಯ 20 ಸಾವಿರ - 30 ಸಾವಿರ ಆಸುಪಾಸಿನಲ್ಲಿ ಪ್ರಕರಣಗಳು ಪತ್ತೆಯಾಗುತ್ತಿದೆ. ಈ ನಡುವೆ ಕೊರೊನಾ ಜತೆಗೆ ನಿಫಾ ವೈರಸ್‌ (Nipah Virus) ಕಾಣಿಸಿಕೊಂಡಿದೆ. ನಿಫಾ ವೈರಸ್ ಸೋಂಕಿಗೆ ಒಳಗಾದ 12 ವರ್ಷದ ಬಾಲಕ ಭಾನುವಾರ ಬೆಳಗ್ಗೆ ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತ ಬಾಲಕ ಎನ್‌ಸೆಫಲೈಟಿಸ್‌ ಮತ್ತು ಮಯೋಕಾರ್ಡಿಟಿಸ್ ಅಂದರೆ ಮೆದುಳು ಮತ್ತು ಹೃದಯ ಸ್ನಾಯುಗಳ ಉರಿಯೂತದ ಲಕ್ಷಣಗಳನ್ನು ಹೊಂದಿದ್ದ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಕೇರಳದಲ್ಲಿ (Nipah in Kerala) ಮತ್ತೆ ನಿಫಾ ವೈರಸ್‌ ಕಾಣಿಸಿಕೊಂಡಿರುವುದು, ಈ ದಿನಗಳಲ್ಲಿ ದೇಶದ ಎಲ್ಲಾ ಕೊರೊನಾದ (Covid Infection) ಹೊಸ ಪ್ರಕರಣಗಳಲ್ಲಿ ಸುಮಾರು 60% ರಷ್ಟು ಕೊಡುಗೆ ನೀಡಿದ ರಾಜ್ಯ ಕೋವಿಡ್ -19 ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವಾಗ ನಿಫಾ ವೈರಸ್ ಮತ್ತೆ ಕಾಣಿಸಿಕೊಂಡಿರುವುದು ಹೊಸ ಅಪಾಯ ತಂದೊಡ್ಡಿದೆ.


ಕೇರಳದಲ್ಲಿ, ಅಥವಾ ಭಾರತದ ಇತರೆಡೆಗಳಲ್ಲಿ ನಿಫಾ ವೈರಸ್ ಪತ್ತೆಯಾಗುತ್ತಿರುವುದು ಇದೇ ಮೊದಲಲ್ಲ. ಆದರೆ, ಇದು ಈ ಹಿಂದೆ ಹೆಚ್ಚಾಗಿ ಸ್ಥಳೀಯವಾಗಿ ಉಳಿದುಕೊಂಡಿದೆ ಮತ್ತು ತುಲನಾತ್ಮಕವಾಗಿ ತ್ವರಿತವಾಗಿ ನಿಯಂತ್ರಣಕ್ಕೊಳಪಟ್ಟಿದೆ.


ನಿಫಾ ವೈರಸ್‌ ಎಂದರೇನು..?


ಮಾನವರಲ್ಲಿ ನಿಫಾ ವೈರಸ್‌ ಮೊದಲು ಮಲೇಷ್ಯಾ (1998) ಮತ್ತು ಸಿಂಗಾಪುರ (1999) ದಿಂದ ವರದಿಯಾಗಿದೆ. ಮಲೇಷ್ಯಾದ ಹಳ್ಳಿಯಿಂದ ವೈರಸ್ ಈ ಹೆಸರು ಪಡೆದುಕೊಂಡಿದ್ದು, ಆ ಗ್ರಾಮದ ಸೋಂಕಿತ ಈ ವೈರಸ್‌ನಿಂದ ರೋಗಕ್ಕೊಳಗಾಗಿ ಮೃತಪಟ್ಟಿದ್ದರು. 1998-99ರಲ್ಲಿ ಇದನ್ನು ಮೊದಲು ಗುರುತಿಸಿದಾಗಿನಿಂದ, ನಿಫಾ ವೈರಸ್‌ ಅನೇಕ ಬಾರಿ ಕಾಣಿಸಿಕೊಂಡಿದೆ. ಮತ್ತು, ಈ ಎಲ್ಲ ಪ್ರಕರಣಗಳೂ ದಕ್ಷಿಣ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಪತ್ತೆಯಾಗಿವೆ. ಬಾಂಗ್ಲಾದೇಶದಲ್ಲಿ, 2001ರಿಂದ ಕನಿಷ್ಠ 10 ಬಾರಿ ಈ ವೈರಸ್‌ ಕಂಡುಬಂದಿದೆ. ಇನ್ನು, ಭಾರತದಲ್ಲಿ ಪಶ್ಚಿಮ ಬಂಗಾಳದಲ್ಲಿ 2001 ಮತ್ತು 2007ರಲ್ಲಿ ಕಂಡುಬಂದಿದ್ದರೆ, ಕೇರಳದಲ್ಲಿ 2018ರಲ್ಲಿ ಹಲವಾರು ಪ್ರಕರಣಗಳು ವರದಿಯಾಗಿದ್ದವು.


ನಿಫಾ ವೈರಸ್‌ ಹೇಗೆ ಹರಡುತ್ತದೆ..?
ಇದು ಝೂನೋಟಿಕ್‌ ವೈರಸ್, ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಪ್ರಸರಣವು ಮುಖ್ಯವಾಗಿ ಕಲುಷಿತ ಆಹಾರ ಸೇವನೆಯ ಮೂಲಕ ಸಂಭವಿಸುತ್ತದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಹರಡುವಿಕೆ ಕೂಡ ಸಾಧ್ಯವೆಂದು ಪರಿಗಣಿಸಲಾಗಿದೆ. ಈ ವೈರಸ್‌ ಫ್ರೂಟ್‌ ಬ್ಯಾಟ್‌ ಅಥವಾ ಬಾವಲಿಯಲ್ಲಿ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ ಹಾರುವ ನರಿ ಎಂದೂ ಕರೆಯಲಾಗುತ್ತದೆ. ಹಣ್ಣಿನ ಬಾವಲಿಗಳು ಈ ವೈರಸ್ ಅನ್ನು ಹಂದಿಗಳಂತಹ ಇತರ ಪ್ರಾಣಿಗಳಿಗೆ ಮತ್ತು ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕುರಿಗಳಿಗೆ ಹರಡುತ್ತವೆ.


ಮಾನವರು ಮುಖ್ಯವಾಗಿ ಈ ಪ್ರಾಣಿಗಳ ನೇರ ಸಂಪರ್ಕದ ಮೂಲಕ ಅಥವಾ ಈ ಸೋಂಕಿತ ಪ್ರಾಣಿಗಳ ಜೊಲ್ಲು ಅಥವಾ ಮೂತ್ರದಿಂದ ಕಲುಷಿತಗೊಂಡ ಆಹಾರ ಸೇವನೆಯಿಂದ ಸೋಂಕಿಗೆ ಒಳಗಾಗುತ್ತಾರೆ. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವಿಕೆಯನ್ನು ಸಂಪೂರ್ಣವಾಗಿ ದೃಢಪಟ್ಟಿಲ್ಲವಾದರೂ, ಈ ವರ್ಷದ ಮಾರ್ಚ್‌ನಲ್ಲಿ ಇಬ್ಬರು ಬಾಂಗ್ಲಾದೇಶಿ ಸಂಶೋಧಕರು ಪ್ರಕಟಿಸಿದ ಇತ್ತೀಚಿನ ಅಧ್ಯಯನದ ಪ್ರಕಾರ ಬಾಂಗ್ಲಾದೇಶ, ಫಿಲಿಪೈನ್ಸ್ ಮತ್ತು ಭಾರತದಲ್ಲಿ ಈ ಹಿಂದೆ ಪತ್ತೆಯಾದ ಪ್ರಕರಣಗಳಲ್ಲಿ ಸೋಂಕಿತ ವ್ಯಕ್ತಿ ಉಸಿರಾಟ ನಡೆಸುವಾಗ ಹೊರಬಂದ ಜೊಲ್ಲಿನ ಹನಿಗಳಿಂದ ವೈರಸ್ ಹರಡಬಹುದು ಎಂದು ಸೂಚಿಸಿದೆ. ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಜನರು, ಮುಖ್ಯವಾಗಿ ಆಸ್ಪತ್ರೆ ಸಿಬ್ಬಂದಿ ಮತ್ತು ಆರೈಕೆದಾರರು, ರೋಗಕ್ಕೆ ತುತ್ತಾಗಿದ್ದ ಪ್ರಕರಣಗಳು ಈ ಹಿಂದೆ ವರದಿಯಾಗಿವೆ.

ಇದು ಕೋವಿಡ್ -19ನಂತೆ ವೇಗವಾಗಿ ಹರಡುತ್ತದೆಯೇ..?
ನಿಫಾ ವೈರಸ್‌ ಕೋವಿಡ್​ಗಿಂತ ಹೆಚ್ಚು ನಿಧಾನವಾಗಿ ಹರಡುತ್ತದೆ. ಆದರೂ, ಈ ವೈರಸ್‌ ಸೋಂಕಿತ ವ್ಯಕ್ತಿಯನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುವುದೇ ದೊಡ್ಡ ಆತಂಕ. ಮೊದಲ ಬಾರಿ ಸಿಲಿಗುರಿಯಲ್ಲಿ ಸೋಂಕು ಪತ್ತೆಯಾದಾಗ 66 ಜನ ದೃಢಪಟ್ಟ ಸೋಂಕಿತರ ಪೈಕಿ 45 ಜನರು ಮೃತಪಟ್ಟಿದ್ದರು. ಅಂದರೆ ಶೇ. 68ರಷ್ಟು ಮರಣ ಪ್ರಮಾಣ ವರದಿಯಾಗಿದೆ. ನಂತರ, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ, 2007ರಲ್ಲಿ ವೈರಾಣು ಕಂಡುಬಂದಾಗ ಎಲ್ಲಾ ಐವರು ಸೋಂಕಿತರು ಮೃತಪಟ್ಟಿದ್ದರು.


ಅದೇ ರೀತಿ, ಕೇರಳದಲ್ಲಿ 2018ರಲ್ಲಿ ವೈರಸ್ ಪತ್ತೆಯಾದಾಗ 18 ದೃಢಪಟ್ಟ ರೋಗಿಗಳಲ್ಲಿ 17 ಸೋಂಕಿತರು ಮೃತಪಟ್ಟಿದ್ದರು. ನಂತರ, 2019ರಲ್ಲಿ, ಎರ್ನಾಕುಲಂನಲ್ಲಿ ನಿಫಾ ವೈರಸ್ ಸೋಂಕಿನ ಒಂದು ಪ್ರಕರಣ ಪತ್ತೆಯಾಯಿತಾದರೂ, ತಕ್ಷಣದ ಪ್ರತಿಕ್ರಿಯೆಯು ಯಾವುದೇ ಹೆಚ್ಚಿನ ಹರಡುವಿಕೆಯನ್ನು ನಿರ್ಬಂಧಿಸಿತು. ಹಾಗೂ, ಆ ಸೋಂಕಿತ ವ್ಯಕ್ತಿಯೂ ಬದುಕುಳಿದರು.


1999ರಲ್ಲಿ ಮಲೇಷ್ಯಾದಲ್ಲಿ ಒಟ್ಟು 265 ಜನರು ಸೋಂಕಿಗೆ ಒಳಗಾಗಿದ್ದರು. ಈ ಪೈಕಿ 105 ಮಂದಿ ಮೃತಪಟ್ಟಿದ್ದರು ಎಂದು ಏಪ್ರಿಲ್ 2020ರ ಸಂಚಿಕೆಯಲ್ಲಿ ವೈರಸಸ್‌ (Viruses) ಜರ್ನಲ್‌ನಲ್ಲಿ ಪ್ರಕಟವಾಗಿದ್ದ 'ನಿಫಾ ವೈರಸ್‌: ಹಿಂದಿನ ಔಟ್‌ಬ್ರೇಕ್‌ ಮತ್ತು ಭವಿಷ್ಯದ ನಿಯಂತ್ರಣ' ಎಂಬ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಪ್ರಕಟಿಸಿರುವ ಅಧ್ಯಯನದಲ್ಲಿ ಮಾಹಿತಿ ನೀಡಲಾಗಿದೆ.

ನಿಫಾ ವೈರಸ್‌ಗೆ ಹೋಲಿಸಿದರೆ, ಕೋವಿಡ್ -19 ಸಾಂಕ್ರಾಮಿಕದ ಸಾವಿನ ಪ್ರಮಾಣವು ಶೇಕಡಾ ಒಂದರಷ್ಟು ಇರುತ್ತದೆ ಎಂದು ಅಂದಾಜಿಸಲಾಗಿದೆ.


ಕೇರಳ ಈ ಹಿಂದೆ ನಿಫಾ ವೈರಸ್‌ ಅನ್ನು ಎಷ್ಟು ಚೆನ್ನಾಗಿ ನಿಭಾಯಿಸಿದೆ..?
2018ರಲ್ಲಿ, ಕೇರಳವು ಅಂತಹ ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿರುವ ರೋಗವನ್ನು ನಿಭಾಯಿಸುವ ಹಿಂದಿನ ಅನುಭವವನ್ನು ಹೊಂದಿರಲಿಲ್ಲ. ಈ ಹಿನ್ನೆಲೆ ರಾಜ್ಯವು ಉಪ-ಸಹಾರನ್ ಆಫ್ರಿಕಾದಲ್ಲಿ ಮುಖ್ಯವಾಗಿ ವರದಿಯಾದ ಎಬೋಲಾ ವೈರಸ್ ರೋಗದ ಪ್ರೋಟೋಕಾಲ್ ಅನುಸರಿಸಿತು.


ಜೂನ್ 2018ರಲ್ಲಿ ಒಂದು ಹಂತದಲ್ಲಿ ಕೋಯಿಕ್ಕೋಡ್ ಮತ್ತು ಹತ್ತಿರದ ಮಲಪ್ಪುರಂ ಜಿಲ್ಲೆಗಳಲ್ಲಿ ಸುಮಾರು 3,000 ಜನರು ಕ್ವಾರಂಟೈನ್‌ ಅಥವಾ ಸಂಪರ್ಕ ತಡೆಯಲ್ಲಿದ್ದರು. ಶಂಕಿತ ನಿಫಾ ಪ್ರಕರಣಗಳೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕ ಹೊಂದಿದ್ದ ಎಲ್ಲ ವ್ಯಕ್ತಿಗಳನ್ನು ಅಬ್ಸರ್ವೇಷನ್‌ನಲ್ಲಿಡಲಾಗಿತ್ತು.


ಕೇರಳದಲ್ಲಿ 2019ರಲ್ಲಿ ಮತ್ತೆ ನಿಫಾ ವರದಿಯಾದಾಗ, ಪರಿಸ್ಥಿತಿಯನ್ನು ನಿಭಾಯಿಸಲು ಆರೋಗ್ಯ ಇಲಾಖೆಯು ಕಳೆದ ವರ್ಷದ ಅನುಭವದಿಂದ ಪಾಠ ಕಲಿತು ಬೇರೆ ರೀತಿಯ ಪ್ರೋಟೋಕಾಲ್‌ ಅನ್ನು ಹೊಂದಿತ್ತು. 2019ರಲ್ಲಿ, ಎರ್ನಾಕುಲಂ ಜಿಲ್ಲೆಯಲ್ಲಿ ಕೇವಲ ಒಂದು ಪ್ರಕರಣ ವರದಿಯಾಗಿತ್ತು. 2020ರಲ್ಲಿ, ಈ ರಾಜ್ಯದಲ್ಲಿ ಯಾವುದೇ ನಿಫಾ ಪ್ರಕರಣ ವರದಿಯಾಗಲಿಲ್ಲ. ಆದರೂ, ಪ್ರೋಟೋಕಾಲ್ ಅನ್ನು ನವೀಕರಿಸಲಾಯಿತು.


ಕೋವಿಡ್ -19 ಜೊತೆಗೆ ಕೇರಳವು ಹೊಸ ನಿಫಾ ಆತಂಕವನ್ನು ಹೇಗೆ ನಿರ್ವಹಿಸುತ್ತಿದೆ..?
ನಿಫಾ ವೈರಸ್‌ ಪೀಡಿತ ಬಾಲಕ ಚಂಗರೋತ್‌ನಿಂದ 50 ಕಿಮೀ ದೂರದಲ್ಲಿರುವ ಚತಮಂಗಲಂ ಗ್ರಾಮದಿಂದ ಬಂದವನು. ಈ ಹಿನ್ನೆಲೆ ಮೃತ ಬಾಲಕ ವಾಸಿಸುತ್ತಿದ್ದ ಕೋಯಿಕ್ಕೋಡ್‌ನ ಚತಮಂಗಲಂ ಪಂಚಾಯತ್ ವ್ಯಾಪ್ತಿಯ ಮೂರು ವಾರ್ಡ್‌ಗಳನ್ನು ಭಾನುವಾರ ಬೆಳಗ್ಗೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಹಾಗೂ ಸೂಕ್ಷ್ಮ ಮಟ್ಟದ ನಿರ್ಬಂಧಗಳು ಜಾರಿಗೆ ಬಂದಿವೆ.


ಈ ಮೂರು ವಾರ್ಡ್‌ಗಳಿಗೆ ಹೋಗಲು ಹಾಗೂ ಆ ವಾರ್ಡ್‌ಗಳಿಂದ ಇತರೆಡೆಗೆ ಪ್ರಯಾಣ ಮಾಡುವುದನ್ನು ನಿಷೇಧಿಸಲಾಗಿದೆ. ಮೃತ ಬಾಲಕನ ಗ್ರಾಮಕ್ಕೆ ಹೋಗುವ ಎಲ್ಲಾ ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಮತ್ತು ಚೆಕ್‌ಪೋಸ್ಟ್‌ಗಳನ್ನು ಹಾಕಿದ್ದಾರೆ.


ಕೋವಿಡ್ -19 ಪ್ರೋಟೋಕಾಲ್‌ಗಳು ಈಗಾಗಲೇ ಜಾರಿಯಲ್ಲಿರುವುದರಿಂದ, ವೈರಲ್ ರೋಗಗಳ ಹರಡುವಿಕೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗಿದೆ. ವಿಶೇಷವಾಗಿ ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆ ಸಿಬ್ಬಂದಿ ಪಿಪಿಇ ಕಿಟ್‌ಗಳು, ಕೈಗವಸುಗಳು ಮತ್ತು ಮಾಸ್ಕ್‌ಗಳನ್ನು ನಿರಂತರವಾಗಿ ಬಳಕೆ ಮಾಡುತ್ತಿರುವುದರಿಂದ ನಿಫಾ ವೈರಸ್‌ ಹರಡುವಿಕೆಗೆ ಕಡಿಮೆ ಅವಕಾಶ ಇರುವ ಸಾಧ್ಯತೆಯಿದೆ.


ನಿಫಾ ಹರಡುವ ಬಗ್ಗೆ ಇತರ ರಾಜ್ಯಗಳು ಚಿಂತಿಸಬೇಕೇ..?
ಇಲ್ಲಿಯವರೆಗೆ, ಕೋವಿಡ್ -19 ಸಾಂಕ್ರಾಮಿಕಕ್ಕೆ ಹೋಲಿಸಿದರೆ ನಿಫಾ ವೈರಸ್‌ನ ಎಲ್ಲಾ ಹರಡುವಿಕೆಗಳು ಸ್ಥಳೀಯವಾಗಿದೆ ಮತ್ತು ತ್ವರಿತವಾಗಿ ನಿರ್ಬಂಧಕ್ಕೊಳಗಾಗಿವೆ. ಮಲೇಷ್ಯಾದಲ್ಲಿ ಮೊದಲ ಪ್ರಕರಣ ಸೆಪ್ಟೆಂಬರ್ 1998ರಲ್ಲಿ ಪತ್ತೆಯಾಯಿತು. ಆದರೂ ಇದು ಮುಂದಿನ ವರ್ಷ ಮಾರ್ಚ್ ವೇಳೆಗೆ ಮಾತ್ರ ವಿಜ್ಞಾನಿಗಳು ತಾವು ಎದುರಿಸುತ್ತಿರುವ ಹೊಸ ವೈರಸ್ ಎಂದು ಖಚಿತಪಡಿಸಲು ಸಾಧ್ಯವಾಯಿತು. ಮೇ ವೇಳೆಗೆ ಅದನ್ನು ನಿರ್ಬಂಧಿಸಲಾಯ್ತು. ಬಾಂಗ್ಲಾದೇಶದಲ್ಲೂ ನಿಫಾ ಹೆಚ್ಚು ಮರುಕಳಿಸುತ್ತಿದ್ದರೂ, ಒಂದೆರಡು ತಿಂಗಳ ನಂತರ ಪ್ರಸರಣಗಳು ಸ್ಥಗಿತಗೊಂಡಿವೆ.


ತುಲನಾತ್ಮಕವಾಗಿ ತ್ವರಿತವಾಗಿ ಅಂತ್ಯಗೊಳ್ಳಲು ಒಂದು ಪ್ರಮುಖ ಕಾರಣವೆಂದರೆ ನಿಫಾ ವೈರಸ್‌ SARS-CoV-2 ಗಿಂತ ಕಡಿಮೆ ಸಾಂಕ್ರಾಮಿಕವಾಗಿದೆ. ಹಾಗೂ, SARS-CoV-2 ನಂತೆ ಮನುಷ್ಯರಿಂದ ಮನುಷ್ಯರಿಗೆ ಹರಡುವಿಕೆಯು ಅಷ್ಟು ಸುಲಭವಲ್ಲ ಅಥವಾ ವೇಗವಾಗಿಲ್ಲ.

ಬಾಂಗ್ಲಾದೇಶದ ಸಂಶೋಧಕರಾದ ನೋಖಾಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಪಿ. ದೇವನಾಥ್ ಮತ್ತು ಚಿತ್ತಗಾಂಗ್ ವಿಶ್ವವಿದ್ಯಾಲಯದ ಎಚ್.ಎಂ.ಎ.ಎ. ಮಸೂದ್ ಈ ವರ್ಷ ಪ್ರಕಟಿಸಿದ ಅಧ್ಯಯನವು, ನಿಫಾ ವೈರಸ್‌ನ ಹಿಂದಿನ ಔಟ್‌ಬ್ರೇಕ್‌ನ ಸಂತಾನೋತ್ಪತ್ತಿ ಸಂಖ್ಯೆ (reproductive number) (R0) ಸುಮಾರು 0.48 ಎಂದು ಗುರುತಿಸಿದೆ. ಜನಸಂಖ್ಯೆಯಲ್ಲಿ ವೈರಸ್ ಎಷ್ಟು ಬೇಗನೆ ಹರಡುತ್ತದೆ ಎನ್ನುವುದಕ್ಕೆ ಆರ್-ವ್ಯಾಲ್ಯೂ ಒಂದು ಅಳತೆ. ಒಂದಕ್ಕಿಂತ ಕಡಿಮೆ ಮೌಲ್ಯ ಎಂದರೆ ಒಬ್ಬರಿಗಿಂತ ಕಡಿಮೆ ವ್ಯಕ್ತಿ ಈಗಾಗಲೇ ಸೋಂಕಿತ ವ್ಯಕ್ತಿಯಿಂದ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದರ್ಥ. ಇಂತಹ ಸನ್ನಿವೇಶದಲ್ಲಿ, ತುಲನಾತ್ಮಕವಾಗಿ ತ್ವರಿತವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.


ನಿಫಾ ಪ್ರಕರಣಗಳು ಮುಖ್ಯವಾಗಿ ಜನನಿಬಿಡ ಗ್ರಾಮಗಳಲ್ಲಿ ಸಂಭವಿಸಿರುವುದರಿಂದ, ವೈರಸ್ ಅನೇಕ ವ್ಯಕ್ತಿಗಳಿಗೆ ಹರಡುವ ಸಾಧ್ಯತೆ ಕಡಿಮೆ. ಇದಲ್ಲದೆ, ಅತಿ ಹೆಚ್ಚಿನ ಸಾವಿನ ಪ್ರಮಾಣಗಳು ಕಡಿಮೆ ಪ್ರಸರಣಕ್ಕೆ ಕೊಡುಗೆ ನೀಡುತ್ತವೆ ಎಂದೂ ಅಧ್ಯಯನವು ಗಮನಿಸಿದೆ.

Published by:Soumya KN
First published: