ರಾಜ್ಯದ ಇಬ್ಬರು ಪ್ರಮುಖ ಮಹಿಳಾ ಅಧಿಕಾರಿಗಳ (women officers) ನಡುವೆ ವಾರ್ ಶುರುವಾಗಿದೆ. ಒಬ್ಬರು ಹಿರಿಯ ಐಪಿಎಸ್ ಅಧಿಕಾರಿ (IPS Officer), ಮತ್ತೋರ್ವರು ಹಿರಿಯ ಐಎಎಸ್ ಅಧಿಕಾರಿ (IAS Officer). ಒಬ್ಬರ ಹೆಸರು ಐಪಿಎಸ್ ಅಧಿಕಾರಿ ಡಿ. ರೂಪಾ (D. Roopa), ಮತ್ತೋರ್ವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri)! ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ರೋಹಿಣಿ ಸಿಂಧೂರಿ ಖಾಸಗಿ ಫೋಟೋಗಳನ್ನು ರೂಪಾ ಟ್ವೀಟ್ ಮಾಡಿದ್ದು, ಹಲವು ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ರೋಹಿಣಿ ಸಿಂಧೂರಿ ಕಾನೂನು ಸಮರದ ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಮಾಜಿ ಐಎಎಸ್ ಅಧಿಕಾರಿ, ದಿವಂಗತ ಡಿಕೆ ರವಿ (DK Ravi) ಅವರ ಹೆಸರನ್ನು ಎಳೆದು ತಂದಿರುವುದಕ್ಕೆ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ (Kusuma Hanumantharayappa) ಕೂಡ ಈ ಜಗಳದ ನಡುವೆ ಎಂಟ್ರಿ ಆಗಿದ್ದಾರೆ! ಹಾಗಾದ್ರೆ ಏನಿದು ಐಎಎಸ್-ಐಪಿಎಸ್ ಅಧಿಕಾರಿಗಳ ನಡುವಿನ ಜಗಳ? ಡಿಕೆ ರವಿ ಹೆಸರು ಥಳುಕು ಹಾಕಿಕೊಂಡಿದ್ದೇಕೆ? ಮಹಿಳಾಮಣಿಗಳ ಸಂಘರ್ಷ ಎಲ್ಲಿಗೆ ತಲುಪಲಿದೆ?
ರೋಹಿಣಿ ಸಿಂಧೂರಿ ಯಾರು?
ರೋಹಿಣಿ ಸಿಂಧೂರಿ ಹಿರಿಯ ಐಎಎಸ್ ಅಧಿಕಾರಿ. 2009 ರ ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ, ಹಾಸನ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅತ್ಯುತ್ತಮ ಅಧಿಕಾರಿ ಅಂತ ಹೆಸರು ಗಳಿಸಿದ್ದ ರೋಹಿಣಿ ಸಿಂಧೂರಿ, ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಪ್ರಸ್ತುತ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಲವು ವಿವಾದಗಳಲ್ಲಿ ಸಿಲುಕಿದ್ದ ರೋಹಿಣಿ ಸಿಂಧೂರಿ
ಈ ಹಿಂದೆ ಮೈಸೂರಿನ ಕೆಆರ್ ನಗರ ಕ್ಷೇತ್ರದ ಶಾಸಕ ಸಾರಾ ಮಹೇಶ್ ಹಾಗೂ ರೋಹಿಣಿ ಸಿಂಧೂರಿ ನಡುವೆ ಭಾರೀ ಸಂಘರ್ಷ ಏರ್ಪಟ್ಟಿತ್ತು. ರೋಹಿಣಿ ಸಿಂಧೂರಿ ಈ ಹಿಂದೆ ಮೈಸೂರು ಜಿಲ್ಲಾಧಿಕಾರಿ ಆಗಿದ್ದಾಗ ಸಾರಾ ಮಹೇಶ್ ವಿರುದ್ಧ ಭೂ ಕಬಳಿಕೆಯ ಆರೋಪ ಮಾಡಿದ್ದರು. ಪ್ರಾದೇಶಿಕ ಆಯುಕ್ತರು ಸಾರಾ ಮಹೇಶ್ ವಿರುದ್ಧದ ಭೂ ಕಬಳಿಕೆ ಆರೋಪ ಸುಳ್ಳು ಎಂದು ವರದಿ ನೀಡಿದ್ದರು. ಇದಾದ ಬಳಿಕ ಸಾರಾ ಮಹೇಶ್ ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದನ್ನೂ ಓದಿ: Letter to Prime Minister: ಪ್ರಧಾನಿಗೆ ಪತ್ರ ಬರೆಯುವುದು ಹೇಗೆ? ಯಾರು, ಯಾವೆಲ್ಲ ವಿಚಾರಕ್ಕೆ ಪಿಎಂ ಸಂಪರ್ಕಿಸಬಹುದು?
ಸಾರಾ ಮಹೇಶ್ ಕ್ಷಮೆ ಕೇಳಿದ್ದರಾ ರೋಹಿಣಿ ಸಿಂಧೂರಿ?
ಇನ್ನು ಇತ್ತೀಚಿಗಷ್ಟೇ ಸಂಘರ್ಷದ ವಿಚಾರವಾಗಿ ರೋಹಿಣಿ ಸಿಂಧೂರಿ ಶಾಸಕ ಸಾರಾ ಮಹೇಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿತ್ತು. ಸಾರಾ ಮಹೇಶ್ ಅವರನ್ನು ಭೇಟಿಯಾದ ನಂತರ ವಾಟ್ಸ್ಆ್ಯಪ್ನಲ್ಲಿ ಸುದೀರ್ಘ ಸಂದೇಶ ಕಳುಹಿಸಿದ್ದ ರೋಹಿಣಿ ಸಿಂಧೂರಿ, ನಿಮ್ಮ ಜಾಗದ ವಿಚಾರದ ಸರ್ವೆಗೆ ನಾನು ದಿಶಾ ಆಪ್ ನೋಡಿ ಆದೇಶಿಸಿದ್ದೆ. ನಾನು ನನ್ನ ಕೆಲಸ ಮಾಡಿದ್ದೇನೆ ದಯವಿಟ್ಟು ತಪ್ಪು ತಿಳಿಯಬೇಡಿ. ಇದು ಕೇವಲ ಕೆಲಸದ ವಿಚಾರ ಇದರಲ್ಲಿ ವೈಯಕ್ತಿಕ ವಿಚಾರ ಏನೂ ಇಲ್ಲ ಎಂದು ಬರೆದಿದ್ದಾರೆ ಎನ್ನಲಾಗಿದೆ.
ನಾನು ಕ್ಷಮೆ ಕೇಳುವಂತೆ ಹೇಳಿಲ್ಲ
ಇನ್ನು ಈ ವಿಚಾರವಾಗಿ ಮಾತನಾಡಿದ್ದ ಸಾರಾ ಮಹೇಶ್, ನಾನು ಎಲ್ಲವನ್ನೂ ರಾಜ್ಯದ ಜನತೆಯ ಮುಂದಿಟ್ಟಿದ್ದೇನೆ. ಸರ್ಕಾರಕ್ಕೂ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದೇನೆ. ಯಾರೂ ಕ್ಷಮೆ ಕೇಳಬೇಕು ಎಂದು ನಾನು ಹೇಳಿಲ್ಲ ಎಂದು ಹೇಳಿದ್ದಾರೆ.
ಐಪಿಎಸ್ ಅಧಿಕಾರಿ ಡಿ. ರೂಪಾ?
ಡಿ ರೂಪಾ 2000ನೇ ಸಾಲಿನ ಐಪಿಎಸ್ ಅಧಿಕಾರಿ. ಇವರು ಭಾರತೀಯ ಪೊಲೀಸ್ ಸೇವಾ (ಐಪಿಎಸ್) ಅಧಿಕಾರಿಯಾದ ಕರ್ನಾಟಕದ ಪ್ರಥಮ ಮಹಿಳೆಯಾಗಿದ್ದಾರೆ. ರಾಜಕೀಯ ವ್ಯಕ್ತಿಗಳ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳ ಪ್ರಕರಣಗಳನ್ನು ಕೈಗೆತ್ತಿಕೊಂಡು ಸುದ್ದಿ ಮಾಡಿದ್ದರು. ಇದರ ಪರಿಣಾಮವೋ ಎನ್ನುವಂತೆ 40ಕ್ಕೂ ಅಧಿಕ ಬಾರಿ ವರ್ಗಾವಣೆಗೊಂಡಿದ್ದಾರೆ. ಪ್ರಸ್ತುತ ಐಜಿಪಿ ಅಧಿಕಾರಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಬೆಂಗಳೂರಿನಲ್ಲಿ ಗೃಹ ರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್ ಜನರಲ್ ಮತ್ತು ನಾಗರಿಕ ರಕ್ಷಣಾ ವಿಭಾಗದಲ್ಲಿ ಎಕ್ಸ್-ಅಫ಼ೀಸಿಯೋ ಹೆಚ್ಚುವರಿ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ.
ರೋಹಿಣಿ ವಿರುದ್ಧ ಸಿಡಿದೆದ್ದ ಡಿ ರೂಪಾ
ಇಷ್ಟೆಲ್ಲಾ ಆಗುತ್ತಿದ್ದಂತೆ ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಸಿಡಿದೆದ್ದಿದ್ದಾರೆ. 19 ಆರೋಪಗಳ ಪಟ್ಟಿ ಮಾಡಿದ್ದ ಡಿ ರೂಪಾ, ರೋಹಿಣಿ ಸಿಂಧೂರಿ ಕರ್ತವ್ಯ ಲೋಪ, ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ದಾಖಲೆ ಇದೆ ಎಂದಿದ್ದರು. ಯಾವ ಐಎಎಸ್ ಅಧಿಕಾರಿ ಕೂಡ ಎಂಎಲ್ಎ ಅಥವಾ ರಾಜಕೀಯ ವ್ಯಕ್ತಿಗಳ ಜೊತೆ, ತಾವು ನಿರ್ವಹಿಸಿದ ಕರ್ತವ್ಯ ನಿಮಿತ್ಯ ಸಂಧಾನಕ್ಕೆ ಹೋಗಿದ್ದು ನಾನು ಇದೇ ಮೊದಲು ಕೇಳಿದ್ದು. ರೋಹಿಣಿ ಸಿಂಧೂರಿ ಐಎಎಸ್ ಸಂಧಾನಕ್ಕೆ ಹೋಗಿದ್ದು ಯಾಕೆ? ಆಕೆ ಏನನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ? ತಮ್ಮ ಕರ್ತವ್ಯ ಲೋಪದ ಬಗ್ಗೆಯೋ, ತಮ್ಮ ಭ್ರಷ್ಟಾಚಾರ ಬಗ್ಗೆಯೋ ಏನು? ಎಂದು ರೂಪ ಪ್ರಶ್ನೆ ಮಾಡಿದ್ದರು.
ಖಾಸಗಿ ಫೋಟೋ ಪ್ರಕಟಿಸಿ ರೂಪಾ ಟಾಂಗ್
ಇಷ್ಟೂ ಸಾಲದು ಎಂಬಂತೆ ಮತ್ತೊಂದು ಹೆಜ್ಜೆ ಮುಂದಿಟ್ಟ ಡಿ ರೂಪಾ, ರೋಹಿಣಿ ಸಿಂಧೂರಿಯವರ ಖಾಸಗಿ ವಾಟ್ಸಾಪ್ ಚಾಟ್ ಸ್ಕ್ರೀನ್ ಶಾಟ್ ಪ್ರಕಟಿಸಿದ್ದರು. ಈಕೆ ಕೆಲವು ಐಎಎಸ್ ಅಧಿಕಾರಿಗಳಿಗೆ ಒಂದಲ್ಲ, ಎರಡಲ್ಲ, ಅನೇಕರಿಗೆ ತನ್ನ ಅಶ್ಲೀಲ ಚಿತ್ರಗಳನ್ನು ಕಳಿಸಿರುವ ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿರುವ ಆಪಾದನೆ ಇದೆ. ಆ ಪಿಕ್ಸ್ಗಳು ನನಗೆ ಸಿಕ್ಕಿವೆ. ಇದು ಖಾಸಗಿ ವಿಷಯ ಆಗುವುದಿಲ್ಲ ಅಂತ ಹೇಳಿದ್ದರು.
ರೂಪಾ ಆರೋಪಕ್ಕೆ ರೋಹಿಣಿ ಸಿಂಧೂರಿ ವಾರ್ನಿಂಗ್
ಇನ್ನು ರೂಪಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರೋಹಿಣಿ ಸಿಂಧೂರಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ವೈಯಕ್ತಿಕ ಹಗೆಯನ್ನ ಸಾಧಿಸಲು ಹೊರಡುವುದು ಸಮಾಜಕ್ಕೆ ಬಹಳಷ್ಟು ಅಪಾಯಕಾರಿ. ರೂಪಾ ಐಪಿಎಸ್ ಅವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನನ್ನ ಮೇಲೆ ವೈಯಕ್ತಿಕ ಹಗೆಯನ್ನ ಸಾಧಿಸಲು ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡಿರುವವರ ರೀತಿಯಲ್ಲಿ ಆಡುತ್ತಿದ್ದಾರೆ ಅಂತ ಟಾಂಗ್ ಕೊಟ್ರು. ನನ್ನ ವಿರುದ್ದ ರೂಪಾ ಐಪಿಎಸ್ ಅವರು ನಡೆಸುತ್ತಿರುವ ವೈಯಕ್ತಿಕ ನಿಂದನೆ ಹಾಗೂ ತೇಜೋವಧೆಯ ವಿರುದ್ದ ನಾನು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರೂಪಾ ಐಪಿಎಸ್ ಅವರ ಮೇಲೆ ಕಾನೂನಿನ ಎಲ್ಲಾ ಕ್ರಮಗಳನ್ನ ಕೈಗೊಳ್ಳುತ್ತೇನೆ. ಸಕ್ಷಮ ಪ್ರಾಧಿಕಾರದ ಮುಂದೆಯೂ ದೂರನ್ನ ಸಲ್ಲಿಸಲಿದ್ದೇನೆ ಅಂತ ರೋಹಿಣಿ ಸಿಂಧೂರಿ ಎಚ್ಚರಿಸಿದ್ದರು.
ರೋಹಿಣಿಗೆ ಮತ್ತೆ ರೂಪಾ ಟಾಂಗ್
ಇದೇ ವೇಳೆ ರೋಹಿಣಿ ಸಿಂಧೂರಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಡಿ ರೂಪಾ ಅವರು, ರೋಹಿಣಿ ಅವರು ಬರೆದ ಸಾಲಿನಲ್ಲಿ ಡಿಕೆ ರವಿ ಸತ್ತದ್ದು Mental Illness ಇಂದ ಅಂತ ಬರೆದಿದ್ದಾರೆ. ಅಂದರೆ, ಎಷ್ಟೋ ಯುವಕರಿಗೆ ಸ್ಫೂರ್ತಿಯಾಗಿದ್ದ ಡಿಕೆ ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಲಿಸಿದರೆ? ನನ್ನ ಪ್ರಶ್ನೆ ಇಷ್ಟೇ. ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ನಲ್ಲಿ ಎಲ್ಲರ ಕೈ ಸೇರಿದೆ.
“ಸತ್ಯ ಸತ್ಯವೇ, ಸತ್ಯ ಮಣಿಸಲು ಸಾಧ್ಯವಿಲ್ಲ”
ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ? ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ IAS ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಅವರು ಯಾವ forum ಹೋದರೂ, ಸತ್ಯ ಸತ್ಯವೇ ಸತ್ಯ ಮಣಿಸಲು ಸಾಧ್ಯವಿಲ್ಲ ಈ ಬಾರಿ ಸಾಧ್ಯವಿಲ್ಲ ಅಂತ ಐಎಎಸ್ ಅಧಿಕಾರಿ ರೋಹಿಣಿಗೆ ಡಿ ರೂಪಾ ಮತ್ತೆ ಟಾಂಗ್ ಕೊಟ್ಟಿದ್ದಾರೆ.
ಇಬ್ಬರ ಜಗಳದಲ್ಲಿ ಡಿಕೆ ರವಿ ಪತ್ನಿ ಎಂಟ್ರಿ!
ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ಪರೋಕ್ಷವಾಗಿ ಟ್ವೀಟ್ ಮಾಡಿರುವ ಕುಸುಮಾ ಹನುಮಂತರಾಯಪ್ಪ ಅವರು, ತಾನು ಮಾಡಿದ ಪಾಪ ತನಗೆ ವಾಪಸ್ಸು ಬರುತ್ತದೆ, ತಕ್ಷಣಕ್ಕೆ ಆಗಬಹುದು ಅಥವಾ ತಡವಾಗಬಹುದು ("Karma will get back to you,sooner or later it surely will") ಎಂದು ಬರೆದುಕೊಂಡಿದ್ದಾರೆ.
ಎಲ್ಲಿಗೆ ತಲುಪಲಿದೆ ಜಗಳ?
ಸದ್ಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಡುವಿನ ಜಗಳ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ನಿಮ್ಮ ಜಾತಕ ಬಿಟ್ಟಿಡುತ್ತೇನೆ ಎನ್ನುವ ಅರ್ಥದಲ್ಲಿ ಡಿ ರೂಪಾ ಕುಟುಕಿದ್ದರೆ, ರೋಹಿಣಿ ಸಿಂಧೂರಿ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಡಿಕೆ ರವಿ ಹೆಸರು ಪ್ರಸ್ತಾಪಿಸದಂತೆ ಅವರ ಪತ್ನಿ ಕುಸುಮಾ ಎಚ್ಚರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ