HOME » NEWS » Explained » CORONAVIRUS VACCINE WHEN IS THE RIGHT TIME TO GET COVID 19 VACCINATION FOR CHILDREN SCT STG

Explainer: ನಿಮ್ಮ ಮಕ್ಕಳಿಗೆ ಕೋವಿಡ್‌-19 ಲಸಿಕೆ ನೀಡಲು ಸರಿಯಾದ ಸಮಯ ಯಾವುದು?

Covid-19 Vaccine: ಮಕ್ಕಳಿಗೆ ಕೊರೊನಾ ವೈರಸ್‌ ಸೋಂಕು ತಗುಲುವ ಹಾಗೂ ಇತರರಿಗೆ ಹರಡುವ ಬಗ್ಗೆ ಅವರು ಎದುರಿಸುವ ಅಪಾಯದ ಬಗ್ಗೆ ಹಾಗೂ ಮಕ್ಕಳಿಗೆ ಲಸಿಕೆಗಳು ಲಭ್ಯವಾಗುವುದು ಯಾವಾಗ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

news18-kannada
Updated:March 26, 2021, 1:47 PM IST
Explainer: ನಿಮ್ಮ ಮಕ್ಕಳಿಗೆ ಕೋವಿಡ್‌-19 ಲಸಿಕೆ ನೀಡಲು ಸರಿಯಾದ ಸಮಯ ಯಾವುದು?
ಕೊರೋನಾ ಲಸಿಕೆ.
  • Share this:
ಸದ್ಯ ದೇಶದ ಹಲವೆಡೆ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಆದರೆ, ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿರುವುದರಿಂದ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದೇ ಚಿಂತೆಯಾಗಿದೆ. ಅಲ್ಲದೆ, ಮಕ್ಕಳಿಗೂ ಸಹ ದೊಡ್ಡವರಂತೆ ಕೊರೊನಾ ಲಸಿಕೆ ಹಾಕಿಸಬೇಕೆ ಎಂಬ ಪ್ರಶ್ನೆಯೂ ಹಲವರಲ್ಲಿ ಮೂಡುತ್ತಿದೆ. ಈ ಸಂಬಂಧ ಪೀಡಿಯಾಟ್ರಿಷಿಯನ್‌ ಹಾಗೂ ಮಕ್ಕಳ ಸಾಂಕ್ರಾಮಿಕ ಕಾಯಿಲೆಗಳ ಸಹಾಯಕ ಪ್ರಾಧ್ಯಾಪಕ ಡಾ. ಜೇಮ್ಸ್ ವುಡ್, ಮಕ್ಕಳಿಗೆ ಕೊರೊನಾ ವೈರಸ್‌ ಸೋಂಕು ತಗುಲುವ ಹಾಗೂ ಇತರರಿಗೆ ಹರಡುವ ಬಗ್ಗೆ ಅವರು ಎದುರಿಸುವ ಅಪಾಯದ ಬಗ್ಗೆ ಹಾಗೂ ಮಕ್ಕಳಿಗೆ ಲಸಿಕೆಗಳು ಲಭ್ಯವಾಗುವುದು ಯಾವಾಗ ಎಂಬ ಬಗ್ಗೆ ಇಲ್ಲಿ ವಿವರಿಸಿದ್ದಾರೆ.

ಮಕ್ಕಳಿಗೆ ನಿಜಕ್ಕೂ ಕೋವಿಡ್ -19 ಲಸಿಕೆ ಪಡೆಯುವ ಅಗತ್ಯ ಇದೆಯಾ..?

ಹೌದು. ಕೋವಿಡ್ -19 ಮಕ್ಕಳಲ್ಲಿ, ವಿಶೇಷವಾಗಿ ಕಿರಿಯ ಮಕ್ಕಳಲ್ಲಿ ತೀವ್ರವಾಗಿಲ್ಲ ಎಂದು ಬಹಳಷ್ಟು ಅಧ್ಯಯನಗಳು ಹೇಳುತ್ತಿವೆ. ಆದರೆ ಇದರರ್ಥ ಮಕ್ಕಳು ಸೋಂಕಿಗೆ ಒಳಗಾಗುವ ಮತ್ತು ವೈರಸ್ ಹರಡುವ ಅಪಾಯವಿಲ್ಲ ಎಂದಲ್ಲ. ಕೋವಿಡ್ -19 ಸೋಂಕಿಗೊಳಗಾಗುವ ಮಕ್ಕಳು ಸಹ ಸೌಮ್ಯವಾದ ಲಕ್ಷಣಗಳನ್ನು ಹೊಂದಬಹುದು ಅಥವಾ ಯಾವುದೇ ರೋಗಲಕ್ಷಣಗಳಿಲ್ಲದಿರಬಹುದು. ಇನ್ನೊಂದೆಡೆ ಸೋಂಕು ಪಡೆದ ಹದಿಹರೆಯದವರು ವಯಸ್ಕರು ಮತ್ತು ಕಿರಿಯ ಮಕ್ಕಳು ಅನುಭವಿಸಿದ ಮಧ್ಯದ ಪ್ರತಿಕ್ರಿಯೆಗಳನ್ನು ಹೊಂದುತ್ತಾರೆ. 5 - 11 ವರ್ಷ ವಯಸ್ಸಿನ ಮಕ್ಕಳಿಗಿಂತ ಹದಿಹರೆಯದ ಮಕ್ಕಳು ಕೋವಿಡ್ ಸೋಂಕಿಗೆ ಒಳಗಾಗುವ ಅಪಾಯ ಎರಡು ಪಟ್ಟು ಹೆಚ್ಚು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಪತ್ತೆ ಹಚ್ಚಿದೆ.

ವಯಸ್ಸಾದ ಮತ್ತು ಕಿರಿಯ ಮಕ್ಕಳ ನಡುವಿನ ಈ ವ್ಯತ್ಯಾಸಗಳನ್ನು ನಾವು ಏಕೆ ನೋಡುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಇನ್ನೂ ಪ್ರಯತ್ನಿಸುತ್ತಿದ್ದಾರೆ. ಬಹುಶ: ಆ ವಯಸ್ಸಿನ ಮಕ್ಕಳ ವರ್ತನೆ ಪಾತ್ರ ವಹಿಸಬಹುದು. ಹದಿಹರೆಯದ ಮಕ್ಕಳು ಸಾಮಾಜಿಕ ಅಥವಾ ಗುಂಪು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚು, ಮತ್ತು ಅವರು ಮಾಸ್ಕ್‌ಗಳನ್ನು ಧರಿಸಿರಬಹುದು ಅಥವಾ ಧರಿಸದೆ ಇರಬಹುದು. ರೋಗನಿರೋಧಕ ವ್ಯತ್ಯಾಸಗಳು ಮತ್ತು ಜೈವಿಕ ಅಂಶಗಳು ಸಹ ಒಂದು ಪಾತ್ರವನ್ನು ವಹಿಸಬಹುದು.

ಹೆಚ್ಚಿನ ಮಕ್ಕಳು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದರೂ, ಅಪಾಯ ಇದ್ದೇ ಇರುತ್ತದೆ. ಕೋವಿಡ್ -19 ಹೊಂದಿರುವ ಕನಿಷ್ಠ 226 ಅಮೆರಿಕದ ಮಕ್ಕಳು ಮೃತಪಟ್ಟಿದ್ದಾರೆ ಮತ್ತು ಸಾವಿರಾರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರು. ಈ ಅಪಾಯ ಕಡಿಮೆ ಮಾಡಿಕೊಳ್ಳುವ ಮುಖ್ಯ ಅಂಶಗಳೆಂದರೆ ಮಕ್ಕಳಿಗೂ ಸಹ ಲಸಿಕೆ ಹಾಕಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್‌ಗಳನ್ನು ಧರಿಸಬೇಕು.

ಮಕ್ಕಳು ಕೊರೊನಾ ವೈರಸ್‌ ಹರಡುತ್ತಿದ್ದಾರಾ..?
ಶಾಲೆಯಲ್ಲಿ ಮಾಸ್ಕ್‌ ಧರಿಸುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಅನುಸರಿಸುತ್ತಿದ್ದರೆ ಚಿಕ್ಕ ಮಕ್ಕಳು ಸೋಂಕನ್ನು ಹೆಚ್ಚು ಹರಡುವುದಿಲ್ಲ ಎಂದು ತೋರುತ್ತದೆ. ಆದರೆ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಕೊರೊನಾ ವೈರಸ್‌ ಸೋಂಕಿತ ಮಕ್ಕಳು ಅದನ್ನು ವಯಸ್ಕರಿಗೆ ಹರಡಬಹುದು. ಆ ಅಪಾಯ ಎಷ್ಟು ದೊಡ್ಡದಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶಾಲೆಗಳನ್ನು ಸಾಧ್ಯವಾದಷ್ಟು ಸುರಕ್ಷಿತವಾಗಿಡಲು, ಶಾಲೆಯಾದ್ಯಂತ ಮಾಸ್ಕ್‌ ಮತ್ತು ಸಾಮಾಜಿಕ ಅಂತರ ನೀತಿಗಳನ್ನು ಮುಂದುವರಿಸುವುದು ಮುಖ್ಯವಾಗಿರುತ್ತದೆ. ನಿರ್ದಿಷ್ಟವಾಗಿ ಹದಿಹರೆಯದವರು ಲಸಿಕೆ ಹಾಕಿಸಿಕೊಂಡರೂ ಸರಿ ಮಾಸ್ಕ್‌ ಧರಿಸಲೇಬೇಕು. ಇಡೀ ಸಮುದಾಯದಲ್ಲಿ ಹರ್ಡ್‌ ಇಮ್ಯುನಿಟಿ ಉತ್ತಮ ಮಟ್ಟದಲ್ಲಿ ಇರುವವರೆಗೆ, ಸಾಮಾಜಿಕ ಅಂತರ ಮತ್ತು ಮಾಸ್ಕ್‌ ಧರಿಸುವುದು ಖಂಡಿತವಾಗಿಯೂ ಶಿಫಾರಸಾಗಿರುತ್ತದೆ.ಮಕ್ಕಳು ಯಾವಾಗ ಲಸಿಕೆ ಹಾಕಿಸಿಕೊಳ್ಳಬೇಕು..?
ಸದ್ಯಕ್ಕೆ ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಕೋ - ಮಾರ್ಬಿಡಿಟೀಸ್‌ ಹೊಂದಿರುವ 45 - 60 ವರ್ಷ ವಯಸ್ಸಿನವರು ಮಾತ್ರ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್‌ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬಹುದು. ಆದರೆ, ಮಕ್ಕಳಿಗೆ ಇನ್ನೂ ಲಸಿಕೆ ಲಭ್ಯವಿಲ್ಲ. ಅಮೆರಿಕದಲ್ಲಿ ಮಾತ್ರ 16 ವರ್ಷ ವಯಸ್ಸಿನ ಹದಿ ಹರೆಯದ ಮಕ್ಕಳು ಫೈಜರ್‌ ಲಸಿಕೆ ಹಾಕಿಸಿಕೊಳ್ಳಬಹುದು. 16 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಮೊದಲು, ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಸಾವಿರಾರು ಕ್ಲಿನಿಕಲ್ ಪ್ರಯೋಗಗಳು ಪೂರ್ಣಗೊಳ್ಳಬೇಕಿದೆ.

ಮಾಡರ್ನಾ ಮತ್ತು ಫೈಜರ್‌ ಎರಡೂ ಲಸಿಕೆ ತಯಾರಕರು ಹದಿಹರೆಯದವರೊಂದಿಗೆ ಪ್ರಯೋಗಗಳನ್ನು ನಡೆಸುತ್ತಿದ್ದಾರೆ ಮತ್ತು ವಸಂತ ಋತುವಿನ ಕೊನೆಯಲ್ಲಿ ಅಥವಾ ಬೇಸಿಗೆಯ ಆರಂಭದಲ್ಲಿ ಈ ಮಾಹಿತಿ ಹೊಂದುವ ನಿರೀಕ್ಷೆಯಿದೆ. ಅವರ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತೋರಿಸಿದರೆ, 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಮುಂದಿನ ಶಾಲಾ ಅವಧಿ ಪ್ರಾರಂಭವಾಗುವ ಮೊದಲು ಲಸಿಕೆ ಹಾಕಬಹುದು.

ಇನ್ನು, ಚಿಕ್ಕ ಮಕ್ಕಳು ಪ್ರಾಯಶಃ ಚಳಿಗಾಲದವರೆಗೂ ಲಸಿಕೆ ತೆಗೆದುಕೊಳ್ಳಲು ಅರ್ಹರಾಗಿರುವುದಿಲ್ಲ. 6 ತಿಂಗಳಿನಿಂದ 11 ವರ್ಷದ ಮಕ್ಕಳಲ್ಲಿ ಲಸಿಕೆ ಪರೀಕ್ಷಿಸಲು ಪ್ರಾರಂಭಿಸಿದ್ದೇವೆ ಎಂದು ಮಾಡರ್ನಾ ಮಾರ್ಚ್ 16 ರಂದು ಘೋಷಣೆ ಮಾಡಿದೆ. ಅದರೆ, ಫೈಜರ್‌ ಇನ್ನೂ ಆ ಹಂತವನ್ನು ತಲುಪಿಲ್ಲ.

ಮಕ್ಕಳಿಗೆ ದೊರೆಯುವ ಲಸಿಕೆಯಲ್ಲಿ ಭಿನ್ನತೆ ಏನು..?
ಮಕ್ಕಳಿಗೆ ನೀಡುವ COVID-19 ಲಸಿಕೆಗಳ ಸಂಯೋಜನೆಯು ವಯಸ್ಕರಿಗೆ ನೀಡಿದಂತೆಯೇ ಇರುತ್ತದೆ - ಆದರೆ, ಮಕ್ಕಳಿಗೆ ನೀಡುವ ಡೋಸ್‌ನ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು. ಲಸಿಕೆ ಪ್ರಯೋಗಗಳ ಮೊದಲ ಹೆಜ್ಜೆ ಸರಿಯಾದ ಪ್ರಮಾಣವನ್ನು ಕಂಡುಹಿಡಿಯುವುದು. ಕಂಪನಿಗಳು ಸುರಕ್ಷಿತ ಮತ್ತು ಗುರಿ ಮಟ್ಟದ ಪ್ರತಿಕಾಯಗಳನ್ನು ಉತ್ಪಾದಿಸುವ ಕಡಿಮೆ ಡೋಸ್‌ ಅನ್ನು ಕಂಡುಹಿಡಿಯಲು ಬಯಸುತ್ತವೆ. ಉದಾಹರಣೆಗೆ, ಮಾಡರ್ನಾ ವಯಸ್ಕರಲ್ಲಿ 100-ಮೈಕ್ರೊಗ್ರಾಮ್ ಡೋಸ್‌ ಅನ್ನು ಬಳಸುತ್ತದೆ. 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 25, 50 ಮತ್ತು 100 ಮೈಕ್ರೊಗ್ರಾಂ - ಹೀಗೆ ಮೂರು ವಿಭಿನ್ನ ಡೋಸ್‌ ಅನ್ನು ಪರೀಕ್ಷೆ ಮಾಡುತ್ತಿದೆ. ಮತ್ತು 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ 50 ಮತ್ತು 100 ಮೈಕ್ರೋಗ್ರಾಂಗಳ ಎರಡು ಡೋಸ್‌ಗಳನ್ನು ಪರೀಕ್ಷಿಸುತ್ತಿದೆ.

ಕಂಪನಿಯು ಸೂಕ್ತವಾದ ಡೋಸ್‌ ನಿರ್ಧರಿಸಿದ ನಂತರ, ಅದರ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಪ್ಲೇಸಿಬೊ-ನಿಯಂತ್ರಿತ ಪ್ರಯೋಗವನ್ನು ಪ್ರಾರಂಭಿಸುತ್ತದೆ. ಇದರಲ್ಲಿ ಕೆಲವು ಮಕ್ಕಳು ಪ್ಲೇಸಿಬೊ ಪಡೆಯುತ್ತಾರೆ ಮತ್ತು ಕೆಲವರು ಲಸಿಕೆ ಪಡೆಯುತ್ತಾರೆ.

ಮಕ್ಕಳ ಲಸಿಕೆ ಪ್ರಯೋಗಗಳಿಗೆ ಕಠಿಣವಾದ ವ್ಯವಸ್ಥೆಯು ಅಮೆರಿಕದಲ್ಲಿ ಉತ್ತಮವಾಗಿ ಸ್ಥಾಪಿತವಾಗಿದೆ. ಈ ಪ್ರಯೋಗಗಳು ಮಕ್ಕಳಲ್ಲಿ ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸುವಲ್ಲಿ ಪ್ರಮುಖವಾಗಿದ್ದು, ಇದು ವಯಸ್ಕರಿಂದ ಭಿನ್ನವಾಗಿರುತ್ತದೆ.

ಮಕ್ಕಳಿಗಾಗಿ ಪೋಷಕರು ಸುರಕ್ಷಿತವಾದ ಆಟವಾಡುವ ದಿನಾಂಕಗಳನ್ನು ಹೇಗೆ ರಚಿಸಬಹುದು..?
''ನಾನು ಪೋಷಕರೊಂದಿಗೆ ಮಾತನಾಡುವಾಗ, ಇದು ಅಪಾಯ ವರ್ಸಸ್‌ ಲಾಭದ ಪ್ರಶ್ನೆ ಎಂದು ನಾನು ವಿವರಿಸುತ್ತೇನೆ. ವೈದ್ಯಕೀಯ ದೃಷ್ಟಿಕೋನದಿಂದ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಇತರ ಮಕ್ಕಳೊಂದಿಗೆ ಆಟವಾಡುವುದು ಬಾಲ್ಯದ ಒಂದು ಪ್ರಮುಖ ಭಾಗವಾಗಿದೆ. ಮಾಸ್ಕ್‌ಗಳಿಲ್ಲದೆ ಲಸಿಕೆ ಪಡೆಯದ ಮಕ್ಕಳು ಮನೆಯೊಳಗೆ ಆಡುವುದು ಸಹ ಉತ್ತಮ ಉಪಾಯವಲ್ಲ ಎಂದು ನಾನು ಹೇಳುತ್ತೇನೆ'' ಎಂದು ಡಾ. ಜೇಮ್ಸ್ ವುಡ್ ಹೇಳಿದ್ದಾರೆ. ಈ ಹಂತದಲ್ಲಿ ಅಪಾಯವು ತುಂಬಾ ಹೆಚ್ಚಾಗಿದೆ. ಹವಾಮಾನವು ಹೆಚ್ಚು ವಾರ್ಮ್ ಆಗುತ್ತಿದ್ದಂತೆ ನಾನು ಮಕ್ಕಳನ್ನು ಹೊರಗೆ ಆಡಲು ಪ್ರೋತ್ಸಾಹಿಸುತ್ತೇನೆ. ಬೈಕುಗಳನ್ನು ಸವಾರಿ ಮಾಡುವುದಾಗಲೀ, ಆಟವಾಡುವುದಾಗಲೀ ಅಥವಾ ಇತರರೊಂದಿಗೆ ಬೆರೆಯುವುದೇ ಆಗಲಿ - ಅದನ್ನು ಸುರಕ್ಷಿತ ರೀತಿಯಲ್ಲಿ ಮಾಡಿ.
Published by: Sushma Chakre
First published: March 26, 2021, 1:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories