ಕಣ್ಣು ಮನುಷ್ಯನಿಗೆ ಬೇಕಾದಂತಹ ಒಂದು ಅತ್ಯಮೂಲ್ಯವಾದ ಪ್ರಮುಖ ಅಂಗ, ಜಗತ್ತನ್ನು ನೋಡುವ, ಪ್ರತಿಯೊಂದನ್ನು ಅನುಭವಿಸಲು, ಆನಂದಿಸಲು ಕಣ್ಣು ನಮಗೆ ಬೇಕೆ ಬೇಕು. ಆದರೆ ಭೂಮಿ (Earth) ಮೇಲೆ ದೃಷ್ಟಿ ಇಲ್ಲದವರು ಅಸಂಖ್ಯಾತ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ನೇತ್ರದಾನಕ್ಕೆ (Eye Donation) ಎಲ್ಲಿಲ್ಲದ ಒತ್ತನ್ನು ನೀಡಲಾಗುತ್ತದೆ. ಜೊತೆ ಜೊತೆಗೆ ದೃಷ್ಟಿ ಇಲ್ಲದವರಿಗೆ ದೃಷ್ಟಿ ಪುನಃಸ್ಥಾಪಿಸಲು ಸಹ ವೈದ್ಯ ಲೋಕ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತದೆ. ಕುರುಡುತನಕ್ಕೆ (Blindness) ಪ್ರಮುಖವಾಗಿ ಕಾರಣವಾಗುವುದು ನಮ್ಮ ಕಣ್ಣಿನ ಕಾರ್ನಿಯಾ (Cornea) ಭಾಗ. ಕಣ್ಣು ಮೊದಲೇ ಹೇಳಿ ಕೇಳಿ ತುಂಬಾ ಸೂಕ್ಷ್ಮವಾದ ಅಂಗ. ಅದರಲ್ಲೂ ಕಾರ್ನಿಯಾವು ಐರಿಸ್, ಪ್ಯೂಪಿಲ್ (Pupil) ಮತ್ತು ಮುಂಭಾಗದ ಕೋಣೆಯನ್ನು ಆವರಿಸುವ ಕಣ್ಣಿನ ಪಾರದರ್ಶಕ ಮುಂಭಾಗದ ಭಾಗವಾಗಿದೆ. ಇದಕ್ಕೆ ಸ್ವಲ್ಪ ಹಾನಿಯಾದರೂ ಶಾಶ್ವತ ಕುರುಡತನ ಉಂಟಾಗಬಹುದು.
ಕುರುಡುತನಕ್ಕೆ ಕಾರಣವಾಗಬಹುದು ಕೆರಾಟೋಕೊನಸ್ ಕಾಯಿಲೆ
ಕಾರ್ನಿಯಾಕ್ಕೆ ಹಾನಿ ಪ್ರಪಂಚದಾದ್ಯಂತ ಕುರುಡುತನದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, ಸರಿಸುಮಾರು 12.7 ಮಿಲಿಯನ್ ಜನರನ್ನು ಕುರುಡರನ್ನಾಗಿ ಮಾಡಿದೆ. ಕೆರಾಟೋಕೊನಸ್ ಎನ್ನುವುದು ಕಣ್ಣಿನ ಕಾರ್ನಿಯಾ ತೆಳುವಾಗಿ ಮತ್ತು ಉಬ್ಬುವ ಕಾಯಿಲೆಯಾಗಿದ್ದು, ಇದರಿಂದಾಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಕಣ್ಣಿನ ಈ ಕಾಯಿಲೆಯು ಜಾಗತಿಕವಾಗಿ ಪ್ರತಿ 100,000 ಜನರಲ್ಲಿ 50 ರಿಂದ 200 ಜನರ ಮೇಲೆ ಪರಿಣಾಮ ಬೀರುತ್ತದೆ.
ಕೆರಾಟೋಕೊನಸ್‌ಗೆ ಪ್ರಸ್ತುತ ಕೆಲವು ಚಿಕಿತ್ಸಾ ಆಯ್ಕೆಗಳು ಲಭ್ಯವಿದ್ದರೂ, ಇದು ದೃಷ್ಟಿ ಸಮಸ್ಯೆ ಎದುರಿಸುತ್ತಿರುವ ಎಲ್ಲರಿಗೂ ಕೆಲಸ ಮಾಡುವುದಿಲ್ಲ. ಹೀಗಾಗಿ ಅಂತಿಮವಾಗಿ ಸಂಪೂರ್ಣ ದೃಷ್ಟಿಯನ್ನು ಮರಳಿ ಪಡೆಯಲು ಕಾರ್ನಿಯಲ್ ಕಸಿ ಮಾಡಿಸಲೇಬೇಕಾಗುತ್ತದೆ.
ಸಂಶೋಧಕರ ಮೈಲಿಗಲ್ಲು!
ಹೀಗಾಗಿ ಮೊದಲ ಬಾರಿಗೆ ಸ್ವೀಡನ್‌ನ ಲಿಂಕೋಪಿಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಕಾರ್ನಿಯಾ ಪರ್ಯಾಯವನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಣ್ಣಿನ ಕಾರ್ನಿಯಾದ ಹೆಚ್ಚಿನ ಭಾಗವು ಪ್ರೋಟೀನ್ ಕೊಲಾಜನ್‍ನಿಂದ ಮಾಡಲ್ಪಟ್ಟಿದೆಯಾದ್ದರಿಂದ, ಸಂಶೋಧಕರು ಪರ್ಯಾಯ ಕಾರ್ನಿಯಲ್ ವಸ್ತುವನ್ನು ರಚಿಸಲು ಹಂದಿ ಚರ್ಮದಿಂದ ಹೆಚ್ಚು ಶುದ್ಧೀಕರಿಸಿದ ಕೊಲಾಜನ್ ಅಣುಗಳನ್ನು ಬಳಸಿದರು.
ಇದನ್ನೂ ಓದಿ: Wild Animals: ವಿದೇಶಿ ಪ್ರಾಣಿಗಳ ಕಳ್ಳಸಾಗಣೆಗೆ ಬ್ರೇಕ್! ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳೇನು?
ಹಂದಿ ಚರ್ಮದಿಂದ ಪಡೆದ ಕೊಲಾಜನ್ ನಿಂದ ಮಾಡಿದ ಜೈವಿಕವಾಗಿ ಸಂಸ್ಕರಿಸಲಾದ ಕಾರ್ನಿಯಾ ಇಂಪ್ಲಾಂಟ್‌ಗಳನ್ನ ಕಂಡುಹಿಡಿದು ಕಾರ್ನಿಯಾದ ಬದಲಿಗೆ ಇದನ್ನು ಅಳವಡಿಸುವ ಮೂಲಕ ಕಣ್ಣಿಲ್ಲದವರಿಗೆ ಕಣ್ಣಾಗುವ ಪ್ರಯತ್ನ ಮಾಡಿದ್ದಾರೆ. ಒಟ್ಟಾರೆ ಕೆರಾಟೋಕೊನಸ್ ಕಾಯಿಲೆ ಹೊಂದಿರುವ ಜನರಿಗೆ ಕಾರ್ನಿಯಲ್ ಕಸಿ ಮಾಡಲು ಕಡಿಮೆ ತೀವ್ರತರ ವಿಧಾನವನ್ನು ವಿನ್ಯಾಸಗೊಳಿಸಿ ವೈದ್ಯಕೀಯ ಲೋಕದಲ್ಲಿ ಸುದ್ದಿಯಾಗಿದ್ದಾರೆ.
ಭಾರತ ಮತ್ತು ಇರಾನ್‌ನಲ್ಲಿ ಮೊದಲ ಹಂತದ ಪ್ರಯೋಗ ಯಶಸ್ವಿ
ಈಗಾಗ್ಲೇ ಭಾರತ ಮತ್ತು ಇರಾನ್ ನಲ್ಲಿ 20 ಜನರ ದೃಷ್ಟಿಯನ್ನು ಯಶಸ್ವಿಯಾಗಿ ಪುನಃಸ್ಥಾಪಿಸಲು ಇಂಪ್ಲಾಂಟ್ ಅನ್ನು ಬಳಸಲಾಗಿದೆ. ಈ 20 ಜನರಲ್ಲಿ ಹಲವರು ಕೆರಾಟೊಕೊನಸ್‌ನಿಂದ ದೃಷ್ಟಿ ಕಳೆದುಕೊಳ್ಳುವ ಅಂಚಿನಲ್ಲಿದ್ದರು, ಇವರಿಗೆ ಹಂದಿ ಕೊಲಾಜನ್ ಕಾರ್ನಿಯಾ ಕಸಿ ಮಾಡುವ ಮೂಲಕ ಎರಡು ವರ್ಷಗಳ ನಂತರ ಅವರು ದೃಷ್ಟಿಯನ್ನು ಮರು ಪಡೆದಿದ್ದಾರೆ.
ಬಯೋಇಂಜಿನಿಯರ್ಡ್ ಕಾರ್ನಿಯಾಗಳು ಮಾನವ ದಾನಿ ಅಂಗಾಂಶಕ್ಕೆ ಪರ್ಯಾಯವಾಗಿದ್ದು, ಸ್ವೀಡನ್‌ನ ಸಂಶೋಧಕರ ಸಂಶೋಧನೆಗಳು ಆಗಸ್ಟ್ 11 ರಂದು ನೇಚರ್ ಬಯೋಟೆಕ್ನಾಲಜಿ ಜರ್ನಲ್‌ನಲ್ಲಿ ಪ್ರಕಟವಾಗಿವೆ.
ದಾನಿಗಳ ಕೊರತೆ
ಕಾರ್ನಿಯಾಗಳ ತೀವ್ರ ಕೊರತೆಯಿದ್ದು, ಇದೇ ಅಂಶ ನಮ್ಮ ಸಂಶೋಧನೆಗೆ ಕಾರಣವಾಯಿತು ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಕಾರ್ನಿಯಾ ಅಂಗಾಂಶ ತುಂಬಾ ವಿರಳವಾಗಿದ್ದು, 70 ರೋಗಿಗಳಿಗೆ ಒಂದು ಮಾತ್ರ ಲಭ್ಯವಿದೆ ಎಂದಿದ್ದಾರೆ. ಕಾರ್ನಿಯಾವನ್ನು ದಾನಿಗಳಿಂದ ಪಡೆದ ನಂತರ ಅದರ ವ್ಯವಸ್ಥಾಪನಾ ಮತ್ತು ಶೇಖರಣಾ ತೊಂದರೆಗಳು, ದುಬಾರಿ ಶಸ್ತ್ರಚಿಕಿತ್ಸಾ ಉಪಕರಣಗಳ ಕಾರಣದಿಂದಾಗಿ ಇವುಗಳ ಲಭ್ಯತೆ ಕಡಿಮೆ ಇದೆ ಎನ್ನಬಹುದು. ಇದು ಏಷ್ಯಾ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ವಾಸಿಸುವವರಿಗೆ ಮತ್ತಷ್ಟು ಹೊರೆಯಾಗಿದೆ. ದುಬಾರಿತನದಿಂದಾಗಿ ಈ ದೇಶದ ಜನರು ಕಾರ್ನಿಯಾದ ದಾನ ಪಡೆಯುವಿಕೆಗೆ ಹಿಂದೇಟು ಹಾಕುತ್ತಾರೆ.
ಇದನ್ನೂ ಓದಿ: Langya HenipaVirus: ಏನಿದು ಚೀನಾದಲ್ಲಿ ಪತ್ತೆಯಾದ ಹೊಸ ವೈರಸ್? ಮನುಕುಲಕ್ಕೆ ವಿನಾಶಕಾರಿಯೇ 'ಲಾಂಗ್ಯಾ'?
ಎರಡು ವರ್ಷಗಳವರೆಗೆ ಈ ಕಾರ್ನಿಯಾವನ್ನು ಸಂಗ್ರಹಿಸಿಡಬಹುದು
ಈ ಎಲ್ಲಾ ಕಾರಣಗಳಿಂದಾಗಿ ಮಾನವ ಕಾರ್ನಿಯಾಗಳಿಗೆ ಬದಲಿಯಾಗಿ, ಸಂಶೋಧಕರು ಹಂದಿ ಚರ್ಮದಿಂದ ಪಡೆದ ವೈದ್ಯಕೀಯ ದರ್ಜೆಯ ಕೊಲಾಜನ್ ಅನ್ನು ಬಳಸಿಕೊಂಡು ಹೊಸ ರೀತಿಯ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಸಂಶೋಧಕರ ಪ್ರಕಾರ, ಆಹಾರ ಉದ್ಯಮದ ಉಪಉತ್ಪನ್ನವಾಗಿರುವುದರಿಂದ ಹಂದಿ ಚರ್ಮವನ್ನು ಸುಲಭವಾಗಿ ಪಡೆದುಕೊಂಡು ಇದನ್ನು ವಿನ್ಯಾಸ ಮಾಡಬಹುದು ಎಂಬುದು ಅವರ ಅಭಿಪ್ರಾಯ. ಇದು ದಾನಿಗಳ ಮಾಡುವ ಕಾರ್ನಿಯಾಗಳಿಗಿಂತ ಅಗ್ಗವಾಗಿದೆ. ಇದಕ್ಕೆ ಕಾರ್ಯವಿಧಾನದ ಅಗತ್ಯವಿರುತ್ತದೆ ಮತ್ತು ಗಮನಾರ್ಹವಾಗಿ ಎರಡು ವರ್ಷಗಳವರೆಗೆ ಇದನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಬಹುದು ಎನ್ನುತ್ತಾರೆ ಸಂಶೋಧಕರು. ಅದೇ ಮನುಷ್ಯನ ಕಾರ್ನಿಯಾವನ್ನು ದಾನ ಪಡೆದ 2 ವಾರಗಳೊಳಗೆ ಅದನ್ನು ಕಸಿ ಮಾಡಬೇಕು. ಹೀಗಾಗಿ ಈ ಹೊಸ ಸಂಶೋಧನೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ.
ಸರಳ ವಿಧಾನದ ಮೂಲಕ ಕಸಿ
ಸಂಶೋಧಕರು ಹೊಲಿಗೆಗಳನ್ನು ಬಳಸದೆಯೇ ಕನಿಷ್ಠ ಆಕ್ರಮಣಕಾರಿ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇಲ್ಲಿ ರೋಗಿಯ ಕಣ್ಣಿನಲ್ಲಿ ಸಣ್ಣ ಛೇದನವನ್ನು ಮಾಡಲಾಗುತ್ತದೆ ಮತ್ತು ಅಸ್ತಿತ್ವದಲ್ಲಿರುವ ಕಾರ್ನಿಯಾದ ಮೇಲೆ ಹಂದಿ ಕಾಲಜನ್ ಇಂಪ್ಲಾಂಟ್ ಅನ್ನು ಸೇರಿಸಲಾಗುತ್ತದೆ. ಇದನ್ನು ಹೆಚ್ಚು ನಿಖರವಾದ ಲೇಸರ್‌ಗಳಿಂದ ಅಥವಾ ಸುಲಭವಾಗಿ ಲಭ್ಯವಿರುವ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಬಳಸಿ ಯಶಸ್ವಿಯಾಗಿ ಕೆಲಸ ಮುಗಿಸಬಹುದು ಎಂದಿದ್ದಾರೆ ವೈದ್ಯರು.
ಈ ಹೊಸ ವಿಧಾನವನ್ನು ಈಗಾಗ್ಲೇ ಭಾರತ ಮತ್ತು ಇರಾನ್‌ನಲ್ಲಿ ಶಸ್ತ್ರಚಿಕಿತ್ಸಕರು ಬಳಸಿದ್ದಾರೆ. ಈ ದೇಶಗಳಲ್ಲಿ ದಾನ ಮಾಡಿದ ಕಾರ್ನಿಯಾಗಳ ಕೊರತೆಯಿರುವುದರಿಂದ, ಮೊದಲಿಗೆ ಈ ದೇಶಗಳಲ್ಲಿ ಸಂಶೋಧಕರು ಮೊದಲ ಹಂತದ ಪ್ರಯೋಗ ನಡೆಸಿದ್ದಾರೆ. 20 ಜನರಿಗೂ ಕಾರ್ಯವಿಧಾನವು ಸುರಕ್ಷಿತವಾಗಿದೆ ಮಾತ್ರವಲ್ಲ, ಕಾರ್ಯಾಚರಣೆಯ 2 ವರ್ಷಗಳ ನಂತರ, ಯಾರೊಬ್ಬರು ಕುರುಡುತನದಂತಹ ಸಮಸ್ಯೆ ಎದುರಿಸಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದಲ್ಲದೆ ಮೊದಲು ಅಂಧರಾಗಿದ್ದ 3 ಭಾರತೀಯರು, ಕಾರ್ಯಾಚರಣೆಯ ನಂತರ ಪರಿಪೂರ್ಣ ದೃಷ್ಟಿ ಪಡೆದುಕೊಂಡಿದ್ದಾರೆ. ಪ್ರಯೋಗ ಯಶಸ್ವಿಯಾಗಿರುವುದರಿಂದ ಅವರ ಈ ವಿಧಾನವು ಎಲ್ಲರಿಗೂ ಕೈಗೆಟುಕುವಂತಿರಬೇಕು ಎಂಬುವ ಉದ್ದೇಶವನ್ನು ಸಂಶೋಧಕರು ಹೊಂದಿದ್ದಾರೆ.
ಇದನ್ನೂ ಓದಿ: Monkeypox ನಿಮ್ಮನ್ನು ದೈಹಿಕವಾಗಷ್ಟೇ ಅಲ್ಲ, ಮಾನಸಿಕವಾಗಿಯೂ ಕಾಡುತ್ತದೆಯಂತೆ!
"ಹ್ಯೂಮನ್ ಇಂಪ್ಲಾಂಟ್‌ಗಳಾಗಿ ಬಳಸುವ ಎಲ್ಲಾ ಮಾನದಂಡಗಳನ್ನು ಪೂರೈಸುವ ಜೈವಿಕ ವಸ್ತುವನ್ನು ಅಭಿವೃದ್ಧಿಪಡಿಸಲು ಸಾಧ್ಯವಿದೆ ಎಂದು ಫಲಿತಾಂಶಗಳು ತೋರಿಸುತ್ತವೆ. ಇದನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬಹುದು ಮತ್ತು ಎರಡು ವರ್ಷಗಳವರೆಗೆ ಸಂಗ್ರಹಿಸಬಹುದು ಮತ್ತು ಆ ಮೂಲಕ ದೃಷ್ಟಿ ಸಮಸ್ಯೆಗಳಿರುವ ಹೆಚ್ಚಿನ ಜನರಿಗೆ ಇದನ್ನು ತಲುಪಿಸಬಹುದು" ಎಂದು ಸ್ವೀಡನ್‌ನ ಲಿಂಕೋಪಿಂಗ್ ವಿಶ್ವವಿದ್ಯಾನಿಲಯದ ಪ್ರಾಯೋಗಿಕ ನೇತ್ರವಿಜ್ಞಾನದ ಪ್ರಾಧ್ಯಾಪಕರು, ಅಧ್ಯಯನ ತಂಡದ ಸಂಶೋಧಕರಲ್ಲಿ ಒಬ್ಬರಾದ ಸಂಶೋ ನೀಲ್ ಲಗಾಲಿ ಹೇಳಿದ್ದಾರೆ. ಶಸ್ತ್ರಚಿಕಿತ್ಸಕರು ದಾನಿ ಅಂಗಾಂಶವನ್ನು ಬಳಸುತ್ತಿದ್ದರೂ ಸಹ, ಸುಧಾರಿತ ಕೆರಾಟೋಕೊನಸ್‌ಗೆ ಚಿಕಿತ್ಸೆ ನೀಡಲು ಸರಳವಾದ, ಸುರಕ್ಷಿತ ವಿಧಾನವಾಗಿ ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು ಎಂದು ಡಾ. ಲಗಾಲಿ ಆಶಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ