ಭಾರತದಲ್ಲಿ ಕೋವಿಡ್-19 (COVID-19) ಸಾಂಕ್ರಾಮಿಕವು ನಿರ್ದಿಷ್ಟ ಜನರು ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಕಂಡುಬರುವ ಕಾಯಿಲೆ ಅಥವಾ ಪರಿಸ್ಥಿತಿಯ ಹಂತವನ್ನು ತಲುಪಿರುವ ಸಾಧ್ಯತೆ ಇದ್ದು (Endemicity) ಈ ಸಮಯದಲ್ಲಿ ರೋಗ ಪ್ರಸರಣೆಯು ಕಡಿಮೆ ಅಥವಾ ಮಧ್ಯಮ ಮಟ್ಟದಲ್ಲಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (World Health Organisation) ಮುಖ್ಯ ವಿಜ್ಞಾನಿಯಾಗಿರುವ ಡಾ. ಸೌಮ್ಯ ಸ್ವಾಮಿನಾಥನ್ (Dr Soumya Swaminathan) ತಿಳಿಸಿದ್ದಾರೆ. ಭಾರತದಲ್ಲಿ ಪ್ರಸ್ತುತ ಸಾಂಕ್ರಾಮಿಕದ ಸ್ಥಿತಿಯನ್ನು ಅವಲೋಕಿಸಿದಾಗ ಅದು ಸ್ಥಳೀಯ ಹಂತದ ಕೆಲವು ಹಂತಗಳನ್ನು ಪ್ರವೇಶಿಸುತ್ತಿರಬಹುದು ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ನಾವು ಗಂಭೀರ ಪ್ರಕರಣಗಳನ್ನು ನೋಡುತ್ತಿಲ್ಲ ಹಾಗೂ ಮಾರ್ಚ್, ಏಪ್ರಿಲ್ನಂತಹ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿಲ್ಲವೆಂದು ಸೌಮ್ಯ ತಿಳಿಸಿದ್ದಾರೆ.
ದೇಶದ ಬೇರೆ ಬೇರೆ ಭಾಗಗಳಲ್ಲಿ ರೋಗನಿರೋಧಕ ವ್ಯವಸ್ಥೆ (Immunity System) ವ್ಯತ್ಯಾಸವಾಗಿರುತ್ತದೆ ಸ್ಥಳೀಯತೆ ಎಂಬುದು ಆಯಾ ಜನರು ಹಾಗೂ ಪ್ರದೇಶವನ್ನು ಅವಲಂಬಿಸಿರುತ್ತದೆ. ಪೂರ್ಣವಾಗಿ ಲಸಿಕೆ ಪಡೆಯದ ಕೆಲವೊಂದು ಸ್ಥಳಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ದಾಖಲಾಗಿವೆ. ದೇಶದ ಹಲವಾರು ಭಾಗಗಳಲ್ಲಿ ಸಾಂಕ್ರಾಮಿಕದ ತೀಕ್ಷ್ಣತೆ ಮೇಲೆ ಕೆಳಗೆ ನಡೆಯುತ್ತಲೇ ಇರುತ್ತದೆ. ಇನ್ನೊಂದಿಷ್ಟು ಸಮಯಗಳವರೆಗೆ ವೈರಸ್ ಆಟವನ್ನು ನೋಡಬೇಕಾಗುತ್ತದೆ ಎಂಬುದು ಸೌಮ್ಯ ಅವರ ಅಭಿಪ್ರಾಯವಾಗಿದೆ.
ಸ್ಥಳೀಯ ಹಂತ ಎಂದರೇನು? ನಮ್ಮನ್ನುಹೇಗೆ ಬಾಧಿಸುತ್ತದೆ?
ಎಂಡೆಮಿಕ್ ಎನ್ನುವುದು ಒಂದು ಕಾಯಿಲೆಯಾಗಿದ್ದು ನಿರಂತರವಾಗಿ ಅಸ್ವಿತ್ವದಲ್ಲಿರುತ್ತದೆ. ಇದರಿಂದ ರೋಗದ ಹರಡುವಿಕೆ ಹಾಗೂ ಅನಾರೋಗ್ಯ ಪ್ರಮಾಣವನ್ನು ಊಹಿಸಬಹುದು. ಜನರು ವೈರಸ್ನೊಂದಿಗೆ ಬದುಕಲು ಕಲಿಯುವ ಹಂತವನ್ನು ಸ್ಥಳೀಯ ಹಂತ ಇಲ್ಲವೇ ಎಂಡೆಮಿಕ್ ಎಂದು ಕರೆಯಲಾಗುತ್ತದೆ.
ಸ್ಥಳೀಯ ಹಂತ ವರ್ಸಸ್ ಸಾಂಕ್ರಾಮಿಕ
ಮಾರ್ಚ್ 2020 ರಲ್ಲಿ ಕೋವಿಡ್-19 ಅನ್ನು ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಸಾಂಕ್ರಾಮಿಕವೆಂದು ಘೋಷಿಸಿತು. ಸಾಂಕ್ರಾಮಿಕ ರೋಗಕ್ಕೆ ಹೆಚ್ಚಿನ ವ್ಯಾಖ್ಯಾನಗಳಿಲ್ಲದೇ ಹೋದರೂ ಸಾಂಕ್ರಾಮಿಕವನ್ನು ವಿಶ್ವ ಆರೋಗ್ಯ ಸಂಸ್ಥೆಯು ಸರ್ವವ್ಯಾಪಿಯಾಗಿ ಹರಡಿರುವ ಹೊಸ ರೋಗವೆಂದು ಕರೆದಿತ್ತು. ಅಂತರರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಹೇಳುವಂತೆ ಸಾಂಕ್ರಾಮಿಕ ಎನ್ನುವುದು ವಿಶ್ವವ್ಯಾಪಿಯಾಗಿ ಅಥವಾ ವಿಶಾಲವಾದ ಪ್ರದೇಶದಲ್ಲಿ ಅಂತರಾಷ್ಟ್ರೀಯ ಗಡಿಗಳನ್ನು ದಾಟಿ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುತ್ತದೆ.
ಸ್ಥಳೀಯ ಹಂತದ ರೋಗಗಳು ಎಂದರೆ ಚಿಕನ್ ಗುನ್ಯಾ, ಮಲೇರಿಯಾ ಮೊದಲಾದವುಗಳಾಗಿದ್ದು ಇವುಗಳು ಹೊಸದಾಗಿಲ್ಲ ಹಾಗೂ ಜನಸಂಖ್ಯೆಯ ಮೇಲೆ ಈ ರೋಗಗಳ ಪರಿಣಾಮವನ್ನು ಊಹಿಸಬಹುದಾಗಿದೆ.
ಕೋವಿಡ್-19 ಸ್ಥಳೀಯ ಹಂತದ ಕಾಯಿಲೆಯೇ?
ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿರುವಂತೆ ಕೋವಿಡ್-19 ಮುಂಬರುವ ದಿನಗಳಲ್ಲಿ ಸ್ಥಳೀಯ ಹಂತದ ರೋಗವಾಗಿ ಉಳಿಯಬಹುದು ಎಂದಾಗಿದೆ. ಕೋವಿಡ್-19 ರ ಹೊಸ ವೈರಸ್ ತಳಿಗಳ ಅಭಿವೃದ್ಧಿ ನಡೆಯುತ್ತಲೇ ಇರುವುದರಿಂದ ಪ್ರತಿರಕ್ಷಣೆಯ ಸಂಪೂರ್ಣ ಮಟ್ಟವನ್ನು ತಲುಪುವುದು ಅಸಾಧ್ಯವಾಗಿದೆ.
ಲಸಿಕೆಗಳು ಪ್ರತಿರಕ್ಷಣೆ ವ್ಯವಸ್ಥೆಯನ್ನು ಬಲಶಾಲಿಯಾಗಿಸುತ್ತವೆ ಎಂಬುದು ತಜ್ಞರ ಅಭಿಪ್ರಾಯವಾಗಿತ್ತು ಆದರೆ ಡೆಲ್ಟಾ ರೂಪಾಂತರವು ಕ್ಷಿಪ್ರವಾಗಿ ಹರಡುತ್ತಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಲಸಿಕೆಗಳ ಮೂಲಕ ಸಂಪೂರ್ಣವಾಗಿ ಸಾದಿಸಲಾಗುವುದಿಲ್ಲ ಎಂಬ ಅಂಶವನ್ನು ಬಹಿರಂಗಗೊಳಿಸಿದ್ದಾರೆ. ಲಸಿಕೆಯಿಂದ ಸಾಂಕ್ರಾಮಿಕವನ್ನು ಪೂರ್ತಿಯಾಗಿ ತಡೆಯಲು ಸಾಧ್ಯವಾಗದೇ ಇದ್ದರೂ ಮರಣದಂತಹ ತೀಕ್ಷ್ಣತೆಯನ್ನು ತಗ್ಗಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಕೋವಿಡ್ ಶಾಶ್ವತವಾಗಿ ಇರಲಿದೆಯೇ?
ಶೂನ್ಯ ಕೋವಿಡ್ ಸ್ಥಿತಿಯನ್ನು ತಲುಪುವವರೆಗೆ ಕಟ್ಟುನಿಟ್ಟಿನ ಲಾಕ್ಡೌನ್ಗಳನ್ನು ಚೀನಾ ಹಾಗೂ ಆಸ್ಟ್ರೇಲಿಯಾ ದೇಶಗಳು ಪಾಲಿಸುತ್ತಿವೆ. ನಮ್ಮ ದೇಶಗಳನ್ನು ಕೋವಿಡ್ ಮುಕ್ತರನ್ನಾಗಿಸುತ್ತೇವೆ ಎಂಬ ಭರವಸೆಯನ್ನು ಕೆಲವೊಂದು ದೇಶಗಳು ಇನ್ನೂ ಹೊಂದಿವೆ. ಚೀನಾ ಆಸ್ಟ್ರೇಲಿಯಾದಲ್ಲಿ ವ್ಯಾಪಕ ಕೋವಿಡ್ ಪರೀಕ್ಷೆಗಳು ನಡೆಯುತ್ತಿವೆ.
ಹಾಗಾದರೆ ಲಸಿಕೆಗಳು ಪರಿಣಾಮಕಾರಿಯಲ್ಲವೇ?
ಲಸಿಕೆಗಳು ಪರಿಣಾಮಕಾರಿಯಾಗಿದ್ದು ಕೆಲವೊಂದು ಪ್ರದೇಶಗಳಲ್ಲಿ ಲಸಿಕೆಗಳು ಕೋವಿಡ್ ಅನ್ನು ಅಂತ್ಯಗೊಳಿಸುವಷ್ಟು ಪರಿಣಾಕಾರಿಯಾಗಿವೆ. ಎಷ್ಟು ಜನರು ಲಸಿಕೆಗಳನ್ನು ಪಡೆಯುತ್ತಾರೆ? ಅವುಗಳ ಪ್ರಭಾವ ಎಷ್ಟು ಸಮಯದವರೆಗೆ? ಕಾಲಾನಂತರದಲ್ಲಿ ಪ್ರಸರಣಗಳನ್ನು ತಡೆಗಟ್ಟುವಲ್ಲಿ ಅವುಗಳ ಪರಿಣಾಮವೇನು? ಎಂಬುದನ್ನು ಇನ್ನಷ್ಟೇ ತಿಳಿದುಕೊಳ್ಳಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ