ಬೆಂಗಳೂರು: ಹೆಮ್ಮಾರಿ ಸೋಂಕಿನ ಜೊತೆಯಲ್ಲಿ ಫಂಗಸ್ಗಳ ಕಾಟ ದೇಶವನ್ನೇ ಕ್ಷಣಕ್ಷಣಕ್ಕೂ ತಲ್ಲಣಿಸುವಂತೆ ಮಾಡುತ್ತಿದೆ. ಸದ್ಯ ಪಾಸಿಟಿವ್ ಕೇಸ್ಗಳು ಸಂಖ್ಯೆ ದೇಶದಲ್ಲಿ ತಗ್ಗಿಯಾದರೂ, ಸಾವಿರಾರು ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಲೇ ಇದೆ. ಬೆಡ್ ಸಿಗದೆ, ಆಕ್ಸಿಜನ್ ಸಿಗದೇ ಪ್ರಾಣ ಬಿಡುತ್ತಿರುವ ದೃಶ್ಯ ಕಣ್ಣೆದುರಿಗಿದೆ. ಇಂಥಾ ಕಠೋರ ಪರಿಸ್ಥಿತಿಯಲ್ಲೂ ಸೋಂಕಿನಿಂದ ಬಚಾವ್ ಆಗಲು ಇರುವ ಮಾರ್ಗವೇ ಮಾಸ್ಕ್ ಹಾಗೂ ಸಾಮಾಜಿಕ ಅಂತರ. ಕಳೆದೊಂದು ವರ್ಷದಿಂದಲೂ ಮಾಸ್ಕ್ ಧಾರಣೆ ಮಹತ್ವವನ್ನು ಸಾರಿ ಹೇಳುತ್ತಿದ್ದರು ಹಲವರು ಅದನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದ ಅವರಿಗೂ ಅವರ ಸುತ್ತಮುತ್ತಲಿನವರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಇಂಥಾ ಪರಿಸ್ಥಿತಿಯಲ್ಲಿ ಮಾಸ್ಕ್ ಕುರಿತು ತಜ್ಞರು ಮಹತ್ವದ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಇಷ್ಟು ದಿನ ಒಂದು ಮಾಸ್ಕ್ ಧರಿಸುತ್ತಿದ್ದವರೂ ಸೇಫ್ ಅಲ್ಲ ಅನ್ನುತ್ತಿದೆ ಹೊಸ ಸಂಶೋಧನೆ. ಇನ್ಮುಂದೆ ಡಬಲ್ ಮಾಸ್ಕ್ ಧರಿಸಿದರಷ್ಟೇ ಸೋಂಕಿನಿಂದ ಬಚಾವ್ ಆಗಬಹುದಂತೆ. ಈ ಬಗ್ಗೆ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಮಾತನಾಡಿ, 2 ಮಾಸ್ಕ್ ಧರಿಸುವ ಅಗತ್ಯವಿದೆ ಎಂದಿದ್ದಾರೆ. ಕೋವಿಡ್-19 ಸೋಂಕಿನಿಂದ ಬಚಾವ್ ಆಗಲು ಎನ್-95 ಮಾಸ್ಕ್ ಅತ್ಯುತ್ತಮವಾಗಿದ್ದು, ಸೋಂಕು ಮೂಗು-ಬಾಯಿಯ ಮೂಲಕ ಪ್ರವೇಶಿಸುವುದನ್ನು ಶೇ.90ರಷ್ಟು ತಡೆಯುತ್ತದೆ. ಸೋಂಕನ್ನು ತಡೆಯಲು 2ನೇ ಅತ್ಯುತ್ತಮ ಆಯ್ಕೆ ಸರ್ಜಿಕಲ್ ಮಾಸ್ಕ್. ಇದರಿಂದ ಶೇ.85-90ರಷ್ಟು ಸುರಕ್ಷಿತವಾಗಿರಬಹುದು. ಇವೆರೆಡು ಮಾಸ್ಕ್ ಆಯ್ಕೆಗಳು ಲಭ್ಯವಿಲ್ಲದಾಗ ಬಟ್ಟೆಯ ಮಾಸ್ಕ್ ಮೊರೆ ಹೋಗಬೇಕಾಗುತ್ತೆ.
ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ ಈರುಳ್ಳಿ ಮೇಲೆ, ಫ್ರಿಡ್ಜ್ನಲ್ಲಿ ಬೆಳೆಯುತ್ತದೆಯೇ..? ತಜ್ಞ ವೈದ್ಯರು ಈ ಬಗ್ಗೆ ಏನಂತಾರೆ?
ಬಟ್ಟೆ ಮಾಸ್ಕ್ನಿಂದ ಸೋಂಕು ಒಳನುಸುಳುವ ಸಾಧ್ಯತೆಗಳು ಹೆಚ್ಚಿರುವುದರಿಂದ 2 ಮಾಸ್ಕ್ಗಳನ್ನು ಧರಿಸಬೇಕಾಗುತ್ತೆ. 2 ಪದರಗಳ ಮಾಸ್ಕ್ ವೈರಸ್ ಒಳನುಸುಳುವುದನ್ನು ತಡೆಯುತ್ತೆ ಎಂದಿದ್ದಾರೆ. ಎಂಥಾ ಮಾಸ್ಕ್ , ಎಷ್ಟು ಧರಿಸಬೇಕು ಅನ್ನುವುದಕ್ಕಿಂತ ಮಾಸ್ಕ್ನ್ನು ಹೇಗೆ ಧರಿಸಬೇಕು ಎಂಬುವುದು ಮುಖ್ಯವಾಗುತ್ತೆ. ಸೂಕ್ತ ರೀತಿಯಲ್ಲಿ ಮೂಗು ಮತ್ತು ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು. ನೀವು ಎನ್-95 ಮಾಸ್ಕನ್ನೂ ಸರಿಯಾಗಿ ಧರಿಸದೆ ಇದ್ದರೆ ಪ್ರಯೋಜನವಿಲ್ಲ. ಮೊದಲು ಜನ ಸರಿಯಾಗಿ ಮಾಸ್ಕ್ ಧರಿಸಬೇಕು ಎಂದು ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
10 ಅಡಿ ಅಂತರದಿಂದ ಸೀನಿದರೂ ವೈರಸ್ ಬಟ್ಟೆ ಮಾಸ್ಕ್ ಮೂಲಕ ದೇಹವನ್ನು ಒಕ್ಕುವ ಸಾಧ್ಯತೆಗಳಿರುತ್ತವೆ. ಇದನ್ನು ತಪ್ಪಿಸಲು ಡಬಲ್ ಮಾಸ್ಕ್ ಬೇಕಿದೆ ಅಂತಿದ್ದಾರೆ ಸಂಶೋಧಕರು. ಇನ್ನು ಭಾರತದ ಕೊರೋನಾ ಪರಿಸ್ಥಿತಿ ಕರಾಳ ಮಟ್ಟವನ್ನು ತಲುಪಿದ್ದು, ಮನೆಯಿಂದ ಹೊರ ಹೋಗುವ ಮುನ್ನ ಮಾಸ್ಕ್ ಧರಿಸಲೇಬೇಕು. ಸಾರ್ವಜನಿಕ ಸ್ಥಳಗಳಾದ ಆಸ್ಪತ್ರೆ, ಬ್ಯಾಂಕ್, ಮಾರುಕಟ್ಟೆಗಳು, ಪಾರ್ಕ್ಗಳಲ್ಲಿ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು. ಖಾಸಗಿ ವಾಹನಗಳಲ್ಲಿ ಒಬ್ಬರೇ ಪ್ರಯಾಣಿಸುವಾಗಲೇ ಮಾಸ್ಕ್ ಧರಿಸಬೇಕು. ಇನ್ನು ಜಾಗಿಂಗ್ ಹಾಗೂ ವ್ಯಾಯಾಮ ಮಾಡುವಾಗಲು ಮಾಸ್ಕ್ ಧರಿಸುವುದು ಸೂಕ್ತವಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: ಎರಡು ಬೇರೆ ಬೇರೆ ಲಸಿಕೆ ಪಡೆಯುವುದು ಸೇಫ್.. ವ್ಯಾಕ್ಸಿನ್ ಕಾಕ್ಟೇಲ್ಗೆ OK ಎಂದ ಕೋವಿಡ್ ತಜ್ಞ ವೈದ್ಯ!
ಇನ್ನು ದೇಶಾದ್ಯಂತ 24 ಗಂಟೆಗಳ ಅವಧಿಯಲ್ಲಿ 1,86,364 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,75,55,457ಕ್ಕೆ ಏರಿಕೆ ಆಗಿದೆ. ಗುರುವಾರ 3,660 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,18,895ಕ್ಕೆ ಏರಿಕೆ ಆಗಿದೆ. ಈವರೆಗೆ 2,48,93,410 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 23,43,152 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 20 ಕೋಟಿ ದಾಟಿದೆ. ಈವರೆಗೆ 20,57,20,660 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾನು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ