ಸಂಪೂರ್ಣ ತಾಲಿಬಾನಿಗಳ ಅಧೀನಕ್ಕೆ ಒಳಪಟ್ಟಿರುವ ಅಪ್ಘಾನಿಸ್ತಾನವನ್ನು ಸಂಪೂರ್ಣ ವಿಶ್ವವೇ ದಯನೀಯವಾಗಿ ನೋಡುತ್ತಿದೆ. ಅಪ್ಘಾನಿಸ್ತಾನದ ಪ್ರಜೆಗಳು ತಮ್ಮ ನೈತಿಕ ಸ್ವಾತಂತ್ರ್ಯ ಕಳೆದುಕೊಂಡು ಪರರ ಅಧೀನಕ್ಕೆ ಒಳಪಟ್ಟಿದ್ದಾರೆ. ಸುಭೀಕ್ಷ ನಾಡಾಗಿದ್ದ ಈ ನೆಲ ಇಂದು ರಕ್ತದ ಬೀಡಾಗಿದೆ. ಅದೆಷ್ಟೋ ಜನರು ಅನಾಥರಾಗಿದ್ದಾರೆ. ಖುಷಿಯಾಗಿ ನಲಿದುಕೊಂಡಿದ್ದ ಕುಟುಂಬಗಳು ದಿಕ್ಕಾಪಾಲಾಗಿವೆ. ತಾಲಿಬಾನಿಗಳ ಕ್ರೌರ್ಯದ ಕುರಿತು ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಿದ್ದಾರೆ. ತಮ್ಮ ನಿಯಮಗಳನ್ನು ಉಲ್ಲಂಘಿಸಿದವರನ್ನು ನಿರ್ದಾಕ್ಷಿಣ್ಯವಾಗಿ ತಾಲಿಬಾನಿಗಳು ಹೊಡೆದುರುಳಿಸುತ್ತಿದ್ದಾರೆ. ಒಂದು ರೀತಿಯ ಗುಲಾಮ ಆಳ್ವಿಕೆಯನ್ನು ತಾಲಿಬಾನಿಗಳು ಅಪ್ಘಾನ್ ಪ್ರಜೆಗಳ ಮೇಲೆ ನಡೆಸುತ್ತಿದ್ದಾರೆ.
ಯುಎಸ್ ಸೇನಾ ಪಡೆಗಳು ಅಪ್ಘಾನ್ ನೆಲದಿಂದ ಕಾಲ್ಕಿತ್ತಿದ್ದೇ ತಡ ತಾಲಿಬಾನಿಗಳು ನೂರಾನೆ ಬಲ ಬಂದವರಂತೆ ತಾವು ಆಡಿದ್ದೇ ಆಟ ಎಂಬಂತೆ ನಡೆದುಕೊಂಡರು. ತಾಲಿಬಾನ್ ಅಪ್ಘಾನ್ ನೆಲ ವಶಪಡಿಸಿಕೊಳ್ಳುತ್ತಿದ್ದಂತೆಯೇ ಅತ್ಯಾಧುನಿಕ ಆಯುಧಗಳನ್ನೆಲ್ಲಾ ಬಿಟ್ಟು ಯುಎಸ್ ಪಡೆಗಳು ಮರಳಿ ತಮ್ಮ ದೇಶಕ್ಕೆ ಹೋದರು. ತಾಲಿಬಾನಿಗಳೊಂದಿಗೆ ನಡೆದ ಯುದ್ಧದಲ್ಲಿ ಯುಎಸ್ ಸೇನೆ ಕೂಡ ಸುದೀರ್ಘವಾಗಿ ಹೋರಾಡಿದೆ.
ಆದರೆ 20 ವರ್ಷಗಳ ಈ ಸುದೀರ್ಘ ಹೋರಾಟದಲ್ಲಿ ಅಪ್ಘಾನಿಸ್ತಾನಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ದೊಡ್ಡಣ್ಣ ವಿಫಲವಾಗಿದೆ ಎಂಬ ಟೀಕೆಗಳು ಈಗ ಎಲ್ಲೆಡೆ ಕೇಳಿಬರುತ್ತಿದೆ. ಉತ್ತಮ ರಾಷ್ಟ್ರ ನಿರ್ಮಾಣದ ಪಣ ತೊಟ್ಟಿದ್ದ ಅಮೆರಿಕ ಹೇಳದೇ ಕೇಳದೆ ತಾಲಿಬಾನಿಗಳೊಂದಿಗೆ ಸಂಧಾನ ನಡೆಸಿ ತನ್ನ ಸೇನಾ ಪಡೆ ಹಿಂದಕ್ಕೆ ಕರೆದುಕೊಂಡಿದ್ದರ ಕಾರಣ ಹಲವು ಇರಬಹುದು. ಆದರೆ ಈ ದೇಶ ಇದೀಗ ವಚನಭ್ರಷ್ಟ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆಯೇ ಎಂಬ ಅನುಮಾನ ಕೂಡ ಹುಟ್ಟುತ್ತಿದೆ. ಅದೆಷ್ಟೋ ಅಮಾಯಕರ ಸಾವಿಗೆ ಈಗ ಉತ್ತರ ಕೊಡಬೇಕಾಗಿರುವವರು ಯಾರು ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ..?
ಅಪ್ಘಾನ್ ಯುದ್ಧದಿಂದ ಅಮೆರಿಕಕ್ಕಾದ ನಷ್ಟವೆಷ್ಟು?
ಇದು ಲೆಕ್ಕಾಚಾರವನ್ನೂ ಮೀರಿದ ಅಂಕಿ ಅಂಶವಾಗಿದೆ. SIGAR ಅಫ್ಘಾನ್ ಪುನರ್ನಿರ್ಮಾಣ ಯುಎಸ್ ವಿಶೇಷ ಇನ್ಸೆಪೆಕ್ಟರ್ ಜನರಲ್ನ ಅಂಕಿ ಅಂಶದ ಪ್ರಕಾರ ಯುಎಸ್ ಅಪ್ಘಾನಿಸ್ತಾನದಲ್ಲಿ ನಡೆಸಿದ ಎರಡು ಯುದ್ಧ ಯೋಜನೆಗಳಾದ ದೀರ್ಘಾವಧಿ ಸ್ವಾತಂತ್ರ್ಯ ಕಾರ್ಯಾಚರಣೆ ಹಾಗೂ ಸ್ವಾತಂತ್ರ್ಯದ ಕಾವಲುಗಾರ ಕಾರ್ಯಾಚರಣೆಯ ಒಟ್ಟು ಖರ್ಚುವೆಚ್ಚ $837.3 ಬಿಲಿಯನ್ ಆಗಿದೆ.
ಒಟ್ಟಾರೆಯಾಗಿ ಅಪ್ಘಾನಿಸ್ತಾನದಲ್ಲಿ 20 ವರ್ಷಗಳ ನಿರಂತರ ಸ್ವಾತಂತ್ರ್ಯ ಯುದ್ಧಕ್ಕಾಗಿ ಅಮೆರಿಕ ಅಂದಾಜಿಸಿದ್ದಕ್ಕಿಂತ ದುಪ್ಪಟ್ಟು ಹಣ ಖರ್ಚಾಗಿದೆ ಎಂಬುದು SIGAR ಅಭಿಪ್ರಾಯವಾಗಿದೆ. ದೇಶ ಹಾಗೂ ಅಲ್ಲಿನ ತೆರಿಗೆ ಪಾವತಿದಾರರು $2 ಟ್ರಿಲಿಯನ್ (2 ಲಕ್ಷ ಕೋಟಿ) ಖರ್ಚು ಮಾಡಿರಬಹುದು ಎಂಬ ಲೆಕ್ಕಾಚಾರವನ್ನು ಸಂಸ್ಥೆ ಮಾಡಿದೆ. ಅಮೆರಿಕದ ತಲೆಮಾರಿನವರು ಈ ವೆಚ್ಚ ಸರಿದೂಗಿಸಲು ತೆರಿಗೆ ಪಾವತಿಯನ್ನು ಕಟ್ಟುತ್ತಲೇ ಇರಬೇಕಾಗುತ್ತದೆ ಎಂಬುದು ಸಂಸ್ಥೆಯ ಕಳವಳವಾಗಿದೆ. 2050ರ ವೇಳೆಗೆ ಈ ವೆಚ್ಚವು ಸರಿಸುಮಾರು $ 6.5 ಟ್ರಿಲಿಯನ್ ತಲುಪಬಹುದು ಎಂದೂ ಎಚ್ಚರಿಸಿದೆ.
20 ವರ್ಷಗಳ ಸಂಘರ್ಷದಲ್ಲಿ ನಿವಾಸಿಗಳು ತೆತ್ತ ಬೆಲೆ ಏನು?
20 ವರ್ಷಗಳ ಸುದೀರ್ಘ ಯುದ್ಧದಲ್ಲಿ ಆರ್ಥಿಕ ಅಂಕಿಅಂಶಗಳ ಲೆಕ್ಕಾಚಾರದೊಂದಿಗೆ ಮಾನವ ಮೃತದೇಹಗಳ, ಕಣ್ಣೀರಿನ ಲೆಕ್ಕಾಚಾರವು ನಡೆದಿದೆ. ಅಂದಾಜಿನ ಪ್ರಕಾರ ಯುಎಸ್ ಸೇನೆ 2001ರಲ್ಲಿ ಕಾಲಿಟ್ಟ ಸಮಯದಲ್ಲಿ ಸಾವಿರಾರು ಸಹಾಯಕರು ಹಾಗೂ ಪತ್ರಕರ್ತರು, ಮುಗ್ಧ ಜನರು ಸೇರಿ ಸುಮಾರು 47,000 ನಾಗರಿಕರ ಹತ್ಯೆಗೈಯ್ಯಲಾಗಿದೆ. ಇಲ್ಲಿನ ಭೂ ಗಣಿಗಾರಿಕೆಯು ಹಲವಾರು ಅಪ್ಘಾನ್ ನಾಗರಿಕರ ರಕ್ತವನ್ನು ನದಿಯಂತೆ ಪ್ರವಹಿಸಲಿದೆ ಹಾಗೂ ನಿರಂತರ ಯುದ್ಧ, ಕೊಲೆ, ಸುಲಿಗೆಗಳು ಇಲ್ಲಿ ನಡೆಯುತ್ತಲೇ ಇರುತ್ತದೆ ಎಂಬುದು ಯುಎಸ್ ಮೂಲದ ಬ್ರೌನ್ ಯೂನಿವರ್ಸಿಟಿಯ ವ್ಯಾಟ್ಸನ್ ಇನ್ಸ್ಟಿಟ್ಯೂಟ್ ಹೇಳಿಕೆಯಾಗಿದೆ.
ತಾಲಿಬಾನಿಗಳ ವಶವಾದ ಅಪ್ಘಾನ್ ನೆಲದ ಮುಂದಿನ ಸ್ಥಿತಿಗತಿ ಏನು?
ತಾಲಿಬಾನ್ ವಿರುದ್ಧದ ಯುದ್ಧವು ಪ್ರಗತಿಯಲ್ಲಿರುವಂತೆಯೇ ವಿವಿಧ ಅಂತಾರಾಷ್ಟ್ರೀಯ ಏಜೆನ್ಸಿಗಳು, ಅಮೆರಿಕ, ಭಾರತದಂತಹ ದೇಶಗಳು ಅಪ್ಘಾನಿಸ್ತಾನದ ಪುನರ್ನಿರ್ಮಾಣಕ್ಕಾಗಿ ಆರ್ಥಿಕ ಸಹಕಾರ ನೀಡಿದವು. ಆರೋಗ್ಯ, ಮಹಿಳಾ ಶಿಕ್ಷಣ, ಮೊದಲಾದ ಕ್ಷೇತ್ರದಲ್ಲಿ ದೇಶ ಸಾಧನೆ ಮಾಡಿದೆ ಎಂಬುದಾಗಿ ಗುರುತಿಸಲಾಗಿದೆ. ಅಪ್ಘಾನಿಸ್ತಾನವು ನಿರಂತರವಾಗಿ ಹಲವಾರು ದೇಶಗಳ ನೆರವು ಪಡೆದುಕೊಂಡ ನಂತರ ಅಲ್ಲಿನ ಜನಜೀವನ ಮಟ್ಟ ಸುಧಾರಣೆಯಾಗಿದೆ ಹಾಗೂ ದೇಶ ಗಮನಾರ್ಹ ಪ್ರಗತಿ ಸಾಧಿಸಿದೆ ಎಂಬುದು ವಿಶ್ವ ಬ್ಯಾಂಕ್ ಹೇಳಿಕೆಯಾಗಿತ್ತು.
ಶಿಕ್ಷಣ ರಂಗದಲ್ಲಿ 15 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅತ್ಯುನ್ನತ ಸಾಧನೆ ನಡೆಸಿದ್ದು 2011ರಲ್ಲಿ 31.5% ಇದ್ದ ಸಾಕ್ಷರತಾ ಪ್ರಮಾಣವು 2018ರಲ್ಲಿ 43%ಗೆ ಏರಿದೆ ಎಂಬುದಾಗಿ ವಿಶ್ವಬ್ಯಾಂಕ್ ತಿಳಿಸಿದೆ. ಅಪ್ಘಾನಿ ನೆಲದಲ್ಲಿ ಹೆಣ್ಣು ಮಕ್ಕಳು ಹಾಗೂ ಸ್ತ್ರೀಯರು ಕೂಡ ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸಿದ್ದಾರೆ. ಆದರೆ ಪ್ರಸ್ತುತ ತಾಲಿಬಾನಿಗಳ ಆಡಳಿತದ ನಂತರ ದೇಶದ ಚಿತ್ರಣವೇ ಬದಲಾಗಿ ಹೋಗಲಿದೆ. ಇಸ್ಲಾಮಿಕ್ ಕಾನೂನುಗಳ ಕಠಿಣ ಆಡಳಿತ ನಡೆದಲ್ಲಿ ಅಪ್ಘಾನ್ ತನ್ನ ಅಭಿವೃದ್ಧಿ ಆಯಾಮವನ್ನೇ ಕಳೆದುಕೊಳ್ಳಲಿದೆ ಎಂಬುದು ತಜ್ಞರ ಕಳವಳವಾಗಿದೆ.
ಅಪ್ಘಾನ್ ನೆಲದ ಅಭಿವೃದ್ಧಿಗೆ ಭಾರತದ ಕೊಡುಗೆ ಏನು?
ಅಮೆರಿಕದೊಂದಿಗೆ ಅಪ್ಘಾನಿಸ್ತಾನದ ಪುನರ್ನಿರ್ಮಾಣ ಹಾಗೂ ದೇಶಗಳ ನಡುವಿನ ಆಂತರಿಕ ಅನುಬಂಧದಿಂದಾಗಿ ಭಾರತ ಕೂಡ ಅಪ್ಘಾನಿಸ್ತಾನದ ಪುನರ್ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯವನ್ನು ನೀಡಿದೆ. ವಿದೇಶಾಂಗ ಸಚಿವಾಲಯ ಭಾರತದ ಆರ್ಥಿಕ ನೆರವನ್ನು ಅಂದಾಜಿಸಿದ್ದು ಅಪ್ಘಾನಿಸ್ತಾನದ ಅಭಿವೃದ್ಧಿಗಾಗಿ $3 ಬಿಲಿಯನ್ಗಿಂತಲೂ ಹೆಚ್ಚಿನ ಆರ್ಥಿಕ ಸಹಕಾರ ನೀಡಿದೆ ಎಂದಾಗಿದೆ. ಅಪ್ಘಾನಿಸ್ತಾನದಲ್ಲಿ ಭಾರತವು ಹಲವಾರು ಅಭಿವೃದ್ಧಿ ಯೋಜನೆಗಳನ್ನು ನಡೆಸಿದ್ದು ಇದರಲ್ಲಿ ಅಪ್ಘಾನ್ ಪಾರ್ಲಿಮೆಂಟ್ ಕಟ್ಟಡದ ಅಭಿವೃದ್ಧಿ ಹಾಗೂ ಜರಂಜ್ನಿಂದ ಡೆಲಾರಾಮ್ವರೆಗಿನ 200-ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣವೂ ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ