ಚಿತ್ರರಂಗದಲ್ಲಿ ಸದ್ಯ ‘777 ಚಾರ್ಲಿ’ (777 Charlie) ಸಿನಿಮಾದ್ದೇ (Cinema) ಮಾತು. ನಾಯಿ (Dog) ಹಾಗೂ ಮನುಷ್ಯನ (Human) ನಡುವಿನ ಬಾಂಧವ್ಯ (Relationship) ಸಾರುವ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿ, ಜನಮನ್ನಣೆ ಪಡೆಯುತ್ತಿದೆ. ಚಾರ್ಲಿ (Charlie) ಹಾಗೂ ಧರ್ಮನ (Dharma) ಬಾಂಧವ್ಯವನ್ನು ನೋಡಿದ ಪ್ರೇಕ್ಷಕರು ಸಂತಸ ಪಟ್ಟಿದ್ದಾರೆ. ದುಃಖಿಸಿದ್ದಾರೆ. ಹಿಂದೆಂದೋ ತಮ್ಮ ಮನೆಯಲ್ಲಿದ್ದು ಮರೆಯಾದ ಮುದ್ದಿನ ನಾಯಿಯನ್ನು (Pet Dog) ಚಾರ್ಲಿಯಲ್ಲಿ ಕಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಚಾರ್ಲಿ ಸಿನಿಮಾ ನೋಡಿದ ಅದೆಷ್ಟೋ ಜನ ಮೂಕ ಪ್ರಾಣಿಯೆಡೆಗೆ, ಅದರಲ್ಲೂ ನಾಯಿಯೆಡೆಗೆ ಪ್ರೀತಿಯ ನೋಟ ಬೀರುತ್ತಿದ್ದಾರೆ. ಅಂದಹಾಗೆ ನಾಯಿ ಹಾಗೂ ಮಾನವನ ನಡುವಿನ ಪ್ರೀತಿ (Love), ಒಡನಾಟ, ಬಾಂಧವ್ಯವೆಲ್ಲ ಇಂದು ನಿನ್ನೆಯದ್ದಲ್ಲ. ಅದಕ್ಕೆ ಶತ-ಶತಮಾನಗಳ ಇತಿಹಾಸವಿದೆ. ಮಹಾಭಾರತದಲ್ಲಿ (Maha Bharat) ಧರ್ಮರಾಯನ್ನು (Dharmaraya) ಸ್ವರ್ಗ (Heaven) ಸೇರಿಸಿದ್ದು ನಾಯಿಯೇ ಅಂತಾರೆ ಹಿರಿಯರು. ಹಾಗಿದ್ರೆ ಎಲ್ಲಾ ಪ್ರಾಣಿಗಳ ಪೈಕಿ ಚಾರ್ಲಿ ಅಂದರೆ ಇಲ್ಲಿ ನಾಯಿಗಳ ಮೇಲೆಯೇ ಧರ್ಮ ಅಂದರೆ ಮನುಷ್ಯರಿಗೆ ಪ್ರೀತಿಯೇಕೆ? ನಾಯಿ ಮತ್ತು ಮನುಷ್ಯರ ನಡುವಿನ ಸಂಬಂಧ, ಬಾಂಧವ್ಯ ಹೇಗಿರುತ್ತದೆ? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ…
ನಾಯಿಯೇ ಅಂತೆ ಮನುಷ್ಯನ ಮೊದಲ ಸಾಕುಪ್ರಾಣಿ!
ನಾಯಿ ಮನುಷ್ಯನ ಮೊದಲ ಸಾಕುಪ್ರಾಣಿ ಎನ್ನುವುದರಲ್ಲಿ ಅನುಮಾನ ಉಳಿದಿಲ್ಲ ಅಂತಾರೆ ತಜ್ಞರು. ಮನುಷ್ಯ ನಾಯಿಯನ್ನು ನನ್ನ ಸಾಕುಪ್ರಾಣಿ ಅಷ್ಟೇ ಅಲ್ಲ ನನ್ನ ಗೆಳೆಯ ಅಂತ ಒಪ್ಪಿಕೊಂಡಂತೆ, ನಾಯಿ ಮನುಷ್ಯನನ್ನು ತನ್ನ ಒಡೆಯ ಮಾತ್ರವಲ್ಲ, ಆತ ನನ್ನ ಗೆಳೆಯ ಅಂತ ಒಪ್ಪಿಕೊಂಡಿದ್ದು ಅನಾದಿಕಾಲದಲ್ಲೇ. ಶ್ವಾನ ಹಾಗೂ ಮಾನವನ ಈ ಸಂಬಂಧಕ್ಕೆ ಹದಿನೈದು ಸಾವಿರ ವರ್ಷದ ಇತಿಹಾಸವಿದೆ ಎನ್ನುತ್ತಾರೆ. ಮಾನವ ವಸಾಹತುಗಳ ದಿನಗಳಿಂದಲೂ ರಕ್ಷಣೆ, ಒಡನಾಟ ಮತ್ತು ಬೇಟೆಯ ಸಹಾಯವನ್ನು ನಾಯಿ ಒದಗಿಸಿದೆ.
ಭೂಮಿ ಮೇಲೆ 90 ಕೋಟಿ ನಾಯಿಗಳಿವೆಯಂತೆ!
ಒಂದು ಅಂದಾಜು ಲೆಕ್ಕದ ಪ್ರಕಾರ ಭೂಮಿಯಲ್ಲಿ ಸುಮಾರು ತೊಂಬತ್ತು ಕೋಟಿ ನಾಯಿಗಳಿವೆ ಎನ್ನಲಾಗಿದೆ. ಈ ಪೈಕಿ ನಾಯಿಗಳಲ್ಲಿ ಸುಮಾರು ನಾಲ್ಕು ನೂರಕ್ಕಿಂತ ಜಾಸ್ತಿ ವೈವಿಧ್ಯ ತಳಿಗಳಿವೆ ಅಂತಾರೆ ತಜ್ಞರು.
ಇದನ್ನೂ ಓದಿ: Explained: ಏನಿದು ಅಗ್ನಿಪಥ್ ಯೋಜನೆ? ಭಾರತದ ರಕ್ಷಣೆಯಲ್ಲಿ ಇದರ ಮಹತ್ವವೇನು?
ತೋಳಗಳಿಂದಲೇ ನಾಯಿಗಳ ವಿಕಸನ?
ತೋಳಗಳಿಂದಲೇ ನಾಯಿಗಳು ವಿಕಸನಗೊಂಡವು ಎನ್ನುವುದು ಕೆಲವು ಪ್ರಾಣಿ ಶಾಸ್ತ್ರಜ್ಞರ ವಾದ. ನೈಸರ್ಗಿಕವಾದಿ ಮಾರ್ಕ್ ಡೆರ್ ಎಂಬುವರು ತನ್ನ ಪುಸ್ತಕದಲ್ಲಿ, ಡೆರ್ ಮಾನವರು ಮತ್ತು ತೋಳಗಳ ನಡುವಿನ ಸಂಬಂಧವು ಹೇಗೆ ಅಭಿವೃದ್ಧಿಗೊಂಡಿತು ಮತ್ತು ಆ ಸಂಬಂಧವು ತೋಳಗಳ ದೈಹಿಕ ವಿಕಸನವನ್ನು ನಾಯಿಗಳಾಗಿ ಹೇಗೆ ಪ್ರಭಾವಿಸಿತು ಎಂಬುದನ್ನು ಅನ್ವೇಷಿಸುತ್ತಾರೆ.
ಮನುಷ್ಯನ ಮೂಡ್ ಅರ್ಥ ಮಾಡಿಕೊಳ್ಳುತ್ತವೆ ನಾಯಿಗಳು!
ನಾಯಿ ಸಾಕುವರಿಗೆ ಇದು ಅನುಭವಕ್ಕೆ ಬಂದಿರಬಹುದು. ನಾಯಿ ಬಗ್ಗೆ ಗೊತ್ತಿಲ್ಲದವರಿಗೆ ಇದು ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ನಾಯಿಗಳು ಮನುಷ್ಯನ ಮೂಡ್ ಅರ್ಥ ಮಾಡಿಕೊಳ್ಳುವ ಚಾಕಚಕ್ಯತೆ ಹೊಂದಿವೆಯಂತೆ. ನಾವು ಸಂತೋಷದಿಂದಿದ್ದಲ್ಲಿ, ತೀರಾ ದುಃಖ ಅಥವಾ ಕೋಪದಲ್ಲಿದ್ದಾಗ ನಾಯಿಗೆ ನಮ್ಮ ಮುಖ ನೋಡಿಯೇ ತಿಳಿಯುತ್ತವೆಯಂತೆ.
ನಾಯಿಯ ಮೇಲೆ ಮಹತ್ವದ ಸಂಶೋಧನೆ
ಇಂಗ್ಲೆಂಡಿನ ಲಿಂಕನ್ ಯೂನಿವರ್ಸಿಟಿಯಲ್ಲಿ ಈ ಬಗ್ಗೆ ಸಂಶೋಧನೆ ಮಾಡಲಾಯಿತು. ಸುಮಾರು ಇಪ್ಪತ್ತು ನಾಯಿಗಳನ್ನು ವಿಜ್ಞಾನಿಗಳು ಸ್ಕ್ರೀನ್ ಎದುರುಗಡೆ ನಿಲ್ಲಿಸಿ ಅದರ ಕಣ್ಣಿನ ಚಲನವಲನವನ್ನು ಕಂಪ್ಯೂಟರೀಕೃತ ಕ್ಯಾಮರಾದಲ್ಲಿ ಗ್ರಹಿಸುವ ವ್ಯವಸ್ಥೆಯಾಯಿತು. ನಾಯಿಗಳ ಎದುರಿಗಿನ ಸ್ಕ್ರೀನ್ ನಲ್ಲಿ ಬೇರೆ ಬೇರೆ ವಸ್ತುಗಳನ್ನು ಮತ್ತು ಮಧ್ಯೆ ಮಧ್ಯೆ ಮನುಷ್ಯನ ಮುಖವನ್ನು ತೋರಿಸಲಾಯಿತು. ಪ್ರತೀ ಬಾರಿ ವಸ್ತುಗಳನ್ನು ನೋಡಿದಾಗ, ನಾಯಿಗಳ ಕಣ್ಣು ಇಡೀ ವಸ್ತುವನ್ನು ಎಡ-ಬಲ-ಮೇಲೆ-ಕೆಳಕ್ಕೆ ನೋಡಿದವು. ಅದಕ್ಕೊಂದು ಪ್ಯಾಟರ್ನ್ ಇರಲಿಲ್ಲ. ಆದರೆ ನಡು ನಡುವೆ ಮನುಷ್ಯನ ಮುಖವನ್ನು ತೋರಿಸಿದಾಗ ಮಾತ್ರ ನಾಯಿಯ ಕಣ್ಣು ಮನುಷ್ಯನ ಎಡಮುಖದತ್ತ, ಎಡಗಣ್ಣಿನತ್ತ ಹೊರಳಿತು.
ಮನುಷ್ಯನ ಮುಖವನ್ನು ಗುರುತಿಸುವ ಶ್ವಾನಗಳು
ನಂತರ ಇದೇ ಪ್ರಯೋಗವನ್ನು ಸುಮಾರು ನೂರಕ್ಕಿಂತ ಜಾಸ್ತಿ ನಾಯಿಗಳನ್ನಿಟ್ಟು ಮಾಡಲಾಯಿತು. ಪ್ರತೀಯೊಂದು ನಾಯಿಯೂ – ಪ್ರತೀ ಬಾರಿ ಮನುಷ್ಯನ ಮುಖ ಕಂಡಾಗ ಎಡ ಭಾಗವನ್ನೇ ಗ್ರಹಿಸಿದವು. ನಂತರದಲ್ಲಿ ಬೇರೆ ಬೇರೆ ಸಾಕುಪ್ರಾಣಿ ಗಳನ್ನಿಟ್ಟು ಇದೇ ಪ್ರಯೋಗ ಮಾಡಿದಾಗ ಈ ರೀತಿ ಯಾವುದೇ ವಿಶೇಷ ಗೋಚರವಾಗಲಿಲ್ಲ. ಹೆಚ್ಚಿನ ಬೆಕ್ಕುಗಳಂತೂ ಸ್ಕ್ರೀನ್ ಅನ್ನೇ ನೋಡಲಿಲ್ಲ.
ಮನುಷ್ಯನನ್ನು ಗುರುತಿಸಲು ಇತರೇ ಪ್ರಾಣಿಗಳು ವಿಫಲ
ಇದರ ವಿಶ್ಲೇಷಣೆ ಬಹಳಷ್ಟು ಕಡೆ ಚರ್ಚೆಯಾಯಿತು. ನಂತರದಲ್ಲಿ ನಾಯಿಯ ಮೆದುಳಿನಲ್ಲಿ ಈ ರೀತಿ ಮನುಷ್ಯನ ಬೇರೆ ಬೇರೆ ಭಾವದ ಮುಖದ ಚಿತ್ರಗಳನ್ನು ತೋರಿಸಿದಾಗ ಆದ ಸೂಕ್ಷ್ಮಾತಿ ಸೂಕ್ಷ್ಮ ವ್ಯತ್ಯಾಸಗಳು ಬಹುತೇಕ ನಾಯಿಗಳಲ್ಲಿ ಒಂದೇ ತೆರನಾಗಿದ್ದವು. ಉಳಿದ ಸಾಕು ಪ್ರಾಣಿಗಳಲ್ಲಿ ಅದು ಕಾಣಿಸಲೇ ಇಲ್ಲ.ಇನ್ನು ನಾಯಿಗಳು ಉಳಿದ ನಾಯಿಗಳನ್ನು ನೋಡಿದಾಗ ಈ ಎಡಗಡೆ ಮುಖವನ್ನು ನೋಡುವುದನ್ನು ಮಾಡಲಿಲ್ಲ. ಹಾಗಾಗಿ ಇದು ಸಹಜ ಕಾಕತಾಳೀಯವಲ್ಲ ಅಂತ ಹೇಳಲಾಯ್ತು. ನಾಯಿಗಳು ಅದು ಹೇಗೋ ಮನುಷ್ಯನ ಮುಖದ ಈ ಸೂಕ್ಷ್ಮವನ್ನೂ ಗ್ರಹಿಸುತ್ತವೆ ಮತ್ತು ಮನುಷ್ಯನಂತೆ ಎದಿರಿಗಿರುವವರ ಆಂತರ್ಯ ಭಾವವನ್ನು ತಿಳಿಯುತ್ತವೆ ಎಂದೇ ಒಪ್ಪಿಕೊಳ್ಳಬೇಕಾಯಿತು.
ಮಗುವಿನಂತೆ ಮುಗ್ಧ ಮನಸ್ಸು ಹೊಂದಿರುತ್ತವೆ ನಾಯಿಗಳು
ನಾಯಿಯನ್ನು ಪ್ರೀತಿಸಿದಷ್ಟು ಬೇರೆ ಯಾವ ಪ್ರಾಣಿಯನ್ನೂ ಪ್ರೀತಿಸುವುದಿಲ್ಲ.ಮಗುವಿನಷ್ಟೇ ತಮ್ಮ ಮನೆಯ ನಾಯಿಯನ್ನೂ ಮನುಷ್ಯರು ಪ್ರೀತಿಸುತ್ತಾರೆ ಎನ್ನುತ್ತವೆ ಸಂಶೋಧನೆಗಳು. ಅವುಗಳೂ ಕೂಡ ಮಗುವಿನಷ್ಚೇ ಮುಗ್ಧವಾಗಿ ಮನೆಯವರನ್ನು ಹಚ್ಚಿಕೊಳ್ಳುತ್ತದೆಯಂತೆ. ಮಗುವಿನಷ್ಟೇ ಮುಗ್ಧವಾಗಿ ಪ್ರೀತಿ, ತುಂಟಾಟ, ಕೋಪ, ಅಸಮಾಧಾನ ತೋರುತ್ತವೆಯಂತೆ. ಸಿಟ್ಟು ಬಂದು ಆಮೇಲೆ ಕ್ಷಣ ಮಾತ್ರದಲ್ಲೇ ನಮ್ಮೆಡೆ ಓಡಿ ಬರುವ ಮಗುವಿನಂತೆ ನಾಯಿಗಳೂ ವರ್ತಿಸುತ್ತವೆಯಂತೆ.
ಮನುಷ್ಯ-ನಾಯಿಯದ್ದು ತಾಯಿ-ಮಗುವಿನ ಸಂಬಂಧ!
ತಾಯಿಯೊಬ್ಬಳು ಮಗುವಿಗೆ ಹಾಲುಣಿಸುವಾಗ ಒಕ್ಸಿಟೋಸಿನ್ ಎನ್ನುವ ಹಾರ್ಮೋನ್ ಮೆದುಳಿನ ಹೈಪೋಥೆಲಾಮಸ್ ಎನ್ನುವ ಭಾಗದಲ್ಲಿ ಉತ್ಪಾದನೆ ಯಾಗುತ್ತದೆ. ತಾಯಿಗೆ ಮಗು ಎಷ್ಟೇ ತೊಂದರೆಕೊಟ್ಟರೂ ಬೇಸರ ಆಗದಿರುವುದಕ್ಕೆ ಕಾರಣವೇ ಈ ಹಾರ್ಮೋನ್. ಮನುಷ್ಯ ತನ್ನ ಸಾಕು ನಾಯಿಯ ಮೈದಡವಿದಾಗ ಆತನಲ್ಲಿ ಮತ್ತು ನಾಯಿಯಲ್ಲಿ – ಎರಡರಲ್ಲೂ ಇದೇ ಒಕ್ಸಿಟೋಸಿನ್ ಹಾರ್ಮೋನ್ ಉತ್ಪಾದನೆಯಾಗುವುದನ್ನು ಗ್ರಹಿಸಲಾಗಿದೆ. ಇದು ಈ ತಾಯಿ ಮಗುವಿನ ಭಾವವೇ ನಾಯಿ ಮತ್ತು ಮನುಷ್ಯನಲ್ಲಿ ಹುಟ್ಟುವುದಕ್ಕೆ ವಿಜ್ಞಾನ ಕೊಟ್ಟ ಸಾಕ್ಷಿಯಾಗಿದೆ.
ಇದನ್ನೂ ಓದಿ: Explained: ರೇವ್ ಪಾರ್ಟಿ ಎಂದರೇನು? ಬೆಂಗಳೂರಲ್ಲಿ ಡ್ರಗ್ಸ್ ಪಾರ್ಟಿಗಳು ನಡೆಯೋದು ಹೇಗೆ? ಇಲ್ಲಿದೆ ಸ್ಫೋಟಕ ಮಾಹಿತಿ
ನಾಯಿ ಇದ್ರೆ ನಿಮ್ಮ ಹಾರ್ಟ್ ಆರೋಗ್ಯವಾಗಿರುತ್ತದೆ!
ನಾಯಿಯ ಮೈದಡವುವ ಕ್ರಿಯೆಯಲ್ಲಿ ಮನುಷ್ಯನ ಹೃದಯ ಬಡಿತ ಇಳಿತ ಕಾಣುವುದು, ರಕ್ತದೊತ್ತಡ ಸಹಜಕ್ಕೆ ಮರಳುವುದು, ಒಕ್ಸಿಟೋಸಿನ್ನಂಥ ಹಾರ್ಮೋನ್ ಬಿಡುಗಡೆಯಾಗುವುದು ಸಾಬೀತಾಗಿದೆ. ಈ ಕಾರಣಗಳಿಂದ ಹಲವು ಆರೋಗ್ಯ ಚಿಕಿತ್ಸೆಗಳಲ್ಲಿ ವಿದೇಶಗಳಲ್ಲಿ ಹೆಚ್ಚಾಗಿ ನಾಯಿಯನ್ನೂ ಬಳಸುತ್ತಾರೆ. ಇನ್ನೊಂದು ವಿಶೇಷ ಅಂದರೆ ನಾಯಿಯ ಜೊತೆ ಉತ್ತಮ ಬಾಂಧವ್ಯ ಹೊಂದಿರುವವರು ಹೃದಯಾಘಾತ ಹೊಂದುವ ಸಾಧ್ಯತೆ ನಾಲ್ಕು ಪಟ್ಟು ಕಡಿಮೆಯಂತೆ.
(ಮಾಹಿತಿ: ವಿವಿಧ ಮೂಲಗಳಿಂದ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ