Murder Cases: 10 ದಿನದಲ್ಲಿ ಮೂವರ ದುರ್ಮರಣ; ಅಮಾಯಕರ ಸಾವಿನಿಂದ ನಲುಗಿದ ಕುಟುಂಬಗಳು

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಅಕ್ಷರಶಃ ಕೋಮುಗಲಭೆ ದಳ್ಳುರಿಯನ್ನು ಎದುರಿಸುತ್ತಿದೆ. ಕಳೆದ 10 ದಿನಗಳಲ್ಲಿ ಆದ ಮೂರು ಹತ್ಯೆಗಳು ರಾಜ್ಯವನ್ನೇ ಬೆಚ್ಚಿಬೀಳಿಸಿವೆ. ಒಂದರ ಹಿಂದೆ ಒಂದು ನಡೆದ ಸರಣಿ ಕೊಲೆಗಳಿಂದಾಗಿ ಸಂಪೂರ್ಣ ಮಂಗಳೂರು ಸ್ತಬ್ಧವಾಗಿ ಬಿಟ್ಟಿದೆ.

ಕೊಲೆಯಾದ ಮೂವರು ವ್ಯಕ್ತಿಗಳು

ಕೊಲೆಯಾದ ಮೂವರು ವ್ಯಕ್ತಿಗಳು

  • Share this:
ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ (Dashina Kannada) ಜಿಲ್ಲೆ ಅಕ್ಷರಶಃ ಕೋಮುಗಲಭೆ ದಳ್ಳುರಿಯನ್ನು ಎದುರಿಸುತ್ತಿದೆ. ಕಳೆದ 10 ದಿನಗಳಲ್ಲಿ ಆದ ಮೂರು ಹತ್ಯೆಗಳು ರಾಜ್ಯವನ್ನೇ ಬೆಚ್ಚಿಬೀಳಿಸಿವೆ. ಒಂದರ ಹಿಂದೆ ಒಂದು ನಡೆದ ಸರಣಿ ಕೊಲೆಗಳಿಂದಾಗಿ (Murder) ಸಂಪೂರ್ಣ ಮಂಗಳೂರು ಸ್ತಬ್ಧವಾಗಿ ಬಿಟ್ಟಿದೆ. ನಂಬಿಕೆ ಮತ್ತು ಸಂಘಪರಿವಾರ ಕಾರಣದಿಂದಾಗಿ ಮೂಲಭೂತ ಹಿಂದುತ್ವ (Hinduism) ಮತ್ತು ಇಸ್ಲಾಮಿಕ್ ಗುಂಪುಗಳ (Islamic Groups) ನಡುವಿನ ಚಕಮಕಿಯಲ್ಲಿ ಮೂವರು ಅಮಾಯಕರು ದುರಂತ ಅಂತ್ಯ ಕಂಡಿದ್ದಾರೆ. ಜುಲೈ 19ರಿಂದ ಜುಲೈ 28ರ ನಡುವಿನ 10 ದಿನಗಳ ಅವಧಿಯಲ್ಲಿ ನಡೆದ ಮೂರು ಹತ್ಯೆಗಳ ಬಗ್ಗೆ ತನಿಖೆ ನಡೆಯುತ್ತಿದೆ.

ಕಳೆದ 10 ದಿನಗಳಲ್ಲಿ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಮಸೂದ್ ಬಿ (19), ಪ್ರವೀಣ್ ನೆಟ್ಟಾರು (32), ಮತ್ತು ಮೊಹಮ್ಮದ್ ಫಾಜಿಲ್ ಬಲಿಪಶುಗಳಾಗಿದ್ದಾರೆ. ಮನೆಗೆ ಆಧಾರವಾಗಿದ್ದವರನ್ನು ಕಳೆದಕೊಂಡ ಕುಟುಂಬ ದುಃಖದ ಮಡುವಲ್ಲಿದೆ. ಮೃತರ ಕುಟುಂಬದ ಜೊತೆ ಇಂಡಿಯನ್ ಎಕ್ಸ್ಪ್ರೆಸ್ ಮಾತನಾಡಿದ್ದು, ಆ ಅಮಾಯಕರ ಕುಟುಂಬದ ಕಥೆ ಹೀಗಿದೆ..

1) ಮಸೂದ್ ಬಿ
ಕೇರಳದ ಕಾಸರಗೋಡಿನ ಒಂದು ಕುಟುಂಬದ ನಾಲ್ಕು ಮಕ್ಕಳಲ್ಲಿ ಒಬ್ಬನಾದ 19 ವರ್ಷದ ಮಸೂದ್ ತನ್ನ 12 ನೇ ವಯಸ್ಸಿನಲ್ಲಿ ತನ್ನ ತಂದೆಯನ್ನು ಕಳೆದುಕೊಂಡನು. ಮರಣದ ನಂತರ, ಕುಟುಂಬವು ಬೆಳ್ಳಾರೆಯಲ್ಲಿರುವ ತಮ್ಮ ಅಜ್ಜಿಯ ಮನೆಗೆ ಸ್ಥಳಾಂತರಗೊಂಡಿತು. ತಂದೆ ಕಳೆದುಕೊಂಡು ಮಸೂದ್ ಚಿಕ್ಕ ವಯಸ್ಸಿನಲ್ಲಿಯೇ ಅಣ್ಣನ ಜೊತೆ ಮನೆ ಜವಾಬ್ದಾರಿ ಹೊತ್ತುಕೊಂಡ. ಮಸೂದ್‌ನ ಸಂಬಂಧಿ ಶೌಕತ್‌ ಅಲಿ ಮಾತನಾಡಿ, ಮಸೂದ್‌ನ ಸಾವಿನ ನಂತರ ಕುಟುಂಬವು ದುಃಖದಲ್ಲಿ ಮುಳುಗಿದೆ, ಏಕೆಂದರೆ ಕುಟುಂಬದಲ್ಲಿ ಒಂದರ ನಂತರ ಒಂದು ನಾಲ್ಕು ತಿಂಗಳಲ್ಲಿ ನಾಲ್ಕು ಸಾವು ಸಂಭವಿಸಿವೆ ಎಂದರು.

ನಾಲ್ಕು ತಿಂಗಳಲ್ಲಿ ಕುಟುಂಬದಲ್ಲಿ ನಾಲ್ಕು ಸಾವು
"ಮೊದಲು, ಮಸೂದ್‌ನ ಚಿಕ್ಕಪ್ಪ ನಿಧನರಾದರು ಮತ್ತು ಕೆಲವು ದಿನಗಳ ನಂತರ ಅವರ ಅಜ್ಜ ನಿಧನರಾದರು. ಕೆಲವೇ ದಿನಗಳಲ್ಲಿ, ಸೋದರಸಂಬಂಧಿಯ ಮಗು ಸಾವನ್ನಪ್ಪಿತು. ಈಗ ನಮಗೆ ಮತ್ತೊಂದು ಆಘಾತವಾಗಿದ್ದು, ಮಸೂದ್ ಕಣ್ಮುಚ್ಚಿದ್ದಾನೆ ಎಂದು ಅಲಿ ಅಳಲು ತೋಡಿಕೊಂಡರು.

ಇದನ್ನೂ ಓದಿ:  Praveen Nettar Murder: ಹಂತಕರಿಗೆ ಟಾರ್ಗೆಟ್ ಆಗಿದ್ದೇಕೆ ಪ್ರವೀಣ್ ನೆಟ್ಟಾರ್? ಬಿಜೆಪಿ ಕಾರ್ಯಕರ್ತನ ಹತ್ಯೆ ಹೇಗಾಯ್ತು?

ಮಸೂದ್‌ಗೆ ಒಬ್ಬ ಕಿರಿಯ ಸಹೋದರ ಮತ್ತು ಸಹೋದರಿ ಇದ್ದಾರೆ. ಮಸೂದ್ ಮತ್ತು ಆತನ ಅಣ್ಣ ಮಿರ್ಷಾದ್, ಕೂಲಿ ಮತ್ತು ಪೇಂಟರ್ ಆಗಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಮಸೂದ್ ಮನೆ ಕಟ್ಟುವ ಬಯಕೆ ಹೊಂದಿದ್ದ, ಆದರೆ ಎಲ್ಲವೂ ಗಾಳಿಯಲ್ಲಿ ಕಣ್ಮರೆಯಾಯಿತು ಎಂದು ಸಂಬಂಧಿ ಶೌಖತ್ ಅಲಿ ಹೇಳಿದರು.

“ಮಸೂದ್ ಗೆ ಸಮಾಜದ ಬಗ್ಗೆ ಹೆಚ್ಚು ಅರಿವಿರಲಿಲ್ಲ. ಇಲ್ಲಿನ ರಾಜಕೀಯ ಪಕ್ಷಗಳು ಮತ್ತು ಅವುಗಳ ಕ್ರಿಯಾಶೀಲತೆಯ ಬಗ್ಗೆಯೂ ಅವನಿಗೆ ತಿಳಿದಿರಲಿಲ್ಲ. ಯಾವಾಗಲೂ ಆತ ಕೆಲಸದ ನಿಮಿತ್ತ ಹೊರಗಡೆ ಇರುತ್ತಿದ್ದ. ಇದೇ ಮೊದಲು ಅವನು ಒಂದು ತಿಂಗಳಿಗಿಂತ ಹೆಚ್ಚು ಕಾಲ ಮನೆಯಲ್ಲಿದ್ದದ್ದು” ಎಂದು ಮಸೂದ್‌ನ ತಾಯಿ ಸಾರಮ್ಮ ಹೇಳಿದರು. ಮಸೂದ್, ಹಂತಕ ಸುಧೀರ್ ಮತ್ತು ಅವನ ಬಳಗದ ಜೊತೆ ಸಂಪರ್ಕ ಹೊಂದಿರಲೇ ಇಲ್ಲ. ಆದರೂ ನನ್ನ ಮಗನನ್ನು ಹೊಡೆದು ಸಾಯಿಸಿದ್ದಾರೆ ಎಂದು ಮೃತನ ತಾಯಿ ಕಣ್ಣೀರಿಟ್ಟರು.

ಸಾವಿಗೂ ಮುನ್ನ ಭುಜ ಮುಟ್ಟುವ ವಿಚಾರವಾಗಿ ಸಣ್ಣ ಜಗಳ
ಮಸೂದ್‌ ಮೇಲೆ ಮಾರಣಾಂತಿಕ ಘೋರ ದಾಳಿ ನಡೆದ ದಿನಕ್ಕೂ ಮುನ್ನ ಮಸೂದ್‌ ಹಾಗೂ ಬೆಳ್ಳಾರೆ ಸುಧೀರ್‌ ನಡುವೆ ಭುಜ ಮುಟ್ಟುವ ವಿಚಾರವಾಗಿ ಸಣ್ಣ ಜಗಳ ನಡೆದಿತ್ತು. ಅಲಿ ಪ್ರಕಾರ, ಜುಲೈ 19 ರಂದು, ಇಬ್ಬರೂ ಜಗಳವಾಡಿದರು ಮತ್ತು ಮಸೂದ್ ಮನೆಗೆ ಮರಳಿದ್ದ. ನಂತರ, ಸುಧೀರ್ ಮತ್ತು ಇತರರು ಮಸೂದ್‌ನ ಸ್ನೇಹಿತ ಇಬ್ರಾಹಿಂ ಶನಿಫ್‌ಗೆ ಮಸೂದ್‌ನನ್ನು ದೇವಸ್ಥಾನದ ಮುಂದೆ ರಾಜಿ ಸಭೆಗೆ ಕರೆತರುವಂತೆ ಕೇಳಿದರು. ನಂತರ ಅಲ್ಲಿಗೆ ಬಂದ ಮಸೂದ್ ಮೇಲೆ ಎಂಟು ಜನರ ಗ್ಯಾಂಗ್ ಹಲ್ಲೆ ನಡೆಸಿ ಬಾಟಲಿಯಿಂದ ಹೊಡೆದಿದ್ದಾರೆ. ನಂತರ ಚಿಕಿತ್ಸೆ ಫಲಿಸದೇ ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮಸೂದ್ ನಿಧನ ಹೊಂದಿದ.

2) ಪ್ರವೀಣ್ ನೆಟ್ಟಾರು – ಮನೆ ಕಟ್ಟುವ ಕನಸು ಕಾಣುತ್ತಿದ್ದ ಬಿಜೆಪಿಯ ಆಕಾಂಕ್ಷಿ ನಾಯಕನ ದುರುಂತ ಅಂತ್ಯ
32 ವರ್ಷದ ಪ್ರವೀಣ್ ನೆಟ್ಟಾರು ನಾಲ್ಕು ಮಕ್ಕಳಲ್ಲಿ ಕಿರಿಯ. ತಂದೆಯ ನಿಧನದ ನಂತರ ವಿದ್ಯಾಭ್ಯಾಸ ಬಿಟ್ಟು ಮನೆ ಜವಾಬ್ದಾರಿ ತೆಗೆದುಕೊಂಡರು. ಚಿಕ್ಕ ವಯಸ್ಸಿನಲ್ಲೇ ಸಂಘಪರಿವಾರದ ಚಟುವಟಿಕೆಗಳತ್ತ ಆಕರ್ಷಿತರಾದ ಪ್ರವೀಣ್ ಅದರಲ್ಲೂ ತೊಡಗಿಕೊಂಡಿದ್ದರು. ಪ್ರವೀಣ್ ಮನೆಯ ಏಕೈಕ ಆಧಾರವಾಗಿದ್ದರು ಮತ್ತು ಮೂರು ವರ್ಷಗಳ ಹಿಂದೆ, ಅವರು ಗ್ರಂಥಪಾಲಕಿಯಾಗಿ ಕೆಲಸ ಮಾಡುತ್ತಿದ್ದ ನೂತನಾ ಅವರನ್ನು ವಿವಾಹವಾಗಿದ್ದರು.

ಕ್ಯಾಬ್ ಡ್ರೈವರ್ ಸೇರಿದಂತೆ ವಿವಿಧ ಕೆಲಸಗಳಲ್ಲಿ ದುಡಿದಿದ್ದ ಪ್ರವೀಣ್ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ಆರಂಭಿಸಿದ್ದರು, ಅವರ ಪತ್ನಿ ಕೂಡ ಕೆಲಸ ಮಾಡುತ್ತಿದ್ದು, ಬದುಕು ಚೆನ್ನಾಗಿ ನಡೆಯುತ್ತಿತ್ತು. ಇದರ ಮಧ್ಯೆ ನೆಟ್ಟಾರುವಿನಲ್ಲಿ ಮನೆ ನಿರ್ಮಿಸುವ ಕನಸನ್ನು ಪ್ರವೀಣ್ ಇಟ್ಟುಕೊಂಡಿದ್ದರು. ಆದರೆ ಪ್ರವೀಣ್ ಕನಸು ಕನಸಾಗಿಯೇ ಉಳಿದಿದ್ದು, ಮನೆ ಕಟ್ಟಲು ಬಯಸಿದ್ದ ಸ್ಥಳದಲ್ಲಿಯೇ ಅವರ ಅಂತ್ಯಕ್ರಿಯೆ ನಡೆದಿದೆ.

ಇದನ್ನೂ ಓದಿ: Political Killing: 22 ವರ್ಷಗಳಲ್ಲಿ 120 ರಾಜಕೀಯ ಕೊಲೆಗಳನ್ನು ಕಂಡ ಕರ್ನಾಟಕ 

ಜುಲೈ 21 ರಂದು ಮಸೂದ್ ಸಾವಿನ ನಂತರ ಬೆಳ್ಳಾರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಸಾಮಾನ್ಯವಾಗಿ ರಾತ್ರಿ 9.30ಕ್ಕೆ ಅಂಗಡಿಗಳನ್ನು ಮುಚ್ಚುತ್ತಿದ್ದರು ಆದರೆ ಮಸೂದ್ ಹತ್ಯೆಯ ನಂತರ ಭಯದಿಂದ ಸಾರ್ವಜನಿಕರ ಓಡಾಟ ಇಲ್ಲದ ಕಾರಣ ರಾತ್ರಿ 7.30-8ಕ್ಕೆ ಅಂಗಡಿಗಳನ್ನು ಮುಚ್ಚುತ್ತಿದ್ದರು ಎಂದು ಪ್ರವೀಣ್ ಅವರ ಕೋಳಿ ಅಂಗಡಿಯ ಪಕ್ಕದಲ್ಲಿ ಜನರಲ್ ಸ್ಟೋರ್ ನಡೆಸುತ್ತಿರುವ ವಿಟ್ಟಲ್ ದಾಸ್ ಹೇಳಿದರು.

"ಬಿಜೆಪಿ ಮುಖಂಡರಿಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ ನಂತರ ಸ್ಥಳೀಯ ಹಿಂದೂ ಪರ ಕಾರ್ಯಕರ್ತರು ಗ್ರಾಮದಿಂದ ಓಡಿಹೋದರು" ಎಂದು ನೂತನಾ ಅವರ ಸಹೋದರ ಶಿವಪ್ರಸಾದ್ ಹೇಳಿದರು. ಪ್ರವೀಣ್ ಅವರು ಬಿಜೆಪಿ ಯುವ ಮೋರ್ಚಾ ಮತ್ತು ಹಿಂದೂ ಪರ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದ್ದರಾದರೂ ಅವರು ಸ್ಥಳೀಯ ಮುಸ್ಲಿಮರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಆದಾಗ್ಯೂ ಸಹ ದಾರುಣವಾಗಿ ಕೊಲೆಯಾಗಿದ್ದು ನಿಜಕ್ಕೂ ದುರಂತ.

3) ಮೊಹಮ್ಮದ್ ಫಾಜಿಲ್ - MBA ಪದವೀಧರನ ಕೊಲೆ
ಮೊಹಮ್ಮದ್ ಫಾಜಿಲ್ ಎಂಬ 23 ವರ್ಷದ ಯುವಕ ತನ್ನ ಮೂವರು ಒಡಹುಟ್ಟಿದವರಲ್ಲಿ ಎರಡನೆಯವನು. ಮತ್ತು ಕುಟುಂಬದಲ್ಲಿ ಸ್ನಾತಕೋತ್ತರ ಕೋರ್ಸ್ ಪೂರ್ಣಗೊಳಿಸಿದ ಮೊದಲಿಗ. ಕ್ಯಾಬ್ ಡ್ರೈವರ್ ಆಗಿರುವ ಫಾಜಿಲ್ ತಂದೆ ಉಮರ್ ಫಾರೂಕ್ ಸ್ವಂತ ಕಾರು ಹೊಂದಿಲ್ಲ ಆದರೆ ಕ್ಯಾಬ್ ಡ್ರೈವರ್ ಆಗಿ ತನ್ನ ಮಕ್ಕಳನ್ನು ಬೆಳೆಸಿದ್ದಾರೆ. “ನಾನು ವಿದ್ಯಾವಂತನಲ್ಲ. ನನ್ನ ಮಕ್ಕಳು ಚೆನ್ನಾಗಿ ಓದಬೇಕೆಂದು ನಾನು ಬಯಸಿದ್ದೆ. ನನ್ನ ಹಿರಿಯ ಮಗ ಬಿಎಸ್ಸಿ ಮುಗಿಸಿದರೆ, ಫಾಜಿಲ್ ಎಂಬಿಎ ಮಾಡಿ ಫೈರ್ ಸೇಫ್ಟಿ ತರಬೇತಿ ಕಾರ್ಯಕ್ರಮ ಮುಗಿಸಿದ್ದ. ನನ್ನ ಮಕ್ಕಳೇ ನನ್ನ ಆಸ್ತಿಯೇ ಹೊರತು ಬೇರೇನೂ ಅಲ್ಲ,” ಎನ್ನುತ್ತಾರೆ ಫಾರೂಕ್.

ದಕ್ಷಿಣ ಕನ್ನಡದ ಕರಾವಳಿ ಜಿಲ್ಲೆಯಲ್ಲಿ ಕೋಮು ಗಲಭೆಗಳ ನಡುವೆಯೂ ಫಾಜಿಲ್ ಕುಟುಂಬ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. “ನಾನು ಚಾಲಕ ಮತ್ತು ಎಲ್ಲಾ ಧರ್ಮದ ಜನರು ನನಗೆ ಉದ್ಯೋಗವನ್ನು ಒದಗಿಸಿದ್ದಾರೆ ಮತ್ತು ನಾವು ಯಾವಾಗಲೂ ಸೌಹಾರ್ದಯುತ ಸಂಬಂಧವನ್ನು ಹಂಚಿಕೊಂಡಿದ್ದೇವೆ. ಫಾಜಿಲ್ ಕೂಡ ನನ್ನ ಇತರ ಮಕ್ಕಳಂತೆ ಯಾವುದೇ ರೀತಿಯ ಕ್ರಿಯಾಶೀಲತೆ ಅಥವಾ ಯಾವುದನ್ನೂ ಮಾಡಲಿಲ್ಲ,” ಎಂದು ಫಾರೂಕ್ ಹೇಳಿದರು.

ಇದನ್ನೂ ಓದಿ:  Surathkal Murder: ಫಾಜಿಲ್ ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸುಳಿವು; ಕೃತ್ಯ ನಡೆಸಿದ ನಾಲ್ವರ ಮಾಹಿತಿ ಲಭ್ಯ

“ಶಿಕ್ಷಣದ ನಂತರ ಗಲ್ಫ್‌ಗೆ ಹೋಗುವುದು ಅವನ ಗುರಿಯಾಗಿತ್ತು ಮತ್ತು ಅವನು ಸಿಲಿಂಡರ್ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಮತ್ತು ಇತರ ಕೆಲಸಗಳಂತಹ ಸಣ್ಣ ಕೆಲಸಗಳನ್ನು ಮಾಡುತ್ತಿದ್ದನು" ಎಂದು ಅವನ ತಂದೆ ಹೇಳುತ್ತಾರೆ. ಜುಲೈ 28 ರಂದು ರಾತ್ರಿ ಸುರತ್ಕಲ್ ಪೇಟೆಯಲ್ಲಿ ತನ್ನ ಸ್ನೇಹಿತನೊಂದಿಗೆ ಇದ್ದಾಗ ನಾಲ್ವರು ಮುಸುಕುಧಾರಿಗಳು ಫಾಝಿಲ್ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದಾರೆ. “ಈ ಕೊಲೆಗಳು ಮತ್ತು ಹಿಂಸಾಚಾರಗಳು ನಿಲ್ಲಬೇಕು. ನನ್ನ ಒಂದೇ ವಿನಂತಿ, ಇದು ಯಾರಿಗೂ ಆಗಬಾರದು. ನಾನು ಅನುಭವಿಸುತ್ತಿರುವ ನೋವನ್ನು ಯಾವ ತಂದೆಯೂ ಅನುಭವಿಸಬಾರದು’ ಎನ್ನುತ್ತಾರೆ ಮೃತ ಫಾಝಿಲ್ ತಂದೆ.

ಒಟ್ಟಾರೆ ಕೆಟ್ಟ ಹಿತಾಸಕ್ತಿಗಳ ಕೈವಾಡಕ್ಕೆ ಅಮಯಾಕರ ಬಲಿ ಆಗಿದ್ದು, ರಾಜ್ಯ ಮತ್ತು ರಾಜಕೀಯ ಎತ್ತ ಸಾಗುತ್ತಿದೆ ಎಂವ ಪ್ರಶ್ನೆ ಮೂಡುತ್ತಿದೆ.
Published by:Ashwini Prabhu
First published: