ಸಿಲಿಕಾನ್ ಸಿಟಿಯ (Bengaluru) ಮಂದಿಯ ಸ್ಥಿತಿ ಅಕ್ಷರಶಃ "ಏನೋ ಇದು ಮುಟ್ಟಿದೆಲ್ಲಾ ಶಾಕ್" ಅನ್ನೋ ಸಿನಿಮಾ ಹಾಡಿನಂತೆ ಆಗಿದೆ ನೋಡಿ. ಹೌದು, ಬೆಂಗಳೂರಲ್ಲಿ ಕೆಲ ದಿನಗಳಿಂದ ಈ ಕರೆಂಟ್ ಶಾಕ್ ಅನುಭವವನ್ನು ಜನ ಅನುಭವಿಸುತ್ತಿದ್ದಾರೆ. ಇತರರನ್ನು ಸ್ಪರ್ಶಿಸಿದಾಗ, ಚೇರ್ ಮುಟ್ಟಿದಾಗ, ಇನ್ಯಾವುದೋ ಕಬ್ಬಿಣದ ಕಂಬಿ ಮುಟ್ಟಿದಾಗ ಅಷ್ಟೇ ಯಾಕೆ ಕೂದಲು ಮುಟ್ಟಿದರೂ ಕೂಡ ಚಟ್ ಚಟ್ ಅಂತಾ ಹೀಗೆ ಏನಾದರೂ ಮುಟ್ಟಿದ್ರೆ ಶಾಕ್ (Electric Shock) ಹೊಡೆದಂತೆ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಿಂದ ಹಿಡಿದು ಎಲ್ಲೆಡೆ ಬೆಂಗಳೂರು ನಿವಾಸಿಗಳಲ್ಲಿ (Bengaluru Residents) ಈ ವಿಷಯ ಚರ್ಚೆಗೆ ಗ್ರಾಸವಾಗಿದೆ.
ಈ ತಿಂಗಳ ಆರಂಭದಲ್ಲಿ ಆಕಾಂಕ್ಷಾ ಗೌರ್ ಎಂಬ ನಿವಾಸಿ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. "ಬೆಂಗಳೂರು ಜನರೇ, ಕೆಲವು ದಿನಗಳಿಂದ ಲೋಹವನ್ನು ಸ್ಪರ್ಶಿಸಿದಾಗ ಕರೆಂಟ್ ಶಾಕ್ ಹೊಡೆದಂತ ಅನುಭವವನ್ನು ಅನುಭವಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ನನ್ನ ಹಲವು ಸ್ನೇಹಿತರು ಇದನ್ನು ಅನುಭವಿಸುತ್ತಿದ್ದಾರೆ" ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹಲವರು ಹೌದು ನಮಗೂ ಈ ಅನುಭವ ಆಗಿದೆ ಎಂದಿದ್ದಾರೆ.
Bangalore folks, are you getting static shocks on touching metal since a few days?
A crazy number of my friends are experiencing this. I saw a real little spark while opening the door knob.
— Aakanksha Gaur (@sia_steel) February 16, 2023
ಬೆಂಗಳೂರಲ್ಲಿ ನಡೆಯುತ್ತಿರುವ ಈ ವಿದ್ಯಮಾನದ ಬಗ್ಗೆ ವಿಜ್ಞಾನಿಗಳು ಮತ್ತು ತಜ್ಞರು ಅಧ್ಯಯನ ಮಾಡಿದ್ದಾರೆ. ನಗರದಲ್ಲಿನ ಹವಾಮಾನ ಪರಿಸ್ಥಿತಿಯಿಂದಾಗಿ ಈ ರೀತಿಯಾಗುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮುಟ್ಟಿದಲ್ಲೆಲ್ಲಾ ಕರೆಂಟ್ ಶಾಕ್ ಹೊಡೆದ ಅನುಭವ ಆಗುತ್ತಿರಲು ಕಾರಣಗಳೇನು?
ತಜ್ಞರು ಈ ಬಗ್ಗೆ ವಿವರಣೆ ನೀಡಿದ್ದು ಚಳಿಗಾಲದ ಕೊನೆಯಲ್ಲಿ ಹವಾಮಾನವು ಬೆಚ್ಚಗಾಗಲು ಪ್ರಾರಂಭಿಸಿದಾಗ ಶುಷ್ಕ ವಾತಾವರಣದಲ್ಲಿ ಇದು ಸಂಭವಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Bengaluru News: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಭಾರತೀಯ ರೈಲ್ವೆ, ತಿರುಪತಿ ಪ್ರಯಾಣಕ್ಕೂ ಅನುಕೂಲ
* ಶುಷ್ಕ ಹವಾಮಾನ: ಶುಷ್ಕ ವಾತಾವರಣ ಮುಖ್ಯವಾಗಿ ಈ ರೀತಿಯ ಅನುಭವಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ. ಚಳಿಗಾಲದಲ್ಲಿ ಅಥವಾ ನಮ್ಮ ಸುತ್ತಲಿನ ಹವಾಮಾನವು ಶುಷ್ಕವಾಗಿದ್ದಾಗ ವಿದ್ಯುತ್ ಚಾರ್ಜ್ ರೂಪುಗೊಳ್ಳುತ್ತದೆ.
ಗಾಳಿಯು ಶುಷ್ಕವಾಗಿರುತ್ತದೆ ಮತ್ತು ಎಲೆಕ್ಟ್ರಾನ್ಗಳು ನಮ್ಮ ಚರ್ಮದ ಮೇಲ್ಮೈಯಲ್ಲಿ ಸುಲಭವಾಗಿ ರೂಪಗೊಳ್ಳುತ್ತವೆ. ಬೇಸಿಗೆಯಲ್ಲಿ, ಗಾಳೀಯ ತೇವಾಂಶವು ಋಣಾತ್ಮಕ ವಿದ್ಯುದಾವೇಶದ ಎಲೆಕ್ಟ್ರಾನ್ಗಳನ್ನು ನಿರ್ಮೂಲನೆ ಮಾಡುತ್ತದೆ. ಈ ಎಲ್ಲಾ ವಿದ್ಯಮಾನಗಳಿಂದ ಜನರಿಗೆ ಬೇಸಿಗೆಯಲ್ಲಿ ಕರೆಂಟ್ ಶಾಕ್ ಅನುಭವ ಸಾಮಾನ್ಯವಾಗಿ ಆಗುತ್ತದೆ ಎಂದಿದ್ದಾರೆ.
* ಸಂಶ್ಲೇಷಿತ ಬಟ್ಟೆಗಳು: ಪಾಲಿಸ್ಟರ್ ಮತ್ತು ನೈಲಾನ್‌ನಂತಹ ಸಿಂಥೆಟಿಕ್ ಬಟ್ಟೆಗಳು ಪರಸ್ಪರ ವಿರುದ್ಧವಾಗಿ ಉಜ್ಜಿದಾಗ ಸ್ಥಿರ ವಿದ್ಯುತ್ ಉತ್ಪಾದಿಸುವ ಅವಾಹಕಗಳಾಗುತ್ತವೆ. ನೀವು ಲೋಹದ ವಸ್ತುಗಳನ್ನು ಸ್ಪರ್ಶಿಸಿದಾಗ, ಬೆಟ್‌ಶೀಟ್, ಕೆಲ ಬಟ್ಟೆಗಳನ್ನು ಮುಟ್ಟಿದರೆ ಚಟ್ ಚಟ್ ಅನುಭವ ಆಗುತ್ತದೆ.
* ರತ್ನಗಂಬಳಿಗಳ ಮೇಲೆ ನಡೆಯುವುದು: ರತ್ನಗಂಬಳಿಗಳು ಮತ್ತು ರಗ್ಗುಗಳು ನಿಮ್ಮ ದೇಹದ ಮೇಲೆ ಸ್ಥಿರ ವಿದ್ಯುತ್ ನಿರ್ಮಿಸಲು ಕಾರಣವಾಗುವ ಅವಾಹಕಗಳಾಗಿವೆ.
ನೀವು ಕಾರ್ಪೆಟ್ ಮೇಲೆ ನಡೆಯುವಾಗ, ನೀವು ಲೋಹದ ವಸ್ತು ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಸ್ಪರ್ಶಿಸಿದಾಗ ಹೊರಹಾಕಬಹುದಾದ ವಿದ್ಯುತ್ ಚಾರ್ಜ್ ಕರೆಂಟ್ ಹೊಡೆದಂತೆ ಆದ ಅನುಭವ ನೀಡುತ್ತದೆ.
ಇದನ್ನೂ ಓದಿ: Bengaluru Police: ಕಾನ್‍ಸ್ಟೆಬಲ್ ಸ್ಕೂಟರ್ ನಾಪತ್ತೆ, ಹರಾಜಿನ ವೇಳೆ ಬಯಲಾಯ್ತು ಸತ್ಯ: ಇದು ಪೊಲೀಸರೇ ನಡೆಸಿದ ಮೋಸದಾಟ
* ಎಲೆಕ್ಟ್ರಾನಿಕ್ ಸಾಧನಗಳು: ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳು ಬಳಕೆಯಲ್ಲಿರುವಾಗ ಸ್ಥಿರ ವಿದ್ಯುತ್ ಉತ್ಪಾದಿಸುತ್ತವೆ. ಹೀಗಾಗಿ ಇಂತಹ ಸಾಧನಗಳನ್ನು ಮುಟ್ಟಿದಾಗಲೂ ಈ ಅನುಭವ ನಮಗೆ ಆಗುತ್ತದೆ.
ಅದರಲ್ಲೂ ಆಸ್ಪತ್ರೆಗಳು ಅಥವಾ ಡೇಟಾ ಸೆಂಟರ್‌ಗಳಂತಹ ಸೂಕ್ಷ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವ ಜಾಗದಲ್ಲಿ ಈ ಸಮಸ್ಯೆಯನ್ನು ನೋಡಬಹುದಾಗಿದೆ.
* ಕಡಿಮೆ ಆರ್ದ್ರತೆ: ಮೊದಲೇ ಹೇಳಿದಂತೆ, ಕಡಿಮೆ ಆರ್ದ್ರತೆಯ ಮಟ್ಟಗಳು ಸ್ಥಿರ ವಿದ್ಯುತ್ ಸಂಗ್ರಹಕ್ಕೆ ಕಾರಣವಾಗಬಹುದು. ಒಳಾಂಗಣ ತಾಪನವು ಗಾಳಿಯನ್ನು ತುಂಬಾ ಶುಷ್ಕವಾಗಿಸುವ ಚಳಿಗಾಲದಲ್ಲಿ ಇದು ವಿಶೇಷವಾಗಿ ಸಾಮಾನ್ಯವಾಗಿದೆ.
IISc ವಿಜ್ಞಾನಿಗಳು ಚಳಿಗಾಲದಿಂದ ಬೇಸಿಗೆಗೆ ಬದಲಾಗುತ್ತಿರುವ ಹವಾಮಾನದಿಂದಾಗಿ ಬೆಂಗಳೂರಿನಲ್ಲಿ ಇಂತಹ ಹೆಚ್ಚಿನ ಘಟನೆಗಳು ನಡೆಯತ್ತಿವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ