• Home
  • »
  • News
  • »
  • explained
  • »
  • Explained: ಕೊರೋನಾ ರೂಪಾಂತರಿ XBB.1.5 ಬಗ್ಗೆ ತಜ್ಞರ ಕಳವಳ- ಇದು ಎಷ್ಟು ಅಪಾಯಕಾರಿ?

Explained: ಕೊರೋನಾ ರೂಪಾಂತರಿ XBB.1.5 ಬಗ್ಗೆ ತಜ್ಞರ ಕಳವಳ- ಇದು ಎಷ್ಟು ಅಪಾಯಕಾರಿ?

ಕೊರೋನಾ

ಕೊರೋನಾ

ಈ ಲೇಖನದಲ್ಲಿ ಈ ರೂಪಾಂತರ ಕೋವಿಡ್ XBB.1.5 ಕುರಿತು ಸಂಕ್ಷಿಪ್ತ ಮಾಹಿತಿ ನೀಡುತ್ತಿದ್ದು ರೋಗ ಲಕ್ಷಣ, ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸುತ್ತಿದ್ದೇವೆ.

  • Share this:

ಕೋವಿಡ್ ಪ್ರಕರಣ(COVID) ಅಂತ್ಯಗೊಂಡಿತು ಎಂದು ನಿಟ್ಟುಸಿರು ಬಿಡುವ ಸಮಯದಲ್ಲೇ ಮತ್ತೊಮ್ಮೆ ಸಾಂಕ್ರಾಮಿಕ ವೈರಸ್(Virus) ವಿಶ್ವದೆಲ್ಲೆಡೆ ತನ್ನ ಇರುವಿಕೆಯನ್ನು ಪ್ರಸ್ತುತಪಡಿಸುತ್ತಿದೆ. ಎರಡು ವರ್ಷಗಳಿಗಿಂತ ಅಧಿಕ ಕಾಲ ಪ್ರಪಂಚವನ್ನೇ ತನ್ನ ಕಪಿಮುಷ್ಟಿಯಲ್ಲಿಟ್ಟು ಆಟವಾಡಿಸಿದ ಕೊರೋನಾ ವೈರಸ್(Corona Virus) ಇನ್ನೂ ತನ್ನ ದಾಂಧಲೆ ನಿಲ್ಲಿಸಿಲ್ಲ. ಬೇರೆ ಬೇರೆ ರೂಪಾಂತರಿ ಹಾಗೂ ಉಪರೂಪಾಂತರಿಯಾಗಿ ಮಾರ್ಪಾಡಾಗುತ್ತಿರುವ ಕೊರೋನಾ ದಿನೇ ದಿನೇ ಬಲಗೊಳ್ಳುತ್ತಲೇ ಇದೆ.


ಅಮೆರಿಕಾ ಚೀನಾದಲ್ಲಿ ರೂಪಾಂತರಗಳ ಕಾಟ


ಚೀನಾದಲ್ಲಿ ಹಾಹಾಕಾರ ಎಬ್ಬಿಸಿರುವ ಕೊರೋನಾದ BF.7 ರೂಪಾಂತರ ದಾಂಧಲೆ ಎಬ್ಬಿಸಿದ್ದರೆ ಅಮೆರಿಕಾದಲ್ಲಿ XBB.1.5 ರೂಪಾಂತರದ ಕಾಟವೇ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಗೆ ಪ್ರಮುಖ ಎಂದೆನಿಸಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ತಿಳಿಸಿರುವಂತೆ XBB.1.5 ರೂಪಾಂತರವು ಅಮೆರಿಕಾದಲ್ಲಿ 40% ಪ್ರಕರಣಗಳಿಗೆ ಕಾರಣವಾಗಿದೆ ಎಂದಾಗಿದೆ.


XBB.1.5 ಕುರಿತು ಸಾಂಕ್ರಾಮಿಕ ತಜ್ಞರು ಕಳವಳ ವ್ಯಕ್ತಪಡಿಸಿರುವುದೇಕೆ?


ಚೀನಾದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ ಆದರೆ XBB ಎರಡು ವಿಭಿನ್ನ ಓಮಿಕ್ರಾನ್ BA.2 ಸಬ್‌ವೇರಿಯಂಟ್‌ಗಳ ರೂಪಾಂತರವಾಗಿರುವುದರಿಂದ ಸಾಂಕ್ರಾಮಿಕ ರೋಗ ತಜ್ಞರು XBB.1.5 ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಲ್ಲಿ ಈ ಲೇಖನದಲ್ಲಿ ನಾವು ನಿಮಗೆ Covid XBB 1.5 ರೂಪಾಂತರ, ಹೊಸ ರೂಪಾಂತರದ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆಗಳ ಕುರಿತು ತಿಳಿಸುತ್ತಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಕೋವಿಡ್ ರೂಪಾಂತರದಿಂದ ರಕ್ಷಣೆ ಪಡೆದುಕೊಳ್ಳಬಹುದಾಗಿದೆ.


ಓಮಿಕ್ರಾನ್ BA.2 ಸಬ್‌ವೇರಿಯೇಂಟ್


ಚೀನಾದಲ್ಲಿ ಹಾಹಾಕಾವೆಬ್ಬಿಸಿರುವ ಕೋವಿಡ್ ಪ್ರಕರಣಗಳ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದು ಜೊತೆಗೆ ಸೋಂಕು ತಜ್ಞರು XBB ಎರಡು ವಿಭಿನ್ನ ಓಮಿಕ್ರಾನ್ BA.2 ಸಬ್‌ವೇರಿಯೇಂಟ್ ಆಗಿರುವುದರಿಂದ ಸಾಂಕ್ರಾಮಿಕ ರೋಗ ತಜ್ಞರು XBB.1.5 ಬಗ್ಗೆ ಕಳವಳ ಸೂಚಿಸಿದ್ದಾರೆ. ಈ ಲೇಖನದಲ್ಲಿ ಈ ರೂಪಾಂತರ ಕೋವಿಡ್ XBB.1.5 ಕುರಿತು ಸಂಕ್ಷಿಪ್ತ ಮಾಹಿತಿ ನೀಡುತ್ತಿದ್ದು ರೋಗ ಲಕ್ಷಣ, ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸುತ್ತಿದ್ದೇವೆ.


XBB.1.5 ಇತರ ರೂಪಾಂತರಗಳಿಗಿಂತ ಭಿನ್ನ


XBB ಎಂಬುದು ಓಮಿಕ್ರಾನ್ BA.2 ಸಬ್‌ವೇರಿಯೇಂಟ್‌ಗಳ ರೂಪಾಂತರವಾಗಿದ್ದು ವಿಜ್ಞಾನಿಗಳು ಹೊಸ ಸಬ್‌ವೇರಿಯೇಂಟ್ ಅಧ್ಯಯನ ಮಾಡುವ ಆರಂಭಿಕ ಹಂತಗಳಲ್ಲಿದ್ದಾರೆ ಎಂದು ತಿಳಿಸಿದ್ದಾರೆ. XBB.1.5 ಇತರ ರೂಪಾಂತರಗಳಿಗಿಂತ ಭಿನ್ನವಾಗಿದ್ದು ಜೀವಕೋಶಗಳನ್ನು ಹಿಡಿತದಲ್ಲಿಡುವ ಹೆಚ್ಚುವರಿ ರೂಪಾಂತರವನ್ನು ಒಳಗೊಂಡಿರುವಂತೆ ಕಂಡುಬರುತ್ತಿದೆ. ಹೆಚ್ಚು ಸಾಂಕ್ರಾಮಿಕವಾಗಿ ಕ್ಷಿಪ್ರವಾಗಿ ದೇಹವನ್ನು ಪ್ರವೇಶಿಸುವ ಸಾಮರ್ಥ್ಯವನ್ನು ಈ ರೂಪಾಂತರ ಹೊಂದಿದ್ದು ಗಂಭೀರ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವಷ್ಟು ಸಮರ್ಥವಾಗಿದೆ.


ಕೋವಿಡ್ XBB 1.5 ಆಗಮನ ಹೇಗೆ ಉಂಟಾಗಿದೆ?


XBB.1.5 ಅನ್ನು ಕೆಲವು ವಾರಗಳ ಹಿಂದೆ JP ವೇಲ್ಯಾಂಡ್‌ನಲ್ಲಿ ಮೊದಲು ಗುರುತಿಸಲಾಯಿತು. ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವಂತೆ XBB ಮತ್ತು ಇತರ ಮೂರು ಸಬ್‌ವೇರಿಯೇಂಟ್‌ಗಳು ಲಸಿಕೆ ಹಾಕಿದ ಅಥವಾ ಕೋವಿಡ್ ಸೋಂಕನ್ನು ಹೊಂದಿರುವ ಜನರ ರಕ್ತದ ಮಾದರಿಗಳಲ್ಲಿನ ಪ್ರತಿಕಾಯಗಳಿಗೆ ಸಂಪೂರ್ಣವಾಗಿ ನಿರೋಧಕವಾಗಿದೆ ಎಂಬ ಆಘಾತಕಾರಿ ಅಂಶವನ್ನು ತಿಳಿಸಿದೆ.


ವಿಶ್ವ ಆರೋಗ್ಯ ಸಂಸ್ಥೆ ಅಕ್ಟೋಬರ್‌ನಲ್ಲಿ ತಿಳಿಸಿರುವ ಪ್ರಕಾರ XBB ಸಬ್‌ವೇರಿಯಂಟ್‌ನ ಜಾಗತಿಕ ಹರಡುವಿಕೆಯು 1.3%ವಾಗಿದ್ದು ಮತ್ತು 35 ದೇಶಗಳಲ್ಲಿ ಕಂಡುಬಂದಿದೆ ಎಂದು ತಿಳಿಸಿದೆ.


ಇದನ್ನೂ ಓದಿ: Explained: ಮಾಸ್ಕ್, ಸಾಮಾಜಿಕ ಅಂತರ, ಲಾಕ್​ಡೌನ್, WFH: ಮರಳಿ ಬರುತ್ತಾ ಆ ದಿನಗಳು, ಚಿಂತೆ ಹೆಚ್ಚಿಸಿದ ಕೊರೋನಾದ ಹೊಸ ತಳಿ!


ಕೋವಿಡ್ ವೇರಿಯಂಟ್ XBB.1.5 ಎಷ್ಟು ಅಪಾಯಕಾರಿ?


ಒಂದೆಡೆ ಭಾರತದಲ್ಲಿ ಕೊರೋನಾ ಬಿಕ್ಕಟ್ಟು ಇನ್ನೂ ಇದೆ ಇದರ ನಡುವೆ ಓಮಿಕ್ರಾನ್ ರೂಪಾಂತರ XBB.1.5 ನ ಆಗಮನದ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಹಾಗೂ ರೂಪಾಂತರ ಕೆಲವೆಡೆಗಳಲ್ಲಿ ಪತ್ತೆಯಾಗಿದೆ ಎಂಬುದೂ ವರದಿಯಾಗಿದೆ. ಇಲ್ಲಿಯವರೆಗೆ ಚೀನಾದಲ್ಲಿ, ಓಮಿಕ್ರಾನ್ನ ಸಬ್-ವೇರಿಯಂಟ್ BF.7 ತೊಂದರೆಗಳನ್ನು ಹೆಚ್ಚಿಸಿದ್ದರೆ, ಅಮೇರಿಕಾದಲ್ಲಿ, XBB.1.5 ರೂಪಾಂತರದಿಂದಾಗಿ ಸಂಪೂರ್ಣ ದೇಶದಲ್ಲಿ ಕೋಲಾಹಲ ಏರ್ಪಟ್ಟಿದೆ. ತಜ್ಞರ ಪ್ರಕಾರ, XBB.1.5 ರೂಪಾಂತರವು BQ1 ಗಿಂತ 120% ವೇಗವಾಗಿ ಹರಡುತ್ತದೆ ಎಂದಾಗಿದೆ.


ಅಮೆರಿಕಾದಲ್ಲಿ 40% ಪ್ರಕರಣಗಳಿಗೆ ಓಮಿಕ್ರಾನ್‌ನ XBB.1.5 ರೂಪಾಂತರ ಕಾರಣ


ಅಮೆರಿಕಾದಲ್ಲಿ ಪತ್ತೆಯಾಗಿರುವ 40% ಕ್ಕಿಂತ ಹೆಚ್ಚು ಪ್ರಕರಣಗಳು ಓಮಿಕ್ರಾನ್‌ನ XBB.1.5 ರೂಪಾಂತರವಾಗಿದೆ ಎಂದು ತಜ್ಞರು ಉಲ್ಲೇಖಿಸಿದ್ದಾರೆ. ಮಾಹಿತಿಯ ಪ್ರಕಾರ, XBB.1.5 ರೂಪಾಂತರವು XBB ಮತ್ತು BQ ಗಿಂತ ದೇಹದ ಪ್ರತಿರಕ್ಷೆಯಿಂದ ತಪ್ಪಿಸಿಕೊಳ್ಳುವಷ್ಟು ಸಮರ್ಥ ಎಂದಾಗಿದೆ.


XXB.1.5 ರೂಪಾಂತರದ ಮೊದಲ ಪ್ರಕರಣ ಭಾರತದಲ್ಲಿ ಪತ್ತೆ


XBB.1.5 ರೂಪಾಂತರದ ಸೋಂಕಿನ ಮೊದಲ ಪ್ರಕರಣವು ಭಾರತದಲ್ಲಿ ದೃಢಪಟ್ಟಿದೆ. ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂನ ವರದಿಯ ಪ್ರಕಾರ, XXB.1.5 ರೂಪಾಂತರದ ಮೊದಲ ಪ್ರಕರಣವು ಗುಜರಾತ್‌ನಲ್ಲಿ ವರದಿಯಾಗಿದೆ. ಅಮೆರಿಕಾದಲ್ಲಿ ಇದೇ ರೂಪಾಂತರದ ಪ್ರಸರಣದಿಂದ ಪರಿಸ್ಥಿತಿ ಹದಗೆಡುತ್ತಿದೆ. ಹೀಗಾಗಿ ಈ ರೂಪಾಂತರದ ಹಾವಳಿ ಹಾಗೂ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಭಾರತವೂ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.


XBB.1.5 ರೂಪಾಂತರದ ಬಗ್ಗೆ ಚಿಂತಿಸಬೇಕೇ?


ಆರೋಗ್ಯ ತಜ್ಞರು ಹೇಳುವಂತೆ, ಭಾರತದಲ್ಲಿ ಈ ರೂಪಾಂತರ ಪರಿಣಾಮ ಹೆಚ್ಚು ಕಾಲ ಇರುವುದಿಲ್ಲ ಎಂದಾಗಿದೆ. ಏಕೆಂದರೆ ದೇಶದ ಜನರು ಕೋವಿಡ್‌ನ ಒಂದೇ ಕುಟುಂಬದ XBB ರೂಪಾಂತರದಿಂದ ಸೋಂಕಿಗೆ ಒಳಗಾದ ನಂತರ ಗುಣಮುಖರಾಗಿದ್ದಾರೆ ಮತ್ತು ಇಲ್ಲಿನ ಹೆಚ್ಚಿನ ಜನರು ಪ್ರಾಥಮಿಕ ಮತ್ತು ಬೂಸ್ಟರ್ ಡೋಸ್‌ಗಳನ್ನು ಸಹ ತೆಗೆದುಕೊಂಡಿದ್ದಾರೆ.


ಲಸಿಕೆ ಅಭಿಯಾನ ಹಾಗೂ ಬೂಸ್ಟರ್ ಸುರಕ್ಷೆ


ದೇಶದಲ್ಲಿ ವ್ಯಾಕ್ಸಿನೇಷನ್ ಅಭಿಯಾನದ ವ್ಯಾಪಕ ಪ್ರಚಾರ ಮತ್ತು ನೈಸರ್ಗಿಕ ಪ್ರತಿರಕ್ಷೆಯ ಉತ್ತಮ ಸ್ಥಿತಿಯಿಂದಾಗಿ, ಕೋವಿಡ್ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳಬಹುದು ಎಂಬ ಭಯ ಕಡಿಮೆಯಾಗಿದೆ. ಅದಾಗ್ಯೂ ಕೆಲವು ಕಾರಣಗಳಿಂದ ಸೋಂಕು ತೀವ್ರಗೊಂಡರೂ ಕೆಲವೇ ಜನರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ ಎಂಬ ವಿಚಾರವನ್ನು ತಜ್ಞರು ತಿಳಿಸಿದ್ದಾರೆ.


XBB.1.5 ರೂಪಾಂತರದ ಲಕ್ಷಣಗಳು


XBB ರೂಪಾಂತರದ ಕೆಲವು ವೈಶಿಷ್ಟ್ಯಗಳು ಇತರ ರೂಪಾಂತರಗಳಿಗೆ ಹೋಲುವಂತೆಯೇ ಇದ್ದು ಅದೇ ರೀತಿಯ ರೋಗಲಕ್ಷಣಗಳನ್ನು ಸೂಚಿಸಿದೆ. ರೂಪಾಂತರದ ಮುಖ್ಯ ಲಕ್ಷಣಗಳೆಂದರೆ ಸ್ರವಿಸುವ ಮೂಗು, ಜ್ವರ, ನೋಯುತ್ತಿರುವ ಗಂಟಲು, ತಲೆನೋವು, ಶೀತ, ಸೀನುವಿಕೆ ಮತ್ತು ಕೆಮ್ಮು.


ಕೋವಿಡ್ XBB 1.5 ರೂಪಾಂತರ- ಮುನ್ನೆಚ್ಚರಿಕೆಗಳೇನು?


ಮಾಸ್ಕ್ ಧರಿಸಿ- ಮಾಸ್ಕ್ ಧರಿಸುವುದು ಕೋವಿಡ್‌ನ ಯಾವುದೇ ರೂಪಾಂತರಗಳಿಂದ ರಕ್ಷಣೆ ಪಡೆದುಕೊಳ್ಳುವ ಪ್ರಾಥಮಿಕ ಹಂತವಾಗಿದೆ. ಸಾಮಾನ್ಯ ಸುರಕ್ಷತೆಯಾಗಿ ಇದು ಗುರುತಿಸಿಕೊಂಡಿದ್ದರೂ ಹೆಚ್ಚು ರಕ್ಷಣೆಯನ್ನೊದಗಿಸುತ್ತದೆ.


ಮಾಸ್ಕ್ ಹಾಕಿಕೊಳ್ಳುವುದು ಹಿಂಸನೀಯ ಹಾಗೂ ಅನಾನುಕೂಲತೆಯನ್ನು ಉಂಟುಮಾಡಿದರೂ ಕೋವಿಡ್ XBB 1.5 ರೂಪಾಂತರ ಉಂಟುಮಾಡುವ ಅಪಾಯದ ದೃಷ್ಟಿಯಿಂದ, ಮಾಸ್ಕ್ ಕಡ್ಡಾಯವಾಗಿ ಧರಿಸಿ ಎಂದು ತಜ್ಞರು ತಿಳಿಸಿದ್ದಾರೆ. ಮುಖಗವಸು ಸೋಂಕಿನ ಹೆಚ್ಚಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ. ಅದಕ್ಕಾಗಿಯೇ ಮಾಸ್ಕ್ ಕಡ್ಡಾಯವಾಗಿ ಖರೀದಿಸಿ ಮತ್ತು ಮನೆಯಿಂದ ಹೊರಬಂದ ನಂತರ ಅದನ್ನು ಧರಿಸುವುದನ್ನು ಮರೆಯದಿರಿ.


ಇದನ್ನೂ ಓದಿ: Explainer: Covid-19 ಮೂಗಿನ ಲಸಿಕೆಯ ಪ್ರಯೋಜನಗಳು, ಅಡ್ಡಪರಿಣಾಮಗಳೇನು? ಲಸಿಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿಗಳೇನು?


ಹ್ಯಾಂಡ್ ಸ್ಯಾನಿಟೈಜರ್ ಬಳಕೆ


ಪಾಕೆಟ್‌ನಲ್ಲಿ ಇರಿಸಬಹುದಾದ ಸ್ಯಾನಿಟೈಜರ್ ಅನ್ನು ಯಾವಾಗಲೂ ನಿಮ್ಮ ಬಳಿ ಇರಿಸಿಕೊಳ್ಳಿ. ಆದಷ್ಟು ನೀವು ಹೊರಗಡೆ ಇದ್ದ ಸಂದರ್ಭದಲ್ಲಿ ಹೆಚ್ಚು ಬಳಸುತ್ತಿರಿ. ಸ್ಯಾನಿಟೈಜರ್ ಸೋಂಕಿನಿಂದ ಪ್ರಾಥಮಿಕ ರಕ್ಷಣೆಯನ್ನು ಒದಗಿಸುತ್ತದೆ


ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ


ಸೀನು, ಕೆಮ್ಮು ಮೊದಲಾದ ರೋಗ ಲಕ್ಷಣಗಳಿರುವ ಜನರಿಂದ ಆದಷ್ಟು ದೂರವಿರಿ. ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿ ಎಂದು ಸೂಚಿಸಿದ್ದು, ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಪ್ರಮೇಯ ಬಂದಾಗ ಆದಷ್ಟು ಮಾಸ್ಕ್‌ಗಳ ಬಳಕೆ ಹಾಗೂ ಸ್ಯಾನಿಟೈಜರ್ ಉಪಯೋಗವನ್ನು ಸೂಚಿಸಿದೆ. ಜ್ವರ, ಕೆಮ್ಮು, ಶೀತ ಮೊದಲಾದ ರೋಗಲಕ್ಷಣವಿರುವ ಜನರಿಂದ ದೂರವಿರುವಂತೆ ಸೂಚಿಸಿದೆ.


ಕೊರೋನಾ ವೈರಸ್ ಕೂಡ ಇದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವುದರಿಂದ ಆದಷ್ಟು ಜಾಗರೂಕತೆ ಪಾಲಿಸಿ ಎಂದೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ರೋಗಲಕ್ಷಣಗಳಿರುವ ವ್ಯಕ್ತಿ ನಿಮ್ಮ ಸಮೀಪದಲ್ಲಿದ್ದರೆ ಅವರಿಂದ ದೂರಹೋಗಿ ಹಾಗೂ ನಿಮ್ಮ ಮುಖವನ್ನು ಮಾಸ್ಕ್‌ನಿಂದ ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದೆ.


ಆಹಾರ ಉತ್ಪನ್ನಗಳನ್ನು ತೊಳೆಯುವುದು


ಹೊರಗಿನಿಂದ ಆಹಾರ ಉತ್ಪನ್ನಗಳನ್ನು ಖರೀದಿಸಿ ಮನೆಗೆ ತಂದಲ್ಲಿ ಬಳಸುವ ಮುನ್ನ ಅವುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ನಿಮ್ಮ ಕೈಗಳನ್ನು ಚೆನ್ನಾಗಿ ಸೋಪು ಅಥವಾ ಇತರ ಸ್ಯಾನಿಟೈಜರ್‌ಗಳಿಂದ ತೊಳೆಯುವುದನ್ನು ಮರೆಯದಿರಿ. ಆಹಾರ ಉತ್ಪನ್ನಗಳ ಮೇಲೆ ಸೋಂಕು ಇದ್ದರೂ ನೀರಿನಿಂದ ತೊಳೆಯುವುದು ಅವುಗಳನ್ನು ನಿವಾರಿಸುತ್ತದೆ.


ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಡುವುದು


ಕೊರೋನಾ ವೈರಸ್ ಎಂಬುದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ತಾಜಾ ಹಾಗೂ ಶುದ್ಧ ಗಾಳಿಯನ್ನು ಶ್ವಸಿಸುವುದರಿಂದ ಕೊರೋನಾ ವೈರಸ್‌ನ ಹಿಡಿತದಿಂದ ಪಾರಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹಾಗಾಗಿ ಆದಷ್ಟು ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಡಿ. ಮನೆಯೊಳಗೆ ಶುದ್ಧ ಗಾಳಿ ಬೆಳಕು ಬರುವಂತಿರಲಿ.

Published by:Latha CG
First published: