ಸರ್ಕಾರವು (Government) ತಂತ್ರಜ್ಞಾನ (Technology) ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ಆಗಾಗ್ಗೆ ಪರಿಚಯಿಸಿಕೊಂಡು ಬರುತ್ತಿದೆ. ಈ ಮೂಲಕ ಹೊಸ ಸೇವೆ ನೀಡುವುದರ ಜೊತೆಗೆ ಕೆಲವು ವಿಷಯಗಳಿಗೆ ಕಡಿವಾಣ ಸಹ ಹಾಕಲಾಗುತ್ತಿದೆ. ಇದರ ಭಾಗವಾಗಿ ಈಗ ಸರ್ಕಾರ 'ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ 2022' (Digital Personal Data Protection) ಬಗ್ಗೆ ಪ್ರಸ್ತಾಪಿಸಿದೆ. ಈ ಮೂಲಕ ಬಳಕೆದಾರರ ಡೇಟಾಗೆ ಭದ್ರತೆ (Security) ಹೆಚ್ಚಾಗಲಿದೆ. ಇದನ್ನು ತಿಳಿದುಕೊಳ್ಳುವುದು ಕೂಡ ನಿಮ್ಮ ಜವಾಬ್ದಾರಿಯಾಗಿದೆ.
ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣೆ ಮಸೂದೆ ಕರಡು ಬಿಡುಗಡೆ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನವೆಂಬರ್ 18 ಶುಕ್ರವಾರ ದಂದು 2022 ರ ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣೆ (DPDP) ಮಸೂದೆಯ ಕರಡನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಡಿಸೆಂಬರ್ 17, 2022 ರೊಳಗೆ 24 ಪುಟಗಳ ಕರಡು ಮಸೂದೆಯ ಕುರಿತು ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸಿದೆ. ಹಾಗೆಯೇ ಈ ಪ್ರತಿಕ್ರಿಯೆಗಾಗಿ ನೀವು ಸಹ MyGov ವೆಬ್ಸೈಟ್ಗೆ ಭೇಟಿ ನೀಡಬಹುದು.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಕರಡು ಮಸೂದೆಗೆ ಸಾರ್ವಜನಿಕರಿಂದ ಸಲಹೆಗಳನ್ನು ನೀಡಲು ತಿಳಿಸಿ ಟ್ವೀಟ್ ಮಾಡಿದ್ದಾರೆ.
ಐದು ವರ್ಷಗಳ ನಂತರ ಹೊಸ ಕರಡು ಮಸೂದೆ ಜಾರಿ
ಜುಲೈ 2018 ರಲ್ಲಿ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದ ತಜ್ಞರ ಸಮಿತಿಯು ದತ್ತಾಂಶ ರಕ್ಷಣೆ ಕುರಿತ ಮಸೂದೆಯ ಮೊದಲ ಕರಡು ಪ್ರತಿಯನ್ನು ಮಂಡಿಸಿದ ಐದು ವರ್ಷಗಳ ನಂತರ ಹೊಸ ಕರಡು ಮಸೂದೆ ಜಾರಿಗೆ ಬಂದಿದೆ.
ಪರಿಷ್ಕೃತ ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣೆ (DPDP) ಬಿಲ್, 2022 ಎಂದರೇನು?ಈ ಮಸೂದೆಯ ಮುಖ್ಯಾಂಶಗಳೇನು? ಈ ಮಸೂದೆಗೆ ತಜ್ಞರು ಏನ್ ಹೇಳ್ತಿದಾರೆ? ಎಂಬೆಲ್ಲ ಸಮಗ್ರವಾದ ವಿವರಗಳನ್ನು ಈ ಕೆಳಗೆ ನೋಡೋಣ.
ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣೆ ಮಸೂದೆ- 2022 ಎಂದರೇನು?
ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣೆ ಮಸೂದೆ, 2022 ರ ಈ ಮಸೂದೆಯಲ್ಲಿ ಪ್ರತಿಯೊಬ್ಬರ ವೈಯಕ್ತಿಕ ಡೇಟಾಗಳನ್ನು ಸಂರಕ್ಷಿಸಲು, ವ್ಯಕ್ತಿಯ ಹಕ್ಕು ಹಾಗೂ ಕಾನೂನು ಬದ್ಧ ಉದ್ದೇಶಗಳನ್ನು ಈಡೇರಿಸಲು ಇದು ಶಾಸನ ಬದ್ಧ ಕ್ರಮವಾಗಿದ್ದು, ಈ ಶಾಸನವು "ಒಂದು ಕಡೆ ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಮತ್ತು ಡೇಟಾ ಫಿಡ್ಯೂಷಿಯರಿಯಿಂದ ಸಂಗ್ರಹಿಸಿದ ಡೇಟಾವನ್ನು ಕಾನೂನುಬದ್ಧವಾಗಿ ಬಳಸುವ ನಿಯಮಗಳು” ಎಂದು ಹೇಳುತ್ತದೆ.
ಡೇಟಾ ಫಿಡ್ಯೂಷಿಯರಿ ಅಂದ್ರೇನು?
ಡೇಟಾ ಫಿಡ್ಯೂಷಿಯರಿ ಎಂಬುದು ಒಂದು ಘಟಕವಾಗಿದೆ. ಅದು "ವ್ಯಕ್ತಿಯ ವೈಯಕ್ತಿಕ ಡೇಟಾದ ಪ್ರಕ್ರಿಯೆಯ ಉದ್ದೇಶ ಮತ್ತು ವಿಧಾನಗಳನ್ನು" ನಿರ್ಧರಿಸುತ್ತದೆ.
ಮಸೂದೆಯ ಮುಖ್ಯಾಂಶಗಳು
ಈ ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣೆ ಮಸೂದೆ 2022 ರ ಈ ಮಸೂದೆಗೆ ಒಬ್ಬ ವ್ಯಕ್ತಿಯು ತಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸುವ ಮೊದಲು ಒಪ್ಪಿಗೆಯನ್ನು ನೀಡುವ ಅಗತ್ಯವಿದೆ. "ಡೇಟಾ ಫಿಡ್ಯೂಷಿಯರಿ ಕಾರ್ಯ ನಿರ್ವಹಿಸುವವರು ಯಾವ ವ್ಯಕ್ತಿಯ ವೈಯಕ್ತಿಕ ಡೇಟಾವನ್ನು ಸಂಗ್ರಹಿಸಲು ಬಯಸುತ್ತಾರೋ ಅಂತಹ ಡೇಟಾ ಸಂಗ್ರಹಣೆ ಮತ್ತು ಮುಂದಿನ ಪ್ರಕ್ರಿಯೆಯ ಉದ್ದೇಶವನ್ನು ಆ ವ್ಯಕ್ತಿಯು ತಿಳಿದಿರಬೇಕು" ಎಂದು ಈ ಮಸೂದೆಯು ಉಲ್ಲೇಖಿಸುತ್ತದೆ.
ಡೇಟಾ ಪ್ರಿನ್ಸಿಪಾಲ್ ಅಂದ್ರೇನು?
ಮಸೂದೆಯ ಪ್ರಕಾರ, ‘ಡೇಟಾ ಪ್ರಿನ್ಸಿಪಾಲ್’ ಅಂದ್ರೆ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತಿರುವ ವ್ಯಕ್ತಿಯಾಗಿರುತ್ತಾರೆ. ಡೇಟಾ ಪ್ರಿನ್ಸಿಪಾಲ್ ಕಾರ್ಯ ನಿರ್ವಹಿಸುವವರು ಯಾವುದೇ ಸಮಯದಲ್ಲಿ ತಮ್ಮ ಒಪ್ಪಿಗೆಯನ್ನು ಹಿಂಪಡೆಯಬಹುದು ಎಂದು ಮಸೂದೆಯು ಹೇಳುತ್ತದೆ.
ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ನಲ್ಲಿ ನಿರ್ದಿಷ್ಟಪಡಿಸಿದ ಭಾಷೆಗಳಲ್ಲಿ ವ್ಯಕ್ತಿಗಳು "ಮೂಲ ಮಾಹಿತಿ"ಗೆ ಪ್ರವೇಶವನ್ನು ಪಡೆಯಬಹುದು ಎಂದು ಕರಡು ಪ್ರತಿ ಸ್ಪಷ್ಟಪಡಿಸುತ್ತದೆ. ಈ ಮಸೂದೆಯ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಡೇಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾ ಎಂಬ ಹೊಸ ನಿಯಂತ್ರಕ ಸಂಸ್ಥೆಗೆ ಸೂಚಿಸಲು ಈ ಮಸೂದೆಯು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುತ್ತಲಿದೆ.
ಪ್ರಸ್ತಾವಿತ ಮಸೂದೆಯು ಈ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ. "ಮಂಡಳಿಯ ವ್ಯವಹಾರಗಳ ನಿರ್ವಹಣೆಗೆ ವಹಿಸಲ್ಪಟ್ಟ ಮುಖ್ಯ ಕಾರ್ಯನಿರ್ವಾಹಕರು ಕೇಂದ್ರ ಸರ್ಕಾರವು ನೇಮಿಸುವ ವ್ಯಕ್ತಿಯಾಗಿರುತ್ತಾರೆ ಮತ್ತು ಅವರ ಸೇವೆಯ ನಿಯಮಗಳು ಮತ್ತು ಷರತ್ತುಗಳು ಕೇಂದ್ರ ಸರ್ಕಾರವು ನಿರ್ಧರಿಸಬಹುದು" ಎಂದು ಮಸೂದೆಯು ಹೇಳುತ್ತದೆ.
"ಮಂಡಳಿಯ ವ್ಯವಹಾರಗಳ ನಿರ್ವಹಣೆಗೆ ವಹಿಸಲ್ಪಟ್ಟ ಮುಖ್ಯ ಕಾರ್ಯನಿರ್ವಾಹಕರು ಕೇಂದ್ರ ಸರ್ಕಾರವು ನೇಮಿಸಬಹುದಾದಂತಹ ವ್ಯಕ್ತಿಯಾಗಿರುತ್ತಾರೆ ಮತ್ತು ಅವರ ಸೇವೆಯ ನಿಯಮಗಳು ಮತ್ತು ಷರತ್ತುಗಳು ಕೇಂದ್ರ ಸರ್ಕಾರವು ನಿರ್ಧರಿಸಬಹುದು" ಎಂದು ಮಸೂದೆಯು ಸೂಚಿಸುತ್ತದೆ.
ಯಾವುದೇ ಕಂಪೆನಿಗಳು ವೈಯಕ್ತಿಕ ಡೇಟಾವನ್ನು ವರ್ಗಾಯಿಸುವ ಮುನ್ನ ಆ ದೇಶಗಳ ಪಟ್ಟಿಯನ್ನು ಲಿಸ್ಟ್ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಅದರಂತೆ ಪಟ್ಟಿಯಲ್ಲಿ ಉಲ್ಲೇಖ ಮಾಡಲಾದ ದೇಶಗಳಲ್ಲಿರುವ ಸರ್ವರ್ಗಳಿಗೆ ಬಳಕೆದಾರರ ಡೇಟಾವನ್ನು ರವಾನೆ ಮಾಡಲು ಕಂಪೆನಿಗಳಿಗೆ ಈ ಮೂಲಕ ಅನುಮತಿ ದೊರೆಯುತ್ತದೆ.
ಭದ್ರತಾ ಸುರಕ್ಷತೆ ವಿಫಲವಾದರೆ 500 ಕೋಟಿ ರೂ ದಂಡ
ಇನ್ನು ಡೇಟಾ ಸಂರಕ್ಷಣಾ ಮಂಡಳಿಯು ಅನುಚಿತ ವರ್ತನೆಗಳಿಗೆ ದಂಡ ವಿಧಿಸಬಹುದಾದ ಅಧಿಕಾರವನ್ನು ಪಡೆದಿರುತ್ತದೆ. ಅಂತೆಯೇ ಡೇಟಾ ಉಲ್ಲಂಘನೆಯನ್ನು ತಡೆಗಟ್ಟಲು ಸಮಂಜಸವಾದ ಭದ್ರತಾ ಸುರಕ್ಷತೆಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾದರೆ 500 ಕೋಟಿ ರೂಪಾಯಿಗಳವರೆಗೆ ದಂಡ ವಿಧಿಸಬಹುದು ಎಂದು ಕರಡು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
ವೈಯಕ್ತಿಕ ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ ಮಂಡಳಿ ಮತ್ತು ಬಾಧಿತ ಬಳಕೆದಾರರಿಗೆ ತಿಳಿಸಲು ವಿಫಲತೆ ಸೇರಿದಂತೆ ಅನುಸರಣೆಗೆ ಆರು ವಿಧದ ದಂಡಗಳನ್ನು ಕರಡು ಪ್ರಸ್ತಾವನೆಯು ವಿವರಿಸುತ್ತದೆ.
ಪ್ರಕ್ರಿಯೆಗೊಳಿಸಲಾದ ವೈಯಕ್ತಿಕ ಡೇಟಾದ ಪರಿಮಾಣ ಮತ್ತು ಸ್ವರೂಪವನ್ನು ಅವಲಂಬಿಸಿ ಕಾನೂನಿಗೆ ಬದ್ಧವಾಗಿರುವುದನ್ನು ಮಸೂದೆಯು ಕೆಲವು ಘಟಕಗಳಿಗೆ ವಿನಾಯಿತಿ ನೀಡಬಹುದು.
ಭಾರತದ ಹಿತಾಸಕ್ತಿಗಾಗಿ ಈ ಮಸೂದೆ ಜಾರಿ ಆಗುತ್ತಿದೆ.
ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯ ಹಿತಾಸಕ್ತಿ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗಿನ ಸ್ನೇಹ ಸಂಬಂಧಗಳು, ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವುದು ಅಥವಾ ಇವುಗಳಲ್ಲಿ ಯಾವುದಾದರೂ ಅಪರಾಧಕ್ಕೆ ಪ್ರಚೋದನೆ ನೀಡುವುದನ್ನು ತಡೆಯಲು ಕೇಂದ್ರವು ಈ ಮಸೂದೆ ಪ್ರಕಾರ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿ ಹಿನ್ನೆಲೆ ಡೇಟಾವನ್ನು ಪ್ರಕ್ರಿಯೆಗೊಳಿಸುವುದಕ್ಕೆ ಸರ್ಕಾರವು ರಾಜ್ಯ ಏಜೆನ್ಸಿಗಳಿಗೆ ವಿನಾಯಿತಿ ನೀಡಲಿದೆ.
ಈ ಮಸೂದೆಯ ಮತ್ತೊಂದು ಮುಖ್ಯ ಅಂಶವೆಂದರೆ, ಈ ಮಸೂದೆಯಲ್ಲಿ ಮಕ್ಕಳ ವಿಷಯಕ್ಕೆ ಸಂಬಂಧಿಸಿದಂತೆ ಹಾನಿ ಉಂಟುಮಾಡುವ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಲು ಯಾವುದೇ ಕಂಪೆನಿ ಹಾಗೂ ಸಂಸ್ಥೆಗೆ ಅನುಮತಿ ಇರುವುದಿಲ್ಲ. ಹಾಗೆಯೇ ಈ ಮೂಲಕ ಜಾಹೀರಾತುನಲ್ಲಿ ಕಾಣಿಸಿಕೊಳ್ಳುವ ಮಕ್ಕಳನ್ನು ಗುರಿಯಾಗಿಸುವಂತಿಲ್ಲ. ಹಾಗೆಯೇ ಮಕ್ಕಳ ಯಾವುದೇ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುವ ಮೊದಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿರಲಿದೆ.
ತಪ್ಪು ಮಾಹಿತಿ ನೀಡಿದರೆ 10,000 ರೂ.ದಂಡ
"ಯಾವುದೇ ದಾಖಲೆ, ಸೇವೆ, ಗುರುತಿನ ಪುರಾವೆ ಅಥವಾ ವಿಳಾಸದ ಪುರಾವೆಗಾಗಿ" ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿಯನ್ನು ಒದಗಿಸಿದರೆ ಒಬ್ಬ ವ್ಯಕ್ತಿಯು 10,000 ರೂಪಾಯಿಗಳವರೆಗೆ ದಂಡವನ್ನು ವಿಧಿಸಬೇಕಾಗುತ್ತದೆ.
ಪ್ರಸ್ತಾವಿತ ಮಸೂದೆಯು ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಗಡಿಯಾಚೆಗಿನ ಡೇಟಾವನ್ನು ಸಂಗ್ರಹಿಸಲು ಮತ್ತು ಆ ಡೇಟಾವನ್ನು ಕೆಲವು ಅಧಿಸೂಚಿತ ದೇಶಗಳು ಮತ್ತು ಪ್ರಾಂತ್ಯಗಳಿಗೆ ವರ್ಗಾಯಿಸಲು ಅನುಮತಿಸುತ್ತದೆ. ಯಾವುದೇ ವ್ಯಕ್ತಿಗಳು ಡೇಟಾ ಫಿಡ್ಯೂಷಿಯರಿಗೆ ದೂರು ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ ಮತ್ತು ಅವರು ಡೇಟಾ ಸಂರಕ್ಷಣಾ ಮಂಡಳಿಯಲ್ಲಿ ದೂರು ದಾಖಲಿಸಬಹುದು.
ಈ ಹೊಸ ಕಾನೂನಿನ ಪ್ರಕಾರ ಆನ್ಲೈನ್ನಲ್ಲಿ ಸಂಗ್ರಹಿಸಿದ ವೈಯಕ್ತಿಕ ಡೇಟಾ ಹಾಗೂ ಆಫ್ಲೈನ್ ಡೇಟಾವನ್ನು ಡಿಜಿಟೈಸ್ ಮಾಡಲಾಗುತ್ತದೆ.
ಇದನ್ನೂ ಓದಿ: Explained: ಜಾಗತಿಕ ಆರ್ಥಿಕತೆಯನ್ನು ಯುಎಸ್ ಡಾಲರ್ ಹೇಗೆ ನಿಯಂತ್ರಿಸುತ್ತದೆ? ಇಲ್ಲಿದೆ ವಿವರ
ಈ ಮಸೂದೆಗೆ ತಜ್ಞರ ಅಭಿಪ್ರಾಯವೇನು?
"ದತ್ತಾಂಶ ಉಲ್ಲಂಘನೆಯ ಸಂದರ್ಭದಲ್ಲಿ, ಉದ್ದೇಶಿತ ಕಾಯಿದೆಯಡಿಯಲ್ಲಿ ಡೇಟಾ ಸೋರಿಕೆ ವ್ಯಕ್ತಿಯು ಯಾವುದೇ ರೂಪದ ಹಣದ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ" ಎಂದು ದೆಹಲಿ ಮೂಲದ ವಕೀಲ ಪ್ರಸನ್ನ ಎಸ್. ಅವರು ಸುದ್ದಿ ಮಾಧ್ಯಮ ದಿ ವೈರ್ಗೆ ತಿಳಿಸಿದರು.
ಕೇಂದ್ರವು ಸ್ಥಾಪಿಸುವ ಉದ್ದೇಶಿತ ಡೇಟಾ ಸಂರಕ್ಷಣಾ ಮಂಡಳಿಯ ಸ್ವಾಯತ್ತತೆಯನ್ನು ತಜ್ಞರು ಪ್ರಶ್ನಿಸಿದ್ದಾರೆ.
" ಆದರೆ ಡೇಟಾ ಸಂರಕ್ಷಣಾ ಮಂಡಳಿಯು ಈಗ ಕೇಂದ್ರ ಸರ್ಕಾರ ಸ್ಥಾಪಿಸಿದ ಮಂಡಳಿಯಾಗಿದೆ. ಮಂಡಳಿಯ ಸಂಯೋಜನೆ, ಸೇವಾ ನಿಯಮಗಳು ಇತ್ಯಾದಿಗಳನ್ನು ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ” ಎಂದು ದೆಹಲಿ ಮೂಲದ ಇಕಿಗೈ ಲಾ ಪಾಲುದಾರರಾದ ನೇಹಾ ಚೌಧರಿ ಹೇಳಿದ್ದಾರೆಂದು ಇಂಡಿಯನ್ ಎಕ್ಸ್ಪ್ರೆಸ್ ಉಲ್ಲೇಖಿಸಿದೆ.
ಇತರ ದೇಶಗಳಲ್ಲಿ ಡೇಟಾ ರಕ್ಷಣೆಯ ಕಾನೂನುಗಳು
ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (UNCTAD) ಪ್ರಕಾರ, 194 ದೇಶಗಳಲ್ಲಿ ಸುಮಾರು 137 ದೇಶಗಳು ಡೇಟಾ ಮತ್ತು ಗೌಪ್ಯತೆಯ ರಕ್ಷಣೆಗೆ ಕಾನೂನುಗಳನ್ನು ಹೊಂದಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ