Explained: ಓರಿಯೊ ಬಿಸ್ಕಿಟ್​ನ ಕ್ರೀಮ್ ಸಮವಾಗಿ ವಿಭಜಿಸಬಹುದೇ? ಇಲ್ಲಿದೆ Oreo ಕುಕಿ​ ರಹಸ್ಯ

ನೀವು ಒಂದೊಮ್ಮೆ ಯೋಚಿಸಿದ್ದೀರಾ ಆ ಓರಿಯೊ ಕುಕ್ಕಿಯಲ್ಲಿ ಇರುವ ಕ್ರೀಮ್ (Cream) ಅನ್ನು ಸಮ ಪ್ರಮಾಣದಲ್ಲಿ ವಿಭಜಿಸಲು ಸಾಧ್ಯವೆ ಎಂಬುದರ ಬಗ್ಗೆ? ಇದೇನಪ್ಪಾ ಇಷ್ಟೊಂದು ವಿಚಿತ್ರ ಪ್ರಶ್ನೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ ಇದಕ್ಕೂ ಇಲ್ಲಿದೆ ಉತ್ತರ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಿಸ್ಕತ್, ಕುಕ್ಕೀಗಳೆಂದರೆ ಕೇವಲ ಮಕ್ಕಳಂತಲ್ಲ, ವಯಸ್ಕರು ಸೇರಿದಂತೆ ಹಿರಿಯರಿಗೂ ಅವು ಅಚ್ಚುಮೆಚ್ಚು. ಅದರಲ್ಲೂ ವಿಶೇಷವಾಗಿ ಓರಿಯೊ (Oreo) ಕುಕಿ ಎಂದರೆ ಪ್ರತಿಯೊಬ್ಬರ ಬಾಯಲ್ಲೂ ನೀರೂರದೆ ಇರಲಾರದು. ಚೊಕೊಲೆಟ್ (Chocolate ) ವೇಫರ್ ಗಳ ಮಧ್ಯೆ ಅದ್ಭುತವಾದ ರುಚಿಕರ ಹಾಲಿನ ಕ್ರೀಂ ಅನ್ನು ಹೊಂದಿರುವ ಓರಿಯೊ ಕುಕ್ಕಿ (Biscuit) ಇಂದಿನ ಯುವ ಸಮುದಾಯದ ಜನಪ್ರೀಯ ಕುಕ್ಕಿ ಎಂದೇ ಹೇಳಬಹುದು. ಆದರೆ, ನೀವು ಒಂದೊಮ್ಮೆ ಯೋಚಿಸಿದ್ದೀರಾ ಆ ಓರಿಯೊ ಕುಕ್ಕಿಯಲ್ಲಿ ಇರುವ ಕ್ರೀಮ್ (Cream) ಅನ್ನು ಸಮ ಪ್ರಮಾಣದಲ್ಲಿ ವಿಭಜಿಸಲು ಸಾಧ್ಯವೆ ಎಂಬುದರ ಬಗ್ಗೆ? ಇದೇನಪ್ಪಾ ಇಷ್ಟೊಂದು ವಿಚಿತ್ರ ಪ್ರಶ್ನೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಈ ಪ್ರಶ್ನೆ ನಿಮಗೆ ವಿಚಿತ್ರ ಅನಿಸಬಹುದಾದರೂ ಈ ಬಗ್ಗೆ ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗಿದೆ ಎಂದರೆ ನೀವು ನಂಬಲೇ ಬೇಕು. ಇಲ್ಲಾ ಎಂದಾದಲ್ಲಿ ಈ ಲೇಖನವನ್ನು ಒಂದೊಮ್ಮೆ ಓದಿ.

ಹೌದು, ಈ ವಿಷಯಕ್ಕೆ ಸಂಬಂಧಿಸಿದಂತೆ ಜಗತ್ತಿನ ಪ್ರತಿಷ್ಟಿತ ತಾಂತ್ರಿಕ ಸಂಸ್ಥೆಯೊಂದರ ವಿದ್ಯಾರ್ಥಿಗಳ ಒಂದು ತಮ್ಡ ಅಧ್ಯಯನ ನಡೆಸಿರುವುದಾಗಿ ತಿಳಿದುಬಂದಿದೆ. ವಿಶ್ವದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಲ್ಲೊಂದಾದ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಒಂದು ವಿಶಿಷ್ಟ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದು ಅದನ್ನು ಓರಿಯೊಮೀಟರ್ ಎಂದು ಕರೆದಿದ್ದಾರೆ. ಇದೊಂದು 3ಡಿ ಮಾದರಿಯ ಟೇಬಲ್ ಟಾಪ್ ಪ್ರಿಂಟೇಬಲ್ ಉಪಕರಣವಾಗಿದ್ದು ಇದರ ಮೂಲಕ ಓರಿಯೊ ಕುಕ್ಕೀಯನ್ನು ಸಮಭಾಗದಲ್ಲಿ ವಿಭಜಿಸಲು ಸಾಧ್ಯವೆ ಎಂಬುದನ್ನು ತಿಳಿಯಬಹುದಾಗಿದೆಯಂತೆ.

ಓರಿಯೊ ಬಿಸ್ಕಿಟ್​ ರಹಸ್ಯ:

ಓರಿಯಾಲಾಜಿ ಮೇಲಿನ ಅವರ ಈ ಸಂಶೋಧನಾ ಅಧ್ಯಯನವಾದ "ದಿ ಫ್ರ್ಯಾಕ್ಚರ್ ಆಂಡ್ ಫ್ಲೋವ್ ಆಫ್ ಮಿಲ್ಕ್'ಸ್ ಫೆವರೆಟ್ ಕುಕ್ಕೀ" ಅನ್ನು ಈ ತಿಂಗಳಿನ ಜರ್ನಲ್ ಫಿಸಿಕ್ಸ್ ಆಪ್ಗ್ ಫ್ಲ್ಯೂಡ್ಸ್ ನಲ್ಲಿ ಪ್ರಕಟಿಸಲಾಗಿದೆ. ಓರಿಯೊಮೀಟರ್ ಅನ್ನು ರೂಪಿಸುವ ಮೊದಲು, ಇದರಲ್ಲಿ ಭಾಗಿಯಾಗಿದ್ದ ಎಲ್ಲ ಇಂಜಿನಿಯರ್‌ಗಳಿಗೆ ಒಂದು ಪ್ರಶ್ನೆ ಬಹಳಷ್ಟು ಕಾಡಿತ್ತಂತೆ. ಅದೇನೆಂದರೆ, ಕುಕ್ಕೀಯ ಕ್ರೀಮ್ ಅನ್ನು ತಿರುಚಿದಾಗ ಕೇವಲ ಒಂದು ವೇಫರ್‌ಗೆ ಮಾತ್ರ ಏಕೆ ಆ ಕ್ರೀಮ್ ಅಂಟಿಕೊಂಡಿರುತ್ತದೆ ಎಂದು. ಮೊಟ್ಟ ಮೊದಲು ಅವರೆಲ್ಲರೂ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಬಯಸಿದ್ದರಂತೆ. ಏಕೆಂದರೆ, ಓರಿಯೊ ಕ್ರೀಮ್‌ನಲ್ಲಿರುವ ಈ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಎಂಜಿನಿಯರ್‌ ವಿದ್ಯಾರ್ಥಿಗಳು ಆ ಗುಣಲಕ್ಷಣಗಳನ್ನು ಅನ್ವಯಿಸಿ ಸಂಕೀರ್ಣ ದ್ರವ ವಸ್ತುಗಳನ್ನು ವಿನ್ಯಾಸಗೊಳಿಸಲು ನೆರವು ಸಿಗಬಹುದೆಂದು ಲೆಕ್ಕಾಚಾರ ಹಾಕಿದ್ದರೆಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: Explained: ಪ್ರತಿ ಮಳೆಗಾಲದಲ್ಲೂ ಬೆಂಗಳೂರು ಮುಳುಗುವುದೇಕೆ? ಈ ಬಾರಿಯೂ ತಪ್ಪೋದಿಲ್ವ ಜನರಿಗೆ ಸಂಕಷ್ಟ?

ರಿಯಾಲಾಜಿ ಎಂಬ ವಿಜ್ಞಾನ:

ಈ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾದ ಆ ಭಾವಿ ಇಂಜಿನಿಯರುಗಳ ತಂಡವು ಮೊದಲಿಗೆ ಉತ್ತರ ಕಂಡುಕೊಳ್ಳುವ ತಮ್ಮ ಅನ್ವೇಷಣೆಯಲ್ಲಿ, ಕೆನೆ ಹಾಲಿನ ಕ್ರೀಮ್ ನಿಂದ ತುಂಬಿದ ಸ್ಯಾಂಡ್ವಿಚ್ ನಂತಿರುವ ರುಚಿಕರವಾದ ಓರಿಯೊ ಕುಕ್ಕೀಯನ್ನು ಪ್ರಮಾಣಿತ ರಿಯಾಲಜಿ ಪರೀಕ್ಷೆಗಳಿಗೆ ಒಳಪಡಿಸಿತು. ರಿಯಾಲಾಜಿ ಎಂಬುದು ಒಂದು ವಿಜ್ಞಾನವಾಗಿದ್ದು ಅದರಲ್ಲಿ "ಒಂದು ವಸ್ತುವು ಶಕ್ತಿಗೆ ಹೇಗೆ ಪ್ರತಿಕ್ರಿಯಿಸುತ್ತದೆ?" ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಉತ್ತರಗಳನ್ನು ಅಧ್ಯಯನ ಮಾಡಲಾಗುತ್ತದೆ. ಈ ತಂಡ ತಮ್ಮ ರಿಯಾಲಾಜಿ ಪರೀಕ್ಷೆಯ ಸಂದರ್ಭದಲ್ಲಿ, ಪ್ರಶ್ನಾರ್ಥಕವಾಗಿ ಕುಕ್ಕೀ ಕ್ರೀಮ್ ಅನ್ನು ಬಳಸಿತ್ತು, ಇದು ಟೂತ್‌ಪೇಸ್ಟ್, ಫ್ರಾಸ್ಟಿಂಗ್, ಕೆಲವು ಸೌಂದರ್ಯವರ್ಧಕಗಳು ಮತ್ತು ಕಾಂಕ್ರೀಟ್‌ನಂತಹ ದ್ರವಗಳಿಗೆ ಹೋಲುತ್ತದೆ.

2 ವೇಫರ್‌ಗಳ ನಡುವೆ ಹೆಚ್ಚು ಸಮನಾಗಿದೆ:

ತಂಡವು ಕುಕ್ಕೀಯ ಮೇಲೆ ರಿಯಾಲಜಿ ಪರೀಕ್ಷೆಗಳನ್ನು ನಡೆಸಿ ಕಂಡುಕೊಂಡ ವಿಷಯವೆಂದರೆ, ಯಾವುದೇ ರೀತಿಯ ಸುವಾಸನೆಯಾಗಲಿ ಅಥವಾ ಸ್ಟಫಿಂಗ್ ಆಗಿರಲಿ, ಕೆನೆಯ ಕ್ರೀಮ್ ಯಾವಾಗಲೂ ಎರಡು ವೇಫರ್‌ಗಳ ಪೈಕಿ ಒಂದಕ್ಕೆ ಅಂಟಿಕೊಂಡಿರುತ್ತದೆ ಎಂಬ ವಿಷಯ. ಈ ಸಂದರ್ಭದಲ್ಲಿ ತಿಳಿದು ಬಂದಿರುವ ಮತ್ತೊಂದು ವಿಷಯವೆಂದರೆ ಕುಕ್ಕೀಯ ಹಳೆಯ ಬಾಕ್ಸ್ ಗಳಲ್ಲಿ ಮಾತ್ರ ಕೆನೆಯ ಕ್ರೀಮ್ ಎಂಬುದು ಎರಡು ವೇಫರ್‌ಗಳ ನಡುವೆ ಹೆಚ್ಚು ಸಮವಾಗಿ ವಿತರಿಸಲ್ಪಟ್ಟಿದೆ ಎಂದು ಅವರು ಕಂಡುಕೊಂಡರು.

ಓರಿಯೊ ಕುಕ್ಕೀ ಟ್ವಿಸ್ಟ್ ಮಾಡಲು ಬೇಕಾಗಿರು ಬಲ ಎಷ್ಟು?:

ಈ ಒಟ್ಟಾರೆ ಅಧ್ಯಯನದಲ್ಲಿ ಇಂಜಿನಿಯರುಗಳ ತಂಡವು ಹಲವು ಅಂಶಗಳ ಮೇಲೆ ಬೆಳಕನ್ನು ಚೆಲ್ಲಿದೆ ಎಂದು ಹೇಳಲಾಗಿದೆ. ಓರಿಯೊ ಕುಕ್ಕೀಯನ್ನು ಕೈಯಲ್ಲಿ ಹಿಡಿದು ಟ್ವಿಸ್ಟ್ ಮಾಡಲು ಬೇಕಾಗುವ ಬಲ ಎಷ್ಟಿರಬಹುದು ಎಂಬುದನ್ನು ನೀವು ಊಹಿಸಬಲ್ಲಿರಾ? ಈ ಬಗ್ಗೆ ತಂಡವು ಅಧ್ಯಯನ ನಡೆಸಿದ ವರದಿಯ ಆಧಾರದ ಮೇಲೆ ಹೇಳಿರುವ ಉತ್ತರ ಎಂದರೆ ನಾವು ಬಾಗಿಲನ್ನು ತೆರೆಯುವಾಗ ಅದರ ಕೊಂಡಿಯನ್ನು ತಿರುಗಿಸಲು ಉಪಯೋಗಿಸುವ ಬಲದ ಪ್ರಮಾಣ ಅಥವಾ ಬಾಟಲ್ಲಿನ ಕ್ಯಾಪ್ ತೆಗೆಯಲು ಉಪಯೋಗಿಸುವ ಬಲದ ಪ್ರಮಾಣದ 1/10 ಭಾಗದಷ್ಟು ಬಲ ಇದಕ್ಕಾಗಿ ಸಾಕು ಎಂದು ತಂಡ ಉತ್ತರ ಕಂಡುಕೊಂಡಿದೆ.

ಇದನ್ನೂ ಓದಿ: Explained: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಪ್ರಧಾನಿ ಮೋದಿ ಯುರೋಪ್‌ಗೆ ಭೇಟಿ ನೀಡುತ್ತಿರುವುದೇಕೆ?

ಕೆನೆ ಹೆಚ್ಚಾಗಿ ವೇಫರ್‌ಗಳಲ್ಲಿ ಯಾವುದಾದರೂ ಒಂದು ವೇಫರ್ ಮೇಲೆಯೇ ಅಂಟಿಕೊಂಡಿರುವುದಕ್ಕೆ ಒಂದು ಕಾರಣವೆಂದರೆ ಅದರ ಉತ್ಪಾದನಾ ಪ್ರಕ್ರಿಯೆ ಎಂದು ವಿದ್ಯಾರ್ಥಿಗಳ ತಂಡ ಹೇಳಿದೆ. ಕುಕ್ಕೀಯನ್ನು ಜೋಡಿಸಿದಾಗ, ವೇಫರ್‌ಗಳಲ್ಲಿ ಒಂದನ್ನು ಕೆಳಗೆ ಹಾಕಲಾಗುತ್ತದೆ ಮತ್ತು ಅದರ ಮೇಲೆ ಕೆನೆಯ ಪದಾರ್ಥವನ್ನು ಹಾಕಲಾಗುತ್ತದೆ. ಇದರ ನಂತರ, ಕುಕ್ಕೀಗೆ ಅದರ ಪೂರ್ಣರೂಪ ನೀಡಲು ಎರಡನೇ ವೇಫರ್ ಅನ್ನು ಅದರ ಮೇಲೆ ಇರಿಸಲಾಗುತ್ತದೆ.

ಅಂದರೆ, ಈ ಒಟ್ಟಾರೆ ಪ್ರಕ್ರಿಯೆಯಲ್ಲಿ ಕ್ರೀಮ್ ಅನ್ನು ಮೊದಲ ವೇಫರ್‌ಗೆ ಹಾಕುವ ಮತ್ತು ತದನಂತರ ಅದರ ಮೇಲೆ ಎರಡನೆಯ ವೇಫರ್ ಇರಿಸುವ ನಡುವಿನ ವಿಳಂಬವೇ ಆ ಕೆನೆಯ ಕ್ರೀಮ್ ಉತ್ತಮವಾಗಿ ಒಂದು ವೇಫರ್ ಗೆ ಅಂಟಿಕೊಳ್ಳಲು ಪ್ರಮುಖ ಕಾರಣವಾಗಿರಬಹುದು ಎಂದು ಈ ಅಧ್ಯಯನದಲ್ಲಿ ಭಾಗಿಯಾಗಿರುವ ಸಹ-ಲೇಖಕರಲ್ಲಿ ಒಬ್ಬರಾದ ಕ್ರಿಸ್ಟಲ್ ಓವೆನ್ಸ್ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಓರಿಯೊ ಕುಕ್ಕೀ ಟ್ವಿಸ್ಟ್ ಮಾಡಲು ಸೂಕ್ತವಾದ ಮಾರ್ಗವಿದೆಯೇ?:

ಇದೆಲ್ಲ ಅಧ್ಯಯನ, ವಿಚಾರ, ಫಲಿತಾಂಶಗಳನ್ನೆಲ್ಲ ತಿಳಿದ ಮೇಲೆ ಸಾಮಾನ್ಯವಾಗಿ ಈಗಲೂ ಕಾಡಬಹುದಾದ ಒಂದು ಸರಳ ಪ್ರಶ್ನೆ ಎಂದರೆ ಕುಕ್ಕೀ ತೆರೆಯಲು ಟ್ವಿಸ್ಟ್ ಮಾಡಲು ಸೂಕ್ತವಾದ ಮಾರ್ಗವಿದೆಯೇ ಎಂದು. ಈ ಪ್ರಶ್ನೆಗೆ ಸಂಬಂಧಿಸಿದಂತೆ ಉತ್ತರ ಕಂಡುಕೊಳ್ಳಲು ಸಂಶೋಧಕರ ತಂಡ ಮೊದಲಿಗೆ ರಿಯೋಮೀಟರ್‌ನ ಮೇಲಿನ ಮತ್ತು ಕೆಳಗಿನ ಫಲಕಗಳಿಗೆ ಓರಿಯೊವನ್ನು ಅಂಟಿಸಿದರು ಮತ್ತು ಅವುಗಳನ್ನು ಬೇರ್ಪಡಿಸಲು ವಿಭಿನ್ನ ಡಿಗ್ರಿಗಳಲ್ಲಿ ಬಲ ಮತ್ತು ತಿರುಗುವಿಕೆಯನ್ನು ಅನ್ವಯಿಸಿದರು. ಒಟ್ಟಾರೆಯಾಗಿ, ಅವರು ಕುಕ್ಕೀಗಳ ಸುಮಾರು 20 ಬಾಕ್ಸ್‌ಗಳನ್ನು ಈ ವಿಧಾನದಲ್ಲಿ ಬಳಸಿದರು ಹಾಗೂ ಬಲ ಮತ್ತು ತಿರುಗುವಿಕೆಯ ಪ್ರತಿ ಅಪ್ಲಿಕೇಶನ್‌ನಲ್ಲಿ ಅಳತೆಗಳನ್ನು ಗುರುತಿಸಿದ್ದರು.

ಅವರಿಗೆ ಆಶ್ಚರ್ಯವಾಗುವಂತೆ, ತುಂಬುವಿಕೆಯ ಪ್ರಮಾಣ ಎರಡು ವೇಫರ್ ಗಳ ಮೇಲೆ ಕೆನೆ ಹೆಚ್ಚು ಸುಲಭವಾಗಿ ವಿತರಿಸಲ್ಪಡಲು ಸಹಕರಿಸುತ್ತದೆ ಎಂಬುದು ಸರಿಯಲ್ಲ ಎಂದು ಗೊತ್ತಾಯಿತು ಬದಲಿಗೆ ಆ ಬಾಕ್ಸಿನಲ್ಲಿ ಯಾವ ವೇಫರ್ ಒಳಮುಖವಾಗಿರುವುದೋ ಅದಕ್ಕೆ ಆ ಕೆನೆಯ ಕ್ರೀಮ್ ಅಂಟಿಕೊಳ್ಳುತ್ತದೆ ಎಂಬುದನ್ನು ಅವರು ಗಮನಿಸಿದರು.

ಹೆಚ್ಚು ಸಮನಾದ ವಿತರಣೆಗಾಗಿ, ಹೆಚ್ಚು ಉತ್ತಮ ಮೇಲ್ಮೈ ರಚನೆ ಹೊಂದಿರುವ ವೇಫರ್ ಕೆನೆಯು ಎರಡೂ ವೇಫರ್‌ಗಳ ಮೇಲೆ ಉತ್ತಮವಾಗಿ ಹಿಡಿದಿಡಲು ಸಹಾಯ ಮಾಡುತ್ತದೆ ಎಂದು ತಂಡದವರಲ್ಲೊಬ್ಬರಾದ ಓವೆನ್ಸ್ ಸಲಹೆ ನೀಡಿದ್ದಾರೆ. ಆದರೆ ಈ ಎಲ್ಲ ಅಧ್ಯಯನ, ಪರೀಕ್ಷೆ ಹಾಗೂ ಸಂಶೋಧನೆಯ ನಂತರ ತಂಡವು ಕೊನೆಯದಾಗಿ ತಾನು ಬಂದಿರುವ ನಿರ್ಣಯವೆಂದರೆ ಸದ್ಯ, ಓರಿಯೊದಲ್ಲಿ ಕ್ರೀಮ್ ಅನ್ನು ಸಮವಾಗಿ ವಿಭಜಿಸಲು ಕುಕ್ಕೀಗಳನ್ನ ಟ್ವಿಸ್ಟ್ ಮಾಡಲು ಯಾವುದೇ ಮಾರ್ಗ ಅಥವಾ ಟ್ರಿಕ್ ಇಲ್ಲ ಎಂದು ಅದು ಹೇಳಿದೆ.

ಒಟ್ಟಿನಲ್ಲಿ ಈ ಭಾವಿ ಇಂಜಿನಿಯರುಗಳ ತಂಡವು ಮಾಡಿರುವ ಈ ರೀತಿಯ ಸಂಶೋಧನೆ ಹಲವರಲ್ಲಿ ಒಂದು ಕುತೂಹಲ ಉಂಟಾಗುವಂತೆ ಮಾಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ.
Published by:shrikrishna bhat
First published: