ಅತೀ ದೊಡ್ಡ ರಿಯಲ್ ಎಸ್ಟೇಟ್ (Real estate) ಸಂಸ್ಥೆ ಬೆಂಗಳೂರು ಮೂಲದ ಮಂತ್ರಿ ಡೆವಲಪರ್ಸ್ (Mantri developers) ನಿರ್ದೇಶಕ ಸುಶೀಲ್. ಪಿ ಮಂತ್ರಿಯವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಮನಿ-ಲಾಂಡರಿಂಗ್/ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಅವರನ್ನು ಕೋರ್ಟಿಗೆ (Court) ಹಾಜರು ಪಡಿಸಲಾಗಿದ್ದು ಇದೀಗ ಅವರನ್ನು ಇಡಿ ಕಸ್ಟಡಿಗೆ ವಹಿಸಿ ನ್ಯಾಯಾಲಯ ಆದೇಶ ನೀಡಿದೆ. ಸುಶೀಲ್ ಬಂಧನದಿಂದಾಗಿ ಮಂತ್ರಿ ಸೆರಿನಿಟಿ ಮತ್ತು ವೆಬ್‌ಸಿಟಿಯಂತಹ ವಿಳಂಬಿತ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಲವಾರು ಜನರು ಆತಂಕಕ್ಕೀಡಾಗಿದ್ದಾರೆ. ಫ್ಲ್ಯಾಟ್ (Flat) ನೀಡುವ ಭರವಸೆ ನೀಡಿದ ಗ್ರಾಹಕರಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ಅದನ್ನು ತನ್ನ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿರುವ ಆರೋಪದಿಂದಾಗಿ ಇಡಿ ಸುಶೀಲ್ (Sushil) ಅವರನ್ನು ಕಸ್ಟಡಿಗೆ ತೆಗೆದುಕೊಂಡಿದೆ
ಇಡಿ ತನಿಖೆ ಏನು ಹೇಳುತ್ತದೆ?
ಜನರಿಂದ ಕೋಟಿ ಕೋಟಿ ಹಣ ಪಡೆದು ಅದನ್ನು ನಿರ್ಮಾಣ ಪ್ರಾಜೆಕ್ಟುಗಳಿಗೆ ಉಪಯೋಗಿಸದೇ ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಇಡಿ ತನಿಖೆಯಲ್ಲಿ ಬಹಿರಂಗ ಪಡಿಸಿದೆ. ಇಡಿ ಅಧಿಕಾರಿಗಳ ಜೂನ್ 25ರ ಹೇಳಿಕೆಯ ಪ್ರಕಾರ, “ತನಿಖೆಯ ಸಮಯದಲ್ಲಿ, ಕಂಪನಿಯು ಬೈ-ಬ್ಯಾಕ್ ಯೋಜನೆಯ ಭಾಗವಾಗಿ ಫ್ಲಾಟ್‌ಗಳು/ಮನೆಗಳಿಗೆ ಮುಂಗಡ ಹಣವನ್ನು ಸಂಗ್ರಹಿಸಿರುವುದು ತಿಳಿದು ಬಂದಿದೆ. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (RERA) ಸ್ಪಷ್ಟ ನಿರ್ದೇಶನದ ನಂತರವೂ ಕಂಪನಿಯು ಖರೀದಿದಾರರಿಗೆ ಮೊತ್ತವನ್ನು ಮರುಪಾವತಿ ಮಾಡದೇ ವಂಚಿಸಿದೆ” ಎಂದಿದ್ದಾರೆ.
ಜೊತೆಗೆ ಸುಶೀಲ್ ವಿವಿಧ ಹಣಕಾಸು ಸಂಸ್ಥೆಗಳಿಂದ ಸುಮಾರು 5000 ಸಾವಿರ ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಈ ಪೈಕಿ ಸುಮಾರು 1000 ಕೋಟಿ ರೂ. ಬಾಕಿ ಓವರ್ ಡ್ಯೂ ಆಗಿದೆ. ಕೆಲ ಸಾಲಗಳು ಸುಸ್ತಿಯಾಗಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಣ ಪಾವತಿಸಿದ ಖರೀದಿದಾರರು ಕಂಗಾಲು
ಬೆಂಗಳೂರಿನಲ್ಲಿ ಮಂತ್ರಿ ಡೆವಲಪರ್ಸ್ ಆರಂಭಿಸಿದ ಹಲವಾರು ರಿಯಲ್ ಎಸ್ಟೇಟ್ ಯೋಜನೆಗಳು ಐದು ವರ್ಷಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿವೆ. ಈ ಯೋಜನೆಗಳನ್ನು ಖರೀದಿಸಿದವರಲ್ಲಿ ಹಲವರು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ (ಕೆಆರ್‌ಇಆರ್‌ಎ)ಪ್ರಕರಣವನ್ನೂ ದಾಖಲಿಸಿದ್ದಾರೆ. ನಮ್ಮಿಂದ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ಹಲವು ಗ್ರಾಹಕರು ಮಂತ್ರಿ ಡೆವಲಪರ್ಸ್ ವಿರುದ್ಧ ದೂರು ನೀಡಿದ್ದಾರೆ.
ದಕ್ಷಿಣ ಬೆಂಗಳೂರಿನ ದೊಡ್ಡಕಲ್ಲಸಂದ್ರದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಯೋಜನೆಯಲ್ಲಿ ಅಪಾರ್ಟ್‌ಮೆಂಟ್‌ಗಾಗಿ 2012-13ನೇ ಸಾಲಿನಲ್ಲಿ 70ಲಕ್ಷ ರೂ. ಪಾವತಿಸಿರುವುದಾಗಿ ಮಂತ್ರಿ ಸೆರಿನಿಟಿ ಗೃಹ ಖರೀದಿದಾರರ ವೇದಿಕೆಯ ಸಹ ಸಂಸ್ಥಾಪಕ ಹಾಗೂ ಪ್ರಧಾನ ಕಾರ್ಯದರ್ಶಿ ಧನಂಜಯ ಪದ್ಮನಾಭಾಚಾರ್ ತಿಳಿಸಿದ್ದಾರೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
"ಡಿಸೆಂಬರ್ 2015ರಲ್ಲಿ ಹೂಡಿಕೆ ಮಾಡಿದ್ದೇವೆ. ಆದರೆ ಇನ್ನೂ ನಾವು ನಮ್ಮ ಅಪಾರ್ಟ್‌ಮೆಂಟ್‌ಗಳನ್ನು ಪಡೆದಿಲ್ಲ. 2,152 ಯೂನಿಟ್‌ಗಳಿಗೆ ಕೆಲವು ಮನೆ ಖರೀದಿದಾರರು 90 ಪ್ರತಿಶತ ಹಣವನ್ನು ಪಾವತಿಸಿದ್ದಾರೆ, ಇನ್ನೂ ಕೆಲವರು ಸಂಪೂರ್ಣವಾಗಿ ಹಣ ಪಾವತಿಸಿದ್ದಾರೆ”ಎಂದು ಅವರು ಹೇಳಿದರು. 2020ರಲ್ಲಿ ಈ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ತನಿಖೆ ಇನ್ನೂ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: Explained: ಆಹಾರ ಬೆಲೆ ಹೆಚ್ಚಳಕ್ಕೂ ಬ್ಯಾಂಕ್ ಬಡ್ಡಿದರ ಹೆಚ್ಚಳಕ್ಕೂ ಲಿಂಕ್ ಇದೆಯೇ?
ಫೋರಂ, ಜೂನ್ 17ರಂದು ಇಡಿಗೆ ಪತ್ರ ಬರೆದು ಬಿಲ್ಡರ್ ಭೂಮಿಯ ಅವಿಭಜಿತ ಪಾಲು (ಯುಡಿಎಸ್) ಷರತ್ತು ದುರುಪಯೋಗಪಡಿಸಿಕೊಳ್ಳುವ ಮೂಲಕ ಹಣವನ್ನು ಲಾಂಡರಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ವಸತಿ ಸಮುಚ್ಚಯದಲ್ಲಿ ಅಪಾರ್ಟ್‌ಮೆಂಟ್ ಖರೀದಿದಾರರು ಹೊಂದಿರುವ ಭೂಮಿಯ ಒಂದು ಭಾಗ ಯುಡಿಎಸ್ ಆಗಿದೆ. ಕಟ್ಟಡವು ಪುನರಾಭಿವೃದ್ಧಿಗೆ ಒಳಗಾದರೆ ಅಥವಾ ಸರ್ಕಾರವು ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ, ಆಸ್ತಿ ಮಾಲೀಕರು ತಮ್ಮಲ್ಲಿರುವ ಯುಡಿಎಸ್ ಆಧಾರದ ಮೇಲೆ ಪರಿಹಾರವನ್ನು ಪಡೆದುಕೊಳ್ಳುತ್ತಾರೆ.
ಬೈ-ಬ್ಯಾಕ್ ಯೋಜನೆಯಲ್ಲಿ ಹೂಡಿಕೆ
ಪದ್ಮನಾಭಾಚಾರ್ ಅವರಂತೆ ಐಟಿ ವೃತ್ತಿಪರರಾಗಿರುವ ಮತ್ತೊಬ್ಬ ಖರೀದಿದಾರ ದೇವಾಂಗ್ ಖಮರ್ ಅವರು 2013ರಲ್ಲಿ ಬೈ-ಬ್ಯಾಕ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರು. ಈ ವೇಳೆ ಕಂಪನಿ 2016ರ ವೇಳೆಗೆ ಹೂಡಿಕೆ ಡಬಲ್ ಆಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಹೂಡಿಕೆ ಮಾಡಿದ ಹಣವೂ ಇಲ್ಲದೇ, ದ್ವಿಗುಣವೂ ಆಗದೇ 70 ಲಕ್ಷ ಬ್ಯಾಂಕ್ ಸಾಲಕ್ಕೆ ಬಡ್ಡಿ ಕಟ್ಟಬೇಕಾಯಿತು ಎನ್ನುತ್ತಾರೆ ದೇವಾಂಗ್ ಖಮರ್.
“ಇದೀಗ, ನಾನು EMI ಸಾಲವನ್ನು ಪಾವತಿಸುವುದನ್ನು ನಿಲ್ಲಿಸಿದ್ದೇನೆ ಮತ್ತು ಇದರ ಪರಿಣಾಮವಾಗಿ, ಬ್ಯಾಂಕ್‌ಗಳು ನನ್ನ ಕ್ರೆಡಿಟ್ ಕಾರ್ಡ್‌ಗಳನ್ನು ಹಿಂತೆಗೆದುಕೊಂಡಿವೆ. ಮತ್ತು ನಾನು ಬ್ಯಾಂಕ್ ಗಳಿಂದ ನೋಟಿಸ್‌ಗಳನ್ನು ಪಡೆಯುತ್ತಿದ್ದೇನೆ,” ಎಂದು ಅವರು ಹೇಳಿದರು.
ಭಯಪಡುವ ಅಗತ್ಯವಿಲ್ಲ ಎಂದ ವಕೀಲರು
ಜಿ.ಆರ್ ಅಸೋಸಿಯೇಟ್ಸ್‌ನ ವಕೀಲ ಮತ್ತು ಸಲಹೆಗಾರ ಸಂತೋಷ್ ಜಿ.ಆರ್, ಇಡಿ ಹಸ್ತಕ್ಷೇಪವು ಕ್ರಿಮಿನಲ್ ಹೊಣೆಗಾರಿಕೆಯಾಗಿದೆ. ಮನೆ ಖರೀದಿದಾರರು ಸಿವಿಲ್ ಆಗಿರುವ ಆಸ್ತಿಗೆ ಸಂಬಂಧಿಸಿದಂತೆ ಕಂಪನಿಯೊಂದಿಗೆ ಕಾನೂನು ಒಪ್ಪಂದವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. "ಕಂಪನಿ, CMD ಮತ್ತು ನಿರ್ದೇಶಕರ ವಿರುದ್ಧ ನಡೆಯುತ್ತಿರುವ ED ತನಿಖೆಯು 2002ರ ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯಿದೆ, ಮತ್ತು ಇವುಗಳು ಕ್ರಿಮಿನಲ್ ಹೊಣೆಗಾರಿಕೆಗಳಾಗಿವೆ.
ಮನೆ ಖರೀದಿದಾರರು ಚಿಂತಿಸಬೇಕಿಲ್ಲ ಏಕೆಂದರೆ ಇದು ಅವರು ಸಲ್ಲಿಸಿರುವ ರೇರಾ ಪ್ರಕರಣಗಳು ಅಥವಾ ಗ್ರಾಹಕರ ವೇದಿಕೆ ಪ್ರಕರಣಗಳ ಮೇಲೆ ಪರಿಣಾಮ ಬೀರುವುದಿಲ್ಲ,”ಎಂದು ಅವರು ಹೇಳಿದರು.
ಮತ್ತೊಬ್ಬ ವಕೀಲ ಆಕಾಶ್ ಬಂಟಿಯಾ, ಬಿಲ್ಡರ್ ಖರ್ಚು ಮಾಡಿದ ಸಂಪೂರ್ಣ ಮೊತ್ತವನ್ನು ಇಡಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು. “ತನಿಖೆ ನಡೆಯುತ್ತಿದೆ, ಕಂಪನಿ ಮಾಲೀಕರ ವೈಯಕ್ತಿಕ ಆಸ್ತಿಯನ್ನು ಲಗತ್ತಿಸಲಾಗುವುದು ಮತ್ತು ಮನೆ ಖರೀದಿದಾರರ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಲಯವು ಖಂಡಿತವಾಗಿಯೂ ಪ್ರಯತ್ನಿಸುತ್ತದೆ. 2017ರ ಜೇಪೀ ಇನ್ಫ್ರಾಟೆಕ್ ಪ್ರಕರಣದಲ್ಲಿ ಮನೆ ಖರೀದಿದಾರರು ಸದ್ಯ ತಮ್ಮ ಹಣವನ್ನು ಮರಳಿ ಪಡೆಯುತ್ತಿದ್ದಾರೆ.
ಇಲ್ಲೂ ಸಹ ಇದು ಸುದೀರ್ಘ ಕಾನೂನು ಹೋರಾಟವಾಗಬಹುದು ಆದರೆ ಗ್ರಾಹಕರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ” ಎಂದು ಕಾಶ್ ಬಂಟಿಯಾ ಹೇಳಿದರು. ಇಡಿ ತನಿಖೆಗಾಗಿ ಕಾಯುವ ಬದಲು, ವೈಯಕ್ತಿಕ ಮನೆ ಖರೀದಿದಾರರು ರೇರಾ, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೊರೆ ಹೋಗುವುದು ಸೂಕ್ತ ಎಂದು ತಿಳಿಸಿದರು.
ಇದನ್ನೂ ಓದಿ: Tokenization: ಕಾರ್ಡ್ ಟೋಕನೈಸೇಷನ್ ಗಡವು ವಿಸ್ತರಿಸಿದ RBI
ಅಡ್ವೊಕೇಟ್ ಸತೀಶ್ ಕುಮಾರ್ ಅವರು ವೈಯಕ್ತಿಕ ಖರೀದಿದಾರರ ಒಪ್ಪಂದಗಳಲ್ಲಿ ನಮೂದಿಸಲಾದ ನಿಯಮಗಳು ಮತ್ತು ಷರತ್ತುಗಳು ಸಹ ಪ್ರಮುಖವಾಗುತ್ತವೆ ಎಂದು ಹೇಳಿದರು. "2016 ರಲ್ಲಿ RERA ಜಾರಿಗೆ ಬರುವ ಮೊದಲು ನಾವು ಯೋಜನೆಯ ಒಪ್ಪಂದಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಯೋಜನೆಗಳು RERA ಅಡಿಯಲ್ಲಿ ಬಂದರೆ, ಮನೆ ಖರೀದಿದಾರರು ಭಯಪಡುವ ಅವಶ್ಯಕತೆ ಇಲ್ಲ” ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ