Explained: ರಷ್ಯಾ-ಉಕ್ರೇನ್ ನಡುವೆ ಏನಿದೆ ವೈರತ್ವ? ಉಭಯ ರಾಷ್ಟ್ರಗಳ ಯುದ್ಧದ Time Line ಇಲ್ಲಿದೆ

ರಷ್ಯಾ-ಉಕ್ರೇನ್ ಯುದ್ಧದಿಂದ ಇಡೀ ಜಗತ್ತು ಆತಂಕಗೊಂಡಿದೆ. ಅಷ್ಟಕ್ಕೂ ಎರಡು ದೇಶಗಳ ನಡುವೆ ಯುದ್ಧಕ್ಕೆ ಮೂಲ ಕಾರಣವೇನು? ನಿನ್ನೆ ಯುದ್ಧ ಶುರುವಾದಾಗಿನಿಂದ ಇಂದಿನವರೆಗೆ ಏನೇನಾಯ್ತು? ಇಲ್ಲಿದೆ ಸಂಪೂರ್ಣ ಮಾಹಿತಿ...

ಉಕ್ರೇನ್ ಹಾಗೂ ರಷ್ಯಾ ಅಧ್ಯಕ್ಷರು

ಉಕ್ರೇನ್ ಹಾಗೂ ರಷ್ಯಾ ಅಧ್ಯಕ್ಷರು

  • Share this:
ರಷ್ಯಾ (Russia) ಹಾಗೂ ಉಕ್ರೇನ್‌ (Ukraine) ನಡುವಿನ ಯುದ್ಧ (War) ಜೋರಾಗುತ್ತಿದೆ. ಒಂದೆಡೆ ಭಾರತೀಯರು (Indians) ಸೇರಿದಂತೆ ವಿದೇಶಿಗರು (Foreigners)  ಉಕ್ರೇನ್‌ನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಮತ್ತೊಂದೆಡೆ ಉಕ್ರೇನ್ ನಿವಾಸಿಗಳು, ನಾಗರಿಕರೆಲ್ಲ ಆತಂಕಗೊಂಡಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಕ್ಷಿಪಣಿಗಳು (Missiles) ಹಾರುತ್ತವೆ. ಬಾಂಬ್ (Bomb) ಸ್ಫೋಟವಾಗುತ್ತವೆ (Blast), ಬಂದೂಕಿನ (Gun) ಸದ್ದು ಕ್ಷಣ ಕ್ಷಣಕ್ಕೂ ಕೇಳಿ ಬರುತ್ತಿದೆ. ಕಟ್ಟಡಗಳು (Building)  ಕುಸಿಯುತ್ತಿವೆ, ನಿಂತ ನೆಲವೇ ಬಿರಿದಂತೆ ಆಗುತ್ತಿದೆ. ಬದುಕು ಭಯದಲ್ಲೇ ಇದೆ. ಯಾವಾಗ ಏಲ್ಲಿ ಏನಾಗುತ್ತದೆಯೋ ಎನ್ನುವ ಭಯ ಅಲ್ಲಿನವರನ್ನು ಕಾಡುತ್ತಿದೆ. ಅಷ್ಟಕ್ಕೂ ಉಕ್ರೇನ್‌ ಮೇಲೆ ರಷ್ಯಾಗೆ ಯಾಕಿಷ್ಟು ಕೋಪ? ಯುದ್ಧ ಮಾಡುವಂತ ಹಗೆತನ ಯಾಕೆ? ಇಲ್ಲಿದೆ ನೋಡಿ ಪಿನ್‌ ಟು ಪಿನ್ ಡಿಟೈಲ್ಸ್…

 ನಿನ್ನೆಯಿಂದ ಇಲ್ಲಿಯವರೆಗೆ ಏನಾಗಿದೆ?

ನಿನ್ನೆಯಿಂದ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಅಧಿಕೃತವಾಗಿ ಆರಂಭವಾಗಿದೆ. ನಿನ್ನೆ 11 ವಾಯುನೆಲೆಗಳು ಸೇರಿದಂತೆ 74 ಉಕ್ರೇನಿಯನ್ ಮಿಲಿಟರಿ ಸೌಲಭ್ಯಗಳನ್ನು ನಾಶಪಡಿಸಿದೆ ಎಂದು ರಷ್ಯಾ ಹೇಳಿಕೊಂಡಿದೆ. ನಿನ್ನೆ ಮುಂಜಾನೆಯೇ ರಷ್ಯಾ ಪಡೆಗಳು ಉಕ್ರೇನ್‌ನನ್ನು ಸುತ್ತುವರೆದು ಯುದ್ಧ ಆರಂಭಿಸಿದ್ದವು.

ಉಕ್ರೇನ್ ಗಡಿಯಲ್ಲಿ ರಷ್ಯಾ ಅಬ್ಬರ

ಉಕ್ರೇನ್‌ನ ಗಡಿಯಲ್ಲಿ ರಷ್ಯಾದ ಒಂದೂವರೆ ಲಕ್ಷಕ್ಕೂ ಅಧಿಕ ಸೈನಿಕರು ಜಮಾಯಿಸಿ, ಯುದ್ಧ ಆರಂಭಿಸಿದರು. ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿ ಮೊದಲ ಬಾಂಬ್ ಸ್ಫೋಟಗೊಂಡರೆ, ಇತರೇ 11 ನಗರಗಳಲ್ಲಿ ಸರಣಿ ದಾಳಿ ನಡೆಸಲಾಯಿತು. ರಷ್ಯಾ ಪಡೆಗಳು ಉಕ್ರೇನ್ ಸೇನಾ ನೆಲೆಗಳ ಮೇಲೆ ಅಟ್ಯಾಕ್ ಮಾಡಿದವು.

74 ಮಿಲಿಟರಿ ನೆಲೆ ನಾಶಗೊಳಿಸಿದ ರಷ್ಯಾ

ಮೊದಲ ದಿನ ರಷ್ಯಾ ಸೇನೆಯು ಉಕ್ರೇನ್‌ನ ಬರೋಬ್ಬರಿ 11 ಏರೋಡ್ರೋಮ್‌ಗಳು ಸೇರಿದಂತೆ 74 ನೆಲದ ಮೇಲಿನ ಮಿಲಿಟರಿ ಮೂಲಸೌಕರ್ಯ ನೆಲೆಗಳನ್ನು ನಾಶಪಡಿಸಿವೆ. ನಿನ್ನೆಯಿಂದ ಇಂದಿನವರೆಗೆ ಉಕ್ರೇನ್ ರಾಜಧಾನಿ ಕೈವ್ ಸೇರಿದಂತೆ ವಿವಿಧೆಡೆ ಒಟ್ಟು 203 ದಾಳಿಗಳನ್ನು ರಷ್ಯಾ ನಡೆಸಿದೆ.

 “ಮೊದಲ ದಿನದ ಯುದ್ಧ ಯಶಸ್ವಿಯಾಗಿದೆ” ಎಂದ ಪುಟಿನ್

ನಿನ್ನೆ ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ಯುದ್ಧ ಯಶಸ್ವಿಯಾಗಿದೆ ಅಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಜೊತೆಗೆ "ನಾನು ಉಕ್ರೇನ್ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಲು ನಿರ್ಧರಿಸಿದ್ದೇನೆ" ಎಂದು ಪುಟಿನ್ ಹೇಳಿದ್ದಾರೆ.

“ನಾವು ಏಕಾಂಗಿಯಾಗಿದ್ದೇವೆ” ಎಂದ ಉಕ್ರೇನ್ ಅಧ್ಯಕ್ಷ

ರಷ್ಯಾದ ಭೀಕರ ದಾಳಿಯಿಂದ ಉಕ್ರೇನ್ ಅಕ್ಷರಶಃ ನಡುಗಿ ಹೋಗಿದೆ. ವಿಶ್ವದ ನಾಯಕರ ಎದುರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ನಮ್ಮ ದೇಶವನ್ನು ರಕ್ಷಿಸುವಲ್ಲಿ ನಾವು ಏಕಾಂಗಿಯಾಗಿದ್ದೇವೆ. ಆದರೆ ಏಕಾಂಗಿಯಾದರೂ ಸರಿ ದೇಶವನ್ನು ರಕ್ಷಿಸಿಕೊಳ್ಳುವುದಕ್ಕೆ ಹೋರಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: Video: ಅಲ್ಲಿ ಬಾಂಬ್, ಎದೆಯಲ್ಲಿ ಜ್ವಾಲಾಮುಖಿ! ಯುದ್ಧ ಪೀಡಿತ Ukraineನಲ್ಲಿನ ಹೃದಯ ಕಲಕುವ ಕಣ್ಣೀರ ಕಥೆಗಳು

ಉಕ್ರೇನ್ ಸೈನಿಕರು, ನಾಗರಿಕರು ಸೇರಿ 137 ಸಾವು

ನಿನ್ನೆ ರಷ್ಯಾ ನಡೆಸಿದ ದಾಳಿಯಲ್ಲಿ ಉಕ್ರೇನ್‌ನ ಸೈನಿಕರು, ನಾಗರಿಕರು ಸೇರಿದಂತೆ 137ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾಗಿ ಉಕ್ರೇನ್ ಸರ್ಕಾರ ಹೇಳಿದೆ. ರಾಜದಾನಿ ಕೈವ್ ಸೇರಿದಂತೆ ಪ್ರಮುಖ ನಗರಗಳನ್ನು ರಷ್ಯಾ ಭೀಕರವಾಗಿ ಹಾನಿಗೊಳಿಸಿದೆ. ಇನ್ನು ಈ ಭೀಕರ ಯುದ್ಧದಲ್ಲಿ 316 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರು ಮಧ್ಯ ರಾತ್ರಿಯ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಯುದ್ಧಕ್ಕೂ ಮುನ್ನ ಏನಾಗಿತ್ತು?

ಇದಕ್ಕೂ ಮೊದಲು ಫೆಬ್ರವರಿ 21 ರಂದು, ಪುಟಿನ್ ಪ್ರತ್ಯೇಕತಾವಾದಿ ನಾಯಕರೊಂದಿಗೆ ಉಕ್ರೇನ್‌ನಲ್ಲಿ ಎರಡು ಪ್ರದೇಶಗಳನ್ನು ಗುರುತಿಸುವ ಸುಗ್ರೀವಾಜ್ಞೆಗೆ ಸಹಿ ಹಾಕಿದರು - ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ - ಸ್ವತಂತ್ರ ಸ್ವಾಧೀನದ ಘಟಕಗಳು. ಎರಡು ಒಡೆದ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಅವರು ರಷ್ಯಾದ ಸೈನ್ಯಕ್ಕೆ ಆದೇಶಿಸಿದರು. ಆದರೆ ಯಾವುದೂ ಸಾಧ್ಯವಾಗದೇ ರಷ್ಯಾ ನಿನ್ನೆ ಯುದ್ಧ ಘೋಷಿಸಿತು.

ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಯಾಕೆ?

1991 ರಲ್ಲಿ ಸೋವಿಯತ್ ಒಕ್ಕೂಟದ ಪತನದೊಂದಿಗೆ ಉಕ್ರೇನ್ ಸ್ವತಂತ್ರ ರಾಷ್ಟ್ರವಾಯಿತು. ಇದು ಮೊದಲು ರಷ್ಯಾದ ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ನಂತರ ಸೋವಿಯತ್ ಗಣರಾಜ್ಯವಾಯಿತು. ಇದರೊಂದಿಗೆ ಅದು ರಷ್ಯಾದ ಸಾಮ್ರಾಜ್ಯಶಾಹಿ ಪರಂಪರೆಯನ್ನು ದೂರ ಮಾಡಿ, ಪಶ್ಚಿಮದೊಂದಿಗೆ ನಿಕಟ ಸಂಬಂಧವನ್ನು ರೂಪಿಸಿತು.

ಸಂಘರ್ಷಕ್ಕೆ ನಾಂದಿ ಹಾಡಿದ್ದ ಉಕ್ರೇನ್ ಮೊದಲ ಅಧ್ಯಕ್ಷರು

ಉಕ್ರೇನ್ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಮಾಸ್ಕೋದೊಂದಿಗೆ ನಿಕಟ ಸಂಬಂಧಗಳ ಪರವಾಗಿ ಯುರೋಪಿಯನ್ ಒಕ್ಕೂಟದೊಂದಿಗಿನ ಅಸೋಸಿಯೇಷನ್ ​​ಒಪ್ಪಂದವನ್ನು ತಿರಸ್ಕರಿಸಿದಾಗ ಸಂಘರ್ಷ ಪ್ರಾರಂಭವಾಯಿತು. ಇದೇ ಕಾರಣಕ್ಕೆ ರಷ್ಯಾ ಉಕ್ರೇನ್‌ನ ಕ್ರಿಮಿಯನ್ ಪೆನಿನ್ಸುಲಾವನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಪೂರ್ವ ಉಕ್ರೇನ್‌ನ ಪ್ರತ್ಯೇಕತಾವಾದಿ ದಂಗೆಯನ್ನು ಬೆಂಬಲಿಸಿತು.

 ಉಕ್ರೇನ್‌ನ ಕೈಗಾರಿಕಾ ಕೇಂದ್ರದ ಮೇಲೆ ದಾಳಿ

ಇದಾದ ಕೆಲವೇ ದಿನಗಳಲ್ಲಿ, ದೇಶದ ಕೈಗಾರಿಕಾ ಕೇಂದ್ರವಾದ ಡಾನ್ಬಾಸ್ ಮೇಲೆ ದಾಳಿ ಮಾಡಿತು. ಉಕ್ರೇನಿಯನ್ ಪಡೆಗಳು ಮತ್ತು ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ನಡುವಿನ ಸಶಸ್ತ್ರ ಸಂಘರ್ಷದಲ್ಲಿ 14,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು.

ನ್ಯಾಟೋ ಸದಸ್ಯತ್ವವನ್ನು ವಿರೋಧಿಸಿದ್ದ ರಷ್ಯಾ

ರಷ್ಯಾ ತನ್ನ ಸುತ್ತಮುತ್ತಲ ರಾಷ್ಟ್ರಗಳಲ್ಲಿ ಅಮೆರಿಕಾ ನೇತೃತ್ವದ ನ್ಯಾಟೋ ಪ್ರಬಲವಾಗುವುದನ್ನು ಸಹಿಸುವುದಿಲ್ಲ. ಆದರೆ ಉಕ್ರೇನ್‌ ನ್ಯಾಟೋ ಸದಸ್ಯತ್ವ ಪಡೆಯಲು ಉತ್ಸುಕವಾಗಿತ್ತು. ಇದು ರಷ್ಯಾ ಉಕ್ರೇನ್‌ ಮೇಲೆ ಮುಗಿ ಬೀಳುವುದಕ್ಕೆ ಪ್ರಬಲ ಕಾರಣವಾಯಿತು.

ನ್ಯಾಟೋ ಮೇಲೆ ರಷ್ಯಾಕ್ಕೆ ಏಕೆ ದ್ವೇಷ?

ಎರಡನೆಯ ಮಹಾಯುದ್ಧವು ಜಗತ್ತನ್ನು ಎರಡು ಗುಂಪುಗಳಾಗಿಸಿತ್ತು. ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ಎರಡು ಮಹಾಶಕ್ತಿಗಳಾಗಿದ್ದವು. ಡಿಸೆಂಬರ್ 25, 1991 ರಂದು, ಸೋವಿಯತ್ ಒಕ್ಕೂಟವು 15 ಹೊಸ ದೇಶಗಳಾಗಿ ಒಡೆದು ಹೋಯಿತು.

ಅಮೆರಿಕಾ ನೇತೃತ್ವದಲ್ಲಿ ನ್ಯಾಟೋ ಬಲವರ್ಧನೆ

ಅರ್ಮೇನಿಯಾ, ಅಜೆರ್ಬೈಜಾನ್, ಬೆಲಾರಸ್, ಎಸ್ಟೋನಿಯಾ, ಜಾರ್ಜಿಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ಲಾಟ್ವಿಯಾ, ಲಿಥುವೇನಿಯಾ, ಮೊಲ್ಡೊವಾ, ರಷ್ಯಾ, ತಜಿಕಿಸ್ತಾನ್, ತುರ್ಕಮೆನಿಸ್ತಾನ್, ಉಕ್ರೇನ್ ಮತ್ತು ಉಜ್ಬೇಕಿಸ್ತಾನ್, ಇದರ ನಂತರ, ಅಮೆರಿಕ ಏಕೈಕ ಸೂಪರ್ ಪವರ್ ಆಗಿ ಉಳಿಯಿತು. ಅಮೆರಿಕ ನೇತೃತ್ವದಲ್ಲಿ, ನ್ಯಾಟೋ ತನ್ನ ವಿಸ್ತರಣೆಯನ್ನು ಮುಂದುವರೆಸಿತು.

ರಷ್ಯಾದಿಂದ ಹೊರಬಂದ ರಾಷ್ಟ್ರಗಳು ನ್ಯಾಟೋ ತೆಕ್ಕೆಗೆ

ಸೋವಿಯತ್ ಒಕ್ಕೂಟದಿಂದ ಹೊರಬಂದ ದೇಶಗಳು ನ್ಯಾಟೋಗೆ ಸೇರಲು ಪ್ರಾರಂಭಿಸಿದವು. ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾ 2004 ರಲ್ಲಿ ನ್ಯಾಟೋಗೆ ಸೇರಿಕೊಂಡವು. ಜಾರ್ಜಿಯಾ ಮತ್ತು ಉಕ್ರೇನ್‌ಗೆ 2008ರಲ್ಲಿ ನ್ಯಾಟೋ ಸದಸ್ಯತ್ವವನ್ನು ನೀಡಲಾಯಿತು.

ಆದರೆ ಇದಕ್ಕೆ ರಷ್ಯಾ ತೀವ್ರ ವಿರೋಧವಿತ್ತು. ಆದಾಗ್ಯ ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆಯಿತಾದರೂ ರಷ್ಯಾದ ರಾಜತಾಂತ್ರಿಕ ಒತ್ತಡ ಮತ್ತು ತಾಂತ್ರಿಕ ಕಾರಣದಿಂದಾಗಿ ಮಿಲಿಟರಿ ಮೈತ್ರಿಗೆ ಸೇರಲು ಸಾಧ್ಯವಾಗಲಿಲ್ಲ.

ತನ್ನ ಅಸ್ಥಿತ್ವಕ್ಕೆ ನ್ಯಾಟೋ ಕುತ್ತು ತರುವ ಆತಂಕ

ಉಕ್ರೇನ್ ನ್ಯಾಟೋಗೆ ಸೇರಿದರೆ,  ನ್ಯಾಟೋ ಪಡೆಗಳು ಉಕ್ರೇನ್ ಕಾವಲಿಗಾಗಿ ತನ್ನದೇ ಗಡಿಯಲ್ಲಿ ನಿಲ್ಲುತ್ತದೆ. ಇದು ರಷ್ಯಾದ ಅಸ್ಥಿತ್ವಕ್ಕೆ ಕುತ್ತು ತರಬಹುದು ಎಂಬ ಆತಂಕ ರಷ್ಯಾಕ್ಕಿದೆ. ಅಲ್ಲದೆ ನ್ಯಾಟೋ ಮಿತ್ರಕೂಟದಲ್ಲಿರುವುದು ಬಹುತೇಕ ತನ್ನ ಎದುರಾಳಿ ರಾಷ್ಟ್ರಗಳ ಸೇನಾಪಡೆಗಳೇ.. ಹೀಗಾಗಿ ರಷ್ಯಾ ತನ್ನ ಭದ್ರತಾ ಹಿತಾಸಕ್ತಿಯಿಂದಾಗಿ ನ್ಯಾಟೋವನ್ನು ಧ್ವೇಷಿಸುತ್ತಿದೆ.

ನ್ಯಾಟೋ ಬಲಾಬಲವೇನು?

ಮಿಲಿಟರಿ ಶಕ್ತಿಯಾಗಲಿ ಅಥವಾ ರಕ್ಷಣಾ ವೆಚ್ಚವಾಗಲಿ, ರಷ್ಯಾ ಮತ್ತು ನ್ಯಾಟೋ ನಡುವೆ ಯಾವುದೇ ಹೋಲಿಕೆ ಇಲ್ಲ. ನ್ಯಾಟೋ ಪ್ರಕಾರ, 2021 ರಲ್ಲಿ ಎಲ್ಲಾ 30 ಸದಸ್ಯ ರಾಷ್ಟ್ರಗಳ ಒಟ್ಟು ರಕ್ಷಣಾ ವೆಚ್ಚ 1,174 ಬಿಲಿಯನ್ ಡಾಲರ್ ಆಗಿತ್ತು. 2020 ರಲ್ಲಿ, ನ್ಯಾಟೋ ದೇಶಗಳು  1,106 ಶತಕೋಟಿ ಡಾಲರ್ ಖರ್ಚು ಮಾಡಿದೆ. ಮತ್ತೊಂದೆಡೆ, ರಷ್ಯಾ 2020 ರಲ್ಲಿ 61.7 ಶತಕೋಟಿ ಡಾಲರ್ ರಕ್ಷಣೆಗಾಗಿ ಖರ್ಚು ಮಾಡಿದೆ.

ರಷ್ಯಾ ಜೊತೆ ಹೋರಾಟಕ್ಕೆ ಸಜ್ಜಾದ 40 ಸಾವಿರ ಸೈನಿಕರು

 ಸುಮಾರು 40,000 ನ್ಯಾಟೋ ಸೈನಿಕರು ರಷ್ಯಾದ ಪಡೆಗಳೊಂದಿಗೆ ಹೋರಾಡಲು ಸಿದ್ಧರಾಗಿದ್ದಾರೆ. ನ್ಯಾಟೋ ನೇರವಾಗಿ ಯುದ್ಧದಲ್ಲಿ ತೊಡಗಿದರೆ, ಅದು ತನ್ನ ಇತ್ಯರ್ಥಕ್ಕೆ 33 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಹೊಂದಿರುತ್ತದೆ. ಮತ್ತೊಂದೆಡೆ, ರಷ್ಯಾವು 8 ಲಕ್ಷ ಸಕ್ರಿಯ ಸೈನಿಕರು ಸೇರಿದಂತೆ ಸುಮಾರು 12 ಲಕ್ಷ ಸೈನಿಕರನ್ನು ಹೊಂದಿದೆ.

ರಷ್ಯಾ ಹಾಗೂ ಉಕ್ರೇನ್ ಸೇನೆಗಳ ಬಲಾಬಲ ಹೇಗಿದೆ?

ಸೇನೆಯ ಎಲ್ಲ ವಿಭಾಗಗಳಲ್ಲಿಯೂ ಉಕ್ರೇನ್‌ಗಿಂತ ರಷ್ಯಾ ಬಹಳ ಪ್ರಬಲವಾಗಿದೆ. ರಷ್ಯಾ ಬಳಿ ಒಟ್ಟು 29 ಲಕ್ಷ ಸೇನಾ ಪಡೆ ಇದ್ದರೆ, ಉಕ್ರೇನ್ 11 ಲಕ್ಷ ಪಡೆಗಳನ್ನು ಹೊಂದಿದೆ. ಇವುಗಳಲ್ಲಿ ರಷ್ಯಾ 9,00,000 ಸಕ್ರಿಯ ಮತ್ತು 20 ಲಕ್ಷ ಮೀಸಲು ಪಡೆಗಳನ್ನು ಹೊಂದಿದೆ. ಉಕ್ರೇನ್ 2 ಲಕ್ಷ ಸಕ್ರಿಯ ಹಾಗೂ 9 ಲಕ್ಷ ಮೀಸಲು ಪಡೆಗಳನ್ನು ಹೊಂದಿದೆ.

ರಷ್ಯಾ ಬಳಿ 1,511 ಯುದ್ಧ ವಿಮಾನಗಳು, 544 ಯುದ್ಧ ಹೆಲಿಕಾಪ್ಟರ್‌ಗಳು, 12,250 ಟ್ಯಾಂಕ್‌ಗಳು, 30,122 ಸಶಸ್ತ್ರ ವಾಹನಗಳು ಹಾಗೂ 7,571 ಟೋವ್ಡ್ ಆರ್ಟಿಲರಿಗಳಿವೆ. ಉಕ್ರೇನ್ ಬಳಿ 98 ಯುದ್ಧ ವಿಮಾನ, 34 ಹೆಲಿಕಾಪ್ಟರ್, 2596 ಟ್ಯಾಂಕ್‌ಗಳು, 12,303 ಸಶಸ್ತ್ರ ವಾಹನಗಳು ಮತ್ತು 2,040 ಟೋವ್ಡ್ ಆರ್ಟಿಲರಿಗಳಿವೆ. ಹೀಗಾಗಿ ಉಕ್ರೇನ್‌ಗಿಂತ ರಷ್ಯಾ ಪ್ರಬಲವಾಗಿದೆ.

ಇದನ್ನೂ ಓದಿ: Explained: ಉಕ್ರೇನ್‌ನಲ್ಲಿ ಯುದ್ಧ, ಭಾರತದಲ್ಲಿ ಆತಂಕ! ದೂರದ ದೇಶದೊಂದಿಗೆ India ಸಂಬಂಧವೇನು?

ಮುಂದೆ ಏನಾಗಬಹುದು?

ರಷ್ಯಾ ಅಧ್ಯಕ್ಷ ಪುಟಿನ್ ಮಾತುಗಳನ್ನು ಕೇಳಿಸಿಕೊಂಡರೆ ಯುದ್ಧ ಸದ್ಯಕ್ಕೆ ಮುಗಿಯುವ ಲಕ್ಷಣ ತೋರುತ್ತಿಲ್ಲ. ಒಂದು ವೇಳೆ ರಷ್ಯಾದ ಬಲದ ಮುಂದೆ ಉಕ್ರೇನ್ ಶರಣಾಗಿ, ಈ ಕೂಡಲೇ  ಶರಣಾದರೆ ಯುದ್ಧ ನಿಲ್ಲಬಹುದು.

ಮತ್ತೊಂದೆಡೆ ಈಗಾಗಲೇ ರಷ್ಯಾದ ಮೇಲೆ ವಿಶ್ವದ ಹಲವು ರಾಷ್ಟ್ರಗಳು ನಿಷೇಧ ಹೇರುತ್ತಿವೆ. ಹೀಗಾಗಿ ವಿಶ್ವದ ನಾಯಕರ ಒತ್ತಡ ಜಾಸ್ತಿಯಾದರೆ ಯುದ್ಧ ನಿಲ್ಲಬಹುದು. ಇಲ್ಲವಾದರೆ ಇದು ಮತ್ತೊಂದು ಮಹಾಯುದ್ಧಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ ಅಂತಾರೆ  ತಜ್ಞರು.
Published by:Annappa Achari
First published: