Explained: 'ಹಲಾಲ್ ಕಟ್' ಮತ್ತು 'ಜಟ್ಕಾ ಕಟ್' ನಡುವಿನ ವ್ಯತ್ಯಾಸವೇನು ಗೊತ್ತಾ? ಇಲ್ಲಿದೆ ಫುಲ್ ಡಿಟೇಲ್ಸ್

ಈಗ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ಮಾಂಸದ ಬಗ್ಗೆ ಚರ್ಚೆ ಶುರುವಾಗಿದೆ. ಹಾಗೆ ನೋಡಿದರೆ ಈ ಎರಡು ಅಭ್ಯಾಸಗಳು ಮಾಂಸಕ್ಕಾಗಿ ಪ್ರಾಣಿಗಳನ್ನು ಕತ್ತರಿಸುವ ವಿಧಿಯೇ ಆಗಿದ್ದರೂ, ಎರಡರಲ್ಲೂ ವಿಧಿ ವಿಧಾನಗಳು ಭಿನ್ನವಾಗಿವೆ. ಹಾಗಾದರೆ ಈ ಎರಡು ರೀತಿಯ ಅಭ್ಯಾಸಗಳಲ್ಲಿ ಇರಬಹುದಾದ ಭಿನ್ನತೆಯಾದರೂ ಏನು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ...

ಹಲಾಲ್ ಕಟ್ ಮತ್ತು ಜಟ್ಕಾ ಕಟ್

ಹಲಾಲ್ ಕಟ್ ಮತ್ತು ಜಟ್ಕಾ ಕಟ್

  • Share this:
    ಹಿಜಾಬ್ ವಿವಾದದ (Hijab Controversy) ಗದ್ದಲ ಇನ್ನೂ ಮುಗಿದಿಲ್ಲ, ಅಷ್ಟರಲ್ಲೇ ಈಗ ಮತ್ತೆ ಹಲಾಲ್ ಕಟ್ (Halal Cut) ಮಾಂಸಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿವಾದ ಬಿಸಿಬಿಸಿಯಾಗುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಇಸ್ಲಾಂ (Islam) ಧರ್ಮದವರು ಸಾಮಾನ್ಯವಾಗಿ ತಾವು ಬಳಸುವ ಮಾಂಸವನ್ನು (Meat) ಹಲಾಲ್ ಕಟ್ ಆಗಿರುವದನ್ನು ಖಾತ್ರಿಪಡಿಸಿಕೊಂಡು ಬಳಸುತ್ತಾರೆ. ಇದು ಮುಂಚೆಯಿಂದಲೂ ಅವರಲ್ಲಿ ಪ್ರಚಲಿತದಲ್ಲಿದೆ. ಈಗ ಇದಕ್ಕೆ ಸೆಡ್ಡು ಹೊಡೆಯುವಂತೆ ಜಟ್ಕಾ ಕಟ್ (Jatka Cut) ಮಾಂಸದ ಸ್ವರೂಪವು ಎಲ್ಲೆಡೆ ಸುದ್ದಿ ಮಾಡುತ್ತಿದೆ. ಈ ಹಿಂದೆಯೂ ಜಟ್ಕಾ ಕಟ್ ಎನ್ನುತ್ತಿದ್ದರಾದರೂ ಈ ಬಗ್ಗೆ ಬಹುಜನರಿಗೆ ಗೊತ್ತಿಲ್ಲ. ಅದರಲ್ಲೂ ವಿಶೇಷವಾಗಿ ಸಿಖ್ (Sikh) ಹಾಗೂ ಹಿಂದುಗಳಲ್ಲಿ (Hindu) ಜಟ್ಕಾ ಕಟ್ ವಿಧಿ ಪ್ರಚಲಿತದಲ್ಲಿದೆ. ಹಾಗೆ ನೋಡಿದರೆ ಈ ಎರಡು ಅಭ್ಯಾಸಗಳು ಮಾಂಸಕ್ಕಾಗಿ ಪ್ರಾಣಿಗಳನ್ನು (Animals) ಕತ್ತರಿಸುವ ವಿಧಿಯೇ ಆಗಿದ್ದರೂ, ಎರಡರಲ್ಲೂ ವಿಧಿ ವಿಧಾನಗಳು ಭಿನ್ನವಾಗಿವೆ. ಹಾಗಾದರೆ ಈ ಎರಡು ರೀತಿಯ ಅಭ್ಯಾಸಗಳಲ್ಲಿ ಇರಬಹುದಾದ ಭಿನ್ನತೆಯಾದರೂ ಏನು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.

     ಹಲಾಲ್ ಕಟ್ ಮಾಂಸ

    ಹಲಾಲ್ ಎಂಬ ಪದವು ಅರೇಬಿಕ್ ಭಾಷೆಯ ಪದವಾಗಿದೆ. ಇದರ ಅರ್ಥ ತಿನ್ನಲು ಅಥವಾ ಬಳಸಲು ಯೋಗ್ಯವಾಗಿದೆ ಎಂದು. ಮುಸ್ಲಿಮರು ಸಾಮಾನ್ಯವಾಗಿ ಹಲಾಲ್ ಮಾಂಸವನ್ನೇ ತಿನ್ನುತ್ತಾರೆ. ಈ ವಿಧಾನದಲ್ಲಿ ಕುರಾನ್ ಗ್ರಂಥದ ಕೆಲವು ವಾಕ್ಯಗಳನ್ನು ಉಚ್ಛರಿಸುತ್ತ ಮೊದಲಿಗೆ ಕಡಿಯಬೇಕಾಗಿರುವ ಪ್ರಾಣಿಯ ಕುತ್ತಿಗೆಯನ್ನು ಹರಿತಾದ ಚಾಕುವಿನಿಂದ ಸೀಳಲಾಗುತ್ತದೆ. ಈ ಮೂಲಕ ಆ ಪ್ರಾಣಿಯ ದೇಹದಲ್ಲಿರುವ ಎಲ್ಲ ರಕ್ತವು ಸೋರಿ ಹೋಗಬೇಕು. ಈ ವಿಧಾನದಲ್ಲಿ ಪ್ರಾಣಿಯು ನರಳಾಡುತ್ತ ನಿಧಾನವಾಗಿ ಸಾಯುವುದನ್ನು ಗಮನಿಸಬಹುದು.

    ಜಟ್ಕಾ ಕಟ್ ವಿಧಾನ

    ಆದರೆ, ಇದಕ್ಕೆ ತದ್ವಿರುದ್ಧವಾಗಿ ಜಟ್ಕಾ ಕಟ್ ವಿಧದಲ್ಲಿ ಮಾಂಸಕ್ಕಾಗಿ ಕಡಿಯಬೇಕಾದ ಪ್ರಾಣಿಯ ಕುತ್ತಿಗೆಯನ್ನು ಹರಿತಾದ ಕತ್ತಿಯಿಂದ ಒಂದೇ ಸಲ ಅದು ಸಾಯುವಂತೆ ರುಂಡ ಹಾಗೂ ಮುಂಡ ಬೇರ್ಪಡುವಂತೆ ಕತ್ತರಿಸಲಾಗುತ್ತದೆ. ಈ ವಿಧಾನದಲ್ಲಿ ಪ್ರಾಣಿಯು ಒಂದೇ ಏಟಿನಲ್ಲಿ ತನ್ನ ಪ್ರಾಣ ಬಿಡುವುದನ್ನು ಗಮನಿಸಬಹುದು.

    ಇವೆರಡು ಮಾಂಸದಲ್ಲಿನ ವ್ಯತ್ಯಾಸ ಏನು?

    ಹಲಾಲ್ ಕಟ್ ಮಾಡಿದ ಮಾಂಸದಲ್ಲಿ ರಕ್ತ ಸಂಪೂರ್ಣವಾಗಿ ಹೊರಗೆ ಹೋಗಿರುತ್ತದೆ. ಇದರ ಮಾಂಸವನ್ನು ಬೇಯಿಸಿದಾಗ ಹೆಚ್ಚು ಮೃದುವಾಗಿರುತ್ತದೆ. ಜಟ್ಕಾ ಕಟ್ ಮಾಡಿದ ಮಾಂಸದಲ್ಲಿ ರಕ್ತ ಸ್ವಲ್ಪ ಮಟ್ಟಿಗೆ ಹಾಗೇ ಉಳಿದಿರುತ್ತದೆ. ಆದರೆ, ಇದನ್ನು ಬೇಯಿಸದೆಯೂ ಹೆಚ್ಚು ದಿನದವರೆಗೂ ಬಳಸಬಹುದು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸುತ್ತಾರೆ.

    ಇದನ್ನೂ ಓದಿ: Explained: ಹಲಾಲ್ ಮಾಂಸ ಎಂದರೇನು? ಹಲಾಲ್ ಆಹಾರ ಪ್ರಾಧಿಕಾರ ಇದನ್ನು ಹೇಗೆ ನಿರ್ಧರಿಸುತ್ತದೆ?

     ಎರಡು ಮಾಂಸಗಳ ಸಂಗ್ರಹ ವಿಧಾನದಲ್ಲೂ ವ್ಯತ್ಯಾಸ

    ಇಸ್ಲಾಂ ಧರ್ಮದವರು ಹಲಾಲ್ ವಿಧಾನದ ಮೂಲಕ ಸಿಗುವ ಮಾಂಸವು ಆರೋಗ್ಯಕರವಾಗಿರುತ್ತದೆ ಎಂದು ನಂಬಿದ್ದರೆ, ಜಟ್ಕಾ ಕಟ್ ವಿಧಾನದಲ್ಲಿ ಪ್ರಾಣಿಯು ಅತಿಯಾದ ನರಳಾಟವಿಲ್ಲದೆ ಪ್ರಾಣಿ ಬೇಗನೆ ಸಾಯುತ್ತದೆ ಎನ್ನಲಾಗುತ್ತದೆ. ಇನ್ನೊಂದು ವಿಷಯವೆಂದರೆ ಹಲಾಲ್ ಕಟ್ ಮಾಡುವವರು ಇಸ್ಲಾಂ ಧರ್ಮದವರೇ ಆಗಿರಬೇಕೆಂಬ ನಿಯಮವಿದ್ದರೆ ಜಟ್ಕಾ ಕಟ್‌ನಲ್ಲಿ ನಿರ್ದಿಷ್ಟ ಧರ್ಮದವರೇ ಆಗಿರಬೇಕೆಂಬ ನಿಯಮವೇನೂ ಇಲ್ಲ.

    ಹಲಾಲ್ ಕಟ್ ಮಾಂಸ ಉತ್ತಮವೇ?

    ಪರಿಣಿತರ ಪ್ರಕಾರ, ಹಲಾಲ್ ವಿಧಾನದಿಂದ ದೊರೆಯುವ ಮಾಂಸವು ಉತ್ತಮವಗಿರುತ್ತದೆ. ಏಕೆಂದರೆ ಅದರಲ್ಲಿ ವಿಷಕಾರಿ ಅಂಶಗಳನ್ನು ಹೊಂದಿರಬಹುದಾಗಿರುವ ರಕ್ತವು ಇರುವುದಿಲ್ಲ ಎನ್ನುತ್ತಾರೆ. ಆದರೆ, ಜಟ್ಕಾ ಕಟ್ ವಿಧಾನದಲ್ಲಿ ರಕ್ತವು ಸಹ ಬೆರೆತಿರುವುದರಿಂದ ಇದು ಮಾಂಸವನ್ನು ಗಟ್ಟಿಯಾಗಿಸುತ್ತದೆ ಮತ್ತು ಒಣಗಿರುತ್ತದೆ ಎನ್ನಲಾಗಿದೆ.

    ಇದರ ಹಿಂದಿದೆಯಾ ಜೀವಶಾಸ್ತ್ರದ ವ್ಯಾಖ್ಯಾನ?

    ಜೀವಶಾಸ್ತ್ರದ ತಳಹದಿಯಲ್ಲಿ ಈ ವಿಧಾನಗಳನ್ನು ಗಮನಿಸಿದರೆ, ಪ್ರಾಣಿ ಎಷ್ಟು ಕಡಿಮೆ ನರಳಾಟದಿಂದ ಸಾಯುವುದೋ ಅಷ್ಟು ಉತ್ತಮ ಗುಣಮಟ್ಟದ ಮಾಂಸ ದೊರೆಯುವ ಲಾಜಿಕ್ ಇದರಲ್ಲಿ ಅಡಗಿದೆ ಎಂದು ಹೇಳಲಾಗುತ್ತದೆ. ಏಕೆಂದರೆ, ಯಾವುದೋ ಒಂದು ಪ್ರಾಣಿಗೆ ದೈಹಿಕ ಆಘಾತವಾದಾಗ ಅದರಲ್ಲಿ ಭಯ ಉಕ್ಕಿ ಅದರ ದೇಹದಲ್ಲಿರುವ ಗ್ಲೈಕೋಜನ್ ಅಂಶವು ಸಕ್ರಿಯವಾಗುತ್ತದೆ, ಇದರಿಂದ ಮಾಂಸವು ಅತಿ ಗಟ್ಟಿಯಾಗುತ್ತದೆ ಎನ್ನಲಾಗಿದೆ.

    ಪ್ರಾಣಿಯ ದೇಹದ ಮಾಂಸವು ಮೃದು ಹಾಗೂ ರಸಮಯವಾಗಿರಬೇಕೆಂದರೆ ಅದರ ದೇಹದ pH ಪ್ರಮಾಣವು ಕಡಿದ ನಂತರ 5.4 ರಷ್ಟಿರಬೇಕು. ಜಟ್ಕಾ ವಿಧಾನದಲ್ಲಿ pH ಪರಿಮಾಣವು ಗರಿಷ್ಠ 7ರ ವರೆಗೆ ತಲುಪಿದರೆ ಹಲಾಲ್ ವಿಧಾನದಲ್ಲಿ 20% ಕಡಿಮೆಯಾಗಿರುತ್ತದೆ ಎನ್ನಲಾಗಿದೆ.

    ಜಟ್ಕಾ ಕಟ್‌ ಮಾಂಸ ಉತ್ತಮವೇ?

     ಹಲಾಲ್ ಕಟ್ ಮಾಡುವ ವೇಳೆ ಪ್ರಾಣಿಗೆ ತನ್ನ ಜೀವ ಹೋಗುತ್ತಿದೆ ಎಂದು ತಿಳಿದಾಗ ಅದರ ಮಿದುಳಿನಲ್ಲಿ ಕೆಲವು ವಿಷಕಾರಿ ರಾಸಾಯನಿಕಗಳು ಉತ್ಪತ್ತಿ ಆಗುತ್ತವೆ. ಅದನ್ನು ಸೇವಿಸುವ ಮಾನವನ ಆರೋಗ್ಯದ ಮೇಲೂ ಪರಿಣಾಮ ಆಗುತ್ತದೆ. ಆದರೆ, ಜಟ್ಕಾ ಕಟ್ ಮಾಡುವ ವೇಳೆ ಈ ರೀತಿ ಆಗೋದಲ್ಲ ಎಂದು ವಾದಿಸುತ್ತಾರೆ. ಆದ್ರೆ, ಇದಕ್ಕೆ ವೈಜ್ಞಾನಿಕ ಆಧಾರ, ಸಂಶೋಧನೆಗಳ ಅಗತ್ಯವಿದೆ.

     ಹಿಜಾಬ್ ಬಳಿಕ ಜಟ್ಕಾ ಕಟ್ ಹಲಾಲ್ ಕಟ್ ವಿವಾದ

    ಶಾಲೆಗಳಿಗೆ ಹಿಜಾಬ್ ಧರಿಸಿ ಹೋಗಬಾರದು ಎಂಬ ವಿವಾದದ ಬುಡದಲ್ಲಿ ನಾನಾ ರೀತಿಯ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಹಿಂದೂ ದೇವರ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿ ಕೆಲವು ದೇವಾಲಯ ಆಡಳಿತ ಮಂಡಳಿಗಳು ತೀರ್ಮಾನ ತೆಗೆದುಕೊಂಡಿದ್ದವು. ಇದು ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ. ಜತೆಗೆ ಮುಸ್ಲಿಂ ಸಮುದಾಯದವರ ಅಂಗಡಿಗಳಲ್ಲಿ ಏನನ್ನೂ ಖರೀದಿ ಮಾಡಬಾರದು ಎಂದು ಕೆಲವು ಹಿಂದೂಪರ ಸಂಘಟನೆಗಳು ಕರೆ ಕೊಟ್ಟಿದ್ದವು. ಈ ವಿವಾದದ ನಡುವೆ ಇದೀಗ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ ಹುಟ್ಟಿಕೊಂಡಿದೆ.

    ಹಿಂದೂ ಪರ ಸಂಘಟನೆಗಳಿಂದ ವಿರೋಧ

    ಹಲಾಲ್ ಕಟ್ ಮಾಡುವ ಮುಸ್ಲಿಂ ಸಮುದಾಯವರ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಬಾರದು ಎಂದು ಕೆಲವು ಹಿಂದೂಪರ ಸಂಘಟನೆಗಳು ಪ್ರಚಾರ ಮಾಡುತ್ತಿವೆ. ಇದರ ನಡುವೆ ಜಟ್ಕಾ ಕಟ್ ಮಾಂಸದ ಅಂಗಡಿಗಳು ತಲೆಯೆತ್ತಲು ಶುರುವಾಗಿವೆ. ಭಜರಂಗದಳ ಸೇರಿದಂತೆ ಹಲವು ಸಂಘಟನೆ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುಮಾಡಿದ್ದಾರೆ.

    ಯುಗಾದಿಗೆ ಜಟ್ಕಾ ಕಟ್ ಕೊಳ್ಳಿ ಅಂತಿದ್ದಾರೆ ಕಾರ್ಯಕರ್ತರು

    ಇನ್ನೆರಡು ದಿನಗಳಲ್ಲಿ ಹಿಂದೂಗಳ ಪವಿತ್ರ ದೊಡ್ಡ ಹಬ್ಬ ಯುಗಾದಿ, ಹಿಂದೂ ಹೊಸ ವರ್ಷದ ಹಬ್ಬವಾದ ಯುಗಾದಿಯಂದು ಹಲಾಲ್ ಮಾಂಸವನ್ನು ಬಹಿಷ್ಕರಿಸುವಂತೆ ಹಿಂದೂಗಳಿಗೆ ಮನವಿ ಮಾಡುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ತೀವ್ರವಾಗಿದೆ.

    ಇದನ್ನೂ ಓದಿ: Explained: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ವಿಷಯವಾಗುವುದೇ Hijab ವಿವಾದ?

     ಹಲಾಲ್ ನಿಷೇಧಕ್ಕೆ ಅಭಿಯಾನ

    ಇಂದು ಯುಗಾದಿ ಹಬ್ಬದ ಹೊಸತಡಕು ವಿಚಾರದಲ್ಲಿ ಪೋಸ್ಟ್ ಮಾಡಿದ್ದಾರೆ. ಹಲಾಲ್ ಎಂಬುದು ಅಲ್ಲಾಹುವಿಗೆ ಆ ಮಾಂಸವನ್ನ ಅರ್ಪಣೆ ಮಾಡುವ ವಿಧಾನ. ಪ್ರಾಣಿ ವಧೆ ಮಾಡುವ ಕ್ರಿಯೆಯಲ್ಲಿ ಮಿದುಳಿನಿಂದ ಕೆಲ ವಿಷಕಾರಿ ರಾಸಾಯನಿಕಗಳು ಪ್ರಾಣಿಯ ದೇಹಕ್ಕೆ ಹರಿಯುತ್ತವೆ. ಅದನ್ನ ಸೇವಿಸಿದ ಮನುಷ್ಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ. ಈಗಾಗಿ ಹಲಾಲ್ ಮಾಂಸವನ್ನ ನಿಷೇಧಿಸಿ ಎಂದು ಅಭಿಯಾನ ಮುಂದುವರಿಸಿದ್ದಾರೆ.
    Published by:Annappa Achari
    First published: