Explained: ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದಂತೆ ಭಾರತದ ನಿಲುವೇನು? ಹೊಸ ಮಸೂದೆಯಲ್ಲಿರುವ ನಿಯಮಗಳೇನು?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಶ್ಯೂ ಮಾಡುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟನ್ನು ನಿರ್ಮಿಸುವ ಉದ್ದೇಶದಿಂದ ಯೋಜನೆ ರೂಪಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಶ್ವದಲ್ಲಿಯೇ ಅತಿದೊಡ್ಡ ಕ್ರಿಪ್ಟೋ (Crypto) ಮಾಲೀಕತ್ವ ಹೊಂದಿರುವ ಭಾರತದಲ್ಲಿ ಕೇಂದ್ರವು ಇದೀಗ ಕ್ರಿಪ್ಟೋ ಕರೆನ್ಸಿ (Crypto Currency) ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಸಜ್ಜಾಗಿರುವ ಬೆನ್ನಲ್ಲೇ ಹೆಸರಾಂತ ಬೆಲೆ ಬದಲಾವಣೆಯ ಕ್ರಿಪ್ಟೋ ಕರೆನ್ಸಿಗಳು ಖ್ಯಾತಿ ಪಡೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಆರ್‌ಬಿಐ (RBI) ತನ್ನದೇ ಆದ ಡಿಜಿಟಲ್ ಕರೆನ್ಸಿ ಆರಂಭಿಸುವ ಸನ್ನಾಹದಲ್ಲಿರುವಾಗಲೇ ಕ್ರಿಪ್ಟೋ ಕರೆನ್ಸಿಗಳ ಕುರಿತು ಕೇಂದ್ರವು ತನ್ನ ಜಾಗರೂಕತೆಯನ್ನು ಸ್ಪಷ್ಟಪಡಿಸಿದೆ. ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಯ ಕುರಿತು ನೀವು ತಿಳಿದುಕೊಳ್ಳಬೇಕಾದ ವಿವರಗಳು ಕಾಯ್ದೆ ಜಾರಿಯಾದಲ್ಲಿ ಕ್ರಿಪ್ಟೋ ಭವಿಷ್ಯವೇನು ಮೊದಲಾದ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಭಾರತದಲ್ಲಿ ಎಷ್ಟು ಜನರು ಕ್ರಿಪ್ಟೋ ಕರೆನ್ಸಿ ಹೊಂದಿದ್ದಾರೆ?

ಉದ್ಯಮ ಸಂಪನ್ಮೂಲಗಳಿಂದ ತಿಳಿದು ಬಂದಿರುವ ಸುದ್ದಿಯ ಪ್ರಕಾರ, 10 ಕೋಟಿಗೂ ಹೆಚ್ಚು ಭಾರತೀಯರು ಅದರಲ್ಲೂ ಯುವಜನರು, ಹಿರಿಯ ನಾಗರಿಕರು ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದಾಗಿದೆ. ಅಮೆರಿಕಾ ದೇಶಕ್ಕಿಂತಲೂ ಭಾರತವು ಈ ವಿಷಯದಲ್ಲಿ ಮುನ್ನಡೆ ಸಾಧಿಸಿದ್ದು ಸರಿಸುಮಾರು 10.07 ಕೋಟಿ ಕ್ರಿಪ್ಟೋ ಕರೆನ್ಸಿ ಮಾಲಿಕರಿದ್ದಾರೆ ಎಂಬುದು ತಿಳಿದು ಬಂದಿದೆ.

ಕ್ರಿಪ್ಟೋ ಸಂಶೋಧನಾ ಸಂಸ್ಥೆ CREBACO ಹೇಳುವಂತೆ ಕ್ರಿಪ್ಟೋಕರೆನ್ಸಿಗಳಲ್ಲಿನ ಒಟ್ಟು ಹೂಡಿಕೆಯು ಏಪ್ರಿಲ್ 2020ರಲ್ಲಿ USD 1 ಬಿಲಿಯನ್‌ಗಿಂತ ಸ್ವಲ್ಪ ಕಡಿಮೆಯಿಂದ 2021ರ ಕೊನೆಯಲ್ಲಿ USD 10 ಬಿಲಿಯನ್‌ಗೆ ಏರಿದೆ. ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಮಸೂದೆಯನ್ನು ಶಾಸನಕ್ಕಾಗಿ ಸಿದ್ಧಪಡಿಸಲಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಬಿಟ್‌ಕಾಯಿನ್, ಈಥರ್ ಮುಂತಾದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಗಣನೀಯ ಪ್ರಮಾಣದ ಕುಸಿತ ಉಂಟಾಗಿದೆ. ಆದರೂ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯ ಪ್ರಸ್ತಾವಿತ ಮಂಡನೆಯು ನಿರ್ದಿಷ್ಟವಾಗಿ ಸಂಬಂಧಿಸಿಲ್ಲ ಎಂಬುದಾಗಿ ವರದಿಯಾಗಿದೆ.

ಕ್ರಿಪ್ಟೋ ಕರೆನ್ಸಿಯ ಕುರಿತು ಕಳವಳಕಾರಿಯಾಗಿರುವ ಅಂಶಗಳೇನು?

ಉದಯೋನ್ಮುಖ, ನಿರ್ಣಾಯಕ ಮತ್ತು ಸೈಬರ್ ತಂತ್ರಜ್ಞಾನಗಳ ವೇದಿಕೆಯಾದ ಸಿಡ್ನಿ ಡಯಲಾಗ್ ಉದ್ದೇಶಿಸಿ ಮಾತನಾಡಿದ ಮೋದಿ ಕ್ರಿಪ್ಟೋ ಕರೆನ್ಸಿ ಅಥವಾ ಬಿಟ್‌ಕಾಯಿನ್‌ಗೆ ಸಂಬಂಧಿಸಿದಂತೆ ಯುವಕರು ತಪ್ಪುದಾರಿಗೆ ಹೋಗುವುದನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಜೊತೆಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ. ಯುವಕರು ಕ್ರಿಪ್ಟೋ ಜಾಲದಲ್ಲಿ ಬಿದ್ದು ತಮ್ಮ ಸುಂದರ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಸಂದೇಶ ನೀಡಿದ್ದಾರೆ.

ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆಗಳನ್ನು ಭೂ ಹಗರಣ ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಬಹುದು ಎಂಬ ಅಪಾಯಕಾರಿ ಮಾಹಿತಿ ಕೂಡ ದೊರಕಿದ್ದು ಈ ನಿಟ್ಟಿನಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿಯವರು ವಹಿಸಿದ್ದರು. ಕ್ರಿಪ್ಟೋ ಕರೆನ್ಸಿ ಹೂಡಿಕೆಗಳ ಮೇಲೆ ಗಳಿಸುವ ಲಾಭವು ಯುವಕರನ್ನು ತಪ್ಪುದಾರಿಗೆಳೆಯುವ ಹೇಳಿಕೆಗಳ ಕುರಿತು ಕೂಡ ಕೆಲವೊಂದು ಅಂಶಗಳನ್ನು ಬಹಿರಂಗಗೊಳಿಸಲಾಗಿದೆ. ಹೂಡಿಕೆದಾರರನ್ನು ಅದರಲ್ಲೂ ಯುವಕರನ್ನು ಹೆಚ್ಚು ಭರವಸೆಯನ್ನುಂಟು ಮಾಡುವ ಹಾಗೂ ಅಪಾಯಗಳನ್ನು ಮರೆಮಾಚುವ ಜಾಹೀರಾತುಗಳ ಮೂಲಕ ಆಕರ್ಷಿಸುತ್ತಿದ್ದು ಇದರಿಂದ ಯುವಜನರು ಈ ಜಾಲದಲ್ಲಿ ಸಿಲುಕುವ ಅಪಾಯವನ್ನು ಕೂಡ ಸಭೆಯಲ್ಲಿ ಬೊಟ್ಟು ಮಾಡಲಾಗಿದೆ.

ಭಾರತದಲ್ಲಿನ ಕ್ರಿಪ್ಟೋಕರೆನ್ಸಿಗಳ ಅಧಿಕೃತ ನಿಲುವು ಏನು?

ಈ ವರ್ಷದ ಬಜೆಟ್ ಮತ್ತು ಮುಂಗಾರು ಅಧಿವೇಶನಗಳಲ್ಲಿ ಕ್ರಿಪ್ಟೋಕರೆನ್ಸಿ ಮಸೂದೆಯನ್ನು ಸಂಸತ್ತಿನಲ್ಲಿ ಪರಿಚಯಿಸುವುದನ್ನು ತಟಸ್ಥಗೊಳಿಸಲಾಗಿದೆ ಎಂಬ ವರದಿಗಳು ದೊರಕಿದ್ದು, ಜುಲೈನಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು "ಕ್ಯಾಬಿನೆಟ್ ಮಸೂದೆಯನ್ನು ಯಾವಾಗ ಕೈಗೆತ್ತಿಕೊಳ್ಳಬಹುದು ಮತ್ತು ಅದನ್ನು ಪರಿಗಣಿಸಬಹುದು ಎಂಬುದನ್ನು ಕಾದು ನೋಡಬೇಕಾಗಿದೆ" ಎಂದು ತಿಳಿಸಿದ್ದು, ನಂತರವಷ್ಟೇ ನಾವು ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯ ಎಂದು ತಿಳಿಸಿದ್ದಾರೆ.

ಚಳಿಗಾಲದ ಅಧಿವೇಶನಕ್ಕಾಗಿ ಶಾಸನಾತ್ಮಕ ವ್ಯವಹಾರದಲ್ಲಿ ಪಟ್ಟಿ ಮಾಡಲಾದ ಮಸೂದೆಯು ತನ್ನ ಮಾತುಗಳಲ್ಲಿ ದೃಢವಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಶ್ಯೂ ಮಾಡುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟನ್ನು ನಿರ್ಮಿಸುವ ಉದ್ದೇಶದಿಂದ ಯೋಜನೆ ರೂಪಿಸಿದೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ಭಾರತದಲ್ಲಿರುವ ಎಲ್ಲಾ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದು, ಕ್ರಿಪ್ಟೋ ಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಹಾಗೂ ಅದರ ಉಪಯೋಗಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಇದು ನೀಡಲಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಇದನ್ನು ಓದಿ: Crypto Currency ನಿಷೇಧಕ್ಕೆ ಮುಂದಾದ ಸರ್ಕಾರ, ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ?

ಮಸೂದೆಯು ಕ್ರಿಪ್ಟೋ ಕರೆನ್ಸಿಗಳ ವಿರುದ್ಧ ವಿಶ್ವದ ಅತ್ಯಂತ ಕಟ್ಟುನಿಟ್ಟಿನ ನೀತಿಗಳಲ್ಲಿ ಒಂದನ್ನು ಪ್ರತಿನಿಧಿಸುತ್ತಿದ್ದು ಸ್ವಾಧೀನಪಡಿಸಿಕೊಳ್ಳುವುದು, ನೀಡುವುದು, ಗಣಿಗಾರಿಕೆ, ವ್ಯಾಪಾರ ಮತ್ತು ಕ್ರಿಪ್ಟೋ-ಆಸ್ತಿಗಳನ್ನು ವರ್ಗಾಯಿಸುವುದು ಅಪರಾಧವಾಗುತ್ತದೆ ಎಂಬುದಾಗಿ ತಿಳಿಸಿರುವ ಸರಕಾರಿ ಹೇಳಿಕೆಯನ್ನು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಹೂಡಿಕೆದಾರರು ತಮ್ಮ ಕ್ರಿಪ್ಟೋ ಹಿಡುವಳಿಗಳನ್ನು ವಿಲೇವಾರಿ ಮಾಡಲು ಅಂತೆಯೇ ದಂಡ ಪರಿಚಯಿಸಲಾಗುವ ವೇದಿಕೆ ಆಯೋಜಿಸಲಾಗುತ್ತದೆ ಎಂಬುದಾಗಿ ಮೂಲಗಳು ಉಲ್ಲೇಖಿಸಿವೆ.

ಡಿಜಿಟಲ್ ಪ್ರಪಂಚ ಹಾಗೂ ಕ್ರಿಪ್ಟೋ ಕರೆನ್ಸಿಯಲ್ಲಿ ಮುಂದಿನ ದಿನಗಳಲ್ಲಿ ಪ್ರಯೋಗಗಳನ್ನು ನಡೆಸುವ ವಿಧಾನಗಳನ್ನು ಎದುರು ನೋಡುತ್ತಿದೆ ಎಂದು ತಿಳಿಸಿರುವ ಹಣಕಾಸು ಸಚಿವರ ಹೇಳಿಕೆಗಳಲ್ಲಿ ಹೂಡಿಕೆದಾರರು ಕ್ರಿಪ್ಟೋ ಕರೆನ್ಸಿಗಿರುವ ಪ್ರೋತ್ಸಾಹ ಗಮನಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ಒಂದು ರೀತಿಯ ಗೊಂದಲ ಸರಕಾರದ ಕಡೆಯಿಂದಲೇ ಸೃಷ್ಟಿಯಾಗಿದೆ ಎಂಬುದಾಗಿ ಹೇಳಬಹುದು. ಭವಿಷ್ಯದ ಕಲ್ಪನೆಗಳನ್ನು ಮುಂದಿಟ್ಟುಕೊಂಡು ಕ್ರಿಪ್ಟೋದಲ್ಲಿ ನೂತನ ಪ್ರಯೋಗಗಳನ್ನು ನಡೆಸುವ ಉದ್ದೇಶವನ್ನು ಸರಕಾರ ಹೊಂದಿದೆ ಎಂಬುದು ಈ ಹೇಳಿಕೆಗಳಿಂದ ವ್ಯಕ್ತವಾಗುತ್ತದೆ. ಈ ಕುರಿತು ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದರಿಂದ ಸ್ಪಷ್ಟ ಮಾಹಿತಿಯನ್ನು ಈಗಲೇ ನೀಡಲಾಗುವುದಿಲ್ಲ ಎಂದು CNBC-TV18ಗೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ. ಆದರೆ ಮೌಲ್ಯಯುತವಾದ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಕ್ರಿಪ್ಟೋ ಕರೆನ್ಸಿಯನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ. ಬದಲಿಗೆ ದುರುಪಯೋಗ ತಡೆಯಲು ನಿಯಂತ್ರಕ ಕಾರ್ಯವಿಧಾನಗಳನ್ನು ಜಾರಿಗೆ ತರಲಾಗುವುದು ಎಂದೂ ತಿಳಿಸಿದ್ದಾರೆ.

ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವ್ಯಾಪಾರ ಹೇಗೆ ಸಾಧ್ಯ?

ಕಳೆದ ಬಜೆಟ್ ಅಧಿವೇಶನದಲ್ಲಿ "ದೇಶದಲ್ಲಿ ಬಿಟ್‌ಕಾಯಿನ್ ವ್ಯಾಪಾರ" ದ ಮೇಲೆ ನಿಷೇಧವಿದೆಯೇ ಎಂಬ ಪ್ರಶ್ನೆಗೆ ಸಂಸತ್ತಿನಲ್ಲಿ ನೀಡಿದ ಉತ್ತರದಲ್ಲಿ, ಕೇಂದ್ರ ಹಣಕಾಸು ಸಚಿವಾಲಯವು ಏಪ್ರಿಲ್ 2018ರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸುತ್ತೋಲೆಯನ್ನು ಉಲ್ಲೇಖಿಸಿದೆ. ಆದರೆ, ಸುಪ್ರೀಂ ಕೋರ್ಟ್ 2020ರ ತೀರ್ಪಿನಲ್ಲಿ RBI ಸುತ್ತೋಲೆಯನ್ನು ರದ್ದುಗೊಳಿಸಿದೆ ಎಂದು ಅದು ಗಮನಿಸಿದೆ. ಇದರರ್ಥ ಭಾರತೀಯ ಹೂಡಿಕೆದಾರರು ಕ್ರಿಪ್ಟೋಕರೆನ್ಸಿಯಲ್ಲಿ ವ್ಯಾಪಾರ ಮಾಡಲು ಸಮರ್ಥರಾಗಿದ್ದಾರೆ.

ಕ್ರಿಪ್ಟೋಕರೆನ್ಸಿಗಳ ಬಗ್ಗೆ ಸರ್ಕಾರಗಳು ಏಕೆ ಎಚ್ಚರದಿಂದಿದೆ..?

ಚೀನಾ ಸೇರಿದಂತೆ ಪ್ರಪಂಚದಾದ್ಯಂತದ ಹಲವಾರು ದೇಶಗಳು ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಿವೆ. ಅನಿಯಂತ್ರಿತ ಡಿಜಿಟಲ್ ಕರೆನ್ಸಿಗಳು ಫಿಯಟ್ ಕರೆನ್ಸಿ ವಿತರಿಸಲು ಮತ್ತು ಹಣಕಾಸು ನೀತಿ ನಿಯಂತ್ರಿಸಲು ಕೇಂದ್ರ ಸರ್ಕಾರಗಳ ವಿಶೇಷತೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೆಚ್ಚಿನ ಸರ್ಕಾರಗಳು ಚಿಂತಿಸುತ್ತಿವೆ ಮತ್ತು ಕ್ರಿಪ್ಟೋಕರೆನ್ಸಿಗಳು ತೆರಿಗೆ ತಪ್ಪಿಸುವ ಮತ್ತು ಸಂಪತ್ತನ್ನು ತಮ್ಮ ವ್ಯಾಪ್ತಿಯಿಂದ ಹೊರಕ್ಕೆ ವರ್ಗಾಯಿಸುವ ಮಾರ್ಗವಾಗಿದೆ ಎಂಬುದಾಗಿ ಆಲೋಚಿಸಿವೆ.

ಸರ್ಕಾರವು ಕ್ರಿಪ್ಟೋಕರೆನ್ಸಿಗಳನ್ನು ಕಾನೂನುಬದ್ಧ ಟೆಂಡರ್ ಅಥವಾ ನಾಣ್ಯವೆಂದು ಪರಿಗಣಿಸುವುದಿಲ್ಲ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಅಥವಾ ಪಾವತಿ ವ್ಯವಸ್ಥೆಯ ಭಾಗವಾಗಿ ಈ ಕ್ರಿಪ್ಟೋ-ಆಸ್ತಿಗಳ ಬಳಕೆ ತೊಡೆದುಹಾಕಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದಾಗಿ ಹಣಕಾಸು ಸಚಿವಾಲಯ ಹೇಳಿಕೆ ನೀಡಿದೆ.

ಇದನ್ನು ಓದಿ: Crypto Bill ತರಲು ಮೋದಿ ಸರ್ಕಾರ ರೆಡಿ, Bitcoin ಸೇರಿದಂತೆ ಅನೇಕ ಕ್ರಿಪ್ಟೊಕರೆನ್ಸಿಗಳ ಮೌಲ್ಯ ಕುಸಿತ

ವರ್ಚುವಲ್ ಕರೆನ್ಸಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸ್ಥಾಪಿಸಲಾದ ಉನ್ನತ ಮಟ್ಟದ ಅಂತರ-ಸಚಿವಾಲಯ ಸಮಿತಿಯು "ರಾಜ್ಯದಿಂದ ನೀಡಲಾದ ಯಾವುದೇ ಕ್ರಿಪ್ಟೋಕರೆನ್ಸಿ ಹೊರತುಪಡಿಸಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ" ಎಂದು ಶಿಫಾರಸು ಮಾಡಿದೆ

ನವೆಂಬರ್ 24ರಂದು CoinMarketCap ಉಲ್ಲೇಖಿಸಿರುವಂತೆ, ವಿಶ್ವದ ಅತಿದೊಡ್ಡ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಬಂಡವಾಳದ ಮೂಲಕ 0.58% ಕುಸಿತ ದಾಖಲಿಸಿ 56,607.05 ಡಾಲರ್‌ಗೆ ಇಳಿದಿದೆ. ಬ್ಲಾಕ್‌ಚೈನ್ ತಂತ್ರಜ್ಞಾನ (ಬಿಟ್‌ಕಾಯಿನ್ ಅಥವಾ ಇನ್ನೊಂದು ಕ್ರಿಪ್ಟೋಕರೆನ್ಸಿಯಲ್ಲಿ ಮಾಡಿದ ವಹಿವಾಟಿನ ದಾಖಲೆಯನ್ನು ಹಲವಾರು ಕಂಪ್ಯೂಟರ್‌ಗಳಲ್ಲಿ ನಿರ್ವಹಿಸುವ ವ್ಯವಸ್ಥೆ) ಉತ್ತೇಜಿಸುವ ಕೆಲವು ನಿರೀಕ್ಷೆಗಳೊಂದಿಗೆ ಭಾರತದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಮಸೂದೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ಈ ಮಸೂದೆಯು ಭಾರತದಲ್ಲಿರುವ ಎಲ್ಲಾ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಗುರಿ ಹೊಂದಿದ್ದು, ಕ್ರಿಪ್ಟೋ ಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಹಾಗೂ ಅದರ ಉಪಯೋಗಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಇದು ನೀಡಲಿದೆ ಎಂಬುದಾಗಿ ಲೋಕಸಭೆಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಬುಲೆಟಿನ್ ತಿಳಿಸಿದೆ.
Published by:Seema R
First published: