• Home
  • »
  • News
  • »
  • explained
  • »
  • Explained: ಚೀನಾದಲ್ಲಿ ಮತ್ತೆ ಕೊರೋನಾ ಹಾವಳಿ, ಜಾಗತಿಕ ಮಟ್ಟದಲ್ಲಿ ಇದರ ಪರಿಣಾಮ ಏನಾಗಬಹುದು?

Explained: ಚೀನಾದಲ್ಲಿ ಮತ್ತೆ ಕೊರೋನಾ ಹಾವಳಿ, ಜಾಗತಿಕ ಮಟ್ಟದಲ್ಲಿ ಇದರ ಪರಿಣಾಮ ಏನಾಗಬಹುದು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚೀನಾದ 60% ರಷ್ಟು ಜನರು ಹಾಗೂ ಜಗತ್ತಿನ ಸುಮಾರು 10% ರಷ್ಟು ಜನರು ಮುಂದಿನ ಮೂರು ತಿಂಗಳುಗಳಲ್ಲಿ ಕೋವಿಡ್ ಸೋಂಕಿತರಾಗಬಹುದು. ಈ ಪ್ರಸ್ತುತ ಕೋವಿಡ್ ದಾಳಿಯು ಮುಂದಿನ ವಾರಗಳಲ್ಲಿ ಚೀನಾವನ್ನು ಅಕ್ಷರಶಃ ನಲುಗಿಸಲಿದೆ. 

  • Trending Desk
  • 2-MIN READ
  • Last Updated :
  • Share this:

ಕೋವಿಡ್-19(Covid-19) ಬಿಕ್ಕಟ್ಟಿನಿಂದ ಒಂದು ಬಾರಿ ಇಡೀ ಪ್ರಪಂಚವೇ ನಲುಗಿ ಹೋಗಿದೆ. ಎರಡು ವರ್ಷಗಳ ಕಾಲ ಜಗತ್ತಿನಾದ್ಯಂತ(Worldwide) ಕೋಟ್ಯಂತರ ಜನರು ಪರದಾಡಿದ್ದಾರೆ, ಲಕ್ಷಾಂತರ ಜನರು ಮರಣಿಸಿದ್ದಾರೆ. ದೇಶಗಳ ಆರ್ಥಿಕ(Economic) ಸ್ಥಿತಿ ಕಂಗೆಟ್ಟು ಹೋಗಿದೆ.


ಅಷ್ಟಾಗಿಯೂ ಸುಮಾರು ಎರಡು ವರ್ಷಗಳ ನಿರಂತರ ನರಕ ಯಾತನೆ ಅನುಭವಿಸಿದ ತರುವಾಯ ಇನ್ನೇನು ಎಲ್ಲವೂ ಈಗ ಸರಿಯಾಗಲಿದೆ ಎನ್ನುತ್ತಿರುವಷ್ಟರಲ್ಲಿ ಕೋವಿಡ್ ಉದ್ಭವಿಸಿದ ದೇಶ ಎಂದೇ ನಂಬಲಾದ ಚೈನಾದಲ್ಲಿ ಮತ್ತೆ ಕೋವಿಡ್ ವೈರಾಣು ಸೋಂಕಿನ ಪ್ರಕರಣಗಳು ಸ್ಫೋಟಗೊಂಡಿದೆ.


ಪ್ರಸ್ತುತ ಚೀನಾ ಜಗತ್ತಿನಲ್ಲೇ ಅತಿ ಹೆಚ್ಚು ಎನ್ನುವಂತಹ ಕೋವಿಡ್ ಪ್ರಕರಣಗಳನ್ನು ದಾಖಲಿಸುತ್ತಿದೆ ಹಾಗೂ ಈ ಮೂಲಕ ಜಗತ್ತಿನಾದ್ಯಂತ ಮತ್ತೆ ಆತಂಕದ ಛಾಯೆ ಮನೆ ಮಾಡುವಂತಾಗಿದೆ. ಈ ಹಿಂದೆ ಚೈನಾ ಕೋವಿಡ್ ಅನ್ನು ಶತಾಯ ಗತಾಯವಾಗಿ ತಹಬದಿಗೆ ತರಲೇಬೇಕೆಂಬ ನಿಲುವಿನಲ್ಲಿ ಕೋವಿಡ್ ಶೂನ್ಯ ನೀತಿಯನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿತ್ತು.


ಆದರೆ, ಈ ನೀತಿಯಿಂದಾಗಿ ಅಲ್ಲಿನ ಜನರು ಹಣ್ಣುಗಾಯಿ ನೀರುಗಾಯಿಯಾದಂತಾದರು. ನಿತ್ಯ ನರಕ ಯಾತನೆ ಅನುಭವಿಸ ತೊಡಗುವಂತಾಯಿತು. ಜೀವನವೇ ದುಸ್ತರ ಎನ್ನುವಂತಾಗಿತ್ತು. ಇದರಿಂದ ರೋಸಿ ಹೋಗಿದ್ದ ಜನರು ಅತ್ಯುಗ್ರವಾಗಿ ಶೂನ್ಯ ನೀತಿಯ ವಿರುದ್ಧ ಎಲ್ಲೆಡೆ ಪ್ರತಿಭಟಿಸಲು ಆರಂಭಿಸಿದ್ದರು.


ಇದನ್ನೂ ಓದಿ: Covid 19 Cases: ಚೀನಾಗೆ ಶಾಕ್, 90 ದಿನಗಳಲ್ಲಿ ಶೇಕಡಾ 60 ರಷ್ಟು ಜನಸಂಖ್ಯೆಗೆ ವ್ಯಾಪಿಸಲಿದೆ ಕೊರೋನಾ!


ಕೊನೆಗೂ ಜನರ ಆಕ್ರೋಶಕ್ಕೆ ಮಣಿದ ಚೀನಾ ಆಡಳಿತ ಡಿಸೆಂಬರ್ 7 ತನ್ನ ಕಠಿಣ ನೀತಿಯಲ್ಲಿ ಸಡಿಲಿಕೆ ಉಂಟು ಮಾಡಿತ್ತು. ಇದಾಗಿದ್ದೇ ತಡ ಇದೀಗ ದೇಶದಲ್ಲಿ ಮತ್ತೆ ಕೋವಿಡ್ ಸೋಂಕಿನ ಪ್ರಕರಣಗಳು ಸ್ಫೋಟಗೊಂಡಿದೆ.


ಈಗಾಗಲೇ ಜಾಗತಿಕವಾಗಿ ಆರ್ಥಿಕ ಹಿಂಜರಿತ ಹತ್ತಿರ ಬರುತ್ತಿದೆ, ಅಂತಹ ಸಂದರ್ಭದಲ್ಲಿ ಈ ಕೋವಿಡ್ ಅಲೆ ಚೈನಾಗೆ ಆರ್ಥಿಕವಾಗಿ ತಡೆಯಲಾರದಷ್ಟು ಪೆಟ್ಟು ನೀಡಲಿರುವುದಂತೂ ಖಚಿತ. ಅಲ್ಲದೆ, ಇದರಿಂದಾಗಿ ಜಾಗತಿಕವಾಗಿಯೂ ವ್ಯತಿರಿಕ್ತ ಪರಿಣಾಮ ಉಂಟಾಗುವುದರಲ್ಲಿ ಸಂಶಯವೇ ಇಲ್ಲ.


ಏನಾಗುತ್ತಿದೆ?


ಚೈನಾ ತನ್ನಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಶೂನ್ಯ ಕೋವಿಡ್ ನೀತಿಯನ್ನು ಅಳವಡಿಸಿತ್ತು. ಇದು ಸಾಕಷ್ಟು ಕಠಿಣ ನೀತಿಯಾಗಿದ್ದು ನಗರ, ವಲಯ ಅಥವಾ ಪ್ರದೇಶಗಳಲ್ಲಿ ಕೇವಲ ಕೆಲವೇ ಕೆಲವು ಪ್ರಕರಣಗಳು ವರದಿಯಾದರೂ ಸಂಪೂರ್ಣವಾದ ಲಾಕ್ಡೌನ್ ಅನ್ನು ವಿಧಿಸಲಾಗುತ್ತಿತ್ತು.


ಈ ರೀತಿಯ ನಿರ್ದಿಷ್ಟ ಲಾಕ್ಡೌನುಗಳು ಚೈನಾ ತನ್ನಲ್ಲಿ ಬಹು ಸಮಯದವರೆಗೆ ಪಾಲಿಸಿಕೊಂಡೇ ಬಂದಿತ್ತು ಹಾಗೂ ಈ ಲಾಕ್ಡೌನ್ ಆಯಾ ಪ್ರದೇಶಗಳಲ್ಲಿ ಒಂದು ಪ್ರಕರಣ ದಾಖಲಾಗದವರೆಗೂ ಮುಂದುವರೆದಿದ್ದವು. ಆದರೆ ಜನರು ಈ ರೀತಿಯ ಲಾಕ್ಡೌನ್ ಗಳಿಂದಾಗಿ ರೋಸಿ ಹೋಗಿದ್ದರು.


ಅಪರೂಪ ಎಂದು ಹೇಳಬಹುದಾದ ಈ ಕಠಿಣ ನಿರ್ಬಂಧಗಳ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಜನರು ತೀವ್ರವಾಗಿ ಪ್ರತಿಭಟಿಸಿದ್ದರು. ಇದಾದ ಬಳಿಕ ಲಾಕ್ಡೌನ್ ಅನ್ನು ಸಡಿಲಿಸಲಾಯಿತು. ನಗರ, ಪ್ರದೇಶಗಳಿಗೆ ವಿಧಿಸಲಾಗಿದ್ದ ಲಾಕ್ಡೌನ್ ಅನ್ನು ಸೀಮಿತಗೊಳಿಸಿ ಕೇವಲ ಮನೆ, ಕಟ್ಟಡಗಳಿಗೆ ಅನ್ವಯವಾಗುವಂತೆ ಮಾಡಲಾಯಿತು.


ಆದರೆ, ದುರದೃಷ್ಟವಶಾತ್ ಇದರಿಂದಾಗಿ ಕೋವಿಡ್ ವೈರಾಣು ಮತ್ತೆ ವೇಗವಾಗಿ ಹರಡಲು ಪ್ರಾರಂಭಿಸಿತು. ಆಸ್ಪತ್ರೆಗಳಲ್ಲಿ ಅಸಾಧಾರಣ ಮಟ್ಟಿಗೆ ದಾಖಲಾತಿಗಳು ಪ್ರಾರಂಭವಾದವು. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿರುವಂತೆ ಆಸ್ಪತ್ರೆಗಳು ರೋಗಿಗಳಿಂದ ಹೇಗೆ ತುಂಬುತ್ತಿವೆ ಎಂದರೆ ಹಾಸಿಗೆಗಳೂ ದೊರೆಯುತ್ತಿಲ್ಲ, ಹಾಗಾಗಿ ಹಲವರಿಗೆ ಅವರ ಕಾರುಗಳಲ್ಲೇ ಡ್ರಿಪ್ ನೀಡಲಾಗಿರುವ ಚಿತ್ರಗಳನ್ನು ಸುದ್ದಿ ಪತ್ರಿಕೆ ಬಿತ್ತರಿಸಿದೆ.


ಬೀಜಿಂಗ್ ನಂತಹ ನಗರಗಳಲ್ಲಿ ಶಾಪಿಂಗ್ ಮಾಲ್ ಗಳು, ಕಚೇರಿಗಳು ಹಾಗೂ ಹಾದಿ-ಬೀದಿಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ ಎಂದು ಸಿಎನ್‍ಎನ್ ವರದಿ ಮಾಡಿದೆ. ಸ್ಥಳೀಯ ಪ್ರಾಧಿಕಾರಗಳಿಗೆ ಡಿಸೆಂಬರ್ ಕೊನೆಯವರೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಆದಷ್ಟು ಬೇಗನೆ ಮಾಡಿಕೊಳ್ಳಿ ಎಂದು ಸೂಚಿಸಲಾಗಿದೆ.


ಇನ್ನೊಂದೆಡೆ ಬಿಬಿಸಿ ವರದಿ ಮಾಡಿರುವಂತೆ ಜನರಲ್ಲಿ ಆತಂಕದ ಛಾಯೆ ಮೂಡಿದೆ. ಅವರು ಕೋವಿಡ್-19 ರ ಔಷಧಿಗಳು, ಪರೀಕ್ಷಾ ಕಿಟ್ ಗಳನ್ನು ತರಾತುರಿಯಲ್ಲಿ ಕೊಂಡುಕೊಳ್ಳಲು ಹಾತೊರೆಯುತ್ತಿದ್ದಾರೆ. ಅದಾಗಲೇ ಈ ನಿಟ್ಟಿನಲ್ಲಿ ಕೊರತೆ ಕಂಡುಬರುತ್ತಿವೆ ಎಂದೂ ಸಹ ವರದಿಯಾಗಿದೆ.


ಇದನ್ನೂ ಓದಿ: Covid 19: ಮತ್ತೆ ಕೊರೋನಾ ಹಾಹಾಕಾರ, ಆತಂಕದ ನಡುವೆ ಅಲರ್ಟ್​ ಘೋಷಿಸಿದ ಸರ್ಕಾರ, ರಾಜ್ಯಗಳಿಗೆ ಮಹತ್ವದ ಆದೇಶ!


ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ?


ಸದ್ಯ ಚೈನಾದಲ್ಲಿ ಹೊಸ ತಳಿಯೊಂದು ಹರಡುತ್ತಿದೆ ಎಂದು ಬಲವಾಗಿ ನಂಬಲಾಗಿದ್ದು ಅದನ್ನು SARS-Cov-2 ವೈರಾಣು ಎಂದು ತಿಳಿಯಲಾಗಿದೆ. ಆದರೂ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈ ನಡುವೆ ಚೈನಾದ ಆರೋಗ್ಯ ಸಮಿತಿಯು ನೀಡಿರುವ ದತ್ತಾಂಶದ ಪ್ರಕಾರ ಚೈನಾದ ಮುಖ್ಯ ಭೂವಾಹಿನಿ ದೇಶದಲ್ಲಿ ನವೆಂಬರ್ ಮೊದಲ ವಾರದಲ್ಲಿ ನಿತ್ಯ 2000 ಪ್ರಕರಣಗಳು ದಾಖಲಾಗಿದ್ದವು ಹಾಗೂ ಆ ಪ್ರಮಾಣ ನವೇಂಬರ್ ಅಂತ್ಯದ ವರೆಗೆ 4000 ತಲುಪಿತ್ತು. ಇದೀಗ ಡಿಸೆಂಬರ್ ಮೊದಲ ವಾರದಲ್ಲಿ ನಿತ್ಯ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳು 5000 ತಲುಪಿದ್ದು ನವೆಂಬರ್ 27 ರಂದು ದಾಖಲೆ ಮಟ್ಟದ 40000 ಗಡಿ ದಾಟಿದೆ.


ಈಗ ಸೋಂಕಿನ ಪ್ರಕರಣಗಳು ಸ್ಫೋಟಗೊಂಡಿದ್ದು ಈ ನಡುವೆ ಚೈನಾದ ಆಡಳಿತವು ಕೋವಿಡ್ ಇದ್ದು ರೋಗ ಲಕ್ಷಣಯಿಲ್ಲದೆ ಇರುವವರ ಸಂಖ್ಯೆಯನ್ನು ಪ್ರಕಾಶಿಸುವುದನ್ನು ಕೈಬಿಟ್ಟಿದೆ. ಡಿಸೆಂಬರ್ 19 ರವರೆಗೆ ಸೋಂಕಿನಿಂದಾಗಿ ಅಸು ನೀಗಿದವರ ಸಂಖ್ಯೆ 5,242 ಎಂದು ಹೇಳಲಾಗಿದೆ. ಆದರೆ, ಕೆಲವು ಮೂಲಗಳ ಪ್ರಕಾರ ಇದು ಸರಿಯಾದ ಸಂಖ್ಯೆ ಇಲ್ಲದೆ ಇರಬಹುದು ಹಾಗೂ ವಾಸ್ತವದಲ್ಲಿ ಈ ಸಂಖ್ಯೆ ಇನ್ನು ಹೆಚ್ಚಿರಬಹುದೆಂದು ಊಹಿಸಲಾಗಿದೆ.


ಆದರೆ, ಚೈನಾದ ಎಪಿಡೆಮಿಯಾಲಾಜಿಸ್ಟ್ ಆಗಿರುವ ವು ಜುನ್ಯೋವು ಅವರು ಮಾತನಾಡಿ ಇದು ದೇಶವು ಈ ಚಳಿಗಾಲದಲ್ಲಿ ಮೊದಲೇ ನಿರೀಕ್ಷಿಸಿದ್ದ ಮೂರು ಅಲೆಗಳ ಪೈಕಿ ಬಂದಂತಹ ಒಂದನೇ ಅಲೆಯಾಗಿರಬಹುದೆಂದು ಹೇಳಿದ್ದಾರೆ.


ಅಲ್ಲಿನ ಸರ್ಕಾರಿ ಅಧಿಕಾರಿಗಳ ಲೆಕ್ಕಾಚಾರದಂತೆ ದೇಶದ 60% ರಷ್ಟು ಜನರು ಹಾಗೂ ಜಗತ್ತಿನ ಸುಮಾರು 10% ರಷ್ಟು ಜನರು ಮುಂದಿನ ಮೂರು ತಿಂಗಳುಗಳಲ್ಲಿ ಕೋವಿಡ್ ಸೋಂಕಿತರಾಗಬಹುದೆಂದಿದ್ದಾರೆ. ಸಾವುಗಳ ಸಂಖ್ಯೆ ಹಲವು ಸಾವಿರಗಳಿಂದ ಹಿಡಿದು ಮಿಲಿಯನ್ ಗಳವರೆಗೆ ಉಂಟಾಗಬಹುದೆಂದು ಎಚರಿಸಿದ್ದಾರೆ.


ಈ ಪ್ರಸ್ತುತ ಕೋವಿಡ್ ದಾಳಿಯು ಮುಂದಿನ ವಾರಗಳಲ್ಲಿ ಚೈನಾವನ್ನು ಅಕ್ಷರಶಃ ನಲುಗಿಸಲಿದೆ ಎಂದು ಮಿನ್ನೆಸೊಟಾದ ಸೆಂಟರ್ ಫಾರ್ ಇನ್ಫೆಕ್ಷಿಯಸ್ ಡಿಸೀಸ್ ರಿಸರ್ಚ್ ಆಂಡ್ ಪಾಲಿಸಿ ಕೇಂದ್ರದ ನಿರ್ದೇಶಕರಾದ ಮೈಕೆಲ್ ಆಸ್ಟೆರ್ಹೋಮ್ ಹೇಳಿರುವುದನ್ನು ರಾಯಿಟರ್ಸ್ ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.

ಏಕೆ ಹೀಗಾಗುತ್ತಿದೆ?


ಚೈನಾ ಮುಂಚೆಯಿಂದಲೂ ತನ್ನ ಶೂನ್ಯ ಕೋವಿಡ್ ನೀತಿ ಎಲ್ಲರಿಗಿಂತಲೂ ಪರಿಣಾಮಕಾರಿಯಾಗಿದೆ ಎಂದು ಸಾರುತ್ತ ಬಂದಿದೆ. ಅದರ ಈ ನೀತಿಯಿಂದಾಗಿ ಚೈನಾದಲ್ಲಿ ಕೇವಲ 5,242 ಕೋವಿಡ್ ಸಾವುಗಳು ಉಂಟಾಗಿವೆ, ಆದರೆ ಆ ಸಂಖ್ಯೆ ಅಮೆರಿಕದಲ್ಲಿ ಮಿಲಿಯನ್ ತಲುಪಿತ್ತು ಎಂದು ಹೇಳಿದೆ.


ಅಲ್ಲದೆ, ಚೈನಾ ಮೊದಲಿನಿಂದಲೂ ಕೇವಲ ಕೋವಿಡ್ ವೈರಾಣುವಿನಿಂದುಂಟಾದ ಸಾವುಗಳನ್ನೇ ಕೋವಿಡ್ ಸಾಅವು ಎಂದು ಲೆಕ್ಕ ಹಾಕುತ್ತಿದೆ. ಇತರೆ ಆರೋಗ್ಯ ಸ್ಥಿತಿ ಉಳ್ಳವರು ಕೋವಿಡ್ ಹೊಂದಿ ತದನಂತರ ಅವರ ಆರೋಗ್ಯದ ಸ್ಥಿತಿ ಹಿನಾಯವಾಗಿ ಮರಣಿಸಿದವರ ಲೆಕ್ಕವನ್ನು ಚೈನಾ ಬಹುಶಃ ಹಾಕುತ್ತಿಲ್ಲ ಎಂಬ ಗುಮಾನಿ ವ್ಯಕ್ತವಾಗಿದೆ. ಅಲ್ಲದೆ, ಚೈನಾ ಮೊದಲಿನಿಂದಲೂ ತಾನು ನೀಡುವ ಮಾಹಿತಿ ಬಗ್ಗೆ ಸ್ಪಷ್ಟತೆಯನ್ನು ಹೊಂದಿರುವುದಿಲ್ಲ ಎಂತಲೂ ನಂಬಲಾಗುತ್ತದೆ.


ಒಂದೆಡೆ ಭಾರತದಂತಹ ದೇಶದಲ್ಲಿ ಹರ್ಡ್ ಇಮ್ಯೂನಿಟಿ ಎಂಬುದು ರೂಪಗೊಂಡಿದ್ದು ಕೋವಿಡ್ ಹರಡುವಿಕೆಯನ್ನು ಸಾಕಷ್ಟು ನಿಯಂತ್ರಿಸಿದೆ ಎಂದು ನಂಬಲಾಗಿದೆ. ಆದರೆ, ಶೂನ್ಯ ಕೋವಿಡ್ ನೀತಿಯಿಂದಾಗಿ ಚೀನಿಯರು ಹರ್ಡ್ ಇಮ್ಯೂನಿಟಿಯನ್ನು ಅಭಿವೃದ್ಧಿಪಡಿಸಿಕೊಂಡಿಲ್ಲ, ಹಾಗಾಗಿ ಒಮ್ಮೆಗೆ ಶೂನ್ಯ ನೀತಿಯ ಸಡಿಲಿಕೆಯಿಂದಾಗಿ ಹೆಚ್ಚಿನ ಜನರು ವೈರಸ್ ದಾಳಿಗೆ ತುತ್ತಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.


ಅಲ್ಲದೆ ಚೈನಾ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಪರಿಣಾಮಕಾರಿತ್ವ ಹೊಂದಿಲ್ಲದೆ ಇರುವುದು ಸಾಬೀತಾಗಿದ್ದು ಜನರು ಲಸಿಕೆ ಪಡೆದಿದ್ದರೂ ಸಹ ಮತ್ತೆ ಸೋಂಕಿಗೆ ಬಲಿಯಾಗುತ್ತಿರುವುದು ಲಸಿಕೆಯ ಬಲಿಷ್ಠತೆಯನ್ನು ಸೂಚಿಸುತ್ತದೆ ಎಂದಷ್ಟೇ ಹೇಳಬಹುದು.


ಆದರೆ, ಚೈನಾ ಮಾತ್ರ ತನ್ನ ಜನಸಂಖ್ಯೆ ಸುಮಾರು 90% ರಷ್ಟು ಜನರು ಈಗಾಗಲೇ ಚೀನಾ ಅಭಿವೃದ್ಧಿಪಡಿಸಿದ ಲಸಿಕೆಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದೆ.


ಜಾಗತಿಕ ಮಟ್ಟದಲ್ಲಿ ಇದರ ಪ್ರಭಾವ ಏನು?


ಶೂನ್ಯ ನೀತಿಯ ಅನುಸಾರವಾಗಿ ದೇಶದಲ್ಲಿ ಕಳೆದ ಹಲವು ಸಮಯದಿಂದ ವಿಧಿಸಲಾಗಿದ್ದ ಲಾಕ್ಡೌನ್ ಈಗಾಗಲೇ ದೇಶದ ಆರ್ಥಿಕ ಸ್ಥಿತಿಗೆ ಪೆಟ್ಟು ಕೊಟ್ಟಿದೆ. ಅಲ್ಲದೆ, ಇದರಿಂದಾಗಿ ಜಾಗತಿಕ ವಲಯದಲ್ಲಿ ಪೂರೈಕೆ ಸರಪಣಿಗೆ ಆಘಾತವಾಗಿದೆ. ಏಕೆಂದರೆ ಚೈನಾದಿಂದ ಜಗತ್ತಿನ ಹಲವೆಡೆ ಸಾಮಾನು-ಸರಂಜಾಮುಗಳು ರಫ್ತುಗೊಳ್ಳಲ್ಪಡುತ್ತವೆ.


ಇದೀಗ ಜಗತ್ತಿನ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೈನಾ ಈ ತ್ವರಿತವಾಗಿ ಸ್ಫೋಟಗೊಂಡಿರುವ ಕೋವಿಡ್ ಅಲೆಯಿಂದಾಗಿ ಮತ್ತೆ ಆರ್ಥಿಕ ಹೀನಾಯ ಸ್ಥಿತಿಗೆ ತಲುಪಿದರೆ ಅದರ ಪರಿಣಾಮವನ್ನು ಜಗತ್ತೇ ಅನುಭವಿಸಬೇಕಾಗಿರುವುದರಲ್ಲಿ ಎರಡು ಮಾತಿಲ್ಲ. 

Published by:Latha CG
First published: